Tag: ರೋಹಿತ್ ಶರ್ಮಾ

  • ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

    ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

    – ಆಸ್ಟ್ರೇಲಿಯಾ ಮಾಧ್ಯಮಗಳಿಂದ ರೋಹಿತ್‌ – ಕೊಹ್ಲಿಗೆ ಅವಮಾನ

    ಮೆಲ್ಬೋರ್ನ್‌: ಸದ್ಯ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಈ ನಡುವೆ ಸರಣಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಅನ್ನೋ ವದಂತಿ ಎದ್ದಿದೆ.

    ಬಿಜಿಟಿ ಸರಣಿಯಲ್ಲಿ ನಿರಂತರ ವೈಫಲ್ಯ ಕಂಡಿರುವ ರೋಹಿತ್‌ ಶರ್ಮಾ, ಟೆಸ್ಟ್‌ ನಾಯಕತ್ವ ತ್ಯಜಿಸಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಭಾರತದ ತಂಡದ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಬಿಜಿಟಿ ಟೆಸ್ಟ್‌ ಸರಣಿ ಬಳಿಕ ರೋಹಿತ್‌ ಶರ್ಮಾ ನಿವೃತ್ತಿಯಾಗುವ ಬಗ್ಗೆ ದೃಢ ನಿರ್ಧಾರ ತಾಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

    ರೋಹಿತ್‌ ಶರ್ಮಾ ತಮ್ಮ ಟೆಸ್ಟ್‌ ನಾಯಕತ್ವ ತ್ಯಜಿಸುವ ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಬಿಜಿಟಿ ಬಳಿಕ ಈ ಕುರಿತು ಅವರು ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂಬ ಭರವಸೆ ಇದೆ. ಟೆಸ್ಟ್‌ ಪಂದ್ಯಾವಳಿಯಲ್ಲಿ ತಮ್ಮ ಪ್ರದರ್ಶನದ ಕುರಿತು ರೋಹಿತ್‌ ಗಂಭೀರವಾಗಿ ಚಿಂತಿಸಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್‌ ವಿರುದ್ಧ ರೋಚಕ ಜಯ – WTC ಫೈನಲ್‌ಗೆ ದ.ಆಫ್ರಿಕಾ, ಭಾರತಕ್ಕೆ ಗೆಲುವೊಂದೇ ದಾರಿ

    ರೋಹಿತ್ ಶರ್ಮಾ ಅವರ ಅಲ್ಟ್ರಾ-ಡಿಫೆನ್ಸಿವ್ ವಿಧಾನ ಮತ್ತೆ ಮತ್ತೆ ಕೈಕೊಡುತ್ತಿದೆ. ಸತತ ಬ್ಯಾಟಿಂಗ್‌ ವೈಫಲ್ಯ ಅವರ ನಾಯಕತ್ವದ ಮೇಲೂ ಪರಿಣಾಮ ಬೀರುತ್ತಿದೆ. ಇದು ಟೆಸ್ಟ್‌ ಪಂದ್ಯಾವಳಿಯಿಂದ ರೋಹಿತ್‌ ನಿವೃತ್ತಿ ಹೊಂದುವ ಸಮಯ. ಆದರೆ ಈ ಕುರಿತು ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಆಸ್ಟ್ರೇಲಿಯಾ ಮಾಧ್ಯಮಗಳಿಂದ ರೋ-ಕೊಗೆ ಅವಮಾನ:
    ಆಸ್ಟ್ರೇಲಿಯಾದ ಸ್ಥಳೀಯ ಮಾಧ್ಯಮಗಳು ಭಾರತ ತಂಡದ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನ ಟಾರ್ಗೆಟ್‌ ಮಾಡಿದಂತೆ ಕಾಣುತ್ತಿದೆ. 19ರ ಹರೆಯದ ಆಟಗಾರ ಸ್ಯಾಮ್‌ ಕಾನ್‌ಸ್ಟಾಸ್‌ ಫೋಟೋ ಜೊತೆ ʻವಿರಾಟ್‌ ಐ ಆಮ್‌ ಯುವರ್ ಡ್ಯಾಡ್‌ʼ (ನಾನು ನಿಮ್ಮ ಅಪ್ಪ) ಎಂಬ ಶೀರ್ಷಿಕೆ ನೀಡಿದ್ದು, ತೀರಾ ಕೆಳಮಟ್ಟದ ವರ್ತನೆಯನ್ನು ತೋರಿವೆ. ಈ ಬೆನ್ನಲ್ಲೇ ನಾಯಕ ರೋಹಿತ್‌ ಶರ್ಮಾ ಅವರ ಭಾವಚಿತ್ರಕ್ಕೆ ʻಕ್ರೈ ಬೇಬಿʼ ಎಂದು ಬರೆದು ಅಪಮಾನ ಮಾಡಿವೆ. ಇದರಿಂದ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಏನಿದು ಘಟನೆ?
    ಮೆಲ್ಬೋರ್ನ್‌ 4ನೇ ಟೆಸ್ಟ್‌ನ ಮೊದಲ ದಿನ ಅಬ್ಬರದ ಆಟವಾಡುತ್ತಿದ್ದ ಆಸ್ಟ್ರೇಲಿಯಾದ 19 ವರ್ಷದ ಯುವ ಬ್ಯಾಟರ್‌ ಸ್ಯಾಮ್‌ ಕಾನ್‌ಸ್ಟಾಸ್‌ ಅವರಿಗೆ ವಿರಾಟ್‌ ಕೊಹ್ಲಿ ಭುಜಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿತ್ತು. 10ನೇ ಓವರ್‌ ವೇಳೆ ಕ್ರೀಸ್‌ ಬಳಿ ಕಾನ್‌ಸ್ಟಾಸ್‌ ನಡೆದುಕೊಂಡು ಹೋಗುತ್ತಿದ್ದಾಗ ಕೊಹ್ಲಿ ಭುಜ ತಾಗಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಕೊಹ್ಲಿ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟು ದಂಡ ವಿಧಿಸಿತ್ತು.

  • ಭಾರತಕ್ಕೆ ನಿತೀಶ್‌-ಸುಂದರ್‌ ಶತಕದ ಜೊತೆಯಾಟ ಆಸರೆ – ಫಾಲೋ ಆನ್‌ನಿಂದ ಪಾರು

    ಭಾರತಕ್ಕೆ ನಿತೀಶ್‌-ಸುಂದರ್‌ ಶತಕದ ಜೊತೆಯಾಟ ಆಸರೆ – ಫಾಲೋ ಆನ್‌ನಿಂದ ಪಾರು

    – ನಿತೀಶ್‌ ಕುಮಾರ್‌ ರೆಡ್ಡಿ ಚೊಚ್ಚಲ ಟೆಸ್ಟ್‌ ಶತಕ
    – ಆಸೀಸ್‌ ವಿರುದ್ಧ ಅತಿಹೆಚ್ಚು ಸಿಕ್ಸರ್‌ ದಾಖಲೆ

    ಮೆಲ್ಬೋರ್ನ್: ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯ 4ನೇ ಟೆಸ್ಟ್‌ನ 3ನೇ ದಿನದ ಅಂತ್ಯಕ್ಕೆ ಭಾರತ (Team India), 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದೆ. ಇದರಿಂದ ಬಾಕ್ಸಿಂಗ್‌ ಡೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಇನ್ನೂ 116 ರನ್‌ ಗಳಿಸಬೇಕಿದೆ. 8ನೇ ವಿಕೆಟ್‌ಗೆ ನಿತೀಶ್‌ ಕುಮಾರ್‌ ರೆಡ್ಡಿ (Nitish Kumar Reddy), ವಾಷಿಂಗ್ಟನ್‌ ಸುಂದರ್‌ ಅವರ ಶತಕದ ಜೊತೆಯಾಟದಿಂದ ಭಾರತ, ಫಾಲೋ ಆನ್‌ನಿಂದ ಬಚಾವ್ ಆಗಿದೆ.

    2ನೇ ದಿನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ 3ನೇ ವಿಕೆಟಿಗೆ 102 ರನ್ನುಗಳ ಉತ್ತಮ ಜೊತೆಯಾಟ ಬಂದಿತ್ತು. ಆದರೆ, ಜೈಸ್ವಾಲ್ ರನೌಟ್ ಆದ ಬೆನ್ನಲ್ಲೇ, ವಿರಾಟ್ ಕೊಹ್ಲಿ ಮತ್ತು ಆಕಾಶ್ ದೀಪ್ ಔಟ್ ಆಗುವ ಮೂಲಕ, ಭಾರತ ಹಿನ್ನಡೆ ಅನುಭವಿಸಿತ್ತು. ಎರಡನೇ ದಿನದ ಆಟದ ಅಂತದ ವೇಳೆ ಕೊನೇ 11 ರನ್‌ಗಳಿಗೆ 3 ವಿಕೆಟ್‌ ಪತನಗೊಂಡ ಪರಿಣಾಮ 164 ರನ್‌ಗಳಿಗೆ 5 ವಿಕೆಟ್ ಅನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದನ್ನೂ ಓದಿ: ಬೂಮ್ರಾಗೆ ಒಂದೇ ಓವರ್‌ನಲ್ಲಿ 18 ರನ್‌ ಚಚ್ಚಿದ 19ರ ಯುವಕ – ರೋಹಿತ್‌ ಪಡೆ ತಬ್ಬಿಬ್ಬು

    3ನೇ ದಿನದ ಆಟ ಆರಂಭಿಸಿದ ಭಾರತ 30 ರನ್‌ ಗಳಿಸುವಷ್ಟರಲ್ಲೇ ರಿಷಬ್‌ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ವಿಕೆಟ್‌ ಕಳೆದುಕೊಂಡಿತು. ನಂತರ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಜೊತೆಯಾಟ ಆರಂಭವಾಯಿತು. ಆಸೀಸ್ ವೇಗ ಮತ್ತು ಸ್ಪಿನ್ ಎಸೆತಗಳನ್ನು ಸಮರ್ಥವಾಗಿ ನಿಭಾಯಿಸಿದ ರೆಡ್ಡಿ ಮತ್ತು ಸುಂದರ್, 8ನೇ ವಿಕೆಟಿಗೆ 127 ರನ್ (285 ಎಸೆತ) ಸೇರಿಸುವ ಮೂಲಕ, ಟೀಂ ಇಂಡಿಯಾವನ್ನು ಫಾಲೋ ಆನ್ ನಿಂದ ತಪ್ಪಿಸಿದರು. ಇವರಿಬ್ಬರ ತಾಳ್ಮೆಯ ಮತ್ತು ಹೊಂದಾಣಿಕೆಯ ಆಟ ಭಾರೀ ಪ್ರಶಂಸೆ ವ್ಯಕ್ತವಾಯಿತು. ಇದನ್ನೂ ಓದಿ: ಪಾಕ್‌ ಪ್ರಧಾನಿ ಜೊತೆ ವಿಶ್ವಕಪ್‌ ವೀಕ್ಷಣೆ – ಇಂಡೋ -ಪಾಕ್‌ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್‌!

    ನಿತೀಶ್‌ ಚೊಚ್ಚಲ ಶತಕ:
    ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕವನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದು ಒಂದು ಕಡೆ. ಇನ್ನೊಂದು ಕಡೆ, ಒಂದೇ ಸರಣಿಯಲ್ಲಿ ಆಸ್ಟ್ರೇಲಿಯಾದ ವಿರುದ್ದ ಅತಿಹೆಚ್ಚು ಸಿಕ್ಸರ್ (8) ಸಿಡಿಸಿದ ದಾಖಲೆಯನ್ನೂ ಬರೆದರು. ಮಗನ ಚೊಚ್ಚಲ ಶತಕಕ್ಕೆ ಪೆವಲಿಯನ್ ನಲ್ಲಿದ್ದ ನಿತೀಶ್ ಕುಮಾರ್ ತಂದೆ ಖುಷಿಯಿಂದ ಕಣ್ಣೀರಿಟ್ಟರು. ದೇವರಿಗೆ ಅಲ್ಲಿಂದಲೇ ಕೈಮುಗಿದರು, ಕುಟುಂಬದ ಇತರ ಸದಸ್ಯರನ್ನು ತಬ್ಬಿಕೊಂಡರು.

    ಇನ್ನೊಂದು ಕಡೆ, ವಾಷಿಂಗ್ಟನ್ ಸುಂದರ್ ಅರ್ಧ ಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ತಾಳ್ಮೆಯಿಂದ 162 ಎಸೆತವನ್ನು ಎದುರಿಸಿ ಸುಂದರ್ 50 ರನ್ ಗಳಿಸಿ ನಾಥನ್ ಲಿಯಾನ್ ಗೆ ವಿಕೆಟ್ ಒಪ್ಪಿಸಿದರು. 3ನೇ ದಿನದ ಅಂತಕ್ಕೆ 105 ರನ್ ಗಳಿಸಿರುವ ನಿತೀಶ್ ರೆಡ್ಡಿ ಮತ್ತು 2 ರನ್ ಗಳಿಸಿರುವ ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದಾರೆ. ಇದನ್ನೂ ಓದಿ: ಕೊನೆಯ 30 ನಿಮಿಷ ಆಟ| 11 ರನ್‌ ಅಂತರದಲ್ಲಿ 3 ವಿಕೆಟ್‌ ಪತನ – ಸಂಕಷ್ಟದಲ್ಲಿ ಭಾರತ

    2ನೇ ದಿನದ ಆಟದ ವೇಳೆ, ಆಸೀಸ್ ಬೃಹತ್ ರನ್ ಪೇರಿಸಿದಾಗ, ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಮಾಜಿ ನಾಯಕ ಸುನೀಲ್ ಗವಾಸ್ಕರ್ ಮತ್ತು ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಕಟುವಾದ ಪದದಿಂದ ಟೀಕಿಸಿದ್ದರು. ಅದಕ್ಕೆ ಕಾರಣ, ಶುಭಮನ್‌ ಗಿಲ್ ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಮಾಡಿದ್ದು. ಆದ್ರೆ ಬೌಲಿಂಗ್‌ ಬ್ಯಾಟಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿದ ವಾಷಿಂಗ್ಟನ್‌ ಸುಂದರ್‌ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

  • IND vs AUS 4th Test | ಬ್ಯಾಟರ್‌-ಬೌಲರ್‌ಗಳ ʻಬಾಕ್ಸಿಂಗ್‌ʼ – ಮೊದಲ ದಿನ ಆಸೀಸ್ 311/6

    IND vs AUS 4th Test | ಬ್ಯಾಟರ್‌-ಬೌಲರ್‌ಗಳ ʻಬಾಕ್ಸಿಂಗ್‌ʼ – ಮೊದಲ ದಿನ ಆಸೀಸ್ 311/6

    ಮೆಲ್ಬೊರ್ನ್: ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನ ಮೊದಲ ದಿನವೇ ಆಸೀಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಟೀಂ ಇಂಡಿಯಾ ಎದುರು ಪ್ರಾಬಲ್ಯ ಮೆರೆದ ಆಸ್ಟ್ರೇಲಿಯಾ (Australia) ಮೊದಲ ದಿನವೇ 86 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದೆ. ಸ್ಟೀವ್‌ ಸ್ಮಿತ್‌ (Steve Smith) ನಾಯಕ ಪ್ಯಾಟ್‌ ಕಮ್ಮಿನ್ಸ್‌ ಕ್ರೀಸ್‌ನಲ್ಲಿದ್ದು ಶುಕ್ರವಾರ 2ನೇ ದಿನದಾಟ ಮುಂದುವರಿಸಲಿದ್ದಾರೆ.

