Tag: ರೈಲು ನಿಲ್ದಾಣ

  • 21 ಲಕ್ಷ ರೂ. ಮೌಲ್ಯದ ಆಕ್ಸಿಟೋಸಿನ್ ಚುಚ್ಚುಮದ್ದು ವಶ

    ನವದೆಹಲಿ: ರೈಲು ನಿಲ್ದಾಣದಲ್ಲಿ ಸುಮಾರು 21 ಲಕ್ಷ ರೂ. ಮೌಲ್ಯದ ಜಾನುವಾರುಗಳಿಗೆ ನೀಡಲಾಗುವ ಆಕ್ಸಿಟೋಸಿನ್ ಚುಚ್ಚು ಮದ್ದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಔಷಧ ನಿಯಂತ್ರಣ ಇಲಾಖೆ ತಿಳಿಸಿದೆ.

    ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಜಾನುವಾರುಗಳಿಗೆ ಆಕ್ಸಿಟೋಸಿನ್ ಚುಚ್ಚುಮದ್ದು ನೀಡಲಾಗುತ್ತದೆ. ಈ ಔಷಧ ದನಕರುಗಳು ಹಾಗೂ ಅವುಗಳ ಹಾಲು ಕುಡಿಯುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.

    ಬಿಹಾರದ ಗಯಾದಿಂದ ಪಶುವೈದ್ಯಕೀಯ ಆಕ್ಸಿಟೋಸಿನ್ ಚುಚ್ಚುಮದ್ದನ್ನು ನವದೆಹಲಿ ರೈಲು ನಿಲ್ದಾಣಕ್ಕೆ ತಲುಪಿಸಿರುವ ಬಗ್ಗೆ ದೆಹಲಿ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಬಳಿಕ ರೈಲು ನಿಲ್ದಾಣದ ಪಾರ್ಸೆಲ್ ಗೋಡೌನ್‌ನಲ್ಲಿ ಅದನ್ನು ವಶಪಡಿಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ

    ಜನವರಿ 31 ರಂದು ರೈಲು ನಿಲ್ದಾಣದ ಆವರಣದಲ್ಲಿ ಪರಿಶೀಲನೆಗೆ ಡ್ರಗ್ಸ್ ಇನ್‌ಸ್ಪೆಕ್ಟರ್‌ಗಳ ತಂಡವನ್ನು ನಿಯೋಜಿಸಲಾಗಿತ್ತು. ಸಿಟಿ ಸ್ಟೇಷನ್‌ನ ಅಜ್ಮೇರಿ ಗೇಟ್ ಬದಿಯಲ್ಲಿರುವ ಪಾರ್ಸೆಲ್ ಗೋಡೌನ್‌ನ ಆವರಣವನ್ನು ಪರಿಶೀಲಿಸಿದಾಗ ಆಕ್ಸಿಟೋಸಿನ್ ಚುಚ್ಚುಮದ್ದಿನ ದಾಸ್ತಾನು ಮಾಡಿರುವುದು ಕಂಡುಬಂದಿದೆ. ಅದರಲ್ಲಿ ಸುಮಾರು 2 ಲಕ್ಷ ಚುಚ್ಚುಮದ್ದಿನ ವಯಲ್ ಇದ್ದವು ಎಂದು ತಿಳಿಸಿದ್ದಾರೆ.

    ಇಷ್ಟು ದೊಡ್ಡ ಮಟ್ಟದ ದಾಸ್ತಾನಿನ ಬಗ್ಗೆ ಪಾರ್ಸೆಲ್ ಮೇಲ್ವಿಚಾರಕನನ್ನು ಪ್ರಶ್ನಿಸಿದಾಗ ಅದನ್ನು ಇಬ್ಬರಿಗೆ ತಲುಪಿಸುವ ಆದೇಶ ಬಂದಿರುವುದಾಗಿ ತಿಳಿಸಿದ್ದಾರೆ. ಈ ಔಷಧಗಳು ಅನುಮಾನಾಸ್ಪದ ಗುಣಮಟ್ಟದ್ದು ಎಂದು ಶಂಕಿಸಿದ್ದು, ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ:  ಅಶ್ಲೀಲ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನ ಕೊಂದು ಬ್ಯಾಗ್‍ನಲ್ಲಿ ತುಂಬಿದ್ರು

    ಔಷಧವನ್ನು ವಶಪಡಿಸಿಕೊಂಡ ಬಗ್ಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಈ ಔಷಧದ ಪೂರೈಕೆಯ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

  • ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ- ಬೇರೆ ಬೇರೆಯಾಯ್ತು ರುಂಡ, ಮುಂಡ

    ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ- ಬೇರೆ ಬೇರೆಯಾಯ್ತು ರುಂಡ, ಮುಂಡ

    ಯಾದಗಿರಿ: ಸಾಲಕ್ಕೆ ಹೆದರಿ ಯುವಕನೊಬ್ಬ ರೈಲು ಹಳಿಗೆ ತಲೆಕೊಟ್ಟು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ರೈಲು ನಿಲ್ದಾಣ ಸೇತುವೆ ಬಳಿ ತಡರಾತ್ರಿ ನಡೆದಿದೆ.

    ಜಿಲ್ಲೆಯ ಶಹಪುರದ ಸದ್ದಾಂ ಹುಸೇನ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಸದ್ದಾಂ ಹುಸೇನ್ ಮೇಲೆ ವೇಗವಾಗಿ ರೈಲು ಹೋಗಿರುವ ಹಿನ್ನೆಲೆಯಲ್ಲಿ ಯುವಕನ ರುಂಡ ಒಂದು ಕಡೆ ಮತ್ತು ಮುಂಡ ಮತ್ತೊಂದು ಕಡೆ ಬಿದ್ದಿದೆ.

    ಮೃತ ಸದ್ದಾಂ ಹುಸೇನ್ ಶಹಪುರದ ಖಾಸಗಿ ಫೈನಾನ್ಸ್‌ವೊಂದರಲ್ಲಿ ಸಾಲ ಪಡೆದುಕೊಂಡಿದ್ದನು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಯಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಆದರೆ ಫೈನಾನ್ಸ್ ಕಂಪನಿಯಿಂದ ಸಾಲ ಮರುಪಾವತಿಸುವಂತೆ ನಿತ್ಯ ಸದ್ದಾಂ ಹುಸೇನ್‍ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ.

    ಇದರಿಂದ ನೊಂದ ಸದ್ದಾಂ ಹುಸೇನ್ ಮಂಗಳವಾರ ರಾತ್ರಿ ಯಾದಗಿರಿಗೆ ಬಂದಿದ್ದಾನೆ. ನಂತರ ರೈಲ್ವೆ ನಿಲ್ದಾಣದ ಸೇತುವೆ ಬಳಿ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಯಚೂರು ರೈಲ್ವೆ ಪೋಲಿಸ್ ಮತ್ತು ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಕ್ಕ 5 ಲಕ್ಷ ಮೌಲ್ಯದ ಆಭರಣಗಳನ್ನು ವಾಪಸ್ ನೀಡಿದ್ರು ಪೇದೆಗಳು

    ಸಿಕ್ಕ 5 ಲಕ್ಷ ಮೌಲ್ಯದ ಆಭರಣಗಳನ್ನು ವಾಪಸ್ ನೀಡಿದ್ರು ಪೇದೆಗಳು

    ಕಲಬುರಗಿ: ರೈಲು ನಿಲ್ದಾಣದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆಗೆ ಆರ್.ಪಿ.ಎಫ್ ಪೊಲೀಸರು ಸಹಾಯ ಮಾಡಿರುವ ಘಟನೆ ಕಲಬುರಗಿಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ವಾಡಿ ಮೂಲದ ಮಹಿಳೆ ಕಲಬುರಗಿ ರೈಲು ನಿಲ್ದಾಣದಿಂದ ವಾಡಿಗೆ ಹೋಗಲು ಆಗಮಿಸಿ ಬ್ಯಾಗನ್ನು ನಿಲ್ದಾಣದಲ್ಲಿಯೇ ಬಿಟ್ಟು ಹೋಗಿದ್ದಾರೆ. ಅದರಲ್ಲಿ 150 ಗ್ರಾಮ ಚಿನ್ನ ಮತ್ತು ಟ್ಯಾಬ್ ಸೇರಿದಂತೆ 5 ಲಕ್ಷ ಬೆಲೆ ಬಾಳುವ ವಸ್ತುಗಳಿದ್ದವು. ರೈಲು ಹೋದ ಕೆಲ ಕ್ಷಣಗಳ ನಂತರ ಆರ್.ಪಿ.ಎಫ್ ಪೇದೆಗಳಾದ ರವಿ ಮತ್ತು ಚೌವ್ಹಾಣ ಆ ಬ್ಯಾಗ್ ಸಿಕ್ಕಿದೆ.

    ಕೂಡಲೇ ಅದರಲ್ಲಿರುವ ಟ್ಯಾಬ್ ಮೂಲಕ ಆಕೆಯ ಪತಿ ಮೊಹ್ಮದ್ ಆಸಿಫ್ ಅವರಿಗೆ ಕರೆ ಮಾಡಿ ಬ್ಯಾಗ್ ಸಿಕ್ಕ ಮಾಹಿತಿ ನೀಡಿದ್ದು, ನಂತರ ಪರಿಶೀಲನೆ ಮಾಡಿ ಚಿನ್ನಾಭರಣ ಸೇರಿದಂತೆ ಎಲ್ಲ ವಸ್ತುಗಳನ್ನು ಮರಳಿ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಕಲಬುರಗಿಯ ಆರ್.ಪಿ.ಎಫ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

  • ದೇವರ ಪ್ರಸಾದವೆಂದು ಒಡೆದಿದ್ದಕ್ಕೆ ಕೈ ಹೋಯ್ತು- ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

    ದೇವರ ಪ್ರಸಾದವೆಂದು ಒಡೆದಿದ್ದಕ್ಕೆ ಕೈ ಹೋಯ್ತು- ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

    – ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆತಂಕದ ವಾತಾವರಣ
    – ಎಂಟು ಬಾಕ್ಸ್‌ಗಳಲ್ಲಿ 12 ಸಕ್ರಿಯ ಬಾಂಬ್

    ಹುಬ್ಬಳ್ಳಿ: ದೇವರ ಪ್ರಸಾದವೆಂದು ತಿಳಿದು ಬಾಕ್ಸ್ ನಲ್ಲಿದ್ದ ವಸ್ತವನ್ನು ಒಡೆದಿದ್ದಕ್ಕೆ ಕೈ ಹೋಯಿತು ಎಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಗಾಯಳು ಹುಸೇನ್‍ಸಾಬ್ ಹೇಳಿದ್ದಾರೆ.

    ವಿಜಯವಾಡ-ಅಮರಾವತಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ನಿಂತಿತ್ತು. ಈ ವೇಳೆ ಅನುಮಾನಾಸ್ಪದ ಬಾಕ್ಸ್‌ವೊಂದನ್ನು ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ವಶಕ್ಕೆ ಪಡೆದು, ರೈಲ್ವೇ ಮ್ಯಾನೇಜರ್ ಕಚೇರಿಗೆ ಒಪ್ಪಿಸಿದ್ದರು. ರಟ್ಟಿನ ಬಾಕ್ಸ್‍ನೊಳಗೆ ಬಕೀಟ್‍ನಲ್ಲಿ ಚಿಕ್ಕಚಿಕ್ಕದಾದ 8 ಬಾಕ್ಸ್‌ನಲ್ಲಿದ್ದ ನಿಂಬೆಹಣ್ಣಿನ ಗಾತ್ರದ ಬಾಂಬ್‍ಗಳ ಪೈಕಿ ಒಂದನ್ನು ಓಪನ್ ಮಾಡಲು ಪೇದೆ ಹಾಗೂ ರೈಲ್ವೆ ಮಾನೇಜರ್ ಮುಂದಾಗಿದ್ದರು.

    ಈ ವೇಳೆ ಪೇದೆ ರವಿಕುಮಾರ್ ತಮಗೆ ಪರಿಚಯವಿದ್ದ ಹುಸೇನ್‍ಸಾಬ್ (22) ಅವರನ್ನು ಕರೆದು ಬಾಕ್ಸ್ ಓಪನ್ ಮಾಡುವಂತೆ ಸೂಚನೆ ನೀಡಿದ್ದರು. ಬಾಕ್ಸ್ ತೆಗೆದ ಹುಸೇನ್‍ಸಾಬ್ ನಿಂಬೆಹಣ್ಣು ಗಾತ್ರದ ವಸ್ತುವನ್ನು ಕಲ್ಲಿನಿಂದ ಒಡೆಯುತ್ತಿದ್ದಂತೆ ಬ್ಲಾಸ್ಟ್ ಆಗಿದೆ. ಪರಿಣಾಮ ಹುಸೇನ್‍ಸಾಬ್ ಕೈ ಕಟ್ ಆಗಿದೆ. ರಕ್ತಸ್ರಾವದಿಂದ ಬಿದ್ದು ಕಣ್ಣೀರು ಹಾಕುತ್ತಿದ್ದ ಹುಸೇನ್‍ಸಾಬ್ ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಕ್ಸ್‍ನಲ್ಲಿ ಇದ್ದ 12 ಬಾಂಬ್‍ಗಳು ಸಕ್ರಿಯವಾಗಿದ್ದು, ಸ್ಥಳಕ್ಕೆ ಬರುವಂತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೆ ತಿಳಿಸಲಾಗಿತ್ತು. ರೈಲು ನಿಲ್ದಾಣದ ಗಾರ್ಡನ್ ನಲ್ಲಿ ಮರಳಿನ ಮೂಟೆಗಳ ಮಧ್ಯೆ ಬಾಂಬ್‍ಗಳನ್ನು ಇರಿಸಲಾಗಿದೆ.

