Tag: ರೈಲು ಮಾರ್ಗ

  • ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಚಿತ್ರದುರ್ಗ: 2023ರ ರೈಲ್ವೆ ಬಜೆಟ್‌ (Budget)ನಲ್ಲಿ ಚಿತ್ರದುರ್ಗ – ಆಲಮಟ್ಟಿ ಹೊಸ ರೈಲು ಮಾರ್ಗಕ್ಕೆ (Railway Tracking) 8,431.44 ಕೋಟಿ ರೂ. ಅನುದಾನ ಕಲ್ಪಿಸುವಂತೆ ಸಂಸದ ಕರಡಿ ಸಂಗಣ್ಣ (Karadi Sanganna Amarappa) ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

    2018ರಲ್ಲಿ ಕೇಂದ್ರ ಸರ್ಕಾರದಿಂದ (Central Government) ನೂತನ ರೈಲುಮಾರ್ಗ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಸುಮಾರು 279.94 ಕಿಮೀ ಉದ್ದದ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಆದೇಶ ನೀಡಲಾಗಿತ್ತು. ಅದರಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಇಂಜಿನಿಯರ್ 8,431.44 ಕೋಟಿ ರೂ.ಗಳಿಗೆ ಅಂದಾಜು ಮೊತ್ತದ ಯೋಜನೆ ತಯಾರಿಸಿ ರೈಲ್ವೆ ಮಂಡಳಿಗೆ ಅನುಮೋದನೆಗಾಗಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ಸಾಂದರ್ಭಿಕ ಚಿತ್ರ

    ಈ ರೈಲು ಮಾರ್ಗವು ಕೂಡಲಸಂಗಮ, ಹುನಗುಂದ, ಕುಷ್ಟಗಿ, ಬೇವೂರ ಇರಕಲಗಡ, ಕೊಪ್ಪಳ, ಹಿರೇಸಿಂಧೋಗಿ, ಕಾತರಕಿ, ತಮ್ರಹಳ್ಳಿ, ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಚಿತ್ರದುರ್ಗ ಸಂಪರ್ಕಿಸಲಿದೆ. ಹಾಗಾಗಿ ಈ ಯೋಜನೆಗೆ 2023-2024ನೇ ಬಜೆಟ್‌ನಲ್ಲಿ ಅನುದಾನ ಕಲ್ಪಿಸುವಂತೆ ಕೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ನವದೆಹಲಿ: ದೆಹಲಿಯಿಂದ ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಭಾರತೀಯ ರೈಲ್ವೇ ಶೀಘ್ರದಲ್ಲೇ ಇದನ್ನು ಸಾರ್ವಜನಿಕ ಪ್ರಯಾಣಕ್ಕಾಗಿ ಉದ್ಘಾಟಿಸಲಿದೆ.

    ಐಫೆಲ್ ಟವರ್‌ಗಿಂತಲೂ ಎತ್ತರವಾಗಿ ನಿರ್ಮಾಣವಾಗಿರುವ ಸೇತುವೆ ವಿಶ್ವದಲ್ಲೇ ಅತಿ ಎತ್ತರದ ರೈಲ್ವೇ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯುತ್ತಿದೆ. ಸೇತುವೆಯ ಉಕ್ಕಿನ ಕಮಾನು ಈ ತಿಂಗಳು ಪೂರ್ಣಗೊಳ್ಳಲಿದ್ದು, ಶೀಘ್ರವೇ ಉದ್ಘಾಟನೆಗೊಳ್ಳುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ.

