Tag: ರೆಡ್ ಕಾರ್ನರ್ ನೋಟಿಸ್

  • ವಿಚಾರಣೆಗೆ ಪ್ರಜ್ವಲ್‌ ಗೈರು – ಭಾರತಕ್ಕೆ ಕರೆ ತರೋದು ಹೇಗೆ? ಎಸ್‌ಐಟಿ ಮುಂದಿರುವ ಆಯ್ಕೆ ಏನು?

    ವಿಚಾರಣೆಗೆ ಪ್ರಜ್ವಲ್‌ ಗೈರು – ಭಾರತಕ್ಕೆ ಕರೆ ತರೋದು ಹೇಗೆ? ಎಸ್‌ಐಟಿ ಮುಂದಿರುವ ಆಯ್ಕೆ ಏನು?

    ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಸ್ವದೇಶಕ್ಕೆ ಕರೆ ತರಲು ವಿಶೇಷ ತನಿಖಾ ತಂಡದ (SIT) ಮುಂದಿರುವ ಏಕೈಕ ಆಯ್ಕೆ ಅಂದ್ರೆ ಅದು ರೆಡ್‌ ಕಾರ್ನರ್‌ ನೋಟಿಸ್‌.

    ರೆಡ್‌ ಕಾರ್ನರ್‌ ನೋಟಿಸ್‌ (Red Corner Notice) ಅನ್ನು ಅಷ್ಟು ಸುಲಭವಾಗಿ ಹೊರಡಿಸಲು ಸಾಧ್ಯವಿಲ್ಲ. ಬಹಳಷ್ಟು ಪ್ರಕ್ರಿಯೆ ನಡೆದ ಬಳಿಕ ಈ ನೋಟಿಸ್‌ ಹೊರಡಿಸಲಾಗುತ್ತದೆ. ಇದನ್ನೂ ಓದಿ: ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

     

    ರೆಡ್‌ ಕಾರ್ನರ್‌ ನೋಟಿಸ್‌ ಹೇಗೆ ಹೊರಡಿಸಲಾಗುತ್ತೆ?
    ಪ್ರಜ್ವಲ್ ರೇವಣ್ಣ ಬಂಧನವಾಗದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಪಟ್ಟಿ (Absconding Chargesheet) ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕು. ಆಗ ಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸಮನ್ಸ್‌ ಜಾರಿ ಮಾಡುತ್ತದೆ. ಈ ವೇಳೆ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಎಸ್‌ಐಟಿ ಮಾಹಿತಿ ನೀಡುತ್ತದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕಣ್ಣಾಮುಚ್ಚಾಲೆ ಆಟ – ವಿಮಾನ ನಿಲ್ದಾಣದಿಂದ ಬರಿಗೈಯಲ್ಲಿ ಪೊಲೀಸರು ವಾಪಸ್‌

    ಸಮನ್ಸ್‌ಗೆ ಗೈರಾದರೆ ಪ್ರಜ್ವಲ್ ಪತ್ತೆಗೆ ಕೋರ್ಟ್‌ ಅನುಮತಿಯೊಂದಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐಗೆ ಎಸ್‌ಐಟಿ ಮನವಿ ಮಾಡುತ್ತದೆ. ಬಳಿಕ ಸಿಬಿಐ ಇಂಟರ್‌ಪೋಲ್ (Interpol) ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸುತ್ತದೆ. ರೆಡ್ ಕಾರ್ನರ್ ನೋಟಿಸ್ ಜಾರಿಯಾದ್ರೆ ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾರೋ ಆ ದೇಶದ ಪೊಲೀಸರೇ ಅವರನ್ನು ವಶಕ್ಕೆ ಪಡೆಯಲು ಅನುಮತಿ ನೀಡುತ್ತದೆ. ವಶಕ್ಕೆ ಪಡೆದ ನಂತರ ಆ ದೇಶದ ಪೊಲೀಸರು ಭಾರತಕ್ಕೆ ಒಪ್ಪಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆ ನಡೆಸಬೇಕಾದರೆ ಎಸ್‌ಐಟಿಗೆ ಕನಿಷ್ಠ 40 ದಿನ ಬೇಕಾಗಬಹುದು.

     

    ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದಿಲ್ಲ ಯಾಕೆ?
    ಪ್ರಜ್ವಲ್‌ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕಾರಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಜರ್ಮನಿ ಹೋಗಿದ್ದಾರೆ. ಹೀಗಾಗಿ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ ಅಷ್ಟು ಸುಲಭವಾಗಿ ರದ್ದು ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಿಂದ ಆದೇಶ ಬಂದ ಬಳಿಕವಷ್ಟೇ ವಿದೇಶಾಂಗ ಸಚಿವಾಲಯ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡಬಹುದಾಗಿದೆ.

     

  • ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

    ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

    ಬೆಂಗಳೂರು: ದೇಶಾದ್ಯಂತ ಸದ್ಯ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ (Prajwal Pendrive Case) ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ತನಿಖಾ ತಂಡ ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಆದ್ರೆ ಪ್ರಜ್ವಲ್ ವಿದೇಶದಲ್ಲಿ ಇರೋದ್ರಿಂದ ಅವರ ಪತ್ತೆ ಮತ್ತು ಬಂಧನಕ್ಕೆ ರೆಡ್ ಕಾರ್ನರ್ ಮತ್ತು ಬ್ಲೂ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸುವಂತೆ ಸಿಬಿಐಗೆ ಮನವಿ ಕಳುಹಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಅಷ್ಟಕ್ಕೂ ಲುಕ್ ಔಟ್ ನೋಟಿಸ್ (lookout Notice), ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ (Blue Corner Notice,) ಎಂದರೇನು? ಯಾವ ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ? ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಏನಿದು ಲುಕ್ ಔಟ್ ನೋಟಿಸ್?
    ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದಾಗಿದೆ. ಇದನ್ನು ಲುಕ್ ಔಟ್ ಸರ್ಕ್ಯೂಲರ್ (LOC) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಇಮಿಗ್ರೇಷನ್ (BOI) ಜಾರಿಗೊಳಿಸುತ್ತದೆ. ಯಾವುದೇ ರಾಜ್ಯಗಳಲ್ಲಿ ಸಂಭವಿಸಿದ ಕ್ರಿಮಿನಲ್ ಪ್ರಕರಣಗಳಿಗೆ ಸಂಬAಧಿಸಿದAತೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಲು, ಆಯಾ ರಾಜ್ಯ ಸರ್ಕಾರಗಳ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕೆ ತತ್ಸಮಾನ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಮನವಿ ಸಲ್ಲಿಸಿದರೆ ಮಾತ್ರ ಇಂಥ ನೋಟಿಸ್ ಜಾರಿಗೊಳಿಸುತ್ತದೆ. ಇದಲ್ಲದೆ, ರಾಜ್ಯ ಸರ್ಕಾರಗಳು ರಚನೆ ಮಾಡುವ ವಿಶೇಷ ತನಿಖಾ ತಂಡಗಳಿಗೂ (SIT) ಇಂಥ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಅವಕಾಶವಿದೆ. ಇದು ಜಾರಿಯಾಗುತ್ತಲೇ ಆ ಆರೋಪಿಯ ಬಗೆಗಿನ ಎಲ್ಲಾ ವಿವರಗಳು, ಯಾವುದೇ ದೇಶವನ್ನು ಪ್ರವೇಶಿಸಲು ಇರುವ ಮಾರ್ಗಗಳಾದ ವಿಮಾನ ನಿಲ್ದಾಣಗಳು, ಬಂದರುಗಳು, ಅಂತಾರಾಷ್ಟ್ರೀಯ ಹೆದ್ದಾರಿಗಳ ಚೆಕ್ ಪಾಯಿಂಟ್ ಗಳನ್ನು ತಲುಪುತ್ತವೆ. ವಿದೇಶದಲ್ಲಿರುವ ಆರೋಪಿಯು ತನ್ನ ವೀಸಾ ಅವಧಿ ಮುಗಿದ ನಂತರ ಇಮಿಗ್ರೇಷನ್ ವಿಭಾಗವನ್ನು ಸಂಪರ್ಕಿಸಲೇಬೇಕು. ಆಗ ಆತನನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ.

    ಏನಿದು ಇಂಟರ್‌ಪೋಲ್ ರೆಡ್ ನೋಟಿಸ್ ಅಥವಾ ರೆಡ್ ಕಾರ್ನರ್ ನೋಟಿಸ್?
    ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ. ಇದು ಕೋರುವ ದೇಶದಲ್ಲಿ ನ್ಯಾಯಾಂಗ ಅಧಿಕಾರಿಗಳು ನೀಡಿದ ಬಂಧನದ ವಾರಂಟ್ ಅಥವಾ ನ್ಯಾಯಾಲಯದ ಆದೇಶವನ್ನು ಇದಕ್ಕಾಗಿ ಒದಗಿಸಬೇಕು. ಆದಾಗ್ಯೂ, ಆ ವ್ಯಕ್ತಿಯನ್ನು ಬಂಧಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವಾಗ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಕಾನೂನುಗಳ ಪ್ರಕಾರ ನಡೆದುಕೊಳ್ಳುತ್ತವೆ. ರೆಡ್ ನೋಟಿಸ್ ಎಂಬುದು ಬೇಕಾಗಿರುವ ವ್ಯಕ್ತಿಗೆ (ವಾಂಟೆಡ್) ನೀಡುವ ಅಂತಾರಾಷ್ಟ್ರೀಯ ಎಚ್ಚರಿಕೆ ಮಾತ್ರ, ಇದು ಬಂಧನದ ವಾರಂಟ್ ಅಲ್ಲ. ಆದ್ದರಿಂದ ಅಗತ್ಯವಿರುವ ವ್ಯಕ್ತಿಯನ್ನು ಗುರುತಿಸಲು ಮಾಹಿತಿ, ಅವರ ಹೆಸರು, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಕೂದಲು ಮತ್ತು ಕಣ್ಣಿನ ಬಣ್ಣ, ಛಾಯಾಚಿತ್ರಗಳು ಮತ್ತು ಬೆರಳಚ್ಚುಗಳು ಲಭ್ಯವಿದ್ದರೆ ಅವುಗಳನ್ನು ಒದಗಿಸುತ್ತಾರೆ

    ಏನಿದು ಬ್ಲೂ ಕಾರ್ನರ್ ನೋಟಿಸ್?
    ವಿದೇಶಗಳಲ್ಲಿ ಅಡಗಿಕೊಂಡಿರುವ ಆರೋಪಿಗಳ ಮಾಹಿತಿ ಸಂಗ್ರಹಕ್ಕೆ ಇಂಟರ್‌ಪೋಲ್‌ಗಳ ಮೂಲಕ ಹೊರಡಿಸುವ ನೋಟಿಸ್ ಇದಾಗಿದೆ. ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿ ಆರೋಪಿಯ ಗುರುತು, ಸ್ಥಳ, ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕುತ್ತದೆ. ಇಂಟರ್ ಪೋಲ್ ಒಟ್ಟು 7 ರೀತಿಯ ನೋಟಿಸ್‌ಗಳನ್ನು ನೀಡಬಹುದು. ಅದರಲ್ಲಿ ಬ್ಲೂ ಕಾರ್ನರ್ ನೋಟಿಸ್ ಆರೋಪಿಯ ವಿರುದ್ಧ ಮಾಹಿತಿ ಸಂಗ್ರಹಕ್ಕೆ, ರೆಡ್ ಕಾರ್ನರ್ ಬಂಧನಕ್ಕೆ, ಯೆಲ್ಲೋ ಕಾರ್ನರ್ ನೋಟಿಸ್ ನಾಪತ್ತೆಯಾದವನ ಪತ್ತೆಗೆ ಬಳಸಲಾಗುತ್ತದೆ. ಆದ್ರೆ ಭಾರತದಲ್ಲಿ ಇಂಟರ್ ಪೋಲ್‌ಗೆ ಸಿಬಿಐ ನೋಡಲ್ ಏಜೆನ್ಸಿಯಾಗಿದ್ದು, ಯಾವುದೇ ತನಿಖಾ ಸಂಸ್ಥೆಗಳು ನೋಟಿಸ್ ನೀಡಲು ಮೊದಲು ಸಿಬಿಐಗೆ ಮನವಿ ಸಲ್ಲಿಸಬೇಕಾಗುತ್ತದೆ.

  • ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ –  ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

    ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

    ನವದೆಹಲಿ: ಪಂಜಾಬ್‍ನ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿರುವ ಸತೀಂದರ್‌ಜೀತ್ ಸಿಂಗ್ ಅಲಿಯಾಸ್‌ ಗೋಲ್ಡೀ ಬ್ರಾರ್ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

    ಸಿಧು ಮೂಸೆವಾಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾಗಿಲ್ಲ. ಬದಲಾಗಿ ಈ ಹಿಂದೆ ನಡೆದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿಯಾಗಿದೆ. ಸಿಧು ಮೂಸೆವಾಲ ಹತ್ಯೆಯ ನಂತರ ಈ ಕೃತ್ಯವನ್ನು ನಾವು ನಡೆಸಿದ್ದೇವೆ ಎಂದು ಗೋಲ್ಡೀ ಬ್ರಾರ್ ಹೇಳಿಕೊಂಡಿದ್ದ.

    ನೋಟಿಸ್‌ ಯಾಕೆ?
    2020ರ ನವೆಂಬರ್‌ 11 ರಂದು ಫರೀದಾಕೋಟ್‌ನ ಕಟಾರಿಯಾ ಪೆಟ್ರೋಲ್ ಪಂಪ್ ಬಳಿ ಶೂಟೌಟ್‌ ನಡೆದಿತ್ತು. 2021ರ ಫೆಬ್ರವರಿ 18ರಂದು ಫರೀದಾಕೋಟ್‌ನಲ್ಲಿ ಹತ್ಯೆ ನಡೆದಿತ್ತು. ಈ ಎರಡು ಪ್ರಕರಣದ ತನಿಖೆ ನಡೆದು ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಎರಡೂ ಪ್ರಕರಣದಲ್ಲಿ ಆರೋಪಿಯಾಗಿರುವ ಗೋಲ್ಡೀ ಬ್ರಾರ್ ವಿರುದ್ಧ ಈಗ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾಗಿದೆ.

    ಪಂಜಾಬ್‌ ಪೊಲೀಸರು ಸಿಧು ಹತ್ಯೆಯಾಗುವ 10 ದಿನದ ಮೊದಲೇ ಸಿಬಿಐಗೆ ಪತ್ರ ಬರೆದಿದ್ದರು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಸಿಬಿಐ ಇಂಟರ್‌ಪೋಲ್‌ ಕೇಂದ್ರ ಕಚೇರಿ ಲಿಯಾನ್‌ಗೆ ಜೂನ್‌ 3 ರಂದು ಕಳುಹಿಸಿತ್ತು. ಈಗ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

    ಗೋಲ್ಡೀ ಬ್ರಾರ್ ಶ್ರೀಮುಕ್ತ್ಸರ್ ಸಾಹೀಬ್ ನ ಮೂಲದವನಾಗಿದ್ದು, 2017 ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಕೆನಡಾಗೆ ತೆರಳಿದ್ದ ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸದಸ್ಯನಾಗಿದ್ದಾನೆ.

    ಏನಿದು ರೆಡ್‌ ಕಾರ್ನರ್‌ನೋಟಿಸ್‌?
    ಇಂಟರ್‌ ಪೋಲ್‌ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸುವ ಆದೇಶವೇ ರೆಡ್‌ ಕಾರ್ನರ್‌ ನೋಟಿಸ್‌. ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪರಾರಿಯಾಗಿರುವ ಆರೋಪಿಗಳ ಇತರ ದೇಶಗಳಿಗೆ ಎಚ್ಚರಿಸುವುದು ರೆಡ್ ಕಾರ್ನರ್ ನೋಟಿಸ್‌ ನೀಡುವುದರ ಉದ್ದೇಶ.

    ಈ ನೋಟಿಸ್‌ ಜಾರಿಯಾದ ಬಳಿಕ ಆರೋಪಿಗಳು ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಯಾಣಿಸುವುದು ಅಸಾಧ್ಯವಾಗಲಿದೆ. ಬಂಧನದ ಬಳಿಕ ಆ ದೇಶದಿಂದ ಆರೋಪಿಗಳನ್ನು ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ.

  • ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣ – ನೀರವ್ ಮೋದಿ ಕುಟುಂಬಕ್ಕೆ ಸಂಕಷ್ಟ

    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣ – ನೀರವ್ ಮೋದಿ ಕುಟುಂಬಕ್ಕೆ ಸಂಕಷ್ಟ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನೀರವ್ ಮೋದಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ನೀರವ್ ಮೋದಿ ಪತ್ನಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.

    ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆ ಇಂಟರ್ ಪೋಲ್ ಈ ನೋಟಿಸ್ ಜಾರಿ ಮಾಡಿದ್ದು, ಬಾಕಿ ಕುಟುಂಬ ಸದಸ್ಯರಿಗೆ ಬಂಧನದ ವಾರಂಟ್ ನೀಡಿದೆ ಎಂದು ವರದಿಯಾಗಿದೆ. ಮತ್ತೊಂದು ಕಡೆ ನೀರವ್ ಮೋದಿ ಹೂಡಿಕೆಯ ಕಂಪನಿಗಳ ಮುಖ್ಯಸ್ಥರನ್ನು ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಮಾಡುತ್ತಿದೆ.

    ಪ್ರಕರಣ ಸಂಬಂಧ ನೀರವ್ ಮೋದಿಯನ್ನು ಕಳೆದ ವರ್ಷ ಲಂಡನ್ ನಲ್ಲಿ ಬಂಧಿಸಲಾಗಿದ್ದು, ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ವೇಸ್ಟ್ ಮಿನಿಸ್ಟರ್ ಕೋರ್ಟಿನಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಸೆಪ್ಟೆಂಬರ್ ನಲ್ಲಿ ಅಂತಿಮ ವಿಚಾರಣೆಗೆ ಸಮಯ ನಿಗದಿ ಮಾಡಿತ್ತು. ಆದರೆ ಲಂಡನ್ ನಲ್ಲಿ ಕೊರೊನಾ ಸಮಸ್ಯೆ ಹಿನ್ನೆಲೆ ವಿಚಾರಣೆ ವಿಳಂಬವಾಗಿದೆ.

    ಪ್ರಕರಣ ಸಂಬಂಧ ನೀರವ್ ಮೋದಿ ಪತ್ನಿ ಮತ್ತು ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ರೆಡ್ ಕಾರ್ನರ್ ನೋಟಿಸ್ ನೀಡಿದ್ದು ಮೋದಿ ಕುಟುಂಬದ ಮೇಲೆ ಇಡಿ ತನಿಖಾ ಸಂಸ್ಥೆ ಹದ್ದಿನ ಕಣ್ಣು ಇಟ್ಟಿದೆ.

    ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 13,500 ಸಾಲ ಪಡೆದು ಕೋಟಿ ಸಾಲ ಪಡೆದಿದ್ದ ಉದ್ಯಮಿ ನೀರವ್ ಮೋದಿ ಬಂಧನ ಭೀತಿ ಹಿನ್ನೆಲೆ ವಿದೇಶಕ್ಕೆ ಪಲಾಯನ ಮಾಡಿದ್ದರು. 2019 ಡಿಸೆಂಬರ್ ನಲ್ಲಿ ಇವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿತ್ತು.

    ಏನಿದು ರೆಡ್ ಕಾರ್ನರ್ ನೋಟಿಸ್?
    ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತ ಅಪರಾಧಿ ಹಿನ್ನೆಲೆಯಲ್ಲಿ ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಅಂತಹ ವ್ಯಕ್ತಿಯನ್ನು ಹುಡುಕಿ ಬಂಧಿಸಿ ಅವನನ್ನು ಮರಳಿ ಆ ದೇಶಕ್ಕೆ ಹಸ್ತಾಂತರಿಸುವಂತೆ ಇಂಟರ್ ಪೋಲ್ ಹೊರಡಿಸುವ ನೋಟಿಸಿಗೆ ರೆಡ್ ಕಾರ್ನರ್ ನೋಟಿಸ್ ಎಂದು ಕರೆಯಲಾಗುತ್ತದೆ.

  • ನಿತ್ಯಾನಂದನಿಗೆ ಶಾಕ್ ಕೊಡಲು ಪೊಲೀಸರು ಪ್ಲಾನ್

    ನಿತ್ಯಾನಂದನಿಗೆ ಶಾಕ್ ಕೊಡಲು ಪೊಲೀಸರು ಪ್ಲಾನ್

    ಗಾಂಧಿನಗರ: ಸ್ವಯಂಘೋಷಿತ ದೇವ ಮಾನವ ನಿತ್ಯಾನಂದನಿಗೆ ಶಾಕ್ ಕೊಡಲು ಗುಜರಾತಿನ ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ. ನಿತ್ಯಾನಂದನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಕಳೆದ ವರ್ಷ ನಿತ್ಯಾನಂದನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು. ಈಗಾಗಲೇ ನಿತ್ಯಾನಂದನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ರೆ ನಿತ್ಯಾನಂದ ಸಂಕಷ್ಟಕ್ಕೆ ಸಿಲುಕೋದು ಖಚಿತ. ಸದ್ಯ ನಿತ್ಯಾನಂದ ವಿದೇಶದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾನೆ ಎಂದು ವರದಿಗಳು ಬಿತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಟರ್ ಪೋಲ್ ಬಳಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಗುಜರಾತ್ ಪೊಲೀಸರು ಮನವಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

    ಪ್ರಕರಣದ ಹಿನ್ನೆಲೆ:
    ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ.

    ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.

    ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಆತ ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ.

    ಬ್ಲೂ ಕಾರ್ನರ್ ನೋಟಿಸ್: ಮತ್ತೊಂದು ದೇಶದಲ್ಲಿರುವ ಅಪರಾಧಿ ಅಥವಾ ಆರೋಪಿಯ ಪತ್ತೆಗಾಗಿ ಮತ್ತು ಕುಟುಂಬದ, ವ್ಯವಹಾರ ವಿವರಣೆ ಪಡೆಯುದಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ಈ ನೋಟಿಸ್ ಹೊರಡಿಸಿದಾಗ ಆರೋಪಿಗೆ ಆಶ್ರಯ ನೀಡಿದ ದೇಶ ಆತನನ್ನು ಬಂಧಿಸಲ್ಲ. ಆದರೆ ಆರೋಪಿ ಅಥವಾ ಅಪರಾಧಿಯ ಕುರಿತು ವಿವರಣೆ ನೀಡುತ್ತದೆ.

    ರೆಡ್ ಕಾರ್ನರ್ ನೋಟಿಸ್: ಅಪರಾಧಿ ಅಥವಾ ಆರೋಪಿ ಮತ್ತೊಂದು ದೇಶದಲ್ಲಿದ್ದಾಗ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡುವುದು. ಅಂತಹ ವ್ಯಕ್ತಿಯನ್ನು ಪತ್ತೆ ಹಚ್ಚಿ ತಾತ್ಕಾಲಿಕವಾಗಿ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ವಿನಂತಿಸಿಕೊಳ್ಳಲು ಈ ನೋಟಿಸ್ ಜಾರಿಯಾಗುತ್ತದೆ

  • ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ!

    ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ!

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ನೀರವ್ ಮೋದಿ ದೂರು ದಾಖಲಾಗುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ನೀರವ್ ಮೋದಿ ಹಾಗೂ ಅವರ ಅಂಕಲ್ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್ ಗೆ ಮನವಿ ಮಾಡಿಕೊಂಡಿತ್ತು.

    ಈ ಸಂಬಂಧ ಸಿಬಿಐ ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ನೀರವ್ ಮೋದಿ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ್ದು ಯಾವುದೇ ದೇಶದಲ್ಲಿದ್ದರೂ ಬಂಧಿಸುವ ಸಾಧ್ಯತೆ ಇದೆ.

    ಸಿಬಿಐ ನೀರವ್ ಸೇರಿ ಇನ್ನಿತರೆ ಆರೋಪಿಗಳ ಭಾರತೀಯ ಪಾಸ್‍ಪೋರ್ಟ್‍ಗಳನ್ನು ರದ್ದುಪಡಿಸಿ, ಅವರ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿತ್ತು. ಅಲ್ಲದೇ ನೀರವ್ ಮೋದಿ ವಾಸದ ಖಚಿತಪಡಿಸುವ ಬಗ್ಗೆ ಲಂಡನ್‍ಗೂ ಮಾಹಿತಿ ರವಾನಿಸಿ ಕ್ರಮ ಕೈಗೊಂಡಿತ್ತು. ಆದರೆ ನೀರವ್ ಮೋದಿ ಪಾಸ್ ಪೋರ್ಟ್ ರದ್ದಾದ ಬಳಿಕವೂ ಬೇರೆ ದೇಶದ ಪಾಸ್‍ಪೋರ್ಟ್ ಬಳಸಿ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಿದ್ದ ಮಾಹಿತಿಯನ್ನು ಇಂಟರ್‍ಪೋಲ್ ಅಧಿಕಾರಿಗಳಿಗೆ ಒದಗಿಸಲಾಗಿದೆ.

    ಏನಿದು ರೆಡ್ ಕಾರ್ನರ್ ನೋಟಿಸ್?
    ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತ ಅಪರಾಧಿ ಹಿನ್ನೆಲೆಯಲ್ಲಿ ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಅಂತಹ ವ್ಯಕ್ತಿಯನ್ನು ಹುಡುಕಿ ಬಂಧಿಸಿ ಅವನನ್ನು ಮರಳಿ ಆ ದೇಶಕ್ಕೆ ಹಸ್ತಾಂತರಿಸುವಂತೆ ಇಂಟರ್ ಪೋಲ್ ಹೊರಡಿಸುವ ನೋಟಿಸಿಗೆ ರೆಡ್ ಕಾರ್ನರ್ ನೋಟಿಸ್ ಎಂದು ಕರೆಯಲಾಗುತ್ತದೆ.