Tag: ರೋಬೋ

  • ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಬೆಂಗಳೂರು: ಪಾಠ-ಪ್ರವಚನಗಳಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೋ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬುಧವಾರದಂದು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

    ಕ್ಷೇತ್ರದ ಶಾಸಕರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡು, ರೋಬೋ ಕಾರ್ಯಕ್ಷಮತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ರೋಬೋಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಹಾಗೆಯೇ, ಅದು ನೀಡಿದ ಉತ್ತರ ನೆರವನ್ನು ಕಂಡು ಬೆರಗಾದರು. ಇದನ್ನೂ ಓದಿ: ಮಲ್ಲೇಶ್ವರಂ 18ನೇ ಅಡ್ಡರಸ್ತೆ ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಾಣ ಇಲ್ಲ: ಅಶ್ವತ್ಥನಾರಾಯಣ

    ರೋಬೋ ಬೋಧನೆ ನಂತರ ಮಾತನಾಡಿದ ಅಶ್ವತ್ಥನಾರಾಯಣ ಅವರು, ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೋದ ಕಾರ್ಯ ಸಾಮಥ್ರ್ಯವನ್ನು ವೀಕ್ಷಿಸಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯ ಸಲುವಾಗಿ, ಇಂತಹ ರೋಬೋಗಳು ಇದ್ದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

    ರೋಬೋ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು.

    21ನೇ ಶತಮಾನವು ತಂತ್ರಜ್ಞಾನದ ಯುಗವಾಗಿದ್ದು, ಬೋಧನೆಯಲ್ಲಿ ಇದರ ಅಳವಡಿಕೆ ಅಗತ್ಯವಾಗಿದೆ. ಇದರಿಂದಾಗಿ, ಸರ್ಕಾರಿ ಶಾಲಾ-ಕಾಲೇಜುಗಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಇದರಿಂದ ಬಡಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.

    ಮುಂದಿನ ದಿನಗಳಲ್ಲಿ `ಈಗಲ್’ ರೋಬೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು. ನಂತರ ಅವರಿಂದಲೇ ಈ ಯೋಜನೆಗೆ ಚಾಲನೆ ಕೊಡಿಸುವ ಉದ್ದೇಶ ಇದೆ. ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಇಂಡಸ್ ಟ್ರಸ್ಟ್‌ನ ಸ್ಥಾಪಕ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲೆ.ಜನರಲ್ ಅರ್ಜುನ್ ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ, ಶಾಲೆ ಉಪ ಪ್ರಾಂಶುಪಾಲ ರವಿಕುಮಾರ್ ಈ ಸಂದರ್ಭದಲ್ಲಿ ಇದ್ದರು.

     

  • ಹೋಟೆಲ್‍ನಲ್ಲಿ ಊಟ, ತಿಂಡಿ ಸಪ್ಲೈಗೆ ಬಂತು ರೋಬೋ – ಮೈಸೂರಿನ ಜನತೆಯ ಮನಗೆದ್ದ ಸಪ್ಲೇಯರ್ ಲೇಡಿ

    ಹೋಟೆಲ್‍ನಲ್ಲಿ ಊಟ, ತಿಂಡಿ ಸಪ್ಲೈಗೆ ಬಂತು ರೋಬೋ – ಮೈಸೂರಿನ ಜನತೆಯ ಮನಗೆದ್ದ ಸಪ್ಲೇಯರ್ ಲೇಡಿ

    ಮೈಸೂರು: ನಗರದ ಸಿದ್ದಾರ್ಥ ಹೋಟೆಲ್ ಊಟ-ತಿಂಡಿ ಗ್ರಾಹಕರಿಗೆ ನೀಡಲು ಸಪ್ಲೇಯರ್ಸ್ ಬದಲು ಹೊಸ ಲೇಡಿ ರೋಬೋದ ಮೊರೆ ಹೋಗಿದೆ.

    ಇಷ್ಟು ದಿನ ಅರ್ಡರ್ ಮಾಡಿದರೆ ಅದನ್ನು ಗ್ರಾಹಕರ ಟೇಬಲ್‍ಗೆ ತಂದು ಕೊಡುವವರು ಸಪ್ಲೇಯರ್ಸ್ ಆಗಿದ್ದರು. ಇದೀಗ ಸಪ್ಲೇಯರ್ಸ್ ಬದಲಾಗಿ ಲೇಡಿ ರೋಬೋ ಬಳಕೆ ಮಾಡಲು ಹೋಟೆಲ್ ನಿರ್ಧರಿಸಿದೆ. ಈಗಾಗಲೇ ಲೇಡಿ ರೋಬೋ ಮೈಸೂರು ರೇಷ್ಮೆ ಸೀರೆ ಉಟ್ಟು ಗ್ರಾಹಕರಿಗೆ ಊಟ ತಿಂಡಿ ಸಪ್ಲೈ ಮಾಡುತ್ತಿದ್ದು, ಇದು ಮೈಸೂರಿನ ಸಿದ್ದಾರ್ಥ ಹೋಟೆಲ್‍ನ ಪ್ರಮುಖ ಆಕರ್ಷಣೆಯಾಗಿದೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರುವವರೆಗೂ ಮಗಳು ಮನೆಯಲ್ಲೇ ಇರಲಿ: ಮಂಡ್ಯ ಪೋಷಕರು

    ರೋಬೋ ಅಡುಗೆ ಕೋಣೆಯಿಂದ ಗ್ರಾಹಕರ ಟೇಬಲ್‍ಗೆ ಊಟ ತಿಂಡಿ ಸಪ್ಲೈ ಸಲಿಸಾಗಿ ಮಾಡುತ್ತಿದೆ. 2.5 ಲಕ್ಷ ರೂ. ವೆಚ್ಚದಲ್ಲಿ ರೋಬೋ ಸಿದ್ಧಪಡಿಸಲಾಗಿದೆ. ಬ್ಯಾಟರಿ ಚಾಲಿತ ರೋಬೋ ಇದ್ದಾಗಿದ್ದು ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ. ಇದನ್ನೂ ಓದಿ: ಮುಂದಿನ ವರ್ಷದಿಂದ ಸಮವಸ್ತ್ರ ಗೊಂದಲ ಇಲ್ಲದಂತೆ ಕಾನೂನು : ಬಿ.ಸಿ ನಾಗೇಶ್

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹೋಟೆಲ್ ಮಾಲೀಕರಾದ ಸಿದ್ದಾರ್ಥ್ ಗಿರಿ, ನಾವು ಈ ರೋಬೋವನ್ನು ಡೆಲ್ಲಿಯಿಂದ ಖರೀದಿದ್ದೇವೆ. 3 ವರ್ಷಗಳಿಂದ ರೋಬೋ ಅನುಷ್ಠಾನದ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯುತ್ತಿತ್ತು. ಇದೀಗ ಪ್ರತ್ಯೇಕ ಐಟಿ ಟೀಮ್ ಜೊತೆ ಹೋಟೆಲ್‍ನಲ್ಲಿ ರೋಬೋ ಕಾರ್ಯಾಚರಿಸುತ್ತಿದೆ ಎಂದರು.

    ಕೊರೊನಾ ಟೈಮ್‍ನಲ್ಲಿ ನಮಗೆ ರೋಬೋ ಬಗ್ಗೆ ಚಿಂತನೆ ಹೆಚ್ಚಾಯಿತು. ಇದೀಗ ರೋಬೋವನ್ನು ಟ್ರಯಲ್ ರನ್ ಮಾಡುತ್ತಿದ್ದೇವೆ. ಆರ್ಡರ್ ತೆಗೆದುಕೊಂಡು ಬಳಿಕ ರೋಬೋ ಕೈಯಲ್ಲಿ ಹಿಡಿದುಕೊಂಡಿರುವ ತಟ್ಟೆ ಮೇಲೆ ಊಟ-ತಿಂಡಿ ಇಟ್ಟರೆ ಗ್ರಾಹಕರ ಬಳಿ ತೆರಳಿ ಅದು ಸರ್ವ್ ಮಾಡುತ್ತದೆ. ವಾಯ್ಸ್ ಕಮಾಂಡ್ ಮೂಲಕ ಇದನ್ನು ನಿಯಂತ್ರಿಸಲಾಗುತ್ತಿದೆ. ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೋಬೋ ಸಿಸ್ಟಮ್ ಆಳವಡಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.‌

  • ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

    ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

    -15 ನಿಮಿಷದಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್

    ಬೆಂಗಳೂರು: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ನಟ ರಜಿನಿಕಾಂತ್ ಅಭಿನಯದ ‘ರೋಬೋ 2.0’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. 2010ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದ್ದು ಕುತೂಹಲವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

    ಟೀಸರ್ ನೋಡಿದಾಗಲೇ ಚಿತ್ರಕ್ಕೆ ಭಾರೀ ತಂತ್ರಜ್ಞಾನವನ್ನು ಬಳಸಲಾಗಿದೆ ಎನ್ನುವುದು ಗೊತ್ತಾಗಿತ್ತು. ಇಂದು ರಿಲೀಸ್ ಆಗಿರುವ ಟ್ರೇಲರ್ ನಲ್ಲಿ ಅಕ್ಷಯ್ ಕುಮಾರ್ ಮತ್ತು ರಜಿನಿಕಾಂತ್ ಡೈಲಾಗ್ ಗಳು ವಾವ್ ಎನ್ನುವಂತಿವೆ. ಇತ್ತ ಇಡೀ ಪ್ರಪಂಚವನ್ನ ತನ್ನ ಕೈ ವಶ ಮಾಡಿಕೊಳ್ಳಲು ಪ್ರಯತ್ನಿಸುವ ಅಕ್ಷಯ್ ಕುಮಾರ್ ಎಂಬ ಖಳನಾಯಕನಿಗೆ ತಿರುಗೇಟು ನೀಡಲು ರೀಲೋಡೆಡ್ ಚಿಟ್ಟಿ ಹುಟ್ಟಿ ಬರುತ್ತಾನೆ ಎಂಬುದನ್ನ ಟ್ರೇಲರ್ ಸ್ಪಷ್ಟಪಡಿಸಿದೆ. ಇತ್ತ ಬ್ರಿಟನ್ ಚೆಲುವೆ ಆ್ಯಮಿ ಜಾಕ್ಸನ್ ರೋಬೋ ಲುಕ್ ನಲ್ಲಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

    ಚೆನ್ನೈನ ಸತ್ಯಂ ಚಿತ್ರಮಂದಿರ ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 6 ಸಾವಿರ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ‘ರೋಬೋ 2.0.’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ‘ರೋಬೋ 2.0’ ಸಿನಿಮಾ ಶಂಕರ್ ಅವರ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರವಾಗಿದೆ. 2010ರಲ್ಲಿ ಶಂಕರ್ ನಿರ್ದೇಶನದಲ್ಲೇ ಮೂಡಿಬಂದಿದ್ದ ಎಂದಿರನ್ ಚಿತ್ರದ ಮುಂದಿನ ಭಾಗವಾಗಿ 2.0 ಮೂಡಿಬಂದಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.

    ಈ ಸಿನಿಮಾದಲ್ಲಿ ನಟ ರಜಿನಿಕಾಂತ್ ಮತ್ತು ನಟಿ ಆಮಿ ಜಾಕ್ಷನ್ ಅಭಿನಯಿಸಿದ್ದಾರೆ. ವಿಶೇಷವಾಗಿ ಚಿತ್ರದ ಖಳನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ಈ ಸಿನಿಮಾ ಬರೋಬ್ಬರಿ 550 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ನವೆಂಬರ್ 29ಕ್ಕೆ ಪ್ರಪಂಚದಾದ್ಯಂತ 9 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಇತ್ತೀಚೆಗೆ ‘ರೋಬೋ 2.0’ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ರಿಲೀಸ್ ಆದ ದಿನದಿಂದ ಸುಮಾರು ಒಂದು ವಾರದವರೆಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಒಂದರಲ್ಲಿ ಇದ್ದು, ಅಷ್ಟರ ಮಟ್ಟಿಗೆ ಸದ್ದು ಮಾಡಿತ್ತು. ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, 3ಡಿ ರೂಪದಲ್ಲಿ ಸಿನಿಮಾ ಸಿದ್ಧಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಪಾಠ ಮಾಡುತ್ತೆ ರೋಬೋ!

    ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಪಾಠ ಮಾಡುತ್ತೆ ರೋಬೋ!

    ಬೆಂಗಳೂರು: ಭಾರತದ ಅಗ್ರಗಣ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ `ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ’ 2018ರಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದು, ರೋಬೋ ಮೂಲಕ ಬೋಧನೆ ಮಾಡುವ ನವೀನ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ.

    ರೋಬೋ ಬೋಧನೆ ಮಾಡಲು `ಪೆಪ್ಪರ್’ ಎನ್ನುವ ರೋಬೋವನ್ನು ಬಳಕೆ ಮಾಡುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗೆಳೆಯ, ಒಡನಾಡಿ ಮತ್ತು ಮಾರ್ಗದರ್ಶಕನಂತೆ ಕೆಲಸ ಮಾಡಲಿದೆ.

    ಹೊಸ ತಂತ್ರಜ್ಞಾನ ಮೂಲಕ ಬೋಧನೆ ಮಾಡುವ ಮೂಲಕ ಶೈಕ್ಷಣಿಕ ವರ್ಷದಲ್ಲಿ, ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ರೋಬೋದ ಪ್ರೋಗ್ರಾಮಿಂಗ್ ತಯಾರಿಸಿಸಲಾಗುತ್ತದೆ. ಅಲ್ಲದೇ ಕಲಿಕಾ ಕೊಠಡಿಗಳ ಸ್ಥಿತಿಗತಿಗಳು, ಗುಣಮಟ್ಟ ಇತ್ಯಾದಿಗಳನ್ನು ಅಳೆಯಲು ಗೇಮಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ದೂರಸಂವೇದಿ ತಂತ್ರಜ್ಞಾನವನ್ನು ಆಧರಿಸಿದ ರೇಡಿಯೋ ಫ್ರೀಕ್ವೆನ್ಸಿ ಕುರಿತ ಸಂಶೋಧನೆಗಳನ್ನು ಕೂಡ ಆರಂಭಿಸಲಾಗುತ್ತಿದೆ. ಗುಣಮಟ್ಟದಿಂದ ಕೂಡಿದ ಮತ್ತು ಡಿಜಿಟಲ್ ರೂಪದ ಶಿಕ್ಷಣವನ್ನು ಸಾಕಾರಗೊಳಿಸುವುದಕ್ಕಾಗಿ ಭವಿಷ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತದೆ.

    ಭವಿಷ್ಯದ ಕಲಿಕೆಯ ದೂರದರ್ಶಿತ್ವ ಮತ್ತು ವಿಶ್ವ ಮಟ್ಟದ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿರುವುದು ನಮ್ಮ ಈ ಸಂಸ್ಥೆಯ ವೈಶಿಷ್ಟ್ಯ. ಸಂಸ್ಥೆಯು 65 ಎಕರೆ ವಿಸ್ತಾರವಾದ ಕ್ಯಾಂಪಸ್ ಹೊಂದಿದ್ದು, ವಿಶ್ವ ದರ್ಜೆಯ ಬೋಧನ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೇ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಬೇಕಾದ ವಸತಿ ವ್ಯವಸ್ಥೆ, ನುರಿತ ಉಪನ್ಯಾಸಕ ವೃಂದ ಮತ್ತು ಸಂಪೂರ್ಣ ಅನುಕೂಲವುಳ್ಳ 1,600 ಹಾಸಿಗೆಗಳ ಸಾಮಥ್ರ್ಯದ ಸುಸಜ್ಜಿತ ಆಸ್ಪತ್ರೆಯನ್ನು ಈ ಕ್ಯಾಂಪಸ್ ಹೊಂದಿದೆ.

