Tag: ರೋಹಿತ್ ಶರ್ಮಾ

  • ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

    ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

    ನವದೆಹಲಿ: ಟೀಂ ಇಂಡಿಯಾ (Team India) ಎರಡನೇ ಬಾರಿ ಟಿ20 ವಿಶ್ವಕಪ್‌ (T20 World Cup) ಜಯಿಸಿ ವಿಶ್ವದಾಖಲೆ ನಿರ್ಮಿಸಿದೆ. ಈ ವಿಶ್ವದಾಖಲೆ ನಿರ್ಮಾಣಕ್ಕೆ 2023ರ ವಿಶ್ವಕಪ್‌ ಕ್ರಿಕೆಟ್‌ ನಂತರ ವೇದಿಕೆ ಸಜ್ಜು ಮಾಡಲಾಗಿತ್ತು.

    ಹೌದು. 2024ರ ಟಿ20 ವಿಶ್ವಕಪ್‌ ಜಯಿಸಲೇಬೇಕೆಂದು ಪಣ ತೊಟ್ಟಿದ್ದ ಬಿಸಿಸಿಐ (BCCI) ಆಸ್ಟ್ರೇಲಿಯಾ (Australia) ವಿರುದ್ಧ ಫೈನಲ್‌ ಪಂದ್ಯ ಸೋತ ನಂತರ ವಿಶ್ವಕಪ್‌ಗೆ ತಂಡವನ್ನು ಹೇಗೆ ಸಿದ್ಧಪಡಿಸಬೇಕೆಂದು ಗಂಭೀರವಾದ ಚರ್ಚೆ ನಡೆಸಿತು.

    ಈ ಚರ್ಚೆಯ ವೇಳೆ ಹಲವು ನಿರ್ಧಾರ ಕೈಗೊಳ್ಳಲಾಯಿತು. ಅದರಲ್ಲೂ ಮೂರು ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಯಿತು. ಒಂದನೇಯದ್ದು ರೋಹಿತ್‌ ಶರ್ಮಾ (Rohit Sharma) ಮತ್ತು ವಿರಾಟ್‌ ಕೊಹ್ಲಿ (Virat Kohli) ಇನ್ನಿಂಗ್ಸ್‌ ಆರಂಭಿಸಬೇಕು, ಎರಡನೇಯದ್ದು ತಂಡದಲ್ಲಿ 4 ಮಂದಿ ಆಲ್‌ರೌಂಡರ್‌ ಇರಲೇಬೇಕು, ಮೂರನೇಯದ್ದು ಮೂವರು ಎಡಗೈ ಸ್ಪಿನ್ನರ್‌ ಇರಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.

    ಗಾಯವಾಗದ ಹೊರತು ಯಾವುದೇ ಕಾರಣಕ್ಕೂ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರನ್ನು ಬದಲಿಸಬಾರದು ಎಂಬ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು. ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದರೆ ಇಂಡಿಯಾ ಪರ ಆಡುವಾಗ ಮೂರನೇ ಕ್ರಮಾಂಕದಲ್ಲಿ ಬರುತ್ತಿದ್ದರು. ರೋಹಿತ್‌ ಜೊತೆ ಶುಭಮನ್‌ ಗಿಲ್‌, ಇಶನ್‌ ಕಿಶನ್‌, ಯಶಸ್ವಿ ಜೈಸ್ವಾಲ್‌ ಇನ್ನಿಂಗ್ಸ್‌ ಆರಂಭಿಸುತ್ತಿದ್ದರು. ಇದನ್ನೂ ಓದಿ: ಭಾರತ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದ ಜಯ್‌ ಶಾ – ವೀಡಿಯೋ ವೈರಲ್‌

    ಈ ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕೊಹ್ಲಿ ಸೆಮಿಫೈನಲ್‌ವರೆಗೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. 7 ಪಂದ್ಯಗಳಲ್ಲಿ ಕೇವಲ 75 ರನ್‌ ಸಿಡಿಸಿದ್ದ ಕೊಹ್ಲಿ ಫೈನಲ್‌ ಪಂದ್ಯದಲ್ಲಿ 76 ರನ್‌ ಸಿಡಿಸಿದ್ದರು. ಸಾಧಾರಣವಾಗಿ ಎರಡು, ಮೂರು ಪಂದ್ಯಗಳಲ್ಲಿ ಆಟಗಾರ ವಿಫಲನಾದರೆ ಆತನ ಬದಲು ಬೇರೊಬ್ಬ ಆಟಗಾರನನ್ನು ಆಡಿಸಲಾಗುತ್ತದೆ. ಎಲ್ಲಾ ತಂಡಗಳು ಈ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ. ಆದರೆ ಭಾರತ ವಿರಾಟ್‌ ಕೊಹ್ಲಿ ಸತತ ಪಂದ್ಯಗಳಲ್ಲಿ ವಿಫಲವಾದರೂ ಅವರನ್ನು ಬದಲಾಯಿಸಲೇ ಇಲ್ಲ. ಸೆಮಿ ಫೈನಲ್‌ ವೇಳೆ ರೋಹಿತ್‌ ಶರ್ಮಾ, ರಾಹುಲ್‌ ದ್ರಾವಿಡ್‌ ಅವರು ಕೊಹ್ಲಿ ಫೈನಲ್‌ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎಂದು ಭವಿಷ್ಯ ಸಹ ನುಡಿದಿದ್ದರು.

