Tag: ರೇಶನ್ ಕಾರ್ಡ್

  • ಮಧ್ಯ ರಾತ್ರಿಯಾದ್ರೂ ಬ್ಯಾಂಕ್‍ಗಳ ಮುಂದೆ ಕ್ಯೂ ನಿಂತ ಜನ

    ಮಧ್ಯ ರಾತ್ರಿಯಾದ್ರೂ ಬ್ಯಾಂಕ್‍ಗಳ ಮುಂದೆ ಕ್ಯೂ ನಿಂತ ಜನ

    ಚಾಮರಾಜನಗರ: ದೇಶದಲ್ಲಿ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಜನ ತಮ್ಮ ಹಳೆ ನೋಟುಗಳನ್ನು ಕೊಟ್ಟು ಹೊಸ ನೋಟ್ ಪಡೆಯಲು ರಾತ್ರಿ ಇಡೀ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ ಇದೀಗ ಚಾಮರಾಜನಗರದಲ್ಲಿ ಮಧ್ಯ ರಾತ್ರಿಯಾದರೂ ಬ್ಯಾಂಕ್‍ಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

    ದೇಶದ ಪ್ರಜೆ ಎಂದು ಗುರುತಿಸುವ ಆಧಾರ್ ಕಾರ್ಡ್ ನ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳುವ ಉದ್ದೇಶದಿಂದ ಹಾಗೂ ರೇಷನ್ ಕಾರ್ಡ್ ಗೆ ಹೆಬ್ಬೆರಳು ಗುರುತು ನೀಡಲು ಇಲ್ಲಿನ ಜನರು ಬ್ಯಾಂಕ್‍ಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದಲ್ಲದೆ ಇಡೀ ದಿನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜನರು ಬ್ಯಾಂಕ್‍ಗಳನ್ನು ಕಾಯುವ ಕಾಯಕದಲ್ಲಿ ಇದ್ದಾರೆ. ಚಾಮರಾಜನಗರ ಪಟ್ಟಣ ಸೇರಿದಂತೆ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೆಗಾಲ, ಹನೂರು, ಯಳಂದೂರು ತಾಲೂಕಿನಲ್ಲೂ ಇದೆ ಪರಿಸ್ಥಿತಿ ನಿರ್ಮಾಣವಾಗಿದೆ.

    ಜನರು ರಾತ್ರಿ ಇಡೀ ಕ್ಯೂನಲ್ಲಿ ನಿಲ್ಲಲು ಕೇಂದ್ರ ಸರ್ಕಾರದ ನಿಯಮವೇ ಕಾರಣವಾಗಿದೆ. ಈ ಆಧಾರ್ ಕಾರ್ಡ್ ಎಡಿಟ್ ಮಾಡಲು ಮತ್ತು ರೇಷನ್ ಕಾರ್ಡ್ ಗೆ ಹೆಬ್ಬೆಟ್ಟು ಗುರುತು ನೀಡಲು ತಾಲೂಕುಗಳ ಮಿನಿ ವಿಧಾನ ಸೌಧ ಹಾಗೂ ಕೆಲವೇ ಕೆಲವು ಬ್ಯಾಂಕ್‍ಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಆದರೂ ಕೂಡ ಒಂದು ಕಡೆ ಪ್ರತಿ ದಿನ 20 ಆಧಾರ್ ಕಾರ್ಡನ್ನು ಎಡಿಟ್ ಮಾಡಲು ಸಾಧ್ಯವಾಗುತ್ತಿದೆ. ಹೀಗಾಗಿ ಹೆಚ್ಚು ಹೆಚ್ಚು ಜನರ ಆಧಾರ್ ಕಾರ್ಡ್ ಎಡಿಟ್ ಮಾಡಿಸಲು ಮತ್ತು ಹೆಬ್ಬೆಟ್ಟು ಗುರುತು ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನರು ತಮ್ಮ ಹಕ್ಕನ್ನು ಬಳಕೆ ಮಾಡಿಕೊಳ್ಳಲು ರಾತ್ರಿ ಇಡೀ ಬ್ಯಾಂಕ್‍ಗಳನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬ್ಯಾಂಕ್ ಮುಂದೆ ಕುಳಿತ ತಾಯಿಬಾಯಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಜನರ ಕಷ್ಟಗಳನ್ನು ಅರಿತು ಜಿಲ್ಲೆ ಹಾಗೂ ತಾಲೂಕು ಕೇಂದ್ರದಲ್ಲಿ ಆಧಾರ್ ಎಡಿಟ್ ಹಾಗೂ ರೇಶನ್ ಕಾರ್ಡ್ ಹೆಬ್ಬೆಟ್ಟು ಮಾಡುವ ಕೇಂದ್ರಗಳನ್ನು ತೆರೆದು ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದೇ ಸಾರ್ವಜನಿಕರ ಆಗ್ರಹವಾಗಿದೆ.