    ಬಕೀಟ್ ಮೇಲೆ ನೋ ಬಿಜೆಪಿ, ನೋ ಆರ್‌ಎಸ್‍ಎಸ್ ಒನ್ಲೀ ಶಿವಸೇನಾ ಎಂದು ಬರೆಯಲಾಗಿದೆ. ಜೊತೆ ಕೊಲ್ಲಾಪುರ ಶಾಸಕರ ಹೆಸರನ್ನು ನಮೂದಿಸಲಾಗಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಸೋಮವಾರ ಎನ್‍ಐಎ ಅಧಿಕಾರಿಗಳು ಹುಬ್ಬಳ್ಳಿಗೆ ಆಗಮಿಸಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಗಾಯಾಳು ಹುಸೇನ್‍ಸಾಬ್, ಗದಗನಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದಿದ್ದೆ. ಈ ವೇಳೆ ಆರ್‌ಪಿಎಫ್‌ ಪೇದೆ ರವಿಕುಮಾರ್ ಅವರು ಕರೆದು, ಇದನ್ನು ತಗೊಂಡು ಆಫೀಸ್ ಹೊರಗೆ ಹೋಗಿ ಏನು ಅಂತ ನೋಡು ಅಂದ್ರು. ದೇವರ ಪ್ರಸಾದ ಗಟ್ಟಿಯಾಗಿದೆ ಅಂತ ತಿಳಿದು ಕಲ್ಲಿನಿಂದ ಒಂದು ಪೆಟ್ಟು ಹಾಕಿದ್ದೆ ತಡ ಬ್ಲಾಸ್ಟ್ ಆಯಿತು. ಪರಿಣಾಮ ನನ್ನ ಕೈಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದ ಅನುಮಾನಾಸ್ಪದ ಬಾಕ್ಸ್ ಪತ್ತೆ ವಿಚಾರವಾಗಿ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ಬಾಕ್ಸ್ ಪತ್ತೆ ಹಚ್ಚಿದ್ದಾರೆ. ಬಕೆಟ್ ಆಕಾರದಲ್ಲಿ ಸ್ಫೋಟಕ ವಸ್ತು ಇತ್ತು. ಅದರಲ್ಲಿ ಸಣ್ಣಸಣ್ಣ ಬಾಕ್ಸ್ ಇಡಲಾಗಿದ್ದು, ಅವುಗಳಲ್ಲಿ ನಿಂಬೆಹಣ್ಣು ತರದ ವಸ್ತು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸ್ಫೋಟಕಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದ್ದು, ಯುವಕ ಹುಸೇನ್‍ಸಾಬ್ ಅದನ್ನು ತೆಗೆಯಲು ಹೋದಾಗ ಸ್ಫೋಟವಾಗಿದೆ. ಆತನಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ವಿಜಯವಾಡದ ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆ ಬಾಕ್ಸ್ ಮೇಲೆ ಗಾರ್ಗೋಟಿ ಶಾಸಕ ಹೆಸರು ಬರೆಯಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕ ಸಾಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

    ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಪೊಲೀಸರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ತನಿಖೆ ಮಾಡುತ್ತೇವೆ. ಬಾಂಬ್ ನಿಷ್ಕ್ರಿಯ ದಳ ಹುಬ್ಬಳ್ಳಿಗೆ ಬಂದಿದ್ದು, ಬಾಂಬ್‍ಗಳನ್ನು ನಿಷ್ಕ್ರಿಯಗೊಳಿಸಲಿದ್ದಾರೆ. ಹುಬ್ಬಳ್ಳಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

  • ಭಿಕ್ಷುಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ

    ಭಿಕ್ಷುಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ

    ಮುಂಬೈ: ಭಿಕ್ಷುಕರೊಬ್ಬರು ಸಾವನ್ನಪ್ಪಿದ ಕುರಿತು ತಿಳಿಸಲು ಅವರ ಮನೆಗೆ ತೆರಳಿದ ಪೊಲೀಸರು ಹೌಹಾರಿದ್ದು, ಸಣ್ಣ ಗುಡಿಸಲಲ್ಲಿ ಲಕ್ಷಾಂತರ ರೂ. ನಾಣ್ಯಗಳನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

    ಶುಕ್ರವಾರ ರಾತ್ರಿ ಗೋವಂಡಿ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗದ ರೈಲಿಗೆ ಡಿಕ್ಕಿ ಹೊಡೆದು ಬಿಕ್ಷುಕ ಬಿರ್ಭಿಚಂದ್ ಆಜಾದ್(62) ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅವರ ಸಂಬಂಧಿಕರು ಹಾಗೂ ಇತರ ಭಿಕ್ಷುಕರಿಗೆ ತಿಳಿಸಲು ಗೀವಾಂಡಿ ರೈಲು ನಿಲ್ದಾಣದ ಬಳಿಯ ಅವರ ಗುಡಿಸಲಿಗೆ ತೆರಳಿದ ರೈಲ್ವೆ ಪೊಲೀಸರ ತಂಡಕ್ಕೆ ಫುಲ್ ಶಾಕ್ ಆಗಿದೆ. ಇದನ್ನೂ ಓದಿ: 10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ

    ಭಿಕ್ಷುಕನ ಗುಡಿಸಲನ್ನು ಪ್ರವೇಶಿಸಿದ ನಂತರ ಯಾರೂ ಇಲ್ಲದ್ದನ್ನು ಕಂಡು ಪೊಲೀಸರು ಒಳಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಅಷ್ಟು ಸಣ್ಣ ಗುಡಿಸಲಲ್ಲಿಯೇ ಹತ್ತಾರು ಗನ್ನಿ ಬ್ಯಾಗ್‍ಗಳಲ್ಲಿ ಲಕ್ಷಾಂತರ ರೂ. ನಾಣ್ಯಗಳಿರುವುದು ಪೊಲೀಸರಿಗೆ ಕಂಡು ಬಂದಿದೆ. ಎಣಿಸಲು ಕುಳಿತ ಪೊಲೀಸರು ನಿಬ್ಬೆರಗಾಗಿದ್ದು, ಒಟ್ಟು 1.77 ಲಕ್ಷ ರೂ. ಸಿಕ್ಕಿದೆ.

    ಗುಡಿಸಲಿನಲ್ಲಿಟ್ಟಿದ್ದ ನಾಣ್ಯಗಳನ್ನು ಎಣಿಸಲು ಪೊಲೀಸರು ಸುಮಾರು 8 ಗಂಟೆಯನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲದೆ ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 8.77 ಲಕ್ಷ ರೂ. ಮೌಲ್ಯದ ಎಫ್‍ಡಿ(ಫಿಕ್ಸಡ್ ಡಿಪಾಸಿಟ್) ಇಟ್ಟಿರುವ ರಶೀದಿಯನ್ನು ಗಮನಿಸಿದ ನಂತರ ಪೊಲೀಸರ ತಂಡ ಇನ್ನೂ ಆಘಾತಕ್ಕೊಳಗಾಗಿದೆ.

    ಆಜಾದ್ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಸಿನಿಯರ್ ಸಿಟಿಜನ್ ಕಾರ್ಡ್‍ಗಳನ್ನು ಪೊಲೀಸ್ ತಂಡ ರಾಜಸ್ತಾನದಲ್ಲಿ ಪತ್ತೆ ಮಾಡಿದೆ. ಆತನ ಕುಟುಂಬವನ್ನು ಪತ್ತೆ ಹಚ್ಚಲು ರಾಜಸ್ಥಾನಕ್ಕೆ ತೆರಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಜಾದ್ ಅವರ ದೇಹ ಮತ್ತು ವಸ್ತುಗಳನ್ನು ಅವರ ಸಂಬಂಧಿಕರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಜಾದ್ ಭಿಕ್ಷುಕರಾಗಿದ್ದು, ಹಲವು ವರ್ಷಗಳಿಂದ ಮುಂಬೈನಲ್ಲೇ ವಾಸಿಸುತ್ತಿದ್ದಾರೆ ಎಂದು ಅಲ್ಲಿನ ವ್ಯಾಪಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಅ.2ರಿಂದ ರೈಲ್ವೆ ಇಲಾಖೆಯಿಂದ ಪ್ಲಾಸ್ಟಿಕ್ ಬ್ಯಾನ್

    ಅ.2ರಿಂದ ರೈಲ್ವೆ ಇಲಾಖೆಯಿಂದ ಪ್ಲಾಸ್ಟಿಕ್ ಬ್ಯಾನ್

    ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‍ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳು ವ್ಯಾಪಕವಾಗಿ ಬಳಕೆಯಲ್ಲಿದ್ದು, ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

    ಇದರ ಭಾಗವಾಗಿ ಭಾರತೀಯ ರೈಲ್ವೆ ತನ್ನ ವ್ಯಾಪ್ತಿಯಲ್ಲಿ ಒಂದು ಬಾರಿ ಬಳಸುವ(ಸಿಂಗಲ್ ಯುಸ್) ಪ್ಲಾಸ್ಟಿಕ್ ಪರಿಕರಗಳನ್ನು ನಿಷೇಧಿಸಲು ನಿರ್ಧರಿಸಿದ್ದು, ಈ ನಿಯಮ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ.

    ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಮರು ಬಳಕೆಗಾಗಿ ಈಗಾಗಲೇ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲಿ 360 ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಟ್ಟು 1,853 ಪ್ಲಾಸ್ಟಿಕ್ ವಾಟರ್ ಬಾಟಲ್‍ಗಳನ್ನು ಪುಡಿ(ಪ್ಲಾಸ್ಟಿಕ್ ವಾಟರ್ ಬಾಟಲ್ ಕ್ರಶಿಂಗ್ ಮಷಿನ್) ಮಾಡುವ ಯಂತ್ರಗಳನ್ನು ಅಳವಡಿಸಿದೆ. ಆದರೂ ಸಹ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಕ್ರಮಕ್ಕೆ ಮುಂದಾಗಿದೆ.