    ಬಾರ್ಡರ್ ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಇದು 4ನೇ ಪಂದ್ಯವಾಗಿದೆ. ಮೊದಲನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಸೋಲು ಕಂಡಿತ್ತು, 3ನೇ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಸದ್ಯ ಮುಂದಿನ ಎರಡೂ ಪಂದ್ಯಗಳು ಭಾರತಕ್ಕೆ ನಿರ್ಣಾಯಕವಾಗಿದ್ದು, ಗೆದ್ದರಷ್ಟೇ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ (WTC Final) ಅರ್ಹತೆ ಪಡೆದುಕೊಳ್ಳಲಿದೆ.

    ಮೆಲ್ಬೊರ್ನ್ (Melbourne) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಟೀಂ ಇಂಡಿಯಾ ಬೌಲರ್‌ಗಳ ಎದುರು ಅಬ್ಬರಿಸಿದ ಅಗ್ರ ನಾಲ್ವರು ಬ್ಯಾಟರ್‌ಗಳು ತಲಾ ಒಂದೊಂದು ಅರ್ಧಶತಕ ಸಿಡಿಸುವ ಮೂಲಕ ಮೊದಲ ದಿನವೇ ತಂಡದ ಮೊತ್ತ 300 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಆಸೀಸ್‌ ಪರ ಅಖಾಡಕ್ಕಿಳಿದ 19 ವರ್ಷದ ಸ್ಯಾಮ್ ಕಾನ್​​ಸ್ಟಸ್ 60‌ ರನ್‌ (65 ಎಸೆತ, 6 ಬೌಂಡರಿ, 2 ಸಿಕ್ಸರ್), ಉಸ್ಮಾನ್‌ ಖವಾಜ 57 ರನ್‌ (121 ಎಸೆತ, 6 ಬೌಂಡರಿ), ಮಾರ್ನಸ್‌ ಲಾಬುಶೇನ್‌ 72 ರನ್‌ (145 ಎಸೆತ, 7 ಬೌಂಡರಿ), ಮಿಚೆಲ್‌ ಮಾರ್ಷ್‌ 4 ರನ್‌ ಅಲೆಕ್ಸ್‌ ಕ್ಯಾರಿ 31 ರನ್‌ ಗಳಿಸಿದ್ದರೆ, ಟೀಂ ಇಂಡಿಯಾ ಕಾಡುತ್ತಿದ್ದ ಟ್ರಾವಿಸ್‌ ಹೆಡ್‌ ಶೂನ್ಯ ಸುತ್ತಿದರು. ಇನ್ನೂ ಸ್ಟೀವ್‌ ಸ್ಮಿತ್‌ 68 ರನ್‌ (111 ಎಸೆತ, 5 ಬೌಂಡರಿ, 1 ಸಿಕ್ಸರ್)‌ ಹಾಗೂ ಪ್ಯಾಟ್‌ ಕಮ್ಮಿನ್ಸ್‌ 8 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿದ್ದಾರೆ.

    ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಜಸ್ಪ್ರೀತ್‌ ಬುಮ್ರಾ ಪ್ರಮುಖ 3 ವಿಕೆಟ್‌ ಕಿತ್ತರೆ, ಆಕಾಶ್‌ ದೀಪ್‌, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    ಬ್ರಿಸ್ಬೇನ್: ಬಾರ್ಡರ್‌ ಗವಾಸ್ಕರ್‌ ಟ್ರೋಫಿ 3ನೇ ಟೆಸ್ಟ್‌ ಪಂದ್ಯದ ಕೊನೆಯ ದಿನವೂ ಮಳೆ ಆಟವೇ ಮುಂದುವರಿದಿದ್ದು, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಭಾರತಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಹಾದಿ ಕೊಂಚ ಸುಗಮವಾದಂತಾಗಿದೆ. ಸದ್ಯ ಮೂರು ಪಂದ್ಯಗಳ ಪೈಕಿ 1-1ರಲ್ಲಿ ಸರಣಿ ಸಮಬಲಗೊಂಡಿದೆ. ಉಳಿದ 2 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದರೆ, WTC ಫೈನಲ್‌ ತಲುಪಲಿದೆ.

    ವೂಲೂಂಗಬ್ಬಾದ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4ನೇ ದಿನದ ಅಂತ್ಯಕ್ಕೆ ಭಾರತ 9 ವಿಕೆಟ್‌ ನಷ್ಟಕ್ಕೆ 252 ರನ್‌ ಗಳಿಸಿ, ಫಾಲೋ ಆನ್‌ ಭೀತಿಯಿಂದ ಪಾರಾಗಿತ್ತು. ಕೊನೆಯ ಕ್ರೀಸ್‌ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ 185 ರನ್‌ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ 7 ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಭಾರತಕ್ಕೆ 275 ರನ್‌ಗಳ ಗುರಿ ನೀಡಿತು. ಇತ್ತ ಭಾರತ 2.1 ಓವರ್‌ಗಳಲ್ಲಿ 8 ರನ್‌ ಗಳಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ನಿರಂತರವಾಗಿ ಸುರಿಯುತ್ತಿದ್ದರಿಂದ ಪಂದ್ಯ ಡ್ರಾನತ್ತ ತಿರುಗಿತು.

    ಭಾರತವನ್ನು ಕಾಪಾಡಿದ ಆಕಾಶ್‌ ದೀಪ್‌:
    ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 3ನೇ ದಿನ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 51 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. 4ನೇ ದಿನ ಆರಂಭಿಕ ಕೆ.ಎಲ್ ರಾಹುಲ್ 84 ರನ್, ರವೀಂದ್ರ ಜಡೇಜಾ 77 ರನ್‌ಗಳ ಕೊಡುಗೆ ನೀಡಿದರೂ, ಫಾಲೋ ಆನ್‌ಗೆ ತುತ್ತಾಗುವ ಭೀತಿಯಲ್ಲಿತ್ತು. ಆದ್ರೆ ಕೊನೇ ಕ್ಷಣದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಆಕಾಶ್ ದೀಪ್, ಪ್ಯಾಟ್ ಕಮ್ಮಿನ್ಸ್ ಅವರ ಪಾಲಿನ 21ನೇ ಓವರ್‌ನ 4ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಟೀಂ ಇಂಡಿಯಾವನ್ನು ಫಾಲೋ ಆನ್‌ನಿಂದ ಕಾಪಾಡಿದರು. ಜಸ್ಪ್ರೀತ್ ಬುಮ್ರಾ ಸಹ ಬ್ಯಾಟಿಂಗ್‌ನಲ್ಲಿ ನೆರವಾದರು.

    ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ 84 ರನ್ (139 ಎಸೆತ, 8 ಬೌಂಡರಿ), ರವೀಂದ್ರ ಜಡೇಜಾ 77 ರನ್ (123 ರನ್, 7 ಬೌಂಡರಿ, 1 ಸಿಕ್ಸರ್), ರೋಹಿತ್ ಶರ್ಮಾ 10 ರನ್, ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಆಕಾಶ್ ದೀಪ್ 31 ರನ್ ಗಳಿಸಿದ್ರೆ, ಜಸ್ಪ್ರೀತ್ ಬುಮ್ರಾ 10 ರನ್‌ ಗಳಿಸಿದರು.

    ಭಾರತದ WTC ಫೈನಲ್‌ ಹಾದಿ ಹೇಗಿದೆ?
    ಇದೇ ಡಿ.26ರಿಂದ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನದ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಈ ಸರಣಿಯ ಒಂದು ಪಂದ್ಯದಲ್ಲಿ ಪಾಕ್‌ ಗೆಲ್ಲಬೇಕು. ಇದೇ ವೇಳೆ ಆಸೀಸ್‌ ವಿರುದ್ಧ ಸರಣಿಯನ್ನು ಭಾರತ 3-1 ಅಂತರದಲ್ಲಿ ಗೆದ್ದರೆ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಅಥವಾ ಭಾರತವು ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದರೆ, ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಆಸೀಸ್‌ 1-1 ಅಥವಾ ಲಂಕಾ 1-0 ಅಂತರದಲ್ಲಿ ಕೊನೆಯಗೊಳ್ಳಬೇಕು. ಅಥವಾ ಭಾರತ ಆಸೀಸ್‌ ವಿರುದ್ಧ 2-2 ಅಂತರಲ್ಲಿ ಗೆದ್ದರೆ, ಲಂಕಾ, ಆಸೀಸ್‌ ಇರುದ್ಧ 1-0 ಅಥವಾ 2-0 ವಿರುದ್ಧ ಗೆದ್ದರೆ ಮಾತ್ರ ಭಾರತ ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳಿವೆ.

    ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ, ಗಂಭೀರ್ ಸಂಭ್ರಮ:
    213 ರನ್‌ಗಳಿಗೆ ಭಾರತ ತನ್ನ 9ನೇ ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ ಫಾಲೋ ಆನ್‌ಗೆ ತುತ್ತಾಗಿ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದ್ರೆ ಕೊನೆಯ ವಿಕೆಟ್‌ಗೆ ಜೊತೆಗೂಡಿದ ಬುಮ್ರಾ, ಆಕಾಶ್‌ದೀಪ್ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದರು. ಪ್ಯಾಟ್ ಕಮ್ಮಿನ್ಸ್ ಅವರ 21ನೇ ಓವರ್‌ನ 4ನೇ ಎಸೆತವನ್ನು ಆಕಾಶ್ ದೀಪ್ ಬೌಂಡರಿಗೆ ಅಟ್ಟುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಹಿರಿಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ವಿರಾಟ್ ಕೊಹ್ಲಿ, ಕೋಚ್ ಗೌತಮ್ ಗಂಭೀರ್, ರೋಹಿತ್ ಶರ್ಮಾ, ಪರಸ್ಪರ ಕೈಕುಲುಕಿ ಸಂಭ್ರಮಿಸಿದ್ದರು.

  • ಪಿಂಕ್‌ಬಾಲ್‌ ಟೆಸ್ಟ್‌ – ಸ್ಟಾರ್ಕ್‌ ವೇಗಕ್ಕೆ ನೆಲ ಕಚ್ಚಿದ ಬ್ಯಾಟರ್ಸ್‌, ಭಾರತ 180ಕ್ಕೆ ಆಲೌಟ್‌

    ಪಿಂಕ್‌ಬಾಲ್‌ ಟೆಸ್ಟ್‌ – ಸ್ಟಾರ್ಕ್‌ ವೇಗಕ್ಕೆ ನೆಲ ಕಚ್ಚಿದ ಬ್ಯಾಟರ್ಸ್‌, ಭಾರತ 180ಕ್ಕೆ ಆಲೌಟ್‌

    ಅಡಿಲೇಡ್‌: ಇಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಮೊದಲ ದಿನ ಪರ್ತ್ ಪಂದ್ಯದ ಫಲಿತಾಂಶವೇ ಮರುಕಳಿಸಿದಂತೆ ಕಂಡುಬಂದಿದೆ. ಮೊದಲ ದಿನದಾಟದಲ್ಲಿ ಭಾರತ 180 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ (Australia) ತಂಡ 33 ಓವರ್‌ಗಳಲ್ಲಿ 86 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಆರಂಭದಲ್ಲೇ ಆಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆಸೀಸ್‌ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಭಾರತ ತಂಡಕ್ಕೆ ಮೊದಲ ಎಸೆತದಲ್ಲಿ ಆಘಾತ ನೀಡಿದರು. ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 161 ರನ್‌ ಸಿಡಿಸಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಪಂದ್ಯದ ಮೊದಲನೇ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ಜೈಸ್ವಾಲ್ ಅವರು ಸತತವಾಗಿ 2ನೇ ಪಂದ್ಯದಲ್ಲೂ ಪ್ರಥಮ ಇನ್ನಿಂಗ್ಸ್ ನಲ್ಲೇ ಶೂನ್ಯ ಸುತ್ತಿದ ಕುಖ್ಯಾತಿಗೆ ಒಳಗಾದರು. ಎರಡೂ ಪಂದ್ಯಗಳಲ್ಲೂ ಅವರನ್ನು ಶೂನ್ಯಕ್ಕೆ ಸ್ಟಾರ್ಕ್ ಅವರೇ ಔಟ್‌ ಮಾಡಿದ್ದು ಎಂಬುದು ಗಮನಾರ್ಹ.

    ಅಲ್ಲಿಂದ ಬಳಿಕ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರು ಭಾರತ ಇನ್ನಿಂಗ್ಸ್‌ಗೆ ಜೀವಕಳೆ ತಂದರು. 2ನೇ ವಿಕೆಟ್‌ಗೆ ಅವರಿಂದ 69 ರನ್ ಗಳ ಜೊತೆಯಾಟ ಬಂದಾಗ ಭಾರತ ಮತ್ತೆ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಆದ್ರೆ ಕೆ.ಎಲ್ ರಾಹುಲ್ 37 ರನ್‌ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಬೆನ್ನಲ್ಲೇ ಬೋಲೆಂಡ್ ವೇಗದ ದಾಳಿಗೆ ಶುಭಮನ್ ಗಿಲ್ (31 ರನ್‌) ಸಹ ಔಟಾದರು.

    ಈ ನಡುವೆ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಅವರ ದಿಟ್ಟ ಬ್ಯಾಟಿಂಗ್ ಪ್ರದರ್ಶನ ಭಾರತ ತಂಡವನ್ನು 180ರ ಗಡಿ ವರೆಗೆ ಕೊಂಡೊಯ್ದಿತು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೆ ಮತ್ತೊಂದೆಡೆ ನಿತೀಶ್‌ ಆಸೀಸ್ ವೇಗಿಗಳ ಬೌಲಿಂಗ್ ಲೆಕ್ಕಕ್ಕಿಲ್ಲದಂತೆ ಸಿಕ್ಸರ್‌, ಬೌಂಡರಿ ಚಚ್ಚುತ್ತಿದ್ದರು. ಈ ನಡುವೆ 54 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್‌ ನೊಂದಿಗೆ 42 ರನ್‌ ಬಾರಿಸಿ, ಉತ್ತಮ ಪ್ರದರ್ಶನ ನೀಡುತ್ತಿದ್ದ ನಿತೀಶ್‌ ರೆಡ್ಡಿ ಮತ್ತೆ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಔಟಾದರು.

    ಕೈಕೊಟ್ಟ ಕೊಹ್ಲಿ, ರೋಹಿತ್‌:
    ಭಾರಿ ನೀರಿಕ್ಷೆ ಹುಟ್ಟಿಸಿದ್ದ ವಿರಾಟ್ ಕೊಹ್ಲಿ (Virat Kohli) 7 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಅಲ್ಲದೇ ಕೆ.ಎಲ್‌ ರಾಹುಲ್‌ ಅವರಿಗೆ ಒಮ್ಮೆ ಜೀವದಾನ ಸಿಕ್ಕರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಇನ್ನೂ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ನಾಯಕ ರೋಹಿತ್‌ ಶರ್ಮಾ 23 ಎಸೆತಗಳಲ್ಲಿ 3 ರನ್‌ ಗಳಿಸಿ ಔಟಾದರು. ಇದರೊಂದಿಗೆ ರಿಷಬ್‌ ಪಂತ್‌ 21 ರನ್‌, ರವಿಚಂದ್ರನ್‌ ಅಶ್ವಿನ್‌ 22 ರನ್‌ಗಳ ಕೊಡುಗೆ ನೀಡಿದರು.

