Tag: ರೇಡ್

  • ನಾಲ್ವರು ಸ್ಟಾರ್‌ಗಳ ಮೇಲಿನ ಐಟಿ ದಾಳಿಗೆ ಜಿಎಸ್‍ಟಿ ಕಾರಣ?

    ನಾಲ್ವರು ಸ್ಟಾರ್‌ಗಳ ಮೇಲಿನ ಐಟಿ ದಾಳಿಗೆ ಜಿಎಸ್‍ಟಿ ಕಾರಣ?

    ಬೆಂಗಳೂರು: ಸ್ಯಾಂಡಲ್‍ವುಡ್ ನ ನಾಲ್ವರು ಸ್ಟಾರ್ ಗಳ ಮೇಲಿನ ಐಟಿ ದಾಳಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಕಾರಣವೇ ಎನ್ನುವ ಪ್ರಶ್ನೆ ಎದ್ದಿದೆ.

    ಕನ್ನಡದಲ್ಲಿ ವರ್ಷಕ್ಕೆ 300 ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಟಾಲಿವುಡ್, ಮಾಲಿವುಡ್, ಕಾಲಿವುಡ್ ಸಿನಿಮಾ ಉದ್ಯಮಕ್ಕೆ ಹೋಲಿಸಿದರೆ ಸ್ಯಾಂಡಲ್‍ವುಡ್‍ನಿಂದ ತೆರಿಗೆ ಸಂಗ್ರಹ ಕಡಿಮೆ. ಇದರ ಜೊತೆಯಲ್ಲೇ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾಗಳು ತೆರೆಕಾಣುತ್ತಿವೆ. ಇಷ್ಟೆಲ್ಲಾ ಆದರೂ ತೆರಿಗೆ ಸಂಗ್ರಹ ಕಡಿಮೆ ಯಾಕೆ ಆಗುತ್ತಿದೆ ಎನ್ನುವ ಅನುಮಾನ ಆದಾಯ ತೆರಿಗೆ ಇಲಾಖೆಗೆ ಬಂದಿದೆ. ಈ ಅನುಮಾನ ಪರಿಹರಿಸಿಕೊಳ್ಳಲು ಜಿಎಸ್‍ಟಿಯ ಗುಪ್ತಚರ ವಿಭಾಗ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿಕೊಂಡಿತ್ತು. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!

    ಚಿತ್ರದ ಮೇಕಿಂಗ್ ಹಾಗೂ ನಟರ ಸಂಭಾವನೆ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿರಲಿಲ್ಲ. ಕೊನೆಗೆ ಮಲ್ಟಿಪ್ಲೆಕ್ಸ್ ಗಳಿಂದಲೇ ಅಧಿಕಾರಿಗಳು ಚಿತ್ರದ ಕಲೆಕ್ಷನ್ ಬಗ್ಗೆ ಮಾಹಿತಿ ಪಡೆದಿದ್ದರು. ಸಿನಿಮಾ ಎಷ್ಟು ದಿನ ಓಡಿದೆ, ಎಷ್ಟು ಆದಾಯ ಬಂದಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಆದರೆ ನಿರ್ಮಾಪಕರು ಮತ್ತು ವಿತರಕರು ನೀಡಿದ ಡೇಟಾಕ್ಕೂ ಇದಕ್ಕೂ ತಾಳೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲದೇ ನಟರಿಗೆ ಮಾರುಕಟ್ಟೆಯಲ್ಲಿ ಇರುವ ಸಂಭಾವನೆ ಹಾಗೂ ನಟರು ಹೇಳಿರುವ ಸಂಭಾವನೆಗೂ ತಾಳೆ ಆಗದ ವಿಚಾರ ಪ್ರಾಥಮಿಕ ಪರಿಶೀಲನೆಯಲ್ಲಿ ಐಟಿ ಗಮನಕ್ಕೆ ಬಂದಿದೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು


    ಕನ್ನಡದಲ್ಲಿ ಕೆಲ ನಟರಿಗೆ ಮುಂಗಡ ಸಂಭಾವನೆಯಾಗಿ ಒಂದು ವಿಲ್ಲಾ ಮತ್ತು ಫ್ಲಾಟ್‍ಗಳನ್ನು ನೀಡಲಾಗುತ್ತಿದೆ ಎನ್ನುವ ವಿಚಾರ 2017ರಲ್ಲಿ ನಡೆದಿದ್ದ ಐಟಿ ದಾಳಿ ವೇಳೆ ಬೆಳಕಿಗೆ ಬಂದಿತ್ತು. ಈ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ಐಟಿ ಗುರುವಾರ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ದಾಳಿ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವಣ್ಣ, ಗೀತಾರನ್ನು ಕರೆದೊಯ್ದ ಐಟಿ ಅಧಿಕಾರಿಗಳು

    ಶಿವಣ್ಣ, ಗೀತಾರನ್ನು ಕರೆದೊಯ್ದ ಐಟಿ ಅಧಿಕಾರಿಗಳು

    ಬೆಂಗಳೂರು: ನಟ ಶಿವರಾಜ್ ಕುಮಾರ್ ಮನೆಯಲ್ಲಿ ಕಳೆದ ದಿನದಿಂದ ಇಂದು ಕೂಡ ಐಟಿ ಅಧಿಕಾರಿಗಳು ಕಾರ್ಯಚರಣೆಯನ್ನು ಮುಂದುವರಿಸಿದ್ದು, ಈಗ ಅಧಿಕಾರುಗಳು ಶಿವಣ್ಣ ಮತ್ತು ಅವರ ಪತ್ನಿ ಗೀತಾರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದಾರೆ.

