Tag: ರೈತ ಸಂಘ

  • ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ- ತಿರುಗಿ ಬಿದ್ದ ರೈತ ಸಂಘದ ರಾಜ್ಯಾಧ್ಯಕ್ಷ

    ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ- ತಿರುಗಿ ಬಿದ್ದ ರೈತ ಸಂಘದ ರಾಜ್ಯಾಧ್ಯಕ್ಷ

    – ಹಸಿರು ಟವಲ್ ಹಾಕಿ, ಆಟವಾಡಿ ರೈತರಿಗೆ ಅವಮಾನ ಮಾಡಬೇಡಿ

    ಮೈಸೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿರುಗಿ ಬಿದ್ದಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ. ನೀವು ಸಾರಿಗೆ ನೌಕರರ ಪರ ಹೋರಾಟ ಮಾಡಿ. ಆದರೆ ಹಸಿರು ಟವಲ್ ಇಳಿಸಿ ಹೋರಾಟ ಮಾಡಿ. ಸುಮ್ಮನೆ ಹಸಿರು ಟವಲ್ ಹಾಕಿಕೊಂಡು ರೈತರಿಗೆ ಅವಮಾನ ಮಾಡಬೇಡಿ. ನಿಮ್ಮಿಂದ ರೈತ ಮುಖಂಡರು, ರೈತ ಸಂಘಟನೆಗಳ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಟೀಕಿಸಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಕೊಡಬೇಕಿತ್ತು. ಅದನ್ನು ಬಿಟ್ಟು ಸಾರಿಗೆ ನೌಕರರ ಜೊತೆ ಮುಷ್ಕರ ನಡೆಸಿ, ಅದನ್ನೂ ಹಳ್ಳ ಹಿಡಿಸಿದರು. ಅಲ್ಲದೆ ಇದರಿಂದ ರೈತ ಸಂಘದ ವರ್ಚಸ್ಸು ಕುಂದಿದೆ. ಗೌರವ ಕಡಿಮೆಯಾಗಿದೆ. ಹಸಿರು ಟವಲ್ ಹಾಕಿಕೊಂಡು ಆಟವಾಡಬೇಡಿ. ನಿಮಗೆ ಬದ್ಧತೆ ಇದ್ದರೆ ರೈತರ ಬಗ್ಗೆ ಆ ಕಾಳಜಿ ತೋರಿಸಿ. ಪ್ರಚಾರಕ್ಕಾಗಿ, ಬೇರೆ ಸಂಘಟನೆಗಳಲ್ಲಿ ಒಡಕು ಉಂಟುಮಾಡಲು ಈ ರೀತಿ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಮಡಿದ್ದಾರೆ.

    ರಾಜ್ಯದ ಜನ ನಾಲ್ಕು ದಿನಗಳಿಂದ ಸಂಕಷ್ಟ ಅನುಭವಿಸುವುದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರ ತಪ್ಪು ನಿರ್ಧಾರಗಳೇ ಕಾರಣ. ಕೋಡಿಹಳ್ಳಿಗೆ ಸಮಸ್ಯೆಯ ಅರಿವಿಲ್ಲ ಹಾಗಾಗಿ ಅದಕ್ಕೆ ಪರಿಹಾರವೂ ಗೊತ್ತಿಲ್ಲ. ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸಿರೋದೆ ಕೋಡಿಹಳ್ಳಿ ಚಂದ್ರಶೇಖರ್. ಭಾನುವಾರ ಮುಕ್ತಾಯವಾಗಿದ್ದ ಮುಷ್ಕರವನ್ನು ಮುಂದುವರೆಸಲು ಚಿತಾವಣೆ ಮಾಡಿದ್ದೇ ಕೋಡಿಹಳ್ಳಿ. ಸಾರಿಗೆ ನೌಕರರೇ ನಿಮ್ಮ ಬಗ್ಗೆ ಜನರಿಗೆ ಸಹಾನುಭೂತಿ ಇದೆ. ಕೋಡಿಹಳ್ಳಿ ಮಾತು ಕಟ್ಟಿಕೊಂಡು ಹೋದರೆ ಅವರ ಸಂಘಟಯೇ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.

