Tag: ರೂಪಿಕಾ

  • ಅಪರ್ಣಾ ಅಕ್ಕ ಮುಖದಲ್ಲಿ ಎಂದಿಗೂ ನಗು ಮಾಸುತ್ತಿರಲಿಲ್ಲ: ನಟಿ ರೂಪಿಕಾ

    ಅಪರ್ಣಾ ಅಕ್ಕ ಮುಖದಲ್ಲಿ ಎಂದಿಗೂ ನಗು ಮಾಸುತ್ತಿರಲಿಲ್ಲ: ನಟಿ ರೂಪಿಕಾ

    ನ್ನಡದ ಖ್ಯಾತ ನಿರೂಪಕಿ ಅಪರ್ಣಾ (Aparna) ಜು.11ರಂದು ನಿಧನರಾಗಿದ್ದಾರೆ. ಇದೀಗ ನಟಿಯ ಅಂತಿಮ ದರ್ಶನ ಪಡೆಯಲು ಅವರ ಸ್ವಗೃಹಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸುತ್ತಿದ್ದಾರೆ. ಮಜಾ ಟಾಕೀಸ್ ಶೋನ ಸಹನಟಿ ರೂಪಿಕಾ (Actress Roopika) ಕೂಡ ಅಪರ್ಣಾ ಅಂತಿಮ ದರ್ಶನ ಪಡೆದಿದ್ದು, ಅವರ ನಿಧನಕ್ಕೆ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ: ಅನುಶ್ರೀ ಭಾವುಕ

    ಅಪರ್ಣಾ ಅಕ್ಕ ಜೊತೆ ಸುಮಾರು 170 ರಿಂದ 200 ಎಪಿಸೋಡ್ ಮಜಾ ಟಾಕೀಸ್‌ನಲ್ಲಿ ನಟಿಸಿದ್ದೀನಿ. ಅಪರ್ಣಾ ಅಂದರೆ ನನಗೆ ಅಕ್ಕ ಇದ್ದ ಹಾಗೆ ಇದ್ದರು. ಮಜಾ ಟಾಕೀಸ್ ವರ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಆಗಿದ್ದರು. ಅವರು ಬಿಟ್ಟರೇ ಆ ಪಾತ್ರನ ಬೇರೆ ಯಾರು ಮಾಡೋಕೆ ಆಗುತ್ತಿರಲಿಲ್ಲ ಎಂದು ನಟಿ ರೂಪಿಕಾ ಮಾತನಾಡಿದ್ದಾರೆ.

    ಅವರನ್ನು ಮಿಸ್ ಮಾಡಿಕೊಳ್ತೀನಿ ಅಂತಾ ಹೇಳೋಕೆ ಆಗೋಲ್ಲ. ಅವರ ನಟನೆ, ವಾಯ್ಸ್ ನಮ್ಮ ಜೊತೆ ಟ್ರಾವೆಲ್ ಮಾಡುತ್ತಾ ಇರುತ್ತೆ. ಕಲಾವಿದರು ಹೋದ ಮೇಲೂ ಜೀವಂತವಾಗಿ ಇರುತ್ತಾರೆ. ಅದು ನಮಗೆ ವರದಾನ ಎಂದು ನಟಿಯ ಕುರಿತು ರೂಪಿಕಾ ಮಾತನಾಡಿದ್ದಾರೆ. ಅವರ ನಿಧನದ ಸುದ್ದಿ ಕೇಳಿದಾಗ ಶಾಕ್ ಆಯ್ತು. 8 ತಿಂಗಳ ಹಿಂದೆ ಶೋವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ ಆಗ ನಗುತ್ತಲೇ ಖುಷಿಯಿಂದ ಮಾತನಾಡಿದರು. ಚೆನ್ನಾಗಿ ಡ್ಯಾನ್ಸ್ ಮಾಡಿದೆ ಎಂದು ನನಗೆ ಹೇಳಿದ್ದರು. ಅವರ ಮುಖದಲ್ಲಿ ಎಂದಿಗೂ ನಗು ಮಾಸುತ್ತಿರಲಿಲ್ಲ ಎಂದು ನಟಿ ಸ್ಮರಿಸಿದ್ದಾರೆ.


    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.


    ಕಿರುತೆರೆಯಲ್ಲಿ ‘ಮೂಡಲಮನೆ’, `ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆಗೆ ಧ್ವನಿ ಗೂಡಿಸಿದ್ದರು.

  • Lakshmi Nivasa: ದಿವ್ಯಶ್ರೀ ಕೈಬಿಟ್ಟ ಪಾತ್ರಕ್ಕೆ ನಟಿ ರೂಪಿಕಾ ಎಂಟ್ರಿ

    Lakshmi Nivasa: ದಿವ್ಯಶ್ರೀ ಕೈಬಿಟ್ಟ ಪಾತ್ರಕ್ಕೆ ನಟಿ ರೂಪಿಕಾ ಎಂಟ್ರಿ

    ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮಿ ನಿವಾಸ’ ಸೀರಿಯಲ್‌ನಿಂದ ದಿವ್ಯಶ್ರೀ ಗುಡ್ ಬೈ ಹೇಳಿದ್ದಾರೆ. ಅವರ ಪಾತ್ರಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯ ಆಗಮನವಾಗಿದೆ. ದಿವ್ಯಶ್ರೀ ಕೈಬಿಟ್ಟ ಪಾತ್ರಕ್ಕೆ ‘ಚೆಲುವಿನ ಚಿಲಿಪಿಲಿ’ ನಟಿ ರೂಪಿಕಾ ಅವರು ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ತಮನ್ನಾ ಬಾಯ್‌ಫ್ರೆಂಡ್ ವಿಜಯ್ ಜೊತೆ ಕಾಣಿಸಿಕೊಂಡ ಸಮಂತಾ

    ‘ಲಕ್ಷ್ಮಿ ನಿವಾಸ’ದಲ್ಲಿ ಸ್ಟಾರ್ ಕಲಾವಿದರ ದಂಡೇ ಇರುವ ಧಾರಾವಾಹಿ. ಕರ್ಪೂರದ ಗೊಂಬೆ ಸೀರಿಯಲ್ ನಟಿ ಶ್ವೇತಾ, ಪವಿತ್ರಾ ಲೋಕೇಶ್, ರಘು ಮುಖರ್ಜಿ, ದಿಶಾ ಮದನ್, ‘ಬಿಗ್ ಬಾಸ್’ ಬೆಡಗಿ ಚಂದನಾ ಅನಂತಕೃಷ್ಣ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ತುಂಬು ಕುಟುಂಬದ ಕಥೆ ಜನರ ಮನಮುಟ್ಟಿದೆ. ಇತ್ತೀಚೆಗೆ ಹಿರಿಯ ನಟಿ ಪವಿತ್ರಾ ಲೋಕೇಶ್, ರಘು ಮುಖರ್ಜಿ ಪಾತ್ರ ಅಂತ್ಯವಾಗಿದೆ. ಆದರೆ ಈ ಸೀರಿಯಲ್ ಕಥೆಗೆ ಉತ್ತಮ ಟಿಆರ್‌ಪಿ ಕೂಡ ಬರುತ್ತಿದೆ.

     

    View this post on Instagram

     

    A post shared by Roopika (@roopika_appu)

    ಈ ಸೀರಿಯಲ್‌ನಲ್ಲಿ ಮತ್ತೊರ್ವ ನಾಯಕಿ ನಟಿ ಚಂದನಾ ಅಂದರೆ ಜಾಹ್ನವಿ ಅತ್ತಿಗೆ ಪಾತ್ರದಲ್ಲಿ ನಟಿಸುತ್ತಿದ್ದ ದಿವ್ಯಶ್ರೀ ತಮ್ಮ ಪಾತ್ರಕ್ಕೆ ಅಂತ್ಯ ಹಾಡಿದ್ದಾರೆ. ಸದ್ಯ ಅವರು ನವೀನ್ ಸಜ್ಜು ಜೊತೆ ಮುಖ್ಯಪಾತ್ರದಲ್ಲಿ ಚುಕ್ಕಿತಾರೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

    ದಿವ್ಯಶ್ರೀ ಬಿಟ್ಟು ಹೋದ ಪಾತ್ರಕ್ಕೆ ಸ್ಯಾಂಡಲ್‌ವುಡ್ ನಟಿ ರೂಪಿಕಾ ಆಗಮನವಾಗಿದೆ. ಬೀರ, ಮಂಜರಿ, ನವರಂಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರೂಪಿಕಾ ಲಕ್ಷ್ಮಿ ನಿವಾಸಕ್ಕೆ ಸಾಥ್ ನೀಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

    ರೂಪಿಕಾ ಅವರಿಗೆ ಕಿರುತೆರೆ ಏನು ಹೊಸದಲ್ಲ. ಈ ಹಿಂದೆ ‘ದೊರೆಸಾನಿ’ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ರೂಪಿಕಾ ನಟಿಸಿದ್ದರು. ಈಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ರೂಪಿಕಾ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

  • ರಾಮನಿಗಾಗಿ ಆಲ್ಬಂ ಸಾಂಗ್ ಮಾಡಿದ ನಟಿ ರೂಪಿಕಾ

    ರಾಮನಿಗಾಗಿ ಆಲ್ಬಂ ಸಾಂಗ್ ಮಾಡಿದ ನಟಿ ರೂಪಿಕಾ

    ಇಂದು ಕೋಟ್ಯಾಂತರ ಭಾರತೀಯರ ಕನಸು ನನಸಾಗುವ ದಿನ‌. ಅಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಆಗಲಿದೆ. ಈ ಸುಸಂದರ್ಭದಲ್ಲಿ ಸಿರಿ ಮ್ಯೂಸಿಕ್ ಅರ್ಪಿಸುವ ಹಾಗೂ ನಟಿ ರೂಪಿಕಾ (Roopika) ಅವರ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಸಾರಥ್ಯದಲ್ಲಿ ಮೂಡಿಬಂದಿರುವ ಜಾನಕಿ ರಾಮ (Janaki Rama) ಆಲ್ಬಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು.

    ಸುರಪುರದ ಶಾಸಕರಾದ ರಾಜುಗೌಡ, ಡಿ ಎಸ್ ಮ್ಯಾಕ್ಸ್ ನ ಎಂ ಡಿ ದಯಾನಂದ್,  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ನಟಿ ಪ್ರಿಯಾಂಕ ಉಪೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಪೊಲೀಸ್ ಅಧಿಕಾರಿ ಶಂಕರ್ ಸೇರಿದಂತೆ ಅನೇಕ ಗಣ್ಯರು ಸೇರಿ ಅದ್ದೂರಿಯಾಗಿ ಮೂಡಿಬಂದಿರುವ “ಜಾನಕಿ ರಾಮ”  ಆಲ್ಭಂ ಸಾಂಗ್ ಬಿಡುಗಡೆ ಮಾಡಿದರು. ಹಾಡನ್ನು ವೀಕ್ಷಿಸಿದ ಎಲ್ಲಾ ಗಣ್ಯರು ಮಾತನಾಡಿ, “ಈ ಹಾಡನ್ನು ನೋಡಿದಾಗ ಮೈ ರೋಮಾಂಚನವಾಯಿತು. ಇಂದು ಇಲ್ಲೇ ರಾಮನ ಪ್ರತಿಷ್ಠಾ ವೈಭವ ನೋಡಿದ ಹಾಗಾಯಿತು” ಇಂತಹ ಅದ್ಭುತ ಗೀತೆಯನ್ನು ಹೊರತಂದಿರುವ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಹಾಗೂ ರೂಪಿಕಾ ಅವರಿಗೆ ಧನ್ಯವಾದ ಎಂದರು.

    ನಮ್ಮ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋಸ್ ನ ಎಲ್ಲರ ಸಹಕಾರದಿಂದ ಈ ಹಾಡು ಮೂಡಿಬಂದಿದೆ. ನಮ್ಮ ಕನಸಿಗೆ ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಅವರು ಆಸರೆಯಾದರು. ಬೆಂಗಳೂರು ಸ್ಟುಡಿಯೋಸ್ ನಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ ನಲ್ಲಿ ಈ ಹಾಡನ್ನು ಚಿತ್ರಿಸಲಾಗಿದೆ.  ಅನಿರುದ್ದ್ ಜತಕರ್, ನಿರಂಜನ ದೇಶಪಾಂಡೆ ಈ ಹಾಡನಲ್ಲಿ ಅಭಿನಯಿಸಿ ನಮ್ಮ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಅದ್ವೈತ್ ಶೆಟ್ಟಿ ನಿರ್ದೇಶಿಸಿರುವ ಈ ಹಾಡನ್ನು ಮನೋಜ್ ಸೌಗಂಧ್ ಬರೆದಿದ್ದಾರೆ. ನೀತು ನಿನಾದ್ ತಾವೇ ಹಾಡಿ,  ಸಂಗೀತವನ್ನೂ ನೀಡಿದ್ದಾರೆ. ನಾನು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ,  ಲಿಖಿತ್ ಆಚಾರ್ ಅವರ ಜೊತೆಗೂಡಿ ನೃತ್ಯ ನಿರ್ದೇಶನ ಕೂಡ ಮಾಡಿದ್ದೇನೆ ಎಂದು ನಟಿ ರೂಪಿಕಾ ತಿಳಿಸಿದರು.

    ಸಂಗೀತ ನಿರ್ದೇಶಕ ನೀತು ನಿನಾದ್, ನಿರ್ದೇಶಕ ಅದ್ವೈತ ಶೆಟ್ಟಿ, ನಟ ನಿರಂಜನ್ ದೇಶಪಾಂಡೆ ಜಾನಕಿರಾಮನ ಹಾಡಿನ ಬಗ್ಗೆ ಮಾಹಿತಿ ನೀಡಿದರು.  ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಮಾತನಾಡಿ, ಜಾನಕಿರಾಮ  ಆಲ್ಬಂ ಸಾಂಗ್ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಎಲ್ಲರ ಸಹಕಾರದಿಂದ ಹತ್ತು ದಿನಗಳಲ್ಲಿ ಮುಗಿಯುವ ಚಿತ್ರೀಕರಣ ಒಂದೇ ದಿನದಲ್ಲಿ ಮುಗಿದಿದೆ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಇಂತಹ ಅದ್ಭುತ ಗೀತೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ಸುರೇಶ್ ಚಿಕ್ಕಣ್ಣ ಹೇಳಿದರು.

  • ‘ಲೇಡಿಸ್ ಬಾರ್’ ನಲ್ಲಿ ಮನಮೋಹಕ ಗೀತೆ

    ‘ಲೇಡಿಸ್ ಬಾರ್’ ನಲ್ಲಿ ಮನಮೋಹಕ ಗೀತೆ

    ಡಿ.ಎಂ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್  (AN) ನಿರ್ದೇಶಿಸಿರುವ ‘ಲೇಡಿಸ್ ಬಾರ್’ (Ladies Bar) ಚಿತ್ರದ ಟೀಸರ್ ಹಾಗೂ ಹಾಡುಗಳು (Song) ಇತ್ತೀಚಿಗೆ ಬಿಡುಗಡೆಯಾಯಿತು ರಾಜಕೀಯ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳನ್ನು ನಟಿ ರೂಪಿಕಾ (Rupika), ಮಮತ ಹಾಗೂ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಲೋಕಾರ್ಪಣೆಯಾಗಿದೆ. ನಂತರ ಚಿತ್ರತಂಡದ ಸದಸ್ಯರು ಲೇಡಿಸ್ ಬಾರ್ ಕುರಿತು ಮಾಹಿತಿ ನೀಡಿದರು.

    ಲೇಡಿಸ್ ಬಾರ್ ಶೀರ್ಷಿಕೆ ಕೇಳಿದ ತಕ್ಷಣ ಕುಡಿತದ ಬಗ್ಗೆ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ನಮ್ಮ ಚಿತ್ರದಲ್ಲಿ ಬರೀ ಕುಡಿತವಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡಿದಾಗ ಅದು ತಿಳಿಯುತ್ತದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ‌. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ ಎಂದು ನಿರ್ದೇಶಕ ಎ.ಎನ್ ಮುತ್ತು ತಿಳಿಸಿದರು.