    ಗುರುವಾರ ದಾಳಿ ಮಾಡುವಾಗ ಅಧಿಕಾರಿಗಳು ಬ್ಯಾಂಕ್ ಖಾತೆ ಮತ್ತು ಲಾಕರ್ ಸೀಜ್ ಮಾಡಿದ್ದರು. ಹೀಗಾಗಿ ಇಂದು ಅಧಿಕಾರಿಗಳು ಬ್ಯಾಂಕ್ ಖಾತೆ, ಲಾಕರ್ ಪರಿಶೀಲನೆ ಮತ್ತು ಬ್ಯಾಂಕ್ ಲಾಕರ್ ಓಪನ್ ಮಾಡಲು ಶಿವಣ್ಣ ಮತ್ತು ಗೀತಾರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು

    ಗುರುವಾರ ಅಧಿಕಾರಿಗಳು ದಾಳಿ ಮುಗಿಸಿ ವಾಪಸ್ ಹೋಗಿದ್ದರು. ಇಂದು ಬೆಳಗ್ಗೆ ನಟ ಶಿವರಾಜ್ ಕುಮಾರ್ ಮನೆಗೆ ಖಾಸಗಿ ಇನ್ನೋವಾ ಕಾರಿನಲ್ಲಿ ಇಬ್ಬರು ಐಟಿ ಅಧಿಕಾರಿ ಆಗಮಿಸಿದ್ದರು. ಗುರುವಾರ ರಾತ್ರಿ ಮನೆಯಲ್ಲೇ ತಂಗಿದ್ದ ಮೂವರು ಅಧಿಕಾರಿಗಳು ಸೇರಿ ಒಟ್ಟು ಐದು ಜನರ ಐಟಿ ಅಧಿಕಾರಿಗಳ ತಂಡ ಶಿವಣ್ಣನ ಮನೆಯಲ್ಲಿ ಕಾರ್ಯಚರಣೆಯನ್ನು ಮುಂದುವರಿಸಿತ್ತು. ನಂತರ ಸ್ವಲ್ಪ ಸಮಯದ ನಂತರ ಲ್ಯಾಪ್ ಟಾಪ್ ಹಿಡಿದು ಮತ್ತೆ ಒಬ್ಬರು ಹಿರಿಯ ಅಧಿಕಾರಿ ಸಮೇತ ಮೂವರು ಐಟಿ ಅಧಿಕಾರಿಗಳು ಆಗಮಿಸಿದ್ದರು.

    ಒಬ್ಬ ಟೆಕ್ನಿಷಿಯನ್ ಅವರನ್ನು ಮನೆಗೆ ಕರೆಸಿಕೊಂಡು ಮನೆಯಲ್ಲಿರುವ ಕಂಪ್ಯೂಟರ್ ನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇಬ್ಬರು ಮಹಿಳೆಯರು, ಒಬ್ಬರು ಟೆಕ್ನಿಷಿಯನ್, ಉಳಿದ ಎಳು ಜನರ ತಂಡದಿಂದ ಶಿವಣ್ಣ ಮನೆಯಲ್ಲಿ ಐಟಿ ದಾಳಿ ಮುಂದುವರಿದಿತ್ತು. ಜೊತೆಗೆ ಇಬ್ಬರು ಮಹಿಳಾ ಅಧಿಕಾರಿಗಳು ಗೀತಾ ಶಿವರಾಜ್ ಕುಮಾರ್ ಅವರನ್ನು ವಿಚಾರಣೆ ಕೂಡ ಮಾಡಿದ್ದರು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ದಾಳಿ ಆಗಿದೆ ಗೊತ್ತು, ಆದ್ರೆ ಯಾಕೆ ದಾಳಿ ನಡೆದಿದೆ ಅಂತ ಗೊತ್ತಿಲ್ಲ – ಡಿಸಿಎಂ

    ಐಟಿ ದಾಳಿ ಆಗಿದೆ ಗೊತ್ತು, ಆದ್ರೆ ಯಾಕೆ ದಾಳಿ ನಡೆದಿದೆ ಅಂತ ಗೊತ್ತಿಲ್ಲ – ಡಿಸಿಎಂ

    ಬೆಂಗಳೂರು: ಗುರುವಾರ ಬೆಳ್ಳಂಬೆಳಗ್ಗೆಯಿಂದ ಸ್ಯಾಂಡಲ್‍ವುಡ್ ನಟರು ಮತ್ತು ನಿರ್ಮಾಪಕರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಿದ್ದು, ಎಲ್ಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾಗುತ್ತಿದೆ. ಆದರೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ಐಟಿ ದಾಳಿ ಆಗಿದೆ ಎಂದು ಗೊತ್ತು. ಆದರೆ ಯಾಕೆ ದಾಳಿ ಆಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

    ಡಿಸಿಎಂ ಪರಮೇಶ್ವರ್ ಅವರು, ಐಟಿ ಅಧಿಕಾರಿಗಳು ಸ್ಯಾಂಡಲ್‍ವುಡ್ ನಟರ ಮೇಲೆ ದಾಳಿ ಮಾಡಿದ್ದಾರೆ. ದಾಳಿಗಾಗಿ ಅಧಿಕಾರಿಗಳು ಪೊಲೀಸರ ನೆರವು ಕೇಳುತ್ತಿದ್ದಾರೆ. ಹೀಗಾಗಿ ಡಿಜಿ ಬಳಿ ಪೊಲೀಸರ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪೊಲೀಸರ ಭದ್ರತೆ ನೆರವು ಮಾತ್ರ ಕೇಳಿದ್ದಾರೆ. ಆದರೆ ಅವರು ಯಾರ ಮೇಲೆ, ಯಾಕೆ ಅಂತ ಮಾಹಿತಿ ಕೊಡಲಿಲ್ಲ ಎಂದು ಡಿಸಿಎಂ ಹೇಳಿದ್ದಾರೆ.

    ಕಳೆದ ದಿನದಿಂದ ನಟ ಸುದೀಪ್, ಯಶ್, ಪುನೀತ್ ರಾಜ್‍ಕುಮಾರ್, ಶಿವರಾಜ್‍ಕುಮಾರ್ ಸೇರಿದಂತೆ ನಿರ್ಮಾಪಕರ ಮನೆಯ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ 20ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಇತ್ತ ಸಚಿವ ಡಿ.ಕೆ. ಶಿವಕುಮಾರ್ ಅವರು ಕೂಡ ಐಟಿ ದಾಳಿಯ ಬಗ್ಗೆ ತಿಳಿದು ರಾತ್ರಿ ನಟ ಪುನೀತ್ ಮನೆ ಬಳಿ ಹೋಗಿ ಅಭಿಮಾನಿಗಳು ಜೊತೆ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ಬಾಲ್ಕನಿಯಲ್ಲೇ ನಟ ಶಿವಣ್ಣ ದಂಪತಿ ವಾಕಿಂಗ್

    ಮನೆಯ ಬಾಲ್ಕನಿಯಲ್ಲೇ ನಟ ಶಿವಣ್ಣ ದಂಪತಿ ವಾಕಿಂಗ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟರ ಮನೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಅಧಿಕಾರಿಗಳ ಪರಿಶೀಲನೆ ಕಾರ್ಯಾಚರಣೆ ಮುಂದುವರಿದಿದ್ದು, ಪರಿಣಾಮ ನಟ ಶಿವರಾಜ್‍ಕುಮಾರ್ ದಂಪತಿಯಿಂದ ಮನೆಯ ಬಾಲ್ಕನಿಯಲ್ಲೇ ವಾಕಿಂಗ್ ಮಾಡಿದ್ದಾರೆ.

    ಐಟಿ ಅಧಿಕಾರಿಗಳು ದಾಳಿ ಮಾಡುವಾಗ ಸದಸ್ಯರು ಮನೆಯಿಂದ ಹೊರಗಡೆ ಹೋಗಲು ಅವಕಾಶ ಇರುವುದಿಲ್ಲ. ಆದರೆ ಶಿವಣ್ಣ ಅವರು ಆರೋಗ್ಯ ದೃಷ್ಟಿಯಿಂದ ಪ್ರತಿನಿತ್ಯ ಮನೆಯ ಸಮೀಪದ ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಿದ್ದರು. ಆದರೆ ಐಟಿ ದಾಳಿಯಿಂದ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದಿದ್ದರಿಂದ ಮಾನ್ಯತಾ ಟೆಕ್‍ಪಾರ್ಕಿನಲ್ಲಿರುವ ನಿವಾಸದ ಬಾಲ್ಕನಿಯಲ್ಲಿ ನಟ ಶಿವರಾಜ್‍ಕುಮಾರ್ ತಮ್ಮ ಪತ್ನಿ ಗೀತಾ ಅವರ ಜೊತೆ ವಾಕಿಂಗ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಿಂದಿನ ಚಿತ್ರದ ಸಂಭಾವನೆ ಎಷ್ಟು? – ಶಿವಣ್ಣರನ್ನು ವಿಚಾರಿಸುತ್ತಿರುವ ಐಟಿ ಅಧಿಕಾರಿಗಳು

    ಗುರುವಾರ ತಡರಾತ್ರಿ 12 ಗಂಟೆವರೆಗೆ ಐಟಿ ಅಧಿಕಾರಿಗಳಿಂದ ತಪಾಸಣೆ ಮಾಡಿದ್ದಾರೆ. ಒಟ್ಟು ಎಂಟು ಮಂದಿ ಐಟಿ ಅಧಿಕಾರಿಗಳ ತಂಡ ಶಿವರಾಜ್ ಕುಮಾರ್ ಮನೆಯಲ್ಲಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿ ವಾಪಸ್ಸಾಗಿದ್ದರು. ಬಳಿಕ ರಾತ್ರಿ ಮೂವರು ಐಟಿ ಅಧಿಕಾರಿಗಳು ಶಿವಣ್ಣನ ಮನೆಯಲ್ಲೇ ತಂಗಿದ್ದು, ಉಳಿದ ಅಧಿಕಾರಿಗಳು ವಾಪಸ್ ಹೋಗಿದ್ದರು. ಅವರು ಇಂದು ಬೆಳಗ್ಗೆ ಬಂದ ನಂತರ ಮತ್ತೆ ಶೋಧ ಕಾರ್ಯಚರಣೆ ಮುಂದುವರಿಯಲಿದೆ.

    ನಟರು ಮತ್ತು ನಿರ್ಮಾಕಪಕರು ಮನೆಯಲ್ಲಿ ಸಿಕ್ಕಿದ್ದ ಆಸ್ತಿಪಾಸ್ತಿ ಪತ್ರ, ಇನ್ನಿತರ ದಾಖಲೆಗಳ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ಐಟಿ ಅಧಿಕಾರಿಗಳು ಉತ್ತರ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಲು ನಟರು ಮತ್ತು ನಿರ್ಮಾಪಕರು ಸಮಯ ಬೇಕೆಂದಿದ್ದರು. ಇಂದೂ ಕೂಡ ಪರಿಶೀಲನೆ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಎಲ್ಲಾ ಸಂಪೂರ್ಣ ದಾಖಲೆಗಳಿಗೆ ಉತ್ತರ ಪಡೆಯಲು ಇಂದು ಕೂಡ ಪರಿಶೀಲನೆ ಮಾಡಲಿದ್ದಾರೆ. ದೊಡ್ಡ ದೊಡ್ಡ ಬ್ಯಸಿನೆಸ್ ಜಾಲ ಮತ್ತು ತೆರಿಗೆ ವಂಚನೆ ಪತ್ತೆ ಹಚ್ಚಲು ಐಟಿ ದಾಳಿ ನಡೆಸಲಾಗಿದೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರೋರಾತ್ರಿ ಪುನೀತ್ ಮನೆ ಮುಂದೆ ಡಿಕೆಶಿ ಪ್ರತ್ಯಕ್ಷ

    ರಾತ್ರೋರಾತ್ರಿ ಪುನೀತ್ ಮನೆ ಮುಂದೆ ಡಿಕೆಶಿ ಪ್ರತ್ಯಕ್ಷ

    ಬೆಂಗಳೂರು: ಗುರುವಾರ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆಗೆ ಲಗ್ಗೆ ಇಟ್ಟ ಐಟಿ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು, ಇಂದೂ ಮಂದುವರಿದಿದೆ. ಆದರೆ ಅಚ್ಚರಿ ಎಂಬಂತೆ ನಿನ್ನೆ ರಾತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ನಟ ಪುನೀತ್ ರಾಜ್‍ಕುಮಾರ್ ಮನೆ ಮುಂದೆ ಪ್ರತ್ಯಕ್ಷವಾಗಿದ್ದರು.

    ಪುನೀತ್ ರಾಜ್‍ಕುಮಾರ್ ಮನೆ ಬಳಿಯೇ ಸಚಿವರು ತಮ್ಮ ಕಾರಿನಿಂದ ಇಳಿದಿದ್ದಾರೆ. ಬಳಿಕ ಇನ್ನೂ ಮುಗಿದಿಲ್ವಾ ಅಂತ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ನಂತರ ಏನೂ ಆಗೋದಿಲ್ಲ ತಲೆ ಕೆಡಿಸಿಕೊಳ್ಳಬೇಡಿ ಅಂತ ಅಪ್ಪು ಅಭಿಮಾನಿಗಳಲ್ಲಿ ಧೈರ್ಯ ತುಂಬಿ ನಡೆದುಕೊಂಡೇ ಮನೆಗೆ ಹೋಗಿದ್ದಾರೆ. ಇದಕ್ಕೂ ಮುನ್ನ ಡಿ.ಕೆ ಶಿವಕುಮಾರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: ಶಿವಣ್ಣ, ಪುನೀತ್, ಸುದೀಪ್, ಯಶ್, ರಾಧಿಕಾ ಮನೆಯಲ್ಲಿ ಐಟಿ ರೇಡ್ ಆಗಿದ್ದು ಯಾಕೆ?

    ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ಸಿನಿಮಾ ಮಾಡುವ ನಿರ್ಮಾಪಕರ ಮನೆಗಳ ಮೇಲೂ ಐಟಿ ರೇಡ್ ಮಾಡಿದ್ದರು. ಗುರುವಾರ ಬೆಳಗ್ಗೆ 6 ಗಂಟೆಗೆ ಶುರುವಾದ ದಾಳಿ, ರಾತ್ರಿ 11 ಗಂಟೆವರೆಗೂ ಮುಂದುವರಿದಿತ್ತು. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ನಡುಗಿಸಿದ ಐಟಿ ದಾಳಿಗೆ ಹೈ ಬಜೆಟ್ಟಿನ ಮೂರು ಸಿನಿಮಾಗಳೇ ಕಾರಣ ಎನ್ನಲಾಗಿದೆ.

    ಇತ್ತ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆಶಿ ಮನೆ ಹಾಗೂ ಕೋಡಿಹಳ್ಳಿಯ ಡಿ.ಕೆ ಸುರೇಶ್ ಮನೆಗೆ ನಾಲ್ಕು ಜನ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಚಿವ ಡಿ.ಕೆ ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಮನೆಯ ಬಾಗಿಲ ಮೇಲೆ ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿರುವ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ ತಾಯಿ ಗೌರಮ್ಮ ಅವರು ಬೆಂಗಳೂರಿಗೆ ತೆರಳಿದ್ದು, ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಸಚಿವರ ಆಪ್ತ ವಲಯದಿಂದ ಮಾಹಿತಿ ತಿಳಿದು ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ದಾಳಿ ನಡೆದಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ಸುದೀಪ್

    ಐಟಿ ದಾಳಿ ನಡೆದಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ಸುದೀಪ್

    ಬೆಂಗಳೂರು: ನನಗೆ ಏನು ಗೊತ್ತಿಲ್ಲ. ಈಗಷ್ಟೇ ಬಂದಿದ್ದೇನೆ ಎಂದು ಐಟಿ ದಾಳಿಗೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ನಿವಾಸದ ಬಳಿ ಇದ್ದ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ವೈಯಕ್ತಿಕ ಕಾರಣದಿಂದ ಐಟಿ ದಾಳಿ ನಡೆದಿಲ್ಲ. ದಿ ವಿಲನ್, ಕೆಜಿಎಫ್ ಮತ್ತು ನಟಸಾರ್ವಭೌಮ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳಾಗಿದೆ. ಆದ್ದರಿಂದ ಮೂರು ಬಿಗ್ ಬಜೆಟ್ ಕಾರಣಕ್ಕೆ ಐಟಿ ದಾಳಿ ಮಾಡಿರಬಹುದು. ಈ ಮೂರು ಸಿನಿಮಾಗೆ ಸಂಬಂಧಿಸಿದ ನಿರ್ಮಾಪಕರ ಮನೆ ಮೇಲೂ ಐಟಿ ರೇಡ್ ಆಗಿದೆ ಎಂದು ಹೇಳಿದ್ದಾರೆ.

