Tag: ರೈಡ್

  • ಶಿಕ್ಷಕರ ನೇಮಕಾತಿ ಹಗರಣ – ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

    ಶಿಕ್ಷಕರ ನೇಮಕಾತಿ ಹಗರಣ – ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.

    ಗ್ರೂಪ್ ಸಿ ಮತ್ತು ಡಿ ಸಿಬ್ಬಂದಿ, 9 ರಿಂದ 12ನೇ ತರಗತಿಗಳ ಸಹಾಯಕ ಶಿಕ್ಷಕರು ಹಾಗೂ ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಮೇರೆಗೆ ನಿನ್ನೆ ಚಟರ್ಜಿ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಇಂದು ಬಂಧನಕ್ಕೊಳಪಡಿಸಿದೆ. ಇದನ್ನೂ ಓದಿ: ಶಿವಸೇನೆಯಲ್ಲಿ ಸಿಂಬಲ್ ಫೈಟ್- ಉದ್ಧವ್, ಶಿಂಧೆ ಬಣಕ್ಕೆ ಚುನಾವಣೆ ಆಯೋಗ ನೋಟಿಸ್

    ಪ್ರಸ್ತುತ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (WBSSC) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಿರುವುದಾಗಿ ಆರೋಪಿಸಲಾಗಿದೆ.

    ನಿನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆಯೊಬ್ಬರ ಮನೆ ಮೇಲೆ ದಾಳಿ ನಡೆಸಿ, 20 ಕೋಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ಇದನ್ನೂ ಓದಿ: ಬಹುಮಾನದ ಮೊತ್ತ 85 ಸಾವಿರಕ್ಕೆ ಏರಿಸಿದ ಕೆಲವೇ ಹೊತ್ತಲ್ಲಿ ಸಿಕ್ತು ಕಳೆದು ಹೋಗಿದ್ದ ಗಿಳಿ!

    ಅರ್ಪಿತಾ ಮುಖರ್ಜಿ ಮನೆಯಿಂದ ವಶಪಡಿಸಿಕೊಳ್ಳಲಾದ 20 ಕೋಟಿ ಹಣ ಶಿಕ್ಷಕರ ನೇಮಕಾತಿ ಹಗರಣದಿಂದ ಬಂದಿರುವ ಆದಾಯ ಎಂದು ಶಂಕಿಸಲಾಗಿತ್ತು. ED ರೇಡ್ ವೇಳೆ ಅರ್ಪಿತಾ ಮನೆ ಆವರಣದಿಂದ 20ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಂಡು, ಮೊಬೈಲ್ ಫೋನ್‌ಗಳನ್ನು ಹೊಂದಿರುವ ಬಗೆಗಿನ ಉದ್ದೇಶವನ್ನೂ ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • 2 ಜಿಲ್ಲೆಯಲ್ಲಿ 11 ಸೈಟ್ ಹೊಂದಿದ್ದ ಎಇಇ ಎಸಿಬಿ ಬಲೆಗೆ

    2 ಜಿಲ್ಲೆಯಲ್ಲಿ 11 ಸೈಟ್ ಹೊಂದಿದ್ದ ಎಇಇ ಎಸಿಬಿ ಬಲೆಗೆ

    ಗದಗ: ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿರುವ ಘಟನೆ ಗದಗನಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ನೀರು ಸರಬರಾಜು ಮಂಡಳಿಯ ಎಇಇ ಹನುಮಂತ ಪ್ರಭಣ್ಣವರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ರಾಜೀವ್ ಗಾಂಧಿ ನಗರದಲ್ಲಿ ಇರುವ ಮನೆ ಮೇಲೆ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಭ್ರಷ್ಟಾಚಾರ ದೂರಿನ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

    ಎಇಇ ಹನುಮಂತ ಮನೆ ಮೇಲಿನ ದಾಳಿ ವೇಳೆ ಸುಮಾರು ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಇವರ ಹೆಸರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 11 ಸೈಟ್‍ಗಳು ಇರುವುದು ಅಧಿಕಾರಿಗಳ ದಾಳಿ ವೇಳೆ ಗೊತ್ತಾಗಿದೆ. ಕಡತಗಳ ಪರಿಶೀಲನೆ ಮುಂದುವರಿದಿದ್ದು, ಎಇಇ ಹನಮಪ್ಪ ಮತ್ತು ಮನೆಯವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

  • ದಂತ ಕದ್ದು ಸಿಕ್ಕಿಬಿದ್ದ ‘ಕೈ’ ಶಾಸಕನ ಆಪ್ತನ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ

    ದಂತ ಕದ್ದು ಸಿಕ್ಕಿಬಿದ್ದ ‘ಕೈ’ ಶಾಸಕನ ಆಪ್ತನ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ

    ಚಿಕ್ಕಮಗಳೂರು: ಕಾರಿನಲ್ಲಿ ಆನೆ ದಂತ ಸಾಗಿಸುವಾಗ ಸಿಕ್ಕಿಬಿದ್ದ ಜಿಲ್ಲೆಯ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ಆಪ್ತನ ಮನೆ ಮೇಲೆ ದಾಳಿ ಮಾಡಿದಾಗ ಮತ್ತಷ್ಟು ಸ್ಫೋಟಕ ವಸ್ತುಗಳು ಸಿಕ್ಕಿವೆ.

    ಶಾಸಕ ರಾಜೇಗೌಡರ ಆಪ್ತ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಐಟಿ ಸೆಲ್ ಮುಖ್ಯಸ್ಥ ಶಬರೀಶ್ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಶೃಂಗೇರಿಯ ಕಾಂಚಿನಗರದ ಶಬರೀಶ್ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ನಕ್ಷತ್ರ ಆಮೆ, ಕಲ್ಲು ಆಮೆ, ಗನ್, ಪಿಸ್ತೂಲ್, ಬುಲೆಟ್‍ಗಳು, ಗಂಧದ ತುಂಡುಗಳು ಹಾಗೂ ಜಿಲೆಟಿನ್ ಕಡ್ಡಿ ಸೇರಿದಂತೆ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ವೇಳೆ ಮನೆಯಲ್ಲಿದ್ದ ಶಬರೀಶ್ ತಂದೆ ರಮೇಶ್, ಮತ್ತೊಬ್ಬ ಆರೋಪಿ ವಿಶ್ವನಾಥ್‍ನನ್ನ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಹೊರವಲಯದಲ್ಲಿ ಕಾರಿನಲ್ಲಿ ಆನೆದಂತ ಸಾಗಿಸುವಾಗ ಶಬರೀಶ್ ಜೊತೆ ಮೂವರು ಸಿಕ್ಕಿಬಿದ್ದಿದ್ದರು. ಈ ಪ್ರಮಾಣದಲ್ಲಿ ತನ್ನ ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ ಶಬರೀಶ್, ಯಾವುದಾದರೂ ವಿಧ್ವಂಸಕ ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದನ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ.

    ಈಗಾಗಲೇ ಬಂಧನಕ್ಕೊಳಗಾಗಿರೋ ಶಬರೀಶ್, ಯೋಗೀಶ್, ವಿಜಯ್ ಹಾಗೂ ಮಧುಸೂದನ್‍ನನ್ನ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕರು ಮೂಗು ತೂರಿಸಬಾರದು, ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

  • ವಿಡಿಯೋ: ಬೈಕಿನಲ್ಲೇ 76 ದಿನ, 21 ದೇಶ, 23 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಕನ್ನಡಿಗರು!

    ವಿಡಿಯೋ: ಬೈಕಿನಲ್ಲೇ 76 ದಿನ, 21 ದೇಶ, 23 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಕನ್ನಡಿಗರು!

    ಕಲಬುರಗಿ: ಸಾಮಾನ್ಯವಾಗಿ ಬೈಕ್ ರೈಡಿಂಗ್ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಬೈಕ್ ನಲ್ಲೆ ಲಾಂಗ್ ಡ್ರೈವ್ ಹೋಗಬೇಕು ಅಂತಾ ಸುಮಾರು ಜನ ಅಂದುಕೊಳ್ಳತ್ತಾರೆ. ಅದರಲ್ಲಿ ಕೆಲವರು ಬೈಕ್ ನಲ್ಲಿ ಇಡಿ ದೇಶವನ್ನೆ ಸುತ್ತಾಡುತ್ತಾರೆ. ಆದರೆ ಸ್ನೇಹಿತರಿಬ್ಬರು ಬೈಕಿನಲ್ಲೇ ಬರೊಬ್ಬರಿ 76 ದಿನಗಳಲ್ಲಿ 21 ದೇಶವನ್ನ ಸುತ್ತಾಡಿ ಬಂದಿದ್ದಾರೆ.

    ಬೈಕ್ ರೈಡಿಂಗ್ ನಲ್ಲಿ ಭಾರತ ಸುತ್ತಾಡಿರೋದನ್ನ ನೋಡಿದ್ದೇವೆ. ಆದರೆ ಇಬ್ಬರು ಸ್ನೇಹಿತರು ವಿದೇಶಗಳಿಗೂ ಬೈಕಿನಲ್ಲೇ ತೆರಳಿ ಸುತ್ತಾಡಿ ಬಂದಿದ್ದಾರೆ. ಕಲಬುರಗಿಯ ಮಂಜುನಾಥ್ ಚಿಕ್ಕಯ್ಯ ಮತ್ತು ರಿಚರ್ಡ್ ಎಂಬವರು ಬೈಕಿನಲ್ಲೇ 76 ದಿನಗಳಲ್ಲಿ 21 ದೇಶವನ್ನು ಸುತ್ತಾಡಿದ್ದಾರೆ.

    ಭೂತಾನ್, ಮೈನ್ಮಾರ್, ಥೈಲ್ಯಾಂಡ್, ಲೋಯಸ್, ಚೀನಾ, ಕಿರ್ಗಿಸ್ಥಾನ್, ಉಜ್ಬೇಕಿಸ್ಥಾನ್, ಕಝಾಕ್‍ಸ್ಥಾನ್, ರಷ್ಯಾ, ಎಸ್ಟೋನಿಯಾ, ಲಿಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ, ಇಟಲಿ, ಸ್ವಿಜರ್ ಲ್ಯಾಂಡ್, ಫ್ರಾನ್ಸ್, ಬೆಲ್ಜಿಯಂ, ನೆದರ್ ಲ್ಯಾಂಡ್ ಹಾಗೂ ಇಂಗ್ಲೆಂಡ್ ದೇಶಗಳನ್ನು ಸುತ್ತಿ ಬಂದಿದ್ದಾರೆ.

     

    ಮಂಜುನಾಥ್ ಕೆಲಸದಲ್ಲಿ ಪ್ರತಿನಿತ್ಯ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಕೆಲಸ ಮಧ್ಯೆ ಬಿಡುವು ಮಾಡಿಕೊಂಡು ಬೇರೆ ಏನಾದರೂ ಮಾಡಬೇಕು ಅಂತಾ ಡಿಸೈಡ್ ಮಾಡಿ ಈ ಹಿಂದೆ ಕನ್ಯಾಕುಮಾರಿಗೆ ಬೈಕಿನಲ್ಲೇ ಪ್ರಯಾಣ ಮಾಡಿದ್ದರಂತೆ. ಆಗ ದಂಪತಿಗಳಿಬ್ಬರು ಬೈಕಿನಲ್ಲೇ ದೇಶ ಸುತ್ತಾಡ್ತಿರೋದನ್ನು ಕಂಡು ಅವರಿಂದ ಪ್ರೇರಣೆಗೊಂಡು ಬೈಕಿನಲ್ಲೇ ವಿದೇಶ ಸುತ್ತಾಡೋಕ್ಕೆ ಪ್ಲ್ಯಾನ್ ಮಾಡಿದ್ದರಂತೆ.

    ಅದರಂತೆ ಮಂಜುನಾಥ್ ಮತ್ತು ಸ್ನೇಹಿತ ರಿಚರ್ಡ್ ಇಬ್ಬರು ಕೂಡ ಎರಡು ವರ್ಷಗಳಿಂದ ಯಾವ್ಯಾವ ದೇಶಕ್ಕೆ ಹೋಗಬೇಕು ಮತ್ತೆ ಹೇಗೆ ಹೋಗಬೇಕು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ವಿದೇಶದಲ್ಲಿ ಸ್ಥಳೀಯ ಬೈಕ್ ವರ್ಕೌಟ್ ಆಗೋದಿಲ್ಲ ಅನ್ನೋ ಮಾಹಿತಿ ಮೇರೆಗೆ ಅಮೆರಿಕಾದ ಎರಡು ಬೈಕ್ ಖರೀದಿಸಿ ಕಳೆದ ಎರಡು ತಿಂಗಳ ಹಿಂದೆ ಕಲಬುರಗಿಯಿಂದ ಪ್ರಯಾಣ ಆರಂಭಿಸಿ ಅಮೆರಿಕದವರೆಗೂ ಬೈಕಿನಲ್ಲೇ ಸುತ್ತಾಡಿಕೊಂಡು ಬಂದಿದ್ದಾರೆ.

     

    ಮೊದ ಮೊದಲು ಮಂಜುನಾಥ್ ಕೆಲಸದ ಒತ್ತಡದಿಂದ ಹೊರ ಬರಲು ಬೈಕ್ ಸವಾರಿ ಮಾಡೋದನ್ನ ಆರಂಭಿಸಿದ್ದರಂತೆ. ಬಳಿಕ ವಾರಗಟ್ಟಲೆ ನಂತ್ರ ತಿಂಗಳುಗಟ್ಟಲೆ ಕೆಲಸ ನಿಮಿತ್ತ ಬೈಕಿನಲ್ಲಿ ಹೊರ ಹೋಗಿ ಬರುತ್ತಿದ್ದರಂತೆ. ಅಷ್ಟೇ ಅಲ್ಲದೇ ಮಂಜುನಾಥ್ ಬೈಕಿನಲ್ಲಿ ವಿದೇಶ ಪ್ರಯಾಣ ಮಾಡೋ ಇಚ್ಚೆ ಪತ್ನಿ ಬಳಿ ಹೇಳಿದ್ದಾಗ ಪತ್ನಿ ರೇಖಾ ಅದಕ್ಕೆ ನಿರಾಕರಿಸಿದ್ದರಂತೆ. ಆದರೆ ಮಂಜುನಾಥ್ ಅವರ ಪತ್ನಿಗೆ ಒಪ್ಪಿಸಿದ್ದ ಬಳಿಕ ಸ್ನೇಹಿತ ರಿಚರ್ಡ್ ಜೊತೆ ಅವರ ಬೈಕ್ ಮೇಲಿನ ಲಾಂಗ್ ಜರ್ನಿ ಆರಂಭಿಸಿದ್ದರು. ಬೈಕಿನಲ್ಲಿ 21 ದೇಶ ಸುತ್ತಿದ್ದಕ್ಕೆ ರಿಚರ್ಡ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

    ಮಂಜುನಾಥ್ ವಿದೇಶ ಪ್ರಯಾಣದಲ್ಲಿ ಹಲವಾರು ತೊಂದರೆ ತಾಪತ್ರಯಗಳನ್ನು ಅನುಭವಿಸಿರೋದು ನೆನಪಿಸಿಕೊಂಡಿದ್ದಾರೆ. ತೊಂದರೆ ತಾಪತ್ರಯಗಳ ಮಧ್ಯೆ ವಿದೇಶ ಪ್ರಯಾಣದ ಅನುಭವ ಸಖತ್ತಾಗಿತ್ತು ಅಂತಾರೆ. ಚೀನಾದಲ್ಲಿಯು ಕೂಡ ಭಾರತಿಯರನ್ನು ಕಂಡರೆ ಒಳ್ಳೆ ಗೌರವ ಕೊಟ್ಟು ಸ್ಪಂದಿಸಿರೋ ಬಗ್ಗೆ ಕೂಡ ಹಂಚಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶದಲ್ಲಿ ಹೇಳಿ ವಿದೇಶಿ ಸಂಸ್ಕೃತಿಗಳನ್ನು ನೋಡಿದರೆ ನಮ್ಮೂರೆ ನಮಗೆ ಚೆಂದ ಅನ್ನೋ ಹಾಗೆ ಇಂಡಿಯಾ ಇಸ್ ಗ್ರೆಟ್ ಎಂದು ಮಂಜುನಾಥ್ ಮತ್ತು ಆತನ ಸ್ನೇಹಿತ ರಿಚರ್ಡ್ ಹೇಳಿದ್ದಾರೆ.

    https://www.youtube.com/watch?v=Bcr-mU8vwJs&feature=youtu.be

  • ಹೊಸ ಬೈಕ್ ನಲ್ಲಿ ರಾತ್ರಿ ವೇಳೆ ಕಿಚ್ಚನ ಜಾಲಿರೈಡ್! – ವಿಡಿಯೋ ನೋಡಿ

    ಹೊಸ ಬೈಕ್ ನಲ್ಲಿ ರಾತ್ರಿ ವೇಳೆ ಕಿಚ್ಚನ ಜಾಲಿರೈಡ್! – ವಿಡಿಯೋ ನೋಡಿ

    ಬೆಂಗಳೂರು: ಕಿಚ್ಚ ಸುದೀಪ್‍ಗೆ ಬೈಕ್ ಹಾಗೂ ಕಾರುಗಳೆಂದರೆ ಸಿಕ್ಕಾಪಟ್ಟೆ ಕ್ರೇಜ್. ಈಗಾಗಲೇ ಸಾಕಷ್ಟು ಐಷರಾಮಿ ಬೈಕ್ ಹಾಗೂ ಕಾರುಗಳನ್ನು ಹೊಂದಿದ್ದು, ಈಗ ಬಿಎಂಡಬ್ಲ್ಯೂ ಆರ್ 1200 ಬೈಕನ್ನು ಖರೀದಿಸಿದ್ದಾರೆ.

    ಕಿಚ್ಚ ಸುದೀಪ್ ಸಾಕಷ್ಟು ಬೈಕ್ ಕಲೆಕ್ಷನ್‍ಗಳಿದ್ದು, ಅದರಲ್ಲಿ ಈ ಬಿಎಂಡಬ್ಲ್ಯೂ ಆರ್ 1200 ಕೂಡ ಸೇರಿದೆ. ಸುದೀಪ್ ತಮ್ಮ ಹೊಸ ಬೈಕಿನಲ್ಲಿ ಮಂಗಳವಾರ ರಾತ್ರಿ ರೈಡ್‍ಗೆ ಹೋಗಿದ್ದಾರೆ. ಅವರಿಗೆ ಜೊತೆ ನಟ ಚಂದನ್ ಕೂಡ ಸಾಥ್ ನೀಡಿದ್ದಾರೆ.

    ಸುದೀಪ್ ಮಂಗಳವಾರ ರಾತ್ರಿ ತಾವೇ ಸ್ವತಃ ಶೋ ರೂಮಿಗೆ ಭೇಟಿ ನೀಡಿ ಹೊಸ ಬೈಕ್ ತೆಗೆದುಕೊಂಡು ಬಂದಿದ್ದಾರೆ. ಬೈಕ್ ಖರೀದಿಸಿದ ಖುಷಿಯಲ್ಲಿ ಸಿಲಿಕಾನ್ ಸಿಟಿ ರೌಂಡ್ ಹೊಡೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಬೈಕ್ ರೈಡ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

  • ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ದಾಳಿ: 13 ಮಹಿಳೆಯರ ರಕ್ಷಣೆ

    ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ದಾಳಿ: 13 ಮಹಿಳೆಯರ ರಕ್ಷಣೆ

    ಮುಂಬೈ: ಅಕ್ರಮವಾಗಿ ಡ್ಯಾನ್ಸ್ ಬಾರ್ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ಮುಂಬೈ ಪೊಲೀಸರು ಹಾಗೂ ಇಂಡಿಯನ್ ರೆಸ್ಕ್ಯೂ ಮಿಶನ್ ತಂಡ ದಾಳಿ ನಡೆಸಿ 13 ಮಹಿಳೆಯರನ್ನು ರಕ್ಷಿಸಿದ ಘಟನೆ ಶುಕ್ರವಾರ ಮುಂಬೈ ನಗರದಲ್ಲಿ ನಡೆದಿದೆ.

    ಮುಂಬೈನ್ ಉಲ್ಲಾಸ ನಗರದಲ್ಲಿನ ಸಿಹಾಕ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಪೊಲೀಸರು, ರೆಸ್ಟೋರೆಂಟ್ ಕಬೋರ್ಡ್ ನಲ್ಲಿ ಬಚ್ಚಿಟ್ಟಿದ್ದ 9 ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ರೆಸ್ಟೋರೆಂಟ್ ನಲ್ಲಿ ಅಪ್ರಾಪ್ತ ಬಾಲಕಿಯರಿಂದ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.

    ದಾಳಿಯ ಸಂದರ್ಭದಲ್ಲಿ ರಕ್ಷಿಸಲಾಗಿರುವ ಮಹಿಳೆಯರಲ್ಲಿ ಮೂವರು ಅಪ್ರಾಪ್ತ ಬಾಲಕಿಯರಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಂಗಳೂರು ಮೂಲದ ರೆಸ್ಟೋರೆಂಟ್ ಮಾಲೀಕ ವಿನೋದ ಶೆಟ್ಟಿ ಹಾಗೂ ಇಬ್ಬರು ಮ್ಯಾನೇಜರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದ ಕುರಿತು ಉಲ್ಲಾಸ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.