  • ಸೆ.21 ರಿಂದ ಬೆಂಗಳೂರಿನಲ್ಲಿ ರೈತರಿಂದ ಪ್ರತಿಭಟನೆ, ಅಹೋರಾತ್ರಿ ಧರಣಿ

    ಸೆ.21 ರಿಂದ ಬೆಂಗಳೂರಿನಲ್ಲಿ ರೈತರಿಂದ ಪ್ರತಿಭಟನೆ, ಅಹೋರಾತ್ರಿ ಧರಣಿ

    – ವಿಧಾನಸೌಧ ಮುತ್ತಿಗೆ ಹಾಕೋ ಎಚ್ಚರಿಕೆ

    ಶಿವಮೊಗ್ಗ: ರೈತರಿಗೆ ಮರಣ ಶಾಸನವಾಗಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ, ಜನವಿರೋಧಿ ಕಾಯ್ದೆಗಳ ವಿರೋಧಿಸಿ ಸೆ. 21 ರಿಂದ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯ ಮಹಾತ್ಮಗಾಂಧಿ ಪ್ರತಿಮೆ ಎದುರು ಆಹೋರಾತ್ರಿ ಧರಣಿ ಮತ್ತು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಎಚ್ಚರಿಸಿದೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯನ್ನೇ ಕಸಿದುಕೊಂಡಿದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ, ಕಾರ್ಪೋರೇಟ್ ಕಂಪೆನಿಗಳಿಗೆ ರತ್ನಗಂಬಳಿ ಹಾಕುವ ದೃಷ್ಟಿಯಿಂದ ಈ ಕಾಯ್ದೆ ಜಾರಿಗೆ ತರಲು ಹೊರಟಿದೆ. ಬಿಜೆಪಿ ಸರ್ಕಾರದ ಅನಾಚಾರವಿದು. ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಯಾಗಬಾರದು. ಮುಂಬರುವ ಅಧಿವೇಶನದಲ್ಲಿ ಭೂಸುಧಾರಣೆ ಕಾಯ್ದೆಯನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಸೆ.21 ರಿಂದ ಅಧಿವೇಶನ ಆರಂಭವಾಗಲಿದ್ದು, ಪ್ರಾರಂಭದ ದಿನದಿಂದಲೇ ಅಧಿವೇಶನ ಮುಗಿಯುವವರೆಗೂ ಧರಣಿ ನಡೆಸುತ್ತೇವೆ. ಭೂಸುಧಾರಣಾ ಕಾಯ್ದೆಯ ಜೊತೆಗೆ ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಕೂಡ ಹಿಂಪಡೆಯಬೇಕು. ಈ ಧರಣಿಯಲ್ಲಿ ರಾಜ್ಯದ ಲಕ್ಷಾಂತರ ರೈತರು ಭಾಗವಹಿಸಲಿದ್ದು, ಶಿವಮೊಗ್ಗ ಜಿಲ್ಲೆಯಿಂದಲೂ ಕೂಡ ಸಾವಿರಕ್ಕೂ ಹೆಚ್ಚು ರೈತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

    ಬಿಎಸ್‍ವೈ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವಾಗ ನನ್ನದು ರೈತ ಪರ ಸರ್ಕಾರ, ನಾನು ರೈತರ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ಈಗ ಮಾಡುತ್ತಿರುವುದಾದರೂ ಏನು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಶ್ರೀಮಂತರು ಭೂಮಿ ಖರೀದಿಸಿ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ಕಾಯ್ದೆಗಳನ್ನು ರೂಪಿಸುತ್ತಾ ಬಂದಿವೆ ಎಂದು ಆಪಾದಿಸಿದ್ದಾರೆ.

  • ಬೆಂಗ್ಳೂರಿಗರೆ ಗಮನಿಸಿ, ನಕಲಿ ಹಕ್ಕು ಪತ್ರ ಸೃಷ್ಟಿಸಿ ಟೋಪಿ ಹಾಕ್ತಾರೆ ಎಚ್ಚರ

    ಬೆಂಗ್ಳೂರಿಗರೆ ಗಮನಿಸಿ, ನಕಲಿ ಹಕ್ಕು ಪತ್ರ ಸೃಷ್ಟಿಸಿ ಟೋಪಿ ಹಾಕ್ತಾರೆ ಎಚ್ಚರ

    – 1 ಸಾವಿರ ಮಂದಿಯಿಂದ 15 ಸಾವಿರ ಪಡೆದು ವಂಚನೆ
    – 50 ಜನರಿಗೆ ನಕಲಿ ಹಕ್ಕು ಪತ್ರ ವಿತರಣೆ

    ಬೆಂಗಳೂರು: ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಸೈಟ್ ಹಂಚುತ್ತೇವೆ ಎಂದು ಸುಳ್ಳು ಹೇಳಿ ಹಣ ಬಾಚುತ್ತಿದ್ದ ಜಾಲವೊಂದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ವಿಜಯನಂದಸ್ವಾಮಿ ಎಂದು ಗುರುತಿಸಲಾಗಿದೆ. ಈತ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಓಪನ್ ಮಾಡಿಕೊಂಡು ಬೆಂಗಳೂರು ಮೂಲಕ ರಮೇಶ್ ಎಂಬಾತನನ್ನು ಪರಿಚಯ ಮಾಡಿಕೊಂಡು ಇಬ್ಬರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡವಾಣೆಯಲ್ಲಿ ಸೈಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ.

    ನಿಮಗೆ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಕೊಡಿಸುತ್ತೇವೆ ಎಂದು ವಿಜಯಾನಂದ ಸ್ವಾಮಿ ಮತ್ತು ರಮೇಶ್ ಜನರನ್ನು ನಂಬಿಸಿದ್ದಾರೆ. ಜೊತೆಗೆ ತನ್ನ ರೈತ ಸಂಘದ ಹೆಸರಿನಲ್ಲಿ ಸದ್ಯರನ್ನಾಗಿ ನೋಂದಾಯಿಸಕೊಳ್ಳುವುದಾಗಿ ಹೇಳಿ ಸುಮಾರು 1000 ಜನರ ಬಳಿ ತಲಾ 15 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾನೆ. ಜೊತೆಗೆ ಅವರಿಗೆ ನಿವೇಶನದ ನಕಲಿ ಹಕ್ಕು ಪತ್ರವನ್ನು ನೀಡಿದ್ದಾರೆ. ಇವನ ಮಾತು ನಂಬಿ ಸುಮಾರು ಸಾವಿರ ಜನ ಮೋಸ ಹೋಗಿದ್ದಾರೆ.

    ಅಲ್ಲದೇ ಈಗಾಗಲೇ 50 ಜನರಿಗೆ ನಕಲಿ ಹಕ್ಕು ಪತ್ರಗಳನ್ನು ಹಂಚಿದ್ದಾರೆ. ಈ ಪತ್ರದಲ್ಲಿ ಬಿಡಿಎ ನಕಲಿ ರಬ್ಬರ್ ಸ್ಟಾಂಪ್ ಹಾಕಲಾಗಿದೆ ಹಾಗೂ ಅಯುಕ್ತರ ಸಹಿಯನ್ನು ಕೂಡ ನಕಲಿ ಮಾಡಲಾಗಿದೆ. ಜನರಿಗೆ ನಿವೇಶನ ಪತ್ರ ನೀಡಿ ಅವರಿಂದ 50 ಸಾವಿರದಿಂದ 3 ಲಕ್ಷದವರೆಗೆ ಹಣ ಪಡೆದಿದ್ದಾರೆ. ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸುಮಾರು 3000 ಜನಕ್ಕೆ ಈ ರೀತಿ ಮೋಸ ಮಾಡುವ ಯೋಜನೆ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    3 ಲಕ್ಷ ಕೊಟ್ಟು ಒಟ್ಟು ಆರು ನಿವೇಶದ ನಕಲಿ ಹಕ್ಕು ಪತ್ರಗಳನ್ನು ಪಡೆದುಕೊಂಡ ವ್ಯಕ್ತಿಯೊಬ್ಬರು ಪತ್ರದ ಅಸಲೀತವನ್ನು ಚೆಕ್ ಮಾಡಲು ಬೆಂಗಳೂರು ಪ್ರಾಧಿಕಾರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಅಧಿಕಾರಿಗಳಿಗೆ ಹಕ್ಕು ಪತ್ರವನ್ನು ನೀಡಿದಾಗ ಇವು ನಕಲಿ ಪತ್ರ ಎಂದು ತಿಳಿದಿದೆ. ಆಗ ತಕ್ಷಣ ಅಧಿಕಾರಿಗಳು ಕಾರ್ಯಚರಣೆ ಇಳಿದು ನಕಲಿ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಾನಂದ ಕಚೇರಿಗೆ ದಾಳಿ ಮಾಡಿ ನಕಲಿ ಹಕ್ಕು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

  • ರೈತರನ್ನು ತಡೆದ ಪೊಲೀಸರ ವಿರುದ್ಧ ರೈತ ಸಂಘ ಆಕ್ರೋಶ

    ರೈತರನ್ನು ತಡೆದ ಪೊಲೀಸರ ವಿರುದ್ಧ ರೈತ ಸಂಘ ಆಕ್ರೋಶ

    ಮಡಿಕೇರಿ: ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್‍ಡೌನ್ ಘೋಷಿಸಿದೆ. ಆದರೆ ದೇಶದಲ್ಲಿ ಆಹಾರ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ರೈತರಿಗೆ ಕೃಷಿ ಮಾಡಲು ವಿನಾಯಿತಿ ನೀಡಲಾಗಿದೆ. ಆದರೆ ಕೆಲವೆಡೆ ಪೊಲೀಸರು ರೈತರು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಬಿಡದೆ ಸಮಸ್ಯೆ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಆನೆಚೌಕೂರಿನ ಚೆಕ್‍ಪೋಸ್ಟ್ ಇಂತಹ ಘಟನೆ ನಡೆದಿದ್ದು, ಚೆಕ್‍ಪೋಸ್ಟ್ ನಲ್ಲಿದ್ದ ಎಎಸ್‍ಐ ಒಬ್ಬರು ರೈತರು ಬೆಳೆ ಸಾಗಿಸಲು ಬಿಡದೆ ತಡೆ ಹಿಡಿದಿದ್ದಾರೆ. ರೈತರು ಮೊದಲೇ ಪಾಸ್ ಪಡೆದು ಬೆಳೆಯನ್ನು ಸಾಗಾಟ ಮಾಡುತ್ತಿದ್ದರು. ಪಾಸ್ ತಮ್ಮ ಬಳಿ ಪಾಸ್ ಇರುವುದನ್ನು ತೋರಿಸಿದರು ಕೂಡ ಸಮಸ್ಯೆ ಮಾಡಿದ್ದಾರೆ.

    ಪೊಲೀಸರ ಕ್ರಮದಿಂದ ಬೇಸತ್ತ ರೈತರು ರಾಜ್ಯ ರೈತ ಸಂಘದ ಮುಖಂಡರ ಜೊತೆ ಸೇರಿ ಸ್ಥಳದಲ್ಲೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ನಿಯಮಗಳ ಅನುಸಾರ ಹೋಗಲು ಅನುಮತಿ ಇದ್ದರೂ ಬಿಡದ ಪೊಲೀಸರನ್ನು ಸ್ಥಳದಲ್ಲೇ ಪ್ರಶ್ನೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದರು. ಆ ಬಳಿಕ ರೈತರನ್ನು ಸಮಾಧಾನ ಪಡಿಸಿ ಮತ್ತೊಮ್ಮೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ರೈತರನ್ನು ಕಳುಹಿಸಿದ್ದಾರೆ.

  • ಬಲವಂತ ಸಾಲ ವಸೂಲಾತಿಗೆ ಬಂದರೆ ಕಟ್ಟಿ ಹಾಕ್ತೀವಿ: ರೈತ ಸಂಘದ ಎಚ್ಚರಿಕೆ

    ಬಲವಂತ ಸಾಲ ವಸೂಲಾತಿಗೆ ಬಂದರೆ ಕಟ್ಟಿ ಹಾಕ್ತೀವಿ: ರೈತ ಸಂಘದ ಎಚ್ಚರಿಕೆ

    ಶಿವಮೊಗ್ಗ: ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಸಾಲ ವಸೂಲಿಗೆ ಬರುವ ಸಹಕಾರಿ ಸಂಸ್ಥೆಗಳ ಏಜೆನ್ಸಿಯವರನ್ನು ಗ್ರಾಮದಲ್ಲಿಯೇ ಕಟ್ಟಿ ಹಾಕುತ್ತೇವೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜನಪ್ಪ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸಂಸ್ಥೆಗಳಿಂದ ರೈತರು ಪಡೆದ ಸಾಲಗಳನ್ನು ಸರ್ಕಾರ ಬಲವಂತವಾಗಿ ವಸೂಲಿ ಮಾಡಲು ಆದೇಶ ನೀಡಿದೆ. ಈ ಆದೇಶವನ್ನು ರೈತ ಸಂಘ ಖಂಡಿಸುತ್ತದೆ. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿರಬಹುದು. ಆದರೆ ಸಹಕಾರಿ ಸಂಸ್ಥೆಗಳು ಕಡ್ಡಾಯ ಸಾಲ ವಸೂಲಿ ಮಾಡಿದರೆ, ಸಾಲದ ಹಣಕ್ಕಾಗಿ ರೈತರ ಟ್ರ್ಯಾಕ್ಟರ್, ಟಿಲ್ಲರ್, ಜಪ್ತಿಗೆ ಬಂದರೆ ಅಂತಹವರನ್ನು ಕಟ್ಟಿ ಹಾಕುತ್ತೇವೆ. ಅಲ್ಲದೇ ಜಪ್ತಿ ಮಾಡಿದ್ದರೆ ಅದನ್ನು ಮರು ಜಪ್ತಿ ಮಾಡುತ್ತೇವೆ. ಹೀಗಾಗಿ ಸರ್ಕಾರ ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಲೂ ಸಹಕಾರಿ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ದೀರ್ಘಾವಧಿ ಸಾಲಗಳಿಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಆದೇಶ ಹೊರಡಿಸಿದ್ದರು. ಆದರೆ ರೈತರು ಅಸಲು ಕೂಡ ಕಟ್ಟಲು ಸಾಧ್ಯವಾಗಲಿಲ್ಲ. ನಂತರ ಎಚ್.ಡಿ.ಕುಮಾರಸ್ವಾಮಿ ಸರಕಾರ ಬಂದಾಗ 1 ಲಕ್ಷದವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ ಈಗ ಅಸಲು ಮತ್ತು ಬಡ್ಡಿ ವಸೂಲಿಗೆ ಆದೇಶ ನೀಡಿರುವುದು ಖಂಡನೀಯ.

    ರೈತರು ಮೊದಲೇ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಎರಡರಿಂದಲೂ ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಸುತ್ತೋಲೆ ಹಿಂಪಡೆದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

  • ವಿಶೇಷವಾಗಿ ರೈತ ದಿನಾಚರಣೆ ಆಚರಿಸಿದ ಅನ್ನದಾತರು

    ವಿಶೇಷವಾಗಿ ರೈತ ದಿನಾಚರಣೆ ಆಚರಿಸಿದ ಅನ್ನದಾತರು

    ಚಿಕ್ಕೋಡಿ: ಕಾಯಕವೇ ಕೈಲಾಸ ಎಂಬಂತೆ ಕಬ್ಬು ನಾಟಿ ಮಾಡಿ, ಎತ್ತುಗಳೊಂದಿಗೆ ಹೊಲದಲ್ಲಿಯೇ ರೈತರ ದಿನಾಚಾರಣೆಯನ್ನು ಆಚರಿಸುವ ಮೂಲಕ ರೈತರು ಇತರರಿಗೆ ಮಾದರಿಯಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಕಬ್ಬು ನಾಟಿ ಮಾಡುವ ಮೂಲಕ ವಿಶಿಷ್ಟವಾಗಿ ರೈತ ದಿನ ಆಚರಿಸಲಾಯಿತು.