    ಸ್ಪಿನ್ನರ್‌ಗಳ ತಂಡಕ್ಕೆ ಬೇಕು ಹೌದು. ಆಯ್ಕೆ ಮಾಡುವಾಗ ಎಡಗೈ, ಬಲಗೈ ಬಗ್ಗೆ ಜಾಸ್ತಿ ತಂಡಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಒಬ್ಬರು ಎಡಗೈ ಇದ್ದರೆ, ಇಬ್ಬರು ಬಲಗೈ ಅಥವಾ ಇಬ್ಬರು ಬಲಗೈ ಇದ್ದರೆ ಒಬ್ಬರು ಎಡಗೈ ಸ್ಪಿನ್ನರ್‌ಗಳನ್ನು ಆಡಿಸುತ್ತಾರೆ. ಆದರೆ ಮೂವರು ಎಡಗೈ ಸ್ಪಿನ್ನರ್‌ಗಳನ್ನೇ ಟೀಂ ಇಂಡಿಯಾ ಗ್ರೂಪ್‌ 8, ಸೆಮಿ ಫೈನಲ್‌, ಫೈನಲ್‌ನಲ್ಲಿ ಆಡಿಸಿತ್ತು. ಕ್ರಿಕೆಟ್‌ನಲ್ಲಿ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಬಹಳ ಅಪರೂಪ. ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ರವೀಂದ್ರ ಜಡೇಜಾ ಅವರು ತಮ್ಮ ಆಯ್ಕೆಯನ್ನು ಸರಿ ಎಂಬಂತೆ ನಿರೂಪಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿಂದ ರೋಹಿತ್‌ ಶರ್ಮಾ – ವೀಡಿಯೋ ವೈರಲ್‌

    4 ಮಂದಿ ಆಲ್‌ರೌಂಡರ್‌ಗಳಾಗಿ ಹಾರ್ದಿಕ್‌ ಪಟೇಲ್‌, ಅಕ್ಷರ್‌ ಪಟೇಲ್‌, ರವೀಂದ್ರ ಜಡೇಜಾ, ಶಿವಂ ದುಬೆ ಅವರನ್ನು ಆಯ್ಕೆ ಮಾಡಲಾಗಿತ್ತು. ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ಗಳಾಗಿ 11ರ ಒಳಗಡೆ ಸ್ಥಾನ ಪಡೆದಿದ್ದರು. ಶಿವಂ ದುಬೆಗೆ ಹೆಚ್ಚಿನ ಬೌಲಿಂಗ್‌ ಅವಕಾಶ ನೀಡದೇ ಇದ್ದರೂ ಅವರೊಬ್ಬ ಮಧ್ಯಮ ವೇಗಿ ಬೌಲರ್‌ ಆಗಿದ್ದಾರೆ.

    ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದಕ್ಕೆ ಮಾಧ್ಯಮಗಳು ರೋಹಿತ್‌ ಶರ್ಮಾ ಅವರ ಬಳಿ ಪ್ರಶ್ನೆ ಕೇಳಿದ್ದವು. ಇದಕ್ಕೆ ರೋಹಿತ್‌, ಈ ವಿಚಾರದ ಬಗ್ಗೆ ನಾನು ಹೆಚ್ಚಿನ ವಿವರ ನೀಡಲು ಬಯಸುವುದಿಲ್ಲ. ನಮ್ಮ ವಿರುದ್ಧ ತಂಡದ ನಾಯಕರು ಇದನ್ನು ಕೇಳುತ್ತಾರೆ ಅಂತ ಅಂದುಕೊಂಡಿದ್ದೇನೆ. ನಾವು ಕೆರೆಬಿಯನ್‌ ನಾಡಿನಲ್ಲಿ ಸಾಕಷ್ಟು ಕ್ರಿಕೆಟ್‌ ಆಡಿದ್ದೇವೆ. ಪರಿಸ್ಥಿತಿ ಹೇಗಿವೆ ಅನ್ನುವುದು ನಮಗೆ ತಿಳಿದಿವೆ. ಪಂದ್ಯ ಬೆಳಗ್ಗೆ 10, 10:30ಕ್ಕೆ ಆರಂಭವಾಗುವ ಕಾರಣ ಇದರಲ್ಲಿ ಸ್ವಲ್ಪ ತಾಂತ್ರಿಕ ಅಂಶ ಅಡಗಿದೆ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

  • T20 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಂಪರ್‌ – ಬರೋಬ್ಬರಿ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

    T20 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಂಪರ್‌ – ಬರೋಬ್ಬರಿ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

    ಮುಂಬೈ: ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup 2024) ಟೂರ್ನಿ ಬಳಿಕ 2024ರ ಚಾಂಪಿಯನ್ ಪಟ್ಟ ಅಲಂಕರಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಳಗಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬರೋಬ್ಬರಿ 125 ಕೋಟಿ ರೂ. ನಗದು ಬಹುಮಾನ (prize money) ಘೋಷಿಸಿದೆ.

    ಬಾರ್ಬಡೋಸ್​​ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಕಿರೀಟಕ್ಕೆ ಭಾರತ ತಂಡ ಮುತ್ತಿಟ್ಟಿದೆ. ಅಲ್ಲದೇ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನೂ ನೀಗಿಸಿಕೊಂಡಿದೆ.

    ಟಿ20 ವಿಶ್ವಕಪ್‌ ಗೆದ್ದ ಮರುದಿನವೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರು ವಿಜೇತ ತಂಡಕ್ಕೆ ಬರೋಬ್ಬರಿ 125 ಕೋಟಿ ರೂ.ಗಳ ಬಹುಮಾನ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: T20 WorldCup 2024 – ಟೀಂ ಇಂಡಿಯಾ ಆಟಗಾರರ ದಾಖಲೆಗಳ ಸುರಿಮಳೆ! ‌

    ಈ ಕುರಿತು X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್‌ ಶಾ, ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಗೆದ್ದ ಟೀಂ ಇಂಡಿಯಾಕ್ಕೆ 125 ಕೋಟಿ ರೂ. ಬಹುಮಾನ ಘೋಷಿಸಲು ನನಗೆ ಸಂತೋಷವಾಗಿದೆ. ತಂಡವು ಟೂರ್ನಿಯುದ್ಧಕ್ಕೂ ಅಸಾಧಾರಣ ಪ್ರತಿಭೆ, ದೃಢನಿಶ್ಚಯ ಮತ್ತು ಕ್ರೀಡಾ ಮನೋಭಾವ ಪ್ರದರ್ಶಿಸಿದೆ. ಈ ಅತ್ಯುತ್ತಮ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿ, ರೋಹಿತ್‌ ಶರ್ಮಾ ಬೆನ್ನಲ್ಲೇ T20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ಜಡೇಜಾ ವಿದಾಯ

