Tag: ರೈಲು ಚಾಲಕ

  • ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ರು ಹಳಿಯಲ್ಲಿ ನಿಂತಿದ್ರು – ಧರ್ಮೇಗೌಡ್ರ ಸಾವಿನ ಬಗ್ಗೆ ರೈಲು ಚಾಲಕ ಹೇಳಿದ್ದೇನು?

    ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ರು ಹಳಿಯಲ್ಲಿ ನಿಂತಿದ್ರು – ಧರ್ಮೇಗೌಡ್ರ ಸಾವಿನ ಬಗ್ಗೆ ರೈಲು ಚಾಲಕ ಹೇಳಿದ್ದೇನು?

    ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ರೈಲು ಚಾಲಕ ಅವರ ಸಾವಿನ ರಹಸ್ಯವನ್ನು ತಿಳಿಸಿದ್ದಾರೆ.

    ರೈಲು ಚಾಲಕ ಸಿದ್ದರಾಮ್ ಅವರು ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಧರ್ಮೇಗೌಡರಿಗೆ ಡಿಕ್ಕಿ ಹೊಡೆದಿದ್ದು ಜನ ಶತಾಬ್ದಿ ರೈಲು ಅನ್ನೋದು ಕನ್ಫರ್ಮ್ ಆಗಿದೆ.

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರದ ಬಳಿ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನಿಂತಿದ್ದರು. ಹಳಿ ಮೇಲೆ ರೈಲಿಗೆ ನೇರಾ-ನೇರ ನಿಂತಿರುವುದು ಕಾಣಿಸಿತ್ತು. ರೈಲು ವೇಗವಾಗಿದ್ದ ಕಾರಣ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

    ನಡೆದಿದ್ದೇನು..?
    ಎಸ್.ಎಲ್ ಧರ್ಮೇಗೌಡ ಅವರು ಸೋಮವಾರ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಅವರು, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು, ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

    ನಂತರ ಜನಶತಾಬ್ದಿ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿತ್ತು. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ ವಿಚಾರ, ಹಣಕಾಸು ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದರು. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದರು.

  • ಚಲಿಸುತ್ತಿದ್ದ ರೈಲು ನಿಲ್ಲಿಸಿ 4ರ ಬಾಲಕನ ಜೀವ ಉಳಿಸಿದ ಚಾಲಕ

    ಚಲಿಸುತ್ತಿದ್ದ ರೈಲು ನಿಲ್ಲಿಸಿ 4ರ ಬಾಲಕನ ಜೀವ ಉಳಿಸಿದ ಚಾಲಕ

    ಪಣಜಿ: ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿ ಚಾಲಕರೊಬ್ಬರು ಹಳಿ ಮೇಲೆ ಬಂದ 4 ವರ್ಷದ ಬಾಲಕನ ಜೀವವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಗೋವಾದ ಬಲ್ಲಿ ಮತ್ತು ಮಾರ್ಗೋವಾ ರೈಲ್ವೇ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ಸೋಮವಾರ ನಾಲ್ಕು ವರ್ಷದ ಬಾಲಕನೊಬ್ಬನು ರೈಲಿನ ಹಳಿ ಮೇಲೆ ಓಡಾಡುತ್ತಿದ್ದನು. ರೈಲು ಬರುತ್ತಿದ್ದರೂ ಏನು ಅರಿಯದೆ ಬಾಲಕ ಹಳಿಗಳ ಮೇಲೆ ಬಂದಿದ್ದಾನೆ. ಈ ವೇಳೆ ಪರ್ನೆಮ್-ಕಾರವಾರ ರೈಲಿನ ಚಾಲಕ ಸುರೇಶ್ ಬಾಲಕನ್ನು ದೂರದಿಂದಲೇ ಗಮನಿಸಿ ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಒಂದು ಪುಟ್ಟ ಜೀವ ಉಳಿದುಕೊಂಡಿದೆ.

    ರೈಲು ನಿಲ್ಲಿಸಿದ ಬಳಿಕ ಸ್ವಲ್ಪವೇ ಅಂತರದಲ್ಲಿದ್ದ ಮಗುವನ್ನು ಚಾಲಕ ಓಡಿ ಹೋಗಿ ರಕ್ಷಿಸಿದ್ದಾರೆ. ಬಳಿಕ ಚಾಲಕ ಬಲ್ಲಿ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಬಳಿ ಮಗುವನ್ನು ಕೊಟ್ಟು, ಪೋಷಕರಿಗೆ ಒಪ್ಪಿಸುವಂತೆ ಹೇಳಿ, ನಂತರ ತಮ್ಮ ಕೆಲಸಕ್ಕೆ ಹಿಂತಿರುಗಿದ್ದಾರೆ.

    ಪೋಷಕರಿಂದ ತಪ್ಪಿಸಿಕೊಂಡಿದ್ದ ಈ ಮಗುವನ್ನು ರೈಲ್ವೇ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸರು ವಿಚಾರಣೆ ನಡೆಸಿ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ್ದು, ಬಿಹಾರ್ ಮೂಲದವರಾದ ಮಗುವಿನ ಹೆತ್ತವರು ಬಲ್ಲಿಯಲ್ಲಿ ವಾಸವಾಗಿದ್ದಾರೆ ಎಂದು ವಿಚಾರಣೆ ಬಳಿಕ ತಿಳಿದುಬಂದಿದೆ. ಸದ್ಯ ಬಾಲಕನನ್ನು ಹೆತ್ತವರ ಮಡಿಲಿಗೆ ಪೊಲೀಸರು ಸುರಕ್ಷಿತವಾಗಿ ಸೇರಿಸಿದ್ದಾರೆ. ಹಾಗೆಯ ರೈಲು ಚಾಲಕನ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ರೈಲು ಚಾಲಕ!

    ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ರೈಲು ಚಾಲಕ!

    ದಾವಣಗೆರೆ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ರೈಲು ಚಾಲಕನೇ ರಕ್ಷಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಪಟ್ಟಣದ ಬಳಿ ನಡೆದಿದೆ.

    ಇಂದು ಬೆಳಗಿನ ಜಾವ ಬೆಂಗಳೂರು- ಧಾರವಾಡ ಸಿದ್ದಗಂಗಾ ಎಕ್ಸ್ ಪ್ರೆಸ್ ರೈಲಿಗೆ ವ್ಯಕ್ತಿಯೊಬ್ಬ ತಲೆ ಕೊಟ್ಟು ಆತ್ಮಹತ್ಯೆಗೆ ಮುಂದಾಗಿದ್ದ. ಅನಾಮಿಕ ವ್ಯಕ್ತಿ ರೈಲ್ವೆ ಹಳಿ ಮೇಲೆ ಮಲಗಿದ್ದನ್ನು ಕಂಡು ಚಾಲಕ ರೈಲು ನಿಲ್ಲಿಸಿದ್ದಾರೆ.

    ರೈಲು ನಿಲ್ಲುವುದರೋಳಗೆ ರೈಲಿನ ಎಂಜಿನ್ ವ್ಯಕ್ತಿಯ ಮೇಲೆ ಹರಿದಿದ್ದರಿಂದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ರೈಲು ಎಂಜಿನಿನ ಮಧ್ಯಭಾಗ ಸಿಲುಕಿದ್ದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ರಕ್ಷಿಸಿದ್ದು. ಹರಿಹರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ.