Tag: ರೈಲು

  • ಬೆಂಗಳೂರು-ಹಾಸನ ನೂತನ ರೈಲು ಮಾರ್ಗದಲ್ಲಿ ವ್ಯಕ್ತಿ ಬಲಿ

    ಬೆಂಗಳೂರು-ಹಾಸನ ನೂತನ ರೈಲು ಮಾರ್ಗದಲ್ಲಿ ವ್ಯಕ್ತಿ ಬಲಿ

    ನೆಲಮಂಗಲ: ನೂತನವಾಗಿ ಪ್ರಾರಂಭವಾಗಿರುವ ಬೆಂಗಳೂರು ಹಾಸನ ರೈಲು ಮಾರ್ಗದಲ್ಲಿ, ಯುವಕನೋರ್ವ ರೈಲಿಗೆ ಸಿಲುಕಿ ಮೃತ ಪಟ್ಟಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಲೋಹಿತ್‍ನಗರ ಗ್ರಾಮದ ನಿವಾಸಿ ಪವನ್ ಮೃತ ದುರ್ದೈವಿ. ಮೃತ ಬುದ್ಧಿಭ್ರಮಣೆಯಿಂದ ಬಳಲುತ್ತಿದ್ದು, ಮುಂಜಾನೆ ರೈಲು ಹಳಿಯ ಬಳಿ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಇತ್ತೀಚೆಗೆ ಪ್ರಾರಂಭವಾಗಿರುವ ರೈಲ್ವೆ ಹಳಿಗೆ ಈ ಗ್ರಾಮಗಳ ಬಳಿ ಯಾವುದೇ ತಡೆಗೋಡೆ ನಿರ್ಮಾಣ ಮಾಡದಿರುವುದು ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಅವಘಡ ಸಂಭವಿಸದಂತೆ ಇಲಾಖೆ ಎಚ್ಚೆತ್ತು, ಕೂಡಲೇ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

  • ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

    ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

    – 3 ತಿಂಗಳ ಹಿಂದೆ ಇಂಗ್ಲೆಂಡಿಗೆ ಬಂದಿದ್ದ ರೈಲು

    ಲಂಡನ್: ಇಂಗ್ಲೆಂಡ್‍ನಿಂದ ಚೀನಾಗೆ ಮೊದಲ ಸರಕು ಸಾಗಣೆ ರೈಲು ಇಂದು ನಿರ್ಗಮಿಸಲಿದೆ. ಇಂಗ್ಲೆಂಡಿನ ಎಸ್ಸೆಕ್ಸ್‍ನಿಂದ 7500 ಮೈಲಿ(ಸುಮಾರು 12070 ಕಿ.ಮೀ) ಪ್ರಯಾಣವನ್ನು ಆರಂಭಿಸಲಿದೆ.

    ಇಂಗ್ಲೆಂಡಿನ ಸ್ಟ್ಯಾನ್‍ಫರ್ಡ್ ಲಿ ಹೋಪ್‍ನ ಡಿಪಿ ವರ್ಲ್ಡ್ ಲಂಡನ್ ಗೇಟ್‍ವೇ ರೈಲ್ ಟಮಿರ್ನಲ್‍ನಿಂದ ರೈಲು ಹೊರಡಲಿದೆ. ರೈಲಿನಲ್ಲಿರುವ 30 ಕಂಟೇನರ್‍ಗಳು ವಿಸ್ಕಿ, ತಂಪು ಪಾನೀಯ, ವಿಟಮಿನ್ಸ್ ಹಾಗೂ ಔಷಧಿ ಸೇರಿದಂತೆ ಬ್ರಿಟಿಷ್ ಸರಕುಗಳನ್ನ ಹೊತ್ತು ಸಾಗಲಿದೆ.

    ಚೀನಾದ ಝೀಜಿಯಾಂಗ್‍ನ ಪೂರ್ವ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಹೋಲ್‍ಸೇಲ್ ಮಾರುಕಟ್ಟೆಯಾದ ಯಿವು ತಲುಪಲು ಈ ರೈಲು ಸುಮಾರು 12070 ಕಿ.ಮೀ ಪ್ರಯಾಣ ಮಾಡಲಿದ್ದು, 17 ದಿನಗಳ ಬಳಿಕ ಅಲ್ಲಿಗೆ ತಲುಪಲಿದೆ.

    ಈ ರೈಲು 7 ದೇಶಗಳಾದ ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೋಲ್ಯಾಂಡ್, ಬೆಲಾರಸ್, ರಷ್ಯಾ ಹಾಗೂ ಕಜಕಿಸ್ತಾನವನ್ನು ದಾಟಿ ಸಾಗಲಿದ್ದು, ಏಪ್ರಿಲ್ 27 ರಂದು ಚೀನಾ ತಲುಪಲಿದೆ. ಇನ್ನು ವಿರುದ್ಧ ದಿಕ್ಕಿನಿಂದ ಮೊದಲ ಸರಕು ಸಾಗಣೆ ರೈಲು ಚೀನಾದಿಂದ ಇಂಗ್ಲೆಂಡಿಗೆ 3 ತಿಂಗಳ ಹಿಂದೆ ಬಂದಿತ್ತು.

    ವಿಮಾನಕ್ಕೆ ಹೋಲಿಸಿದ್ರೆ ರೈಲಿನ ಮೂಲಕ ಸರಕು ಸಾಗಣೆಗೆ ಕಡಿಮೆ ವೆಚ್ಛ ತಗುಲುತ್ತದೆ. ಹಾಗೆ ಸಮುದ್ರ ಮಾರ್ಗಕ್ಕಿಂತ ಕಡಿಮೆ ಸಮಯದಲ್ಲಿ ರೈಲಿನಲ್ಲಿ ಸರಕು ಸಾಗಣೆ ಮಾಡಬಹುದು ಎಂದು ರೈಲಿನ ನಿರ್ವಾಹಕರು ಹೇಳಿದ್ದಾರೆ.

  • ಉತ್ತರಪ್ರದೇಶದಲ್ಲಿ ರೈಲು ದುರಂತ- 8 ಬೋಗಿ ಮಗುಚಿ ಬಿದ್ದು  ಹಲವರಿಗೆ ಗಾಯ

    ಉತ್ತರಪ್ರದೇಶದಲ್ಲಿ ರೈಲು ದುರಂತ- 8 ಬೋಗಿ ಮಗುಚಿ ಬಿದ್ದು ಹಲವರಿಗೆ ಗಾಯ

    ನವದೆಹಲಿ: ಉತ್ತರಪ್ರದೇಶದ ಕುಲ್ಪಹಾರ್ ಬಳಿ ಮಹಾಕೋಶಾಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 8 ಬೋಗಿಗಳು ಮಗುಚಿಬಿದ್ದಿವೆ. ಘಟನೆಯಲ್ಲಿ ಹಲವು ಮಂದಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ರೈಲು ಜಬಲ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬುಧವಾರ ತಡರಾತ್ರಿ ಸುಮಾರು 2 ಗಂಟೆಗೆ ಈ ಅವಘಡ ಸಂಭವಿಸಿದ್ದು, ಸದ್ಯ ರಕ್ಷಣಾಕಾರ್ಯ ಭರದಿಂದ ಸಾಗಿದ್ದು ಕೆಲವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಹಳಿ ತಪ್ಪಲು ಕಾರಣವೇನು ಅಂತಾ ಇನ್ನಷ್ಟೆ ತಿಳಿದುಬರಬೇಕಿದೆ.

    ಹಳಿತಪ್ಪಿದ ರೈಲಿನ ಎಸಿ ಹಾಗೂ ಸ್ಲೀಪರ್ ಕೋಚ್‍ಗಳು ಮಗುಚಿಬಿದ್ದಿವೆ. ರೈಲ್ವೇ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದೆ ಅಂತಾ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯಿಂದ ಪಾರಾದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲದೇ ನೀರು ಮತ್ತು ಉಪಹಾರಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

  • ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಕಾರವಾರ: ರೈಲ್ವೇ ಎಂಜಿನ್ ನಲ್ಲಿ ಉಂಟಾದ ದೋಷದಿಂದಾಗಿ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದ ಸಮೀಪ ಮಾರ್ಗ ಮಧ್ಯದಲ್ಲೇ ಕೊಂಕಣ ರೈಲು ಕಟ್ಟು ನಿಂತ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

    ಇಂದು ಬೆಳಗ್ಗೆ 6 ಗಂಟೆಗೆ ಕಾರವಾರ ನಿಲ್ದಾಣದಿಂದ ಪೆರ್ಣಕ್ಕೆ ಪ್ಯಾಸೆಂಜರ್ ರೈಲು ತನ್ನ ಪ್ರಯಾಣವನ್ನು ಆರಂಭಿಸಿತ್ತು. ಮಾರ್ಗ ಮಧ್ಯೆ ಅಸ್ನೋಟಿ ಎಂಬಲ್ಲಿ ಎಂಜಿನ್ ನಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ತನ್ನ ಪ್ರಯಾಣವನ್ನು ನಿಲ್ಲಿಸಿತು.

    ಈ ರೈಲು ಪ್ರತಿದಿನ ಕಾರವಾರದಿಂದ ಗೋವಾ ರಾಜ್ಯದ ಪೆರ್ಣಕ್ಕೆ ಸಂಚರಿಸುತ್ತದೆ. ಮೂರು ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರತಿದಿನ ಸುಮಾರು 600 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಈ ಹಿಂದೆಯೂ ಇದೇ ರೀತಿಯಲ್ಲಿ ಎಂಜಿನ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಈ ಸಂಬಂಧ ಪ್ರಯಾಣಿಕರು ರೈಲ್ವೆ ಇಲಾಖೆಗೆ ದೂರು ನೀಡಿದ್ರೂ ಇಲಾಖೆ ಮಾತ್ರ ಯಾವುದೇ ಕ್ರಮ ಜರುಗಿಸಿರಲಿಲ್ಲ.

    ಇದರಿಂದ ಕೋಪಗೊಂಡ ಜನರು ಕೆಟ್ಟು ನಿಂತಿದ್ದ ರೈಲಿನ ಮುಂದೆ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದು ಬದಲಿ ವ್ಯವಸ್ಥೆ ಮಾಡಿದ್ದ ರೈಲನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

     

  • ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಹೋಮ್ ಗಾರ್ಡ್ ಸಾವು

    ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಹೋಮ್ ಗಾರ್ಡ್ ಸಾವು

    ನೆಲಮಂಗಲ: ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಹೋಮ್ ಗಾರ್ಡ್ ಸಾವನ್ನಪ್ಪಿರುವ ಘಟನೆ ನೆಲಮಂಗಲದ ರೈಲ್ವೇ ಗೊಲ್ಲಹಳ್ಳಿ ನಿಲ್ದಾಣದಲ್ಲಿ ನಡೆದಿದೆ.

    ಅರ್ಜುನ್ ಬೆಟ್ಟಹಳ್ಳಿ ನಿವಾಸಿಯಾದ 22 ವರ್ಷದ ಅನುಸೂಯ ಮೃತ ದುರ್ದೈವಿ. ಬೆಂಗಳೂರಿನ ಮೆಟ್ರೋದಲ್ಲಿ ಹೋಮ್ ಗಾಡ್9 ಆಗಿ ಕೆಲಸ ಮಾಡುತ್ತಿದ್ದ ಅನುಸೂಯ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಈ ಘಟನೆ ಸಂಭವಿಸಿದೆ.

    ಅಪಘಾತ ನಡೆದು ಎರಡು ಗಂಟೆಯಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ

    ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ

    ಬೆಂಗಳೂರು: ಅಂತೂ ಇಂತೂ ಸುದೀರ್ಫ 21 ವರ್ಷಗಳಿಂದ ಜನರು ಕಾಯ್ತಿದ್ದ ರೈಲು ಬಂದೇ ಬಿಡ್ತು. ಬೆಂಳೂರಿನಿಂದ ಹಾಸನಕ್ಕೆ, ಹಾಸನದಿಂದ ಬೆಂಗಳೂರಿಗೆ ಇನ್ಮುಂದೆ ರೈಲಿನಲ್ಲೇ ಅದು ಕಡಿಮೆ ಟಿಕೆಟ್ ದರದಲ್ಲೇ ಪ್ರಯಾಣಿಸಬಹುದು.

    122679/22680 ಸಂಖ್ಯೆಯ ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್‍ಪ್ರೆಸ್ ರೈಲಿಗೆ ಇಂದು ಗ್ರೀನ್ ಸಿಗ್ನಲ್ ಸಿಕ್ಕಿದೆ. 1996ರಲ್ಲಿ ಒಪ್ಪಿಗೆ ಸೂಚಿಸಿದ್ದ ಯೋಜನೆಗೆ ಇಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯನ, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ್ರು.

    ವೆಚ್ಚ ಎಷ್ಟು?: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹೊಸ ರೈಲು ಮಾರ್ಗ ಸಿದ್ಧವಾಗಿದೆ. ಒಟ್ಟು 1289. 92 ಕೋಟಿ ರೂ. ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರವು 467.21 ಕೋಟಿ ರೂಪಾಯಿ ಹಾಗೂ ಕೇಂದ್ರ ರೈಲ್ವೆ ಇಲಾಖೆ 822.71 ಕೋಟಿ ರುಪಾಯಿ ಖರ್ಚು ಮಾಡಿದೆ.

    ಹಾಸನದಿಂದ ಚಿಕ್ಕಬಾಣವರ ನಿಲ್ದಾಣಗಳ ನಡುವಿನ ಹೊಸ ಬ್ರಾಡ್‍ಗೇಜ್ ಮಾರ್ಗವು ಚನ್ನಪಟ್ಟಣ, ಡಿ. ಸಮುದ್ರವಳ್ಳಿ, ಶಾಂತಿಗ್ರಾಮ, ಶ್ರವಣಬೆಳಗೋಳ, ಹಿರಿಸಾವೆ, ಬಾಲಗಂಗಾಧರನಗರ, ಯಡಿಯೂರು, ಕುಣಿಗಲ್, ತಿಪ್ಪಸಂದ್ರ, ಸೋಲೂರು ಹಾಗು ನೆಲಮಂಗಲ ಮೂಲಕ ಹಾದು ಹೋಗಲಿದೆ.

    ಎಲ್ಲೆಲ್ಲಿ ಸ್ಟಾಪ್ ಕೊಡುತ್ತೆ?: ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಾಲಗಂಗಾಧರ ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ನಿಲ್ದಾಣದಲ್ಲಿ ಸ್ಟಾಪ್ ನೀಡಲಿದೆ. ಪ್ರತಿದಿನ ಹಾಸನದಿಂದ ಬೆಳಗ್ಗೆ 6.30ಕ್ಕೆ ಹೊರಟರೆ ಬೆಳಗ್ಗೆ 9.15ಕ್ಕೆ ಯಶವಂತಪುರ ತಲುಪಲಿದೆ. ಇನ್ನು ಯಶವಂತಪುರದಿಂದ ಸಾಯಂಕಾಲ 6.15ಕ್ಕೆ ರೈಲು ಹೊರಟರೆ ರಾತ್ರಿ 9 ಗಂಟೆಗೆ ಹಾಸನ ತಲುಪಲಿದೆ. ಈ ರೈಲು ಒಟ್ಟು 14 ಬೋಗಿಗಳನ್ನ ಒಳಗೊಂಡಿದ್ದು, 4 ದ್ವಿತೀಯ ದರ್ಜೆ ಚೇರ್ ಕಾರ ಬೋಗಿಗಳು, 8 ದೀನದಯಾಳ್ ಬೋಗಿಗಳು, 2 ದ್ವಿತೀಯ ದರ್ಜೆ ಲಗೇಜ್ ಬ್ರೇಕ್ ವ್ಯಾನ್ ಬೋಗಿಗಳನ್ನ ಹೊಂದಿದೆ.