    13 ವರ್ಷಗಳ ಬಳಿಕ ವಿಶ್ವಕಪ್‌:
    ಇನ್ನೂ ಭಾರತ ತಂಡಕ್ಕೆ ಇದು 13 ವರ್ಷಗಳ ಬಳಿಕ ಸಿಕ್ಕ ವಿಶ್ವಕಪ್ ಹಾಗೂ 17 ವರ್ಷಗಳ ಬಳಿಕ ದೊರೆತ 2ನೇ ಟಿ20 ವಿಶ್ವಕಪ್ ಆಗಿದೆ​. ಭಾರತ ತಂಡ 2007ರ ಉದ್ಘಾಟನಾ ಆವೃತ್ತಿಯಲ್ಲೇ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೇ 2011ರ ಏಕದಿನ ವಿಶ್ವಕಪ್ ಸಹ ಗೆದ್ದುಕೊಂಡಿತ್ತು. ಈ ಎರಡೂ ಟೂರ್ನಿಯಲ್ಲೂ ಎಂ.ಎಸ್‌ ಧೋನಿ ಅವರೇ ನಾಯಕತ್ವ ವಹಿಸಿದ್ದು ವಿಶೇಷ. ಇದನ್ನೂ ಓದಿ: ಟೀಂ ಇಂಡಿಯಾಗೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿಂದ ರೋಹಿತ್‌ ಶರ್ಮಾ – ವೀಡಿಯೋ ವೈರಲ್‌

  • 15 ವರ್ಷಗಳ T20I ಕ್ರಿಕೆಟ್‌ ಬದುಕಿಗೆ ಫುಲ್‌ಸ್ಟಾಪ್‌ – ಹೇಗಿದೆ ಜಡ್ಡು ಸಾಧನೆ?

    15 ವರ್ಷಗಳ T20I ಕ್ರಿಕೆಟ್‌ ಬದುಕಿಗೆ ಫುಲ್‌ಸ್ಟಾಪ್‌ – ಹೇಗಿದೆ ಜಡ್ಡು ಸಾಧನೆ?

    ಮುಂಬೈ: 2024ರ ಟಿ20 ವಿಶ್ವಕಪ್ ಗೆದ್ದ ಮರುದಿನವೇ ಟೀಂ ಇಂಡಿಯಾ ಆಲ್​ರೌಂಡ್​​ ರವೀಂದ್ರ ಜಡೇಜಾ (Ravindra Jadeja) ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (Rohit Sharma) ವಿದಾಯ ಹೇಳಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

    ಬಾರ್ಬಡೋಸ್​ನ ಕೆನ್ಸಿಂಗ್ಟನ್​ ಓವಲ್​​ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸುವ ಜೊತೆಗೆ ಭಾರತ 2ನೇ ಬಾರಿಗೆ ಟಿ20 ವಿಶ್ವಕಪ್ (T20 World Cup 2024) ಟ್ರೋಫಿ ಗೆದ್ದುಕೊಂಡಿತು. ಐಸಿಸಿ ಪ್ರಶಸ್ತಿ ಗೆಲುವಿನ ನಂತರ ಭಾರತ ಸಂಭ್ರಮದಲ್ಲಿರುವಾಗಲೇ ಜಡೇಜಾ ಅವರು ವಿರಾಟ್ ಕೊಹ್ಲಿ ಮತ್ತು ಅವರ ನಾಯಕ ರೋಹಿತ್ ಶರ್ಮಾ ಅವರ ಹಾದಿಯನ್ನೇ ಅನುಸರಿಸಿದ್ದು, ಗೆಲುವಿನೊಂದಿಗೆ ವಿದಾಯ ಹೇಳಿದ್ದಾರೆ.

    ಹೇಗಿದೆ ಟಿ20 ಕ್ರಿಕೆಟ್‌ ಹಾದಿ?
    ಸ್ಪಿನ್-ಬೌಲಿಂಗ್ ಆಲ್ರೌಂಡರ್ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿ ಜಡೇಜಾ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. 2009ರ ಫೆಬ್ರವರಿ 10 ರಂದು ಶ್ರೀಲಂಕಾ ವಿರುದ್ಧ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದರು. ಕೊಲಂಬೊದಲ್ಲಿ ಪಂದ್ಯ ನಡೆದಿತ್ತು. ಅಂದಿನಿಂದ ಈವರೆಗೆ ಜಡೇಜಾ ಟೀಂ ಇಂಡಿಯಾಕ್ಕೆ ಶ್ರಮಿಸಿದ್ದಾರೆ. ಇದೀಗ 15 ವರ್ಷಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

    ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜಡೇಜಾ ಒಟ್ಟು 74 ಪಂದ್ಯ, 41 ಇನ್ನಿಂಗ್ಸ್‌ಗಳನ್ನಾಡಿದ್ದು, 515 ರನ್‌ ಗಳಿಸಿದ್ದಾರೆ. ಇದರಲ್ಲಿ 39 ಬೌಂಡರಿ, 14 ಸಿಕ್ಸರ್‌ಗಳೂ ಸೇರಿವೆ. 46 ವೈಯಕ್ತಿಕ ಗರಿಷ್ಠ ರನ್‌ ಆಗಿದೆ. ಬೌಲಿಂಗ್‌ನಲ್ಲಿ 54 ವಿಕೆಟ್‌ಗಳನ್ನೂ ಪಡೆದುಕೊಂಡಿರುವ ಜಡೇಜಾ 28 ಕ್ಯಾಚ್‌ಗಳನ್ನ ಹಿಡಿದಿದ್ದಾರೆ. ಅಲ್ಲದೇ ಎಂ.ಎಸ್‌ ಧೋನಿ, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಆಡಿದ ಹೆಗ್ಗಳಿಗೂ ಇವರಿಗಿದೆ.

  • ಕೊಹ್ಲಿ ಜೊತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಹಿಟ್‌ಮ್ಯಾನ್‌ ವಿದಾಯ!

    ಕೊಹ್ಲಿ ಜೊತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಹಿಟ್‌ಮ್ಯಾನ್‌ ವಿದಾಯ!

    ನವದೆಹಲಿ: ಸುದೀರ್ಘ 17 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್‌ ಕಿರೀಟ ಗೆದ್ದ ಬೆನ್ನಲ್ಲೇ ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶನಿವಾರ T20I ನಿವೃತ್ತಿ ಘೋಷಿಸಿದ್ದಾರೆ.

    ಐತಿಹಾಸಿಕ ವಿಜಯದ ನಂತರ ಕೊಹ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯದ ನಂತರದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದರು. ಭಾರತದ ವಿಜಯೋತ್ಸವದ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೋಹಿತ್, ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಭಾರತ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುವುದಾಗಿ ಖಚಿತಪಡಿಸಿದರು. ಟಿ20 ವಿಶ್ವಕಪ್‌ ಟ್ರೋಫಿಯನ್ನು ಭಾರತದ ಮಡಿಲಿಗಿಟ್ಟು ಇಬ್ಬರೂ ಕ್ರಿಕೆಟಿಗರು ವಿದಾಯ ಹೇಳಿದ್ದಾರೆ.

    ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಪ್ರಶಸ್ತಿ ಗೆಲುವನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟ ಎಂದು ರೋಹಿತ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

    ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್‌ ಶರ್ಮಾ ಒಟ್ಟು 159 ಪಂದ್ಯಗಳನ್ನಾಡಿದ್ದು, 4,231 ರನ್‌ ಗಳಿಸಿದ್ದಾರೆ. ಟಿ20 ಯಲ್ಲಿ 32 ಅರ್ಧಶತಕ ಮತ್ತು 5 ಶತಕ ಸಿಡಿಸಿ ಮಿಂಚಿದ್ದಾರೆ. ವಿರಾಟ್‌ ಕೊಹ್ಲಿ 125 ಪಂದ್ಯಗಳನ್ನಾಡಿದ್ದು, ಒಟ್ಟು 4,188 ರನ್‌ ಗಳಿಸಿದ್ದಾರೆ. ಕೊಹ್ಲಿ 38 ಅರ್ಧಶತಕ ಮತ್ತು 1 ಶತಕ ಸಿಡಿಸಿದ್ದಾರೆ.

    ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ನೀಡಿದ್ದ 177 ರನ್‌ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿತ್ತು. ಕೊನೆ ಘಳಿಗೆಯಲ್ಲಿ 30 ಬಾಲ್‌ಗಳಿಗೆ 30 ರನ್‌ ಬೇಕು ಎಂದಿದ್ದಾಗ ಭಾರತಕ್ಕೆ ಟ್ರೋಫಿ ಕೈ ತಪ್ಪಿತು ಎಂದೇ ಭಾವಿಸಲಾಗಿತ್ತು. ಈ ಹಂತದಲ್ಲಿ ನಡೆದ ಮ್ಯಾಜಿಕ್‌ ಅಸಾಧಾರಣ. ಸಂದಿಗ್ಧ ಸನ್ನಿವೇಶದಲ್ಲಿ ಜಸ್ಪ್ರಿತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ, ಅರ್ಷದೀಪ್‌ ಸಿಂಗ್‌ ಬೌಲಿಂಗ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಕೊನೆ ಓವರ್‌ನಲ್ಲಿ ಪಾಂಡ್ಯ ಮಿಂಚಿದರು. ಈ ನಡುವೆ ಸೂರ್ಯಕುಮಾರ್‌ ಯಾದವ್‌ ಹಿಡಿದ ಕ್ಯಾಚ್‌ ಗಮನ ಸೆಳೆಯಿತು. ಕೊನೆಯದಾಗಿ ಭಾರತ 7 ರನ್‌ಗಳ ರೋಚಕ ಜಯ ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತು.

  • 2 ಟಿ20 ವಿಶ್ವಕಪ್‌ – ಭಾರತದ ಪರ ವಿಶಿಷ್ಟ ದಾಖಲೆ ಬರೆದ ಹಿಟ್‌ಮ್ಯಾನ್‌

    2 ಟಿ20 ವಿಶ್ವಕಪ್‌ – ಭಾರತದ ಪರ ವಿಶಿಷ್ಟ ದಾಖಲೆ ಬರೆದ ಹಿಟ್‌ಮ್ಯಾನ್‌

    ಬ್ರಿಡ್ಜ್‌ಟೌನ್‌: ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ (Rohit Sharma) ಎರಡು ಟಿ20 ವಿಶ್ವಕಪ್‌ ಜಯಿಸುವ ಮೂಲಕ ಭಾರತದ (Team India) ಪರ ವಿಶಿಷ್ಟ ದಾಖಲೆ ಬರೆದಿದ್ದಾರೆ.