    ನಾವು ಏನೇ ಮಾತನಾಡಬೇಕಾದರೂ ಸಾಕ್ಷಿ ಸಮೇತ ಮಾತನಾಡಬೇಕು. ಅದು ಯಾವುದೇ ಪಕ್ಷ ಮತ್ತು ಇನ್ನೊಬ್ಬರ ಬಗ್ಗೆ ಆಗಲಿ ಮಾತನಾಡಬಾರದು. ತೆರಿಗೆ ಇಲಾಖೆ ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಅದಕ್ಕೆ ತನ್ನದೇ ಆದಂತಹ ನಿಯಮಗಳಿರುತ್ತವೆ. ಅವರಿಗೆ ಆ ನಿಯಮವನ್ನು ಪಾಲಿಸಿಲ್ಲ ಎಂಬ ಮಾಹಿತಿ ಸಿಕ್ಕಿರುತ್ತದೆ. ಆದ್ದರಿಂದ ದಾಳಿ ಮಾಡಿದ್ದಾರೆ. ನಾವು ಅಧಿಕಾರಿಗಳಿಗೆ ಸಹಕರಿಸಬೇಕು ಅಲ್ಲವೇ? ನಮ್ಮ ತಾಯಿ ಒಬ್ಬರೆ ಇದ್ದಾರೆ. ಅದಕ್ಕಾಗಿ ನಾನು ಮನೆಗೆ ಬಂದಿದ್ದೇನೆ. ಇಲ್ಲ ಅಂದಿದ್ದರೆ ನಾನು ಅಲ್ಲೆ ಕುಳಿತುಕೊಂಡು ಇದೆಲ್ಲವನ್ನು ನಿಭಾಯಿಸಬಹುದಿತ್ತು ಎಂದು ತಿಳಿಸಿದರು.

    ಬೆಳಗ್ಗೆ ಐಟಿ ದಾಳಿ ನಡೆದಾಗ ಸುದೀಪ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಸುದೀಪ್ ಅವರಿಗೆ ಮನೆಗೆ ಬರಲು ಸೂಚಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್ ರದ್ದುಗೊಳಿಸಿ ಮಧ್ಯಾಹ್ನ ಬೆಂಗಳೂರಿಗೆ ಹಿಂತಿರುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್‍ಗೆ ಶಾಕ್ ಕೊಡಲು ಐಟಿ ಅಧಿಕಾರಿಗಳ ಮಾಸ್ಟರ್ ಪ್ಲಾನ್ ಹೀಗಿತ್ತು!

    ಸ್ಯಾಂಡಲ್‍ವುಡ್‍ಗೆ ಶಾಕ್ ಕೊಡಲು ಐಟಿ ಅಧಿಕಾರಿಗಳ ಮಾಸ್ಟರ್ ಪ್ಲಾನ್ ಹೀಗಿತ್ತು!

    – ಕಳೆದ ಒಂದು ವಾರದಿಂದ ದಾಳಿಗೆ ಐಟಿ ಅಧಿಕಾರಿಗಳು ಪ್ಲಾನ್
    – ಅಧಿಕಾರಿಗಳಿಗೆ ನಾವು ನಟರ ಮನೆ ಹೋಗ್ತಿದ್ದೇವೆ ಅನ್ನೋದು ತಿಳಿದಿರಲಿಲ್ಲ
    – ಮುಂಚಿತವಾಗಿ 150 ದೊಡ್ಡ ಪೆಟ್ಟಿಗೆಯನ್ನು ಸಿದ್ಧಪಡಿಸಿದ್ದ ಐಟಿ

    ಬೆಂಗಳೂರು: ಒಂದು ವಾರದ ಹಿಂದೆ ಮಾಸ್ಟರ್ ಪ್ಲಾನ್ ಮಾಡಿ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಸ್ಯಾಂಡಲ್‍ವುಡ್‍ಗೆ ಶಾಕ್ ಕೊಟ್ಟಿದ್ದಾರೆ.

    ಐಟಿ ಅದಿಕಾರಿಗಳು ಮೂರು ದಿನಗಳಿಂದ ನಟರು ಮತ್ತು ನಿರ್ಮಾಪಕರ ಲೊಕೇಷನ್ ಮೇಲೆ ಕಣ್ಣಿಟ್ಟಿದ್ದು, ನಟರ, ನಿರ್ಮಾಪಕರ ಆದಾಯದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದರು. ಅಷ್ಟೇ ಅಲ್ಲದೇ ಮೊದಲೇ ಐಟಿ ಅಧಿಕಾರಿಗಳು 50 ಕಡೆ ಏಕಕಾಲಕ್ಕೆ ದಾಳಿಗೆ ಸ್ಕೆಚ್ ಕೂಡ ಹಾಕಿದ್ದರು. ಪ್ಲಾನ್ ಪ್ರಕಾರವಾಗಿ ಇಂದು ಏಕಾಕಾಲದಲ್ಲಿ ನಟರು, ನಿರ್ಮಾಪಕರು, ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಐಟಿ ಅಧಿಕಾರಿಗಳು ಸರ್ಕಾರಿ ಕಾರನ್ನು ಬಳಸದೇ ದಾಳಿಗೆ ಬಾಡಿಗೆ ಕಾರನ್ನು ಬಳಸಿದ್ದಾರೆ. ಬೇರೆ ಬೇರೆ ಟ್ರಾವೆಲ್ ಏಜೆನ್ಸಿಗಳ ಮೂಲಕ 150 ಇನ್ನೋವಾ ಕಾರ್ ಬುಕ್ ಮಾಡಿ ಈ ದಾಳಿ ನಡೆಸಲಾಗಿದೆ. ದಾಳಿ ಹಿನ್ನೆಲೆಯಲ್ಲಿ 200 ಸಶಸ್ತ್ರ ಪಡೆ ಸ್ಟೆನ್ ಗನ್ ಸಮೇತ ಬರುವಂತೆ ಪೊಲೀಸರಿಗೆ ಮೊದಲೇ ಸೂಚನೆ ನೀಡಲಾಗಿತ್ತು. ನಟರ ಮನೆಯ ಮೇಲೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಗಮಿಸಿ ಅಹಿತಕರ ಘಟನೆ ನಡೆದರೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಂಡಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಐಟಿ ದಾಳಿ – ಯಾರ ಮನೆ ಮೇಲೆ ದಾಳಿ ನಡೆದಿದೆ?

    ಅಧಿಕಾರಿಗಳಿಗೆ ತಿಳಿದಿರಲಿಲ್ಲ:
    ನಟರು ಮತ್ತು ನಿರ್ಮಾಪಕರ ಮನೆ ಮೇಲಿನ ದಾಳಿ ನಡೆಸುವ ಬಗ್ಗೆ ಅಧಿಕಾರಿಗಳಿಗೂ ತಿಳಿದಿರಲಿಲ್ಲ. ಆದರೆ ದಾಳಿಗೆ 200ಕ್ಕೂ ಹೆಚ್ಚು ಅಧಿಕಾರಿಗಳನ್ನು ಸಜ್ಜು ಮಾಡಿದ್ದರು. ಅವರನ್ನು ಐಟಿ ಕಚೇರಿ ಇರುವ ಕ್ವೀನ್ಸ್ ರಸ್ತೆಗೆ ಬರುವಂತೆ ಸೂಚಿಸಿದ್ದರು.

    ಕೆಲ ನಿರ್ಮಾಪಕರು ಚಾರ್ಟೆಡ್ ಅಕೌಂಟ್‍ಗಳೊಂದಿಗೆ ಸಂಪರ್ಕದಲ್ಲಿರುವ ಸಂಶಯದಿಂದ ಹಿರಿಯ ಐಟಿ ಅಧಿಕಾರಿಗಳು ಮಾಹಿತಿ ಬಿಟ್ಟಕೊಟ್ಟಿರಲಿಲ್ಲ. ಆದರೆ ನಾಳೆ ಬೆಳಗ್ಗೆ ದಾಳಿ ಇದ್ದರೆ ಇರುತ್ತದೆ. ಇಲ್ಲ ಅಂದರೆ ಇಲ್ಲ ಅಂತಲೂ ಹೇಳಿದ್ದರು. ಮೆಸೇಜ್ ಕಳುಹಿಸಿದ 30 ನಿಮಿಷದಲ್ಲಿ ಕಚೇರಿಗೆ ಬರುವಂತೆ ಸೂಚಿಸಿದ್ದರು.

    ಅದರಂತೆಯೇ ಬೆಳಗ್ಗೆ 4.30ಕ್ಕೆ ಅಧಿಕಾರಿಗಳಿಗೆ ಮೆಸೇಜ್ ಕಳುಹಿಸಿದ್ದಾರೆ. ಮೆಸೇಜ್ ಬಂದ ತಕ್ಷಣ ಅವರು ಹೇಳಿದ್ದ ಸ್ಥಳಕ್ಕೆ ಬಂದಿದ್ದರು. ಬಳಿಕ ಅವರಿಗೆ ಸೀಲ್ಡ್ ಕವರ್ ನಲ್ಲಿ ಸ್ಥಳ ನಿಯೋಜನೆ ಮಾಹಿತಿ ನೀಡಿ ಕಳುಹಿಸಿದ್ದರು. ಪಿನ್ ಲೊಕೇಷನ್ ನೋಡಿ ದಾಳಿ ಮಾಡುವಂತೆ ಅಧಿಕಾರಿಗಳಿಗೆ ಇಲಾಖೆ ಸೂಚಿಸಿತ್ತು. ಅಷ್ಟೇ ಅಲ್ಲದೇ ಮುಂಚಿತವಾಗಿ 150 ದೊಡ್ಡ ಪೆಟ್ಟಿಗೆಗಳೊಂದಿಗೆ ಅಧಿಕಾರಿಗಳ ತಂಡ ಸಜ್ಜಾಗಿತ್ತು. ಯಾಕೆಂದರೆ ದಾಳಿಯಲ್ಲಿ ವಶಪಡಿಸಿಕೊಳ್ಳುವ ಆಸ್ತಿ ಪತ್ರ ತರಲು ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿತ್ತು ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್‍ವುಡ್ ನಟರು ಮತ್ತು ನಿರ್ಮಾಪಕ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

    ಸ್ಯಾಂಡಲ್‍ವುಡ್ ಇತಿಹಾಸದಲ್ಲೇ ಇದು ಅತಿದೊಡ್ಡ ಐಟಿ ದಾಳಿಯಾಗಿದ್ದು ನಟರಾದ ಪುನೀತ್, ಯಶ್, ಸುದೀಪ್, ಶಿವರಾಜ್ ಕುಮಾರ್, ನಿರ್ಮಾಪಕರಾದ ಸಿಆರ್ ಮನೋಹರ್, ರಾಕ್‍ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಜಯಣ್ಣ ನಿವಾಸದ ಮೇಲೆ ದಾಳಿ ನಡೆದಿದೆ.

    ದಾಳಿ ನಡೆಸಿದ್ದು ಯಾಕೆ?
    ರಿಯಲ್ ಎಸ್ಟೇಟ್ ಮತ್ತು ಫೈನ್ಯಾನ್ಶಿಯರ್ಸ್‍ ಗಳು ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡಲು ಸಿನಿಮಾದಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇವರೆಲ್ಲ ಹೆಸರಾಂತ ನಿರ್ಮಾಪಕರ ಮೂಲಕ ದೊಡ್ಡ ದೊಡ್ಡ ಬಜೆಟ್ ಸಿನಿಮಾಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರು ಥಿಯೇಟರ್, ವಿತರಕರ ಮೂಲಕ ಕೋಟ್ಯಂತರ ರೂಪಾಯಿ ಸುಳ್ಳು ಲೆಕ್ಕ ನೀಡಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ದಾಳಿ ನಡೆದಿದೆ.

    ನಟರ ಮನೆ ಮೇಲೆ ದಾಳಿ ನಡೆಸಿದ್ದು ಯಾಕೆ?
    ಈಗ ನಟರು ಚಲನಚಿತ್ರದಲ್ಲಿ ಷೇರನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಲಾಭ ನಷ್ಟಕ್ಕೆ ನಿರ್ಮಾಪಕರು ಮಾತ್ರ ಹೊಣೆ ಆಗಿರುತ್ತಿದ್ದಾರೆ. ಹೀಗೆ ಬಂದ ಲಾಭವನ್ನು ಬ್ಲಾಕ್ ಮೂಲಕ ವೈಟ್ ಮಾಡುತ್ತಿದ್ದಾರೆ. ಕೇವಲ ಆದಾಯ ತೆರಿಗೆ ವಂಚನೆ ಮಾತ್ರ ಅಲ್ಲ. ಚಿತ್ರದಲ್ಲಿ ಬಂದ ಲಾಭವನ್ನು ಗೌಪ್ಯವಾಗಿಟ್ಟು ಬ್ಲಾಕ್ ಮನಿಯನ್ನು ವೈಟ್ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಈ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕ ಪತ್ರಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

    ಸುದೀಪ್, ಶಿವರಾಜ್ ಕುಮಾರ್ ಅಭಿನಯದ ‘ದಿ ವಿಲನ್’ ಅಕ್ಟೋಬರ್ 18 ರಂದು ಬಿಡುಗಡೆಯಾಗಿದ್ದರೆ, ಯಶ್ ಅಭಿನಯದ ‘ಕೆಜಿಎಫ್’ ಡಿಸೆಂಬರ್ 21 ರಂದು ಬಿಡುಗಡೆಯಾಗಿತ್ತು. ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ.

    ಐಟಿ ದಾಳಿ ನಡೆಸಿದ ಮಾತ್ರಕ್ಕೆ ತೆರಿಗೆ ವಂಚನೆ ನಡೆಸಿದ್ದಾರೆ ಎಂದರ್ಥವಲ್ಲ. ತಮ್ಮ ಆದಾಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಯಾರೂ ಹೆದರುವ ಅಗತ್ಯವಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್

    ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್‍ವುಡ್ ನಟರ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶಾಕ್ ಕೊಟ್ಟಿದ್ದರೆ, ಇತ್ತ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಐಟಿ ಶಾಕ್ ಕೊಟ್ಟಿದೆ.

    ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಅವರಿಗೆ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿದೆ. ಗೌರಮ್ಮ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕನಕಪುರದ ದೊಡ್ಡ ಆಲಹಳ್ಳಿಯ ನಿವಾಸದಲ್ಲಿ ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿ ಹೋಗಿದ್ದಾರೆ. ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಐಟಿ ಕೇಳಿದ ಪ್ರಶ್ನೆಗಳು ಏನು..?

    2017ರ ನವೆಂಬರ್ 6 ರಂದು ಡಿಕೆ ಶಿವಕುಮಾರ್ ಪತ್ನಿ ಉಷಾ, ಸಹೋದರ ಡಿ ಕೆ ಸುರೇಶ್, ತಾಯಿ ಗೌರಮ್ಮ, ಇಬ್ಬರು ಪುತ್ರಿಯರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಎಂಎಲ್‍ಸಿ ರವಿ, ಡಿಕೆಶಿ ಮಾವನ ಮಗ, ಡಿಕೆಶಿ ತಾಯಿ ಗೌರಮ್ಮ ಅವರ ಅಣ್ಣನ ಮಗ, ದವನಂ ಜ್ಯುವೆಲ್ಲರ್ಸ್ ಮಾಲೀಕ ಹರೀಶ್, ಶರ್ಮಾ ಟ್ರಾವೆಲ್ಸ್ ಮಾಲೀಕ ಸುನಿಲ್ ಶರ್ಮಾ, ಗ್ಲೋಬಲ್ ಕಾಲೇಜು ನಿರ್ದೇಶಕ ನಂದೀಶ್ ಸೇರಿ ಒಟ್ಟು 15 ಮಂದಿ ವಿಚಾರಣೆಗೆ ಹಾಜರಾಗಿ ಐಟಿ ಅಧಿಕಾರಿಗಳ ಪ್ರಶ್ನೆ ಉತ್ತರ ನೀಡಿದ್ದರು.

    ಕುಟುಂಬ ಸದಸ್ಯರು ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾದ ಬಳಿಕ ಅಂದು ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, ನಾನು ತೆರೆದ ಪುಸ್ತಕ, ನಾನು ಸಾಕಷ್ಟು ವಿಚಾರಣೆ ನೋಡಿದ್ದೇನೆ. ಜಾರಿ ನಿರ್ದೇಶನಾಲಯ(ಇಡಿ), ಸಿಬಿಐ ಕೊಡಬೇಕು ಎಂದು ಇದ್ದರೆ ಕೊಡಲಿ. ನಾನು ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಹೇಳಿದ್ದರು.

    ತನಿಖೆಗೆ ನಾನು ನನ್ನ ಕುಟುಂಬದವರು ಸಹಕಾರ ನೀಡಿದ್ದೇವೆ. ನ್ಯಾಯಯುತವಾಗಿ ತನಿಖೆ ನಡೆಯುವ ವಿಶ್ವಾಸವಿದೆ. ನಾವು ಸಂವಿಧಾನ ಒಪ್ಪಿದ್ದೇವೆ. ಕಾನೂನಿಗೆ ಗೌರವ ಕೊಡುತ್ತೇನೆ. ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ಯಾವುದನ್ನು ಮುಚ್ಚಿಡಲ್ಲ. ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡುವುದು ನಮ್ಮ ಕರ್ತವ್ಯ. ಐಟಿ ಅಧಿಕಾರಿಗಳಿಗೆ ನಾವು ಈ ಹಿಂದೆ ನೀಡಿದ ಮಾಹಿತಿ ಸಾಲದೇ ಇದ್ದಿದ್ದಕ್ಕೆ ಇಂದು ನಮ್ಮನ್ನು ವಿಚಾರಣೆಗೆ ಕರೆಸಿದ್ದಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ

    ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರು, ಚಿಂತಾಮಣಿ, ಮೈಸೂರು, ಉಡುಪಿ ಸೇರಿ 17 ಕಡೆ ಆದಾಯಕ್ಕೂ ಹೆಚ್ಚು ಆಸ್ತಿಗಳಿಸಿದ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಬಸವೇಶ್ವರನಗರ ಮತ್ತು ಸಹಕಾರನಗರ ಎರಡು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸುವ ಮೂಲಕ ಬೆಳ್ಳಂಬೆಳಗ್ಗೆ ಭ್ರಷ್ಟ ಆಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಐವರು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

    ಹಾಸನ ಜಿಲ್ಲೆಯ ಬೇಲೂರಿನ ಸಹಕಾರಿ ಬ್ಯಾಂಕ್ ಅಧಿಕಾರಿ ಆರ್. ಶ್ರೀಧರ್, ಯೋಜನಾ ಆಯೋಗದ ಸಹಾಯಕ ನಿರ್ದೇಶಕ ಬೇಸತ್ತಪ್ಪ, ದಾವಣಗೆರೆಯ ಹೆಚ್ಚುವರಿ ಕೃರ್ಷಿ ನಿದೇರ್ಶಕ ಹಂಸವೇಣಿ, ಮಂಗಳೂರಿನ ಸರ್ಕಾರಿ ಶೈಕ್ಷಣಿಕ ತರಬೇತಿ ಕೇಂದ್ರದ ಡಿ. ಮಂಜುನಾಥ್ ಮತ್ತು ಮೈಸೂರಿನ ಮುಡಾ ಕಿರಿಯ ಅಭಿಯಂತರ ಕೆ. ಮಾಣಿ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

    ದಾವಣಗೆರೆಯ ಕೃಷಿ ಇಲಾಖೆ ಪ್ರಭಾರಿ ನಿರ್ದೇಶಕಿ ಹಂಸವೇಣಿ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹಂಸವೇಣಿ ಹೆಸರಿನಲ್ಲಿ 75/40 ಅಳತೆಯ 3 ಅಂತಸ್ತಿನ ಒಂದು ಮನೆ, ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ 15 ಎಕರೆ ಜಮೀನು, 1 ಜೈಲೋ ಕಾರು, 5 ದ್ವಿಚಕ್ರ ವಾಹನ, 1 ಟ್ರ್ಯಾಕ್ಟರ್ ಹಾಗೂ ಅಪಾರ ಪ್ರಮಾಣದ ಬೆಳ್ಳಿ, ಬಂಗಾರ ಪತ್ತೆಯಾಗಿದೆ. ನಾಗವೇಣಿ ಪತಿ ಕಾರವಾರ ತೋಟಗಾರಿಕೆ ಇಲಾಖೆ ಎಡಿ ಎನ್. ಕುಮಾರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಏಕಾಕಾಲಕ್ಕೆ ಪತಿ ಪತ್ನಿಯರ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಹಂಸವೇಣಿ ತಂದೆ ಮನೆ ಮೇಲೂ ದಾಳಿ ನಡೆಸಿದ್ದಾರೆ. ಇನ್ನು ದಾವಣಗೆರೆ ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ದಾಖಲೆಗಳನ್ನು ಪರಿಶೀಲನೆ ನಡೆಯುತ್ತಿದೆ.

    ಉಡುಪಿಯಲ್ಲೂ ಎಸಿಬಿ ಅಧಿಕಾರಿಗಳು ಭ್ರಷ್ಟರ ಮೇಲೆ ದಾಳಿ ಮಾಡಿದ್ದು, ಮಂಗಳೂರಿನ ಸರ್ಕಾರಿ ಶಿಕ್ಷಕ ತರಬೇತಿ ಕೇಂದ್ರದ ರೀಡರ್ ಮಂಜುನಾಥಯ್ಯ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದೆ. ಈ ಹಿಂದೆ ಉಡುಪಿ ನಗರಸಭೆ ಪೌರಾಯುಕ್ತನಾಗಿ ಕಾರ್ಯನಿರ್ವಹಿಸಿದ್ದ ಮಂಜುನಾಥಯ್ಯ, ಸದ್ಯ ಮಂಗಳೂರಿನಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಅದಕ್ಕೂ ಮೊದಲು ಅವರು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದರು. ಮಣಿಪಾಲದ ಪ್ರಿಯದರ್ಶಿನಿ ಫ್ಲಾಟ್ ನಲ್ಲಿರುವ ಮಂಜುನಾಥಯ್ಯ ಮನೆ ಮತ್ತು ಏಕಕಾಲದಲ್ಲಿ ಚಿಕ್ಕಮಗಳೂರು ಕಡೂರು ತಾಲೂಕು ಬೀರೂರಿನಲ್ಲೂ ದಾಳಿ ಮಾಡಲಾಗಿದೆ.

    ಶಿವಮೊಗ್ಗ ಚೆನ್ನಗಿರಿಯಲ್ಲಿರುವ ಮಂಜುನಾಥನ ಬಾವನ ಮನೆಗೂ ದಾಳಿಯಾಗಿದೆ. ಎಸಿಬಿಯ ಪಶ್ಚಿಮ ವಲಯ ಎಸ್‍ಪಿ ಶೃತಿಯವರ ನೇತೃತ್ವದಲ್ಲಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ, ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಮೇಲಿಂದ ಮೇಲೆ ದೂರು ಬಂದ ಕಾರಣ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಜಿಲ್ಲೆಯ ಸಹಕಾರ ಸಂಘಗಳ ಇಲಾಖೆಯ ನಿಬಂಧಕ ಶ್ರೀಧರ್ ಗೆ ಸ್ವಗ್ರಾಮ ಚಿಂತಾಮಣಿ ಆಗಿದ್ದು, ಅವರ ಸ್ವಂತ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ಮನೆಯಲ್ಲಿ ಯಾರೂ ವಾಸವಿಲ್ಲವಾದರೂ ಖಾಲಿ ಮನೆಯ ಬೀಗ ತೆಗೆಸಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಶ್ರೀಧರ್ ಬಾವ ನಿವೃತ್ತ ಪ್ರಾಂಶುಪಾಲ ರಾಮಚಂದ್ರಪ್ಪ ಮನೆ ಮೇಲೂ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv