Tag: ರೆಸಿಪಿ

  • ಸ್ವಾದಿಷ್ಟವಾದ ಮಂಗಳೂರು ಬನ್ಸ್ ಮಾಡಲು ಇಲ್ಲಿದೆ ಸಿಂಪಲ್ ರೆಸಿಪಿ

    ಸ್ವಾದಿಷ್ಟವಾದ ಮಂಗಳೂರು ಬನ್ಸ್ ಮಾಡಲು ಇಲ್ಲಿದೆ ಸಿಂಪಲ್ ರೆಸಿಪಿ

    ಮಂಗಳೂರು ಬನ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಜಿಲ್ಲೆಯ ಹೋಟೆಲ್‍ಗಳಲ್ಲಿ ಸರ್ವೇ ಸಾಮಾನ್ಯವಾಗಿ ಸಿಗುವ ಬನ್ಸ್, ಸ್ವಲ್ಪ ಸಿಹಿ ಮಿಶ್ರಿತ ಎಣ್ಣೆಯಲ್ಲಿ ಕರಿದು ಮಾಡುವಂತಹ ಅಡುಗೆಯಾಗಿದೆ. ಇದನ್ನು ಬೆಂಗಳೂರು ಮತ್ತಿತರ ಕಡೆಗಳಲ್ಲಿಯೂ ಮಾಡ್ತಾರೆ. ಆದ್ರೆ ಬೇರೆ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ವ್ಯತ್ಯಾಸವಿದೆ. ಮಂಗಳೂರು ಬನ್ಸ್ ಮಾಡು ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮೈದಾ ಹಿಟ್ಟು – 3 ಕಪ್
    2. ಸಕ್ಕರೆ – ಅರ್ಧ ಕಪ್(ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕೆ ಅನುಗುಣವಾಗಿ ಬಳಸಿ)
    3. ಮೊಸರು – ಅರ್ಧ ಕಪ್
    4. ಅಡುಗೆ ಸೋಡಾ – 1 ಚಿಟಿಕೆ
    5. ಬಾಳೆಹಣ್ಣು – 2
    6. ಜೀರಿಗೆ – ಸ್ವಲ್ಪ
    7. ಎಣ್ಣೆ – ಕರಿಯಲು
    8. ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    * ಬಾಳೆಹಣ್ಣಿನ ಸಿಪ್ಪೆ ತೆಗೆದು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವುಚಿಕೊಳ್ಳಿ. ಅಥವಾ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ.
    * ಬಾಳೆಹಣ್ಣನ್ನು ಪೇಸ್ಟ್ ಮಾಡಿಕೊಂಡ ಬಳಿಕ ಅದಕ್ಕೆ ಸಕ್ಕರೆ, ಜೀರಿಗೆ, ಸೋಡಾ, ಉಪ್ಪು, ಮೊಸರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಪೂರ್ತಿ ಕರಗಿದ ಬಳಿಕ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟು ರೆಡಿ ಮಾಡಿಕೊಳ್ಳಿ.
    * ಕಲಸಿದ ಹಿಟ್ಟನ್ನು ಸುಮಾರು 8-10 ಗಂಟೆಗಳ ಕಾಲ ನೆನೆಯಲು ಬಿಡಿ.
    * ನಂತರ ಒಲೆ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಬಳಿಕ ಒಂದು ಸಣ್ಣ ಲಿಂಬೆ ಹಣ್ಣು ಗಾತ್ರದ ಉಂಡೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಮೈದಾ ಪುಡಿ ಸೇರಿಸಿಕೊಂಡು ಸ್ವಲ್ಪ ದಪ್ಪ ಇರುವಂತೆಯೇ ಲಟ್ಟಿಸಿಕೊಳ್ಳಿ.
    * ಇತ್ತ ಎಣ್ಣೆ ಕಾದ ಬಳಿಕ ಲಟ್ಟಿಸಿಕೊಂಡ ಬನ್ಸ್ ನ್ನು ಎಣ್ಣೆಗೆ ಬಿಡಿ. ಸ್ವಲ್ಪ ಹೊತ್ತಿನ ಬಳಿಕ ಬನ್ಸ್ ಉಬ್ಬುತ್ತದೆ. ನಂತರ ಕಂದು ಬಣ್ಣ ಬರುವವರೆಗೆ ಕರಿದು ತೆಗೆಯಿರಿ.
    * ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಲು ಕೊಡಿ.

  • ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

    ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

    ಕರ್ನಾಟಕದ ಫೇಮಸ್ ಡಿಶ್‍ಗಳಲ್ಲಿ ಹಿತ್ಕವರೆ ಕಾಳಿನ ಸಾಂಬಾರು ಕೂಡ ಒಂದು. ಅವರೆಕಾಯಿ ಸೀಸನ್‍ಲ್ಲಿ ಹೆಚ್ಚಾಗಿ ಇದನ್ನ ಮಾಡ್ತಾರೆ. ಹಲವು ವಿಧಾನಗಳಲ್ಲಿ ಈ ಸಾಂಬಾರು ಮಾಡ್ತಾರೆ. ಅವುಗಳಲ್ಲಿ ಒಂದು ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    ಹಿತ್ಕವರೆ ಕಾಳು- 2 ಕಪ್
    ಕೊತ್ತಂಬರಿ ಬೀಜ – 1 ಚಮಚ
    ಜೀರಿಗೆ – 1 ಚಮಚ
    ಉದ್ದಿನ ಬೇಳೆ – ಅರ್ಧ ಚಮಚ
    ಕಡ್ಲೆ ಬೇಳೆ – 1 ಚಮಚ
    ಮೆಂತೆ – ಕಾಲು ಚಮಚ
    ಸಾಸಿವೆ – ಕಾಲು ಚಮಚ
    ಚಕ್ಕೆ – ಅರ್ಧ ಇಂಚು
    ಇಂಗು – ದೊಡ್ಡ ಚಿಟಿಕೆ
    ಲವಂಗ – 3
    ಶುಂಠಿ – ಅರ್ಧ ಇಂಚು
    ಬೆಳ್ಳುಳ್ಳಿ – 2 ಎಸಳು
    ಒಣಮೆಣಸಿನಕಾಯಿ – 5,6
    ತೆಂಗಿನ ತುರಿ – ಅರ್ಧ ಕಪ್
    ಬೆಳ್ಳುಳ್ಳಿ – 1(ಚಿಕ್ಕದು) ಕಟ್ ಮಾಡಿಕೊಳ್ಳಿ
    ಕರಿಬೇವಿನ ಎಲೆ – 8 ರಿಂದ 10
    ಬೆಲ್ಲ – 2 ಚಮಚ(ಇಷ್ಟವಿದ್ದಲ್ಲಿ ಬಳಸಿ)
    ಉಪ್ಪು – ರುಚಿಗೆ ತಕ್ಕಷ್ಟು
    ಹುಣಸೆಹಣ್ಣಿನ ರಸ – 1 ಚಮಚ

    ಮಾಡುವ ವಿಧಾನ:

    * ಸಿಪ್ಪೆತೆಗೆದು ಹಿದುಕಿದ ಅವರೆಕಾಳಿಗೆ ಅಂದಾಜು 1 ಕಪ್ ನೀರು ಹಾಗೂ 1 ಚಿಟಿಕೆ ಉಪ್ಪು ಹಾಕಿ ಬೇಯಲು ಇಡಿ.

    * ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಿವೆ, ಮೆಂತ್ಯೆ, ಚೆಕ್ಕೆ, ಲವಂಗ ಇಂಗು, ಒಣಮೆಣಸಿನಕಾಯಿ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ 2 ರಿಂದ 3 ನಿಮಿಷ ಚೆನ್ನಾಗಿ ಫೈ ಮಾಡಿ ಬಳಿಕ ಪ್ಲೇಟಿಗೆ ಹಾಕಿ.

    * ನಂತರ ಅದೇ ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಕಟ್ ಮಾಡಿದ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ.

    * ಬಳಿಕ ಇವುಗಳನ್ನೆಲ್ಲಾ ಒಂದು ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ತುರಿದ ತೆಂಗಿನ ಕಾಯಿ, ಹುಣಸೆ ಹಣ್ಣನ್ನು ಬೆರೆಸಿ ಅರ್ಧ ಕಪ್ ನೀರು ಹಾಕಿ ರುಬ್ಬಿಕೊಳ್ಳಿ.

    * ಇತ್ತ ಬೆಂದ ಅವರೆಕಾಳಿಗೆ ಬೆಲ್ಲ, ಸ್ವಲ್ಪ ಉಪ್ಪು ಹಾಗೂ, ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಒಗ್ಗರಣೆ ಹಾಕಿದ್ರೆ ಹಿತ್ಕವರೆ ಕಾಳಿನ ಸಾಂಬಾರ್ ಸವಿಯೋದಕ್ಕೆ ಸಿದ್ಧ.

     

  • ಮಲೆನಾಡು ಸ್ಪೆಷಲ್ ಪತ್ರೊಡೆ ಮಾಡೋ ವಿಧಾನ

    ಮಲೆನಾಡು ಸ್ಪೆಷಲ್ ಪತ್ರೊಡೆ ಮಾಡೋ ವಿಧಾನ

    ಲೆನಾಡಿನ ಸಾಂಪ್ರಾದಾಯಿಕ ರೆಸಿಪಿಗಳಲ್ಲಿ ಪತ್ರೊಡೆಯೂ ಒಂದು. ಮಳೆಗಾಲದಲ್ಲಿ ಹಳ್ಳಿ ಕಡೆ ಸಿಗುವ ಕೆಸುವಿನ ಎಲೆಯಿಂದ ಇದನ್ನು ಹೆಚ್ಚಾಗಿ ತಯಾರು ಮಾಡ್ತಾರೆ. ಕೆಸುವಿನ ಎಲೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಪತ್ರೋಡೆ ತಯಾರು ಮಾಡೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಸಿಂಪಲ್ ರೆಸಿಪಿ

    ಬೇಕಾಗುವ ಸಾಮಾಗ್ರಿಗಳು:
    1. ಕೆಸುವಿನ ಎಲೆ – 15-20
    2. ಅಕ್ಕಿ – ಮುಕ್ಕಾಲು ಕಪ್
    3. ತೊಗರಿಬೇಳೆ – ಅರ್ಧ ಕಪ್
    4. ಕಡಲೆಬೇಳೆ – ಅರ್ಧ ಕಪ್
    5. ಹುಣಸೆಹಣ್ಣು – ಅರ್ಧ ಕಪ್ (ಕನಿಷ್ಟ 15-20 ನಿಮಿಷ ನೀರಿನಲ್ಲಿ ನೆನೆಯಲು ಬಿಡಿ)
    6. ಒಣಮೆಣಸಿನಕಾಯಿ- 10-15 (ಮೆಣಸಿನ ಪುಡಿಯೂ ಬಳಸಬಹುದು. ಖಾರಕ್ಕೆ ತಕ್ಕ ಹಾಗೆ ಬಳಸಿ)
    7. ತೆಂಗಿನ ತುರಿ – ಅರ್ಧ ಕಪ್
    8. ಕೊತ್ತಂಬರಿ ಬೀಜ/ ಧನಿಯಾ – 2 ಚಮಚ
    9. ಜೀರಿಗೆ – 1 ಚಮಚ
    10. ಬೆಲ್ಲ – 3 ಚಮಚ
    11. ಇಂಗು – 2 ಚಿಟಿಕೆ

    ಮಾಡುವ ವಿಧಾನ:

    * ಮೊದಲು ತೊಗರಿಬೇಳೆ, ಅಕ್ಕಿ, ಕಡಲೆಬೇಳೆ, ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ 2-3 ಗಂಟೆ ನೆನೆಯಲು ಬಿಡಿ.

    * ಬಳಿಕ ಇದರ ಜೊತೆಗೆ ತೆಂಗಿನ ತುರಿ, ಹುಣಸೆಹಣ್ಣು, ಬೆಲ್ಲ ಮತ್ತು ಒಣಮೆಣಸಿನ ಕಾಯಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ.

    * ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

    * ಒಂದು ದೊಡ್ಡ ಕೆಸುವಿನ ಎಲೆಯನ್ನು (ತೊಳೆದಿದ್ದು, ದಂಟು ತೆಗೆದುಕೊಳ್ಳಬೇಕು) ಉಲ್ಟಾ ಇಟ್ಟುಕೊಳ್ಳಿ. ಅದರ ಮೇಲೆ ತೆಳುವಾಗಿ ಹಿಟ್ಟನ್ನು ಹಚ್ಚಿ. ಎಲೆಗೆ ಪೂರ್ತಿಯಾಗಿ ಹಿಟ್ಟು ಹಚ್ಚಿದ ನಂತರ ಅದರ ಮೇಲೆ ಇನ್ನೊಂದು ಅದಕ್ಕಿಂತ ಸಣ್ಣ ಎಲೆಯನ್ನು ಹಾಗೆ ಉಲ್ಟಾ ಇಟ್ಟು, ಅದರ ಮೇಲೆಯೂ ತೆಳುವಾಗಿ ಹಿಟ್ಟನ್ನು ಹಚ್ಚಿ. ಹೀಗೆ 5 ಎಲೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಹಿಟ್ಟನ್ನು ಹಚ್ಚಿ ಇಡಿ.

    * ಬಳಿಕ ದೊಡ್ಡ ಎಲೆಯನ್ನು ಒಂದು ಸೈಡಿನಿಂದ ಮಧ್ಯಕ್ಕೆ ಮಡಚಿ. ಇನ್ನೊಂದು ಬದಿಯನ್ನು ಕೂಡ ಮಧ್ಯಕ್ಕೆ ಮಡಚಿ. ಮಡಚಿದ ಎರಡೂ ಭಾಗಕ್ಕೆ ಹಿಟ್ಟನ್ನು ಹಚ್ಚಿ. ಬಳಿಕ ತುದಿಯಿಂದ ನಿಧಾನಕ್ಕೆ ಟೈಟಾಗಿ ರೋಲ್ ಮಾಡಿ. ಈ ರೋಲ್ ಮೇಲೆಯೂ ಹಿಟ್ಟು ಹಚ್ಚಿ. ಇದೇ ರೀತಿ ನೀವೆಷ್ಟು ಎಲೆಯನ್ನ ತೆಗೆದುಕೊಂಡಿದ್ದೀರೋ ಅಷ್ಟನ್ನ ರೋಲ್ ಮಾಡಿಕೊಳ್ಳಿ.

    * ಒಂದು ಇಡ್ಲಿ ಕುಕ್ಕರ್‍ನಲ್ಲಿ 6-7 ಕಪ್ ನೀರು ಹಾಕಿ, ಸ್ವಲ್ಪ ಬಿಸಿಯಾದ ನಂತರ ಇಡ್ಲಿ ಪ್ಲೇಟ್ ಇಟ್ಟು ಅದರ ಮೇಲೆ ಈ ರೋಲ್ಸ್‍ನ್ನು ಇಟ್ಟು ಹಬೆಯಲ್ಲಿ ಬೇಯಿಸಿ. ಇದನ್ನ ಕುಕ್ಕರ್‍ನಲ್ಲೂ ಬೇಯಿಸಬಹುದು. ಆದ್ರೆ ವಿಶಲ್ ಹಾಕ್ಬೇಡಿ. ವಿಶಲ್ ಬದಲಾಗಿ ಕುಕ್ಕರ್ ಮೇಲೆ ಒಂದು ಲೋಟವನ್ನು ಉಲ್ಟಾ ಹಾಕಿ.

    * ಹೀಗೆ ಕನಿಷ್ಟ 20ರಿಂದ 30 ನಿಮಿಷ ಬೇಯಿಸಿ. ಬೆಂದ ಬಳಿಕ ಒಲೆಯಿಂದ ತೆಗೆದು ಪೂರ್ತಿ ತಣ್ಣಗಾದ ನಂತ್ರ ಸಣ್ಣಗೆ ಕಟ್ ಮಾಡಿ ಒಗ್ಗರಣೆ ಹಾಕಿ ಸವಿಯಬಹುದು.