    ಹೌದು. 2007ರಲ್ಲಿ ಭಾರತ ಮೊದಲ ಬಾರಿಗೆ ಧೋನಿ (MS Dhoni) ನಾಯಕತ್ವದಲ್ಲಿ ಚಾಂಪಿಯನ್‌ ಆಗಿತ್ತು. ಪಾಕಿಸ್ತಾನವನ್ನು 5 ರನ್‌ನಿಂದ ಮಣಿಸಿ ಪ್ರಪ್ರಥಮ ಟಿ20 ಕ್ರಿಕೆಟ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ಔಟಾಗದೇ 30 ರನ್‌ (16 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದರು. ಇದನ್ನೂ ಓದಿ: ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ಈಗ ರೋಹಿತ್‌ ನಾಯಕತ್ವದಲ್ಲೇ ಭಾರತ ಎರಡನೇ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಈ ಮೂಲಕ ಸತತ ಎರಡು ಬಾರಿ ಚಾಂಪಿಯನ್‌ ಆದ ತಂಡದಲ್ಲಿದ್ದ ಏಕಮಾತ್ರ ಸದಸ್ಯ ಎಂಬ ಹೆಗ್ಗಳಿಕೆಗೆ ರೋಹಿತ್‌ ಶರ್ಮಾ ಪಾತ್ರವಾಗಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ಫೈನಲ್‌ನಲ್ಲಿ 9 ರನ್‌ಗಳಿಸಿ  ಔಟ್‌ ಆಗಿದ್ದರೂ ತಂಡವನ್ನು ಫೈನಲಿಗೆ ತರುವಲ್ಲಿ ರೋಹಿತ್‌ ಪಾತ್ರ ದೊಡ್ಡದು.

  • ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಗಯಾನ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024 (T20 World Cup) ರ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಹಿಟ್‌ಮ್ಯಾನ್‌ ಮಕ್ಕಳಂತೆ ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ..?: ಇಂಗ್ಲೆಂಡ್ (England) ವಿರುದ್ಧದ ಗೆಲುವಿನ ಬಳಿಕ ಎಲ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದಾಗ ರೋಹಿತ್ ಶರ್ಮಾ ಬಾಗಿಲ ಬಳಿ ಇದ್ದ ಕುರ್ಚಿಯಲ್ಲಿ ಕುಳಿತಿದ್ದರು. ಅಲ್ಲದೇ ಒಂದು ಕೈಯಿಂದ ಮುಖ ಮುಚ್ಚಿಕೊಂಡಿದ್ದು, ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ವಿರಾಟ್ ಕೊಹ್ಲಿ ಅವರು ಶರ್ಮಾ ತಲೆ ಮೇಲೆ ಕೈಯಿಟ್ಟು ನಂತರ ಒಳಗೆ ಹೋಗುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: T20 World Cup: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ – ಫೈನಲ್‌ಗೆ ಭಾರತ ಗ್ರ್ಯಾಂಡ್‌ ಎಂಟ್ರಿ

    ಟೀಂ ಇಂಡಿಯಾ (Team India) ಫೈನಲ್ ತಲುಪಿರುವ ಕಾರಣ ಅವರು ಭಾವುಕರಾಗಿದ್ದಾರೆ. ಭಾರತಕ್ಕೆ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅತ್ಯುತ್ತಮ ಬೌಲಿಂಗ್ ಮೂಲಕ ತಲಾ 3 ವಿಕೆಟ್ ಪಡೆದರು. ಟೂರ್ನಿಯುದ್ದಕ್ಕೂ ಒಗ್ಗಟ್ಟಿನ ಪ್ರದರ್ಶನ ನೀಡಿದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

    https://twitter.com/iMSIDPAK/status/1806421452322644307

    ಒಟ್ಟಿನಲ್ಲಿ ಕಳೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ಸೋಲಿಸಿತ್ತು. ಇದೀಗ ಆ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ.

    ಮೂರನೇ ಬಾರಿ ಫೈನಲ್‌ಗೆ ಲಗ್ಗೆ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮುನ್ನ 2007 ಮತ್ತು 2014ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪಿತ್ತು. 2007ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಪ್ರಶಸ್ತಿ ಗೆದ್ದಿತ್ತು. 2014ರಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಬಾರಿಯ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

  • 24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

    24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

    ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಟಿ20 ವಿಶ್ವಕಪ್‌ (T20 World Cup) ಕ್ರಿಕೆಟ್‌ ಸೂಪರ್‌ 8 ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 24 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಈ ಮೂಲಕ ಕಳೆದ ವರ್ಷದ ವಿಶ್ವಕಪ್‌ ಕ್ರಿಕೆಟ್‌ ಫೈನಲಿನಲ್ಲಿ ಸೋತಿದ್ದ ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಸೇಡು ತೀರಿಸಿದೆ.

    ಗೆಲ್ಲಲು 205 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 181 ರನ್‌ ಹೊಡೆದು ಜಯಗಳಿಸಿತು. ಕೊನೆಯಲ್ಲಿ ಆರ್ಶ್‌ದೀಪ್‌ ಸಿಂಗ್‌, ಕುಲದೀಪ್‌ ಯಾದವ್‌, ಬುಮ್ರಾ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಪರಿಣಾಮ ಭಾರತ ಗೆಲುವು ಸಾಧಿಸಿತು.

    ಡೇವಿಡ್‌ ವಾರ್ನರ್‌ 6 ರನ್‌ಗಳಿಸಿ ಬೇಗನೇ ಔಟಾದರೂ ಟ್ರಾವಿಸ್‌ ಹೆಡ್‌ ಮತ್ತು ಮಿಚೆಲ್‌ ಮಾರ್ಷ್‌ ಎರಡನೇ ವಿಕೆಟಿಗೆ 81 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು.

    ವಿಕೆಟ್‌ ಉರುಳುತ್ತಿದ್ದರೂ ಟ್ರಾವಿಸ್‌ ಹೆಡ್‌ ನಿಂತು ಆಡುತ್ತಿದ್ದರು. ಬೂಮ್ರಾ ಎಸೆದ ಇನ್ನಿಂಗ್ಸ್‌ 17ನೇ ಓವರ್‌ನಲ್ಲಿ ಟ್ರಾವಿಸ್‌ ಹೆಡ್‌ 76 ರನ್‌ (43 ಎಸೆತ, 9 ಬೌಂಡರಿ,4 ಸಿಕ್ಸ್‌) ಗಳಿಸಿದ್ದಾಗ ರೋಹಿತ್‌ ಶರ್ಮಾ ಕ್ಯಾಚ್‌ ನೀಡಿ ಔಟಾದ ಬಳಿಕ ಭಾರತದತ್ತ ಪಂದ್ಯ ವಾಲಿತು.

    ಆರ್ಶ್‌ದೀಪ್‌ ಸಿಂಗ್‌ 3 ವಿಕೆಟ್‌, ಕುಲದೀಪ್‌ ಯಾದವ್‌ 2 , ಬುಮ್ರಾ ಮತ್ತು ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ: ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಪರ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾದರು. ವಿಕೆಟ್‌ ಉರುಳಿದ್ದರೂ ರೋಹಿತ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಕೇವಲ 41 ಎಸೆತಗಳಲ್ಲಿ 91 ರನ್‌ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದರು. ಈ ಸುಂದರ ರೋಹಿತ್‌ ಶರ್ಮಾ (Rohit Sharma) ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ 76 ರನ್‌ ಚಚ್ಚಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್‌ ಮಿಚೆಲ್‌ ಸ್ಟ್ರಾಕ್‌ ಎಸೆತದಲ್ಲಿ ಬೌಲ್ಡ್‌ ಔಟ್‌ ಆದರು.

    ರಿಷಭ್‌ ಪಂತ್‌ 15 ರನ್‌, ಸೂರ್ಯಕುಮಾರ್‌ ಯಾದವ್‌ 31 ರನ್‌(16 ಎಸೆತ, 3 ಬೌಂಡರಿ, 2 ಸಿಕ್ಸರ್‌), ಶಿವಂ ದುಬೆ 28 ರನ್‌ (22 ಎಸೆತ, 2 ಬೌಂಡರಿ, 1 ಸಿಕ್ಸ್‌), ಹಾರ್ದಿಕ್‌ ಪಾಂಡ್ಯ ಔಟಾಗದೇ 27 ರನ್‌ ( 17 ಎಸೆತ, 1 ಬೌಂಡರಿ, 2 ಸಿಕ್ಸ್‌), ಜಡೇಜಾ ಔಟಾಗದೇ 9 ರನ್‌ (5 ಎಸೆತ, 1 ಸಿಕ್ಸ್‌) ಹೊಡೆದ ಪರಿಣಾಮ ಭಾರತ ಅಂತಿಮವಾಗಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಹೊಡೆಯಿತು.

  • ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಟಿ20 ವಿಶ್ವಕಪ್‌ (T20 World Cup) ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಸೂಪರ್‌ 8 ಪಂದ್ಯದಲ್ಲಿ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ವಿಶ್ವ ದಾಖಲೆ (World Record) ಬರೆದಿದ್ದಾರೆ.

    ಕೇವಲ 41 ಎಸೆತಗಳಲ್ಲಿ 91 ರನ್‌ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ಸುಂದರ ಇನ್ನಿಂಗ್ಸ್‌ ಬರೋಬ್ಬರಿ 8 ಸಿಕ್ಸ್‌, 7 ಬೌಂಡರಿ ಒಳಗೊಂಡಿತ್ತು. ರೋಹಿತ್‌ ಶರ್ಮಾ (Rohit Sharma) ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ 76 ರನ್‌ ಚಚ್ಚಿದ್ದರು.

    ವಿರಾಟ್‌ ಕೊಹ್ಲಿ (Virat Kohli) ಶೂನ್ಯಕ್ಕೆ ಔಟಾದರೂ ರೋಹಿತ್‌ ಶರ್ಮಾ ಆಸೀಸ್‌ ಬೌಲರ್‌ಗಳನ್ನು ಬೆಂಡೆತ್ತಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್‌ ಮಿಚೆಲ್‌ ಸ್ಟ್ರಾಕ್‌ ಎಸೆತದಲ್ಲಿ ಬೌಲ್ಡ್‌ ಔಟ್‌ ಆದರು. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗಂಭೀರ್‌ ಫಿಕ್ಸ್‌? – ಗಂಭೀರ್‌ ಸ್ಪಷ್ಟನೆ ಏನು?

    ಅತಿ ಹೆಚ್ಚು ರನ್‌:
    ಟಿ20 ಕ್ರಿಕೆಟ್‌ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನದ ಬಾಬರ್‌ ಅಜಂ 146 ಇನ್ನಿಂಗ್ಸ್‌ನಿಂದ 4,145 ರನ್‌ ಹೊಡೆದರೆ ರೋಹಿತ್‌ ಶರ್ಮಾ 149 ಇನ್ನಿಂಗ್ಸ್‌ನಿಂದ 4,165 ರನ್‌ ಹೊಡೆದಿದ್ದಾರೆ.


    ನಾಯಕನಾಗಿ ವೇಗದ ಅರ್ಧಶತಕ
    19 ಎಸೆತಗಳಲ್ಲಿ ರೋಹಿತ್‌ ಶರ್ಮಾ ಅರ್ಧಶತಕ ಹೊಡೆದರು. ಈ ಮೊದಲು 2007ರಲ್ಲಿ ಬಾಂಗ್ಲಾದ ಮೊಹಮ್ಮದ್‌ ಅಶ್ರಫುಲ್‌ 20 ಎಸೆತಗಳಲ್ಲಿ ಫಿಫ್ಟಿ ಹೊಡೆದಿದ್ದರು.

    ಭಾರತದ ಪರ ಅತಿ ಹೆಚ್ಚು ಸಿಕ್ಸ್‌:
    ಭಾರತದ ಪರ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಆಟಗಾರನಾಗಿ ರೋಹಿತ್‌ ಶರ್ಮಾ ಹೊರ ಹೊಮ್ಮಿದ್ದಾರೆ. ಈ ಹಿಂದೆ ಯುವರಾಜ್‌ ಸಿಂಗ್‌ 2007ರಲ್ಲಿ ಇಂಗ್ಲೆಂಡ್‌ ವಿರುದ್ಧ 7 ಸಿಕ್ಸ್‌ ಹೊಡೆದಿದ್ದರು. ಈ ಪಂದ್ಯದಲ್ಲಿ ಯುವರಾಜ್‌ ಒಂದೇ ಓವರ್‌ನಲ್ಲಿ 6 ಸಿಕ್ಸ್‌ ಸಿಡಿಸಿ ವಿಶ್ವದಾಖಲೆ ಬರೆದಿದ್ದರು.

     

  • ಶುಭಮನ್‌ ಗಿಲ್‌ರನ್ನ ಭಾರತಕ್ಕೆ ವಾಪಸ್‌ ಕಳಿಸಲು ಶಿಸ್ತಿನ ಕೊರತೆಯೇ ಕಾರಣವಾ? – ಕೋಚ್‌ ಹೇಳಿದ್ದೇನು?

    ಶುಭಮನ್‌ ಗಿಲ್‌ರನ್ನ ಭಾರತಕ್ಕೆ ವಾಪಸ್‌ ಕಳಿಸಲು ಶಿಸ್ತಿನ ಕೊರತೆಯೇ ಕಾರಣವಾ? – ಕೋಚ್‌ ಹೇಳಿದ್ದೇನು?

    ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತ ತಂಡದ ಲೀಗ್‌ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಅಗ್ರಸ್ಥಾನದೊಂದಿಗೆ ಸೂಪರ್‌-8 ಸುತ್ತಿಗೆ ಪದಾರ್ಪಣೆ ಮಾಡಿದೆ. ಮುಂದಿನ ಪಂದ್ಯಕ್ಕಾಗಿ ವೆಸ್ಟ್‌ ಇಂಡೀಸ್‌ಗೆ ಪ್ರಯಾಣಿಸಲಿದೆ. ಲೀಗ್‌ ಸುತ್ತಿನ ಪಂದ್ಯಗಳ ಮುಕ್ತಾಯದ ಹಿನ್ನೆಲೆ ಭಾರತ ತಂಡಕ್ಕೆ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ಶುಭಮನ್‌ ಗಿಲ್‌ (Shubman Gill) ಹಾಗೂ ಅವೇಶ್‌ ಖಾನ್‌ (Avesh Khan) ಭಾರತಕ್ಕೆ ಮರಳಲು ಸಿದ್ಧವಾಗಿದ್ದಾರೆ.

    ಶುಭಮನ್‌ ಗಿಲ್‌ ಅವರು ಭಾರತಕ್ಕೆ ಮತ್ತೆ ಮರಳುತ್ತಿರುವುದಕ್ಕೆ ಅವರ ಅಶಿಸ್ತಿನ ವರ್ತನೆಯೇ ಕಾರಣ ಎಂಬ ವದಂತಿಗಳು ಜಾಲತಾಣದಲ್ಲಿ ಹುಟ್ಟಿಕೊಂಡಿದ್ದು ಇದಕ್ಕೆ ಬ್ಯಾಟಿಂಗ್‌ ಕೋಚ್‌ ರಾಥೋರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ರಾಥೋಡ್‌, ಸೂಪರ್‌-8 ಪಂದ್ಯಗಳಗಾಗಿ ಟೀಂ ಇಂಡಿಯಾದ ಮೀಸಲು ಆಟಗಾರರಾಗಿ ರಿಂಕು ಸಿಂಗ್‌, ಖಲೀಲ್‌ ಅಹ್ಮದ್‌ ಮಾತ್ರ ಕೆರಿಬಿಯನ್‌ ನಾಡಿಗೆ ಪ್ರಯಾಣಿಸಲಿದ್ದಾರೆ. ಅವೇಶ್‌ ಖಾನ್‌ ಮತ್ತು ಶುಭಮನ್‌ ಗಿಲ್‌ ಅವರನ್ನು ಮರಳಿ ಭಾರತಕ್ಕೆ ಮರಳಿ ಕಳುಹಿಸುತ್ತಿರುವುದು ಅಶಿಸ್ತಿನ ವರ್ತನೆಯಿಂದಲ್ಲ, ಇದು ಪೂರ್ವನಿಯೋಜಿತ ಕ್ರಮ. ಕೆರಿಬಿಯನ್‌ನಲ್ಲಿ ಕೇವಲ ಇಬ್ಬರು ಮೀಸಲು ಆಟಗಾರರ ಸೇರ್ಪಡೆಗೆ ಮಾತ್ರ ಅವಕಾಶವಿದೆ. ಇದನ್ನು ಮೊದಲೇ ನಿರ್ಣಯಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇನ್ನೂ ಗಿಲ್‌ ಅವರನ್ನು ತವರಿಗೆ ವಾಪಸ್‌ ಕಳುಹಿಸುತ್ತಿರುವ ಬಗ್ಗೆ ವರದಿಗಳು ಹೊರಬೀಳುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್‌ ಶರ್ಮಾ ಅವರನ್ನು ಗಿಲ್‌ ಅನ್‌ಫಾಲೋ ಮಾಡಿದ್ದಾರೆ ಎಂಬುದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದನ್ನೂ ಓದಿ: ಬುಮ್ರಾ ಬೆಂಕಿ ಬೌಲಿಂಗ್‌, ಭಾರತಕ್ಕೆ ರೋಚಕ 6 ರನ್‌ ಜಯ – ಗುಂಪು ಹಂತದಲ್ಲೇ ಪಾಕ್‌ ಹೊರಕ್ಕೆ?

    ಕೆನಡಾ-ಭಾರತದ ನಡುವೆ ಶನಿವಾರ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಪಂದ್ಯವು ಮಳೆಯಿಂದ ರದ್ದಾಯಿತು. ಇದರೊಂದಿಗೆ ಉಭಯ ತಂಡಗಳ ಲೀಗ್‌ ಸುತ್ತಿನ ಪಂದ್ಯವು ಮುಕ್ತಾಯಗೊಂಡಿತು. ಎ ಗುಂಪಿನಲ್ಲಿ ಭಾರತ ಮತ್ತು ಅಮೆರಿಕ ತಂಡಗಳು ಸೂಪರ್‌-8 ಸುತ್ತಿಗೆ ಅರ್ಹತೆ ಪಡೆದುಕೊಂಡವು. ಜೂನ್ 20ರ ಗುರುವಾರ ಬಾರ್ಬಡೋಸ್‌ನಲ್ಲಿ ಸೂಪರ್-8 ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

  • T20 World Cup: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ – 1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.!

    T20 World Cup: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ – 1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.!

    – ಆರ್ಮಿಯಿಂದ ತರಬೇತಿ ಪಡೆದ ಪಾಕ್‌ಗೆ ಪುಟಿದೇಳುವ ತವಕ

    ನ್ಯೂಯಾರ್ಕ್​: ಇಡೀ ಕ್ರಿಕೆಟ್‌ ಜಗತ್ತೇ ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಣ ರೋಚಕ ಟಿ20 ವಿಶ್ವಕಪ್ (T20 World Cup) ಪಂದ್ಯಕ್ಕೆ ಕ್ಷಣಗಣನೆ ಬಾಕಿಯಿದೆ.

    ಭಾರತೀಯ ಕಾಲಮಾನದ ಪ್ರಕಾರ ಇಂದು (ಭಾನುವಾರ) ರಾತ್ರಿ 8ಕ್ಕೆ ಉಭಯ ತಂಡಗಳ ಮಧ್ಯೆ ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ (New york Stadium) ಹಣಾಹಣಿ ನಡೆಯಲಿದ್ದು, ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್‌ ಸಮರದಲ್ಲಿ ಈ ತೀವ್ರತೆ ಕಾಣಲು ಸಾಧ್ಯವೇ ಇಲ್ಲ. ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ.

    2024ರ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ತಂಡದ ವಿರುದ್ಧ ವಿರೋಚಿತ ಸೋಲಿಗೆ ತುತ್ತಾಗಿರುವ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧ ಪುಟಿದೇಳುವ ತವಕದಲ್ಲಿದೆ. ಇನ್ನೂ ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಪಾಕ್ ವಿರುದ್ಧ ಗೆದ್ದು ಸೂಪರ್-8 ಹಂತಕ್ಕೆ ಲಗ್ಗೆಯಿಡುವ ಉತ್ಸಾಹದಲ್ಲಿದೆ. ಆದ್ರೆ ಪಾಕ್‌ ಸೂಪರ್-8 ಪ್ರವೇಶಿಸಲು ಈ ಗೆಲುವು ನಿರ್ಣಾಯಕವೂ ಆಗಿದ್ದು, ಪಾಕ್ ತಂಡಕ್ಕೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

    ಮಳೆ ಭೀತಿ:
    ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ನ್ಯೂಯಾರ್ಕ್​ನಲ್ಲಿ (New york Rains) ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ.67 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. 6 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದ ಪಂದ್ಯ ರದ್ದಾರೆ ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ.

    ಸೋಲಿನ ಮುಖವನ್ನೇ ನೋಡದ ಭಾರತ:
    2007ರಿಂದ ಈವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕ್ ಎದುರು ಸೋಲನ್ನೇ ಕಂಡಿಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ಮಾತ್ರ ಸೋಲು ಕಂಡಿದೆ. 2007ರಿಂದ ಈವರೆಗೆ ನಡೆದ 12 ಟಿ20ಐ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಪಾಕಿಸ್ತಾನ ಗೆದ್ದಿದ್ದರೆ, ಟೀಂ ಇಂಡಿಯಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

    1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.:
    ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಇಂಡೋ ಪಾಕ್‌ ಕದನದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಬೆಲೆಯೂ ಭರ್ಜರಿಯಾಗಿ ಏರಿಕೆಯಾಗಿದೆ. ಪ್ರತಿ ಸೆಕೆಂಡ್‌ಗೆ 4 ಲಕ್ಷ ರೂ. ನಿಗದಿಪಡಿಸಲಾಗಿದೆ. ವಿಶ್ವಕಪ್‌ನ ಇತರೇ ಪಂದ್ಯಗಳಲ್ಲಿ ಪ್ರತಿ 10 ಸೆಕೆಂಡಿನ ಜಾಹೀರಾತಿಗೆ 6 ಲಕ್ಷ ರೂ. ಇದ್ದರೆ, ಭಾರತ ಮತ್ತು ಪಾಕ್‌ ಪಂದ್ಯದ ವೇಳೆ 10 ಸೆಕೆಂಡ್‌ ಜಾಹೀರಾತಿನ ಮೌಲ್ಯ 40 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಬಿಗಿ ಭದ್ರತೆ:
    ಐಸಿಸ್‌ ಉಗ್ರರಿಂದ ಪಂದ್ಯದ ಮೇಲೆ ದಾಳಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಹಾಗೂ ಉಭಯ ತಂಡಗಳ ಆಟಗಾರರಿಗೆ ನ್ಯೂಯಾರ್ಕ್‌ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಅಮೆರಿಕೆ ಅಧ್ಯಕ್ಷರ ಕಾರ್ಯಕ್ರಮಗಳಿಗೆ ನೀಡುವ ಮಾದರಿಯಲ್ಲೇ ಎಫ್‌ಬಿಐ ಸೇರಿ ವಿವಿಧ ಭದ್ರತಾ ಏಜೆನ್ಸಿಗಳು ತಮ್ಮ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಿವೆ ಎಂದು ತಿಳಿದುಬಂದಿದೆ.