Tag: ರೋಟರಿ ಸಂಸ್ಥೆ

  • ಜ್ಞಾನದೀವಿಗೆ – 257 ಮಂದಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಜ್ಞಾನದೀವಿಗೆ – 257 ಮಂದಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಚಿತ್ರದುರ್ಗ: ಜಿಲ್ಲೆಯ ಹೊರವಲಯದಲ್ಲಿರುವ ಶ್ರೀ ಮಾದಾರಚನ್ನಯ್ಯ ಗುರುಪೀಠದಲ್ಲಿ ಪಬ್ಲಿಕ್ ಟಿವಿ, ರೋಟರಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ 127 ಟ್ಯಾಬ್ ಗಳನ್ನು 257 ಜನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ, ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ವಿತರಣೆ ಮಾಡಿದರು.

    ಶ್ರೀ ಮಾದಾರಚನ್ನಯ್ಯ ಗುರುಪೀಠದಲ್ಲಿ ನಡೆದ ಕಾರ್ಯಕ್ರಮವನ್ನು ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿ ಅವರು, ಟಿಆರ್‍ಪಿಗಾಗಿ ಬಡಿದಾಡುವ ಇಂದಿನ ಮಾಧ್ಯಮ ಲೋಕದಲ್ಲಿ ಪಬ್ಲಿಕ್ ಟಿವಿ ವಿಭಿನ್ನವಾಗಿದೆ. ಸತತ ಎರಡು ವರ್ಷಗಳಿಂದ ಕೋವಿಡ್ ಭೀತಿಯಿಂದಾಗಿ ವಿದ್ಯಾರ್ಥಿಗಳು ಪಂಜರದ ಗಿಳಿಗಳಾಗಿದ್ದರು. ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ನಡೆದರೂ ಮೊಬೈಲ್ ಖರೀದಿಸಲಾಗದಷ್ಟು ಕಡು ಬಡವರಾಗಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಉಚಿತ ಟ್ಯಾಬ್ ವಿತರಣೆಯ ಜ್ಞಾನದೀವಿಗೆ ಕಾರ್ಯಕ್ರಮ ಆಯೋಜಿಸಿದೆ. ಕೊರೊನಾ ಸಂಕಷ್ಟದ ವೇಳೆ ಶಾಲೆಗಳು ಓಪನ್ ಆಗದೇ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯೋದು ಹೇಗೆಂಬ ಆತಂಕದಲ್ಲಿದ್ದರು. ಈ ವೇಳೆ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ರಾಜ್ಯದಲ್ಲೇ ವಿಶೇಷ ಟ್ಯಾಬ್ ಆಂದೋಲನ ನಡೆಸಿದೆ. ಇಂತಹ ಸಾಮಾಜಿಕ ಕಾರ್ಯಗಳಿಗೆ ಶ್ರೀಮಠ ಸಹ ನಿರಂತರವಾಗಿ ನೆರವಾಗಲಿದೆ. ಹೀಗಾಗಿ ಚಿತ್ರದುರ್ಗದ ಕೊಡುಗೈ ದಾನಿಗಳು ಕೂಡ ಇಂತಹ ಅಪರೂಪದ ಮಹತ್ಕಾರ್ಯಗಳಿಗೆ ನೆರವಾಗಬೇಕಿದೆ. ಉಚಿತ ಟ್ಯಾಬ್ ವಿತರಿಸುತ್ತಿರುವ ಪಬ್ಲಿಕ್ ಟಿವಿ ಹಾಗೂ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ಹೇಳಿದರು.

    ಇದೇ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಈಶ್ವರಪ್ಪನವರು, ಪಬ್ಲಿಕ್ ಟಿವಿ ಕಾರ್ಯವನ್ನು ಶ್ಲಾಘಿಸಿದ್ದೂ, ಈ ಜ್ಞಾನದೀವಿಗೆ ಕಾರ್ಯಕ್ರಮವು ಕೋವಿಡ್ ಸಂಕಷ್ಟದ ವೇಳೆ ಪಾಠ ಕೇಳಲಾಗದೇ ಸಂಕಷ್ಟಕ್ಕೀಡಾಗಿದ್ದ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಭೌತಿಕ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.

    ರೋಟರಿ ಪೋರ್ಟ್ ಸಂಸ್ಥೆಯ ಮುಖ್ಯಸ್ಥರಾದ ರವಿಂದ್ರರವರು, ಟ್ಯಾಬ್ ಗಳ ಬಳಕೆ ಹಾಗೂ ಟ್ಯಾಬ್ ನ ವೈಶಿಷ್ಡ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದನ್ನೂ ಓದಿ: ಜ್ಞಾನದೀವಿಗೆ ಅಭಿಯಾನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಕಾರಿ: ಸುರೇಶ್ ಕುಮಾರ್

    ಟ್ಯಾಬ್ ಪಡೆದ ವಿದ್ಯಾರ್ಥಿನಿ ವರ್ಷಾ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಎದುರಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೇಗೆ ಬರೆಯುವುದು ಎಂಬ ಆತಂಕದಲ್ಲಿದ್ದ ನಮಗೆ ಈ ಉಚಿತ ಟ್ಯಾಬ್ ಸಹಕಾರಿಯಾಗಿದೆ. ಆನ್‍ಲೈನ್ ಕ್ಲಾಸ್ ನಡೆದರು, ಮೊಬೈಲ್ ಖರೀದಿಸುವಷ್ಟು ಹಣವಿರಲಿಲ್ಲ. ಟಿವಿಗಳಲ್ಲಿ ಪಾಠ ಕೇಳಲು ಕರೆಂಟ್ ಸಮಸ್ಯೆ ತಲೆದೂರಿತ್ತು. ಇಂತಹ ವೇಳೆ ನಮಗೆ ಪಬ್ಲಿಕ್ ಟಿವಿ ನೀಡಿರುವ ಟ್ಯಾಬ್‍ಗಳ ನೆರವಿನಿಂದ ಉತ್ತಮ ಅಂಕ ಗಳಿಸಿ, ಶಾಲೆಗೆ ಹಾಗೂ ಚಿತ್ರದುರ್ಗಕ್ಕೆ ಒಳ್ಳೆಯ ಹೆಸರು ತರುತ್ತೇವೆಂದು ಭರವಸೆ ನೀಡಿದರು.

    ಟ್ಯಾಬ್ ಪಡೆದು ನೂರಕ್ಕೆ ನೂರು ಅಂಕ ಗಳಿಸುವ ವಿದ್ಯಾರ್ಥಿಗೆ 25,000 ರೂ. ಘೋಷಣೆ
    ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಪದಕ ಪುರಸ್ಕೃತ ಗೃಹ ರಕ್ಷಕದಳದ ಕಮಾಂಡರ್ ಕಾಂತರಾಜ್ ಭಾಗಿಯಾಗಿದ್ದೂ, ಟ್ಯಾಬ್ ಪಡೆದ ವಿದ್ಯಾರ್ಥಿಗಳಲ್ಲಿ ಯಾರಾದರು ನೂರಕ್ಕೆ ನೂರರಷ್ಟು ಅಂಕ ಗಳಿಸಿದರೆ ಆ ವಿದ್ಯಾರ್ಥಿಗೆ ತಮ್ಮ ಇಲಾಖೆ ನೀಡುವ ಗೌರವ ಧನದಿಂದ 25,000 ರೂಪಾಯಿ ನೀಡಲಾಗುವುದು ಎಂದು ಘೋಷಿಸಿದರು. ರೋಟರಿ ಸಂಸ್ಥೆ ಪದಾಧಿಕಾರಿಗಳಾದ, ಮಾರುತಿಮೋಹನ್, ಮಠದ ಮುಖ್ಯಸ್ಥರಾದ ರವಿಮಲ್ಲಾಪುರ, ವೀರೇಂದ್ರ ಹಾಗೀ, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ಜ್ಞಾನ ದೀವಿಗೆ- ಮೈಸೂರಿನ 1 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಜ್ಞಾನ ದೀವಿಗೆ- ಮೈಸೂರಿನ 1 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯ ಬೆಳಕಾಗಿಸುವ ಜ್ಞಾನ ದೀವಿಗೆ ಕಾರ್ಯಕ್ರಮದ ಭಾಗವಾಗಿ ಇಂದು ಜಿಲ್ಲೆಯ ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ಶಾಲೆಗಳ ಒಂದು ಸಾವಿರ ಮಕ್ಕಳಿಗೆ 500 ಟ್ಯಾಬ್ ವಿತರಿಸಲಾಯಿತು.

    ಬಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸುವ ಜ್ಞಾನ ದೀವಿಗೆ ಮಹಾ ಅಭಿಯಾನವನ್ನು ನಿಮ್ಮ ಪಬ್ಲಿಕ್ ಟಿವಿ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗುತ್ತಿದೆ. ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಮೈಸೂರು, ಕೊಡಗು ಜಿಲ್ಲೆಯ ಮಕ್ಕಳಿಗೆ ಟ್ಯಾಬ್ ವಿತರಿಸಲು 35 ಲಕ್ಷ ರೂಪಾಯಿ ದೇಣಿಗೆ ನೀಡಿತ್ತು.

    ಇಂದು ಹುಣಸೂರು ಹಾಗೂ ಪಿರಿಯಾಪಟ್ಟಣದ ಸರ್ಕಾರಿ ಶಾಲೆಯ ಒಟ್ಟು 1 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 500 ಟ್ಯಾಬ್ ನೀಡಲಾಯಿತು. ಪಿರಿಯಾಪಟ್ಟಣದ 8 ಸರ್ಕಾರಿ ಶಾಲೆಯ 500 ಹಾಗೂ ಹುಣಸೂರಿನ 10 ಸರ್ಕಾರಿ ಶಾಲೆಯ 500 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

    ಎರಡೂ ಕಡೆ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್.ಪಿ.ಮಂಜುನಾಥ್, ಬ್ಯಾಂಕ್ ನೋಟ್ ಪೇಪರ್ ಮಿಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ.ವಿಶ್ವನಾಥ್, ವ್ಯವಸ್ಥಾಪಕರಾದ ಧರಣೀಕುಮಾರ್, ಅನಂತ್ ಹೆಗ್ಡೆ, ಹಿರಿಯ ರೋಟೆರಿಯನ್ ಎಚ್.ಆರ್.ಕೇಶವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಇದೇ ಸಂಸ್ಥೆಯ ಇಚ್ಛೆಯಂತೆ ಏಪ್ರಿಲ್ ಎರಡನೇ ವಾರದಲ್ಲಿ ಇನ್ನೂ ಒಂದು ಸಾವಿರ ವಿದ್ಯಾರ್ಥಿಗಳಿಗೆ 500 ಟ್ಯಾಬ್ ಗಳನ್ನು ಕೊಡಗಿನಲ್ಲಿ ವಿತರಿಸಲಾಗುವುದು. ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆಯ ಈ ಮಹಾ ಯಜ್ಞಕ್ಕೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡಿ ಸಹಕರಿಸಿದ ಬ್ಯಾಂಕ್ ನೋಟ್ ಪೇಪರ್ ಮಿಲ್ ಗೆ ಹಾಗೂ ಈ ಯಜ್ಞ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ಕಾರಣರಾದ ಎಲ್ಲಾ ಮಹಾ ದಾನಿಗಳಿಗೂ ನಾವು ಅಭಾರಿ.

  • ಕಾರವಾರದಲ್ಲಿ 123 ಮಕ್ಕಳಿಗೆ ಟ್ಯಾಬ್ ವಿತರಣೆ- ಪ್ರತಿ ಶಾಲೆಗೊಂದು ವೃಕ್ಷ ಸಂಕಲ್ಪ

    ಕಾರವಾರದಲ್ಲಿ 123 ಮಕ್ಕಳಿಗೆ ಟ್ಯಾಬ್ ವಿತರಣೆ- ಪ್ರತಿ ಶಾಲೆಗೊಂದು ವೃಕ್ಷ ಸಂಕಲ್ಪ

    ಕಾರವಾರ: ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿ.ವಿ ಮತ್ತು ರೋಟರಿ ಸಹಯೋಗದೊಂದಿಗೆ ‘ಜ್ಞಾನ ದೀವಿಗೆ’ ಕಾರ್ಯಕ್ರಮದಡಿ ಕಾರವಾರ, ಅಂಕೋಲಾ, ಕುಮಟಾ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು. ಅಲ್ಲದೆ ಶಾಲೆಗಳಿಗೆ ಸಸಿ ನೀಡುವ ಪರಿಸರ ಕಾಳಜಿ ಕಾರ್ಯಕ್ರಮಕ್ಕೆ ಇದೇ ವೇಳೆ ಚಾಲನೆ ನೀಡಲಾಯಿತು.

    ಜಿಲ್ಲಾ ರಂಗಮಂದಿರದಲ್ಲಿ ಇಂದು ಕಾರ್ಯಕ್ರಮ ನಡೆದಿದ್ದು, ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ.ಎಸ್.ನಾಯ್ಕ, ಶಿರಸಿಯ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ದೇಣಿಗೆ ನೀಡಿದ್ದು, ಒಟ್ಟು ಏಳು ಶಾಲೆಯ 123 ಮಕ್ಕಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದ ಉದ್ಘಾಟನೆ ಹಾಗೂ ಟ್ಯಾಬ್ ವಿತರಣೆಯನ್ನು ದಾನಿಗಳಾದ ಕಾರವಾರ- ಅಂಕೋಲ ಶಾಸಕಿ ರೂಪಾಲಿ.ಎಸ್.ನಾಯ್ಕ ಮಾಡಿದರು. ಟ್ಯಾಬ್ ದಾನಿಗಳಾದ ಶ್ರೀನಿವಾಸ್ ಹೆಬ್ಬಾರ್ ಅವರು ಕುಮಟಾ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.

    ಕಾರ್ಯಕ್ರಮದಲ್ಲಿ ಉ.ಕ.ಸಹಕಾರ ಮೀನುಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ಶಿಕ್ಷಣ ಇಲಾಖೆಯ ಉತ್ತರ ಕನ್ನಡ ಜಿಲ್ಲೆಯ ಉಪ ನಿರ್ದೇಶಕ ಹರೀಶ್ ಗಾಂವ್ಕರ್, ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಶ್ರೀಕಾಂತ್ ಹೆಗಡೆ, ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ.ಎಂ ಉಪಸ್ಥಿತರಿದ್ದರು.

    ಶಾಲೆಗೊಂದು ವೃಕ್ಷ ಅಭಿಯಾನ
    ಪಬ್ಲಿಕ್ ಟಿವಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪ್ರತಿ ಶಾಲೆಗಳಿಗೊಂದು ವೃಕ್ಷ ಎನ್ನುವ ಉದ್ದೇಶದಿಂದ ಇಂದು ಆಯ್ಕೆಯಾದ ಶಾಲೆಗಳಿಗೆ ಸಸಿಗಳನ್ನು ವಿತರಿಸಲಾಯಿತು. ಜೊತೆಗೆ ಜಿಲ್ಲಾ ರಂಗಮಂದಿರ ಸುತ್ತಲೂ ಆರು ಸಸಿಗಳನ್ನು ನೆಡುವುದರ ಜೊತೆಗೆ ಇವುಗಳ ಪೋಷಣೆಯ ಹೊಣೆಯನ್ನು ಪಬ್ಲಿಕ್ ಟಿವಿ ಕಾರವಾರ ತಂಡ ಹೊತ್ತುಕೊಂಡಿದ್ದು, ಪ್ರತಿ ಶಾಲೆಯಲ್ಲಿ ತಲಾ ಎರಡು ಗಿಡದಂತೆ ಅವುಗಳ ಪೋಷಣೆಯ ಹೊಣೆಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ವಹಿಸಿಕೊಂಡರು. ಈ ಮೂಲಕ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

  • ಹೂಸೂರು ಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಹೂಸೂರು ಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಹುಬ್ಬಳ್ಳಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಜ್ಞಾನ ದೀವಿಗೆ ಅಭಿಯಾನ ನಿರಂತರವಾಗಿ ಸಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಂದು ಸಹ ನಗರದ ಹೊಸೂರು ಸರ್ಕಾರಿ ಶಾಲೆ ನಂ-16ರ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ದಾನಿಗಳು ಟ್ಯಾಬ್ ವಿತರಿಸಿದರು.

    ಹುಬ್ಬಳ್ಳಿಯ ಉದ್ಯಮಿ ಹಾಗೂ ಮಜೇಥೀಯಾ ಫೌಂಡೇಶನ್‌ ಸಂಸ್ಥಾಪಕ ಜಿತೇಂದ್ರ ಮಜೇಥೀಯಾ ಹಾಗೂ ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳನ್ನ ಹೂಸೂರು ಸರ್ಕಾರಿ ಶಾಲೆಯ 39 ಮಕ್ಕಳಿಗೆ ವಿತರಿಸಲಾಯಿತು.

    ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಮಜೇಥೀಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥೀಯಾ, ಮಜೇಥೀಯಾ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳಿಗೆ 19 ಟ್ಯಾಬ್ ಗಳನ್ನ ವಿತರಿಸಿದರು.

    ಟ್ಯಾಬ್ ವಿತರಿಸಿ ಮಾತನಾಡಿದ ದಾನಿಗಳಾದ ಜೀತೇಂದ್ರ ಮಂಜೇಂಥಿಯಾ, ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್.ರಂಗನಾಥರು ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಿಸುವ ಮೂಲಕ ಮಕ್ಕಳ ಜ್ಞಾನಾರ್ಜನೆ ಅಭಿಯಾನ ಆರಂಭಿಸಿರುವುದು ಉತ್ತಮ ಕಾರ್ಯವಾಗಿದೆ. ಹೀಗಾಗಿ ಪಬ್ಲಿಕ್ ಟಿವಿಯ ಅಭಿಯಾನಕ್ಕೆ ನಮ್ಮಿಂದ ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡಿಸಲು ಕೈ ಜೋಡಿಸಿದ್ದೇವೆ ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮಾತನಾಡಿ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಇಂದು ಸಮಾಜಿಕ ಕಳಕಳಿ ಹೊಂದಿರುವ ಪಬ್ಲಿಕ್ ಟಿವಿ ಮಾಡುತ್ತಿದೆ. ಪಬ್ಲಿಕ್ ಟಿವಿಯ ಈ ಅಭಿಯಾನದಿಂದ ಮಕ್ಕಳ ಫಲಿತಾಂಶ ಮತ್ತಷ್ಟು ಸುಧಾರಿಸಲಿದೆ. ಪಬ್ಲಿಕ್ ಟಿವಿ ಅಭಿಯಾನದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಕಷ್ಟು ನೆರವು ದೊರೆತಿದೆ ಎಂದರು.

    ಟ್ಯಾಬ್ ವಿತರಣೆ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹೂಸೂರು ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮಜೇಥೀಯಾ ಫೌಂಡೇಶನ್‌ ಪದಾಧಿಕಾರಿಗಳು ಭಾಗವಹಿಸಿದ್ದರು.

  • ತಂದೆ ವ್ಯಾಸಂಗ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಮಗ

    ತಂದೆ ವ್ಯಾಸಂಗ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಮಗ

    – ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ಜ್ಞಾನದೀವಿಗೆ’ ಟ್ಯಾಬ್ ವಿತರಣೆ
    – ಮಕ್ಕಳಿಗೆ ಟ್ಯಾಬ್ ಕೊಟ್ಟ ರವಿಕುಮಾರ್

    ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉಚಿತ ಟ್ಯಾಬ್ ವಿತರಣೆ ಮಾಡುವ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಮಹಾಯಜ್ಞ ‘ಜ್ಞಾನ ದೀವಿಗೆ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಇಂದು ಸಾಫ್ಟ್ ವೇರ್ ಇಂಜಿನಿಯರ್ ರವಿಕುಮಾರ್ ಅವರು ತಮ್ಮ ತಂದೆ ಓದಿದ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು. ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ರವಿಕುಮಾರ್ ಟ್ಯಾಬ್ ಗಳನ್ನ ಸಹಾಯ ಮಾಡಿದರು. ತಮ್ಮ ತಂದೆ ರಾಮಮೂರ್ತಿಯವರು ವ್ಯಾಸಂಗ ಮಾಡಿದ ಹಣಬೆ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ರವಿಕುಮಾರ್ ಇಂದು ಟ್ಯಾಬ್ ವಿತರಿಸಿದರು.

    ತಮ್ಮ ತಂದೆ, ತಾಯಿ ಕುಟುಂಬಸ್ಥರೊಂದಿಗೆ ಶಾಲೆಗೆ ಭೇಟಿ ನೀಡಿ 24 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 12 ಟ್ಯಾಬ್ ವಿತರಿಸಿದರು. ರವಿಕುಮಾರ್ ತಂದೆ ರಾಮಮೂರ್ತಿಯವರು ಮೂಲತಃ ಶಾಲೆ ಪಕ್ಕದ ಗ್ರಾಮ ಬೊಮ್ಮೇನಹಳ್ಳಿಯವರಾಗಿದ್ದು, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಇವರ ತಾಯಿ ಕಮಲಾವತಿ ಸಹ ಶಿಕ್ಷಕಿಯಾಗಿದ್ದವರು. ಹೀಗಾಗಿ ತಂದೆ ತಾಯಿಯ ಆಶಯದಂತೆ ಶಾಲೆಗೆ ಆಗಮಿಸಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.

    ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಜೊತೆ ಸಹಯೋಗ ನೀಡಿರುವ ರೋಟರಿ ಸಂಸ್ಥೆಯ ಅವಿನಾಶ್, ಶಾಲಾ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗವಹಿಸಿದ್ದರು. ಸ್ಥಳದಲ್ಲಿಯೇ ಟ್ಯಾಬ್ ನ ಉಪಯೋಗ ಹಾಗೂ ಬಳಕೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಕ್ಕಳಿಗೆ ವಿವರಿಸಿದರು. ಟ್ಯಾಬ್ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಬ್ಲಿಕ್ ಟಿವಿ, ರೋಟರಿ ಸಂಸ್ಥೆ ಹಾಗೂ ಟ್ಯಾಬ್ ಗಳಿಗೆ ದೇಣಿಗೆ ನೀಡಿದ ರವಿಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.