    ಇಷ್ಟೊಂದು ವಿಳಂಬವಾಗಿದ್ದು ಯಾಕೆ?: 1996ರಲ್ಲಿ ಪ್ರಧಾನಿಯಾಗಿದ್ದ ಹೆಚ್.ಡಿ ದೇವೇಗೌಡರಿಂದ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿದ್ದರು. 1290 ಕೋಟಿ ರೂ. ವೆಚ್ಚದಲ್ಲಿ ಏಕಮುಖ ಸಂಚಾರ ರೈಲುಮಾರ್ಗಕ್ಕೆ ಶಂಕುಸ್ಥಾಪನೆಯಾಗಿತ್ತು. 2006ರಲ್ಲಿ ಹಾಸನ-ಶ್ರವಣಬೆಳಗೊಳ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಾಟ ಆರಂಭವಾಯಿತು. ಜಮೀನು ವಿವಾದ, ಕೋರ್ಟ್ ತಗಾದೆ, ಹಣಕಾಸಿನ ಕೊರತೆಯಿಂದ ಕೆಲಸಕ್ಕೆ ಅಡ್ಡಿಯಾಯ್ತು. ಸೋಲೂರು-ತಿಪ್ಪಸಂದ್ರದ ಬಳಿ 14 ಎಕರೆ ವಿವಾದದಿಂದ 4 ಕಿ.ಮೀ ಕಾಮಗಾರಿ ಅಪೂರ್ಣವಾಗಿತ್ತು. ಕುಣಿಗಲ್ ಬಳಿ ವಿಜಯ್ ಮಲ್ಯ ಒಡೆತನದ 400 ಎಕರೆ ಜಾಗದಿಂದ ಮತ್ತೆ ವಿಳಂಬವಾಯ್ತು.

    ಸೋಲೂರು-ತಿಪ್ಪಸಂದ್ರದ ಬಳಿ ಬೃಹತ್ ಬಂಡೆ- 1/2 ಕಿ.ಮೀ ಸುರಂಗ ಮಾರ್ಗ ಆಗಿದೆ. ಮೊದಲಿದ್ದ ಮಾರ್ಗ ಬೆಂಗಳೂರು-ಮೈಸೂರು-ಹಾಸನ-259 ಕಿ.ಮೀ ಇತ್ತು. ಮತ್ತೊಂದು ಮಾರ್ಗ ಬೆಂಗಳೂರು-ಅರಸಿಕೆರೆ-ಹಾಸನ-213 ಕಿ.ಮೀ ಇತ್ತು. ಈಗ ಹೊಸ ಮಾರ್ಗ ಬೆಂಗಳೂರು-ಕುಣಿಗಲ್-ಹಾಸನ-172 ಕಿ.ಮೀಗೆ ಇಳಿದಿದೆ.

    ಟಿಕೆಟ್ ದರ :
    1. ಸೂಪರ್ ಫಾಸ್ಟ್ ರೈಲು
    > ಕಾರು ಬೋಗಿ-110 ರೂ
    > ಸಾಮಾನ್ಯ ಬೋಗಿ-95 ರೂ

    2. ಪ್ಯಾಸೇಂಜರ್ ರೈಲು
    > 40 ರೂ-70 ರೂ

    ಇಂಟರ್‍ಸಿಟಿ ರೈಲು : ಹಾಸನ-ಯಶವಂತಪುರ – ಬೆಳಗ್ಗೆ 6.15, ಬೆಳಗ್ಗೆ 9ಕ್ಕೆ

    ಇಂಟರ್‍ಸಿಟಿ ರೈಲು: ಯಶವಂತಪುರ-ಹಾಸನ – ಸಂಜೆ 6.15, ರಾತ್ರಿ 9 ಕ್ಕೆ

    ಪ್ಯಾಸೆಂಜರ್ ರೈಲು: ಯಶವಂತಪುರ-ಹಾಸನ – ಬೆಳಗ್ಗೆ 7.30, ಬೆಳಗ್ಗೆ 10.30ಕ್ಕೆ

    ಪ್ಯಾಸೆಂಜರ್ ರೈಲು: ಹಾಸನ-ಯಶವಂತಪುರ – ಮಧ್ಯಾಹ್ನ 12, 3.30ಕ್ಕೆ

    ಕುಡ್ಲಾ ಎಕ್ಸ್ ಪ್ರೆಸ್: ಯಶವಂತಪುರ-ಹಾಸನ-ಮಂಗಳೂರು ( ಸೋಮವಾರ, ಬುಧವಾರ, ಶುಕ್ರವಾರ ) ಯಶವಂತಪುರ-ಬೆಳಗ್ಗೆ 7ಕ್ಕೆ, ಹಾಸನಕ್ಕೆ ಬೆಳಗ್ಗೆ 9.45, ಮಂಗಳೂರಿಗೆ ಸಂಜೆ 4ಕ್ಕೆ ರೀಚ್

    ಕುಡ್ಲಾ ಎಕ್ಸ್ ಪ್ರೆಸ್: ಮಂಗಳೂರು-ಹಾಸನ-ಯಶವಂತಪುರ (ಮಂಗಳವಾರ, ಗುರುವಾರ, ಶನಿವಾರ) ಮಂಗಳೂರಿನಿಂದ ಬೆಳಗ್ಗೆ 10.50ಕ್ಕೆ, ಹಾಸನಕ್ಕೆ ಸಂಜೆ- 4ಗಂಟೆಗೆ, ಯಶವಂತಪುರಕ್ಕೆ ರಾತ್ರಿ 7.50ಕ್ಕೆ

    ನಿಲ್ದಾಣಗಳು: ಚಿಕ್ಕಬಾಣವಾರ-ನೆಲಮಂಗಲ, ಕುಣಿಗಲ್-ಯಡಿಯೂರು , ಆದಿಚುಂಚನಗಿರಿ-ಶ್ರವಣಬೆಳಗೊಳ, ಚನ್ನರಾಯಪಟ್ಟಣ-ಹಾಸನ

     

  • 21 ವರ್ಷಗಳ ಕನಸು ಇಂದು ನನಸು – ಹಾಸನ-ಬೆಂಗಳೂರು ರೈಲು ಮಾರ್ಗ ಉದ್ಘಾಟನೆ

    21 ವರ್ಷಗಳ ಕನಸು ಇಂದು ನನಸು – ಹಾಸನ-ಬೆಂಗಳೂರು ರೈಲು ಮಾರ್ಗ ಉದ್ಘಾಟನೆ

    ಹಾಸನ: ಸಾವಿರಾರು ಹಳ್ಳಿ- ನೂರಾರು ಪಟ್ಟಣ, ಲಕ್ಷಾಂತರ ಜನ ಕಾಯ್ತಿದ್ದ ಸಮಯ ಈಗ ಕೂಡಿ ಬಂದಿದೆ. ಬೆಂಗಳೂರು-ಕುಣಿಗಲ್-ಹಾಸನ ರೈಲುಮಾರ್ಗ ಇಂದು ಲೋಕಾರ್ಪಣೆಯಾಗಲಿದೆ. ಹೌದು. 21 ವರ್ಷಗಳ ಸುದೀರ್ಘವಾದ ಕನಸು ಇಂದು ನನಸಾಗ್ತಿದೆ. ಬೆಳಗ್ಗೆ 11 ಗಂಟೆಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯನವರು ಹೊಸ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

    ಯಾವ್ಯಾವ ಟ್ರೈನ್‍ಗಳು ಎಷ್ಟೆಷ್ಟು ಸಮಯಕ್ಕೆ ಓಡಾಡುತ್ತೆ?

    ಹೊಸ ರೈಲು ಮಾರ್ಗದ ಉದ್ಘಾಟನೆಯಾದ್ರೂ ನಾಳೆಯಿಂದ ಪ್ರಯಾಣಿಕರಿಗೆ ರೈಲು ಸಂಚಾರ ಮುಕ್ತವಾಗಿರಲಿದೆ. ಇಂಟರ್‍ಸಿಟಿ ರೈಲು ಹಾಸನದಿಂದ ಬೆಳಗ್ಗೆ 6.15ಕ್ಕೆ ಹೊರಟು ಯಶವಂತಪುರಕ್ಕೆ ಬೆಳಗ್ಗೆ 9 ಗಂಟೆಗೆ ತಲುಪಲಿದೆ. ಯಶವಂತಪುರದಿಂದ ಸಂಜೆ 6.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಹಾಸನ ತಲುಪಲಿದೆ.

    ಪ್ಯಾಸೆಂಜರ್ ರೈಲು ಯಶವಂತಪುರದಿಂದ ಬೆಳಗ್ಗೆ7.30ಕ್ಕೆ ಹೊರಟು ಹಾಸನಕ್ಕೆ 10.30ಕ್ಕೆ ತಲುಪಿದ್ರೆ, ಮತ್ತೆ ಹಾಸನದಿಂದ ಮಧ್ಯಾಹ್ನ 12ಕ್ಕೆ ಹೊರಟು ಮಧ್ಯಾಹ್ನ 3.30ಕ್ಕೆ ಯಶವಂತಪುರ ಬಂದು ಸೇರಲಿದೆ.

    ಕುಡ್ಲಾ ಎಕ್ಸ್ ಪ್ರೆಸ್ ಯಶವಂತಪುರದಿಂದ ಸೋಮವಾರ-ಬುಧವಾರ-ಶುಕ್ರವಾರ- ಬೆಳಗ್ಗೆ 7ಕ್ಕೆ ಬಿಟ್ಟು ಹಾಸನ ಬೆಳಗ್ಗೆ 9.45ಕ್ಕೆ ಬರುತ್ತೆ. ಅದೇ ರೈಲು ಮಂಗಳೂರಿಗೆ ಹೋಗಲಿದ್ದು ಸಂಜೆ 4ಕ್ಕೆ ಸೇರುತ್ತೆ. ಇನ್ನು ಮಂಗಳೂರಿನಿಂದ ಮಂಗಳವಾರ-ಗುರುವಾರ-ಶನಿವಾರ-ಬೆಳಗ್ಗೆ 10.50ಕ್ಕೆ ಹೊರಟು-ರಾತ್ರಿ 7.50ಕ್ಕೆ ಯಶವಂತಪುರಕ್ಕೆ ಬಂದು ಸೇರಲಿದೆ.

    ಟಿಕೆಟ್ ದರ?

    ಟಿಕೆಟ್ ದರ ಕೂಡ ತುಂಬಾನೇ ಕಡಿಮೆ ನೀವೇನಾದ್ರೂ ಸೂಪರ್ ಫಾಸ್ಟ್ ರೈಲಲ್ಲಿ ಹೋದ್ರೆ 95 ರಿಂದ 110 ರೂ ಕೊಡ್ಬೇಕು. ಅದೇ ಪ್ಯಾಸೆಂಜರ್ ರೈಲಿನಲ್ಲಿ ಹೋದ್ರೆ 40 ರೂನಿಂದ 70 ರುಪಾಯಿ ನೀಡಬೇಕು.

    ನಿಲ್ದಾಣಗಳು:

    ಸೂಪರ್ ಫಾಸ್ಟ್ ರೈಲು ಬಿಟ್ಟು ಪ್ಯಾಸೆಂಜರ್ ರೈಲು ಹತ್ತಿದ್ರೆ ಚಿಕ್ಕಬಾಣವಾರ, ನೆಲಮಂಗಲ, ಕುಣಿಗಲ್, ಯಡಿಯೂರು, ಆದಿಚುಂಚನಗಿರಿ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ತಲುಪಿ ಕೊನೆಗೆ ಹಾಸನದಲ್ಲಿ ಕೊನೆಯಾಗಲಿದೆ.

    ಕುಣಿಗಲ್ ಮಾರ್ಗದಲ್ಲಿ ರೈಲು ಸಂಚಾರ ಶುರುವಾಗ್ತಿರೋದ್ರಿಂದ ವಾರದಲ್ಲಿ 3 ದಿನ ಅರಿಸಿಕೆರೆ-ಹಾಸನ ಮಾರ್ಗದ ರೈಲು ಓಡಾಟ ಬಂದ್ ಆಗಲಿದೆ. ಅದೇನೇ ಇರಲಿ 21 ವರ್ಷಗಳ ಹಿಂದೆ ದೇವೇಗೌಡರು ಹಾಕಿದ್ದ ಬುನಾದಿಗೆ ಈಗ ಹಸಿರು ನಿಶಾನೆ ಸಿಗ್ತಿದ್ದು, ಲಕ್ಷಾಂತರ ಜನರ ಕನಸು ಇವತ್ತು ಈಡೇರಲಿದೆ.

  • ಅಂಬುಲೆನ್ಸ್ ಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ – ಬಾಣಂತಿ ಸೇರಿ ನಾಲ್ವರು ದುರ್ಮರಣ

    ಅಂಬುಲೆನ್ಸ್ ಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ – ಬಾಣಂತಿ ಸೇರಿ ನಾಲ್ವರು ದುರ್ಮರಣ

    – ಪವಾಡಸದೃಶವಾಗಿ 7 ದಿನಗಳ ಮಗು ಪಾರು

    ಚಿತ್ರದುರ್ಗ: ಆಂಬುಲೆನ್ಸ್ ಗೆ ರೈಲು ಡಿಕ್ಕಿಹೊಡೆದ ಪರಿಣಾಮ ಬಾಣಂತಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ನಡೆದಿದೆ.