    ದಿನಾಚಣೆಯ ಅಂಗವಾಗಿ ಪಾಶ್ಚಾಪೂರೆ ಅವರ ತೋಟದಲ್ಲಿ ಎತ್ತುಗಳಿಗೆ ವಿಶೇಷ ಪೂಜೆ ಮಾಡಿ, ನಂತರ ಕಬ್ಬು ನಾಟಿ ಮಾಡಲಾಯಿತು. ಪ್ರತ್ಯೇಕ ವೇದಿಕೆ ನಿರ್ಮಿಸದೆ ನೆಲದ ಮೇಲೆಯೇ ಕುಳಿತು ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೈತ ಸಾಧಕರಾದ ಕಾಶೀನಾಥ ಪಾಶ್ಚಾಪೂರೆ, ಅಪ್ಪಾಸಾಬ ತಬಕೆರೆ, ರಾಜೇಂದ್ರ ಪಾಶ್ವಾಪೂರೆ, ಸಿದ್ಧಲಿಂಗ ಪಾಶ್ಚಾಪೂರೆ ಅವರಿಗೆ ಶಾಲು ಹೊದಿಸಿ, ಮೆಕ್ಕೆ ಜೋಳದ ತೆನೆ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ರೈತರೆಲ್ಲರೂ ನೆಲದ ಮೇಲೆಯೇ ಕುಳಿತು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    ರೈತ ದಿನಾಚರಣೆ ಎಂದು ಕೈ ಕಟ್ಟಿ ಕೂರದೆ, ದಿನಾಚರಣೆ ನೆಪದಲ್ಲಿ ಸಮಯ, ದಿನ ವ್ಯರ್ಥ ಮಾಡದೆ, ಕಾರ್ಯಕ್ರಮದ ನಂತರ ಉಳಿಮೆ ಮಾಡುವ ಕೆಲಸದಲ್ಲಿ ತೊಡಗಿದರು. ದೈನಂದಿನ ಕೆಲಸ ಮಾಡುತ್ತಲೇ ಆಚರಣೆ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

  • ಜನರನ್ನ ಸೆಳೆಯುವ ದುಂದು ವೆಚ್ಚದ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ: ಕೊಡಿಹಳ್ಳಿ ಚಂದ್ರಶೇಖರ್

    ಜನರನ್ನ ಸೆಳೆಯುವ ದುಂದು ವೆಚ್ಚದ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ: ಕೊಡಿಹಳ್ಳಿ ಚಂದ್ರಶೇಖರ್

    ಯಾದಗಿರಿ: ಸಿಎಂ ಮಾಡುತ್ತಿರುವ ಗ್ರಾಮ ವಾಸ್ತವ್ಯ ದುಂದು ವೆಚ್ಚವಾಗಿದ್ದು, ಜನರ ಗಮನವನ್ನು ತಮ್ಮತ್ತ ಸೆಳೆಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಟೀಕಿಸಿದ್ದಾರೆ.

    ಜಿಲ್ಲೆಯಲ್ಲಿ ರೈತ ಸಂಘದ ಕಚೇರಿ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಮೈತ್ರಿ ಸರ್ಕಾರ ರಾಜ್ಯದ ಜನರ ಮನಸ್ಸಿನಲ್ಲಿ ಅಸ್ಥಿರಗೊಂಡಿದೆ. ಹೀಗಾಗಿ ಜನರ ಗಮನ ಸೆಳೆಯಲು ಸಿಎಂ ಈ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಸಿಎಂ ವಿಧಾನಸೌಧಲ್ಲಿಯೇ ಕುಳಿತು ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ಕಾನೂನು ತಂದು ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಗ್ರಾಮ ವಾಸ್ತವ್ಯ ಮಾಡಿ ಜನರ ಮನಸ್ಸು ಬೇರೆ ರೀತಿಗೆ ತಿರುಗಿಸಲು ಸಿಎಂ ಮುಂದಾಗಿದ್ದಾರೆ. ಇನ್ನೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ, ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಗುಡುಗಿದರು.

    ಸಿಎಂ ಜಿಲ್ಲೆಗೆ ಗ್ರಾಮ ವಾಸ್ತವ್ಯಕ್ಕೆ ಬರುವ ದಿನ ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.

  • ಶಾಸಕರು ರೆಸಾರ್ಟಿನಲ್ಲಿ ಕಂಡರೆ ಮುಖಕ್ಕೆ ಸಗಣಿ ಎರಚುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್

    ಶಾಸಕರು ರೆಸಾರ್ಟಿನಲ್ಲಿ ಕಂಡರೆ ಮುಖಕ್ಕೆ ಸಗಣಿ ಎರಚುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್

    ರಾಯಚೂರು: ರಾಜ್ಯದ ಶಾಸಕರು ರೆಸಾರ್ಟಿನಲ್ಲಿ ತೋರಿರುವ ವರ್ತನೆಯಿಂದ ರಾಜ್ಯಕ್ಕೆ ಅಪಮಾನವಾಗಿದೆ. ಇನ್ನು ಮುಂದೆ ಶಾಸಕರು ರೆಸಾರ್ಟಿನಲ್ಲಿ ಕಂಡರೆ ರೈತ ಸಂಘದ ಮಹಿಳಾ ಕಾರ್ಯಕರ್ತರು ಸೆಗಣಿ ಮುಖಕ್ಕೆ ಎರಚಿ ಪ್ರತಿಭಟನೆ ಮಾಡುತ್ತಾರೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಶಾಸಕರ ನಡುವೆ ನಡೆದ ಗಲಾಟೆಯಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಆದರೆ ರಾಜಕೀಯ ಪಕ್ಷಗಳಿಗೆ ಇಂತಹ ಅಪಮಾನ ಯಾವುದೇ ಆಗುವುದಿಲ್ಲ. ವಿಧಾನಸೌಧ ಸೇರಿದಂತೆ ಅನೇಕ ಸಭಾಂಗಣಗಳಿದ್ದರೂ, ರೆಸಾರ್ಟಿನಲ್ಲಿ ಏನು ಚರ್ಚೆ ಮಾಡುತ್ತಾರೆ. ರಾಜಕೀಯಕ್ಕಾಗಿ ರೆಸಾರ್ಟ್ ಸಭೆ ನಡೆಸಿದರೆ ಸಂಘಟನೆಯ ಕಾರ್ಯಕರ್ತರು ನುಗ್ಗಿ ಸೆಗಣಿ ಬಳಿಯಲಿದ್ದಾರೆ. ಈ ಮೂಲಕ ಇಂತಹ ಸಭೆಗಳಿಗೆ ಇತಿಶ್ರೀ ಹಾಡುತ್ತೇವೆ ಎಂದರು.

    ಸಿಎಂ ಕುಮಾರಸ್ವಾಮಿ ಅವರೊಂದಿಗೆ ನಾಳೆ ರೈತ ಸಂಘಟನೆಗಳ ಬಜೆಟ್ ಪೂರ್ವ ಸಭೆ ನಿಗದಿಯಾಗಿದೆ. ಮುಂದಿನ ಬಜೆಟ್‍ನಲ್ಲಿ ರೈತರ ಪರ ವಿಚಾರಗಳ ಸೇರ್ಪಡೆಗೆ ಒತ್ತಾಯಿಸಲು ನಿರ್ಧಾರ ಮಾಡಿರುವುದಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಲ್ಮೀಕಿ ಸಂಘದ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

    ವಾಲ್ಮೀಕಿ ಸಂಘದ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

    ಕೋಲಾರ: ರೈತ ಸಂಘ ಹಾಗೂ ವಾಲ್ಮೀಕಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    40 ವರ್ಷದ ರಮೇಶ್ ಹಲ್ಲೆಗೊಳಗಾದ ವಾಲ್ಮೀಕಿ ಸಂಘದ ಮುಖಂಡ. ರಮೇಶ್, ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣದ ಸಂಚಾಲಕ ಹಾಗೂ ತಾಲೂಕು ವಾಲ್ಮೀಕಿ ಸಂಘದ ಉಪಾಧ್ಯಕ್ಷರಾಗಿದ್ದಾರೆ. ರಮೇಶ್ ಬೈಕ್ ಅಡ್ಡಗಟ್ಟಿದ್ದ ಅದೇ ಗ್ರಾಮದವರಾದ ವೆಂಕಟೇಶ್, ರಾಮಕೃಷ್ಣಪ್ಪ, ಶ್ರೀನಿವಾಸ್ ಎಂಬವರು ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಮಾರಣಾಂತಿಕ ಹಲ್ಲೆಗೊಳಗಾದ ರಮೇಶ್‍ರನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಗಸ್ಟ್ 2 ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳು ಬಂದ್!

    ಆಗಸ್ಟ್ 2 ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳು ಬಂದ್!

    ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ರೈತ ಸಂಘ 13 ಜಿಲ್ಲೆಗಳ ಬಂದ್ ಕರೆ ನೀಡಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೋರಾಟಗಾರರು, ಉತ್ತರ ಕರ್ನಾಟವನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ರೈತರು ಸಹ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಬಜೆಟ್‍ನಲ್ಲೂ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಲಾಗಿದೆ. ಅದ್ದರಿಂದ ಪ್ರತ್ಯೇಕ ರಾಜ್ಯ ರಚನೆ ಹೋರಾಟಕ್ಕಾಗಿ ಬೆಂಬಲ ಪಡೆಯಲು 13 ಜಿಲ್ಲೆಗಳದ್ಯಾಂತ ಸಂಚರಿಸಿ ಪ್ರತಿ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲ ಪಡೆಯಲಾಗುವುದು. ಈ ಹೋರಾಟವನ್ನು ತೀವ್ರಗೊಳಿಸಲು ಆಗಸ್ಟ್ 2 ರಂದು ಬಂದ್ ಕರೆ ನೀಡಲಾಗಿದೆ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಕಳೆದ ಎರಡು ದಿನಗಳ ಹಿಂದೆ ಪ್ರತ್ಯೇಕ ಉತ್ತರ ಕರ್ನಾಟಕ ಸ್ಥಾಪನೆ ಕುರಿತು ನೀಡಿರುವ ಹೇಳಿಕೆ ಹೆಚ್ಚು ನೋವು ತಂದಿದೆ. ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಿದರೆ ಮಾಡಿಕೊಳ್ಳಿ, ಅಭಿವೃದ್ಧಿಗೆ ಎಲ್ಲಿಂದ ಹಣ ತರುತ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಸಿಎಂ ತಮ್ಮ ಮಾತಿಗೆ ಬದ್ಧರಾಗುವ ಮೂಲಕ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಿ ಕೇಂದ್ರಕ್ಕೆ ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿ. ಈ ಕುರಿತು ಸಮೀಕ್ಷೆ ನಡೆಸಲು ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ರಾಜ್ಯ ಸರ್ಕಾರವನ್ನು ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿಕೊಳ್ಳುವುದು ಬೇಡ. ಕಳಸಾ ಬಂಡೂರಿ ಹೋರಾಟ ನಾವೇ ಮಾಡಿಕೊಳ್ಳುತ್ತೇವೆ. ಸದ್ಯ ಕರೆ ನೀಡಿರುವ ಬಂದ್ ಗೆ 13 ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ದಾವಣಗೆರೆ, ಉತ್ತರ ಕನ್ನಡ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಬಳ್ಳಾರಿ, ಗದಗ, ಹಾವೇರಿ, ಯಾದಗಿರಿ ಜಿಲ್ಲೆಗಳ ವಿವಿಧ ಮಠಾಧೀಶರು, ಸಾರ್ವಜನಿಕ ಸಂಘ ಸಂಸ್ಥೆಗಳು, ವರ್ತಕರ ಸಂಘ, ವಿದ್ಯಾರ್ಥಿ ಒಕ್ಕೂಟಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಬೇಕಾದ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಈಗಾಗಲೇ ಸುವರ್ಣಸೌಧ ನಿರ್ಮಾಣ ಮಾಡಲಾಗಿದ್ದು, ಹೈಕೋರ್ಟ್ ಪೀಠ ಸೇರದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಅನುಮತಿ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಅದ್ದರಿಂದ ರಾಜ್ಯ ಸರ್ಕಾರ ಕೇವಲ ಪ್ರಸ್ತಾವನೆ ಮಾಡಿದರೆ ಸಾಕು. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

    ಇದೇ ವೇಳೆ ಸಂಪೂರ್ಣ ಸಾಲಮನ್ನಾ ಮಾಡದ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ ಹೋರಾಟಗಾರರು, ರೈತರ ಬಗ್ಗೆ ಸಿಎಂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಲವು ರೈತ ಮಹಿಳೆಯರು ಸಹ ಸಾಲ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ತಮ್ಮ ಹೋರಾಟಕ್ಕೆ ಯಾವುದೇ ರಾಜಕೀಯ ಹೋರಾಟಗಾರರು ಬೆಂಬಲ ನೀಡಿ ಎಂದು ಬೇಡಿಕೆಯಿಟ್ಟಿಲ್ಲ, ಆದರೆ ಅವರು ನಮ್ಮೊಂದಿಗೆ ಹೋರಾಟಕ್ಕೆ ಬೆಂಬಲ ನೀಡಿದರೆ ಸ್ವಾಗತ ಎಂದು ಹೇಳಿದ್ದಾರೆ.