    ಮಿಂಚಿದ ಮಿಚೆಲ್‌ ಸ್ಟಾರ್ಕ್‌:
    ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಮಿಚೆಲ್‌ ಸ್ಟಾರ್ಕ್‌ 14.1 ಓವರ್‌ಗಳಲ್ಲಿ 6 ವಿಕೆಟ್‌ ಕಿತ್ತರೆ, ಸ್ಕಾಟ್‌ ಬೋಲೆಂಡ್‌ ಹಾಗೂ ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌ ಕಿತ್ತರು.

    ಬಳಿಕ ತನ್ನ ಸರದಿಯ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ 33 ಓವರ್‌ಗಳಲ್ಲಿ 86 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಆಟಗಾರ ಉಸ್ಮಾನ್‌ ಖವಾಜ 13 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಬಳಿಕ ಜೊತೆಗೂಡಿದ ನಾಥನ್ ಮೆಕ್‌ಸ್ವೀನಿ 97 ಎಸೆತಗಳಲ್ಲಿ 38 ರನ್‌, ಮಾರ್ನಸ್‌ ಲಾಬುಶೇನ್‌ 20 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

  • ಬುಮ್ರಾ ಬಹುಪರಾಕ್‌, ಪರ್ತ್‌ನಲ್ಲಿ ಪವರ್‌ ಶೋ – ಭಾರತಕ್ಕೆ 295 ರನ್‌ಗಳ ಭರ್ಜರಿ ಜಯ

    ಬುಮ್ರಾ ಬಹುಪರಾಕ್‌, ಪರ್ತ್‌ನಲ್ಲಿ ಪವರ್‌ ಶೋ – ಭಾರತಕ್ಕೆ 295 ರನ್‌ಗಳ ಭರ್ಜರಿ ಜಯ

    ಪರ್ತ್‌: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲೇ ಭಾರತ (Team India), ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳ ಭರ್ಜರಿ ಗೆಲುವು ಕಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಜಸ್ಪ್ರೀತ್‌ ಬುಮ್ರಾ (Jasprit Bumrah), ಸಿರಾಜ್‌, ಹರ್ಷಿತ್‌ ರಾಣಾ ಅವರ ಉರಿ ಚೆಂಡಿನ ವೇಗ ಒಂದುಕಡೆಯಾದ್ರೆ ಯಶಸ್ವಿ ಜೈಸ್ವಾಲ್‌, ಕಿಂಗ್‌ ಕೊಹ್ಲಿ, ಕೆ.ಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ದರ್ಬಾರ್‌ನಿಂದ ಭಾರತ, ಆಸೀಸ್‌ಗೆ ಪವರ್‌ ಪಂಚ್‌ ಕೊಟ್ಟಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿ 1-0 ಮುನ್ನಡೆ ಕಾಯ್ದುಕೊಂಡಿದೆ.

    ಮುಂಬರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ (WTC) ಫೈನಲ್‌ ಪ್ರವೇಶಿಸಬೇಕಾದರೆ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿರುವ ಟೀಮ್‌ ಇಂಡಿಯಾ, ಮೊದಲ ಟೆಸ್ಟ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ಆಸ್ಪ್ರೇಲಿಯಾ (Australia) ತಂಡವನ್ನು ದಿಗ್ಭ್ರಮೆಗೊಳಿಸಿದೆ.

    238ಕ್ಕೆ ಆಸೀಸ್‌ ಆಲೌಟ್:
    534 ರನ್‌ಗಳ ಅಸಾಧಾರಣ ಗುರಿ ಬೆನ್ನಟಿದ ಆಸೀಸ್‌ 3ನೇ ದಿನದ ಅಂತ್ಯಕ್ಕೆ 12 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. 522 ರನ್‌ಗಳ ಹಿನ್ನಡೆಯೊಂದಿಗೆ 4ನೇ ದಿನ ಕ್ರೀಸ್‌ ಆರಂಭಿಸಿತು. ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕ್ಯಾರಿ ಅವರ ಹೋರಾಟದ ಹೊರತಾಗಿಯೂ ಆಸೀಸ್‌ 238 ರನ್‌ಗಳಿಗೆ ಸರ್ವಪತಕ ಕಂಡಿತು. ಇದರಿಂದ ಭಾರತ 295 ರನ್‌ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಟ್ರಾವಿಸ್‌ ಹೆಡ್‌ 89 ರನ್‌, ಮಿಚೆಲ್‌ ಮಾರ್ಷ್‌ 47 ರನ್‌, ಅಲೆಕ್ಸ್‌ ಕ್ಯಾರಿ 36 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು.

    ಬುಮ್ರಾ ನಾಯಕನ ಆಟ, ಮಿಂಚಿದ ಯುವ ಬೌಲರ್ಸ್‌:
    ನಾಯಕ ಆಟವಾಡಿದ ವೇಗಿ ಜಸ್ಪ್ರೀತ್‌ ಬುಮ್ರಾ ತಮ್ಮ ಉರಿ ಚೆಂಡಿನಿಂದ ಪ್ರಮುಖ ವಿಕೆಟ್‌ಗಳನ್ನು ಕಿತ್ತು ಸೈ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌, 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಸೇರಿ 10 ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇದರೊಂದಿಗೆ ಯುವ ವೇಗಿಗಳಾದ ಹರ್ಷಿತ್‌ ರಾಣಾ, ಆಲ್‌ರೌಂಡರ್‌ ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌ ಪ್ರಮುಖ ವಿಕೆಟ್‌ ಕಿತ್ತು ಮಿಂಚಿದರು.

    ಜೈಸ್ವಾಲ್ 4 ಬಾರಿ 150+
    ಆಸೀಸ್‌ ಬೌಲರ್‌ಗಳನ್ನ ಆಕ್ರಮಣವನ್ನು ದಿಟ್ಟವಾಗಿ ಎದುರಿಸಿದ ಎಡಗೈ ಬ್ಯಾಟರ್‌ ಜೈಸ್ವಾಲ್‌, 2ನೇ ಇನ್ನಿಂಗ್ಸ್‌ನಲ್ಲಿ 161 ರನ್‌ಗಳಿಗೆ ಔಟಾದರು. ಈ ಮೂಲಕ 23 ವರ್ಷಕ್ಕೆ ಕಾಲಿಡುವ ಮುನ್ನ ನಾಲ್ಕು ಬಾರಿ 150ಕ್ಕೂ ಅಧಿಕ ರನ್‌ ಗಳಿಸಿದ ಭಾರತದ 2ನೇ ಆಟಗಾರ ಎಂಬ ಶ್ರೇಯಕ್ಕೆ ಜೈಸ್ವಾಲ್‌ ಪಾತ್ರರಾದರು. ಜೈಸ್ವಾಲ್‌ಗೂ ಮುನ್ನ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಇಂಥ ಸಾಧನೆ ಮಾಡಿದ್ದರು.

    ತವರಿನಲ್ಲಿ ಕಿವೀಸ್‌ ವಿರುದ್ಧ ರನ್‌ ಬರ ಎದುರಿಸಿದ್ದ ವಿರಾಟ್‌ ಕೊಹ್ಲಿ, ಆಕರ್ಷಕ ಶತಕ ಸಿಡಿಸುವ ಮೂಲಕ ಲಯ ಕಂಡುಕೊಂಡರು. 16 ತಿಂಗಳ ಬಳಿಕ ಟೆಸ್ಟ್‌ ಶತಕ ಸಿಡಿಸಿದರು. ಒಟ್ಟಾರೆ 81ನೇ ಶತಕ ಗಳಿಸಿ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದರು. ಈ ವೇಳೆ ಆಸ್ಟ್ರಲಿಯಾ ನೆಲದಲ್ಲಿ ಸಚಿನ್‌ ದಾಖಲಿಸಿದ್ದ 6 ಶತಕಗಳ ದಾಖಲೆಯನ್ನು ಹಿಂದಿಕ್ಕಿದರು. ಜೊತೆಗೆ ಯುವ ಆಟಗಾರರಾದ ವಾಷಿಂಗ್ಟನ್‌ ಸುಂದರ್‌ 29 ರನ್‌, ಪದಾರ್ಪಣೆ ಆಟಗಾರ ನಿತೀಶ್‌ ಕುಮಾರ್‌ ರೆಡ್ಡಿ ಅಜೇಯ 38 ರನ್‌ಗಳಿಸಿದರು. ಇದರಿಂದ ಭಾರತ 2ನೇ ಇನ್ನಿಂಗ್ಸ್‌ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 487 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

