Tag: ರೆಬೆಲ್ ಶಾಸಕರು

  • ಅಸ್ಸಾಂ ಪ್ರವಾಹಕ್ಕೆ ಮರುಗಿದ ಮಹಾರಾಷ್ಟ್ರ ರೆಬೆಲ್‌ ಶಾಸಕರು – ಪರಿಹಾರ ನಿಧಿಗೆ 51 ಲಕ್ಷ ರೂ. ಸಹಾಯ

    ಅಸ್ಸಾಂ ಪ್ರವಾಹಕ್ಕೆ ಮರುಗಿದ ಮಹಾರಾಷ್ಟ್ರ ರೆಬೆಲ್‌ ಶಾಸಕರು – ಪರಿಹಾರ ನಿಧಿಗೆ 51 ಲಕ್ಷ ರೂ. ಸಹಾಯ

    ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರು, ಅಸ್ಸಾಂನ ಪ್ರವಾಹ ಪರಿಹಾರ ನಿಧಿಗೆ 51 ಲಕ್ಷ ರೂ. ನೀಡಿದ್ದಾರೆ.

    ಸಚಿವ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಗುಜರಾತ್‌ನ ಸೂರತ್‌ನ ಹೋಟೆಲ್‌ನಲ್ಲಿದ್ದರು. ನಂತರ ಅಸ್ಸಾಂನ ಗುವಾಹಟಿಯ ಹೋಟೆಲ್‌ಗೆ ಶಿಫ್ಟ್‌ ಆಗಿ ಕಳೆದ ಒಂದು ವಾರದಿಂದ ಅಲ್ಲಿ ಇದ್ದರು. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು – ಸಂಜೆ 5 ಗಂಟೆಗೆ ಸುಪ್ರೀಂನಲ್ಲಿ ಮಹತ್ವದ ಅರ್ಜಿ ವಿಚಾರಣೆ

    ಅಸ್ಸಾಂನ ಕೆಲವು ಭಾಗಗಳು ಭೀಕರ ಪ್ರವಾಹದಿಂದ ತತ್ತರಿಸಿರುವ ಸಂದರ್ಭದಲ್ಲೂ ಶಿವಸೇನಾ ಭಿನ್ನಮತೀಯರು ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಈ ನಡುವೆ ಶಿಂಧೆ ಅವರು ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂ. ನೀಡಿದ್ದಾರೆ.

    ಸರ್ಕಾರದ ನಿರಂತರ ರಕ್ಷಣಾ ಕಾರ್ಯಕ್ಕೆ ಶಿಂಧೆ ಅವರು ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದಾರೆ. ಇಲ್ಲಿನ ಜನರ ಕಷ್ಟವನ್ನು ನಾವು ನಿರ್ಲಕ್ಷಿಸುವಂತಿಲ್ಲ ಎಂದು ಬಂಡಾಯ ಶಾಸಕರ ತಂಡ ವಕ್ತಾರ ದೀಪಕ್‌ ಕೇಸಾರ್ಕರ್‌ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ

    ಅಸ್ಸಾಂನಲ್ಲಿ ಭೀಕರ ಪ್ರವಾಹ ಬಂದು ಸಂಕಷ್ಟ ಎದುರಾದ ಸಂದರ್ಭದಲ್ಲೇ ಶಿವಸೇನಾ ಬಂಡಾಯ ಶಾಸಕರು ಇಲ್ಲಿನ ಗುವಾಹಟಿಯ ಐಷರಾಮಿ ಹೋಟೆಲ್‌ಗೆ ಬಂದು ಬೀಡುಬಿಟ್ಟಿದ್ದರು. ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಇವರ ವರ್ತನೆಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇಲ್ಲಿಂದ ಹೊರಡಿ ಎಂದು ಹೋಟೆಲ್‌ ಬಳಿ ಪ್ರತಿಭಟನೆ ಕೂಡ ನಡೆಸಲಾಗಿತ್ತು.

    ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಉದ್ಧವ್‌ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರು ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಾಸಕರು ಗುವಾಹಟಿಯಿಂದ ಮುಂಬೈಗೆ ಬರಲು ಸಿದ್ಧತೆ ನಡೆಸಿದ್ದಾರೆ.

    Live Tv

  • ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ- ಸಿದ್ದರಾಮಯ್ಯ ವ್ಯಂಗ್ಯ

    ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ- ಸಿದ್ದರಾಮಯ್ಯ ವ್ಯಂಗ್ಯ

    ಹುಬ್ಬಳ್ಳಿ: ಹಾಲು ಕುಡಿದ ಮಕ್ಕಳು ಬದುಕಲ್ಲ. ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಇಂದು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‍ವೈ ಸರ್ಕಾರ ಬಹಳ ದಿನ ಇರುತ್ತೆ ಎಂದು ಯಾರಿಗೂ ನಂಬಿಕೆ ಇಲ್ಲ. ರೆಬಲ್ಸ್ ಗಳನ್ನಿಟ್ಟುಕೊಂಡು ಸರ್ಕಾರ ಮುನ್ನೆಡೆಸೋಕ್ಕಾಗುತ್ತಾ. ಹಾಲು ಕುಡಿದ ಮಕ್ಕಳೆ ಬದುಕಲ್ಲ. ಇನ್ನು ವಿಷ ಕುಡಿದವರು ಬದಕ್ತಾರಾ ಎಂದು ಹೇಳಿದರು.