    ಏನಿದರ ವಿಶೇಷತೆ?
    ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಬಹುತೇಕ ಪೂರ್ಣಗೊಂಡಿದೆ. 2021ರಲ್ಲಿ ಸೇತುವೆಯ ಕಮಾನು ಕೆಲಸ ಪೂರ್ಣಗೊಂಡಿತ್ತು. ಕತ್ರಾದಿಂದ ಬನಿಹಾಲ್‌ಗೆ ಸಂಪರ್ಕ ಕಲ್ಪಿಸುವ 111 ಕಿ.ಮೀ ಉದ್ದದ ರೈಲ್ವೇ ಹಳಿಯಲ್ಲಿ 12.6 ಕಿ.ಮೀ ಉದ್ದದ ಟಿ-49ಬಿ ಸುರಂಗವನ್ನು ನಿರ್ಮಿಸಲಾಗುತ್ತಿದ್ದು, ಶ್ರೀನಗರದಲ್ಲಿ 35 ಸುರಂಗಗಳು ಹಾಗೂ ಬನಿಹಾಲ್ ಮಾರ್ಗದಲ್ಲಿ ಒಟ್ಟು 37 ಸೇತುವೆಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿ ನಿತೀಶ್? – ದೂರವಾಣಿ ಕರೆಗಳ ಬಗ್ಗೆ ಸಿಎಂ ಹೇಳಿದ್ದೇನು?

    ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯನ್ನು ಅಂದಾಜು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ 35 ಮೀ. ಎತ್ತರದಲ್ಲಿ ನಿರ್ಮಾಣವಾಗಿದೆ. ಚೆನಾಬ್ ಸೇತುವೆ ಚೆನಾಬ್ ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣವಾಗಿದ್ದು, 1.3 ಕಿ.ಮೀ. ಉದ್ದವಿದೆ.

    ರೈಲ್ವೇ ಸೇತುವೆ ನಿರ್ಮಾಣಕ್ಕೆ ಕಮಾನು ಸ್ಥಾಪನೆ ಎಂಜಿನಿಯರುಗಳಿಗೆ ದೊಡ್ಡ ಸವಾಲಾಗಿತ್ತು. ರೈಲ್ವೇ ಮಾರ್ಗದ 111 ಕಿ.ಮೀ ನಲ್ಲಿ 97 ಕಿ.ಮೀ ನಷ್ಟು ಸುರಂಗ ಮಾರ್ಗವೇ ಇದೆ. ಇಷ್ಟು ದೂರದ ಸುರಂಗ ಮಾರ್ಗ ದೇಶದ ಬೇರೆ ಯಾವ ಭಾಗಗಳಲ್ಲೂ ಮಾಡಲಾಗಿಲ್ಲ. ಈಗಾಗಲೇ 86 ಕಿ.ಮೀ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ.

    ಸೇತುವೆ ನಿರ್ಮಾಣಕ್ಕೆ 17 ಕಂಬಗಳನ್ನು ನಿರ್ಮಿಸಲಾಗಿದ್ದು, ಒಟ್ಟು 28,660 ಮೆಟ್ರಿಕ್ ಟನ್‌ನಷ್ಟು ಉಕ್ಕನ್ನು ಬಳಸಲಾಗಿದೆ. ಕಮಾನಿನ ತೂಕ 10,619 ಮೆಟ್ರಿಕ್ ಟನ್ ಇದೆ. ಸೇತುವೆಗೆ ಬಳಸಲಾದ ಉಕ್ಕು 10 ಡಿಗ್ರಿ ಸೆಲ್ಸಿಯಸ್‌ನಿಂದ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನಕ್ಕೆ ಸೂಕ್ತವಾಗಿದೆ. ಕನಿಷ್ಟ 120 ವರ್ಷಗಳ ಜೀವಿತಾವಧಿ ಈ ರಚನೆಗಿದ್ದು, ಗಂಟೆಗೆ 266 ಕಿ.ಮೀ ವೇಗದ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದ್ದು, ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ: ನ್ಯಾ.ಸಂತೋಷ್‌ ಹೆಗ್ಡೆ

    ಕಾಶ್ಮೀರಕ್ಕೆ ರೈಲು ಮಾರ್ಗವನ್ನು ಹಾಕುವ ಯೋಜನೆಯನ್ನು 1990ರ ದಶಕದಲ್ಲಿ ಆಗಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ಪ್ರಕಟಿಸಿದ್ದರು. 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕರೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ

    ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ

    ಧಾರವಾಡ: ನೇರ ರೈಲು ಸಂಚಾರ ಕಲ್ಪಿಸುವ ದೃಷ್ಟಿಯಿಂದ ಮಂಜೂರಾಗಿರುವ ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈ ನೂತನ ರೈಲು ಮಾರ್ಗ ಆಗಬೇಕಾದ್ರೆ ನೂರಾರು ರೈತರು ಜಮೀನು ಕಳೆದುಕೊಳ್ಳಬೇಕಾಗಿದೆ.

    ಧಾರವಾಡ ನಂತರ ರೈಲು ಸಂಚರಿಸಬೇಕಾದ ಆರಂಭದ ಊರಿನಲ್ಲೇ ಈಗ ರೈಲು ಮಾರ್ಗ ಮಾಡೋದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಧಾರವಾಡದಿಂದ ಬೆಳಗಾವಿಗೆ ರೈಲು ಲೋಂಡಾ ಮೂಲಕ ಹಾದು ಹೋಗಲು 3 ಗಂಟೆ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆ ಪ್ರಯಾಣದ ಸಮಯವನ್ನು ಕಡಿಮೆ ಮಾಡಬೇಕು ಹಾಗೂ ಧಾರವಾಡ-ಬೆಳಗಾವಿ ಮಧ್ಯೆ ನೇರ ರೈಲಿನ ಮೂಲಕ ಜನರಿಗೆ ಅನುಕೂಲ ಮಾಡಬೇಕು ಎನ್ನುವ ಉದ್ದೇಶದ ಈ ಯೋಜನೆ ದಶಕಗಳ ಹೋರಾಟದಿಂದ ಸಿಕ್ಕಿದ್ದಾಗಿದೆ. ಅದರಲ್ಲಿಯೂ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಇದನ್ನೂ ಓದಿ: ದಿ. ಸುರೇಶ್ ಅಂಗಡಿ ಘೋಷಿಸಿದ್ದ ನೇರ ರೈಲು ಮಾರ್ಗಕ್ಕೆ 50 ಕೋಟಿ ಅನುದಾನ ಮೀಸಲು

    ಈ ಯೋಜನೆಗಾಗಿ ರೈಲು ಮಾರ್ಗ ಮಾಡಬೇಕಾದ್ರೆ ಅದಕ್ಕೆ ಧಾರವಾಡಕ್ಕೆ ಹೊಂದಿಕೊಂಡಿರೋ ಮೊದಲ ಗ್ರಾಮ ಚಿಕ್ಕಮಲ್ಲಿಗವಾಡದಿಂದಲೇ ವಿರೋಧ ವ್ಯಕ್ತವಾಗಿದೆ. ನಮಗಂತೂ ಈ ರೈಲು ಮಾರ್ಗ ಬೇಡವೇ ಬೇಡ ಬೇರೆ ಕಡೆ ಸುತ್ತುವರಿಸಿಕೊಂಡು ಹೋಗಿ, ನಮ್ಮೂರ ಮೇಲೆ ರೈಲು ಹಾದು ಹೋಗೋದೇ ಬೇಡ ಅಂತಾ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇದೇ ಗ್ರಾಮದ ರೈತರು ಐಐಟಿಗೆ ಜಮೀನನ್ನ ಕೊಟ್ಟಾಗಿದೆ. ಆದರೆ ಈಗ ಇರುವ ಜಮೀನನ್ನ ಸರ್ಕಾರ ತೆಗೆದುಕೊಂಡರೆ ನಮಗೆ ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ದಾರಿನೇ ಇಲ್ಲ ಎಂದು ಗ್ರಾಮಸ್ಥರು ತಮ್ಮ ನೋವನ್ನ ತೋಡಿಕೊಳ್ಳುತಿದ್ದಾರೆ.

  • ಬೆಂಗ್ಳೂರು-ಮಂಗ್ಳೂರು ರೈಲು ಮಾರ್ಗ ಸರಿಪಡಿಸಲು ಸಿಬ್ಬಂದಿ ಪರದಾಟ!

    ಬೆಂಗ್ಳೂರು-ಮಂಗ್ಳೂರು ರೈಲು ಮಾರ್ಗ ಸರಿಪಡಿಸಲು ಸಿಬ್ಬಂದಿ ಪರದಾಟ!

    ಹಾಸನ: ಸತತವಾಗಿ ಸುರಿದ ಮಹಾಮಳೆ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದ್ದು, ಇದೀಗ ಬೆಂಗಳೂರು- ಮಂಗಳೂರು ರೈಲು ಮಾರ್ಗವನ್ನು ಸರಿಪಡಿಸಲು ರೈಲ್ವೆ ಸಿಬ್ಬಂದಿ ಪರದಾಡುವಂತಾಗಿದೆ.

    ಭಾರೀ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ ಭಾರೀ ಪ್ರಮಾಣದ ಹಾನಿಗಳಾಗಿವೆ. ಹಲವು ಕಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ರೈಲ್ವೆ ಸೇತುವೆ, ಗುಡ್ಡ ಕುಸಿತ ಪ್ರಕರಣಗಳು ಇನ್ನಷ್ಟು ಹೊರಬರುತ್ತಿವೆ. ಮಳೆ ಕೊಂಚ ಕಡಿಮೆ ಆದ ಬಳಿಕ ಇದೀಗ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನೂ ಓದಿ: ಶಿರಾಡಿಘಾಟ್ ರಸ್ತೆಯೊಂದಿಗೆ ಮಂಗ್ಳೂರು ರೈಲು ಮಾರ್ಗವೂ ಸಂಪೂರ್ಣ ಬಂದ್

    ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ಗುಡ್ಡ ಕುಸಿತ ಕಂಡುಬಂದಿದ್ದು, ರೈಲ್ವೆ ಸೇತುವೆಯೇ ಕೊಚ್ಚಿ ಹೋಗಿದೆ. ಎಡಕುಮೇರಿ-ಕಡಗರವಳ್ಳಿ ನಡುವಿನ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಸದ್ಯ ಈ ಅನಾಹುತಗಳನ್ನ ಸರಿಪಡಿಸಲು ರೈಲ್ವೆ ಸಿಬ್ಬಂದಿ ಪರದಾಡುವಂತಾಗಿದೆ. ಈ ರೀತಿಯ ಗುಡ್ಡ ಕುಸಿತಗಳಿಂದಾಗಿ ಬೆಂಗಳೂರು -ಮಂಗಳೂರು ರೈಲು ಮಾರ್ಗ ಇನ್ನೂ ಅನಿಶ್ಚಿತತೆಯಲ್ಲೇ ಉಳಿದಿದೆ. ಇದನ್ನೂ ಓದಿ: ಬೆಂಗ್ಳೂರು – ಮಂಗ್ಳೂರು ರೈಲ್ವೇ ಹಳಿ 50 ಕಡೆ ಗುಡ್ಡ ಕುಸಿತ – 1 ತಿಂಗ್ಳು ಸಂಚಾರ ಅನುಮಾನ, ಇದನ್ನೂ ಓದಿ: ಸಕಲೇಶಪುರದಲ್ಲಿ ಅಪಾಯಕ್ಕೆ ಸಿಲುಕಿರೋ 16 ರೈಲ್ವೇ ಸಿಬ್ಬಂದಿ ರಕ್ಷಣೆಗೆ ಕಾರ್ಯಾಚರಣೆ ಆರಂಭ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಂದ್ರ ಬಜೆಟ್ 2018- ಕರ್ನಾಟಕಕ್ಕೆ ಜೇಟ್ಲಿ ನೀಡಿದ್ದು ಏನು?

    ಕೇಂದ್ರ ಬಜೆಟ್ 2018- ಕರ್ನಾಟಕಕ್ಕೆ ಜೇಟ್ಲಿ ನೀಡಿದ್ದು ಏನು?

    ಬೆಂಗಳೂರು: 2018ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಕರ್ನಾಟಕಕ್ಕೆ ಮೂರು ರೈಲು ಮಾರ್ಗಗಳನ್ನ ಘೋಷಣೆ ಮಾಡಿದ್ದಾರೆ.

    ನೂತನವಾಗಿ ಘೋಷಣೆಯಾಗಿರುವ ರೈಲು ಮಾರ್ಗಗಳೆಂದರೆ ಗಂಗಾವತಿ ಟು ಕಾರಟಗಿ 28 ಕಿ.ಮೀ ಹೊಸ ರೈಲು ಮಾರ್ಗ, ಕಲಬುರಗಿ ಟು ಕಮಲಾಪುರಾ -42 ಕಿಲೋಮೀಟರ್, ಬಾಗಲಕೋಟೆ ಟು ಕಜ್ಜಿದೋಣಿ- 30 ಕಿಲೋಮೀಟರ್.

    ಇದರ ಜೊತೆಗೆ ಒಟ್ಟು ಹತ್ತು ಮಾರ್ಗಗಳು ಡಬ್ಲಿಂಗ್ ಆಗಲಿವೆ.
    * ಬಾಬ್ಲಾದ್ ಟು ಕಲಬುರಗಿ ಡಬ್ಲಿಂಗ್ – 5.42 ಕಿಲೋಮೀಟರ್
    * ಗದಗ ಟು ಬನಕಟ್ಟಿ ಡಬ್ಲಿಂಗ್ – 4.98 ಕಿಲೋಮೀಟರ್
    * ಗಣಗಾಪುರ್ ರೋಡ್ ಟು ಹುಣಸಿಹಾಡಿಗಿಲ್ – 6.58 ಕಿಲೋಮೀಟರ್
    * ಹರ್ಲಾಪುರ್ ಟು ಕಣಗಿಹಾಳ್ – 9.83 ಕಿಲೋಮೀಟರ್
    * ಹುಬ್ಬಳ್ಳಿ ದಕ್ಷಿಣ ಟು ಸವಣೂರು – 51 ಕಿಲೋಮೀಟರ್
    * ಹುಲಕೋಟಿ ಟು ಅಣ್ಣಿಗೇರಿ – 10.06 ಕಿಲೋಮೀಟರ್
    * ಹುಣಸಿಹಾಡಿಗಿಲ್ ಟು ಸವಳಗಿ – 7.05 ಕಿಲೋಮೀಟರ್
    * ಸವಳಗಿ – ಬಾಬ್ಲದ್ ಟು 7.58 ಕಿಲೋಮೀಟರ್
    * ತೋಳಹುಣಸೆ ಟು ಹರಿಹರ – 23 ಕಿಲೋಮೀಟರ್
    * ತುಮಕೂರು ಟು ಗುಬ್ಬಿ – 18 ಕಿಲೋಮೀಟರ್
    * ಕೊಪ್ಪಳ ಟು ಗಿಣಿಗೇರಾ ಟು ಮುನಿರಬಾದ್ – 21.83 ಕಿಲೋಮೀಟರ್

    ಬೆಂಗಳೂರಿಗೆ ಸಬ್ ಅರ್ಬನ್ ರೈಲು ಹಾಗೂ ಐಸ್ಯಾಕ್ ಸಂಶೋಧನಾ ಕೇಂದ್ರವನ್ನು ಘೋಷಣೆ ಮಾಡಲಾಗಿದೆ. ಒಟ್ಟು ರೈಲ್ವೆಗೆ 1.48 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದರೆ ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಯುನಾನಿ ಮೆಡಿಸಿನ್ ಗೆ 12.50 ಕೋಟಿ ರೂ. ಅನುದಾನ ನೀಡಲಾಗಿದೆ.

  • ಮರ ಕಡಿಯುವುದನ್ನು ತಪ್ಪಿಸಲು ನೈರುತ್ಯ ರೈಲ್ವೇ ಇಲಾಖೆಯಿಂದ ಹೊಸ ಪ್ಲಾನ್

    ಮರ ಕಡಿಯುವುದನ್ನು ತಪ್ಪಿಸಲು ನೈರುತ್ಯ ರೈಲ್ವೇ ಇಲಾಖೆಯಿಂದ ಹೊಸ ಪ್ಲಾನ್

    ಹಾವೇರಿ: ಒಂದು ಹೊಸ ರಸ್ತೆಯನ್ನು ನಿರ್ಮಿಸಬೇಕೆಂದರೆ ರಸ್ತೆ ಬರುವ ದಾರಿಯಲ್ಲಿ ಮರಗಳನ್ನು ಕಡಿಯುವುದು ಅನಿವಾರ್ಯ. ಆದರೆ ನೈರುತ್ಯ ರೈಲ್ವೆ ಇಲಾಖೆಯವರು ಮರಗಳನ್ನು ಕಡಿಯುವುದನ್ನು ತಪ್ಪಿಸಿ ಬೇರೆಡೆಗೆ ಶಿಫ್ಟ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.

    ರಸ್ತೆ ನಿರ್ಮಾಣಕ್ಕಾಗಿ ಹಾಗೂ ಕೆಲವು ಅಭಿವೃದ್ಧಿ ಕಾರ್ಯಗಳಿಗಾಗಿ ಮರಗಳನ್ನ ಕಡಿಯಲಾಗುತ್ತದೆ. ಆದ್ರೆ ನೈರುತ್ಯ ರೈಲ್ವೆ ಇಲಾಖೆ ಇದಕ್ಕೆ ಹೊರತಾಗಿದೆ. ಕಳೆದ ಕೆಲವು ತಿಂಗಳಿನಿಂದ ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿಯಿಂದ ಚಿಕ್ಕಜಾಜೂರು ದ್ವಿಪಥ ಮಾರ್ಗ ನಿರ್ಮಿಸುತ್ತಿದೆ. ಇದಕ್ಕಾಗಿ ಮರಗಳನ್ನ ಕಡಿಯೋದು ಅನಿವಾರ್ಯವಾಗಿದೆ. ಆದರೆ ಮಾರ್ಗದ ಮಧ್ಯೆ ಬರುವಂತಹ ಮರಗಳನ್ನು ಬೇರೆಡೆಗೆ ನಾಟಿ ಮಾಡಲಾಗುತ್ತಿದೆ.

    ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ರೈಲ್ವೆ ನಿಲ್ದಾಣದಲ್ಲಿದ್ದ ಸುಮಾರು 46 ಬೇವಿನಮರ, ಹೊಂಗೆ ಮರಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈಗಿದ್ದ ಜಾಗದಿಂದ ಕನಿಷ್ಟ 15 ರಿಂದ 20 ಮೀಟರ್ ದೂರದಲ್ಲಿ ಮರಗಳನ್ನ ನಾಟಿ ಮಾಡಲಾಗುತ್ತಿದೆ. ಈಗಾಗಲೇ 25ಕ್ಕೂ ಹೆಚ್ಚು ಮರಗಳನ್ನ ಶಿಫ್ಟ್ ಮಾಡಿದ್ದಾರೆ. ಪರಿಸರ ಉಳಿಸುವ ಉದ್ದೇಶದಿಂದ ಈ ರೀತಿಯ ಕಾರ್ಯ ಮಾಡಲಾಗುತ್ತಿದೆ.

    ಹೈದರಾಬಾದ್‍ನ ವಿಶೇಷ ತಂಡ, ತೋಟಗಾರಿಕಾ ಇಲಾಖೆ, ರೈಲ್ವೆ ಎಂಜಿನಿಯರ್ ತಿವಾರಿ ಸೇರಿದಂತೆ 15ಕ್ಕೂ ಹೆಚ್ಚು ಜನ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ರೈಲ್ವೆ ಇಲಾಖೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿರೋದು ನಿಜಕ್ಕೂ ಮೆಚ್ಚುವಂತ ಕಾರ್ಯವಾಗಿದೆ. ಇದನ್ನ ಎಲ್ಲೆಡೆ ಅಳವಡಿಸಿಕೊಂಡರೆ ಮರಗಳನ್ನು ಸಂರಕ್ಷಿಸಬಹುದು ಎಂದು ರೈಲ್ವೆ ಇಲಾಖೆಯ ಈ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.