ರೋಹ್ಟಕ್: 23 ವರ್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ನಂತರ ಬರ್ಬರವಾಗಿ ಕೊಲೆ ಮಾಡಿರೋ ಬೆಚ್ಚಿಬೀಳಿಸೋ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ.
ಮೇ 11ರಂದು ಇಲ್ಲಿನ ರೋಹ್ಟಕ್‍ನ ಅರ್ಬನ್ ಎಸ್ಟೇಟ್ ಪ್ರದೇಶದಲ್ಲಿ ತುಂಡರಿಸಿದ ಮಹಿಳೆಯ ದೇಹವನ್ನ ವ್ಯಕ್ತಿಯೊಬ್ಬರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಮುಖ ಹಾಗೂ ದೇಹದ ಕೆಳಭಾಗವನ್ನ ನಾಯಿಗಳು ತಿಂದುಹಾಕಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಿತ್ ಹಾಗೂ ವಿಕಾಸ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಸುಮಿತ್ ಮೃತ ಮಹಿಳೆಯ ನೆರೆಮನೆಯವನು ಎಂದು ಸೋನಿಪತ್‍ನ ಸಬ್ ಇನ್ಸ್‍ಪೆಕ್ಟರ್ ಅಜಯ್ ಮಲಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೊಲೆಗೀಡಾದ ಮಹಿಳೆ ವಿಚ್ಛೇದಿತರಾಗಿದ್ದು, ಮೇ 9ರಂದು ಆಕೆಯನ್ನ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ರೋಹ್ಟಕ್‍ಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯ ಪೋಷಕರು ಸೋನಿಪತ್ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಮಹಿಳೆಯ ಮೇಲೆ ಅತ್ಯಾಚಾರವೆಸಗಿ ನಂತರ ಆರೋಪಿಗಳು ಇಟ್ಟಿಗೆಯಿಂದ ಆಕೆಗೆ ಹೊಡೆದಿದ್ದಾರೆ. ಅಲ್ಲದೆ ಮುಖವನ್ನ ಕಲ್ಲಿಗೆ ಗುದ್ದಿದ್ದಾರೆ. ಮೃತ ಮಹಿಳೆಯ ತಲೆಗೆ ತೀವ್ರವಾಗಿ ಗಾಯವಾಗಿರುವುದು ಪತ್ತೆಯಾಗಿದೆ ಎಂದು ಮಲಿಕ್ ತಿಳಿಸಿದ್ದಾರೆ.

7 ಜನರಿಂದ ಅತ್ಯಾಚಾರ: ಟೈಮ್ಸ್ ನೌ ವರದಿಯ ಪ್ರಕಾರ ಮಹಿಳೆಯ ಮೇಲೆ ಕನಿಷ್ಠ 7 ಮಂದಿನ ಅತ್ಯಾಚಾರವೆಸಗಿದ್ದು ನಂತರ ಆಕೆಗೆ ಕಿರುಕುಳ ನೀಡಿ ಕೊಲೆ ಮಾಡಿ ದೇಹವನ್ನ ಛಿದ್ರ ಛಿದ್ರ ಮಾಡಿದ್ದಾರೆ ಎನ್ನಲಾಗಿದೆ. ಮಹಿಳೆ ಕನಿಷ್ಠ 7 ಮಂದಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ. ಕೊಲೆಗೈದ ನಂತರ ಆಕೆಯ ಗುರುತು ಸಿಗಬಾರದು ಎಂಬ ಕಾರಣಕ್ಕೆ ವಾಹನ ಮೇಲೆ ಹರಿದಿದೆ ಎನ್ನುವಂತೆ ತಲೆಬುರುಡೆಗೆ ಹೊಡೆದಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವಿಧಿವಿಜ್ಞಾನ ತಂಡ ಹೇಳಿರುವುದಾಗಿ ವರದಿಯಾಗಿದೆ.
ನೆರೆಮನೆಯವನೇ ಕೊಲೆ ಮಾಡಿದ್ನಾ?: ಸುದ್ದಿ ಸಂಸ್ಥೆ ಎಎನ್‍ಐ ವರದಿಯ ಪ್ರಕಾರ ಮಹಿಳೆ ತನ್ನ ತಾಯಿ ಹಾಗೂ ಸಹೋದರನೊಂದಿಗೆ ವಾಸವಿದ್ದರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಿದ್ರು. ಆಕೆ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ರು. ನಂತರ ಆರೋಪಿಯು ತನ್ನ ಸ್ನೇಹಿತರೊಂದಿಗೆ ಆಕೆಯ ಮನೆಗೆ ಬಂದಿದ್ದು ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಮಹಿಳೆ ಆಕೆಯ ಕೆನ್ನೆಗೆ ಬಾರಿಸಿದ್ದಾರೆ. ಇದರ ಸೇಡಿಗಾಗಿ ಆರೋಪಿ ತನ್ನ ಗೆಳೆಯರ ಜೊತೆಗೂಡಿ ಮಹಿಳೆಯನ್ನ ಅಪಹರಿಸಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ವಿಧಿ ವಿಜ್ಞಾನ ವರದಿಯ ಪ್ರಕಾರ ಮಹಿಳೆಯ ದೇಹವನ್ನ ಚೂಪಾದ ಆಯುಧದಿಂದ ತುಂಡರಿಸಲಾಗಿದೆ ಎಂದು ಎಎನ್‍ಐ ವರದಿ ಮಾಡಿದೆ.
ಮಾಚ್ 9 ರಂದು ಸುಮಾರು 5 ರಿಂದ 6 ಯುವಕರು ಖಾಸಗಿ ಕಂಪೆನಿಯ ಬಳಿ ಮಹಿಳೆಯನ್ನ ಅಪಹರಣ ಮಾಡಿದ್ರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿ ಕಳೆದ 1 ವರ್ಷದಿಂದ ನನ್ನ ಮಗಳನ್ನ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಮೃತ ಮಹಿಳೆಯ ತಾಯಿ ಹೇಳಿದ್ದಾರೆ. ಈ ನೀಚ ಕೃತ್ಯವೆಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕೃತ್ಯವನ್ನ ಖಂಡಿಸಿದ್ದಾರೆ.