    ಇದೀಗ ರೈಲ್ವೆ ಮಂಡಳಿ ಐಆರ್‍ಸಿಟಿಸಿ(ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಡೆವಲಪ್‍ಮೆಂಟ್ ಕಾರ್ಪೋರೇಷನ್)ಗೆ ತಿಳಿಸಿದ್ದು, ಬಳಸಿದ ನಂತರ ಬಾಟಲಿಗಳನ್ನು ಸಂಸ್ಥೆಯಿಂದಲೇ ಮರಳಿ ಪಡೆಯಬೇಕೆಂದು ಸೂಚಿಸಿದೆ.

    ಝೋನಲ್ ರೈಲ್ವೆ ಹಾಗೂ ಉತ್ಪಾದನಾ ಘಟಕಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಪ್ಪಿಸಲು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರು ಬಳಕೆ ಮಾಡುವುದು ಹಾಗೂ ಪ್ಲಾಸ್ಟಿಕ್ ತಿರಸ್ಕರಿಸುವ ಮೂರು ಸೂತ್ರಗಳನ್ನು ರಚಿಸಲಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಹೊರತುಪಡಿಸಿ ಮರು ಬಳಕೆ ಮಾಡಬಹುದಾದ ಕಡಿಮೆ ಬೆಲೆಯ ಚೀಲಗಳನ್ನು ಬಳಸುವಂತೆ ಜನರಿಗೆ ತಿಳುವಳಿಕೆ ನೀಡುವಂತೆ ಪ್ರಧಾನ ವ್ಯವಸ್ಥಾಪಕರು ರೈಲ್ವೆ ನೌಕರರಿಗೆ ಸೂಚನೆ ನೀಡಿದ್ದಾರೆ.

    ಭಾರತೀಯ ರೈಲ್ವೆಯು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅನುಸರಿಸುತ್ತಿದ್ದು, ಪ್ಲಾಸ್ಟಿಕ್ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡಲು, ಅಲ್ಲದೆ ಪ್ಲಾಸ್ಟಿಕ್‍ನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

  • ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರ ತೊಂದರೆಯನ್ನು ಆಲಿಸಿದ ಸುರೇಶ್ ಅಂಗಡಿ – ವಿಡಿಯೋ

    ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರ ತೊಂದರೆಯನ್ನು ಆಲಿಸಿದ ಸುರೇಶ್ ಅಂಗಡಿ – ವಿಡಿಯೋ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೋದಿ ಸಚಿವ ಸಂಪುಟದಲ್ಲಿ ನೂತನ ರಾಜ್ಯ ರೈಲ್ವೇ ಸಚಿವರಾದ ಸುರೇಶ್ ಅಂಗಡಿ ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರ ಸಮಸ್ಯೆ ಅಲಿಸಿದ್ದಾರೆ.

    ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರ ಸಮಸ್ಯೆಗಳನ್ನು ಅಲಿಸಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಆದಷ್ಟೂ ಬೇಗ ಪರಿಹಾರ ನೀಡುತ್ತೇವೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.

    https://twitter.com/AngadiMp/status/1135609308190715904

    ಇಂದು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸುರೇಶ್ ಅಂಗಡಿಯವರು, ಆ ರೈಲು ನಿಲ್ದಾಣದ ಆಡಳಿತ ವ್ಯವಸ್ಥೆ ಮತ್ತು ಕುಂದು ಕೊರೆತಗಳ ಬಗ್ಗೆ ಪರಿಶೀಲನೆ ಮಾಡಿ. ಅಲ್ಲಿನ ರೈಲ್ವೇ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆದಿದರು. ನಿಲ್ದಾಣದಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ಪಡೆದ ಅಂಗಡಿ ಅವರು ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ತಿಳಿಸಿದರು.

  • ವೈರಲ್ ವಿಡಿಯೋ ನೋಡಿ ರೈಲು ನಿಲ್ದಾಣದಲ್ಲಿ ಬ್ಯಾನ್ ಆಯ್ತು ನಿಂಬೆ ಜ್ಯೂಸ್!

    ವೈರಲ್ ವಿಡಿಯೋ ನೋಡಿ ರೈಲು ನಿಲ್ದಾಣದಲ್ಲಿ ಬ್ಯಾನ್ ಆಯ್ತು ನಿಂಬೆ ಜ್ಯೂಸ್!

    ಮುಂಬೈ: ಕಲುಷಿತ ನೀರನ್ನು ಬಳಿಸಿ ತಯಾರಾಗುತ್ತಿದ್ದ ನಿಂಬೆ ಹಣ್ಣಿನ ಜ್ಯೂಸ್ ಹಾಗೂ ಇತರೇ ಪಾನೀಯಗಳ ವಿಡಿಯೋ ವೈರಲ್ ಆದ ಬಳಿಕ, ಎಚ್ಚೆತ್ತುಕೊಂಡ ಕೇಂದ್ರ ರೈಲ್ವೇ ಇಲಾಖೆ ಮುಂಬೈ ರೈಲು ನಿಲ್ದಾಣದಲ್ಲಿ ಇನ್ಮುಂದೆ ಈ ರೀತಿ ಪಾನೀಯಗಳನ್ನು ಮಾರುವಂತಿಲ್ಲಾ ಎಂದು ಆದೇಶ ಹೊರಡಿಸಿದೆ.

    ಮುಂಬೈನ ಕುರ್ಲಾ ರೈಲು ನಿಲ್ದಾಣದಲ್ಲಿ ಸೋಮವಾರದಂದು ವ್ಯಾಪಾರಿಯೊಬ್ಬ ಕಲುಷಿತ ಟ್ಯಾಂಕ್‍ನ ನೀರು ಬಳಸಿ, ಅದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ ಬರಿಗೈನಿಂದ ಅದನ್ನು ಕಲಸಿ ಜ್ಯೂಸ್ ಮಾಡಿ, ಬಳಿಕ ಅದನ್ನೇ ಪ್ರಯಾಣಿಕರಿಗೆ ಮಾರಾಟ ಮಾಡುತ್ತಿದ್ದ ವಿಡಿಯೋವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಡೆ ಸಖತ್ ವೈರಲ್ ಆಗಿದ್ದು, ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರೈಲ್ವೇ ಇಲಾಖೆ ನಿಲ್ದಾಣದಲ್ಲಿ ಶೇಖರಿಸಿಟ್ಟಿದ್ದ ಹಣ್ಣಿನ ರಸ ಬಳಸಿ ತಯಾರಾಗುವ ತಂಪು ಪಾನೀಯಗಳನ್ನು ನಿಷೇಧಿಸಿದೆ.

    ಸದ್ಯ ರೈಲು ನಿಲ್ದಾಣದಲ್ಲಿ ಶೇಖರಿಸಿಟ್ಟಿದ್ದ ಹಣ್ಣಿನ ರಸ ಬಳಸಿ ತಯಾರಾಗುವ ಜ್ಯೂಸ್‍ಗಳ ಮೇಲೆ ಮಾತ್ರ ನಿಷೇಧ ಹೇರಲಾಗಿದೆ. ಆದ್ರೆ ರೈಲ್ವೇ ನಿಲ್ದಾಣದಲ್ಲಿ ತಾಜಾ ಹಣ್ಣುಗಳ ಜ್ಯೂಸ್ ತಯಾರಕರು ತಮ್ಮ ವ್ಯಾಪಾರವನ್ನು ಮುಂದುವರಿಸುವಂತೆ ಸೂಚಿಸಿದೆ. ಹಾಗೆಯೇ ಪ್ರಯಾಣಿಕರಿಗೆ ಸ್ವಚ್ಛ ಹಾಗೂ ಶುಚಿಯಾದ ಸೇವೆ ನೀಡದಿದ್ದಲ್ಲಿ, ತಾಜಾ ಜ್ಯೂಸ್ ವ್ಯಾಪಾರಿಗಳ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸದ್ಯ ವಿಡಿಯೋದಲ್ಲಿ ಸೆರೆಯಾಗಿರುವ ಜ್ಯೂಸ್ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    https://www.youtube.com/watch?time_continue=1&v=_KLr80FgBCQ

  • ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೊರಟಿದ್ದ 10 ಬಿಎಸ್‍ಎಫ್ ಯೋಧರು ನಾಪತ್ತೆ!

    ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೊರಟಿದ್ದ 10 ಬಿಎಸ್‍ಎಫ್ ಯೋಧರು ನಾಪತ್ತೆ!

    ಲಕ್ನೋ: ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದ 83 ಜನ ಬಿಎಸ್‍ಎಫ್ ಯೋಧರ ಪೈಕಿ 10 ಮಂದಿ ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

    ಯೋಧರು ಸಾಂಬಾ ಸೆಕ್ಟರ್ ನಿಂದ ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದು, ಬರ್ಧಮನ್ ಮತ್ತು ಧನ್ ಬಾದ್ ರೈಲು ನಿಲ್ದಾಣಗಳ ಮಧ್ಯೆ ಕಾಣೆಯಾಗಿದ್ದಾರೆ. ಈ ಕುರಿತಂತೆ ಅವರ ಸೇನಾ ಕಮಾಂಡರ್ ಮುಘಲ್ ಸರಾಯ್ ಸರ್ಕಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. 10 ಜನ ಬಿಎಎಸ್‍ಎಫ್ ಯೋಧರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಎಫ್‍ಐಆರ್  ನಲ್ಲಿ ಉಲ್ಲೇಖಿಸಲಾಗಿದೆ.

    ಪಶ್ಚಿಮ ಬಂಗಾಳದಿಂದ 83 ಜನ ಬಿಎಸ್‍ಎಫ್ ಸೈನಿಕರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಅವರಲ್ಲಿ 10 ಜನ ಸೈನಿಕರು ಹೇಗೋ ಧನ್ ಬಾದ್ ಮತ್ತು ಬರ್ಧಮಾನ್ ರೈಲ್ವೆ ನಿಲ್ದಾಣದ ಮಧ್ಯೆ ಅವರ ಕಮಾಂಡರ್ ಗೆ ತಿಳಿಸದೇ ಕಾಣೆಯಾಗಿದ್ದಾರೆ.

    ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಘಲ್ ಸರಾಯ್ ಪೊಲೀಸ್ ಇನ್ಸ್ ಪೆಕ್ಟರ್ ಜಿತೇಂದ್ರಕುಮಾರ್ ಯಾದವ್ ಸೈನಿಕರು ಕಣ್ಮರೆಯಾದ ಕುರಿತು ಮಾಹಿತಿ ತಿಳಿದಿದೆ. ಈ ಕುರಿತಂತೆ ಪರಿಶೀಲನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

    ಸಾಂಬಾ ಸೆಕ್ಟರ್ ನಿಂದ 83 ಸೈನಿಕರನ್ನೊಳಗೊಂಡ ವಿಶೇಷ ರೈಲು ಹೊರಟಿತ್ತು. ಆದರೆ ಮುಘಲ್ ಸರಾಯ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ 10 ಜನ ಸೈನಿಕರು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

  • ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಪೊಲೀಸ್ ಪೇದೆಯಿಂದ ಹಲ್ಲೆ

    ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಪೊಲೀಸ್ ಪೇದೆಯಿಂದ ಹಲ್ಲೆ

    ಬಾಗಲಕೋಟೆ: ಇಲ್ಲಿನ ರೈಲು ನಿಲ್ದಾಣದಲ್ಲಿ ಮಲಗಿದ್ದ ಕಾರಣಕ್ಕೆ ಪೊಲೀಸ್ ಪೆದೆಯೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ.

    ರಾಘವೇಂದ್ರ ಗೋಕಾಕ್ ಎಂಬ ವ್ಯಕ್ತಿ ರೈಲು ನಿಲ್ದಾಣದಲ್ಲಿ ಮಲಗಿದ್ದರು. ಈ ವೇಳೆ ಪೊಲೀಸ್ ಪೇದೆ ಅರುಣ್ ಕುಮಾರ್ ಹಲ್ಲೆ ಮಾಡಿದ್ದಾನೆ. ಇದರಿಂದ ರಾಘವೇಂದ್ರರ ಮೊಣಕೈಗೆ ಗಾಯವಾಗಿದೆ. ಕೂಡಲೇ ಆಂಬುಲೆನ್ಸ್ ಮೂಲಕ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಗದಗ ಮೂಲದವರಾಗಿರೋ ರಾಘವೇಂದ್ರ, ಪತ್ನಿ ಮತ್ತು ಮಗಳ ಜೊತೆ ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದರು. ಅಲ್ಲದೇ ಅವರ ಹತ್ತಿರ ಯಾವುದೇ ಟಿಕೆಟ್ ಕೂಡ ಇರಲಿಲ್ಲ. ಆದ್ದರಿಂದ ನಿಲ್ದಾಣದಿಂದ ಎದ್ದು ಹೋಗುವಂತೆ ಪೇದೆ ಅರುಣ್ ಕುಮಾರ್, ರಾಘವೇಂದ್ರನಿಗೆ ಹೇಳಿದ್ದಾನೆ. ತನ್ನ ಮಾತನ್ನು ರಾಘವೇಂದ್ರ ಕೇಳದಿದ್ದಾಗ ಪೇದೆ ಲಾಟಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.

     

    ಇದನ್ನು ಕಂಡ ರೈಲ್ವೇ ನಿಲ್ದಾಣದಲ್ಲಿನ ಇತರೆ ಪ್ರಯಾಣಿಕರು ಪೇದೆ ಅರುಣ್ ಕುಮಾರ್ ನನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ರೈಲ್ವೇ ಇಲಾಖೆ ಪಿಎಸ್ ಐ ಕೃಷ್ಣಮೂರ್ತಿ ಅವರಿಗೆ ರಾಘವೇಂದ್ರನ ಚಿಕಿತ್ಸೆಯನ್ನು ನೀವೇ ಭರಿಸಬೇಕೆಂದು ಸೂಚಿಸಿದ್ದಾರೆ.

    ರಾಘವೇಂದ್ರ ಕಳೆದ ಒಂದು ವಾರದಿಂದ ರೈಲ್ವೇ ನಿಲ್ದಾಣದಲ್ಲೇ ಪತ್ನಿ ಮತ್ತು ಮಗಳ ಜೊತೆ ಮಲಗುತ್ತಿದ್ದರು ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ. ಸದ್ಯ ಗಾಯಗೊಂಡ ರಾಘವೇಂದ್ರರ ಮೊಣಕೈ ಸ್ವಲ್ಪ ಬಾವು ಬಂದಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.