Tag: ರೈತ ಸಂಪರ್ಕ ಕೇಂದ್ರ

  • ಹುಳುಹತ್ತಿದ ಕಳಪೆ ಬೀಜ ಮಾರಾಟ- ರೈತ ಸಂಪರ್ಕ ಕೇಂದ್ರದ ವಿರುದ್ಧ ಆಕ್ರೋಶ

    ಹುಳುಹತ್ತಿದ ಕಳಪೆ ಬೀಜ ಮಾರಾಟ- ರೈತ ಸಂಪರ್ಕ ಕೇಂದ್ರದ ವಿರುದ್ಧ ಆಕ್ರೋಶ

    ರಾಯಚೂರು: ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹುಳು ಹತ್ತಿದ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ವಿವಿಧ ತಾಲೂಕುಗಳ ರೈತರು ಮೋಸಹೋಗಿದ್ದಾರೆ.

    ಮಸ್ಕಿ ತಾಲೂಕಿನ ಕುಣಿಕಲ್ ಗ್ರಾಮದ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಕಡಲೇಬೀಜ ಖರೀದಿ ಮಾಡಿ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದರೂ ರೈತರ ಕಷ್ಟಕ್ಕೆ ಮಾತ್ರ ಕೊನೆಯಿಲ್ಲ. ಒಂದೆಡೆ ಭಾರೀ ಮಳೆಯಿಂದ ಜಿಲ್ಲೆಯ ರೈತರು ಹಲವು ತೊಂದರೆಗೆ ಒಳಗಾಗಿದ್ದಾರೆ. ಇನ್ನೊಂದೆಡೆ ರೈತರು ಮಳೆ ಚೆನ್ನಾಗಿ ಆಗಿದ್ದರಿಂದ ಖುಷಿಯಾಗಿ ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಕಳಪೆ ಹಾಗೂ ಹುಳು ಹತ್ತಿದ ಬೀಜಗಳನ್ನು ರೈತರಿಗೆ ಮಾರಾಟ ಮಾಡಲಾಗಿದೆ. ಅದೇ ಬೀಜ ಬಿತ್ತನೆ ಮಾಡಿ ರೈತರು ದಿಕ್ಕೆಟ್ಟಿದ್ದಾರೆ.

    4,500 ರೂಪಾಯಿ ನೀಡಿ ಖರೀದಿ ಮಾಡಿದ ಕಡಲೆ ಬೀಜದಲ್ಲಿ ಬರೀ ಹುಳುಗಳು ತುಂಬಿ ಹೋಗಿವೆ. ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರದಿಂದ ತಂದಿರುವ ಬೀಜದಲ್ಲಿ ಹುಳುಗಳನ್ನು ನೋಡಿದ ಕೆಲ ರೈತರು ಕಂಗಾಲಾಗಿದ್ದರು. ಆದರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಬಿತ್ತನೆ ಮಾಡಿ ಏನೂ ಆಗುವುದಿಲ್ಲ ಎಂದು ಹೇಳಿದ್ದರಿಂದ ರೈತರು ಹುಳು ತಿಂದಿರುವ ಕಡಲೆ ಬೀಜಗಳನ್ನೇ ಬಿತ್ತನೆ ಮಾಡಿ ಮೋಸಹೋಗಿದ್ದಾರೆ. ಈಗ ಬೀಜಗಳು ಮೊಳಕೆ ಬಾರದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

    ಜಮೀನಿಗೆ ಖರ್ಚುಮಾಡಿದ ಹಣವೂ ಹೋಯಿತು, ಇತ್ತ ಬೆಳೆಯೂ ಇಲ್ಲದ ಪರಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

  • ರೈತ ಸಂಪರ್ಕ ಕೇಂದ್ರ ತೆರೆಯದ ಮೂವರು ಅಧಿಕಾರಿಗಳ ಅಮಾನತು

    ರೈತ ಸಂಪರ್ಕ ಕೇಂದ್ರ ತೆರೆಯದ ಮೂವರು ಅಧಿಕಾರಿಗಳ ಅಮಾನತು

    ಬೆಂಗಳೂರು: ರೈತ ಸಂಪರ್ಕ ಕೇಂದ್ರಗಳನ್ನು ತೆರೆಯದೆ ಕರ್ತವ್ಯ ಲೋಪ ಎಸಗಿರುವ ಹಿನ್ನಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಸೂಚನೆ ಮೇರೆಗೆ ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

    ಲಾಕ್‍ಡೌನ್‍ನಿಂದ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮಾರ್ಚ್ 30 ಹಾಗೂ ಏಪ್ರಿಲ್ 2ರಂದು ರೈತ ಸಂಪರ್ಕ ಕೇಂದ್ರಗಳು, ಕೃಷಿ ಪರಿಕರ ಮಾರಾಟ ಮಳಿಗೆಗಳು ಮತ್ತು ಕೃಷಿ ಯಂತ್ರಧಾರೆಗಳನ್ನು ತೆರೆದು ರೈತರಿಗೆ ಅಗತ್ಯ ಸೇವೆಯನ್ನು ಒದಗಿಸಲು ಸುತ್ತೋಲೆ ಮೂಲಕ ಸೂಚಿಸಲಾಗಿರುತ್ತದೆ. ಸಚಿವರ ಸೂಚನೆ ಹಾಗೂ ಇಲಾಖೆಯ ಸುತ್ತೋಲೆ ಸೂಚನೆಯಿದ್ದಾಗ್ಯೂ ಸಹ ದೇವನಹಳ್ಳಿ ಕಸಬಾ ರೈತ ಸಂಪರ್ಕ ತೆರೆಯದಿರುವ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ದೂರು ಬಂದಿರುತ್ತದೆ.

    ಈ ದೂರನ್ನಾಧರಿಸಿ ಸಚಿವರು ಕೃಷಿ ನಿರ್ದೇಶಕರಿಗೆ ಈ ರೈತ ಸಂಪರ್ಕ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿರುತ್ತಾರೆ. ಅದರಂತೆ ದೇವನಹಳ್ಳಿ ಕಸಬಾ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ನಿರ್ದೇಶಕರಾದ ಶ್ರೀನಿವಾಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಎರಡು ದಿನಗಳಿಂದ ರೈತ ಸಂಪರ್ಕ ಕೇಂದ್ರ ತೆರೆಯದಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಕೃಷಿ ನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದ್ದು, ರೈತ ಸಂಪರ್ಕ ಕೇಂದ್ರ ತೆರೆಯದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೃಷಿ ಆಯುಕ್ತರಿಗೆ ಸೂಚನೆ ನೀಡಿರುತ್ತಾರೆ.

    ಅದರಂತೆ ಕರ್ತವ್ಯ ಲೋಪ ಎಸಗಿದ ದೇವನಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪಮನಗೂಳಿ, ಕೃಷಿ ಅಧಿಕಾರಿ ಅರುಣ ಎನ್. ಹಾಗೂ ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ ಬಿ.ಹೆಚ್ ಈ ಮೂವರು ಅಧಿಕಾರಿಗಳನ್ನು ಏಪ್ರಿಲ್ 3 ರಂದು ಅಮಾನತುಗೊಳಿಸಲಾಗಿದೆ.

  • ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಂದ ಅಕ್ರಮ: ಶಾಸಕ ದೇವಾನಂದ ತರಾಟೆ

    ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಂದ ಅಕ್ರಮ: ಶಾಸಕ ದೇವಾನಂದ ತರಾಟೆ

    ವಿಜಯಪುರ: ರೈತ ಸಂಪರ್ಕ ಕೇಂದ್ರವೊಂದಕ್ಕೆ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರು ದಿಢೀರ್ ಭೇಟಿ ನೀಡಿದ್ದು, ಅಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.

    ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಶೋಷಣೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಶಾಸಕ ದೇವಾನಂದ ಅವರು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದು, ಅಕ್ರಮ ಅರಿತು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಬೇಕಾಗಿದ್ದ ಸಲಕರಣೆಗಳನ್ನು ಖಾಸಗಿ ಜಮೀನಿನಲ್ಲಿ ಇಡಲಾಗಿದೆ ಎನ್ನುವ ಮಾಹಿತಿಯನ್ನು ಶಾಸಕ ದೇವಾನಂದ ಪಡೆದುಕೊಂಡಿದ್ದರು. ಹೀಗಾಗಿ ಅಲ್ಲಿಗೇ ಭೇಟಿ ನೀಡಿ, ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಬೀಜ, ಔಷಧಿ ಮತ್ತು ಡೀಸೆಲ್ ಪಂಪ್‍ಸೆಟ್ ಎಂಜಿನ್ ಪತ್ತೆ ಹಚ್ಚಿದ್ದಾರೆ. ಅಧಿಕಾರಿಗಳು ಡೀಸೆಲ್ ಎಂಜಿನ್ ಯಾರಿಗೂ ಗೊತ್ತಾಗಬಾರದು ಎಂದು ಕಟ್ಟಿಗೆ ಬಾಕ್ಸ್‍ನಲ್ಲಿ ಇಟ್ಟಿದ್ದರು. ಕಟ್ಟಿಗೆ ಬಾಕ್ಸ್ ಒಡೆದು ಅಧಿಕಾರಿಗಳ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಈ ವೇಳೆ ಯಾವುದೇ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸದೇ ಇರುವುದಕ್ಕೆ ಶಾಸಕರು ಅಸಮಾಧಾನ ಹೊರಹಾಕಿದರು.

    ಅಧಿಕಾರಿಗಳ ಅಕ್ರಮ ಸಂಗ್ರಹಣೆ ಆರೋಪದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ದೇವಾನಂದ ಚವ್ಹಾಣ ಅವರು, ಅಧಿಕಾರಿಗಳ ಅಕ್ರಮದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು. ಅಲ್ಲದೇ, ಅಧಿಕಾರಿಗಳ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಶಾಸಕರು ಹೇಳಿದರು.

  • ಎತ್ತುಗಳಿಲ್ಲದೇ 2 ಎಕರೆ ಕಳೆ ತೆಗೆದ ರೈತ

    ಎತ್ತುಗಳಿಲ್ಲದೇ 2 ಎಕರೆ ಕಳೆ ತೆಗೆದ ರೈತ

    ಕೊಪ್ಪಳ: ಸಾಮಾನ್ಯವಾಗಿ ಹೊಲಗಳಲ್ಲಿ ಕಳೆ ತಗೆಯಲು ಎತ್ತುಗಳು ಬೇಕು. ಆದರೆ ರೈತರೊಬ್ಬರು ಎತ್ತುಗಳಿಲ್ಲದೆ ಬೆಳೆಗಳ ಮಧ್ಯೆ ಬೆಳೆದ ಕಳೆಯನ್ನ ತೆಗೆದಿದ್ದಾರೆ

    ಹೌದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ರೈತ ಶಿವಾನಂದ ಕರೆಯಣ್ಣವರ ಎತ್ತುಗಳಿಲ್ಲದೆ ಕಳೆ ತೆಗೆದಿದ್ದಾರೆ. ಕೃಷಿ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿರುವ ಕೈ ಚಾಲಿತ ಯಂತ್ರದಲ್ಲಿ ಶಿವಾನಂದ ತನ್ನ ಹೊಲದಲ್ಲಿ ಬೆಳೆದ ಕಳೆ ತಗೆಯಲು ಮುಂದಾಗಿದ್ದಾರೆ. ಎತ್ತುಗಳಿಲ್ಲದ ಕಾರಣ ಬಾಡಿಗೆ ಎತ್ತು ತಂದು ಕಳೆ ತಗೆಯಲು ಹಣವಿರದ ಕಾರಣ ಕೈ ಚಾಲಿತ ಯಂತ್ರದ ಮೊರೆ ಹೋಗಿದ್ದರು.

    ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಕಳೆ(ಕಸ) ತಗೆಯಲು ಎತ್ತುಗಳಿಗೆ 500 ರಿಂದ 1000 ಬಾಡಿಗೆ ನೀಡಬೇಕಾಗುತ್ತದೆ. ಬಾಡಿಗೆ ನೀಡಿದರೂ ಎತ್ತುಗಳು ಸರಿಯಾದ ಸಮಯಕ್ಕೆ ಸಿಗೋದಿಲ್ಲ. ಇದರಿಂದ ರೋಸಿಗೋದ ಶಿವಾನಂದ ಕೃಷಿ ಸಂಪರ್ಕ ಕೇಂದ್ರದ ಸಹಾಯ ಕೇಳಿದ್ದಾರೆ.

    ಅಧಿಕಾರಿಗಳು ಕೈ ಚಾಲಿತ ಯಂತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಎತ್ತುಗಳ ಬದಲಿಗೆ ಇದೆ ಒಳ್ಳೆಯದು ಅಂದುಕೊಂಡ ರೈತ ಶಿವಾನಂದ ಇದೀಗ ಕೈ ಚಾಲಿತ ಯಂತ್ರದಿಂದ ಕಳೆ ತೆಗೆದಿದ್ದಾರೆ. ಎತ್ತುಗಳಿಂದ ದಿನವಿಡಿ ಕೆಲಸ ಮಾಡಿದರೂ ಒಂದು ಎಕರೆ ಕಳೆ ತಗೆಯಲು ಸಾಧ್ಯವಿಲ್ಲ. ಆದರೆ ಈ ಯಂತ್ರದಿಂದ ಒಂದು ದಿನಕ್ಕೆ ಎರಡರಿಂದ ಮೂರು ಎಕರೆ ಕಳೆ ತಗೆಯಬಹುದು ಎಂದು ಶಿವಾನಂದ ಹೇಳಿದ್ದಾರೆ.