    ನಾನು ಉದ್ಯಮಿ ಜೊತೆಗೆ ರೈತ ಕೂಡ ಎಂದು ಮಾತನಾಡಿದ ಟಿ.ಎಂ.ಸೋಮರಾಜು, ಸಿನಿಮಾ ರಂಗ ಪರಿಚಯವೇ ಇಲ್ಲ. ನನ್ನ ಗೆಳೆಯ ರಾಜಶೇಖರ್ ನನ್ನನ್ನು ಈ ರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ನಿರ್ದೇಶಕ ಎ.ಎನ್ ಮುತ್ತು ಅವರು ಹೇಳಿದ ಕಥೆ ಇಷ್ಟವಾಯಿತು ನಿರ್ಮಾಣ ಮಾಡಿದ್ದೇನೆ. ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡಿ ಎಂದರು.

    ಸಹ ನಿರ್ಮಾಪಕ ರಾಜಶೇಖರ್ ಚಿತ್ರ ಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಹರ್ಷ ಕಾಗೋಡ್, ಛಾಯಾಗ್ರಾಹಕ ವೀನಸ್ ಮೂರ್ತಿ, ಸಾಹಸ ನಿರ್ದೇಶಕ ಜಗ್ಗು ಮಾಸ್ಟರ್ ಹಾಗೂ ಚಿತ್ರದಲ್ಲಿ ನಟಿಸಿರುವ ಹರೀಶ್ ರಾಜ್, ಶಿವಾನಿ, ಮಾಧುರಿ, ಗಣೇಶ್ ರಾವ್, ಆರಾಧ್ಯ ಮುಂತಾದವರು “ಲೇಡಿಸ್ ಬಾರ್” ಬಗ್ಗೆ ಮಾತನಾಡಿದರು. ಚಿತ್ರದ ಸಿರಿ ಮ್ಯೂಸಿಕ್ ನಲ್ಲಿ  ಹಾಡುಗಳನ್ನು ನೋಡಿ, ನಿಮಗನಿಸಿದನ್ನು ಕಾಮೆಂಟ್ ಮಾಡಿ. ಉತ್ತಮ ಕಾಮೆಂಟ್ ಗೆ ನಿರ್ಮಾಪಕರು ಮೊಬೈಲ್‌ ನೀಡಲಿದ್ದಾರೆ ಎಂದು ಸಿರಿ ಮ್ಯೂಸಿಕ್ ಚಿಕ್ಕಣ್ಣ ತಿಳಿಸಿದರು.

  • ನಿಗೂಢಗಳ ರೂವಾರಿ ರುದ್ರಾಕ್ಷಿಪುರ!

    ನಿಗೂಢಗಳ ರೂವಾರಿ ರುದ್ರಾಕ್ಷಿಪುರ!

    ಬೆಂಗಳೂರು: ಶೀರ್ಷಿಕೆಯಿಂದಲೇ ಗಮನ ಸೆಳೆದು ಕುತೂಹಲ ಹುಟ್ಟು ಹಾಕೋ ಟ್ರೆಂಡ್ ಒಂದು ಶುರುವಾಗಿದೆಯಲ್ಲಾ? ಆ ಸಾಲಿಗೆ ಬೇಷರತ್ತಾಗಿ ಸೇರ್ಪಡೆಗೊಳ್ಳೋ ಚಿತ್ರ ರುದ್ರಾಕ್ಷಿಪುರ. ಈಶ್ವರ ಪೋಲಂಕಿ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಶಿಲ್ಪಿಯಾಗಿರೋ ನಾಗರಾಜ್ ಮುರುಡೇಶ್ವರ ನಿರ್ಮಾಣ ಮಾಡಿದ್ದಾರೆ. ಇನ್ನೇನು ಬಿಡುಗಡೆಗೆ ಸಜ್ಜುಗೊಂಡಿರೋ ಈ ಚಿತ್ರ ಕುತೂಹಲ ಕೆರಳಿಸಿರೋದು ತನ್ನೊಳಗೆ ಬಚ್ಚಿಟ್ಟುಕೊಂಡಿರೋ ನಿಗೂಢಗಳಿಂದಲೇ!

    ನಿರ್ದೇಶಕ ಈಶ್ವರ ಪೋಲಂಕಿ ಇದೊಂದು ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರ ಎಂಬುದರ ಹೊರತಾಗಿ ಮತ್ತೆಲ್ಲವನ್ನೂ ನಿಗೂಢವಾಗಿಯೇ ಇಟ್ಟಿದ್ದಾರೆ. ಆದರೆ ಈ ಚಿತ್ರಕ್ಕೆ ರುದ್ರಾಕ್ಷಿಪುರ ಅಂತ ಹೆಸರಿಡಲು ಕಾರಣವೇನು? ಅಸಲೀ ಕಥೆಯೇನೆಂಬ ಕುತೂಹಲ ಮಾತ್ರ ಪ್ರೇಕ್ಷಕರನ್ನು ಕಾಡುತ್ತಲೇ ಇದೆ. ಅದು ಬಹುಶಃ ಮುಂದಿನ ತಿಂಗಳ ಹೊತ್ತಿಗೆಲ್ಲ ತಣಿಯಲಿದೆ.

    ಈಶ್ವರ್ ಅಪ್ಪಟ ಕನ್ನಡ ಪ್ರೇಮಿ ಹುಡುಗ. ತನ್ನ ಮೂಲವಿರೋದು ಆಂಧ್ರಪ್ರದೇಶದಲ್ಲಿಯೇ ಆದರೂ ಕನ್ನಡವನ್ನೇ ಉಸಿರೆಂದುಕೊಂಡಿರುವವರು ಈಶ್ವರ್. ಬಹುಶಃ ಓದಿನ ಆಧಾರದಲ್ಲಿಯೇ ಕೆಲಸ ಅರಸಿದ್ದರೆ ಅವರೀಗ ಸಿಎ ಆಗಿ ಕೈ ತುಂಬಾ ಸಂಬಳ ಸಿಗುವ ಕೆಲಸ ಪಡೆದು ನೆಮ್ಮದಿಯಾಗಿರುತ್ತಿದ್ದರು. ಆದರೆ ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಬಂದು ರುದ್ರಾಕ್ಷಿಪುರ ಚಿತ್ರದ ಮೂಲಕ ಅದನ್ನು ನನಸು ಮಾಡಿಕೊಂಡಿದ್ದಾರೆ.

    ಇದು ಪಕ್ಕಾ ಥ್ರಿಲ್ಲರ್ ಕಥಾನಕ. ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಕಾತರಗೊಳ್ಳುವಂತೆ ಮಾಡಿ ಭರ್ಜರಿ ಮನರಂಜನೆ ನೀಡಬೇಕೆಂಬ ಉದ್ದೇಶವಿಟ್ಟುಕೊಂಡೇ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈ ಚಿತ್ರದಲ್ಲಿ ದಾವಣಗೆರೆ ಅರ್ಜುನ್ ಸಹಾನ್ ನಾಯಕನಾಗಿ ನಟಿಸಿದ್ದಾರೆ. ರೂಪಿಕಾ ನಾಯಕಿ. ಈಗ ಚಿತ್ರದ ಬಗ್ಗೆ ವ್ಯಾಪಕ ಕುತೂಹಲ ಕೆರಳಿಕೊಂಡಿದೆಯಲ್ಲಾ? ಚಿತ್ರ ನೋಡಿದ ಪ್ರತಿಯೊಬ್ಬರಿಗೂ ತಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದ್ದನ್ನು ಪಡೆದುಕೊಂಡ ತೃಪ್ತಿಯನ್ನು ಖಂಡಿತಾ ಈ ಚಿತ್ರ ನೀಡುತ್ತದೆ ಎಂಬುದು ನಿರ್ದೇಶಕರ ಭರವಸೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv