Tag: ರೆಸಪಿ

  • ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ರೆಸಿಪಿ

    ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ರೆಸಿಪಿ

    ರೆಸ್ಟೋರೆಂಟ್, ಡಾಬಾಗಳಲ್ಲಿ ಸಿಗುವ ಚಿಕನ್ ಖಾದ್ಯ ತಿಂದವರಿಗೆ ಮನೆಯಲ್ಲಿ ಇದನ್ನ ಹೇಗೆ ಮಾಡೋದು ಅಂತ ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾಗಿ ಇದೀಗ ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ಮಾಡುವ ವಿಧಾನ ನಿಮ್ಮ ಮುಂದಿದೆ. ಸಾಮಾನ್ಯವಾಗಿ ಭಾನುವಾರದ ದಿನ ಬಹುತೇಕರ ಮನೆಯಲ್ಲಿ ಬಾಡುಟದ ಪರಿಮಳ ಇರಲೇಬೇಕು. ಪ್ರತಿವಾರ ಸಾಮಾನ್ಯ ಚಿಕನ್ ರೆಸಿಪಿ ಮಾಡಿ ಬೇಜಾರು ಆಗಿದ್ರೆ ಒಮ್ಮೆ ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮೊಗಲಾಯಿ ಚಿಕನ್ ಗ್ರೇವಿ ರೆಸಿಪಿ ಮಾಡಿ. ಮನೆಗೆ ವಿಶೇಷ ಅತಿಥಿ, ಪಾರ್ಟಿ ಸಂದರ್ಭಗಳಲ್ಲಿ ಈ ರೀತಿಯ ರುಚಿಕರ ಖಾದ್ಯ ಮಾಡಬಹುದು.

    ಬೇಕಾಗುವ ಸಾಮಾಗ್ರಿಗಳು
    * ಚಿಕನ್-1 ಕೆಜಿ
    * ಈರುಳ್ಳಿ- 3 (ಮಧ್ಯಮ ಗಾತ್ರದ್ದು)
    * ಮೊಸರು-1 ಕಪ್
    * ಹಾಲು- 1 ಕಪ್
    * ತುಪ್ಪ- 1 ಕಪ್
    * ಬದಾಮಿ- 50 ಗ್ರಾಂ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಟಿ ಸ್ಪೂನ್
    * ಹಸಿ ಮೆಣಸಿನಕಾಯಿ- 3 ರಿಂದ 4
    * ಧನಿಯಾ ಪೌಡರ್- 1 ಟೀ.ಸ್ಪೂನ್
    * ಅಚ್ಚ ಖಾರದ ಪುಡಿ-1/2 ಟೀ ಸ್ಪೂನ್
    * ಅರಿಶಿನ- 1/2 ಟೀ ಸ್ಪೂನ್
    * ಉಪ್ಪು- ರುಚಿಗೆ ತಕ್ಕಷ್ಟು
    * ಕೆಂಪು ಮೆಣಸಿನಕಾಯಿ- 4
    * ಧನಿಯಾ- 1 ಟೀಸ್ಪೂನ್
    * ಜೀರಿಗೆ- 1 ಟೀ ಸ್ಪೂನ್
    * ಕಾಳು ಮೆಣಸು- 1 ಟೀ ಸ್ಪೂನ್

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ ಕಡಿಮೆ ಉರಿಯಲ್ಲಿ ಬದಾಮಿ, ಕಾಳು ಮೆಣಸು, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಧನಿಯಾ ಹಾಕಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಮಿಕ್ಸಿ ಬೌಲಿಗೆ ಹಾಕಿ ಪೌಡರ್ ಮಾಡಿಕೊಳ್ಳಿ.
    * ಮತ್ತೊಂದು ಪ್ಯಾನ್ ಇಟ್ಟುಕೊಂಡು ಒಂದು ಟೀ ಸ್ಪೂನ್ ತುಪ್ಪ ಹಾಕಿ. ಉದ್ದವಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಹಾಕಿ ಗೋಲ್ಡನ್ ಕಲರ್ ಬರೋವರೆಗೂ ಹುರಿದು ಎತ್ತಿಟ್ಟುಕೊಳ್ಳಿ.

    * ಇನ್ನೊಂದು ಮಿಕ್ಸಿಂಗ್ ಬೌಲ್ ನಲ್ಲಿ ತೊಳೆದುಕೊಂಡಿರುವ ಚಿಕನ್ ಹಾಕಿ. ಅದಕ್ಕೆ ಅಚ್ಚ ಖಾರದ ಪುಡಿ, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 15 ನಿಮಿಷ ಎತ್ತಿಡಿ.
    * ಈರುಳ್ಳಿ ಫ್ರೈ ಮಾಡಿದ ಪಾತ್ರೆಯಲ್ಲಿ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಚಿಕನ್ ಹಾಕಿ. ತುಪ್ಪದಲ್ಲಿ ಚಿಕನ್ ಚೆನ್ನಾಗಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿ, ರುಬ್ಬಿಕೊಂಡಿರುವ ಮಸಾಲೆಯನ್ನ ಸೇರಿಸಿ.

    * ಮಸಾಲೆ ಸೇರಿಸಿದ ನಂತರ ಕಡಿಮೆ ಉರಿಯಲ್ಲಿ ಚಿಕನ್ ಚೆನ್ನಾಗಿ ಎರಡು ನಿಮಿಷ ಬೇಯಿಸಿ. ತದನಂತರ ಅರ್ಧ ಕಪ್ ಮೊಸರು, ಒಂದು ಕಪ್ ಹಾಲು ಹಾಗೂ ಫ್ರೈ ಮಾಡಿಕೊಂಡಿರುವ ಈರುಳ್ಳಿ ಸೇರಿಸಿ ಚೆನ್ನಾಗಿ ಪ್ಲಿಪ್ ಮಾಡಬೇಕು.
    * ಕೊನೆಗೆ ಒಂದು ಕಪ್ ನೀರು, ಮೂರು ಹಸಿ ಮೆಣಸಿನಕಾಯಿ ಹಾಕಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ್ರೆ ಮುಗಲಾಯಿ ಚಿಕನ್ ರೆಡಿ.

     

  • ದೋಸೆ ಚಟ್ನಿ ಮಾಡುವ ವಿಧಾನ

    ದೋಸೆ ಚಟ್ನಿ ಮಾಡುವ ವಿಧಾನ

    ಸಾಮಾನ್ಯವಾಗಿ ಭಾನುವಾರ ಬಂದ್ರೆ ಮಕ್ಕಳೆಲ್ಲಾ ಮನೆಯಲ್ಲಿರುತ್ತಾರೆ. ಗೃಹಿಣಿಯರು ಮಕ್ಕಳಿಗೆ ಸ್ಪೆಷಲ್ ತಿಂಡಿ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿರುತ್ತಾರೆ. ಪ್ರತಿದಿನ ಉಪ್ಪಿಟ್ಟು, ಅವಲಕ್ಕಿ, ರೈಸ್‍ಬಾತ್ ಅಂತ ತಿಂದು ಬೇಜಾರು ಆಗಿರುತ್ತಾರೆ. ಸಂಡೇಗಾಗಿ ಬಹುತೇಕರ ಮನೆಯಲ್ಲಿ ದೋಸೆ ಪರಿಮಳ ಹರಿದಾಡುತ್ತಿರುತ್ತದೆ. ದೋಸೆ ಮಾಡಿದ್ರೆ ಜೊತೆಗೆ ಯಾವ ಚಟ್ನಿ ಮಾಡೋದು ಅನ್ನೋದು ದೊಡ್ಡ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಫಟಾಫಟ್ ಚಟ್ನಿ ಮಾಡುವ ಸುಲಭ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಕಾಯಿ ತುರಿ- ಅಗತ್ಯಕ್ಕನುಸಾರ (ಚಟ್ನಿಗೆ ಇದೇ ಮುಖ್ಯ ಪದಾರ್ಥ)
    * ಶುಂಠಿ- ಸ್ವಲ್ಪ
    * ಹಸಿ ಮೆಣಸಿನಕಾಯಿ- ಖಾರಕ್ಕೆ ಬೇಕಾದಷ್ಟು
    * ಹುಣಸೆಹಣ್ಣು- ಸ್ವಲ್ಪ
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ- ಒಗ್ಗರಣೆಗೆ

    ಮಾಡುವ ವಿಧಾನ
    * ಜಾರ್ ಗೆ ಕಾಯಿ ತುರಿ, ಶುಂಠಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
    * ತೀರ ಗಟ್ಟಿ ಅನ್ನಿಸಿದರೆ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಿ.
    * ಈಗ ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ
    * ಚಟ್ನಿಗೆ ಒಗ್ಗರಣೆ ಮಿಶ್ರಣ ಮಾಡಿ. ಈಗ ರುಚಿ ರುಚಿಯಾದ ಚಟ್ನಿ ರೆಡಿ.

    ಹೀಗೆ ರೆಡಿಯಾದ ಚಟ್ನಿಯನ್ನು ಕೇವಲ ದೋಸೆಗೆ ಮಾತ್ರವಲ್ಲದೇ ಇಡ್ಲಿ, ಚಪಾತಿ, ಪೂರಿ, ರೊಟ್ಟಿ ಮತ್ತು ಬಿಸಿ ಬಿಸಿಯಾದ ಅನ್ನದ ಜೊತೆಗೆ ತಿನ್ನಬಹುದು.