    2016ರಲ್ಲಿಯೇ ವಿದ್ಯಾರ್ಥಿಗಳಿಗೆ 3ಡಿ ದೃಶ್ಯಾವಳಿಗಳೊಂದಿಗೆ ವೈದ್ಯಕೀಯ ಶಿಕ್ಷಣವನ್ನು ಕಲಿಯುವ ಸೌಲಭ್ಯವನ್ನು ಒದಗಿಸುವ `ಇಮ್ಮರ್ಸೀವ್ ತಂತ್ರಜ್ಞಾನ’ವನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಈ ವಿಶಿಷ್ಟ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಜಗತ್ತಿನ ಮೊಟ್ಟಮೊದಲ ವೈದ್ಯಕೀಯ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆಯನ್ನು ಪಡೆದುಕೊಂಡಿದೆ. ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಯಾವುದೇ ಒಂದು ವಿಷಯದ ಬಗ್ಗೆ ಆಳವಾದ ಗ್ರಹಿಕೆ ಮತ್ತು ಅನುಸಂಧಾನ ಸಾಧ್ಯವಾಗುತ್ತದೆ. ಇದರ ಜೊತೆಗೆ, ವಿದ್ಯಾರ್ಥಿಗಳು ದೀರ್ಘಕಾಲ ಒಂದು ವಿಚಾರದ ಮೇಲೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

    ಸಂಸ್ಥೆಯಲ್ಲಿ ಸುಸಜ್ಜಿತವಾದ `ಸಂಶೋಧನಾ ಮ್ಯೂಸಿಯಂ’ (ಡಿಸ್ಕವರಿ ಮ್ಯೂಸಿಯಂ) ಅನ್ನು 50,000 ಚದರ ಅಡಿಗಳಷ್ಟು ವಿಸ್ತಾರವಾದ ಜಾಗದಲ್ಲಿ ನೂರಾರು ಬಗೆಯ ವೈದ್ಯಕೀಯ ಮಾದರಿಗಳೊಂದಿಗೆ ನಿರ್ಮಿಸಲಾಗಿದೆ. ವೈದೇಹಿ ಆಸ್ಪತ್ರೆಯು ಸ್ಥಾಪನೆ ಬಳಿಕ ಇಲ್ಲಿವರೆಗೂ 60 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಮೂಲಕ, ನಮ್ಮ ಸಂಸ್ಥೆಯು ಆರೋಗ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರು ಮಹಾನಗರದ ಬಹುದೊಡ್ಡ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವುದು ವಿಶೇಷ.

    ಸಂಸ್ಥೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ, 300 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಕೇಂದ್ರ (ವೈದೇಹಿ ಆಂಕಾಲಜಿ ಇನ್ಸ್ಟಿಟ್ಯೂಟ್ ಅಂಡ್ ಸೆಂಟರ್ ಆಫ್ ಎಕ್ಸಲೆನ್ಸ್) 14 ಬಗೆಯ ಪದವಿ ಕೋರ್ಸುಗಳು, 6 ಬಗೆಯ ಸ್ನಾತಕೋತ್ತರ ಪದವಿಗಳು ಮತ್ತು 19 ಬಗೆಯ ಸೂಪರ್ ಸ್ಪೆಷಾಲಿಟಿ ಕೋರ್ಸುಗಳನ್ನು ಹೊಂದಿದೆ. ಇಲ್ಲಿ ಜಗತ್ತಿನ 12 ರಾಷ್ಟ್ರಗಳಿಗೆ ಸೇರಿದ ವಿದ್ಯಾರ್ಥಿಗಳು ಓದುತ್ತಿದ್ದಾರೆ.

    ಕಳೆದ 8 ವರ್ಷಗಳಲ್ಲಿ ಸಂಸ್ಥೆಯಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪದವೀಧರರಾಗಿದ್ದು, ಇವರಲ್ಲಿ 405 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಅಂತರರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಬೇಕೆನ್ನುವುದೇ `ವೈದೇಹಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ’ಯ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv