Tag: ರೆಬೆಲ್ ಶಾಸಕರು

  • ಯಾರೇ ಮುಖ್ಯಮಂತ್ರಿಯಾದ್ರೂ ವಾಪಸ್ ಬರುವುದಿಲ್ಲ: ರೆಬೆಲ್ ಶಾಸಕರು

    ಯಾರೇ ಮುಖ್ಯಮಂತ್ರಿಯಾದ್ರೂ ವಾಪಸ್ ಬರುವುದಿಲ್ಲ: ರೆಬೆಲ್ ಶಾಸಕರು

    – ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಬಾರದು ಅಂದಿದ್ರು
    – ‘ಕೈ’ ನಾಯಕರ ವಿರುದ್ಧ ಬೈರತಿ ಆರೋಪ

    ಮುಂಬೈ: ನಾವು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಆಫರ್ ಬಂದಿದೆ. ಯಾರೇ ಸಿಎಂ ಆದರೂ ನಾವು ವಾಪಸ್ ಬರುವುದಿಲ್ಲ. ನಮ್ಮ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ ಎಂದು ಮೈತ್ರಿ ಸರ್ಕಾರದ ರೆಬೆಲ್ ಶಾಸಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

    ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ. ರಾಜ್ಯ ರಾಜಕಾರಣಕ್ಕೆ ಒಳ್ಳೆಯದಾಗಬೇಕು. ಮೈತ್ರಿ ನಾಯಕರಿಗೆ ಬುದ್ಧಿ ಕಲಿಸಬೇಕಿದೆ. ನಾವು ದುಡ್ಡು, ಅಧಿಕಾರಕ್ಕೆ ಮುಂಬೈಗೆ ಬಂದಿಲ್ಲ. ತತ್ವ, ಸಿದ್ಧಾಂತದ ಉಳಿವಿಗೆ ರಾಜೀನಾಮೆ ನೀಡಿದ್ದೇವೆ. ಹಣ, ಅಧಿಕಾರದ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಹೇಳಿದರು.

    ರಾಜೀನಾಮೆ ನೀಡಿರುವ ಶಾಸಕರು ಕೋಟಿಗಳಲ್ಲಿ ವ್ಯವಹಾರ ನಡೆಸಿದ್ದಾರೆ ಎಂದು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಹೆಸರಿನಲ್ಲಿ ರಾಕ್ಷಸ ರಾಜಕಾರಣ ನಡೆದಿದೆ. ರಾಜ್ಯದ ಜನರಿಗೆ ಈ ಸರ್ಕಾರದಿಂದ ಯಾವ ಪ್ರಯೋಜನವಾಗಲಿಲ್ಲ ಎಂದು ಕಿಡಿಕಾರಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ, ಶಾಸಕ ಭೈರತಿ ಬಸವರಾಜು ಮಾತನಾಡಿ, ಸರ್ಕಾರ ಪತನವಾದ ಬಳಿಕ ರಾಜ್ಯಕ್ಕೆ ಬಂದು ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸುತ್ತೇವೆ. ನಮ್ಮನ್ನು ಬೆತ್ತಲೆ ಮಾಡಲು ಹೊರಟಿರುವ ಕಾಂಗ್ರೆಸ್‍ನ ನಾಯಕರು ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ಉಳಿಯಬಾರದು ಅಂತ ಹೇಳಿದ್ದರು. ಆದರೆ ಈಗ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಬೆಂಗಳೂರಿಗೆ ವಾಪಸ್ ಬಂದ ಬಳಿಕ ಎಲ್ಲಾ ವಿಚಾರಗಳನ್ನು ಮಾಧ್ಯಮಗಳ ಎದುರು ಬಹಿರಂಗಪಡಿಸುತ್ತೇವೆ. ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ಪಕ್ಷ ನನಗೆ ಕೊಟ್ಟಿದ್ದು ಏನು ಎಂದು ಪ್ರಶ್ನಿಸಿದರು.

    ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ವಿಧಾನಸಭೆಯಲ್ಲಿ ಶಾಸಕರೊಬ್ಬರು ನಾವು ಬದುಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಡಿಯೋ ಮಾಡಿ ಕಳುಹಿಸುವ ಮೂಲಕ ನಾವು ಬದುಕಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ. ನಾವು ಯಾರ ಗನ್ ಪಾಯಿಂಟ್‍ನಲ್ಲಿ ಇಲ್ಲ. 13 ಶಾಸಕರೂ ಜೀವಂತವಾಗಿದ್ದೇವೆ, ಆರೋಗ್ಯ ವಾಗಿದ್ದೇವೆ. ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ ಎಂದು ಹೇಳಿದರು.

    ಜನ್ಮದಿನದ ಸಂಭ್ರಮ:
    ಇಂದು ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ನಾರಾಯಣಗೌಡ ಅವರ ಜನ್ಮದಿನ. ನಾವು 13 ಶಾಸಕರು ಸೇರಿ ಒಗ್ಗಟ್ಟಾಗಿ ಆಚರಿಸುತ್ತಿದ್ದೇವೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

    ಜೆಡಿಎಸ್ ಶಾಸಕ ಗೋಪಾಲಯ್ಯ ಹಾಗೂ ಬಿ.ಸಿ.ಪಾಟೀಲ್ ಮಾತನಾಡಿ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಮುಂಬೈಗೆ ಬಂದಿರುವ 13 ಶಾಸಕರು ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನಾಳೆ ನಡೆಯುವ ಅಧಿವೇಶನದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಕಿಡಿಕಾರಿದರು.