ಕೋಲಾರ: ಹೆತ್ತವರು ಜಮೀನು ಕೊಟ್ಟಿಲ್ಲವೆಂದು ಸಿಟ್ಟಿನಿಂದ ಮಗಳು ಗಿಡಗಳಿಗೆ ವಿಷ ಹಾಕಿ ನಾಶಪಡಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಾಮಣ್ಣ ಹಾಗೂ ಲಕ್ಷ್ಮಮ್ಮ ಎಂಬ ವೃದ್ಧ ದಂಪತಿ ಬೆಳೆ ಕಳೆದುಕೊಂಡು ಇದೀಗ ಕಣ್ಣೀರಾಕುತ್ತಿದ್ದಾರೆ. ಹಿರಿ ಮಗಳು ಚೌಡಮ್ಮಳಿಗೆ ಜಮೀನು ನೀಡದ್ದಕ್ಕೆ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್
ಪೋಷಕರು ಜಮೀನು ಕೊಟ್ಟಿಲ್ಲ ಎಂದು ಚೌಡಮ್ಮ ಹಿಪ್ಪುನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿದ್ದಾಳೆ. ಹೀಗಾಗಿ ವಿಷ ಸಿಂಪಡಣೆ ಮಾಡಿದ ಹಿಪ್ಪು ನೇರಳೆ ಸೊಪ್ಪು ತಿಂದ ಹುಳುಗಳು ಸಾಯುತ್ತಿವೆ. ಪರಿಣಾಮ 150 ಮೊಟ್ಟೆಯ ಸುಮಾರು ಒಂದು ಲಕ್ಷ ಮೌಲ್ಯದ ರೇಷ್ಮೆ ಬೆಳೆ ನಾಶವಾಗಿದೆ ಎಂದು ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.
ಬೆಂಗಳೂರು: ಕರ್ನಾಟಕ ರೇಷ್ಮೆ ಮಾರುಕಟ್ಟೆ ವಿಸ್ತರಣೆ ಸಂಬಂಧ ಉತ್ತರ ಪ್ರದೇಶದ ವಾರಣಾಸಿಗೆ ಕೈಗೊಂಡಿದ್ದ ಪ್ರವಾಸ ಫಲಪ್ರವಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸುಮಾರು 3 ಸಾವಿರ ಮೆಟ್ರಿಕ್ ಟನ್ ರೇಷ್ಮೆಗೆ ಬೇಡಿಕೆ ಇದೆ. ಸುಮಾರು 18,189 ಕುಟುಂಬಗಳು ರೇಷ್ಮೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆದರೆ ಕೇವಲ 258 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಮಾತ್ರ ಉತ್ಪಾದಿಸಲಾಗುತ್ತಿದೆ. ಹಾಗಾಗಿ ಕರ್ನಾಟಕದ ಸೇರಿದಂತೆ ಬೇರೆ ರಾಜ್ಯಗಳ ಮೇಲೆ ಬನರಾಸ್ ನೇಕಾರರು ಅವಲಂಬಿತರಾಗಿದ್ದಾರೆ. ವಾರಣಾಸಿಯಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದ್ದು, ಕರ್ನಾಟಕ ರೇಷ್ಮೆ ಮಂಡಳಿಯ ಮಾರುಕಟ್ಟೆಯನ್ನು ಸ್ಥಾಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ನವೆಂಬರ್ 18 ರಂದು ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ಉತ್ತರ ಪ್ರದೇಶ ಸರ್ಕಾರದ ರೇಷ್ಮೆ ಇಲಾಖೆ ಅಧಿಕಾರಿಗಳು, ರೇಷ್ಮೆ ರೀಲರ್ಸ್ ಹಾಗೂ ನೇಕಾರರ ಜೊತೆ ಸಭೆ ನಡೆಸಿ, ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಸಮಗ್ರ ಚರ್ಚೆ ನಡೆಸಲಾಯಿತು.
ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಯುಪಿ ಸರ್ಕಾರ ತಕ್ಷಣ ಸ್ಪಂದಿಸಿದೆ. ವಾರಣಾಸಿಯ ಸಾರಂಗ್ ತಲಾಬ್‌ನಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ(ಕೆಎಸ್‌ಎಂಬಿ) ಜಾಗ ನೀಡಿದ್ದು, ಅಲ್ಲಿ ಮಳಿಗೆ ತೆಗೆದು ರೇಷ್ಮೆ ಮಾರುಕಟ್ಟೆ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಯುಪಿ ಸರ್ಕಾರ, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಸರ್ಕಾರದ ನಡುವೆ MOU ಮಾಡಿಕೊಳ್ಳಲಾಗುತ್ತದೆ. ಒಡಂಬಡಿಕೆ ಪ್ರಕ್ರಿಯೆಗಳು ಪೂರ್ಣವಾದ ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ಮಾರುಕಟ್ಟೆ ಪ್ರಾರಂಭಿಸಲಾಗುತ್ತದೆ.
ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದಲ್ಲಿ ರೇಷ್ಮೆಗೆ ಬೇಡಿಕೆ ಹೆಚ್ಚಿದ್ದರೂ ಉತ್ತರ ಪ್ರದೇಶದಲ್ಲಿ ಕೇವಲ 7,984 ಎಕರೆಯಲ್ಲಿ ಮಾತ್ರ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ಹಾಗಾಗಿ , ಉತ್ತರ ಪ್ರದೇಶದಲ್ಲಿ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಸಿದ್ದಪಡಿಸಿದ್ದ ವರದಿ ಸಲ್ಲಿಸಲಾಯಿತು. ಇದನ್ನೂ ಓದಿ: ರಾಜಸ್ಥಾನ- ಎಲ್ಲ ಸಚಿವರಿಂದ ರಾಜೀನಾಮೆ ಪಡೆದ ಗೆಹ್ಲೋಟ್
ಕರ್ನಾಟಕದಲ್ಲಿ ಬಳಸುತ್ತಿರುವ ತಂತ್ರಜ್ಞಾನ, ರೈತರಿಗೆ ನೀಡುತ್ತಿರುವ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆಯಿಂದ ಉತ್ಪಾದಿಸಲಾಗುತ್ತಿರುವ ಉಪ ಉತ್ಪನ್ನಗಳ ಬಗ್ಗೆಯೂ ತಿಳಿಸಿಕೊಡಲಾಯಿತು. ಅಲ್ಲದೇ ಉತ್ತರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಅಗತ್ಯವಿರುವ ತಂತ್ರಜ್ಞಾನ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಇದಲ್ಲದೇ, ಬನರಾಸ್ ಸೀರೆ ನೇಯ್ಗೆಗೆ ಹೆಸರುವಾಸಿ ಆಗಿರುವ ಲಲ್ಲಾಪುರ ಪ್ರದೇಶಕ್ಕೆ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ನೇಕಾರರ ಜೊತೆ ಮಾತುಕತೆ ನಡೆಸಿದರು. ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪಿಸುತ್ತಿರುವ ಮಾಹಿತಿ ನೀಡಿ, ಕರ್ನಾಟಕದ ರೇಷ್ಮೆಯನ್ನು ಖರೀದಿಸುವಂತೆ ನೇಕಾರರನ್ನು ಮನವೊಲಿಸಿದರು.
ಮಾರುಕಟ್ಟೆ ಸ್ಥಾಪನೆ:
ಬನರಾಸ್ ಸೀರೆ ನೇಯ್ಗೆಗೆ ಸೇರಿದಂತೆ ವಾರಣಾಸಿ ನೇಕಾರರಿಗೆ ಅಗತ್ಯವಿರುವ ಗುಣಮಟ್ಟದ ರೇಷ್ಮೆ ಪೂರೈಸಲು ಕೆಎಸ್‌ಎಂಬಿ ಸಿದ್ಧವಿದೆ. ಈ ಬಗ್ಗೆ ಉತ್ತರ ಪ್ರದೇಶದ ಅಧಿಕಾರಿಗಳ ಜೊತೆ ಉತ್ತಮವಾದ ಸಭೆಯಾಗಿದ್ದು, ತಕ್ಷಣವೇ ಮಾರುಕಟ್ಟೆಗೆ ಜಾಗ ಗುರುತಿಸಿದ್ದಾರೆ. ಎಂಒಯು ಸೇರಿದಂತೆ ಎಲ್ಲಾ ಕಾನೂನುನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ಕರ್ನಾಟಕ ಮಾರುಕಟ್ಟೆ ಆರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕರ್ನಾಟಕ ರೇಷ್ಮೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡುವ ನಮ್ಮ ಯೋಚನೆಗೆ ವಾರಣಾಸಿ ಪ್ರವಾಸವೂ ಫಲಪ್ರದವಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಡಾ.ನಾರಾಯಣ ಗೌಡ ಅವರ ನೇತೃತ್ವದ ನಿಯೋಗದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಎಂಡಿ ಅನುರಾಧ ಸೇರಿದಂತೆ 9 ಜನರ ಅಧಿಕಾರಿಗಳು ವಾರಣಾಸಿಗೆ ತೆರಳಿದ್ದರು.
ಚಾಮರಾಜನಗರ: ರೈತರೊಬ್ಬರು ರೇಷ್ಮೆ ಮಾರುಕಟ್ಟೆಯಲ್ಲಿ ಕೆಮ್ಮಿದ್ದು, ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ತಮಾಷೆ ಮಾಡಿದ್ದಾರೆ. ಇಷ್ಟಕ್ಕೆ ಮಾರುಕಟ್ಟೆಯಲ್ಲಿ ರಾದ್ಧಾಂತ ನಡೆದಿದೆ.
ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಘಟನೆ ನಡೆದಿದ್ದು, ಪದೇ ಪದೇ ಕೆಮ್ಮಿದ್ದರಿಂದ ಆತಂಕಗೊಂಡು ಅಕ್ಕಪಕ್ಕದವರು ವಿಚಾರಿಸಿದ್ದಾರೆ. ಈ ವೇಳೆ ತನಗೆ ಕೊರೊನಾ ಇದೆ ಎಂದು ರೈತ ತಮಾಷೆಗೆ ಹೇಳಿದ್ದಾರೆ. ಇದರಿಂದ ಬೆಚ್ಚಿಬಿದ್ದ ರೇಷ್ಮೆಗೂಡಿನ ಮಾರುಕಟ್ಟೆ ವ್ಯಾಪಾರಿಗಳು, ತೀವ್ರ ಆತಂಕಗೊಂಡಿದ್ದು, ತಕ್ಷಣವೇ ರೇಷ್ಮೆ ರೀಲರ್ಸ್ ಗಳು ತಹಸೀಲ್ದಾರ್‍ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ತಹಶೀಲ್ದಾರ್ ಕುನಾಲ್ ಅವರು ದೌಡಾಯಿಸಿದ್ದು, ರೈತಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. ಅಲ್ಲದೆ ಕನಕಪುರದ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ರೈತನ ಬಗ್ಗೆ ವಿಚಾರಿಸಿದ್ದಾರೆ.
ಕನಕಪುರದ ಅಚ್ಚಲು ಗ್ರಾಮದಿಂದ ರೈತ ರೇಷ್ಮೆಗೂಡು ತಂದಿದ್ದ. ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ತಮಾಷೆಗಾಗಿ ಕೊರೊನಾ ಇದೆ ಎಂದು ಹೇಳಿದೆ ಎಂದು ರೈತ ತಿಳಿಸಿದ್ದಾರೆ. ನಂತರ ರೈತನನ್ನು ಅವರ ಗ್ರಾಮಕ್ಕೆ ಮರಳಿ ಕಳುಹಿಸಲಾಗಿದೆ. ಆದರೆ ಅವರು ತಂದಿದ್ದ ರೇಷ್ಮೆ ಗೂಡನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ.
ಚಿಕ್ಕಬಳ್ಳಾಪುರ: ಕೊರೊನಾ ಸಂದರ್ಭದ ದುರ್ಲಾಭ ಪಡೆದು ಬಿತ್ತನೆ ಬೀಜ, ಕ್ರಿಮಿನಾಶಕ ಹಾಗೂ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಮತ್ತು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ತುಂಬಾ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಕೃಷಿ ಕ್ಷೇತ್ರ ಅನುಭವಿಸಿದ ನಷ್ಟದ ಪ್ರಮಾಣದಷ್ಟು ಮತ್ಯಾವ ಕ್ಷೇತ್ರವೂ ನಷ್ಟ ಅನುಭವಿಸಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧ್ಯವಾದಷ್ಟೂ ರೈತರ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.
ಈ ಮಧ್ಯೆ ಕೆಲವು ರಸಗೊಬ್ಬರಗಳ ಅಂಗಡಿಯ ಮಾಲೀಕರು ರಸಗೊಬ್ಬರ, ಕ್ರಿಮಿನಾಶಕ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ರೀತಿ ಪರಿಸ್ಥಿತಿಯ ದುರ್ಲಾಭ ಪಡೆದು ಮೊದಲೇ ಕಷ್ಟನಷ್ಟಕ್ಕೆ ಸಿಲುಕಿರುವ ರೈತರನ್ನು ಶೋಷಿಸುವವರನ್ನು ಸರ್ಕಾರ ಸಹಿಸುವ ಪ್ರಶ್ನೆಯೇ ಇಲ್ಲ. ಅಂತವರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಲಿದೆ ಎಂದು ಎಚ್ಚರಿಸಿದರು.
