– ಏತನೀರಾವರಿ ಕುರಿತು ಚರ್ಚಿಸಲು ಸಭೆ ನಡೆಸಿದ್ದೇವೆಂದ ಜಾರಕಿಹೊಳಿ
ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಶುರುವಾಯಿತಾ ಸಂಚಲನ ಎಂಬ ಪ್ರಶ್ನೆ ಇದೀಗ ಮೂಡಿದ್ದು, ರೆಸಾರ್ಟ್ ರಾಜಕಾರಣ ಮತ್ತೆ ಗರಿಗೆದರಿದೆ. ಚಿಕ್ಕಮಗಳೂರಿನ ರೆಸಾರ್ಟ್‍ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯ ಸಭೆ ನಡೆಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಏತನೀರಾವರಿ ಕುರಿತು ಚರ್ಚಿಸಲು ಸಭೆ ನಡೆಸಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾರಿಕೆ ಉತ್ತರ ನೀಡಿದ್ದಾರೆ.
ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್‍ನಲ್ಲಿ ಅತೃಪ್ತರ ಸಭೆ ನಡೆದಿದ್ದು, ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್, ಗೋಪಾಲಯ್ಯ, ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಾಯಕರು ನಿನ್ನೆ ರಾತ್ರಿಯೇ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯಿಂದಲೇ ಸರ್ಕಾರ ಬೀಳಿಸುವ ಪ್ರಯತ್ನ ನಡೆದಿದೆಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಸಭೆ ನಡೆಸಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಎತ್ತಿನಹೊಳೆ ಏತನೀರಾವರಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇವೆ. ನಿನ್ನೆ ನಡೆದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಾವು ಸಭೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿಲ್ಲ. ಕೇವಲ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಸುದ್ದಿ ಪ್ರಸಾರವಾಗುತ್ತಲೇ ಸಚಿವ ಸಿ.ಪಿ.ಯೋಗೇಶ್ವರ್ ರೆಸಾರ್ಟ್ ನಿಂದ ಹೊರನಡೆದಿದ್ದಾರೆ. ನಿನ್ನೆಯಿಂದಲೂ ನಾಯಕರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ನಿರ್ದಿಷ್ಟ ಖಾತೆಗಳಿಗಾಗಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚೌಕಾಸಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಆಪರೇಷನ್ ಕಮಲಕ್ಕೆ ಸೆಡ್ಡು ಹೊಡೆಯಲು ಪಕ್ಷದ ಶಾಸಕರನ್ನು ಬಿಡದಿಯ ಈಗಲ್ಟನ್ ರೆಸಾರ್ಟಿಗೆ ಕರೆದೊಯ್ದ ಕಾಂಗ್ರೆಸ್ ನಾಯಕರಿಗೆ ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ತೀವ್ರ ತಲೆನೋವಾಗಿ ಪರಿಣಮಿಸಿದೆ.
ವಿಧಾನಸಭಾ ಅಧಿವೇಶನಕ್ಕೆ ಗೈರು ಹಾಜರಿ ಆಗಿದ್ದ ಬಂಡಾಯ ಶಾಸಕರ ಮನವೊಲಿಕೆ ಕಾರ್ಯ ಒಂದೆಡೆಯಾದರೆ, ಶಾಸಕ ಗಣೇಶ್ ಹಲ್ಲೆ ಪ್ರಕರಣದಲ್ಲಿ ಆನಂದ್ ಸಿಂಗ್ ಅವರ ಮನವೊಲಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಆದರೆ ಕಾಂಗ್ರೆಸ್ ನಾಯಕರ ಸಂಧಾನ ಪ್ರಕ್ರಿಯೆಗೆ ಶಾಸಕ ಆನಂದ್ ಸಿಂಗ್ ಕುಟುಂಬ ಒಪ್ಪಿಗೆ ನೀಡದೇ ಗಣೇಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಘಟನೆ ಸಂಬಂಧ ಶಾಸಕ ಆನಂದ್ ಸಿಂಗ್ ಅವರ ಪತ್ನಿಯನ್ನು ಕಾಂಗ್ರೆಸ್ ನಾಯಕರು ಮನವೊಲಿಸಲು ಪ್ರಯತ್ನ ನಡೆಸಿದ್ದು, ಪ್ರಕರಣ ನಡೆದ ದಿನದಿಂದಲೂ ಕೂಡ ಸಚಿವ ಜಮೀರ್ ಅಹ್ಮದ್ ಅವರು ಈ ಕಾರ್ಯದಲ್ಲೇ ತೊಡಗಿದ್ದರು. ಆದರೆ ಈ ವೇಳೆ ಆನಂದ್ ಸಿಂಗ್ ಅವರ ಪತ್ನಿ ಲಕ್ಷ್ಮಿ ಸಿಂಗ್ ಅವರ ರೌದ್ರಾವತಾರಕ್ಕೆ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೊಂದು ಸರಿ ಕ್ಷಮಿಸಿ ಬಿಡಿ. ಇದು ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಕೇಳಿಕೊಂಡರೂ ಕೇರ್ ಮಾಡದ ಪತ್ನಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ರೀತಿಯಲ್ಲಿ ಈ ಘಟನೆಯನ್ನು ತೆಗೆದುಕೊಂಡಿದ್ದಾರೆ.
ಇದು ನನ್ನ ಗಂಡನ ಅಳಿವು ಉಳಿವಿನ ಪ್ರಶ್ನೆ ಆಗಿದ್ದು, ಸರ್ಕಾರ ಹೋದರೆ ಬೇರೆ ಸರ್ಕಾರ ಬರುತ್ತೆ. ಆದರೆ ನನ್ನ ಗಂಡ ಹೋದರೆ ಬೇರೆ ಗಂಡನನ್ನು ತರಲು ಆಗುತ್ತಾ ಎಂದು ಕೈ ನಾಯಕರ ಮುಖಕ್ಕೆ ಹೊಡೆದಂತೆ ಪ್ರಶ್ನಿಸಿದ್ದಾರೆ. ಅಲ್ಲದೇ ರಾಜಕೀಯವೇ ಬೇರೆ ಈ ಘಟನೆಯೇ ಬೇರೆ. ಪತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆ ಗಣೇಶ್‍ನನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದ್ದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಶಾಸಕ ಆನಂದ್ ಸಿಂಗ್ ಅವರು ಕಾಂಗ್ರೆಸ್ ನಾಯಕರ ಮಾತಿಗೆ ಒಪ್ಪಿಗೆ ನೀಡಿದ್ದರೂ ಲಕ್ಷ್ಮಿ ಸಿಂಗ್ ಮತ್ತು ಅವರ ಕುಟುಂಬ ಒಪ್ಪಿಗೆ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ. ಪ್ರಕರಣದಲ್ಲಿ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಸಂಧಾನ ಮಾಡಿ ಗಣೇಶ್‍ರನ್ನು ಪಕ್ಷಕ್ಕೆ ಮತ್ತೆ ಕರೆತರುವ ಉದ್ದೇಶ ಕಾಂಗ್ರೆಸ್ ನಾಯಕರಿಗೆ ಇತ್ತು. ಅಲ್ಲದೇ ಶಾಸಕ ಗಣೇಶ್ ಕೂಡ ಸಂಧಾನ ಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಲಕ್ಷ್ಮಿ ಸಿಂಗ್ ಅವರ ಖಡಕ್ ಮಾತಿಗೆ ಕೈ ನಾಯಕರು ಏನು ಮಾತನಾಡದೇ ಈಗ ಮೌನಕ್ಕೆ ಜಾರಿದ್ದು ಮುಂದೆ ಏನು ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ನಡೆದ ಜಗಳಕ್ಕೆ ಬಿಜೆಪಿ ‘ಆಪರೇಷನ್ ಕಮಲ’ ಕಾರಣ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಸಭೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿ ಮಾತನಾಡಿದ ಡಿಕೆ ಸುರೇಶ್ ಅವರು, ಬಿಜೆಪಿಯ ಆಪರೇಷನ್ ಕಮಲದಲ್ಲಿ ಹಣದ ವ್ಯವಹಾರವೂ ನಡೆದಿದ್ದು, ರೆಸಾರ್ಟಿನಲ್ಲಿ ಶಾಸಕರ ನಡುವೆ ಗಲಾಟೆಗೆ ಬಿಜೆಪಿಯೇ ಕಾರಣ. ಅವರು ಕೈಗೊಂಡಿದ್ದ ಆಪರೇಷನ್ ಕಮಲದಿಂದಲೇ ನಾವು ರೆಸಾರ್ಟಿಗೆ ಹೋಗಿದ್ದು, ಇಲ್ಲವಾದರೆ ರೆಸಾರ್ಟಿಗೆ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಧ್ಯಮಗಳ ವರದಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾಧ್ಯಮದವರು ಕೆಲವು ವಿಷಯ ಮುಚ್ಚಿಟ್ಟಿದ್ದಾರೆ. ಆಪರೇಷನ್ ಕಮಲ ಯಾವ ಹಂತದಲ್ಲಿ ನಡೆಯುತ್ತಿದೆ. ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇದೆ. ಆದರೆ ಮಾಧ್ಯಮಗಳು ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಶಾಸಕರ ನಡುವಿನ ಗಲಾಟೆಯ ಬಗ್ಗೆ ಸಮರ್ಥನೆ ನೀಡಲು ಯತ್ನಿಸಿ ಗೊಂದಲ ವಾತಾವರಣ ನಿರ್ಮಾಣ ಮಾಡುವಂತೆ ಹೇಳಿಕೆ ನೀಡಿದರು.
ಉಲ್ಟಾ ಹೊಡೆದ ಡಿಕೆ ಸುರೇಶ್: ಶಾಸಕ ಆನಂದ್ ಸಿಂಗ್ ಅವರು ಎದೆ ನೋವಿನ ಕಾರಣ ಆಸ್ಪತ್ರೆಗೆ ಸೇರಿದ್ದಾರೆ ಎಂದು ಅಂದು ಮಾಹಿತಿ ನೀಡಿದ್ದ ಡಿಕೆ ಸುರೇಶ್ ಅವರು, ಇಂದು ಕಾಂಗ್ರೆಸ್ ಶಾಸಕ ಶಾಸಕರ ನಡುವಿನ ಗಲಾಟೆಗೆ ಆಪರೇಷನ್ ಕಮಲವೇ ಕಾರಣ ಎಂದು ಹೇಳಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಯಾವುದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನಿನ ಪ್ರಕಾರ ಪೊಲೀಸರು ಕ್ರಮ ತೆಗದುಕೊಳ್ಳುತ್ತಾರೆ. ಆನಂದ್ ಸಿಂಗ್ ಬಹುಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ಆಪರೇಷನ್ ಕಮಲದ ಬಗ್ಗೆ ಪದೇ ಪದೇ ದಾಖಲೆ ಬಿಡುಗಡೆ ಮಾಡುತ್ತೇವೆ. ಈ ಮೂಲಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಸೂಕ್ತ ಸಮಯ ಬಂದರೆ ಬಿಡುಗಡೆ ಮಾಡುತ್ತೇವೆ ಎಂದು ಜಾರಿಕೊಂಡಿದ್ದರು. ಆದರೆ ಇದುವರೆಗೂ ದೋಸ್ತಿ ಸರ್ಕಾರದ ಯಾವುದೇ ನಾಯಕರು ಕೂಡ ಅಧಿಕೃತವಾಗಿ ಹಣಕಾಸಿನ ವ್ಯವಹಾದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ.
ಬೆಂಗಳೂರು: ಮಾಧ್ಯಮದವರಿಗೆ ಮಾನ ಮರ್ಯಾದೆ ಇಲ್ವಾ..? ಕಾಮನ್‍ಸೆನ್ಸ್ ಇಲ್ವಾ ಎಂದು ಕೇಳಿದ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೊನೆಗೂ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ.
ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಶಾಸಕ ಗಣೇಶ್ ಬೆಂಬಲಿಗರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲು ಆಗಮಿಸಿದ್ದರು. ಇದನ್ನು ವರದಿ ಮಾಡಲು ಆಗಮಿಸಿದ್ದ ಮಾಧ್ಯಮಗಳಿಗೆ ದಿನೇಶ್ ಗುಂಡೂರಾವ್ ಅವರು, ನಿಮಗೆ ಮಾನ ಮರ್ಯಾದೆ ಇದ್ಯಾ? ಇದು ನಮ್ಮ ಕಚೇರಿ, ಇವರು ಪಕ್ಷದ ಒಳಗಿನ ವಿಚಾರ ಮಾತನಾಡಲು ಬಂದಿದ್ದಾರೆ. ಇದನ್ನೆಲ್ಲಾ ಶೂಟ್ ಮಾಡಲು ನಿಮಗೆ ಕಾಮನ್ ಸೆನ್ಸ್ ಇಲ್ವಾ ಎಂದೆಲ್ಲಾ ಕೇಳುತ್ತಾ ಮಾಧ್ಯಮ ಪ್ರತಿನಿಧಿಗಳ ಮೇಲೆ ತಮ್ಮ ವಾಕ್ಚತುರ್ಯ ಪ್ರದರ್ಶನ ಮಾಡಿದ್ದರು.
ಯಾವಾಗ ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಲು ಆರಂಭವಾಯಿತೋ ದಿನೇಶ್ ಗುಂಡೂರಾವ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಲ್ಲಿ ಕ್ಷಮೆ ಯಾಚಿಸಿದರು. ನಮ್ಮ ಚೇಂಬರ್ ನಲ್ಲಿ ಆಂತರಿಕ ಸಭೆ ನಡೆಯುತ್ತಿತ್ತು. ಈ ವೇಳೆ ಕಂಪ್ಲಿ ಕಾರ್ಯಕರ್ತರು ಬಂದಾಗ ಮನವಿ ಸ್ವೀಕಾರ ಮಾಡುತ್ತಿದ್ದೆ. ಆದರೆ ಮಾಧ್ಯಮದವರು ಇರೋದು ಗೊತ್ತಿರಲಿಲ್ಲ. ಆಗ ತಕ್ಷಣ ಮಾಧ್ಯಮದವ್ರು ಬಂದಿರೋದು ನೋಡಿ ಹೊರಗೆ ಹೋಗಿ ಎಂದು ತಮ್ಮಿಂದಾದ ತಪ್ಪಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಮಾಧ್ಯಮದವರು ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಉತ್ತಮ ಸಂಬಂಧ ಇದೆ. ಆ ಸಂದರ್ಭದಲ್ಲಿ ಬಾಯಿ ತಪ್ಪಿ ಕೆಲವು ಮಾತುಗಳು ನನ್ನಿಂದ ಬಂದವು. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮದವರ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು.
ನಾನೇ ಸಭೆಯಿಂದ ಹೊರಗಿದ್ದೆ!: ಬೆಳಗ್ಗೆ ನಡೆದ ಸಭೆಯಲ್ಲಿ ನನ್ನನ್ನು ಹೊರಗಿಟ್ಟು ಸಭೆ ನಡೆಸಿಲ್ಲ. ಅನೇಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಜೊತೆ ಮುಕ್ತವಾಗಿ ಮಾತಾಡುವುದಿತ್ತು. ಹಾಗಾಗಿ ನಾನೇ ಸಭೆಯಲ್ಲಿ ಇರಲ್ಲ ಎಂದು ಹೇಳಿದ್ದೆ. ಎಲ್ಲರೂ ಅಭಿಪ್ರಾಯ ನೀಡುವಾಗ ಅವರಿಗೆ ಮುಜುಗರ ಆಗಬಾರದು. ಅದಕ್ಕಾಗಿ ನಾನು ಹೊರಗೆ ಇದ್ದೆ. ಅಧ್ಯಕ್ಷರನ್ನು ಹೊರಗಿಟ್ಟು ಸಭೆ ಮಾಡುವ ಸನ್ನಿವೇಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಜೆ.ಎನ್.ಗಣೇಶ್ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಕಾನೂನು ಪ್ರಕಾರವೇ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಯಾರೂ ಈ ಥರಾ ತಲೆ ತಪ್ಪಿಸಿಕೊಳ್ಳಬಾರದು. ಕಾನೂನಿಗೆ ಎಲ್ಲರೂ ಬೆಲೆ ಕೊಡಬೇಕಾಗುತ್ತದೆ. ಕಾಂಗ್ರೆಸ್ ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದರು.
ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನ ರೆಸಾರ್ಟಿಗೆ ಕರೆದೊಯ್ದಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಪರಸ್ಪರ ಬಡಿದಾಡಿಕೊಂಡ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಆರಂಭದಿಂದಲೂ ಭಿನ್ನ ಹೇಳಿಕೆಗಳನ್ನ ನೀಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ಶಾಸಕ ಆನಂದ್ ಸಿಂಗ್, ಶಾಸಕ ಗಣೇಶ್ ವಿರುದ್ಧ ದೂರು ನೀಡುತ್ತಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗಣೇಶ್ ರನ್ನು ಅಮಾನತು ಮಾಡಿದ್ದರು. ಸದ್ಯ ಗಣೇಶ್ ಬಂಧನದ ಭಯದಿಂದ ನಾಪತ್ತೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕರು ಪರಸ್ಪರ ಬಡಿದಾಡಿಕೊಂಡ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಕೈ ನಾಯಕರು ತಾಳ್ಮೆ ಕಳೆದುಕೊಂಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮಾಧ್ಯಮಗಳಿಂದಾಗಿ ಪಕ್ಷದ ಮಾನ ಹೋಗಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಮಾನ ಇದ್ಯಾ ಎಂದು ಪ್ರಶ್ನಿಸಿದ್ದಾರೆ.
ರೆಸಾರ್ಟ್ ಗಲಾಟೆ ನಡೆದ ಬಳಿಕ ಆರಂಭದಲ್ಲಿ ನಾಯಕರು ಏನು ಆಗಿಲ್ಲ, ಎದೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದೆಲ್ಲ ಸುಳ್ಳು ಹೇಳಿದ್ದರು. ಈ ಘಟನೆಯ ಬಗ್ಗೆ ಸತ್ಯ ಹೊರ ಬಂದ ಬಳಿಕ ಕಾಂಗ್ರೆಸ್ಸಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರವಾಗಿತ್ತು. ರೆಸಾರ್ಟ್ ಗಲಾಟೆ ವಿಚಾರದಿಂದ ತಾಳ್ಮೆ ಕಳೆದುಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಜಿಲ್ಲಾವಾರು ಮುಖಂಡರ ಸಭೆ ನಡೆಯುತಿತ್ತು. ಈ ವೇಳೆ ಕಚೇರಿಗೆ ಆಗಮಿಸಿದ್ದ ಶಾಸಕ ಕಂಪ್ಲಿ ಗಣೇಶ್ ಬೆಂಬಲಿಗ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.
ಕಾರ್ಯಕರ್ತರ ಪ್ರತಿಭಟನೆಯನ್ನು ಮಾಧ್ಯಮಗಳು ವರದಿ ಮಾಡಲು ಮುಂದಾಗುತ್ತಿದ್ದಾಗ ದಿನೇಶ್ ಗುಂಡೂರಾವ್, ನಿಮಗೆ ಮಾನ ಮರ್ಯಾದೆ ಇದ್ಯಾ? ಇದು ನಮ್ಮ ಕಚೇರಿ, ಇವರು ಪಕ್ಷದ ಒಳಗಿನ ವಿಚಾರ ಮಾತನಾಡಲು ಬಂದಿದ್ದಾರೆ. ಇದನ್ನೆಲ್ಲಾ ಶೂಟ್ ಮಾಡಲು ನಿಮಗೇ ಕಾಮನ್ ಸೆನ್ಸ್ ಇಲ್ವಾ ಎಂದು ಹೇಳಿ ನಿಂದಿಸಿದ್ದಾರೆ.
ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನ ರೆಸಾರ್ಟಿಗೆ ಕರೆದ್ಯೊದಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಪರಸ್ಪರ ಬಡಿದಾಡಿಕೊಂಡ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಆರಂಭದಿಂದಲೂ ಭಿನ್ನ ಹೇಳಿಕೆಗಳನ್ನ ನೀಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ಶಾಸಕ ಆನಂದ್ ಸಿಂಗ್, ಶಾಸಕ ಗಣೇಶ್ ವಿರುದ್ಧ ದೂರು ನೀಡುತ್ತಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗಣೇಶ್‍ರನ್ನು ಅಮಾನತು ಮಾಡಿದ್ದರು. ಸದ್ಯ ಗಣೇಶ್ ಪೊಲೀಸ್ ಬಂಧನದ ಭಯದಿಂದ ನಾಪತ್ತೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ರಾಯಚೂರು: ರಾಜ್ಯದ ಶಾಸಕರು ರೆಸಾರ್ಟಿನಲ್ಲಿ ತೋರಿರುವ ವರ್ತನೆಯಿಂದ ರಾಜ್ಯಕ್ಕೆ ಅಪಮಾನವಾಗಿದೆ. ಇನ್ನು ಮುಂದೆ ಶಾಸಕರು ರೆಸಾರ್ಟಿನಲ್ಲಿ ಕಂಡರೆ ರೈತ ಸಂಘದ ಮಹಿಳಾ ಕಾರ್ಯಕರ್ತರು ಸೆಗಣಿ ಮುಖಕ್ಕೆ ಎರಚಿ ಪ್ರತಿಭಟನೆ ಮಾಡುತ್ತಾರೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಶಾಸಕರ ನಡುವೆ ನಡೆದ ಗಲಾಟೆಯಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಆದರೆ ರಾಜಕೀಯ ಪಕ್ಷಗಳಿಗೆ ಇಂತಹ ಅಪಮಾನ ಯಾವುದೇ ಆಗುವುದಿಲ್ಲ. ವಿಧಾನಸೌಧ ಸೇರಿದಂತೆ ಅನೇಕ ಸಭಾಂಗಣಗಳಿದ್ದರೂ, ರೆಸಾರ್ಟಿನಲ್ಲಿ ಏನು ಚರ್ಚೆ ಮಾಡುತ್ತಾರೆ. ರಾಜಕೀಯಕ್ಕಾಗಿ ರೆಸಾರ್ಟ್ ಸಭೆ ನಡೆಸಿದರೆ ಸಂಘಟನೆಯ ಕಾರ್ಯಕರ್ತರು ನುಗ್ಗಿ ಸೆಗಣಿ ಬಳಿಯಲಿದ್ದಾರೆ. ಈ ಮೂಲಕ ಇಂತಹ ಸಭೆಗಳಿಗೆ ಇತಿಶ್ರೀ ಹಾಡುತ್ತೇವೆ ಎಂದರು.
ಸಿಎಂ ಕುಮಾರಸ್ವಾಮಿ ಅವರೊಂದಿಗೆ ನಾಳೆ ರೈತ ಸಂಘಟನೆಗಳ ಬಜೆಟ್ ಪೂರ್ವ ಸಭೆ ನಿಗದಿಯಾಗಿದೆ. ಮುಂದಿನ ಬಜೆಟ್‍ನಲ್ಲಿ ರೈತರ ಪರ ವಿಚಾರಗಳ ಸೇರ್ಪಡೆಗೆ ಒತ್ತಾಯಿಸಲು ನಿರ್ಧಾರ ಮಾಡಿರುವುದಾಗಿ ಹೇಳಿದರು.
ಬೆಂಗಳೂರು: ಟ್ರಬಲ್ ಶೂಟರ್, ದಿ ಪವರ್ ಮಿನಿಸ್ಟರ್, ಕನಕಪುರದ ಬಂಡೆ ಅಂತಾನೆ ಕರೆಸಿಕೊಳ್ಳುವ ಸಚಿವ ಡಿಕೆ ಶಿವಕುಮಾರ್ ಈಗ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದಾರಂತೆ. ಸಚಿವ ಸ್ಥಾನ ಸಿಗದೆ ಇರೋದಕ್ಕೆ ಅತೃಪ್ತರ ಸಂಖ್ಯೆ ಕಾಂಗ್ರೆಸ್‍ನಲ್ಲಿ ಹೆಚ್ಚಾಗಿದೆ. ಅದರಲ್ಲೂ ಬಳ್ಳಾರಿಯ ಅತೃಪ್ತ ಶಾಸಕರಿಂದಲೇ ಕಂಗಾಲಾಗಿರೋ ಕಾಂಗ್ರೆಸ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿದೆ. ಹಾಗಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಈಗ ಹೊಸ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅದೇ, ಕಾಂಚಾಣಮ್ಮ ಕಾರ್ಯ ಸಿದ್ದಿ ಮಂತ್ರ ಜಪಿಸೋದು.
ಬಳ್ಳಾರಿಯ ಅತೃಪ್ತ ಶಾಸಕರನ್ನ ಸಮಾಧಾನ ಮಾಡೋದು ಜೊತೆಗೆ ಬಂಡಾಯ ಏಳದಂತೆ ನೋಡಿಕೊಳ್ಳೋ ಜವಾಬ್ದಾರಿ ಈಗ ಡಿಕೆ ಶಿವಕುಮಾರ್ ಅವರ ಹೆಗಲ ಮೇಲಿದೆ. ಹಾಗಾಗಿ ಸಚಿವ ಸ್ಥಾನ ಸಿಗದೇ ಇರೋರಿಗೆ ಅವರ ಕ್ಷೇತ್ರಕ್ಕೆ ವಿವಿಧ ನಿಧಿಗಳಿಂದ ಹಣ ಬಿಡುಗಡೆ ಮಾಡಿ ಸಮಾಧಾನ ಮಾಡುವ ತಂತ್ರಕ್ಕೆ ಮುಂದಾಗಿದ್ದಾರಂತೆ. ಅದಕ್ಕಾಗಿ ಶನಿವಾರ ವಿಧಾನಸೌಧದಲ್ಲಿ ಬಳ್ಳಾರಿಯ ಎಲ್ಲ ಶಾಸಕರ ಜೊತೆ ಸುದೀರ್ಘವಾಗಿ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಬಳ್ಳಾರಿಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಹಣ ಬಿಡುಗಡೆ ಮಾಡುವ ಉತ್ಸಾಹದಲ್ಲಿ ಡಿಕೆ ಶಿವಕುಮಾರ್ ಇದ್ದಂಗೆ ಕಾಣಿಸುವಂತಿದೆ.
ಹಣ ಬಿಡುಗಡೆಯ ಪ್ಲ್ಯಾನ್ ಹೇಗಿದೆ..?
* ಡಿಎಂಎಫ್ – 275 ಕೋಟಿ
* ಕೆಎಂಇಆರ್ ಸಿ – 13,378 ಕೋಟಿ (ಮೊದಲ ಹಂತದಲ್ಲಿ 900 ಕೋಟಿ)
* ಹೆಚ್‍ಕೆಡಿಬಿ ಫಂಡ್ ಇಂತಿಷ್ಟೇ ಅಂತ ಇಲ್ಲ
* 2 ನಗರಸಭೆ, 1 ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಿಶೇಷ ಪ್ಯಾಕೇಜ್
* 3 ಹೊಸ ತಾಲೂಕುಗಳ ಅಭಿವೃದ್ಧೀಗೆ ಫಂಡ್ ಬಿಡುಗಡೆ (ಕೊಟ್ಟೂರು, ಕುರಗೋಡ್, ಕಂಪ್ಲಿ)
* ಟಿಬಿ ಬೋರ್ಡ್‍ನಿಂದ ಕಾಲುವೆಗಳ ಅಭಿವೃದ್ಧಿಗೆ ಹಣ ಬಿಡುಗಡೆ
* ಕೇಂದ್ರದಿಂದ ನೀರಾವರಿ ಯೋಜನೆಗಳ ಅಡಿ ಹಣ ಬಿಡುಗಡೆ.
ಇವೆಲ್ಲ ಮೂಲಗಳಿಂದ ಡಿಕೆ ಶಿವಕುಮಾರ್ ಹಣ ಬಿಡುಗಡೆ ಮಾಡಿಸಿ ಅತೃಪ್ತ ಶಾಸಕರನ್ನ ಸಮಾಧಾನ ಮಾಡೋ ತಂತ್ರಗಾರಿಕೆ ಹೆಣೆದಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ಮಹಾನಗರ ಪಾಲಿಕೆ, ನಗರ ಸಭೆ ಚುನಾವಣೆಯ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಜೊತೆಗೆ ಲೋಕಸಭೆ ಚುನಾವಣೆಯೂ ಹತ್ತಿರದಲ್ಲೆ ಇರುವುದರಿಂದ ಎಷ್ಟಾಗುತ್ತೋ ಅಷ್ಟು ಹಣ ಬಿಡುಗಡೆಯ ತಯಾರಿಯಲ್ಲಿ ನಿರತರಾಗಿದ್ದಾರಂತೆ. ಇದು ಕ್ಷೇತ್ರದ ಬಗ್ಗೆ ಹುಟ್ಟಿರೋ ವಿಶೇಷ ಪ್ರೀತಿಯೇನು ಅಲ್ಲ, ಚುನಾವಣೆ ಹತ್ತಿರ ಬರ್ತಿರೋದ್ರಿಂದ ಎಷ್ಟಾಗುತ್ತೋ ಫಂಡ್ ಕಲೆಕ್ಷನ್ ಕಾಮಗಾರಿ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ.
ನವದೆಹಲಿ: ಕೋಟಿ, ಕೋಟಿ ಹಣ ಖರ್ಚು ಮಾಡಿ ಐದು ದಿನಗಳ ಕಾಲ ಐಷಾರಾಮಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ರಾಜ್ಯಕ್ಕೆ ಮರಳುತ್ತಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಗುರುಗ್ರಾಮದಿಂದ 2 ಕಿಮೀ ದೂರದ ಸರಾಯ್‍ನಲ್ಲಿರುವ ಲೆಮನ್ ಟ್ರೀ ರೆಸಾರ್ಟ್ ನಿಂದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿಭಟ್, ಬಸವರಾಜ್ ದಢೇಸಗೂರು, ಹರೀಶ್ ಪುಂಜಾ, ಹರ್ಷವರ್ಧನ, ತಿಪ್ಪಾರೆಡ್ಡಿ ಹೊರಟಿದ್ದಾರೆ. ಮಾಧ್ಯಮದವರು ಮಾತನಾಡಿಸಲು ಯತ್ನಿಸಿದರೂ ಕಾರಿನಲ್ಲಿ ಕುಳಿತು ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದ ಇಂದು ರಾಜ್ಯಕ್ಕೆ ಮರಳಲಿದ್ದಾರೆ.
ಇತ್ತ ಐಟಿಸಿ ಗ್ರ್ಯಾಂಡ್ ಭಾರತ್‍ನಿಂದ ಪ್ರತ್ಯೇಕ ಕಾರುಗಳಲ್ಲಿ ಶಾಸಕರ ಗುಂಪು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಸೋಮಶೇಖರ್ ರೆಡ್ಡಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬೆಳ್ಳಿ ಪ್ರಕಾಶ್, ರಾಮದಾಸ್, ಬಸವರಾಜ್ ಮತ್ತಿಮೂಡ್, ರಾಮಣ್ಣ ಲಮಾಣಿ, ದಿನಕರ್ ಶೆಟ್ಟಿ, ಕುಮಾರಸ್ವಾಮಿ, ಆರ್.ಅಶೋಕ್, ನಿರಂಜನ್, ಸಿ.ಸಿ.ಪಾಟೀಲ್, ದೊಡ್ಡನಗೌಡ, ಸಿದ್ದು ಸವದಿ ಇದ್ದರು. ಎಲ್ಲ ಶಾಸಕರು ಕಾರಿನ ಗ್ಲಾಸ್ ಏರಿಸಿಕೊಂಡು ಮಾಧ್ಯಮಗಳ ಜತೆ ಮಾತನಾಡದೇ ರೆಸಾರ್ಟಿನಿಂದ ಕಾಲ್ಕಿತ್ತಿದ್ದಾರೆ.
ರಾಜ್ಯಕ್ಕೆ ಮರಳುತ್ತಿದ್ದ ರಾಜೂಗೌಡ, ಶಿವನಗೌಡನಾಯಕ್ ಹಾಗೂ ಶಿವರಾಜ್ ಪಾಟೀಲ್ ಮಾತನಾಡಿ, ಆಪರೇಷನ್ ಕಮಲದ ಕುರಿತು ಯಾವುದೇ ಮಾತುಕತೆಯಾಗಿಲ್ಲ. ನಾವು ಲೋಕಸಭಾ ಚುನಾವಣೆ ಸಿದ್ಧತೆಯ ಅಭ್ಯಾಸ ವರ್ಗಗಳು ಇದ್ದಿದ್ದರಿಂದ ಇಲ್ಲಿ ಉಳಿದುಕೊಂಡಿದ್ದೆವು ಎಂದು ಹೇಳಿದ್ದಾರೆ.
ರೆಸಾರ್ಟ್ ಖರ್ಚು ಎಷ್ಟು?:
104 ಶಾಸಕರ ಪೈಕಿ ಐವರು ಮಾತ್ರ ರೆಸಾರ್ಟಿಗೆ ಹೋಗಿರಲಿಲ್ಲ. ಶಾಸಕ ಗೋವಿಂದ ಕಾರಜೋಳ, ಎಸ್.ಎ. ರವೀಂದ್ರನಾಥ್, ಕರುಣಾಕರೆಡ್ಡಿ, ಸಿ.ಎಂ. ಉದಾಸಿ ಮತ್ತು ಸಿ.ಟಿ. ರವಿ ರೆಸಾರ್ಟಿಗೆ ಹೋಗಿರಲಿಲ್ಲ. ಉಳಿದ 99 ಶಾಸಕರು ರೆಸಾರ್ಟಿನಲ್ಲಿ ತಂಗಿದ್ದರು.
ಗುರುಗ್ರಾಮದ ಐಟಿಸಿ ಗ್ರಾಂಡ್ ಭಾರತ್, ಲೆಮೆನ್ ಟ್ರೀ ಮತ್ತು ಮುಂಬೈ ರೆಸಾರ್ಟಿನಲ್ಲಿ ಬಿಜೆಪಿ ಶಾಸಕರು ತಂಗಿದ್ದರು. ಮೊದಲ 5 ದಿನ ಐಶಾರಾಮಿ ಐಟಿಸಿ ಗ್ರಾಂಡ್ ಭಾರತ್ ರೆಸಾರ್ಟಿನಲ್ಲಿ ಬಿಜೆಪಿಯ 97 ಶಾಸಕರು ಇದ್ದರು. ಐಟಿಸಿ ಗ್ರಾಂಡ್ ಭಾರತ್ `7′ ಸೌಲಭ್ಯದ ರೆಸಾರ್ಟ್ ಆಗಿದ್ದು, ಇಲ್ಲಿ ಒಂದು ದಿನಕ್ಕೆ ಒಂದು ರೂಮಿಗೆ ಕನಿಷ್ಟ 25 ಸಾವಿರ ರೂ. ಇದೆ. ಇಲ್ಲಿನ ವಿಲ್ಲಾಗಳ ಒಂದು ದಿನದ ಬಾಡಿಗೆ ಬರೊಬ್ಬರಿ 3 ಲಕ್ಷ ರೂಪಾಯಿ ಆಗಿದ್ದರೆ, ಬಿಜೆಪಿ ಶಾಸಕರು ಉಳಿದುಕೊಂಡಿದ್ದ ರೂಮ್ ಗಳ ಒಂದು ದಿನದ ಬಾಡಿಗೆ 75 ಸಾವಿರ ರೂ. ಇದೆ.
ಬಿಜೆಪಿ ತನ್ನ ಶಾಸಕರಿಗಾಗಿ ಒಟ್ಟು 60 ರೂಮ್ ಗಳನ್ನು ಬುಕ್ ಮಾಡಿತ್ತು. ಒಟ್ಟು ಗುರುಗ್ರಾಮದ ಐಶಾರಾಮಿ ರೂಮ್ ಬಾಡಿಗೆಯೇ 2 ಕೋಟಿ 27 ಲಕ್ಷ ರೂಪಾಯಿ ಆಗಿದೆ. ಇನ್ನೂ ರೂಮ್ ಬಾಡಿಗೆ ಜಿಮ್, ಹೇರ್ ಸೆಲೂನ್, ಬಾಡಿ ಮಸಾಜ್, ಬ್ರೇಕ್ ಫಾಸ್ಟ್, ಸ್ನ್ಯಾಕ್ಸ್ ಸೇರಿದ ಎಲ್ಲ ಪ್ಯಾಕೇಜ್ ಕೂಡ ಇತ್ತು. ಮಧ್ಯಾಹ್ನ, ರಾತ್ರಿ ಊಟ ಹಾಗೂ ಮದ್ಯದ ವೆಚ್ಚ ಬೇರೆ ಇತ್ತು.
ಲೆಮನ್ ಟ್ರೀ ರೆಸಾರ್ಟ್ ನಲ್ಲಿ 23 ಶಾಸಕರು ಇದ್ದರು. ಅದರ ಖರ್ಚು ಒಟ್ಟು 10 ಲಕ್ಷ ರೂಪಾಯಿ ಆಗಿದ್ದು, ರೂಮ್ ಬಾಡಿಗೆ ಬ್ರೇಕ್ ಫಾಸ್ಟ್, ಸ್ನ್ಯಾಕ್ಸ್ ಸೇರಿದ ಪ್ಯಾಕೇಜ್ ಆಗಿತ್ತು. ಒಟ್ಟಾರೆ ಆಪರೇಷನ್ ಕಮಲ ಮಾಡಲು ಬಿಜೆಪಿ ನಾಯಕರು 3.16 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಲೆಮನ್ ಟ್ರೀ ರೆಸಾರ್ಟ್ ನಲ್ಲಿದ್ದ 23 ಶಾಸಕರಿಗೆ 10 ಲಕ್ಷ ರೂ.ವನ್ನು ಬಿಜೆಪಿ ನಾಯಕರು ಖರ್ಚು ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಹಣವನ್ನು ಯಾರು ಕೊಟ್ಟಿದ್ದಾರೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ.
– ಖಾಲಿ ಹೊಡೆಯುತ್ತಿದೆ ವಿಧಾನಸೌಧ
– ರೆಸಾರ್ಟಿನಲ್ಲಿ ಮಜಾ ಮಾಡಿ, ಕ್ಷೇತ್ರಕ್ಕೆ ಬರಬೇಡಿ
– ಕೆಲಸ ಮಾಡಿ, ಇಲ್ಲ ರಾಜೀನಾಮೆ ಕೊಡಿ
ಬೆಂಗಳೂರು: ಈ ರೀತಿಯ ಕೀಳುಮಟ್ಟದ ಹೊಲಸು ರಾಜಕೀಯವನ್ನು ನಾವು ನೋಡಿಲ್ಲ. ಬರಗಾಲ ಇದೆ, ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕುಡಿಯಲು ನೀರಿಲ್ಲ. ಆದರೆ ಕೋಟಿ ಕೋಟಿ ಖರ್ಚು ಮಾಡಿ ಶಾಸಕರು ರೆಸಾರ್ಟ್ ಗೆ ಹೋಗುತ್ತಿದ್ದಾರೆ ಎಂದು ಶಾಸಕರನ್ನು ಹುಡುಕಿಕೊಂಡು ಹಳ್ಳಿಗಳಿಂದ ಬಂದ ಜನ ತರಾಟೆ ತಗೆದುಕೊಳ್ಳುತ್ತಿದ್ದಾರೆ,
ಮುಖ್ಯವಾಗಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಿಂದ ರೈತರು ಬೆಂಗಳೂರಿಗೆ ಬಂದಿದ್ದಾರೆ. ಇತ್ತ ಆಡಳಿತ ಪಕ್ಷ ಹಾಗೂ ವಿಪಕ್ಷ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿ ಬರುತ್ತಿದೆ. ಫೋನ್ ಮಾಡಿದರೂ ಸಿಗುತ್ತಿಲ್ಲ, ಕ್ಷೇತ್ರಕ್ಕೆ ಬಂದು ಸಮಸ್ಯೆ ಆಲಿಸುತ್ತಿಲ್ಲ ಎಂದು ಶಾಸಕರ ವಿರುದ್ಧ ಜನ ಕಿಡಿ ಕಾರುತ್ತಿದ್ದಾರೆ.
ಜಾಧವ್ ಎಲ್ಲಿ: ರಾಯಚೂರು ಜಿಲ್ಲೆಯ ಚಿಂಚೋಳಿ ಶಾಸಕ ಉಮೇಶ ಜಾಧವ್ ಅವರು ಕೈ ಮುಖಂಡರ ಕೈಗೂ ಸಿಗದೇ ಅತ್ತ ಕ್ಷೇತ್ರದ ಜನರಿಗೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಜೊತೆಗೆ ಚಿಂಚೋಳಿ ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ಶಾಸಕರನ್ನು ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲದೇ ಜೆಡಿಎಸ್ ಶಾಸಕರು ಕೂಡ ಕೈಗೆ ಸಿಗುತ್ತಿಲ್ಲ. ಸಚಿವ ಎಂ.ಸಿ.ಮನಗೂಳಿ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಇಂತಹ ಶಾಸಕರು ನಮಗೇಕೆ ಬೇಕು ಎಂದು ಜನರು ಛೀಮಾರಿ ಹಾಕುತ್ತಿದ್ದಾರೆ.
ಮೈಸೂರು: ಶಾಸಕರ ನಡೆಯನ್ನು ನಮಗೆ ನಾಚಿಕೆ ತರುವಂತಿದೆ. ಮತ ಕೇಳುವಾಗ ಗಲ್ಲಿ, ಬೀದಿ ಇಳಿದು ನಮ್ಮ ಮುಂದೆ ಬಂದು ಮತ ಕೇಳುತ್ತಾರೆ. ಆದರೆ ಜಯಗಳಿಸಿದ ಮೇಲೆ ರೆಸಾರ್ಟ್ ರಾಜಕೀಯ ಮಾಡುತ್ತಾರೆ. ನಾವು ಯಾಕೆ ಇಂತಹವರನ್ನು ಆಯ್ಕೆ ಮಾಡಿದ್ದೇವೆ ಅಂತ ಅಸಹ್ಯವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮೈಸೂರಿನ ನಾಗರಿಕರು ಮೂರು ಪಕ್ಷಗಳ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.
ಬಳ್ಳಾರಿ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರವೇ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಒಬ್ಬ ಶಾಸಕರಾಗಲಿ, ಸಚಿವರಾಗಲಿ ಬಂದು ನಮ್ಮ ನೋವನ್ನು ಕೇಳಿಲ್ಲ. ರೆಸಾರ್ಟ್ ರಾಜಕೀಯ ಹೇಸಿಗೆ ತರಿಸುವಂತಿದೆ. ಜನರಿಗೆ, ದನಕರುಗಳಿಗೆ ನೀರಿಲ್ಲ, ಉದ್ಯೋಗವಿಲ್ಲ. ಹೀಗಿರುವಾಗ ರಾಜ್ಯದ ಶಾಸಕರು ರೆಸಾರ್ಟ್ ರಾಜಕೀಯದಲ್ಲಿ ಮುಳುಗಿದ್ದಾರೆ. ಆಪರೇಷನ್ ಕಮಲ ಮಾಡುವ ಮೂಲಕ ಬಿಜೆಪಿ ಅವರೇ ರೆಸಾರ್ಟ್ ರಾಜಕೀಯ ಆರಂಭಿಸಿದರು. ಅವರಿಗೆ ಜನರ ಸಮಸ್ಯೆ ಬೇಕಾಗಿಲ್ಲ. ತಮ್ಮ ಶಾಸಕರ ಮೇಲೆ ಪಕ್ಷದ ವರಿಷ್ಠರು ಹಾಗೂ ನಾಯಕರಿಗೆ ನಂಬಿಕೆ ಇಲ್ಲದಂತಾಗಿದೆ. ಕಳೆದ ಕೆಲವು ದಿನಗಳ ಬೆಳವಣಿಗೆ ನಮಗೆ ನಾಚಿಕೆ ತರುವಂತೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿ: ನೀತಿಗೆಟ್ಟ ರಾಜಕೀಯವನ್ನು ಶಾಸಕರು ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಗಮನ ನೀಡದೆ ಸಾರ್ವಜನಿಕರ ಹಣವನ್ನು ನಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಮಜಾ ಮಾಡುತ್ತಿದ್ದಾರೆ. ಇಂತಹ ಶಾಸಜಕರು ನಮಗೆ ಬೇಡವೇ ಬೇಡ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರೆಸಾರ್ಟ್ ರಾಜಕೀಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ
ಬೆಂಗಳೂರು: ಶತಾಯ ಗತಾಯ ಮಾಡಿಯಾದರೂ ಸಮ್ಮಿಶ್ರ ಸರ್ಕಾರವನ್ನು ಕೆಡವಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೆ ಗುನ್ನಾ ಹೊಡೆಯಲು ಮಾಸ್ಟರ್ ಪ್ಲಾನ್ ಮಾಡಿದೆ.
ಹೌದು, ಇಬ್ಬರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುವ ಮೂಲಕ ಆಪರೇಷನ್ ಕಮಲದ ಮೊದಲ ಹಂತ ಯಶಸ್ವಿಯಾಗಿದೆ. ಈಗ ಎರಡನೇ ಹಂತ ಆರಂಭಗೊಂಡಿದ್ದು, ಈ ಹಂತದಲ್ಲಿ ನಾಲ್ವರು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ರಾಜೀನಾಮೆ ನೀಡಲು ಶಾಸಕರು ಸಿದ್ದರಾಗಿದ್ದಾರೆ ಎನ್ನಲಾಗಿದ್ದು ಯಾವಾಗ ನೀಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.
ಇಂದು ಅಥವಾ ಭಾನುವಾರ ನಾಲ್ವರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಕೈ ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ಆಪರೇಷನ್ ಸ್ಟೇಜ್ 2 ಪೂರ್ಣಗೊಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಶಾಸಕರ ರಾಜೀನಾಮೆ ಕೊಟ್ಟ ಬಳಿಕ ಆಪರೇಷನ್ ಮೂರನೇ ಹಂತವನ್ನು ಆರಂಭಿಸಲಿದೆ. ಮೂರನೇ ಹಂತದಲ್ಲಿ ಮತ್ತಷ್ಟು ಅತೃಪ್ತ ಶಾಸಕರನ್ನು ಸೆಳೆಯುವ ಪ್ಲಾನ್ ಅನ್ನು ಬಿಜೆಪಿ ಹಾಕಿಕೊಂಡಿದೆ. ಒಟ್ಟು 7 ಮಂದಿ ಶಾಸಕರನ್ನು ತನ್ನತ್ತ ಸೆಳೆಯಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಆಪರೇಷನ್ 3 ಕಾರ್ಯಗತಗೊಳಿಸುವ ಮುನ್ನ ರಾಜ್ಯಪಾಲರು, ಸ್ಪೀಕರ್ ಮುಂದೆ ಬಿಜೆಪಿ ಶಾಸಕರ ಪರೇಡ್ ಮಾಡಿ ತಮ್ಮ ಬಲವನ್ನು ತೋರಿಸುವ ಸಾಧ್ಯತೆಯಿದೆ.
ಜನವರಿ 14 ರಂದು ಮೂರು ಹಂತದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾಗಿದೆ ಎನ್ನುವ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ಪಬ್ಲಿಕ್ ಟಿವಿ ಮೊದಲು ಪ್ರಸಾರಮಾಡಿತ್ತು. ಶುಕ್ರವಾರ ಶಾಸಕಾಂಗ ಸಭೆಗೆ ವಿಪ್ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ತನ್ನ ಶಾಸಕರಿಗೆ ಬಿಸಿ ಮುಟ್ಟಿಸಿತ್ತು. ಆದರೆ ಈ ವಿಪ್ ಗೆ ತಲೆ ಕೆಡಿಸಿಕೊಳ್ಳದ ನಾಲ್ವರು ಶಾಸಕರು ಸಭೆಗೆ ಹಾಜರಾಗದೇ ನೇರವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಬಂಡಾಯ ಹಾರಿಸಿದ ಶಾಸಕರ ಜೊತೆಗೆ ಸಿಎಲ್‍ಪಿ ಸಭೆಯಲ್ಲಿ ಹಾಜರಾಗಿರುವ ಕೆಲ ಶಾಸಕರು ಜೊತೆಯಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಎಲ್ಲ ಶಾಸಕರನ್ನು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಶಿಫ್ಟ್ ಮಾಡಿದೆ.