Tag: ರೋಟರಿ ಇಂಟರ್ ನ್ಯಾಷನಲ್

  • ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸ್ಯಾನಿಟೈಸರ್, ಮಾಸ್ಕ್ ಕೊಡುಗೆ ಕೊಟ್ಟ ದಾನಿಗಳು

    ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸ್ಯಾನಿಟೈಸರ್, ಮಾಸ್ಕ್ ಕೊಡುಗೆ ಕೊಟ್ಟ ದಾನಿಗಳು

    ಬೆಂಗಳೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಸಲುವಾಗಿ ಹಲವಾರು ಸಂಘ ಸಂಸ್ಥೆಗಳು ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನೀಡಿದ್ದಾರೆ.

    ಈ ಸಂಘ ಸಂಸ್ಥೆಗಳು ತಾವು ಪರೀಕ್ಷಾರ್ಥಿಗಳಿಗೆ ಒದಗಿಸುವ ಪರಿಕರಗಳನ್ನು ಇಂದು ಡಿ.ಎಸ್.ಇ.ಆರ್.ಟಿ.ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷದಂತೆಯೇ ಅನೇಕ ಸಂಘಸಂಸ್ಥೆಗಳು ನಮ್ಮ ಮಕ್ಕಳ ಹಿತಕ್ಕೋಸ್ಕರ ಮತ್ತು ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗಾಗಿ ಈ ವರ್ಷವೂ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಒದಗಿಸುತ್ತಿರುವುದು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಪರೀಕ್ಷೆಗಳು ಮತ್ತು ಮಕ್ಕಳ ಹಿತಾಸಕ್ತಿ ಕುರಿತು ಸಮಾಜದ ಬೆಂಬಲ ಈ ಮೂಲಕ ವ್ಯಕ್ತವಾಗಿರುವುದು ನಮ್ಮಲ್ಲಿ ಹರ್ಷ ಮೂಡಿಸಿದೆ ಎಂದರು. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೇಗೆ ನಡೆಯುತ್ತೆ? ಪಿಯುಸಿ ವಿದ್ಯಾರ್ಥಿಗಳು ಹೇಗೆ ಪಾಸ್?

    ಹಾಗೆಯೇ ಸಹಾಯ ಮತ್ತು ಸಹಕಾರದ ಹಸ್ತ ಚಾಚಿರುವ ಎಲ್ಲರಿಗೂ ಸಚಿವರು ಕೃತಜ್ಞತೆ ಸಲ್ಲಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪರೀಕ್ಷಾರ್ಥಿಗಳಿಗೆ ಬಟ್ಟೆಯಿಂದ ಮಾಡಿದ ಮಾಸ್ಕ್ ಮತ್ತು ಸಿಬ್ಬಂದಿಗೆ ಎನ್-95 ಮಾಸ್‍ಗಳನ್ನು ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಧುರೀಣ ಪಿ.ಜಿ.ಆರ್.ಸಿಂಧ್ಯಾ ಅವರು ತಮ್ಮ ಸಂಸ್ಥೆಯ ಕೊಡುಗೆಗಳನ್ನು ಸಚಿವರಿಗೆ ಹಸ್ತಾಂತರಿಸಿ, ತಮ್ಮ ಸಂಸ್ಥೆಯಿಂದ ಮಕ್ಕಳ ಹಿತಕ್ಕಾಗಿ ಅಲ್ಪ ಪ್ರಮಾಣದ ಸಹಾಯ ಮಾಡಲು ಅವಕಾಶ ಮಾಡಿಕೊಟ್ಟ ಶಿಕ್ಷಣ ಇಲಾಖೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

    ಯೂತ್ ಫಾರ್ ಸೇವಾ ಸಂಸ್ಥೆ 1.10 ಲಕ್ಷ ಎನ್-95 ಮಾಸ್ಕ್ ಗಳನ್ನು, ರೋಟರಿ ಇಂಟರ್ ನ್ಯಾಷನಲ್- 1.34 ಲಕ್ಷ ಎನ್-95 ಮಾಸ್ಕ್ ಗಳನ್ನು, ಅಡ್ವಾನ್ಸಡ್ ಎಜುಕೇಷನಲ್ ಸರ್ವೀಸಸ್ ಮತ್ತು ರೈನ್‍ಬೋ ಮಕ್ಕಳ ಆಸ್ಪತ್ರೆಯವರು ಮೂರು ಪದರದ ಒಂದು ಲಕ್ಷ ಸರ್ಜಿಕಲ್ ಮಾಸ್ಕ್ ಗಳು, ಎಂಬೆಸ್ಸಿ ಗ್ರೂಪ್ ಸಂಸ್ಥೆ 10 ಲಕ್ಷ ರೂ. ಮೌಲ್ಯದ ಸ್ಯಾನಿಟೈಸರ್ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಒದಗಿಸಿದರು.

    ಪರೀಕ್ಷಾ ಸಿದ್ಧತೆ ಕುರಿತು ಕಿರುಚಿತ್ರ:
    ರಾಜ್ಯದಲ್ಲಿ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಸಂಬಂಧದಲ್ಲಿ ಶಿಕ್ಷಣ ಇಲಾಖೆ ರಾಜ್ಯದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡಿರುವ ಪರೀಕ್ಷಾ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕಿರುಚಿತ್ರ ಪ್ರದರ್ಶಿಸಲಾಯಿತು.

    ಕಿರುಚಿತ್ರವನ್ನು ರಾಜ್ಯದ ಮೂಲೆಮೂಲೆಗಳಿಗೂ ತಮ್ಮ ವಾಹಿನಿಗಳ ಮೂಲಕ ಪ್ರಚಾರಪಡಿಸಿ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪೋಷಕರು ಮತ್ತು ಮಕ್ಕಳಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಬೇಕೆಂದು ಸಚಿವರು ಮಾಧ್ಯಮ ಪ್ರತಿನಿಧಿಗಳನ್ನು ಕೋರಿದರು.

  • ಯಾದಗಿರಿಯ ಕಂದಕೂರ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ಯಾದಗಿರಿಯ ಕಂದಕೂರ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ಯಾದಗಿರಿ: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಯ, ಜ್ಞಾನದೀವಿಗೆ ಕಾರ್ಯಕ್ರಮ ಇಂದು ಯಾದಗಿರಿ ಜಿಲ್ಲೆಯಲ್ಲಿ ನಡೆಯಿತು.

    ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರ ಗ್ರಾಮದ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದ್ರು. ಬಳಿಕ ಹತ್ತನೇಯ ತರಗತಿ 98 ವಿದ್ಯಾರ್ಥಿಗಳಿಗೆ 48 ಟ್ಯಾಬ್ ವಿತರಣೆ ಮಾಡಿದ್ರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್, ಎಸ್‍ಡಿಎಂಸಿ ಅಧ್ಯಕ್ಷ ಅಶೋಕ್ ರೆಡ್ಡಿ ಶಾಲಾ ಮುಖ್ಯ ಶಿಕ್ಷಕ ಸಾಬಪ್ಪ ಭೂತಾಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಕೈ ಜೋಡಿಸಿರುವ ಶರಣಗೌಡ ಕಂದಕೂರ ಮಾತನಾಡಿ, ನನ್ನ ತಂದೆ ಕ್ಷೇತ್ರದ ಎರಡು ಶಾಲೆಗಳಿಗೆ ಪಬ್ಲಿಕ್ ಟಿವಿ ಕಡೆಯಿಂದ ಟ್ಯಾಬ್ ನೀಡಿದ್ದಾರೆ. ಇದು ನಮ್ಮ ಕ್ಷೇತ್ರದ ಜನರ ಅದೃಷ್ಟ ನಾವೆಲ್ಲರೂ ಪಬ್ಲಿಕ್ ಟಿವಿಗೆ ಆಬಾರಿಯಾಗಿದ್ದೆವೆ ಎಂದ್ರು.

    ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್ ಮಾತನಾಡಿ, ಕಳೆದ ಬಾರಿ ಟ್ಯಾಬ್ ವಿತರಣೆ ಮಾಡಿದ ಶಾಲೆಗಳಿಂದ ನಮ್ಮ ಇಲಾಖೆ, ಅಭಿಪ್ರಾಯ ಸಂಗ್ರಹಿಸಿದೆ ಎಲ್ಲಾ ವಿದ್ಯಾರ್ಥಿಗಳು ಟ್ಯಾಬ್ ಗಳಿಂದ ಅತೀ ಹೆಚ್ಚು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪಬ್ಲಿಕ್ ಟಿವಿಯ ಕಾರ್ಯ ಎಲ್ಲರೂ ಮೆಚ್ಚವಂತದ್ದು ಎಂದರು.