ಬೇಗ ಕೊಳೆಯುವ ಕೃಷಿ ಉತ್ಪನ್ನಗಳನ್ನು ಕೆಲಕಾಲ ಶೇಖರಿಸಿಡಲು ಅಗತ್ಯವಿರುವ ಶೀಥಲ ಗೃಹಗಳು ಹಾಗೂ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ತೆರೆಯಲು ಅವಶ್ಯಕತೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಈ ಸಲಹೆಗಳನ್ನು ಸಿಎಂ ಯಡಿಯೂರಪ್ಪ ಅವತಿಗೂ ಶಿಫಾರಸು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯ ಕೃಷಿ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿಯಿದ್ದು, ಇದರಿಂದ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಸಹಿಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಕೆಲವೆಡೆ ಕಳಪೆ ಕೀಟನಾಶಕ, ಬಿತ್ತನೆ ಬೀಜ ಮಾರಾಟವಾಗುತ್ತಿದ್ದು, ಈವರೆಗೆ 370 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 175 ಮಾದರಿಗಳು ಕಳಪೆ ಎಂದು ಖಚಿತ ಪಟ್ಟಿವೆ. 32 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರದ ಅಂಗಡಿಯೊಂದರಲ್ಲಿ 20 ಲಕ್ಷ ರೂ.ಗಳ ಕಳಪೆ ಸರಕನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿಸಿದರು.
ರಾಮನಗರ: ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಬರೆದುಕೊಂಡಿದೆ.
ಅಷ್ಟೇ ಅಲ್ಲದೇ ಸರ್ಕಾರಿ ರಜೆಯನ್ನು ಹೊರತು ಪಡಿಸಿ, ಕೊರೊನಾ ಹೊಡೆತಕ್ಕೆ ಮೊದಲ ಬಾರಿಗೆ ಮಾರುಕಟ್ಟೆ ಬಂದ್ ಕೂಡ ಆಗುತ್ತಿದೆ. ಇದರೊಂದಿಗೆ ಹೊರ ರಾಜ್ಯದ ಬೆಳೆಗಾರರ ಮೇಲೆ ನಿರ್ಬಂಧ ಹೇರಲಾಗಿದೆ.
ದಿನನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುವ ರಾಮನಗರದ ರೇಷ್ಮೆ ಮಾರುಕಟ್ಟೆ ಕೊರೊನಾ ಕಾಟಕ್ಕೆ ತತ್ತರಿಸಿದೆ. ಹಾಗಾಗಿ ನಾಳೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೇಷ್ಮೆ ಮಾರುಕಟ್ಟೆ ಬಂದ್ ಮಾಡಲಾಗಿದ್ದು, ಮಾರುಕಟ್ಟೆಗೆ ಅಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.
ಏಷ್ಯದಲ್ಲೇ ಅತೀ ದೊಡ್ಡಮಟ್ಟದ ವಹಿವಾಟು ಹೊಂದಿರುವ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಮಾಡಿದೆ. 1,300ಕ್ಕೂ ಹೆಚ್ಚು ಲಾಟ್ ಒಮ್ಮೆಯೇ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಗೂಡಿನ ದರವು ಕುಸಿತಕಂಡಿದ್ದು, ಇಷ್ಟು ಪ್ರಮಾಣದ ಗೂಡಿನ ನಿರ್ವಹಣೆ, ತೂಕ ಮಾಡುವ ಕೆಲಸವು ಮಾರುಕಟ್ಟೆ ಅಧಿಕಾರಿಗಳಿಗೆ ತಲೆಬಿಸಿ ತಂದಿತ್ತು.
ಈ ಮೊದಲು ದಿನಕ್ಕೆ 30ರಿಂದ 32 ಟನ್ ರೇಷ್ಮೆ ಗೂಡು ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಕೊರೊನಾದಿಂದಾಗಿ ಭಾನುವಾರ ಮಾರುಕಟ್ಟೆ ಬಂದ್ ಆಗಲಿದೆ. ಹೀಗಾಗಿ ಶನಿವಾರ 75 ಟನ್ ರೇಷ್ಮೆ ಆವಕಗೊಂಡಿರುವುದು ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳೆಗಾರರು ಮಾರುಕಟ್ಟೆಯಲ್ಲಿ ಜಾಲರಿ ಸಿಗದೇ ನೆಲದ ಮೇಲೆಯೇ ಗೂಡು ಹರಡಿಕೊಂಡು ಹರಾಜಿಗಾಗಿ ಕಾದು ಕುಳಿತ್ತಿದ್ದರು.
ಚಿಕ್ಕಬಳ್ಳಾಪುರ: ಚೀನಾದಲ್ಲಿ ಹುಟ್ಟಿ ಇಡೀ ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಆತಂಕ ಎಲ್ಲಡೆ ಮನೆ ಮಾಡಿದೆ. ಕೊರೊನಾ ಎಫೆಕ್ಟ್ ನಿಂದ ದೇಶದ ಶೇರುಪೇಟೆಯೇ ತಲ್ಲಣಗೊಂಡಿದ್ದು, ದೊಡ್ಡ ದೊಡ್ಡ ಶ್ರೀಮಂತ ಉದ್ಯಮಿಗಳೇ ಗಢ ಗಢ ಎಂದು ನಡುಗುತ್ತಿದ್ದರೇ, ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಮಾತ್ರ ಕೊರೊನಾ ಕಾಟ ವರದಾನವಾಗಿದೆ.
ಕೊರೊನಾ ಭೀತಿಯಿಂದ ಜಾಗತಿಕ ಮಟ್ಟದಲ್ಲಿ ಆಮದು ಹಾಗೂ ರಫ್ತಿನ ಮೇಲೆ ಉಂಟಾಗಿರುವ ಬಹುದೊಡ್ಡ ವ್ಯತ್ಯಾಸಗಳಿಂದ ದೊಡ್ಡ ದೊಡ್ಡ ಕುಬೇರ ಮಹಾಶಯರ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಆದರೆ ದೇಶದ ಬೆನ್ನುಲುಬು ಅನ್ನ ನೀಡೋ ಅನ್ನದಾತ ರೈತನಿಗೆ ಮಾತ್ರ ಈ ಕೊರೊನಾ ಎಫೆಕ್ಟ್ ಲಾಭ ತಂದಿದೆ. ಕೊರೊನಾ ಎಫೆಕ್ಟ್ ನಿಂದ ರೇಷ್ಮೆಯ ತವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ರೇಷ್ಮೆ ಗೂಡಿನ ಬೆಲೆ ಗಗನಕ್ಕೇರುತ್ತಿದೆ. ಇದು ರೇಷ್ಮೆ ಗೂಡು ಬೆಳೆದ ರೈತರಿಗೆ ವರದಾನವಾಗುತ್ತಿದೆ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ವ್ಯವಸ್ಥಾಪಕ ಉಪ ನಿರ್ದೇಶಕರಾದ ಸುಭಾಷ್ ಹೇಳಿದ್ದಾರೆ.
ರೇಷ್ಮೆ ಗೂಡಿನ ಬೆಲೆ ಡಬಲ್ ಆಗಲು ಕಾರಣವೇನು?
ಏಷ್ಯಾ ಖಂಡದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶದ್ದೇ ಪಾರುಪತ್ಯ. ಆದರೆ ಕೊರೊನಾ ಕಾಟ ಆ ದೇಶದ ರೇಷ್ಮೆ ಉತ್ಪಾದನೆಯೂ ಮೇಲೂ ಭಾರೀ ಪರಿಣಾಮ ಬೀರಿದೆ. ಹೀಗಾಗಿ ಸಹಜವಾಗಿ ಚೀನಾ ರೇಷ್ಮೆಯ ಆಮದು ಇಳಿಮುಖವಾಗಿರುವುದಿರಿಂದ ಭಾರತದ ರೇಷ್ಮೆಗೆ ಭಾರೀ ಬೇಡಿಕೆ ಬಂದಿದೆ. ಇದರಿಂದ ಸಹಜವಾಗಿ ರಾಜ್ಯದ ರೈತರು ಉತ್ಪಾದನೆ ಮಾಡುತ್ತಿರುವ ರೇಷ್ಮೆ ಗೂಡಿಗೆ ಭಾರೀ ಡಿಮ್ಯಾಂಡ್ ಬಂದಿದೆ.
ಪ್ರತಿ ವರ್ಷ 200 ರಿಂದ 400 ರೂಪಾಯಿಯೊಳಗೆ ಇರುತ್ತಿದ್ದ ಒಂದು ಕೆಜಿ ರೇಷ್ಮೆ ಗೂಡಿನ ಬೆಲೆ ಈಗ 500 ರೂಪಾಯಿಂದ 600 ರೂಪಾಯಿಯವರೆಗೆ ಏರಿಕೆ ಆಗಿದೆ. ಹೀಗಾಗಿ ಸಹಜವಾಗಿ ರೇಷ್ಮೆ ಗೂಡು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ ಎಂದು ರೇಷ್ಮೆ ಬೆಳೆಗಾರ ಹಾಗೂ ರೈತ ಮುಖಂಡ ತಾದೂರು ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣವಾಗಿ ಚೀನಾ ರೇಷ್ಮೆ ಆಮದು ನಿಲ್ಲಿಸುವಂತೆ ರೈತರ ಮನವಿ:
ಭಾರತಕ್ಕೆ ತನ್ನ ರೇಷ್ಮೆಯನ್ನು ರಫ್ತು ಮಾಡಿ ದೇಶದ ರೈತರಿಗೆ ಹೊಡೆತ ನೀಡುತ್ತಿದ್ದ ಚೀನಾ ದೇಶದಿಂದ ರೇಷ್ಮೆಯ ಆಮದುನ್ನು ಸ್ಥಗಿತಗೊಳಿಸಬೇಕು ಎಂದು ರೇಷ್ಮೆ ಬೆಳೆಗಾರರು ಹೋರಾಟ ಮಾಡಿ ಪ್ರಧಾನಿ ಮೋದಿಯವರಗೂ ಮನವಿ ಮಾಡಿಕೊಂಡಿದ್ದರು. ಆದರೆ ಈಗ ಕೊರೊನಾ ವೈರಸ್ ಚೀನಾದ ರೇಷ್ಮೆ ರಫ್ತಿಗೆ ತಾನಾಗೇ ತಾನೇ ಬ್ರೇಕ್ ಹಾಕಿದ್ದು, ಇದು ನಮ್ಮ ದೇಶದ ರೇಷ್ಮೆ ಬೆಳೆದ ಬೆಳಗಾರರಿಗೆ ವರದಾನವಾಗುತ್ತಿದೆ. ಆದರೆ ಇದೇ ರೀತಿ ಸಂಪೂರ್ಣವಾಗಿ ಚೀನಾದ ದೇಶದ ರೇಷ್ಮೆ ಆಮದು ಸ್ಥಗಿತ ಮಾಡಿದರೇ ರೈತರಿಗೆ ಸದಾ ಸಂತೋಷದಾಯಕ ಬೆಲೆ ಸಿಗಲಿದೆ ಎಂದು ರೈತ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ರಾಮನಗರ: ನಿರ್ಗಮಿತ ಮುಖ್ಯಮಂತ್ರಿಗಳ ತವರು ಕ್ಷೇತ್ರದ ರೇಷ್ಮೆ ಮಾರುಕಟ್ಟೆಯಲ್ಲಿ ರೈತರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ. ರೇಷ್ಮೆ ಗೂಡು ಮಾರಿ ತಿಂಗಳು ಕಳೆದರೂ ಇನ್ನೂ ಹಣ ಪಾವತಿಯಾಗದೆ, ರೈತರು ಪರದಾಡುವಂತಾಗಿದೆ.
ರೈತರಿಗೆ ವರವಾಗಬೇಕಿದ್ದ ಆನ್‍ಲೈನ್‍ನಲ್ಲಿ ಹಣ ಪಾವತಿ ವ್ಯವಸ್ಥೆ, ಅವರ ಜೀವ ಹಿಂಡುತ್ತಿದೆ. ಪ್ರಾಯೋಗಿಕವಾಗಿ ಅಳವಡಿಸಿಕೊಂಡಿರುವ ಆನ್‍ಲೈನ್ ಹಣ ಪಾವತಿ ವ್ಯವಸ್ಥೆ ಎಡವಟ್ಟಿಗೆ ಕಾರಣವಾಗಿದ್ದು, ಅದೇ ಈಗ ರೈತರ ಕಷ್ಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ತಿಂಗಳ ಪೂರ್ತಿ ಶ್ರಮವಹಿಸಿ ರೇಷ್ಮೆ ಸಾಕಾಣಿಕೆ ಮಾಡಿದ ರೈತರು ದಿನನಿತ್ಯ ಹಣಕ್ಕಾಗಿ ಮಾರುಕಟ್ಟೆಗೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷ್ಮೆ ಗೂಡು ಖರೀದಿಸುವಾಗ ಆನ್‍ಲೈನ್ ಪೇಮೆಂಟ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಎರಡು ದಿನಗಳಲ್ಲಿ ಹಣ ಹಾಕುವುದಾಗಿ ಅಧಿಕಾರಿಗಳು ಹಾಗೂ ಡೀಲರ್ಸ್‍ಗಳು ರೈತರಿಗೆ ಸಬೂಬು ಹೇಳಿ ಸಾಗಹಾಕುತ್ತಿದ್ದಾರೆ. ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು ತಿಂಗಳುಗಟ್ಟೆಲೆ ರೈತರು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ರಾಮನಗರ: ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಆರೋಪ ಮಾಡಿದ್ದಾರೆ.
ಇಂದು ಚನ್ನಪಟ್ಟಣ ತಾಲೂಕಿನ ಕಣ್ವಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿದೇಶಗಳಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಕಾರಣದಿಂದ ರಾಜ್ಯದಲ್ಲಿ ರೇಷ್ಮೆ ಬೆಲೆ ಕಡಿಮೆಯಾಗಿದೆ ಎಂದು ಆರೋಪ ಮಾಡಿದ್ದಾರೆ.
ರೇಷ್ಮೆ ಬೆಲೆ ಹೆಚ್ಚಿಸಲು ರೇಷ್ಮೆಯ ಹದಿನೈದು ಉಪ ಉತ್ಪನ್ನಗಳ ತಯಾರಿಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ವಾರದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ರೇಷ್ಮೆ ಆಯೋಗದ ಕಾರ್ಯದರ್ಶಿಯೊಂದಿಗೆ ಸಂಜೆ ಸಭೆ ನಡೆಸಲಾಗುತ್ತಿದ್ದು, ರೇಷ್ಮೆ ದರ ಸಂಬಂಧ ಚರ್ಚೆ ಮಾಡಲಾಗುವುದು. ಅನ್‍ಲೈನ್ ಮೂಲಕ ರೈತರಿಗೆ ಪೇಮೆಂಟ್ ವ್ಯವಸ್ಥೆ ಮಾಡಲಾಗಿದೆ. ರೇಷ್ಮೆ ಹರಾಜು ಮುನ್ನ ಅಕೌಂಟ್‍ಗಳಲ್ಲಿ ಹಣ ಇಡುವ ವ್ಯವಸ್ಥೆ ಮಾಡಲಾಗುವುದು. ರೇಷ್ಮೆ ಮಾರುಕಟ್ಟೆಯನ್ನು ಅಧುನೀಕರಣ ಮಾಡಲಾಗುವುದು ಎಂದು ರೇಷ್ಮೆ ಬೆಳೆಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಕಣ್ವದ ಬಳಿ 5 ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗಿದೆ. ಈ ಯೋಜನೆಗೆ 10 ಕೋಟಿ ಪ್ರಸ್ತಾವನೆಯಲ್ಲಿ 8 ಕೋಟಿ ಬಿಡುಗಡೆ ಮಾಡಲಾಗುವುದು. ಕಣ್ವ ಬಳಿ ಮಕ್ಕಳ ಪಾರ್ಕ್‍ಗೆ 2 ಕೋಟಿ ಬಿಡುಗಡೆ ಮಾಡಲಾಗಿದ್ದು, ಆದರೆ ಈ ಹಣ ಸಾಲುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಚನ್ನಪಟ್ಟಣದ ಕೆಎಸ್‍ಐಸಿ ಹಳೆ ಕಟ್ಟಡಗಳ ನವೀಕರಣ ಜೊತೆಗೆ ಒಂದು ಲಕ್ಷ ಸೀರೆ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಮೈಸೂರಿನಲ್ಲಿಯು ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗುವುದು. ಈ ಯೋಜನೆಗಾಗಿ 100 ಕೋಟಿ ಮೀಸಲಿಡಲಾಗುವುದು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ರಾಮನಗರ: ಯಾವುದೇ ಸರ್ಕಾರ ಬಂದರೂ ರೈತರಿಗೆ ನೆರವಾಗುತ್ತಿಲ್ಲ ಎಂದು ರಾಮನಗರ ರೇಷ್ಮೆ ಬೆಳೆಗಾರರು ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.
ರೇಷ್ಮೆ ಗೂಡಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹರಾಜು ಪ್ರಕ್ರಿಯೆನ್ನು ಸ್ಥಗಿತಗೊಳಿಸಿ ರೇಷ್ಮೆ ಬೆಳೆಗಾರರು ಬೆಂಗಳೂರು-ಮೈಸೂರು ಹೆದ್ದಾರಿ ತಡೆಹಿಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
ಇಂದು ಹರಾಜು ಪ್ರಕ್ರಿಯೆಯ ವೇಳೆ ರೇಷ್ಮೆಗೂಡಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 220 ರೂ ರಿಂದ 240 ರೂ ಕ್ಕೆ ನಿಂತಿದೆ. ಯಾವುದೇ ಸರ್ಕಾರ ಬಂದರೂ ರೈತರ ನೆರವಿಗೆ ನಿಲ್ಲುವಂತಹ ಕೆಲಸವಾಗುತ್ತಿಲ್ಲ. ರೈತರ ರೇಷ್ಮೆಯನ್ನು ಸರ್ಕಾರ ತೆಗೆದುಕೊಳ್ಳದಿರುವುದರಿಂದ ಮಧ್ಯವರ್ತಿಗಳು ತಮಗಿಷ್ಟ ಬಂದಂತೆ ಹರಾಜು ಕೂಗುತ್ತಿದ್ದಾರೆ ಎಂದು ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು.
ನಂತರ ಸ್ಥಳಕ್ಕೆ ಬಂದ ಪೊಲೀಸರು ರೈತರನ್ನು ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸಿದರು. ಈ ನಡುವೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತುಕತೆ ನಡೆದು ಅಧಿಕಾರಿಗಳು ಮತ್ತೆ ಉತ್ತಮ ಬೆಲೆಗೆ ಹರಾಜು ನಡೆಸುವ ಭರವಸೆ ನೀಡಿದರು.
ಮಂಡ್ಯ: ತಾವು ಬೆಳೆದ ರೇಷ್ಮೆಯನ್ನು ತಮ್ಮ ತೋಟದ ಮನೆಯಲ್ಲಿಯೇ ಹರಾಜು ಹಾಕಿ, ಅದರಿಂದ ಬಂದ ಸಂಪೂರ್ಣ ಹಣವನ್ನು ಕೊಡಗಿನ ಸಂತ್ರಸ್ತರ ನಿಧಿಗೆ ನೀಡುವ ಮೂಲಕ ಜಿಲ್ಲೆಯ ಮಳವಳ್ಳಿಯ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಮಳವಳ್ಳಿ ಪಟ್ಟಣದ ರೈತ ಬಸವರಾಜು ಎಂಬವರು ಒಂದೂವರೆ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಈ ಬಾರಿ ಸುಮಾರು 150 ಚಂದ್ರಿಕೆಯಲ್ಲಿ 140 ಕೆಜಿ ರೇಷ್ಮೆ ಗೂಡು ಬೆಳೆ ಬಂದಿತ್ತು. ಇದರಿಂದ ಬರುವ ಹಣ ಕೊಡಗು ಸಂತ್ರಸ್ತರಿಗೆ ಆಸರೆಯಾಗಲಿ ಅಂತಾ ಬಸವರಾಜು ಬಯಸಿದ್ದರು. ಹೀಗಾಗಿ ಇಂದು ರೇಷ್ಮೆ ಗೂಡು ಖರೀದಿದಾರರನ್ನು ತಮ್ಮ ತೋಟಕ್ಕೆ ಕರೆಸಿದ್ದರು.
ರೇಷ್ಮೆ ಖರೀದಿಗೆ ಬಂದಿದ್ದ ವ್ಯಾಪಾರಿಗಳು ಬಸವರಾಜು ಉದಾರತೆ ಮಚ್ಚಿ, ಕೊಡಗು ಸಂತ್ರಸ್ತರಿಗೆ ತಮ್ಮ ಪಾಲು ಕೂಡ ಅಂತಾ ಮಾರುಕಟ್ಟೆ ಬೆಲೆಗಿಂತ 40 ರೂ. ಹೆಚ್ಚುವರಿ ಹಣ ನೀಡಿ ರೇಷ್ಮೆ ಗೂಡು ಖರೀದಿಸಿದ್ದಾರೆ. ಇದರಿಂದಾಗಿ 30 ಸಾವಿರ ರೂ.ಗಿಂತಲೂ ಹೆಚ್ಚು ಹಣ ಸೇರಿದ್ದು, ಅದನ್ನು ಕೊಡಗು ಸಂತ್ರಸ್ತರ ನಿಧಿಗೆ ದಾನ ಮಾಡಿದ್ದಾರೆ.
ಬಸವರಾಜು ನಿರ್ಧಾರಕ್ಕೆ ಕುಟುಂಬದವರೂ ಸಂತಸ ವ್ಯಕ್ತಪಡಿಸಿದ್ದಾರೆ. ಹೀಗೆ ಎಲ್ಲರೂ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಬಸವರಾಜು ಮನವಿ ಮಾಡಿದ್ದಾರೆ.