    ಸರ್ಕಾರಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ನಲ್ಲಿ 7 ದಿನಗಳ ಮಗುವಿನೊಂದಿಗೆ ಬಾಣಂತಿ ಚಂದ್ರಕಲಾ ಬಂಡೆ ತಿಮ್ಮಾಪುರ ಗ್ರಾಮಕ್ಕೆ ತೆರಳುತ್ತಿದ್ರು. ಈ ವೇಳೆ ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು ತಳಕು ಗ್ರಾಮದ ರೈಲ್ವೆಗೇಟ್ ಬಳಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ 50 ಮೀಟರ್ ದೂರದ ಹಳ್ಳಕ್ಕೆ ಹೋಗಿ ಬಿದ್ದಿದೆ. ದುರಂತದಲ್ಲಿ ಬಾಣಂತಿ ಚಂದ್ರಕಲಾ ಸಾವನ್ನಪ್ಪಿದ್ದು, 7 ದಿನಗಳ ಮಗು ಪವಾಡಸದೃಶವಾಗಿ ಪಾರಾಗಿದೆ.

    ಇನ್ನು ಸಾವಿತ್ರಮ್ಮ, ಗಂಗಮ್ಮ, ಸ್ಥಳದಲ್ಲೇ ಮೃತಪಟ್ಟರೆ, ಲಕ್ಷ್ಮಮ್ಮ ಎಂಬವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

    ಗಾಯಗೊಂಡಿರುವ ಆಂಬುಲೆನ್ಸ್ ಚಾಲಕ ಶಿವರೆಡ್ಡಿ, ಚಂದ್ರಕಲಾ ತಾಯಿ ಕದಿರಮ್ಮ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಘಟನೆಗೆ ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗಿದೆ. ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ್ರೂ ಬೇಗ ದಾಟುವ ಭರದಲ್ಲಿ ವಾಹನವನ್ನ ಅತಿ ವೇಗವಾಗಿ ಚಲಾಯಿಸಿದ್ದಾನೆ. ಈ ಬಗ್ಗೆ ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಧಾರವಾಡ: ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

    ಧಾರವಾಡ: ರೈಲು ಹಳಿಯ ಮೇಲೆ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ಧಾರವಾಡದ ನವಲೂರು ಗ್ರಾಮದ ಹತ್ತಿರ ಸೋಮವಾರ ಪತ್ತೆಯಾಗಿದೆ.

    ಮಹ್ಮದ್ ರಸೂಲ್ (28) ಮೃತ ವ್ಯಕ್ತಿ. ಮಹ್ಮದ್ ರಸೂಲ್ ಧಾರವಾಡ ನಗರದ ಅಗಸಿ ಬಡಾವಣೆಯ ನಿವಾಸಿ ಎಂದು ತಿಳಿದು ಬಂದಿದೆ. ರವಿವಾರ ಮನೆಯಿಂದ ಹೊರ ಹೋಗಿದ್ದ ರಸೂಲ್ ಸೋಮವಾರ ರೈಲು ಹಳಿಯ ಮೇಲೆ ಶವವಾಗಿ ಪತ್ತಯಾಗಿದ್ದಾನೆ. ರಸೂಲ್ ಪಾಲಕರು ನಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ರಸೂಲ್ ಮೇಲೆ ರೈಲುಗಳು ಹರಿದ ಪರಿಣಾಮ ದೇಹ ತುಂಡು ತುಂಡಾಗಿ ಬಿದ್ದಿದೆ. ರುಂಡ ಹಾಗೂ ಎರಡು ಕೈಗಳು ಕತ್ತರಿಸಿ ಹೋಗಿದ್ದು ಅವುಗಳು ಇನ್ನೊಂದು ಭಾಗದಲ್ಲಿ ಬಿದ್ದಿದ್ದವು. ಸಾವನ್ನಪ್ಪಿದ ರಸೂಲ್ ಧಾರವಾಡ ನಗರದಲ್ಲಿ ಪಾನ್ ಶಾಪ್ ನಡೆಸುತ್ತಿದ್ದು, ಕುಡಿತದ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.