  • ರಾಹುಲ್‌-ಯಶಸ್ವಿ ದಾಖಲೆಯ ಶತಕದ ಜೊತೆಯಾಟ – ಭಾರತಕ್ಕೆ 218 ರನ್‌ಗಳ ಮುನ್ನಡೆ

    ರಾಹುಲ್‌-ಯಶಸ್ವಿ ದಾಖಲೆಯ ಶತಕದ ಜೊತೆಯಾಟ – ಭಾರತಕ್ಕೆ 218 ರನ್‌ಗಳ ಮುನ್ನಡೆ

    – 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಜೈಸ್ವಾಲ್‌

    ಪರ್ತ್: ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ಕೆ.ಎಲ್‌ ರಾಹುಲ್‌ (KL Rahul) ಅವರ ದಾಖಲೆಯ ಶತಕದ ಜೊತೆಯಾಟ ನೆರವಿನಿಂದ ಟೀಂ ಇಂಡಿಯಾ (Team India) ಆಸೀಸ್‌ ವಿರುದ್ಧ 218 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

    ಪರ್ತ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ 2ನೇ ದಿನದ ಅಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಭಾರತ 172 ರನ್‌ ಕಲೆಹಾಕಿದೆ. ಈ ಮೂಲಕ ಆಸ್ಟ್ರೇಲಿಯಾ (Australia) ವಿರುದ್ಧ 218 ರನ್‌ಗಳ ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್‌ ಅಜೇಯ 90 ರನ್‌ (193 ಎಸೆತ, 7 ಬೌಂಡರಿ, 2 ಸಿಕ್ಸರ್‌), ಕೆ.ಎಲ್‌ ರಾಹುಲ್‌ 62 ರನ್‌ (153 ಎಸೆತ, 4 ಬೌಂಡರಿ) ಗಳಿಸಿದ್ದು, ಭಾನುವಾರ 3ನೇ ದಿನದ ಆಟ ಮುಂದುವರಿಸಲಿದ್ದಾರೆ.

    67 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಇಂದು 2ನೇ ದಿನದ ಆಟ ಆರಂಭಿಸಿತು. ಆದ್ರೆ 104 ರನ್‌ ಗಳಿಸುವಷ್ಟರಲ್ಲೇ ಉಳಿದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ 46 ರನ್‌ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ 2ನೇ ದಿನ ವಿಕೆಟ್‌ ಬಿಟ್ಟುಕೊಡದೇ ಆಸೀಸ್‌ ವಿರುದ್ಧ ಹಿಡಿತ ಸಾಧಿಸಿದೆ.

    ʻಯಶಸ್ವಿʼಸಿಕ್ಸರ್‌ ದಾಖಲೆ:
    ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ನಿಧಾನಗತಿಯ ಬ್ಯಾಟಿಂಗ್‌ ಮಾಡಿದರೂ, ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ದಿನದ ಅಂತ್ಯಕ್ಕೆ 57 ಓವರ್‌ಗಳಲ್ಲಿ 172 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಕಳೆದ 20 ವರ್ಷಗಳಲ್ಲಿ ಪರ್ತ್‌ ಕ್ರೀಡಾಂಗಣದಲ್ಲಿ ಅತಿದೊಡ್ಡ ಜೊತೆಯಾಟ ನೀಡಿದ ಜೋಡಿ ಎಂಬ ದಾಖಲೆಗೆ ಪಾತ್ರರಾದರು. ಇದೇ ವೇಳೆ 193 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 90 ರನ್‌ ಸಿಡಿಸಿದ ಜೈಸ್ವಾಲ್‌ ಒಂದೇ ವರ್ಷದಲ್ಲಿ ಅತಿಹೆಚ್ಚು (34) ಸಿಕ್ಸರ್‌ ಸಿಡಿಸಿದ ವಿಶೇಷ ದಾಖಲೆಯನ್ನೂ ಹೆಗಲಿಗೇರಿಸಿಕೊಂಡರು.

    150ಕ್ಕೆ ಭಾರತ ಆಲೌಟ್:
    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮೊದಲ ದಿನ 150 ರನ್‌ಗಳಿಗೆ ಆಲೌಟ್‌ ಆಗಿತ್ತು. ನಿತೀಶ್ ಕುಮಾರ್ ರೆಡ್ಡಿ 41 ರನ್ (59 ಎಸೆತ, 6 ಬೌಂಡರಿ, 1 ಸಿಕ್ಸರ್), ರಿಷಬ್ ಪಂತ್ 37 ರನ್ (78 ಎಸೆತ, 3 ಬೌಂಡರಿ, 1 ಸಿಕ್ಸರ್), ರನ್ ಕೆ.ಎಲ್ ರಾಹುಲ್ 26 ರನ್ (74 ಎಸೆತ, 3 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ ಮೊತ್ತಕ್ಕೆ ಆಲೌಟ್ ಆದರು. ಆರಂಭಿಕ ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಶೂನ್ಯ ಸುತ್ತಿದ್ದರು.

    ಆಸೀಸ್‌ 104ಕ್ಕೆ ಆಲೌಟ್‌:
    ಮೊದಲ ದಿನದಾಟದಲ್ಲಿ 67 ರನ್‌ಗಳಿಗೆ 7 ವಿಕೆಟ್‌ ಕಳೆದಿಕೊಂಡಿದ್ದ ಆಸೀಸ್‌ 2ನೇ ದಿನ 104 ರನ್‌ಗಳಿಗೆ ಆಲೌಟ್‌ ಆಯಿತು. ಆರಂಭಿಕ ಉಸ್ಮಾನ್ ಖವಾಜ (8 ರನ್), ನಾಥನ್ ಮೆಕ್‌ಸ್ವೀನಿ (10 ರನ್), ಮಾರ್ನಸ್ ಲಾಬುಶೇನ್ (2 ರನ್), ಟ್ರಾವಿಸ್ ಹೆಡ್ (11 ರನ್), ಸ್ಟೀವ್ ಸ್ಮಿತ್ (0), ಮಿಚೆಲ್ ಮಾರ್ಷ್ (6 ರನ್), ನಾಯಕ ಪ್ಯಾಟ್ ಕಮ್ಮಿನ್ಸ್ (3 ರನ್) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇನ್ನುಳಿದಂತೆ ಅಲೆಕ್ಸ್‌ ಕ್ಯಾರಿ 21 ರನ್‌, ಮಿಚೆಲ್‌ ಸ್ಟಾರ್ಕ್‌ 26 ರನ್‌, ನಥಾನ್‌ ಲಿಯಾನ್‌ 5 ರನ್‌ ಗಳಿಸಿದ್ರೆ, ಜೋಶ್‌ ಹೇಜಲ್ವುಡ್‌ 7 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

  • ಬೌಲರ್‌ಗಳ ಆಟದಲ್ಲಿ ಮೊದಲ ದಿನವೇ 17 ವಿಕೆಟ್‌ ಪತನ!

    ಬೌಲರ್‌ಗಳ ಆಟದಲ್ಲಿ ಮೊದಲ ದಿನವೇ 17 ವಿಕೆಟ್‌ ಪತನ!

    ಪರ್ತ್‌: ಆಸ್ಟ್ರೇಲಿಯಾ-ಭಾರತದ (Aus vs Ind) ನಡುವೆ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ ಮೊದಲ ದಿನವೇ 17 ವಿಕೆಟ್‌ ಪತನವಾಗಿದೆ. 1952ರ ಬಳಿಕ ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್‌ ಪಂದ್ಯದ ಮೊದಲ ದಿನವೇ ಅತಿಹೆಚ್ಚು ವಿಕೆಟ್‌ ಪತನವಾಗಿದೆ. ಸಹಜವಾಗಿಯೇ ಅನುಕೂಲಕರ ಪಿಚ್‌ನಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 67 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿರುವ ಆಸೀಸ್‌ ಶನಿವಾರ 2ನೇ ದಿನದ ಆಟ ಮುಂದುವರಿಸಲಿದೆ.

    ಪರ್ತ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ (Team India), ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್‌ ಆಯಿತು. ಆದ್ರೆ ಅಲ್ಪ ಮೊತ್ತ ಎಂದು ಭಾವಿಸಿದ್ದ ಆಸೀಸ್‌ ಬ್ಯಾಟರ್‌ಗಳಿಗೆ ಭಾರತೀಯ ಬೌಲರ್‌ಗಳು ಮಣ್ಣುಮುಕ್ಕಿಸಿದರು. ನಾಯಕ ಜಸ್ಪ್ರೀತ್‌ ಬುಮ್ರಾ (Jasprit Bumrah), ಮೊಹಮ್ಮದ್‌ ಸಿರಾಜ್‌ ಹಾಗೂ ಹರ್ಷಿತ್‌ ರಾಣಾ ಅವರ ವೇಗದ ದಾಳಿಗೆ ಆಸೀಸ್‌ ಟಾಪ್‌ ಬ್ಯಾಟರ್‌ಗಳು ಧೂಳಿಪಟವಾದರು. ಇದನ್ನೂ ಓದಿ: IND vs Aus Test| ವಿವಾದಾತ್ಮಕ ತೀರ್ಪಿಗೆ ರಾಹುಲ್‌ ಔಟ್‌

    ಆರಂಭಿಕ ಉಸ್ಮಾನ್‌ ಖವಾಜ (8 ರನ್‌), ನಾಥನ್ ಮೆಕ್‌ಸ್ವೀನಿ (10 ರನ್‌), ಮಾರ್ನಸ್‌ ಲಾಬುಶೇನ್‌ (2 ರನ್‌), ಟ್ರಾವಿಸ್‌ ಹೆಡ್‌ (11 ರನ್‌), ಸ್ಟೀವ್‌ ಸ್ಮಿತ್‌ (0), ಮಿಚೆಲ್‌ ಮಾರ್ಷ್‌ (6 ರನ್‌), ನಾಯಕ ಪ್ಯಾಟ್‌ ಕಮ್ಮಿನ್ಸ್‌ (3 ರನ್‌) ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ ಕ್ರೀಸ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಅಲೆಕ್ಸ್‌ ಕ್ಯಾರಿ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 19 ರನ್‌, ಮಿಚೆಲ್‌ ಸ್ಟಾರ್ಕ್‌ 6 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.

    ನಾಯಕನಾಗಿ ಮಿಂಚಿದ ಬುಮ್ರಾ:
    ನಾಯಕನಾಗಿ ಕಣಕ್ಕಿಳಿದ ಬುಮ್ರಾ 10 ಓವರ್‌ಗಳಲ್ಲಿ 3 ಮೇಡಿನ್‌ ಸೇರಿದಂತೆ ಕೇವಲ 17 ರನ್‌ ಬಿಟ್ಟುಕೊಟ್ಟು ಪ್ರಮುಖ ನಾಲ್ಕು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಹಾಗೂ ಹರ್ಷಿತ್‌ ರಾಣಾ 1 ವಿಕೆಟ್‌ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

    150ಕ್ಕೆ ಭಾರತ ಆಲೌಟ್‌:
    ಇದಕ್ಕೂ ಮುನ್ನ ಬ್ಯಾಟ್‌ ಬೀಸಿದ ಭಾರತ 150 ರನ್‌ಗಳಿಗೆ ಆಕೌಟ್‌ ಆಯಿತು. ನಿತೀಶ್‌ ಕುಮಾರ್‌ ರೆಡ್ಡಿ 41 ರನ್‌ (59 ಎಸೆತ, 6 ಬೌಂಡರಿ, 1 ಸಿಕ್ಸರ್)‌, ರಿಷಬ್‌ ಪಂತ್‌ 37 ರನ್‌ (78 ಎಸೆತ, 3 ಬೌಂಡರಿ, 1 ಸಿಕ್ಸರ್)‌, ರನ್‌ ಕೆ.ಎಲ್‌ ರಾಹುಲ್‌ 26 ರನ್‌ (74 ಎಸೆತ, 3 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ‌ ಮೊತ್ತಕ್ಕೆ ಆಲೌಟ್‌ ಆದರು. ಆರಂಭಿಕ ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಶೂನ್ಯ ಸುತ್ತಿದ್ದರು.

    ಆಸೀಸ್‌ ಪರ ಜೋಶ್‌ ಹೇಜಲ್ವುಡ್‌ 4 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮ್ಮಿನ್ಸ್‌ ಹಾಗೂ ಮಿಚೆಲ್‌ ಮಾರ್ಷ್‌ ತಲಾ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ವಿವಾದಾತ್ಮಕ ತೀರ್ಪಿಗೆ ರಾಹುಲ್‌ ಔಟ್‌:
    ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ (Test Cricket) ಕೆಎಲ್‌ ರಾಹುಲ್‌ (KL Rahul) ಅವರು ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಟಾಸ್‌ ಗೆದ್ದು ಮೊದಲ ಬ್ಯಾಟ್‌ ಮಾಡಿದ ಭಾರತ (Team India) 32 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. ಪರಿಸ್ಥಿತಿ ಹೀಗಿದ್ದರೂ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ರಾಹುಲ್‌ ನಿಧಾನವಾಗಿ ಬ್ಯಾಟ್‌ ಬೀಸಿ ಇನ್ನಿಂಗ್ಸ್‌ ಕಟ್ಟುತ್ತಿದ್ದರು. ಭಾರತ ಇನ್ನಿಂಗ್ಸ್‌ನ 23 ಓವರ್‌ ಅನ್ನು ಸ್ಟ್ರಾಕ್‌ ಎಸೆಯುತ್ತಿದ್ದರು. ಎರಡನೇ ಎಸೆತದ ವೇಳೆ ಸ್ಟೈಕ್‌ನಲ್ಲಿ ರಾಹುಲ್‌ ಬಾಲನ್ನು ತಡೆಯಲು ಯತ್ನಿಸಿದರು. ಆದರೆ ಬಾಲ್‌ ಬ್ಯಾಟ್‌ನ ಎಡ್ಜ್‌ ಬಳಿ ಸಾಗಿ ವಿಕೆಟ್‌ ಕೀಪರ್‌ ಕೈ ಸೇರಿತು.

    ಆಸ್ಟ್ರೇಲಿಯಾದ (Australia) ಆಟಗಾರರು ಔಟ್‌ ಮನವಿ ಸಲ್ಲಿಸಿದರೂ ಫೀಲ್ಡ್‌ ಅಂಪೈರ್‌ ಔಟ್‌ ನೀಡಿರಲಿಲ್ಲ. ಹೀಗಾಗಿ ಆಸೀಸ್‌ ಆಟಗಾರರು ಡಿಆರ್‌ಎಸ್‌ (DRS) ಮನವಿ ಮಾಡಿದರು. ರಿಪ್ಲೈ ವೇಳೆ ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲವಾದರೂ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ಪ್ರಕಟಿಸಲಾಯಿತು. ಹೀಗಾಗಿ ಫೀಲ್ಡ್ ಅಂಪೈರ್ ಕೂಡ ತಮ್ಮ ನಿರ್ಧಾರ ಬದಲಿಸಿ ಔಟ್‌ ತೀರ್ಪು ನೀಡಿದರು. 26 ರನ್‌ ಗಳಿಸಿದ ಕೆಎಲ್‌ ರಾಹುಲ್‌ ಅಸಮಾಧಾನದಿಂದಲೇ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು.

    ನಂತರ ರಿಪ್ಲೈ ನೋಡಿದಾಗ ಪ್ಯಾಡಿಗೆ ಬ್ಯಾಟ್‌ ಬಡಿದಿರುವುದು ಗೊತ್ತಾಗಿದೆ. ಮೂರನೇ ಅಂಪೈರ್‌ ಸ್ವಲ್ಪ ಪರಿಶೀಲನೆ ಮಾಡಿ ಇನ್ನೊಂದು ಕೋನದಿಂದ ನೋಡಿದ್ದರೆ ತೀರ್ಪು ಬದಲಾಗುವ ಸಾಧ್ಯತೆ ಇತ್ತು. ಈಗ ಈ ವಿಚಾರವನ್ನು ಅಭಿಮಾನಿಗಳು ಪ್ರಸ್ತಾಪಿಸಿ  ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

  • ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

    ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

    ಪರ್ತ್‌: ಟೆಸ್ಟ್‌ ಕ್ರಿಕೆಟ್‌ನಲ್ಲೇ ಹೈವೋಲ್ಟೇಜ್‌ ಸರಣಿಯಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ಇದೇ ಶುಕ್ರವಾರ (ನ.22)ದಿಂದ ಆರಂಭವಾಗುತ್ತಿದೆ. ನ.22ರಿಂದ 2025ರ ಜನವರಿ 7ರ ವರೆಗೆ ಒಟ್ಟು 5 ಪಂದ್ಯಗಳ ಸರಣಿ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಮೊದಲ ಟೆಸ್ಟ್‌ ಪಂದ್ಯವನ್ನು ಮುನ್ನಡೆಸಲಿದ್ದಾರೆ.

    ಮೊದಲ ಟೆಸ್ಟ್‌ಗೂ ಮುನ್ನ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ನಾನು ರೋಹಿತ್‌ (Rohit Sharma) ಅವರೊಂದಿಗೆ ಮಾತನಾಡಿದ್ದೇನೆ. ಆಸ್ಟ್ರೇಲಿಯಾಗೆ ಬರುವವರೆಗೂ ಕ್ಯಾಪ್ಟನ್‌ ಆಗುವ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ. ಇಲ್ಲಿಗೆ ಬಂದ ನಂತರ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಆಡಳಿತ ಮಂಡಳಿಯಿಂದ ಸ್ಪಷ್ಟತೆ ಸಿಕ್ಕಿತು. ಈಗಾಗಲೇ ಆಡುವ 11ರ ಬಳಗ (ಪ್ಲೇಯಿಂಗ್‌- XI) ಅಂತಿಮಗೊಳಿಸಲಾಗಿದೆ. ಆದರೂ ಶುಕ್ರವಾರ ಬೆಳಗ್ಗೆ ಟಾಸ್‌ ಮುಗಿದ ಬಳಿಕವೇ ಬಹಿರಂಗಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ (Mohammed Shami) ಸಹ ಸರಣಿ ಸೇರಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ. ಶಮಿ ಅವರು ಈ ಟೆಸ್ಟ್ ಸರಣಿಯ ವೇಳೆಗೆ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಆದ್ರೆ ಎಷ್ಟನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ಶಮಿ ಮತ್ತೆ ಕ್ರಿಕೆಟ್ ಆಡಲು ಶುರು ಮಾಡಿದ್ದಾರೆ. ಖಂಡಿತವಾಗಿಯೂ ಅವರು ತಂಡದ ಆಂತರಿಕ ಭಾಗವಾಗಿದ್ದಾರೆ. ಆಡಳಿತ ಮಂಡಳಿ ಅವರ ಮೇ ಒಂದು ಕಣ್ಣಿಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶಮಿ ಇಲ್ಲಿ ಆಡುವುದನ್ನು ನೀವು ನೋಡುತ್ತೀರಿ ಎಂದು ಬುಮ್ರಾ ಹೇಳಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು

    ಇನ್ನು ಭಾರತ ತಂಡದ ಬೌಲಿಂಗ್ ಕೋಚ್ ಆಗಿರುವ ಮಾರ್ನೆ ಮಾರ್ಕೆಲ್ ಅವರು ಇತ್ತೀಚೆಗೆ ನ್ಯೂಜಿಲೆಂಡ್ ಸರಣಿ ವೇಳೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯಲ್ಲಿ ತರಬೇತಿ ಪಡೆಯುತ್ತಿದ್ದ ಶಮಿ ಅವರನ್ನು ಹತ್ತಿರದಿಂದ ವೀಕ್ಷಿಸಿದ್ದರು. ಜೊತೆಗೆ ಅವರ ಪ್ರಗತಿಯನ್ನು ತಂಡದ ಮ್ಯಾನೇಜ್ಮೆಂಟ್‌ ಹತ್ತಿರದಿಂದ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನನ

    ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ನಡೆದ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವದ ಆಸೀಸ್‌ ವಿರುದ್ಧವೇ ಸೋತಿತ್ತು.

    ಶಮಿಗೆ ಏನಾಗಿತ್ತು?
    2023ರ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಮೊಹಮ್ಮದ್ ಶಮಿ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಶಮಿ ಬೆಂಗಳೂರಿನ ಎನ್‌ಸಿಎನಲ್ಲಿ ತರಬೇತಿಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಬಂಗಾಳ ಪರವಾಗಿ ರಣಜಿ ಪಂದ್ಯವನ್ನಾಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ 156 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 2ನೇ ಅಥವಾ 3ನೇ ಪಂದ್ಯದ ವೇಳೆಗಾದರೂ ಅವರು ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದುಬಂದಿದೆ.

  • ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನನ

    ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನನ

    ಮುಂಬೈ: ಟೀಂ ಇಂಡಿಯಾ (Team India) ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma) ಅವರ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೋಹಿತ್‌ ದಂಪತಿ ಮನೆಗೆ ಎರಡನೇ ಅತಿಥಿಯ ಆಗಮನವಾಗಿದೆ.

    ದಂಪತಿಗೆ ಈಗಾಗಲೇ ಸಮೈರಾ ಹೆಸರಿನ 6 ವರ್ಷದ ಮಗಳಿದ್ದಾಳೆ. ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಲಭ್ಯತೆ ಸಂದೇಹವಿತ್ತು. ಆದರೆ, ಈಗ ಪತ್ನಿಗೆ ಗಂಡು ಮಗು ಜನಿಸಿದ್ದು, ಟೀಂ ಇಂಡಿಯಾ ನಾಯಕ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: ಆಫ್ರಿಕಾ ವಿರುದ್ಧ ದಾಖಲೆಯ ಜಯದೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ

    ಬಾರ್ಡರ್-ಗವಾಸ್ಕರ್ ಟ್ರೋಫಿಗೆ ರೋಹಿತ್ ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗದಿದ್ದರೆ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

    ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ವದೇಶದಲ್ಲೇ ಟೀಂ ಇಂಡಿಯಾ ವೈಟ್‌ವಾಶ್ ಅನುಭವಿಸಿತು. WTC ಫೈನಲ್‌ಗೆ ಅರ್ಹತೆ ಪಡೆಯಲು ಮೆನ್ ಇನ್ ಬ್ಲೂ ಆಸ್ಟ್ರೇಲಿಯಾದಲ್ಲಿ ನಾಲ್ಕು ಅಥವಾ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಇದನ್ನೂ ಓದಿ: ರನ್‌ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್‌ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ

    ಕ್ರಿಕೆಟಿಗ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ‘ಜೂನಿಯರ್ ಹಿಟ್‌ಮ್ಯಾನ್‌ನ ಜನ್ಮಕ್ಕಾಗಿ ಕ್ಯಾಪ್ಟನ್ ಹಿಟ್‌ಮ್ಯಾನ್‌ಗೆ ಅಭಿನಂದನೆಗಳು. ದೇವರು ಅವರನ್ನು ಮತ್ತು ಕುಟುಂಬವನ್ನು ಆಶೀರ್ವದಿಸಲಿ’ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.