    ಬಿಜೆಪಿ ಸರ್ಕಾರದ ಸಚಿವರು ನೆರೆಪಿಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಆದರೆ ದೆಹಲಿ ಟು ಬೆಂಗಳೂರು ಮಧ್ಯೆ ಟೂರ್ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿಯಾದರೂ ಕೇಂದ್ರದಿಂದ ಸೂಕ್ತ ಪರಿಹಾರ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಾಮ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗಲಾದರೂ ಬಿಜೆಪಿ ನಾಯಕರು ಜನರ ಕಡೆ ನೋಡಬೇಕು ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

    ದೇವೇಗೌಡರ ಕುಟುಂಬದವರು ಮಾಡಿದ ಆರೋಪದ ಬಗ್ಗೆ ನಾನು ಸುಧೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಬೈರತಿ ಬಸವರಾಜು ಮತ್ತು ಸೋಮಶೇಖರ್‍ ರನ್ನು ನಾನು ಮುಂಬೈಗೆ ಕಳುಸಿದ್ದೇನೆ ಎಂದು ಅವರು ಹೇಳುತ್ತಾರೆ. ಹಾಗಾದರೆ ವಿಶ್ವನಾಥ್, ನಾರಾಯಣಗೌಡ ಮತ್ತು ಗೋಪಾಲಯ್ಯರನ್ನು ಯಾರು ಕಳುಹಿಸಿದ್ದು, ಅವರು ಜೆಡಿಎಸ್‍ನವರು ಅಲ್ಲವೆ. ಹೆಚ್‍ಡಿಕೆ ಮತ್ತು ಹೆಚ್‍ಡಿಡಿ ನನ್ನ ಮೇಲೆ ಗೂಬೆ ಕೂರಿಸೋಕೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಿದಾಗ, ಆ ಬಗ್ಗೆ ನನಗೇನು ಗೊತ್ತಿಲ್ಲ. ಇವತ್ತು ಗುಲಾಮ್ ನಬಿ ಅಜಾದ್ ಬರುತ್ತಾರೆ ಎಂದು ಕೇಳಿದ್ದೇನೆ. ಆದರೆ ನಾನು ನೆರೆ ಪೀಡಿತ ಪ್ರದೇಶಗಳ ಪ್ರವಾಸದಲ್ಲಿದ್ದೇನೆ ಎಂದು ಹೇಳಿದರು.

  • ಕೆಲ ಅನರ್ಹ ಶಾಸಕರಿಂದ ಉತ್ತರಾಧಿಕಾರಿಗಳನ್ನು ಅಖಾಡಕ್ಕಿಳಿಸಲು ಸಿದ್ಧತೆ

    ಕೆಲ ಅನರ್ಹ ಶಾಸಕರಿಂದ ಉತ್ತರಾಧಿಕಾರಿಗಳನ್ನು ಅಖಾಡಕ್ಕಿಳಿಸಲು ಸಿದ್ಧತೆ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಸರ್ಕಾರ ಉರುಳಿದವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ.

    ಕೋರ್ಟಿನಲ್ಲಿ ತಮ್ಮ ರಾಜಕೀಯ ಭವಿಷ್ಯದ ತೀರ್ಪು ಪ್ರಕಟವಾಗಬೇಕಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತಮ್ಮದೇ ಆದ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಒಂದು ವೇಳೆ ಕೋರ್ಟಿನಲ್ಲಿ ಹಿನ್ನಡೆಯಾದರೆ ಕೆಲವು ಶಾಸಕರು ತಮ್ಮ ಉತ್ತರಾಧಿಕಾರಿಗಳನ್ನು ಅಖಾಡಕ್ಕೆ ಇಳಿಸುವ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೆಲವರು ಚುನಾವಣಾ ರಾಜಕಾರಣದ ಸಹವಾಸವೇ ಬೇಡ ಎಂದು ನಿವೃತ್ತಿಯ ಚಿಂತನೆ ನಡೆಸಿದ್ದಾರೆ. ಮತ್ತೆ ಕೆಲವರು ನ್ಯಾಯಾಲಯದ ತೀರ್ಪು ನೋಡಿ ಮುಂದಿನ ತೀರ್ಮಾನ ಮಾಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಕೆಲವು ಅನರ್ಹ ಶಾಸಕರುಗಳು ಅನಿವಾರ್ಯ ಪರಿಸ್ಥಿತಿ ಎದುರಾದರೆ ತಮ್ಮ ಉತ್ತರಾಧಿಕಾರಿಗಳನ್ನ ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಸಿದ್ದಾರೆ. ತಮ್ಮ ಉತ್ತರಾಧಿಕಾರಿ ಮುಂದೆ ಕೂಡ ತಮ್ಮ ಮಾತು ಕೇಳಬೇಕು. ಇಲ್ಲ ತಾವು ಬಯಸಿದಾಗ ತಮಗೆ ಅವಕಾಶ ಮಾಡಿಕೊಡಬೇಕು ಅಂತವರನ್ನೇ ಉತ್ತರಾಧಿಕಾರಿಯಾಗಿ ಚುನಾವಣಾ ಅಖಾಡಕ್ಕೆ ಇಳಿಸಲು ಮುಂದಾಗಿದ್ದಾರೆ.

    17 ಅನರ್ಹ ಶಾಸಕರ ಪೈಕಿ 13 ಜನ ತಮ್ಮ ಉತ್ತಾರಧಿಕಾರಿಗಳನ್ನ ಈಗಾಗಲೇ ಗುರುತಿಸಿದ್ದಾರೆ. ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಬಂದರೆ ತಮ್ಮ ಪರವಾಗಿ ತಮ್ಮ ಉತ್ತರಾಧಿಕಾರಿಗಳನ್ನ ಚುನಾವಣಾ ಅಖಾಡಕ್ಕೆ ಇಳಿಸೋದು ಅವರ ಪ್ಲಾನ್ ಆಗಿದೆ. ಅದರಲ್ಲಿ ಮೂವರು ಶಾಸಕರು ತಮ್ಮ ಪತ್ನಿಯರನ್ನೇ ತಮ್ಮ ಉತ್ತರಾಧಿಕಾರಿಗಳಾಗಿ ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಅಥಣಿ ಶಾಸಕ ಮಹೇಶ್ ಕುಮುಟಳ್ಳಿ ತಮ್ಮ ಸಹೋದರನನ್ನ ಅಖಾಡಕ್ಕೆ ಇಳಿಸಿದರೆ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ತಮ್ಮ ತಂದೆಯನ್ನೇ ಅಖಾಡಕ್ಕೆ ಇಳಿಸೋದು ಪಕ್ಕಾ ಆಗಿದೆ. 6 ಜನ ಅನರ್ಹ ಶಾಸಕರು ತಮ್ಮ ಮಕ್ಕಳನ್ನ ಉತ್ತರಾಧಿಕಾರಿಯಾಗಿ ಸಿದ್ಧಪಡಿಸಿದ್ದು, 5 ಶಾಸಕರ ಗಂಡು ಮಕ್ಕಳು ಹಾಗೂ ಬಿ.ಸಿ.ಪಾಟೀಲ್ ಮಗಳನ್ನ ಉತ್ತರಾಧಿಕಾರಿಯಾಗಿ ಅಖಾಡಕ್ಕೆ ಇಳಿಸಲು ಸಜ್ಜಾಗಿದ್ದಾರೆ.

    ರೆಬೆಲ್ ನಾಯಕ ರಮೇಶ್ ಜಾರಕಿಹೋಳಿ ಅಳಿಯನನ್ನ ಉತ್ತರಾಧಿಕಾರಿ ಮಾಡಲು ಮುಂದಾದರೆ, ಆನಂದ್ ಸಿಂಗ್ ಮಗ ಅಥವಾ ಅಳಿಯ ಇಬ್ಬರಲ್ಲಿ ಒಬ್ಬರನ್ನು ಅಖಾಡಕ್ಕೆ ಇಳಿಸಲು ರೆಡಿಯಾಗಿದ್ದಾರೆ. 17 ರಲ್ಲಿ 13 ಜನ ಅನರ್ಹ ಶಾಸಕರು ಉತ್ತರಾಧಿಕಾರಿಗಳನ್ನ ಸಿದ್ಧಪಡಿಸಿಕೊಂಡಿದ್ದಾರೆ. ಉಳಿದ ನಾಲ್ವರಲ್ಲಿ ಇಬ್ಬರು ಚುನಾವಣಾ ಅಖಾಡದಿಂದಲೆ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ.ಉಳಿದ ಇಬ್ಬರು ಯತ್ತರಾಧಿಕಾರಿ ಆಯ್ಕೆ ಮಾಡದೆ ನ್ಯಾಯಾಲಯದ ತೀರ್ಪಿಗಾಗಿ ಕಾಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

    17 ಅನರ್ಹ ಶಾಸಕರ ಪೈಕಿ ಎಚ್ ವಿಶ್ವನಾಥ್ ಹಾಗೂ ನಾರಾಯಣ ಗೌಡ ರಾಜಕಾರದಿಂದಲೇ ನಿವೃತ್ತರಾಗಲು ತೀರ್ಮಾನಿಸಿದ್ರೆ, ಮುನಿರತ್ನ ಹಾಗೂ ಆರ್ ಶಂಕರ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆದರೆ ಉಳಿದ 13 ಜನ ಅನರ್ಹರು ಮಾತ್ರ ತಮ್ಮ ಉತ್ತರಾಧಿಕಾರಿಗಳನ್ನ ಈಗಾಗಲೇ ಸಿದ್ಧಪಡಿಸಿಕೊಂಡಿದ್ದು ಅಖಾಡಕ್ಕೆ ಧುಮುಕಲು ರೆಡಿಯಾಗಿದ್ದಾರೆ.

  • ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು – ಪ್ರಜ್ವಲ್ ರೇವಣ್ಣ

    ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು – ಪ್ರಜ್ವಲ್ ರೇವಣ್ಣ

    ಹಾಸನ: ರೆಬೆಲ್ ಶಾಸಕರು ಹಣ ಮತ್ತು ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು ಎಂದು ಅತೃಪ್ತ ಶಾಸಕರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ಮಾಡಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಅನರ್ಹ ವಿಚಾರದಲ್ಲಿ ಸ್ಪೀಕರ್ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಜನರು ಅತೃಪ್ತರಿಗೆ ತಕ್ಕ ಪಾಠ ಕಲಿಸುತ್ತಾರೆ. ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆಯಲಿದೆ ಆಗ ಅವರಿಗೆ ಜನರು ಉತ್ತರ ನೀಡಲಿದ್ದಾರೆ ಎಂದು.

    ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ತಂದೆ ರೇವಣ್ಣ ಕಾರಣ ಎಂಬ ಆರೋಪ ಸುಳ್ಳು. ಲೋಕೋಪಯೋಗಿ ಇಲಾಖೆಯಲ್ಲಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪ ಕುರಿತು ದಾಖಲೆ ಬಿಡುಗಡೆ ಮಾಡಲು ಸಿದ್ಧ ಎಂದು ತಿಳಿಸಿದರು.

    ಸದ್ಯಕ್ಕೆ ಬಿಜೆಪಿಯವರು ಸರ್ಕಾರ ರಚನೆ ಮಾಡಿದ್ದಾರೆ. ಅಲ್ಲೂ ಕೂಡ ಸಮಸ್ಯೆ ಇಲ್ಲದೇ ಇಲ್ಲ. ಅವರು ಸರ್ಕಾರ ಎಷ್ಟು ದಿನ ನಡೆಸುತ್ತಾರೋ ನೋಡೋಣ. ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ಪ್ರಕರಣ ನನಗೆ ನ್ಯಾಯಾಲಯದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದ ಪ್ರಜ್ವಲ್ ಸ್ಪಷ್ಟಪಡಿಸಿದರು.

  • ರಾಜೀನಾಮೆ ಕೊಟ್ಟವರಿಗೂ, ನಮಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್

    ರಾಜೀನಾಮೆ ಕೊಟ್ಟವರಿಗೂ, ನಮಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್

    – ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ

    ಬೆಂಗಳೂರು: ರಾಜೀನಾಮೆ ಕೊಟ್ಟವರಿಗೂ ನಮಗೂ ಯಾವ ಸಂಬಂಧವಿಲ್ಲ. ನಾವು ಯಾರೂ ಅವರನ್ನು ನೋಡಿಲ್ಲ. ಮಾತಾಡಿಸಿಯೂ ಇಲ್ಲ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾವು ಯಾರೂ ಅತೃಪ್ತ ಶಾಸಕರ ಜೊತೆ ಹೋಗಿಲ್ಲ, ಬಂದಿಲ್ಲ. ಅವರ ಜೊತೆಗೆ ಕಾಣಿಸಿಕೊಂಡಿಲ್ಲ. ನಮ್ಮ ಪಾಡಿಗೆ ನಾವು ಬಂದಿದ್ದೇವೆ. ಅವರ ಪಾಡಿಗೆ ಅವರು ಬಂದಿದ್ದಾರೆ ಅಷ್ಟೇ. ನಾನು ಅಶ್ವತ್ಥ್ ನಾರಾಯಣ್ ಬೇರೆ ಕೆಲಸಕ್ಕೆ ಹೋಗಿದ್ದೆವು ಎಂದು ಅತೃಪ್ತ ಶಾಸಕರ ಜೊತೆಗಿದ್ದ ಮಾತುಗಳನ್ನು ತಳ್ಳಿಹಾಕಿದರು.

    ನೂರಕ್ಕೆ ನೂರು ಪರ್ಸೆಂಟ್ ಬಹುಮತ ಸಾಬೀತು ಪಡಿಸುತ್ತೇವೆ. ರಾಜ್ಯದ ಜನರು ಜೆಡಿಎಸ್‍ಗೆ 37 ಸ್ಥಾನ ಕೊಟ್ಟು ಥರ್ಡ್ ಪ್ಲೇಸ್‍ನಲ್ಲಿ ಇಟ್ಟಿದ್ದರು. ಆದರೆ ಥರ್ಡ್ ಪ್ಲೇಸ್ ಬಂದವರು ಫಸ್ಟ್ ಪ್ಲೇಸ್‍ಗೆ ಬಂದರು. ಇದು ರಾಜ್ಯದ ದುರಂತ. ಈ ದುರಂತ ಹೋಗಿ, ಒಳ್ಳೆಯ ದಿನಗಳು ಬಂದಿವೆ. ಮತ್ತೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದು ತಿಳಿಸಿದರು.

    ರಾಜ್ಯದ ಜನತೆಗೆ ಅಭಿವೃದ್ಧಿ, ಸುಭದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಕೊಡಬೇಕಿದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಮೂವತ್ತು ವರ್ಷದ ಬಳಿಕ ಇಂತಹ ಅವಕಾಶ ಬಂದಿದೆ. ಕೇಂದ್ರದ ಯೋಜನೆ, ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಸ್ಪೀಕರ್ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ. ರಮೇಶ್ ಕುಮಾರ್ ಅವರು ಕೂಡ ಒಬ್ಬ ಶಾಸಕರೇ. ಅವರು ಸ್ಪೀಕರ್ ಹುದ್ದೆಗೆ ಗೌರವ ಕೊಟ್ಟು ಮಾಡಬೇಕಿತ್ತು. ಈ ಹಿಂದೆ ಇಂತಹ ತೀರ್ಪು ಬಂದಿರಲಿಲ್ಲ ಎಂದರು.

    ಭಾನುವಾರ ಮಧ್ಯಾರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್‍ಪೋರ್ಟಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂ ಟಿಬಿ ನಾಗರಾಜ್ ಬಂದಿಳಿದಿದ್ದಾರೆ. ಅನರ್ಹರು ಏರ್‍ಪೋರ್ಟಿನಿಂದ ಹೊರಬಂದ ಬಳಿಕ ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಕೂಡ ಆಗಮಿಸಿದ್ದಾರೆ. ಇವರ ಜೊತೆ ಪಕ್ಷೇತರ ಶಾಸಕ ನಾಗೇಶ್ ಕೂಡ ಬಂದಿದ್ದು, ಮಾಧ್ಯಮಗಳ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದರು.

  • ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಬೆಂಗಳೂರು: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಕಾನೂನು ಬಾಹಿರವಾಗಿದೆ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಹಿರಿಯ ವಕೀಲರು, ರಾಜೀನಾಮೆಯನ್ನು ಮಾತ್ರ ಅಂಗೀಕಾರ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತೇ ಹೊರತು ಅನರ್ಹತೆ ಬಗ್ಗೆ ತಿಳಿಸಿರಲಿಲ್ಲ. ಅಷ್ಟೇ ಅಲ್ಲದೆ ರಾಜೀನಾಮೆಯನ್ನು ಕೈಬಿಟ್ಟು ಅನರ್ಹತೆ ಗೊಳಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ರಾಜೀನಾಮೆಯನ್ನು ಮೊದಲು ಅಂಗೀಕಾರ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

    ಕಾನೂನಿನ ಪ್ರಕಾರ ಅನರ್ಹತೆಗೆ ಒಂದು ವಾರದ ಕಾಲಾವಕಾಶ ನೀಡಬೇಕಿತ್ತು. ಆದರೆ ಸ್ಪೀಕರ್ ಮೂರು ದಿನಗಳಲ್ಲಿ ದಿಢೀರನೆ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಅತೃಪ್ತ ಶಾಸಕರು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ, ಆದೇಶವನ್ನು ತಡೆಹಿಡಿಯುವ ಅವಕಾಶವಿದೆ ಎಂದರು.

    ಶನಿವಾರ ಹಾಗೂ ಭಾನವಾರ ರಜೆ ಇದ್ದರೂ ಕಚೇರಿಯಲ್ಲಿ ಕುಳಿತು ತರಾತುರಿಯಲ್ಲಿ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಅದೇ ಶಾಸಕರು ರಾಜೀನಾಮೆ ಸ್ವೀಕರಿಸುವಾಗ ರಜೆ ಇದೆ, ಖಾಸಗಿ ಕಾರ್ಯಕ್ರಮದ ಅಂತ ಹೇಳಿ ವಿಳಂಬ ನೀತಿ ಅನುಸರಿದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಅನುಕೂಲವಾಗುವಂತೆ ನಡೆದುಕೊಂಡರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಲ್ ಪಾಸಾಗಿಲ್ಲ ಅಂದ್ರೆ ಒಂದು ನಯಾ ಪೈಸೆ ಡ್ರಾ ಆಗಲ್ಲ: ಸ್ಪೀಕರ್ ಗರಂ

    ಸ್ಪೀಕರ್ ರಮೇಶ್ ಕುಮಾರ್ ಒಂದು ರೀತಿಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಾಸಕರ ಅನರ್ಹತೆಯಿಂದ ವಿಧಾನಸಭೆಯ ಸಂಖ್ಯಾಬಲ ಕಡಿಮೆಯಾಗಿದೆ. ಹೀಗಾಗಿ ಬಿಜೆಪಿಯವರು ಯಾರ ಸಹಾಯವಿಲ್ಲದೇ ವಿಶ್ವಾಸಮತ ಸಾಬೀತು ಮಾಡುತ್ತಾರೆ ಎಂದರು.

    ಶಾಸಕರನ್ನು 2023ರ ವರೆಗೆ ಅನರ್ಹತೆ ಮಾಡಲಾಗಿದೆ ಎಂದು ಸ್ಪೀಕರ್ ಹೇಳುತ್ತಾರೆ. ಇದು ಅಸಂವಿಧಾನಿಕವಾಗಿದೆ. ಕಾನೂನಿನ ಪ್ರಕಾರ ಅನರ್ಹಗೊಂಡ ಶಾಸಕ ಮುಂದಿನ ಉಪ ಚುನಾಮಣೆ ಇಲ್ಲವೇ, ಮುಖ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಸ್ಪೀಕರ್ ಅವರು ಶಾಸಕರನ್ನು ಹೆದರಿಸುವ ತಂತ್ರವನ್ನು ಹೂಡುತ್ತಾ ಬಂದಿದ್ದಾರೆ ಎನ್ನುವ ವಾದಕ್ಕೆ ಸಾಂದರ್ಭಿಕ ಸಾಕ್ಷಿ ಸಿಗುತ್ತದೆ. ಮೊನ್ನೆಯಷ್ಟೇ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಮೂಲಕ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವಂತೆ ಬಿಸಿ ಮುಟ್ಟಿಸಿದ್ದರು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅವರ ತಂತ್ರ ವಿಫಲವಾಗಿದ್ದರಿಂದ ಇಂದು 14 ಜನರನ್ನೂ ಅನರ್ಹಗೊಳಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ಆದೇಶಕ್ಕೆ ತಡೆತಂದು ಮತ್ತೆ ಕಲಾಪದಲ್ಲಿ ಭಾಗವಹಿಸಬಹುದು. ರೆಬೆಲ್ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕಾಂಗ್ರೆಸ್ ನಾಯಕರು ವಿಪ್ ಜಾರಿ ಮಾಡಿದ್ದಾರೆ. ಈ ಮೂಲಕ ಸ್ಪೀಕರ್ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.

    ಅತೃಪ್ತ ಶಾಸಕರಿಗೆ ಬಿಜೆಪಿಯು ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲರು, ಕೊಟ್ಟರೆ ಏನು ತಪ್ಪು? ಮಂತ್ರಿಗಿರಿ ನೀಡಿದರೆ ಪ್ರಳಯವಾಗಲ್ಲ ಬಿಡಿ. ಮಂತ್ರಿಗಿರಿಗಾಗಿಯೇ ಅವರು ರಾಜೀನಾಮೆ ನೀಡಿದ್ದರೆ ತಪ್ಪು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿಪಕ್ಷಕ್ಕೆ ಬೆಂಬಲ ನೀಡುವ ಉದ್ದೇಶದಿಂದ ರಾಜೀನಾಮೆ ನೀಡುವುದು ಸರಿ ಎಂದು ಅಭಿಪ್ರಾಯಪಟ್ಟರು.

  • ಎಂಟಿಬಿ, ಬಿಸಿ ಪಾಟೀಲ್ ಪ್ರಳಯವಾದ್ರೂ ಕಾಂಗ್ರೆಸ್‍ಗೆ ಹೋಗಲ್ಲ: ರೇಣುಕಾಚಾರ್ಯ

    ಎಂಟಿಬಿ, ಬಿಸಿ ಪಾಟೀಲ್ ಪ್ರಳಯವಾದ್ರೂ ಕಾಂಗ್ರೆಸ್‍ಗೆ ಹೋಗಲ್ಲ: ರೇಣುಕಾಚಾರ್ಯ

    -ಇಬ್ಬರು ಜೆಡಿಎಸ್ ಶಾಸಕರಿಂದ ಬಿಜೆಪಿಗೆ ಬೆಂಬಲ

    ಬೆಂಗಳೂರು: ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಬಿ.ಸಿ.ಪಾಟೀಲ್ ಪ್ರಳವಾದರೂ ಕಾಂಗ್ರೆಸ್‍ಗೆ ಹೋಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

    ಸಿಎಂ ನಿವಾಸ ಧವಳಗಿರಿಯ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ರೆಬೆಲ್ ಶಾಸಕರ ಧೈರ್ಯವನ್ನು ಮೆಚ್ಚಲೇಬೇಕು. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕರು ಅತೃಪ್ತ ಶಾಸಕರಿಗೆ ಅಧಿಕಾರದ ಆಸೆ ತೋರಿಸಿದರು. ಆದರೆ ಅವರು ಮಾತ್ರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೊಸ ಸರ್ಕಾರ ರಚನೆಯಾಗುವವರೆಗೂ ನಾವು ಬೆಂಗಳೂರಿಗೆ ಮರಳುವುದಿಲ್ಲ ಎಂದು ರೆಬೆಲ್ ಶಾಸಕರು ಹೇಳಿದ್ದಾರೆ. ಅವರೆಲ್ಲರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದರು.

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಸದನಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗುತ್ತಾರೆ ಅಂತ ಈ ಹಿಂದೆಯೇ ಹೇಳಿದ್ದೆ. ಆ ಮಾತು ಈಗ ಸತ್ಯವಾಯಿತು ಎಂದು ಹೇಳಿದರು.

    ಜೆಡಿಎಸ್ ಶಾಸಕರು ಕಾಂಗ್ರೆಸ್ ಸಹವಾಸ ಮಾಡಿ ಹಾಳಾಗಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿತಗೊಳಿಸಬೇಕು ಅಂತ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹೀಗಾಗಿ ಸದನದಲ್ಲಿ ಬಿಜೆಪಿಗೆ ಬ್ಯಾಹ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ಶಾಸಕರೊಬ್ಬರು ನನಗೆ ಫೋನ್ ಮಾಡಿ ತಿಳಿಸಿದ್ದಾರೆ. ಇಬ್ಬರು ಜೆಡಿಎಸ್ ಶಾಸಕರು ಬಾಹ್ಯ ಬೆಂಬಲ ಸೂಚಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಬಾಂಬ್ ಸಿಡಿಸಿದರು.

  • ಅನರ್ಹತೆಗೆ ನಾವು ಹೆದರೋದಿಲ್ಲ: ವಿಶ್ವನಾಥ್ ತಿರುಗೇಟು

    ಅನರ್ಹತೆಗೆ ನಾವು ಹೆದರೋದಿಲ್ಲ: ವಿಶ್ವನಾಥ್ ತಿರುಗೇಟು

    ಮುಂಬೈ: ಸ್ಪೀಕರ್ ಮೂವರನ್ನ ಅನರ್ಹಗೊಳಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ ಎಚ್. ವಿಶ್ವನಾಥ್ ಅವರು ಅನರ್ಹತೆಗೆ ನಾವು ಹೆದರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಗುರುವಾರದಂದು ರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಈ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ವಿಶ್ವನಾಥ್, ಅನರ್ಹತೆಗೆ ನಾವು ಹೆದರೋದಿಲ್ಲ. ಇನ್ನು 2-3 ದಿನಗಳಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತೇವೆ. ಅನರ್ಹತೆ ವಿಚಾರವನ್ನ ಸುಪ್ರಿಂಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

    ಶಾಸಕ ಆರ್.ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಲಾಗಿದೆ. ಇನ್ನುಳಿದ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುತ್ತೇನೆ. ಅನರ್ಹಗೊಂಡಿರುವ ಶಾಸಕರು 15 ವಿಧಾನಸಭೆ ಅವಧಿ ಅಂದರೆ 3 ವರ್ಷ 10 ತಿಂಗಳು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು.

    ಸ್ಪೀಕರ್ ಅವರು ಮೂವರು ರೆಬೆಲ್ ಶಾಸಕರನ್ನು ಅನರ್ಹಹೊಳಿಸಿ ಆದೇಶ ಹೊರಡಿಸಿದ್ದಕ್ಕೆ ಕಾಂಗ್ರೆಸ್ ವಲಯದಲ್ಲಿ ಸಂತಸ ವ್ಯಕ್ತವಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಟ್ವೀಟ್ ಮೇಲೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಅವರು ಟ್ವೀಟ್ ಮಾಡಿ ಸ್ಪೀಕರ್ ನಿರ್ಧಾರವನ್ನ ಶ್ಲಾಘಿಸಿದ್ದಾರೆ.

    ಟ್ವೀಟ್‍ಗಳಲ್ಲಿ ಏನಿದೆ?
    ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆರ್.ಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು.

    ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ನಮ್ಮ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಅವರ ನಿರ್ಣಯವನ್ನು ಸ್ವಾಗರಿಸುತ್ತೇನೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇಂತ ನಿರ್ಧಾರಗಳು ಅತ್ಯಗತ್ಯ. ಸ್ವಾರ್ಥ ಸಾಧನೆಗಾಗಿ ಜನಾದೇಶವನ್ನು ಉಲ್ಲಂಘಿಸಿದವರಿಗೆ ಈ ಐತಿಹಾಸಿಕ ನಿರ್ಣಯ ಎಚ್ಚರಿಕೆಯ ಗಂಟೆಯಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.

    ಬಂಡಾಯ ಶಾಸಕರು ಅಧಿಕಾರದ ಆಸೆಗೆ ಪಕ್ಷ ತೊರೆದು ಹೋದರು. ಈ ಮೂಲಕ ತಮ್ಮನ್ನು ಆರಿಸಿದ ಜನರನ್ನು ಇಡೀ ದೇಶದ ಜನರ ಎದುರಿಗೆ ನಗೆಪಾಟಲಿಗೆ ತಳ್ಳಿದರು. ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಆರ್.ಶಂಕರ್ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಅಮಾನತು ಮಾಡಿರುವ ಸಭಾಧ್ಯಕ್ಷರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಬಂಡಾಯ ಶಾಸಕರ ನಡವಳಿಕೆಯಿಂದಾಗಿ ರಾಜಕಾರಣದ ಬಗ್ಗೆ ಜನರಲ್ಲಿ ಹೇಸಿಗೆ ಹುಟ್ಟಿದೆ ಎಂದು ಜಿ. ಪರಮೇಶ್ವರ್ ಕಿಡಿಕಾರಿದ್ದರು.

  • ಬಹುಮತ ಸಾಬೀತುವರೆಗೂ ಬಾರದಂತೆ ರೆಬೆಲ್ ಶಾಸಕರಿಗೆ ಬಿಎಸ್‍ವೈ ಸೂಚನೆ

    ಬಹುಮತ ಸಾಬೀತುವರೆಗೂ ಬಾರದಂತೆ ರೆಬೆಲ್ ಶಾಸಕರಿಗೆ ಬಿಎಸ್‍ವೈ ಸೂಚನೆ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಕಾಂಗ್ರೆಸ್-ಜೆಡಿಎಸ್‍ನ ಪಕ್ಷದ 12 ಮಂದಿ ಶಾಸಕರು ಸರ್ಕಾರ ಬೀಳುವವರೆಗೆ ವಾಪಸ್ ಬರಲ್ಲ ಎಂದು ಸ್ಪಷ್ಟಪಡಿಸಿದ್ದರು. ಸದ್ಯ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಂಡಿರುವ ಪರಿಣಾಮ ಇಂದು ಆದರೂ ಬೆಂಗಳೂರಿಗೆ ವಾಪಸ್ ಆಗುತ್ತಾರಾ ಎಂಬ ಕುತೂಹಲ ಮೂಡಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಅತೃಪ್ತ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುವವರೆಗೆ ಬೆಂಗಳೂರಿಗೆ ಬಾರದಂತೆ ಬಂಡಾಯ ಶಾಸಕರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಂಗಳವಾರಷ್ಟೇ ವಿಶ್ವಾಸಮತ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತಿಗೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಪಕ್ಷೇತರ ಶಾಸಕರು ಸಲ್ಲಿಸಿರುವ ಅರ್ಜಿ ಇವತ್ತು ಇತ್ಯರ್ಥವಾಗಲಿದೆ.

    ಬಹುಮತ ಸಾಬೀತು ಪಡಿಸುವ ಮುನ್ನ ಪಕ್ಷದ ನಾಯಕರು, ವಾಪಸ್ ಬರುವಂತೆ ಆಹ್ವಾನ ನೀಡಿದ್ದರೂ ರೆಬೆಲ್ ಶಾಸಕರು ಅವರ ಮಾತನ್ನು ನಿರಾಕರಿಸಿದ್ದರು. ಅಲ್ಲದೆ ವಿಡಿಯೋ ಬಿಡುಗಡೆ ಮಾಡಿ ತಾವು ಯಾವುದೇ ಕಾರಣಕ್ಕೂ ಮತ್ತೆ ವಾಪಸ್ ಬರುವ ಯೋಚನೆ ಇಲ್ಲ, ಯಾರೇ ಸಿಎಂ ಆದರೂ ನಾವು ವಾಪಸ್ ಬರಲ್ಲ ಎಂದಿದ್ದರು. ಇತ್ತ ಅತೃಪ್ತ ಶಾಸಕರ ವಿಚಾರಣೆಗಾಗಿ ಸ್ಪೀಕರ್ ಅವರು ಭೇಟಿಗೆ ಅವಕಾಶ ನೀಡಿದ್ದರು. ಆದರೆ ಶಾಸಕರು ತಮ್ಮ ಪರ ವಕೀಲರ ಮೂಲಕ ಸಮಯಾವಕಾಶ ಕೇಳಿರುವುದರಿಂದ ಹೆಚ್ಚಿನ ಸಮಯದ ಅವಕಾಶ ಲಭಿಸಿದೆ.

  • ವಿಶ್ವನಾಥ್ ವಿರುದ್ಧ ಕಿಡಿ – ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದ ಸ್ಪೀಕರ್

    ವಿಶ್ವನಾಥ್ ವಿರುದ್ಧ ಕಿಡಿ – ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದ ಸ್ಪೀಕರ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಕೆಂಡಾಮಂಡಲವಾದ ಪ್ರಸಂಗ ಮಂಗಳವಾರ ವಿಧಾನಸಭಾ ಕಲಾಪದಲ್ಲಿ ನಡೆಯಿತು.

    ಸಿಎಂ ತಮ್ಮ ಭಾಷಣದಲ್ಲಿ ವಿಶ್ವನಾಥ್ ಅವರು ಭಾಷಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಲಹರಣ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಎಚ್.ವಿಶ್ವನಾಥ್ ಅವರು ನಮ್ಮ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅವರು ಬರುತ್ತಿದ್ದೇವೆ ಅಂತ ಮೊದಲು ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸಂಬಂಧಿಕರನ್ನು ನೋಡಲು ಜಯದೇವ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿದ್ದ ಕಚೇರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡುವಂತೆ ಸೂಚನೆ ನೀಡಿದೆ. ಆದರೆ ಅವರು ನೇರವಾಗಿ ಸುಪ್ರೀಂಕೋರ್ಟಿಗೆ ಹೋದರು ಎಂದು ಕಿಡಿಕಾರಿದರು.

    ಸುಪ್ರೀಂಕೋರ್ಟ್ ಆದೇಶದ ಬಳಿಕ ಎಚ್.ವಿಶ್ವನಾಥ್ ಅವರು ಬಂದು ರಾಜೀನಾಮೆ ನೀಡಿದರು. ಈ ದೃಶ್ಯವನ್ನು ನಾನು ವಿಡಿಯೋ ಕೂಡ ಮಾಡಿಸಿದ್ದೇನೆ. ರಾಜೀನಾಮೆ ಪತ್ರದ ಹೇಗಿರಬೇಕು ಅಂತ ತಿಳಿ ಹೇಳಿದ್ದೇನೆ. ಆದರೂ ಅವರು ಉದ್ದೇಶ ಅದೇ ಎಂದು ಸರಳವಾಗಿ ಹೇಳಿಬಿಟ್ಟರು ಎಂದು ಅಸಮಾಧಾನ ಹೊರ ಹಾಕಿದರು.

    ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ, ವಿಧಾನಸಭಾ ಸದಸ್ಯ ಸೇರಿದಂತೆ ಅನೇಕ ಸ್ಥಾನಗಳನ್ನ ಅಲಂಕರಿಸಿದ್ದಾರೆ. ಆದರೂ ಅವರಿಗೆ ರಾಜೀನಾಮೆ ನೀಡುವುದು ಗೊತ್ತಿಲ್ಲವೇ? ಒಂದು ವೇಳೆ ರಾಜೀನಾಮೆ ಕೊಡುವ ನಿಯಮ ತಿಳಿದಿದ್ದರೆ ಯಾವ ಉದ್ದೇಶಕ್ಕಾಗಿ ಹಾಗೆ ಮಾಡಿದರು ಎನ್ನುವ ಅನುಮಾನ ಬರುತ್ತದೆ. ಇಂತಹ ವ್ಯಕ್ತಿ ಈಗ ಸ್ಪೀಕರ್ ಕುಮ್ಮಕ್ಕು ಕೊಡುತ್ತಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ನನ್ನಂತೆ ಬದುಕಲು ಅವರು ನೂರು ಜನ್ಮ ಪಡೆಯಬೇಕು ಎಂದು ವಿಶ್ವನಾಥ್ ಅವರ ವಿರುದ್ಧ ಚಾಟಿ ಬೀಸಿದರು.

    ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅನುಗ್ರಹದಿಂದ ನಾವು ವಿಧಾನಸಭೆಗೆ ಕಾಲಿಟ್ಟಿದ್ದೇವು. ನನ್ನ ಕ್ಷೇತ್ರದಲ್ಲಿ ನನಗೆ ಜಾತಿಯ ಬೆಂಬಲವಿಲ್ಲ. ಹಣ ಎಷ್ಟಿದೆ ಅಂತ ದೇಶದ ಜನರಿಗೆ ಗೊತ್ತಿದೆ. ಅವಕಾಶ ಸಿಕ್ಕಾಗ ಡಿ.ದೇವರಾಜು ಅರಸು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಹಾಕಿದ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ ಎಂದು ಹೇಳಿದರು.

    ರಾಜೀನಾಮೆ ಕೊಡುವ ನಿಯಮದ ಬಗ್ಗೆ ಗೊತ್ತಿಲ್ಲದವರು ನನ್ನ ಬಗ್ಗೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ನಾನು ಈ ಸ್ಥಾನದಲ್ಲಿ ಇರುತ್ತೇನೆ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಬಗ್ಗೆ ಮಾತನಾಡಿರುವುದು ಸಭಾ ನಿಂದನೆ ಎಂದು ಗುಡುಗಿದರು.

    ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದೇನೆ ಎಂದು ಹೇಳಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಪತ್ರವನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡುವಂತೆ ಸಿಬ್ಬಂದಿಯನ್ನು ಕರೆದರು. ಬಳಿಕ ಮಾತು ಮುಂದುವರಿಸಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಒಂದೇ ಕ್ಷಣವೂ ಇರಲ್ಲ. ಅದಕ್ಕಾಗಿಯೇ ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದೇನೆ. ಕೆ.ಎಚ್.ರಂಗನಾಥ್ ಅವರ ಕೈಯಲ್ಲಿ ಬೆಳೆದಿದ್ದೇನೆ. ಅವರು ನನಗೆ ರಾಜಕೀಯ ಸಂಸ್ಕಾರ ನೀಡಿದ್ದಾರೆ ಎಂದರು.