Tag: ರೈಲ್ವೇ ಪೊಲೀಸರು

  • ರೈಲ್ವೇ ಪೊಲೀಸರಿಗೆ ವಿಸಿಟಿಂಗ್ ಕಾರ್ಡ್ – ಅಪರಾಧ ನಿಯಂತ್ರಿಸಲು ಹೊಸ ಪ್ಲಾನ್

    ರೈಲ್ವೇ ಪೊಲೀಸರಿಗೆ ವಿಸಿಟಿಂಗ್ ಕಾರ್ಡ್ – ಅಪರಾಧ ನಿಯಂತ್ರಿಸಲು ಹೊಸ ಪ್ಲಾನ್

    ಬೆಂಗಳೂರು: ರಾಜ್ಯದ ರೈಲು ನಿಲ್ದಾಣಗಳಲ್ಲಿ ನಡೆಯುವ ಅಪರಾಧ ಗಳನ್ನು ತಗ್ಗಿಸಲು ಹಾಗೂ ಪ್ರಯಾಣಿಕರ ಜೊತೆ ನಿರಂತರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ರೈಲ್ವೇ ಪೊಲೀಸ್ ಇಲಾಖೆಯು ತಮ್ಮ ಸಿಬ್ಬಂದಿಗೆ ವಿಸಿಟಿಂಗ್ ಕಾರ್ಡ್ ಮಾಡಿಸಿದೆ. ವಿಸಿಟಿಂಗ್ ಕಾರ್ಡ್‍ಗಳನ್ನು ಪ್ರಯಾಣಿಕರಿಗೆ ವಿತರಿಸುವ ಮೂಲಕ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದೆ.

    ರೈಲ್ವೇ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಎಸ್.ಪಿ ಸಿರಿಗೌರಿ ಅವರು ಪ್ರಾಯೋಗಿಕ ಹಂತವಾಗಿ ಬೆಂಗಳೂರು, ಯಶವಂತಪುರ ಹಾಗೂ ಕಂಟ್ಮೊನೆಂಟ್ ರೈಲ್ವೇ ಕೆಲ ಪೊಲೀಸರಿಗೆ ತಮ್ಮ ಹೆಸರು, ಪೋನ್ ನಂಬರ್ ಸಮೇತ ವಿಸಿಟಿಂಗ್ ಕಾರ್ಡ್ ಮಾಡಿಸಲು ಅನುಮತಿ ನೀಡಿದ್ದಾರೆ. ಈಗಾಗಲೇ ಕಾನ್ ಸ್ಟೇಬಲ್‍ಗಳು ‘ಸದಾ ನಿಮ್ಮ ಸೇವೆಯಲ್ಲಿ’ ಇಂಗ್ಲೀಷ್ ನಲ್ಲಿ ‘ಹ್ಯಾಪಿ ಟೂ ಹೆಲ್ಪ್’ ಶೀರ್ಷಿಕೆ ಜೊತೆಗೆ ವಿಸಿಟಿಂಗ್ ಕಾರ್ಡ್ ಗಳನ್ನು ಪ್ರಯಾಣಿಕರಿಗೆ ವಿತರಣೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: CITYನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ

    ರೈಲ್ವೇ ಹಳಿ ಹಾಗೂ ನಿಲ್ದಾಣಗಳಲ್ಲಿ ಕಳ್ಳತನ, ವಂಚನೆ, ಕೊಲೆ ಹಾಗೂ ದರೋಡೆ ಸೇರಿದಂತೆ ಇನ್ನಿತರ ಕ್ರೈಂ ಚಟುವಟಿಕೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಯಶವಂತಪುರ, ಕಂಟೊನ್ಮೆಂಟ್, ಬಂಗಾರಪೇಟೆ, ಮಂಡ್ಯ, ಮೈಸೂರು, ಹಾಸನ ಹಾಗೂ ಅರಸಿಕೇರೆ ರೈಲ್ವೇ ಪೊಲೀಸರ ಹೆಸರಿನಲ್ಲಿ ವಿಸಿಟಿಂಗ್ ಕಾರ್ಡ್ ಮಾಡಿಸಲಾಗಿದೆ. ರಾಜ್ಯದಲ್ಲಿ ಬರುವ 18 ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೂ ಅನುಮತಿ ನೀಡಲಾಗಿದ್ದು, ವಾಟ್ಸಾಪ್ ಮೂಲಕ ಹೆಚ್ಚೆಚ್ಚು ಪ್ರಯಾಣಿಕರಿಗೆ ಕಳುಹಿಸಲು ಸಿದ್ಧತೆ ನಡೆದಿದೆ.

    ಅಪರಾಧ ಮಾಹಿತಿ ಜೊತೆಗೆ ಪ್ರಯಾಣದ ಸಂದರ್ಭಗಳಲ್ಲಿ ಏನಾದರೂ ತೊಂದರೆ ಉಂಟಾದರೆ ವಿಸಿಟಿಂಗ್ ಕಾರ್ಡ್ ನಂಬರ್‍ಗೆ ಕರೆ ಮಾಡಿದರೆ ಕೂಡಲೇ ಸ್ಪಂದಿಸಲಿದ್ದಾರೆ. ಏನಾದರೂ ವಸ್ತುಗಳು ಕಳವು ಆದರೆ ಆಥವಾ ಗೊಂದಲವಿದ್ದರೂ ಪ್ರಯಾಣಿಕರು ಕರೆ ಮಾಡಬಹುದಾಗಿದೆ. ಈ ಮೂಲಕ ಪ್ರಯಾಣಿರಲ್ಲಿ ಮಾನಸಿಕ ಧೈರ್ಯ ತುಂಬುವ ಜೊತೆಗೆ ಹೆಚ್ಚಿನ ಬಾಂಧವ್ಯ ಮೂಡಿಸಲು ಸಹಕಾರಿಯಾಗಲಿದೆ. ಪೊಲೀಸರ ವಿನೂತನ ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

  • ನೆರೆ ಪೀಡಿತರ ನೆರವಿಗೆ ನಿಂತ ರೈಲ್ವೇ ಪೊಲೀಸರು

    ನೆರೆ ಪೀಡಿತರ ನೆರವಿಗೆ ನಿಂತ ರೈಲ್ವೇ ಪೊಲೀಸರು

    ಚಿಕ್ಕೋಡಿ (ಬೆಳಗಾವಿ): ಮಹಾ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ರೈಲ್ವೇ ಪೊಲೀಸರ ಮನ ಮಿಡಿದಿದೆ.

    ರೈಲ್ವೇ ಪೊಲೀಸರು ಬೆಂಗಳೂರಿನ ಕೇಂದ್ರ ಕಚೇರಿಯಿಂದ ಹಣ ಸಂಗ್ರಹಿಸಿ, ಅದರಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಅಕ್ಕಿ, ಬ್ಲಾಂಕೆಟ್, ಬೇಳೆ ಕಾಳುಗಳು ಸೇರಿದಂತೆ ದಿನನಿತ್ಯದ ಉಪಯುಕ್ತ ವಸ್ತುಗಳನ್ನು ತಲುಪಿಸಿದ್ದಾರೆ.

    ಸಂತ್ರಸ್ತರ ನೆರವಿಗೆ ಧಾವಿಸಿದ ರೈಲ್ವೇ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಉಪವಿಭಾಗದಲ್ಲಿ ಒಟ್ಟು 81 ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. 2,00,786 ಜನಸಂಖ್ಯೆ ಹೊಂದಿರುವ ಒಟ್ಟು 46,506 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಒಟ್ಟು 150 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ 97,007 ಜನರು ಆಶ್ರಯ ಪಡೆಯುತ್ತಿದ್ದಾರೆ. 28,109 ಜಾನುವಾರುಗಳನ್ನು ರಕ್ಷಣೆ ಮಾಡಿ, ಪರಿಹಾರ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.

    ಚಿಕ್ಕೋಡಿ ಉಪವಿಭಾಗದಲ್ಲಿ ಹರಿಯುವ ನದಿಗಳ ಪ್ರವಾಹ ತಗ್ಗಿದ್ದು, ನಿರಾಶ್ರಿತರು ಮನೆಗಳಿಗೆ ತೆರಳುತ್ತಿದ್ದಾರೆ. ರಾಜ್ಯ ಸರ್ಕಾರವು ಈಗಾಗಲೇ 3,800 ಚೆಕ್‍ಗಳನ್ನು ನೀಡಿದೆ. ಅವುಗಳ ಮೂಲಕ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನ ನೀಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.