Tag: ರೋಪ್ ವೇ

  • ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ

    ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ

    ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ಅಂಜನಾದ್ರಿ ಬೆಟ್ಟ (Anjanadri Hill) ಸೇರಿ ರಾಜ್ಯದ 11 ಪ್ರವಾಸಿ ತಾಣಗಳಿಗೆ ರೋಪ್ ವೇ (Rope Way) ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ.

    ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನಿವಾಸದಲ್ಲಿ ಬುಧವಾರ (ಸೆ.3) ಮಹತ್ವದ ಸಭೆ ನಡೆಯಿತು. ಈ ವೇಳೆ ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿ ತಾಣಗಳಿಗೆ ರೋಪ್ ವೇ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ರೋಪ್ ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನುಮೋದನೆ ನೀಡಲಾಗಿರುತ್ತದೆ ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.ಇದನ್ನೂ ಓದಿ: ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್

    ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಮತ್ತು ಪೌರಾಣಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ತಿಳಿಸುವ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಸಿಎಂ ಸೂಚಿಸಿದ್ದಾರೆ. ಅಲ್ಲದೆ ವಯಸ್ಕರು ಬೆಟ್ಟದ ತುದಿಗೆ ತಲುಪಲು ಅಗತ್ಯವಾದ ಸವಲತ್ತುಗಳನ್ನು ಕಲ್ಪಿಸುವುದು ಹಾಗೂ ಇದಕ್ಕಾಗಿ ಪ್ರದಕ್ಷಿಣೆ ಮಾರ್ಗ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿದೆ.

    ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಯಾತ್ರಿಕರು ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಹಿರಿಯ ಭಕ್ತಾಧಿಗಳು ಬೆಟ್ಟವೇರಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ, ಸಮುದಾಯ ಭವನ ನಿರ್ಮಾಣ ಹಾಗೂ ಇತರ ಪ್ರವಾಸಿ ಸೌಲಭ್ಯಗಳು ಸೇರಿ ಕ್ಷೇತ್ರದ ಸುತ್ತಮುತ್ತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಸಿಎಂ ತಿಳಿಸಿದ್ದಾರೆ.

    ಸದರಿ ಕ್ಷೇತ್ರಕ್ಕೆ ಹಂತ-1 ಮತ್ತು ಹಂತ-2ರಲ್ಲಿ 200 ಕೋಟಿ ರೂ.ಗಳ ಕಾಮಗಾರಿ ಮಂಜೂರಾಗಿದ್ದು, ಈವರೆಗೆ ಸದರಿ ಕಾಮಗಾರಿಗಳಿಗೆ 10 ಕೋಟಿ ರೂ.ಯನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಬಾಕಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಬೇಕು. ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯು ಎನ್‌ಓಸಿ ನೀಡಬೇಕು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

    ಸಭೆಯಲ್ಲಿ ಸಚಿವರಾದ ಹೆಚ್.ಕೆ ಪಾಟೀಲ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್‌

  • ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಉತ್ತರಾಖಂಡದಲ್ಲಿ 6,811 ಕೋಟಿ ರೂ. ವೆಚ್ಚದಲ್ಲಿ 2 ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸೋನ್‌ಪ್ರಯಾಗ್‌- ಕೇದಾರನಾಥ್‌ ಮತ್ತು ಹೇಮಕುಂಡ್‌ ಸಾಹಿಬ್‌- ಗೋವಿಂದಘಾಟ್‌ ನಡುವಿನ ರೋಪ್ವೇಗಳು ಮುಂದಿನ 4ರಿಂದ 6 ವರ್ಷಗಳೊಳಗೆ ಪೂರ್ಣಗೊಳಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

    ಸೋನ್‌ಪ್ರಯಾಗ್-ಕೇದಾರನಾಥ್ 12.9 ಕಿ.ಮೀ.ವರೆಗಿನ ಮತ್ತು ಹೇಮಕುಂಡ್ ಸಾಹಿಬ್-ಗೋವಿಂದಘಾಟ್ 12.4 ಕಿ.ಮೀ. ನಡುವೆ ರೋಪ್‌ವೇ ನಿರ್ಮಿಸಲಾಗುತ್ತದೆ. ಇದರಿಂದಾಗಿ 8 ಗಂಟೆ ಬೇಕಾಗಿದ್ದ ಪ್ರಯಾಣದ ಅವಧಿ ಕೇವಲ 40 ನಿಮಿಷಕ್ಕೆ ಇಳಿಯಲಿದೆ. ಈ ರೋಪ್‌ವೇಯು ಭಾರತದ ಉದ್ದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಕೇದಾರನಾಥ್‌ನಿಂದ ಸೋನ್‌ಪ್ರಯಾಗ್‌ ನಡುವಿನ ರೋಪ್‌ವೇ ಅನ್ನು 4,081 ಕೋಟಿ ರೂ. ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್‌ ಡಿಟ್ಯಾಚೇಬಲ್‌ ಗೊಂಡೋಲ (3ಎಸ್‌) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18,000 ಪ್ರಯಾಣಿಕರನ್ನು ಈ ಕೇಬಲ್‌ ಕಾರ್ ಹೊತ್ತೊಯ್ಯಲಿದೆ. ಹೇಮಕುಂಡ್‌ ಸಾಹಿಬ್‌ ಜಿ ಮತ್ತು ಗೋವಿಂದಘಾಟ್‌ ನಡುವಿನ ರೋಪ್‌ವೇ 2,730 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

    ರೋಪ್‌ವೇನ ವಿಶೇಷತೆ ಏನು?

    ಈ ರೋಪ್‌ವೇ 10 ಆಸನಗಳ ಕ್ಯಾಬಿನ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಕ್ಯಾಬಿನ್‌ಗಳನ್ನು ಮುಚ್ಚಿರುತ್ತದೆ. ಸ್ವಯಂಚಾಲಿತ ತೆರೆಯುವ ಮತ್ತು ಮುಚ್ಚುವ ಬಾಗಿಲುಗಳನ್ನು ಹೊಂದಿರುತ್ತದೆ. ಇವು ಒಂದು ಗಂಟೆಯಲ್ಲಿ 1,800 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ರೋಪ್‌ವೇ ವರ್ಷವಿಡೀ ಕಾರ್ಯನಿರ್ವಹಿಸುತ್ತದೆ. ಮಳೆಗಾಲ, ಬೇಸಿಗೆ ಕಾಲದ ಸಮಯದಲ್ಲೂ ಕಾರ್ಯನಿರ್ವಹಿಸುತ್ತದೆ.

    ರೋಪ್‌ವೇ ನಿರ್ಮಾಣದ ಲಾಭವೇನು?
    ಹೇಮಕುಂಡ್‌ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ತೆರಳುವ ದಾರಿ ಕಲ್ಲು ಬಂಡೆಗಳಿಂದ ಕೂಡಿದ್ದು, ಜನ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ವೃದ್ಧರನ್ನು ಕುದುರೆಗಳ ಮೇಲೆ ಕೂರಿಸಿಕೊಂಡು ಅಥವಾ ಹೊತ್ತುಕೊಂಡು ಹೋಗಲಾಗುತ್ತಿತ್ತು. ಭೂಕುಸಿತ ಸಂಭವಿಸಿದಾಗ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ಈ ರೋಪ್ ವೇಯು ಯಾತ್ರಾರ್ಥಿಗಳ ಪ್ರಯಾಣವನ್ನು ಸುಖಕರಗೊಳಿಸಲು ಹಾಗೂ ಎಲ್ಲಾ ಹವಾಮಾನದಲ್ಲೂ ಓಡಾಡಲು ಅನುಕೂಲವಾಗುತ್ತದೆ. ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದ್ದರಿಂದ ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.

    ವಿಶ್ವ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ 20 ಲಕ್ಷ ಯಾತ್ರಾಧಿಗಳು ಭೇಟಿ ನೀಡುತ್ತಾರೆ. ಇದೀಗ ಈ ದೇವಾಲಯಕ್ಕೆ ತೆರಳಲು ರೋಪ್ ವೇ ನಿರ್ಮಾಣ ಮಾಡುತ್ತಿರುವುದರಿಂದ ಭಕ್ತಾಧಿಗಳು ದುರ್ಗಮ ಹಾದಿಯಲ್ಲಿ ತೆರಳುವುದನ್ನು ತಪ್ಪಿಸುತ್ತದೆ.

    ಭಾರತದ ಮೊದಲ ರೋಪ್‌ವೇ

    1960ರಲ್ಲಿ ಭಾರತದ ಮೊದಲ ಆಧುನಿಕ ರೋಪ್‌ವೇ ಅನ್ನು ರಾಜ್‌ಗೀರ್‌ನಲ್ಲಿ ನಿರ್ಮಿಸಲಾಗಿತ್ತು. ಇದನ್ನು ಪ್ರಸಿದ್ಧ ಜಪಾನಿನ ಬೌದ್ಧ ಸನ್ಯಾಸಿ ಫ್ಯೂಜಿ ಅವರು ರಾಜ್‌ಗೀರ್‌ನ ವಿಶ್ವ ಶಾಂತಿ ಸ್ತೂಪಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ.

    ಅರುಣಾಚಲದ ತವಾಂಗ್ ಬೌದ್ಧ ಧಾರ್ಮಿಕ ಸ್ಥಳದ ರೋಪ್‌ವೇಯನ್ನು ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿ 2010ರಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ರೋಪ್‌ವೇಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗುಲ್ಮಾರ್ಗ್‌ ರೋಪ್‌ವೇಯು ವಿಶ್ವದ 2 ನೇ ಅತಿ ಎತ್ತರದ ಕೇಬಲ್ ಕಾರನ್ನು ಹೊಂದಿದೆ. ಏಷ್ಯಾದ ಅತಿ ಎತ್ತರದ ಮತ್ತು ಉದ್ದವಾದ ಕೇಬಲ್ ಕಾರನ್ನು ಹೊಂದಿದೆ.

    ಕೇಬಲ್ ಲಿಫ್ಟ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕ್ರೊಯೇಷಿಯಾದ ಪಾಲಿಮ್ಯಾತ್ ಫೌಸ್ಟೊ ವೆರಾಂಜಿಯೊ ನಿರ್ಮಾಣ ಮಾಡಿದ್ದರು. ಮೊದಲ ಕಾರ್ಯಾಚರಣಾ ವೈಮಾನಿಕ ಲಿಪ್ಟ್ ಅನ್ನು 1644 ರಲ್ಲಿ ಪೋಲೆಂಡ್‌ನ ಗ್ಡಾನ್ಸ್ಕ್ ನಲ್ಲಿ ಆಡಮ್ ವೈಬೆ ನಿರ್ಮಿಸಿದ್ದರು. ಇದನ್ನು ಯುರೋಪಿಯನ್ ಇತಿಹಾಸದಲ್ಲಿ ಮೊದಲ ಕೇಬಲ್ ಲಿಫ್ಟ್ ಎಂದು ಕರೆಯಲಾಗಿತ್ತು.

  • ನಿಮ್ಮ ಹೆಸರು ನೀರಜ್, ವಂದನಾ ಆಗಿದ್ರೆ ರೋಪ್ ವೇ ಸೇವೆ ಉಚಿತ

    ನಿಮ್ಮ ಹೆಸರು ನೀರಜ್, ವಂದನಾ ಆಗಿದ್ರೆ ರೋಪ್ ವೇ ಸೇವೆ ಉಚಿತ

    ಡೆಹರಾಡೂನ್: ನಿಮ್ಮ ಹೆಸರು ನೀರಜ್ ಅಥವಾ ವಂದನಾ ಆಗಿದ್ರೆ ಹರಿದ್ವಾರದ ಚಂಡಿದೇವಿ ದೇವಸ್ಥಾನಕ್ಕೆ ತೆರಳುವ ರೋಪ್ ವೇನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಮತ್ತು ಹಾಕಿಯಲ್ಲಿ ಹ್ಯಾಟ್ರಿಕ್ ಗೋಲ್ ಮಾಡಿದ ವಂದನಾ ಕಟಾರಿಯಾ ಅವರಿಗೆ ರೋಪ್ ವೇ ನಿರ್ವಹಣಾ ಕಂಪನಿ ವಿಶೇಷವಾಗಿ ಗೌರವ ಸಲ್ಲಿಸಿದೆ.

    ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಗೌರವ ಸಲ್ಲಿಕೆ ಮಾಡಲಾಗುತ್ತಿದೆ. ಆಯಾ ರಾಜ್ಯ ಸರ್ಕಾರಗಳು ವಿಜೇತರ ಜೊತೆ ಒಲಿಂಪಿಕ್ಸ್ ನಲ್ಲಿ ಭಾಗಿಯಾದ ಆಟಗಾರರಿಗೂ ಬಹುಮಾನ ಘೋಷಿಸಿವೆ. ಚಂಡಿದೇವಿ ದೇವಿಯ ರೋಪ್ ವೇ ನಿರ್ವಹಣೆಯ ಉಷಾ ಬ್ರೆಕೋ ಕಂಪನಿ ನೀರಜ್ ಮತ್ತು ವಂದನಾ ಹೆಸರಿನ ಜನರಿಗೆ ಉಚಿತ ಸೇವೆನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

    ಆಗಸ್ಟ್ 11ರಿಂದ ಆಗಸ್ಟ್ 20ರವರೆಗೆ ನೀರಜ್ ಮತ್ತು ವಂದನಾ ಹೆಸರಿನವರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಪ್ರಯಾಣಿಕರು ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ಉಷಾ ಬ್ರೆಕೊ ಕಂಪನಿಯ ರೀಜನಲ್ ಹೆಡ್ ಮನೋಜ್ ಡೋಬಾಲ್ ಹೇಳಿದ್ದಾರೆ. ಇದನ್ನೂ ಓದಿ: 200 ರಿಂದ 4ನೇ ಸ್ಥಾನಕ್ಕೆ ಜಿಗಿತ – ಕೊನೆ ಕ್ಷಣದಲ್ಲಿ ಅದಿತಿಗೆ ತಪ್ಪಿತು ಪದಕ

    ಟೋಕಿಯೋ ಒಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ಪದಕ ವೀರರು ಸೋಮವಾರ ಭಾರತಕ್ಕೆ ಹಿಂದಿರುಗಿದ್ದಾರೆ. ಎಲ್ಲ ಕ್ರೀಡಾಳುಗಳಿಗೆ ದೆಹಲಿಯ ಅಶೋಕ ಹೋಟೆಲ್ ನಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನಿಸಿದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ಗೆದ್ದಿದೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ

  • ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ – ಸ್ಥಳ ಪರಿಶೀಲನೆ ನಡೆಸಿದ ಸಚಿವ ಯೋಗೇಶ್ವರ್

    ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ – ಸ್ಥಳ ಪರಿಶೀಲನೆ ನಡೆಸಿದ ಸಚಿವ ಯೋಗೇಶ್ವರ್

    ಚಿಕ್ಕಬಳ್ಳಾಪುರ: ಬಡವರ ಪಾಲಿನ ಊಟಿ, ಪ್ರೇಮಿಗಳ ಪಾಲಿನ ಪ್ರೇಮಧಾಮ-ಸ್ವರ್ಗಧಾಮ ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸಿ ಸಾಧಕ ಭಾದಕಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.

    ವಿಶ್ವವಿಖ್ಯಾತ ನಂದಿಗಿರಿಧಾಮದ ಗಾಂಧಿ ನಿಲಯದಲ್ಲಿ ಕಳೆದ ರಾತ್ರಿ ವಾಸ್ತವ್ಯ ಹೂಡಿದ್ದ ಸಚಿವರು, ಇಂದು ಬೆಳಗ್ಗೆ ಚುಮು, ಚುಮು ಚಳಿ ನಡುವೆ ನಂದಿಗಿರಿಧಾಮ ತಪ್ಪಲಿನ ಪೊಲೀಸ್ ಚೆಕ್ ಪೋಸ್ಟ್ ಬಳಿ ರೋಪ್ ವೇ ನಿರ್ಮಾಣಕ್ಕೆ ಉದ್ದೇಶಿಸಿ ಮೀಸಲಿರಿಸಿರುವ ಜಮೀನು ಪರಶೀಲನೆ ನಡೆಸಿದರು. ಈ ಸಂದರ್ಭ ಈ ಜಮೀನಿನಲ್ಲಿ ಹಲವು ವರ್ಷಗಳಿಂದ ನಾವು ಉಳುಮೆ ಮಾಡಿಕೊಂಡು ಬರುತ್ತಿದ್ದು ಈ ಜಮೀನು ತಮಗೆ ಸೇರಬೇಕು ಎಂದು ಕೆಲ ರೈತರು ಸಚಿವರಿಗೆ ಮನವಿ ಮಾಡಿಕೊಂಡರು. ಆಗ ರೈತರ ಜೊತೆ ಸಮಾಧಾನದಿಂದ ಮಾತನಾಡಿದ ಸಚಿವರು ಚರ್ಚೆ ನಡೆಸಿ ಜಮೀನು ವಿವಾದ ಬಗೆಹರಿಸೋಣ ಎಂದು ಮನವೊಲಿಸಿದರು. ಇದನ್ನೂ ಓದಿ: ನಂದಿಗಿರಿಧಾಮಕ್ಕೆ ಪ್ರವಾಸಿಗರ ಕರೆದೊಯ್ಯಲು ಬಂತು ಹೊಸ ವಾಹನ

    ರೋಪ್ ವೇ ನಿರ್ಮಾಣದ ಜಾಗದಲ್ಲಿ ಪಾಕಿರ್ಂಗ್‍ಗೂ ಸಹ ಜಾಗ ಮೀಸಲಿಡಲಾಗಿದ್ದು, ರೋಪ್ ವೇ ನಿರ್ಮಾಣ ಮಾಡುವಲ್ಲಿ ಪ್ರಖ್ಯಾತಿ ಪಡೆದಿರುವ ಖಾಸಗಿ ಸಂಸ್ಥೆಯೊಂದು ಈಗಾಗಲೇ ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಸಂಬಂಧ, ಸಾಧಕ ಬಾಧಕಗಳ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ಸಾಧಕ ಬಾಧಕಗಳ ಅಂತಿಮವಾದ ನಂತರ ಟೆಂಡರ್ ಕರೆದು 2 ವರ್ಷಗಳ ಒಳಗೆ ರೋಪ್ ವೇ ಕಾರ್ಯ ಮಾಡುವುದಾಗಿ ಯೋಗೇಶ್ವರ್ ತಿಳಿಸಿದರು. ಇದೇ ವೇಳೆ ನಂದಿಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ನೀರಿನ ಸಮಸ್ಯೆಗೆ ಪರಿಹಾರ, ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ನೆಹರು ನಿಲಯದ ಸಭಾಂಗಣದಲ್ಲಿ ಚರ್ಚೆ ನಡೆಸಿದರು. ಇದಾದ ನಂತರ ನಂದಿಗಿರಿಧಾಮದ ಮಯೂರ ಹೋಟೆಲ್ ಸರ್ಕಲ್ ಬಳಿ ಇಂದು ಮತ್ತೊಂದು ಹೋಟೆಲ್ ಆರಂಭಕ್ಕೆ ಚಾಲನೆ ನೀಡಿದರು.

  • ನಂದಿ ಬೆಟ್ಟಕ್ಕೆ ರೋಪ್ ವೇ: ಪ್ರವಾಸೋದ್ಯಮ ಇಲಾಖೆ ಸಭೆಯಲ್ಲಿ ನಿರ್ಧಾರ

    ನಂದಿ ಬೆಟ್ಟಕ್ಕೆ ರೋಪ್ ವೇ: ಪ್ರವಾಸೋದ್ಯಮ ಇಲಾಖೆ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ವಿಶ್ವವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಮಾಡಲು ಇದೇ ಜುಲೈ 23ಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ರವರು ಸ್ಥಳ ಪರಿಶೀಲನೆ ಮಾಡಲಿದ್ದಾರೆ.

    ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಯೋಗೇಶ್ವರ್ ಅವರು, ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನಂದಿ ಗಿರಿಧಾಮ ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಬೇಕು. ಜುಲೈ 23ರಂದು ಸ್ಥಳ ಪರಿಶೀಲನೆ ಮಾಡಿ ಅತೀ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು. ಇದನ್ನೂ ಓದಿ: ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ

    AARCON INFRA ಸಂಸ್ಥೆಯಿಂದ ಪ್ರಾತ್ಯಕ್ಷಿಕೆ ಪ್ರದರ್ಶನ:

    ರೋಪ್ ವೇ ನಿರ್ಮಾಣದಲ್ಲಿ ಈ ಸಂಸ್ಥೆಗೆ 51 ವರ್ಷಗಳ ಅನುಭವವಿದ್ದು, ದೇಶ ವಿದೇಶ ಹಾಗೂ ನಮ್ಮ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ 64 ರೋಪ್ ವೇ ಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯದ ಪ್ರಪ್ರಥಮ ರೋಪ್ ವೇ ಯನ್ನು ಪ್ರವಾಸಿಗರಿಗೆ ಒದಗಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸಭೆಯಲ್ಲಿ ಸೂಚಿಸಿದ್ದಾರೆ.

    ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ, ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧೂ ರೂಪೇಶ್, ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಚಾಮುಂಡಿ ತಾಯಿಗೆ ಬರುತ್ತಾ ಚಿನ್ನದ ರಥ ? ಬೆಟ್ಟಕ್ಕೆ ಬರುತ್ತಾ ರೋಪ್ ವೇ?

    ಚಾಮುಂಡಿ ತಾಯಿಗೆ ಬರುತ್ತಾ ಚಿನ್ನದ ರಥ ? ಬೆಟ್ಟಕ್ಕೆ ಬರುತ್ತಾ ರೋಪ್ ವೇ?

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ದೇವಿಗೆ ಚಿನ್ನದ ರಥ ಮಾಡಿಸುವುದು ಮತ್ತು ಬೆಟ್ಟಕ್ಕೆ ರೋಪ್ ವೇ  ನಿರ್ಮಾಣದ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತುಕತೆ ಆರಂಭಿಸಿದೆ.

    ಸುಮಾರು 7 ಕೋಟಿ ವೆಚ್ಚದಲ್ಲಿ ಚಿನ್ನದ ರಥ ಮಾಡಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈಗಾಗಲೇ ಈ ವಿಚಾರದಲ್ಲಿ ಅಧಿಕಾರಿಗಳ ಸಭೆಯೂ ನಡೆದಿದೆ. ಆದರೆ, ಈ ಪ್ರಸ್ತಾಪಕ್ಕೆ ಇನ್ನೂ ಸಿಎಂ ಒಪ್ಪಿಗೆ ಸಿಕ್ಕಿಲ್ಲ. ಮುಂದಿನ ಕ್ಯಾಬಿನೆಟ್ ಸಭೆ ವೇಳೆ ಈ ವಿಚಾರವನ್ನು ಸಿಎಂ ಮುಂದೆ ಪ್ರಸ್ತಾಪಿಸಿ ಈ ಬಗ್ಗೆ ಸ್ಪಷ್ಪ ನಿರ್ಧಾರ ತಿಳಿಸಲಾಗುವುದು ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಿಳಿಸಿದರು.

    ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ವಿಚಾರದಲ್ಲೂ ಚರ್ಚೆ ಸಾಗಿವೆ. ಈ ಬಗ್ಗೆಯೂ ಸಚಿವ ಸೋಮಣ್ಣ ಮಾಹಿತಿ ನೀಡಿ, ರೋಪ್ ವೇಯನ್ನು ಕೆಲವೆಡೆ ನೋಡಿದ್ದೇವೆ. ರೋಪ್ ವೇ ಮಾಡುವ ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. ಅದರ ಸಾಧಕ ಬಾಧಕ ತಿಳಿಯಲು ಬಿಟ್ಟಿದ್ದೇವೆ. ಇದು ಅದು ಸರಿಯೇ? ಇಲ್ಲವೇ ಎಂಬುದು ಚರ್ಚೆಯಾಗಬೇಕು. ಅದಕ್ಕಾಗಿ ಚರ್ಚೆಯಾಗಲಿ ನಂತರ ಆ ಬಗ್ಗೆ ನೋಡೋಣ ಎಂದು ಹೇಳಿದರು.

    ಕಾಮಗಾರಿ ವೀಕ್ಷಣೆ: ಚಾಮುಂಡಿಬೆಟ್ಟದ ನಂದಿ ಪ್ರತಿಮೆಗೆ ಸಾಗುವ ರಸ್ತೆ ಮಧ್ಯೆ ಉಂಟಾಗಿದ್ದ ರಸ್ತೆ ಕುಸಿತದ ದುರಸ್ಥಿ ಕಾಮಗಾರಿ ಪ್ರಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ವೀಕ್ಷಿಸಿದರು.ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ತ್ವರಿತವಾಗಿ ಕೆಲಸ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಚಿವರು ತಿಳಿಸಿದರು.

    ಕಾಮಗಾರಿ 49 ಲಕ್ಷ ರೂ‌ಗಳ ಅಂದಾಜು ವೆಚ್ಚದಲ್ಲಿ ನಡೆಯುತ್ತಿದ್ದು, ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ‌.ಟಿ‌.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್ ಮತ್ತಿತರರು ಇದ್ದರು.