Tag: ರೋಹಿತ್‌ ಚಕ್ರತೀರ್ಥ

  • ಕುವೆಂಪು, ನಾಡಗೀತೆಗೆ ಅವಮಾನ- ರೋಹಿತ್ ಚಕ್ರತೀರ್ಥರ ಮೇಲೆ ಮುಗಿಬಿದ್ದ ಕಾಂಗ್ರೆಸ್

    ಕುವೆಂಪು, ನಾಡಗೀತೆಗೆ ಅವಮಾನ- ರೋಹಿತ್ ಚಕ್ರತೀರ್ಥರ ಮೇಲೆ ಮುಗಿಬಿದ್ದ ಕಾಂಗ್ರೆಸ್

    ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಈ ವಿಷಯದಲ್ಲಿ ಪರಸ್ಪರ ಬಹಿರಂಗ ವಾಗ್ವಾದಕ್ಕೆ ಇಳಿದಿರುವ ಬಿಜೆಪಿ-ಕಾಂಗ್ರೆಸ್ ಮುಖಂಡರು ದಿನಾ ಒಂದಿಲ್ಲ ಒಂದು ವಿವಾದಗಳನ್ನು ತೆರೆದಿಡುತ್ತಿದ್ದಾರೆ.

    ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು ಮತ್ತು ಪ್ರಗತಿಪರರು ಇದೀಗ ರೋಹಿತ್ ಅವರ ಹಳೇ ಪೋಸ್ಟ್ ಒಂದನ್ನು ಹರಿಯಬಿಟ್ಟಿದ್ದಾರೆ. ಕುವೆಂಪು ರಚಿತ ನಾಡಗೀತೆಯನ್ನು ವ್ಯಂಗ್ಯ ಮಾಡಿ ರೋಹಿತ್ ಚಕ್ರತೀರ್ಥ 2017 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟನ್ನು ಈಗ ನೆನಪಿಸಿದ್ದಾರೆ. ಇದರ ವಿರುದ್ಧ ಪೋಲೀಸ್ ಠಾಣೆಯಲ್ಲಿ ಅಂದು ದೂರು ಕೂಡ ದಾಖಲಾಗಿತ್ತು. ಇದನ್ನೂ ಓದಿ: ಜೈಲಿನಲ್ಲಿದ್ದ ನವಜೋತ್‌ ಸಿಂಗ್‌ ಸಿಧು ಆಸ್ಪತ್ರೆಗೆ ದಾಖಲು

    ಕುವೆಂಪು ಮತ್ತು ನಾಡಗೀತೆಗೆ ಅಗೌರವ ತೋರಿದ ವ್ಯಕ್ತಿ ಪಠ್ಯಪರಿಷ್ಕರಣಾ ಸಮಿತಿಗೆ ಅಧ್ಯಕ್ಷರಾಗಿದ್ದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಪ್ರಗತಿಪರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಮನಸ್ಥಿತಿಯ ವ್ಯಕ್ತಿ ಶಿಫಾರಸು ಮಾಡಿರುವುದನ್ನು ಪಠ್ಯದಲ್ಲಿ ಸೇರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ನಡೆಗೂ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದಾರೆ. ಒಟ್ಟಿನಲ್ಲಿ ಶಾಲಾ ಮಕ್ಕಳ ಪಠ್ಯ ಪುಸ್ತಕ ವಿಚಾರ ನಿರಂತರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುತ್ತಿರುವುದು ದುರದೃಷ್ಟಕರ.

  • ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

    ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

    ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‍ಎಸ್) ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಭಾಷಣವನ್ನು 2022-23ನೇ ಸಾಲಿನ ಹತ್ತನೆಯ ತರಗತಿಯ ಶೈಕ್ಷಣಿಕ ವರ್ಷದ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ಶಿಕ್ಷಣದ ಕೇಸರೀಕರಣದ ಮುಂದುವರಿದ ಭಾಗವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸಿದೆ.

    ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡ್ಗೆವಾರ್ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಗದ್ಯಪುಸ್ತಕದಲ್ಲಿ ಐದನೇ ಪಠ್ಯವಾಗಿ ಸೇರಿಸಿದೆ. ದೇಶಾದ್ಯಂತ ನರಮೇಧಗಳನ್ನು ನಡೆಸಿದ, ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್‌ಎಸ್‍ಎಸ್ ಸಂಸ್ಥಾಪಕ ಹೆಡ್ಗೆವಾರ್ ಹೇಗೆ ಆದರ್ಶ ಪುರುಷನಾಗಲು ಸಾಧ್ಯ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ ವಿದ್ಯಾರ್ಥಿಗಳು

    ಕಾರಣವೇನು?
    ಹೆಗ್ಡೆವಾರ್ ಅವರ ಶಿಕ್ಷಣದ ನಂತರ ಬಂಗಾಳದಲ್ಲಿ ಅನುಶೀಲನ್ ಸಮಿತಿ(ಹಿಂದೂ ಕ್ರಾಂತಿಕಾರಿಗಳು) ಅದರ ಭಾಗವಾಗಿದ್ದರು. 1920ರ ದಶಕದಲ್ಲಿ ಕಾಂಗ್ರೆಸ್‍ಗೆ ಸೇರಿದರು. ಆದರೆ ಹಿಂದೂ ಮತ್ತು ಮುಸಲ್ಮಾನರ ನಡುವೆ ಐಕ್ಯತೆಯ ನೀತಿಯನ್ನು ಕಾಂಗ್ರೆಸ್ ಪಾಲಿಸುತ್ತಿದೆಯೆಂದು ಅದನ್ನು ತೊರೆದರು. ಖಿಲಾಫತ್ ಹೋರಾಟದಿಂದಾಗಿ ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳುವಳಿಯನ್ನು ಹೆಡ್ಗೆವಾರ್ ಒಪ್ಪಲಿಲ್ಲ, ನಂತರ ಹಿಂದೂ ರಾಷ್ಟ್ರದ ಗುರಿಗಾಗಿ 1925ರಲ್ಲಿ ಆರ್‌ಎಸ್‌ಎಸ್‌ ಸ್ಥಾಪಿಸಿದರು.

    1929ರಲ್ಲಿ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪೂರ್ಣ ಸ್ವರಾಜ್ ಅಂಗೀಕರಿಸಿತು. ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಅವರು ಭಗವಾಧ್ವಜವನ್ನು ಹಾರಿಸಲು ಆರ್‌ಎಸ್‍ಎಸ್ ಕಾರ್ಯಕರ್ತರನ್ನು ಒತ್ತಾಯಿಸಿದರು. ಸಂಘದ ಯಾವುದೇ ಜವಾಬ್ದಾರಿಯುತ ಕಾರ್ಯಕರ್ತರು 1930ರ ದಶಕದಲ್ಲಿ ನಡೆದ ಗಾಂಧೀಜಿಯವರ ದಂಡಿಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು ಎಂದು ಸಿ.ಪಿ.ಭಿಷಿಕರ್ ಬರೆದ ಹೆಡ್ಗೆವಾರ್‌ ಅವರ ಅಧಿಕೃತ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು: ಸಿದ್ದು ವಿರುದ್ಧ ಬೋಪಯ್ಯ ಕಿಡಿ

    ಇಂತಹ ದೇಶದ್ರೋಹಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಸಿದ್ಧಾಂತದ ಹೇರಿಕೆಯೆಂಬುದು ಸ್ಪಷ್ಟವಾಗಿದೆ. ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ವಿರೋಧಿಸಿದೆ. ಈ ಹೆಡ್ಗೆವಾರ್ ಭಾಷಣವನ್ನು ಶೀಘ್ರವೇ ಪಠ್ಯಕ್ರಮದಿಂದ ಕೈ ಬಿಡಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.

  • ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್‌ ಚಕ್ರತೀರ್ಥ ಓಪನ್‌ ಚಾಲೆಂಜ್‌

    ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್‌ ಚಕ್ರತೀರ್ಥ ಓಪನ್‌ ಚಾಲೆಂಜ್‌

    ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅವರು ನನ್ನ ಜೊತೆ ಚರ್ಚೆಗೆ ಬರಲಿ. ಇದು ನನ್ನ ಓಪನ್‌ ಚಾಲೆಂಜ್‌. ನಾನು ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ ಎಂದು ಬರಹಗಾರ ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಕ್ಕಳಿಗೆ ಎಡಪಂಥೀಯ ವಿಚಾರವನ್ನು ತುಂಬುವ ಕೆಲಸ ಮಾಡಿತ್ತು. ಅದನ್ನು ನಾವು ಸರಿ ಮಾಡಿದ್ದೇವೆ. ಕಾಂಗ್ರೆಸ್ ಯಾವುದನ್ನು ಮಾಡಿತ್ತೋ ಅದನ್ನು ಸಂಪೂರ್ಣ ಉಲ್ಟಾ ಮಾಡಿದ್ದೇವೆ. ಎಂದು ಹೇಳಿದರು.

    ಕಾಂಗ್ರೆಸ್ ಅವಧಿಯ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರಿಗೆ ನಾನು ಚಾಲೆಂಜ್ ಹಾಕ್ತೀನಿ. ಅವರು ಎಲ್ಲಿ ಬೇಕಾದ್ರೂ ಕರೆದರೂ ಅಲ್ಲಿಗೆ ಬಂದು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ 10ನೇ ತರಗತಿ ವಿದ್ಯಾರ್ಥಿಗಳು

    ಟಿಪ್ಪು ಮೈಸೂರು ಹುಲಿ ಅಲ್ಲ. ಮೈಸೂರು ಹುಲಿ ಅಂತ ಎಲ್ಲೂ ಪುರಾವೆ ಇಲ್ಲ. ಹೀಗಾಗಿ ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದೇವೆ. ಹೀಗಿದ್ದರೂ ಪಠ್ಯದಲ್ಲಿ ಟಿಪ್ಪುವನ್ನು ಕೈಬಿಟ್ಟಿಲ್ಲ. ಲಂಕೇಶ್, ಅನಂತಮೂರ್ತಿ, ಸಾರಾ ಅಬೂಬಕ್ಕರ್ ಸೇರಿದಂತೆ ಅನೇಕ ಲೇಖಕರ ಪಠ್ಯದ ಮೂಲಕ ಎಡಪಂಥೀಯ ಚಿಂತನೆಯನ್ನು ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.

    ನಾನು ಆರ್‌ಎಸ್‌ಎಸ್‌ ವ್ಯಕ್ತಿಯಲ್ಲ. ಆರ್‌ಎಸ್‌ಎಸ್‌ ಶಾಖೆಗೂ ನಾನು ಹೋಗಿಲ್ಲ. ನಾನು ಆರ್‌ಎಸ್‌ಎಸ್‌ ಕಾರ್ಯಕರ್ತನೂ ಅಲ್ಲ. ಹೆಡ್ಗೆವಾರ್ ಅವರ ಮೌಲ್ಯಗಳನ್ನು ಮಕ್ಕಳು ಓದಬೇಕು. ಅದಕ್ಕೆ ಅವರ ಚಿಂತನೆಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಸರ್ಕಾರ ದೊಡ್ಡ ತಪ್ಪು ಮಾಡಿತ್ತು. ಅದನ್ನ ನಾವು ಸರಿ ಮಾಡಿದ್ದೇವೆ. ಮಕ್ಕಳು ಯಾವುದು ಓದಬೇಕೋ ಅ ಪಠ್ಯಗಳನ್ನು ಸೇರ್ಪಡೆ ಮಾಡಿದ್ದೇವೆ. ಹೆಡ್ಗೆವಾರ್ ರಾಷ್ಟ್ರವಾದ ಚಿಂತನೆ ಬಗ್ಗೆ ಭಾಷಣ ಮಾಡಿದ್ದರು. ಅವರ ಕಲ್ಪನೆಯನ್ನು ಮಕ್ಕಳು ಓದಬೇಕು. ಡಾ.ಕೇಶವ ಬಲಿರಾಂ ಹೆಡ್ಗೆವಾರ್ ಆದರ್ಶ ವ್ಯಕ್ತಿಯಾಗಿದ್ದು ಪಠ್ಯದಲ್ಲಿ ಅವರ ಭಾಷಣವನ್ನು ಸೇರಿಸಿದರಲ್ಲಿ ಯಾವುದೇ ತಪ್ಪು ಇಲ್ಲ ಎಂದರು.

    ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ ಈ 10ನೇ ತರಗತಿಯ ಐದನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಪಾಠವನ್ನು ಸೇರಿಸಲಾಗಿದೆ. ಈ ಪಾಠವನ್ನು ಸೇರಿಸಿದ್ದಕ್ಕೆ ಈಗ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

  • ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ ವಿದ್ಯಾರ್ಥಿಗಳು

    ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ ವಿದ್ಯಾರ್ಥಿಗಳು

    ಬೆಂಗಳೂರು: ಇನ್ನು ಮುಂದೆ ವಿದ್ಯಾರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಅವರ ಭಾಷಣವನ್ನು ಓದಲಿದ್ದಾರೆ.

    2022-23ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಕೆ.ಬಿ. ಹೆಡ್ಗೆವಾರ್ ಅವರ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ಭಾಷಣವನ್ನು ಸೇರಿಸಲಾಗಿದೆ.

    ಬರಹಗಾರ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ ಈ ಪಾಠವನ್ನು ಸೇರಿಸಲಾಗಿದೆ. ಇದನ್ನೂ ಓದಿ: ಸೋಮವಾರದಿಂದ ಶಾಲೆಗಳ ಪ್ರಾರಂಭಕ್ಕೆ ಸಕಲ ಸಿದ್ಧತೆ – ವಿದ್ಯಾರ್ಥಿಗಳ ಸ್ವಾಗತಕ್ಕೆ ತಳಿರು ತೋರಣಗಳಿಂದ ಸಿಂಗಾರ

    ಪಠ್ಯಪುಸ್ತಕದಲ್ಲಿ 5ನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಪಾಠವನ್ನು ಸೇರಿಸಲಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಮಾರ್ಚ್‌ನಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

    ಪತ್ರಕರ್ತ ಪಿ. ಲಂಕೇಶ್ ಅವರ “ಮೃಗ ಮಟ್ಟು ಸುಂದರಿ” ಮತ್ತು ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ “ಭಗತ್ ಸಿಂಗ್” ಪಾಠಗಳನ್ನು ಕೈಬಿಡಲಾಗಿದೆ. ಬದಲಿಗೆ ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಸೇರಿಸಲಾಗಿದೆ.

    ಸಾರಾ ಅಬೂಬಕ್ಕರ್ ಅವರ “ಯುದ್ಧ”, ಎ.ಎನ್. ಮೂರ್ತಿ ರಾವ್ ಅವರ “ವ್ಯಾಘ್ರ ಕಥೆ” ಮತ್ತು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿ ಕಥೆ”ಯನ್ನು ಕೈಬಿಡಲಾಗಿದೆ. ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ “ಶುಕನಾಶನ ಉಪದೇಶ” ಮತ್ತು ಶತಾವಧಾನಿ ಆರ್. ಗಣೇಶ್ ಅವರ “ಶ್ರೇಷ್ಠ ಭಾರತೀಯ ಚಿಂತನೆಗಳು” ಸೇರಿಸಲಾಗಿದೆ. ಜಿ ರಾಮಕೃಷ್ಣ ಅವರ ಭಗತ್ ಸಿಂಗ್ ಪಠ್ಯ ಕೈ ಬಿಟ್ಟರೂ ಭಗತ್ ಸಿಂಗ್ ಅವರ ಮತ್ತಷ್ಟು ಸಾಹಸ ಕಥೆಯನ್ನು ಸೇರಿಸಲಾಗಿದೆ.

    ಇದು ಸೈದ್ಧಾಂತಿಕ ಹೇರಿಕೆ ಅಲ್ಲ ಎಂದು ಪ್ರತಿಕ್ರಿಯಿಸಿದ ರೋಹಿತ್‌ ಚಕ್ರತೀರ್ಥ, ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯಿಂದ ಯಾವುದೇ ಒತ್ತಡವಿಲ್ಲ. ಪಠ್ಯವನ್ನು ಅಳವಡಿಸಿದರೆ ಯಾವುದೇ ಸಂಘಟನೆಯ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಿದಂತಾಗುವುದಿಲ್ಲ. ನಾವು ಹೆಡ್ಗೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದು ತಿಳಿಸಿದ್ದಾರೆ.