Tag: ರೂಪಾಲಿ ನಾಯ್ಕ್

  • BJP Candidate First List: ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್

    BJP Candidate First List: ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಬಿಜೆಪಿ ಮಂಗಳವಾರ ರಾತ್ರಿ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಒಟ್ಟು 189 ಅಭ್ಯರ್ಥಿಗಳ ಪೈಕಿ 8 ಮಹಿಳೆಯರಿಗೆ ಟಿಕೆಟ್‌ (Karnataka BJP Women Candidates) ಘೋಷಿಸಿದೆ.

    ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಹಾಲಿ ಶಾಸಕಿಯರು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಶಿಕಲಾ ಜೊಲ್ಲೆ, ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರೂಪಾಲಿ ಸಂತೋಷ್‌ ನಾಯ್ಕ್‌ ಹಾಲಿ ಶಾಸಕರು. ಈ ಬಾರಿ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಇದರೊಂದಿಗೆ 5 ಮಂದಿ ವಕೀಲರು, 9 ಮಂದಿ ವೈದ್ಯರು, ಒಬ್ಬರು ನಿವೃತ್ತ ಐಎಎಸ್‌, ಒಬ್ಬರು ಐಪಿಎಸ್‌ ಅಧಿಕಾರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಇದನ್ನೂ ಓದಿ: Karnataka Election 2023: ಬಿಜೆಪಿ ಟಿಕೆಟ್‌ ಉಳಿಸಿಕೊಂಡ ಆ 35 ಕ್ಷೇತ್ರಗಳು ಯಾವುವು..?

    ಯಾರಿಗೆ ಎಲ್ಲಿ ಬಿಜೆಪಿ ಟಿಕೆಟ್?
    1. ನಿಪ್ಪಾಣಿ – ಶಶಿಕಲಾ ಜೊಲ್ಲೆ
    2. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
    3. ಸವದತ್ತಿ – ರತ್ನಾ ವಿಶ್ವನಾಥ್‌ ಮಾಮನಿ
    4. ಕಾರವಾರ – ರೂಪಾಲಿ ನಾಯ್ಕ್
    5. ಸಂಡೂರು – ಶಿಲ್ಪಾ ರಾಘವೇಂದ್ರ
    5. ನಾಗಮಂಗಲ – ಸುಧಾ ಶಿವರಾಮೇಗೌಡ
    6. ಪುತ್ತೂರು – ಆಶಾ ತಿಮ್ಮಪ್ಪ ಗೌಡ
    7. ಸುಳ್ಯ – ಭಾಗೀರಥಿ ಮುರುಳ್ಯ

  • ಕಾರಿನಲ್ಲಿ ಫಾಲೋ ಮಾಡ್ತಾರೆ, ಟ್ರಕ್ ಹತ್ತಿಸಲು ಬರ್ತಾರೆ- ಶಾಸಕಿ ರೂಪಾಲಿ ನಾಯ್ಕ್‌ಗೆ ಜೀವ ಬೆದರಿಕೆ

    ಕಾರಿನಲ್ಲಿ ಫಾಲೋ ಮಾಡ್ತಾರೆ, ಟ್ರಕ್ ಹತ್ತಿಸಲು ಬರ್ತಾರೆ- ಶಾಸಕಿ ರೂಪಾಲಿ ನಾಯ್ಕ್‌ಗೆ ಜೀವ ಬೆದರಿಕೆ

    ಕಾರವಾರ: ಚುನಾವಣೆ (Election) ಸಮೀಪಿಸುತಿದ್ದಂತೆ ಆರೋಪ ಪ್ರತ್ಯಾರೋಪಗಳು ಸಾಮಾನ್ಯ. ಆದರೆ ಕಾರವಾರದಲ್ಲಿ ಬಿಜೆಪಿ ಮಹಿಳಾ ಶಾಸಕಿ ರೂಪಾಲಿ ನಾಯ್ಕ್(Rupali Naik), ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಹೇಳಿಕೆ ನೀಡುವ ಮೂಲಕ ಮತ್ತೆ ವಿರೋಧಿಗಳ ಎದುರು ಹೊಸ ಬಾಂಬ್ ಸಿಡಿಸಿದ್ದಾರೆ.

    ಹೌದು. ಕಾರವಾರದಲ್ಲಿ ಈ ಹಿಂದೆ ಮಾಜಿ ಶಾಸಕ ಸತೀಶ್ ಸೈಲ್((Sathish Sail) , ಹಾಲಿ ಶಾಸಕಿ ರೂಪಾಲಿ ನಾಯ್ಕ್ ಕಿತ್ತಾಟ ಠಾಣೆ ಮೆಟ್ಟಿಲೇರಿ ದೂರು ಪ್ರತಿದೂರುಗಳು ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಾರವಾರ ಶಾಸಕಿ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೆ ನೀಡಿದ್ದು ರಾಜಕೀಯ ಬಣ್ಣ ರಂಗೇರಿದೆ.

    ತಮ್ಮ ಮನೆಯ ಮುಂದಿರುವ ಬೀದಿ ದೀಪ ತೆಗೆದು ಹೆದರಿಸುತ್ತಾರೆ. ಟ್ರಕ್ ಮೂಲಕ ನನ್ನ ವಾಹನಕ್ಕೆ ಡಿಕ್ಕಿಯಾಗಿಸಲು ಬರುತ್ತಾರೆ. ಕಾರಿನಲ್ಲಿ ಫಾಲೋ ಮಾಡುತ್ತಾರೆ. ನನ್ನ ಮತ್ತು ನನ್ನ ಅಕ್ಕನ ಮಗನ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ರು. ಈ ಹಿಂದೆಯೂ ಮಾಡಿದ್ರು, ಈಗಲೂ ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದಶಪಥ ವೀಕ್ಷಣೆಯ ಪ್ರವಾಸ ದಿಢೀರ್‌ ರದ್ದು

    ಜೊತೆಗೆ ಜೀವ ಬೆದರಿಕೆ (Threat For Rupali Naik) ಹಾಕುತ್ತಿರುವವರು ಯಾರು ಏನು ಗೊತ್ತಾಗುತ್ತಿಲ್ಲ. ನನಗೆ ಅನೇಕ ಮಂದಿ ವಿರೋಧಿಗಳು ಇದ್ದಾರೆ. ತಮಗೆ ಅಧಿಕಾರ ಸಿಕ್ಕಿಲ್ಲ ಎಂದು ಹತಾಶರಾದವರೂ ಇದ್ದಾರೆ. ಮಹಿಳೆಯ ಮುಂದೆ ಬರುವುದನ್ನು ನೋಡಕ್ಕಾಗದೆ, ಅಭಿವೃದ್ಧಿ ಸಹಿಸದೇ ಇರುವವರು ಇದ್ದಾರೆ. ಈ ಬಗ್ಗೆ ಹಿಂದಿನ ಎಸ್.ಪಿ ಯವರಿಗೂ ತಿಳಿಸಿದ್ದೆ. ಈಗಿನ ಎಸ್.ಪಿಯವರಿಗೂ ತಿಳಿಸಿದ್ದೇನೆ. ಭದ್ರತೆ ನೀಡಿದ್ದಾರೆ. ಈಗಲೂ ಮತ್ತೆ ದೂರು ಕೊಡುತ್ತಿದ್ದೇನೆ. ನನಗೆ ಬೆದರಿಕೆ ನೀಡಿದ್ರೆ ಹೆದರಿಕೊಂಡು ದೂರ ಸರೀತಾರೆ ಎಂದು ಅಂದುಕೊಂಡಿದ್ದಾರೆ. ನಾನು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯುವುದೂ ಇಲ್ಲ, ನಾನು ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡಿ ಸಾಯುತ್ತೇನೆ ಎಂದು ರೂಪಾಲಿ ನಾಯ್ಕ್ ಹೇಳಿದ್ದಾರೆ.

    ಶಾಸಕಿ ರೂಪಾಲಿ ನಾಯ್ಕ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು, ಇದೀಗ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಶಾಸಕರಿಗೆ ಯಾರು ಹೆದರಿಸಿದ್ದಾರೋ ಗೊತ್ತಿಲ್ಲ, ಆದರೆ ಈ ಬೆಳವಣಿಗೆ ಸರಿಯಲ್ಲ. ಇಬ್ಬರೂ ಸ್ಟೇಟ್ಮೆಂಟ್ ಕೊಡೋದನ್ನ ಕಡಿಮೆ ಮಾಡಬೇಕು, ಯಾರೂ ಏನೇ ಹೇಳಲಿ ಮುಂಬರುವ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದು ಅವರದ್ದೇ ಪಕ್ಷದ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಲಿ-ಮಾಜಿಗಳಿಗೆ ಟಾಂಗ್ ನೀಡಿದ್ದಾರೆ.

    ಶಾಸಕಿ ರೂಪಾಲಿ ನಾಯ್ಕ್ ಬೆದರಿಕೆ ಕುರಿತು ಹೇಳಿಕೆ ನೀಡುತ್ತಿದ್ದಂತೆ ಪೊಲೀಸ್ ಇಲಾಖೆಯಿಂದಲೂ ಭದ್ರತೆ ಹೆಚ್ಚಿಸಲಾಗಿದೆ. ಇವುಗಳ ನಡುವೆ ಕಾರವಾರದಲ್ಲಿ ಮಾಜಿ-ಹಾಲಿಗಳ ಜಗಳ ಅತಿರೇಕಕ್ಕೆ ಹೋಗುತ್ತಿದ್ದು ಚುನಾವಣೆ ಸಂದರ್ಭದಲ್ಲಿ ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  • ಕಾರವಾರದಲ್ಲಿ PDO ವರ್ಗಾವಣೆ ಕಿರಿಕ್ – ಕಚೇರಿಯಲ್ಲೇ ಹಾಲಿ, ಮಾಜಿ ಶಾಸಕರ ಫೈಟ್

    ಕಾರವಾರದಲ್ಲಿ PDO ವರ್ಗಾವಣೆ ಕಿರಿಕ್ – ಕಚೇರಿಯಲ್ಲೇ ಹಾಲಿ, ಮಾಜಿ ಶಾಸಕರ ಫೈಟ್

    ಕಾರವಾರ: ವಿಧಾನಸಭಾ ಚುನಾವಣೆ (Vidhanasabha Elections) ಸಮೀಪಿಸುತ್ತಿದ್ದಂತೆ ಕರಾವಳಿ ಜಿಲ್ಲೆ ಕಾರವಾರದಲ್ಲಿ ರಾಜಕೀಯ ಕಿತ್ತಾಟಗಳು ಬೀದಿಗೆ ಬರತೊಡಗಿದೆ. ಪಿಡಿಓ ವರ್ಗಾವಣೆ ವಿಷಯದಲ್ಲಿ ಕಾರವಾರ ಕ್ಷೇತ್ರದ ಹಾಲಿ ಶಾಸಕಿ ರೂಪಾಲಿ ನಾಯ್ಕ್ (Rupali Naik) ಹಾಗೂ ಮಾಜಿ ಶಾಸಕ ಸತೀಶ್ ಸೈಲ್ (Sathish Sail) ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲೇ ಕಿತ್ತಾಟ ಮಾಡಿಕೊಂಡಿದ್ದು, ಇದೀಗ ಈ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.

    ಸತೀಶ್ ಸೈಲ್‍ಗೆ ಕುಡುಕ ಎಂದ ಶಾಸಕಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾರವಾರ ಕ್ಷೇತ್ರದಲ್ಲಿ ರಾಜಕೀಯ ಕಿತ್ತಾಟ ರಂಗೇರಿದೆ. ಕಾರವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮಾಜಾಳಿ ಪಂಚಾಯತ್‍ನಲ್ಲಿ PDO ಸಾಧನಾ ಚಂಡೇಕರ್ ಎಂಬವರ ವರ್ಗಾವಣೆ ವಿಚಾರಕ್ಕೆ ಸಂಘರ್ಷ ಶುರುವಾಗಿದೆ. ಇದೇ ವಿಷಯಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಹಾಲಿ ಶಾಸಕಿ ರೂಪಾಲಿ ನಾಯ್ಕ ಮಧ್ಯೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ

    ಘಟನೆ ಬಳಿಕ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಶಾಸಕಿ ರೂಪಾಲಿ ನಾಯ್ಕ್ ತನ್ನ ಮೇಲೆ ಪೇಪರ್ ವೇಯ್ಟರ್‍ನಲ್ಲಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ತನಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿದ್ದು, ಶಾಸಕಿ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಿ ಎಂದು ಮಾಜಿ ಶಾಸಕ ಸತೀಶ್ ಸೈಲ್ ದೂರು ಕೊಟ್ಟಿದ್ರೆ, ಅತ್ತ ಶಾಸಕಿ ರೂಪಾಲಿ ನಾಯ್ಕ್ ಕೂಡ ಮಾಜಿ ಶಾಸಕರು ಕುಡಿತು ಬಂದು ಅಮಲಿನಲ್ಲಿ ಜಗಳ ಮಾಡುತ್ತಿದ್ದಾರೆ. ಕ್ರಮ ಕೈಗೊಳ್ಳುವಂತೆ ಕೇಸ್ ದಾಖಲಿಸಿದ್ದಾರೆ.

    ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪಿಡಿಓ ವರ್ಗಾವಣೆ ವಿಷಯದಲ್ಲಿ ಹೀಗೆ ಹಾಲಿ ಹಾಗೂ ಮಾಜಿ ಶಾಸಕರು ಠಾಣೆ ಮೆಟ್ಟಿಲೇರಿದ್ದು ಮಾತ್ರ ದುರಂತ. ಸದ್ಯ ಈ ವಿಚಾರ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದುನೋಡಬೇಕಿದೆ.

  • ಕೊರೊನಾದಿಂದ ಬಂದ್  ಆಗಿದ್ದ ಕಾರವಾರ- ಮಡಗಾಂವ್ ರೈಲು ಸಂಚಾರ ಪುನರಾರಂಭ

    ಕೊರೊನಾದಿಂದ ಬಂದ್ ಆಗಿದ್ದ ಕಾರವಾರ- ಮಡಗಾಂವ್ ರೈಲು ಸಂಚಾರ ಪುನರಾರಂಭ

    ಕಾರವಾರ: ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಕೊರತೆಯಿಂದ ಬಂದ್ ಆಗಿದ್ದ ಕಾರವಾರ-ಗೋವಾದ ಮಡಗಾಂವ್ ರೈಲುಸಂಚಾರ ಪುನರಾರಂಭಕ್ಕೆ ಕಾರವಾರ ಶಾಸಕಿ ರೂಪಾಲಿ  ನಾಯ್ಕ್ ಹಾಗೂ ಸಂಸದ ಅನಂತ್‍ಕುಮಾರ್ ಹೆಗ್ಡೆ ಮನವಿ ಮೇರೆಗೆ ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.

    ಕಾರವಾರದಿಂದ ಗೋವಾಕ್ಕೆ ಪ್ರತಿ ದಿನ ಉದ್ಯೋಗಕ್ಕೆ ತೆರಳುತ್ತಿದ್ದ ಜನರಿಗೆ ಪ್ರಯಾಣಿಸಲು ಸಹಕಾರಿ ಆಗುತ್ತಿದ್ದ ಕೊಂಕಣ ರೈಲ್ವೇ ಇಲಾಖೆಯ ಲೋಕಲ್ ಟ್ರೈನ್ ಕೊರೊನಾದಿಂದಾಗಿ ಪ್ರಯಾಣಿಕರ ಕೊರತೆ ಎದುರಿಸಿತ್ತು. ಈ ಕಾರಣದಿಂದ ಲೋಕಲ್ ಟ್ರೈನ್ ಅನ್ನು ರೈಲ್ವೆ ಇಲಾಖೆ ಬಂದ್ ಮಾಡಿತ್ತು. ಇದನ್ನೂ ಓದಿ: ನೂತನ ವಧು-ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತರು

    ಇದರಿಂದಾಗಿ ಗೋವಾ ರಾಜ್ಯದಲ್ಲಿ ಉದ್ಯೋಗ ಮಾಡುತಿದ್ದ ಕಾರವಾರದ ನೂರಾರು ಉದ್ಯೋಗಿಗಳಿಗೆ ತೊಂದರೆ ಆಗಿತ್ತು. ಈ ಹಿನ್ನಲೆಯಲ್ಲಿ ರೂಪಾಲಿ ನಾಯ್ಕ್ ಹಾಗೂ ಅನಂತಕುಮಾರ್ ಹೆಗ್ಡೆ ಅಮಿತ್ ಶಾ ರವರಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸೋಮವಾರದಿಂದ ಎಂದಿನಂತೆ ಕಾರವಾರ-ಮಡಗಾಂವ್ ಲೋಕಲ್ ಟ್ರೈನ್ ಸಂಚರಿಸಲಿದೆ. ಇದನ್ನೂ ಓದಿ: ಅಯುಧಕ್ಕೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಶಾಸಕ

  • ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ

    ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ

    – ಪ್ರವಾಸೋದ್ಯಮ ಇಲಾಖೆಯಿಂದ ಆಹ್ವಾನ ನೀಡದೇ ನಿರ್ಲಕ್ಷ್ಯ

    ಕಾರವಾರ: ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆಯುತ್ತಿದ್ದ, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಬಹಿರಂಗ ವೇದಿಕೆಯಲ್ಲೇ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಎದುರು ಶಾಸಕಿ ರೂಪಾಲಿ ನಾಯ್ಕ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಕಾರವಾರದ ಶಾಸಕಿಯಾಗಿರುವ ರೂಪಾಲಿ ನಾಯ್ಕ್, ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ, ಶಾಸಕಿಯಾಗಿರುವ ನನಗೆ ಅಗೌರವ ತೋರಿದ್ದಾರೆ ಎಂದು ಅಧಿಕಾರಿಗಳನ್ನು ಕಾರ್ಯಕ್ರಮ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ರಾಜ್ಯದ ಆರು ನಗರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ: ಬೊಮ್ಮಾಯಿ

    2018ರಿಂದ ಕಾರವಾರ ಕ್ಷೇತ್ರಕ್ಕೆ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ. ಪ್ರವಾಸೋದ್ಯಮ ಇಲಾಖೆಯವರು ನನ್ನ ಕ್ಷೇತ್ರದಲ್ಲಿ ಏನೇ ಅಭಿವೃದ್ಧಿ ಕಾರ್ಯ ನಡೆಸಿದರೂ ಅದರ ಯಾವುದೇ ಮಾಹಿತಿ ನೀಡುವುದಿಲ್ಲ. ನಾನೊಬ್ಬಳು ಕ್ಷೇತ್ರದ ಶಾಸಕಿ ಎಂಬುದನ್ನು ಮರೆತು ಆಧಿಕಾರಿಗಳು ತಮ್ಮ ಇಚ್ಛೆಗೆ ತಾವು ನಡೆದುಕೊಳ್ಳುತ್ತಿದ್ದಾರೆ ಎಂದು ಗರಂ ಆದರು. ಇದನ್ನೂ ಓದಿ: ನಾನು 35 ಅಂಕದ ಕೆಟಗೆರಿಯವರು ಅದಕ್ಕೆ ಕೈಗಾರಿಕಾ ಸಚಿವನಾದೆ: ಮುರುಗೇಶ್ ನಿರಾಣಿ

    ನನ್ನ ಕ್ಷೇತ್ರದಲ್ಲಿ ಕೋಟಿಗಟ್ಟಲೇ ಹಣ ಹಾಕಿ ನಿರ್ಮಿಸಿದ ಗಾರ್ಡನ್‍ಗಳು ಸೇರಿದಂತೆ ಇತರೆ ಕಾಮಗಾರಿಗಳ ಕಾರ್ಯ ನಿಂತುಹೋಗಿದೆ. ಇದಕ್ಕೆಲ್ಲಾ ಅಧಿಕಾರಿಗಳು ಕಾರಣ ಎಂದು ಕಿಡಿಕಾರಿದರು.

     

  • ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    – ವೈದ್ಯರನ್ನ ತರಾಟೆ ತೆಗದುಕೊಂಡ ಶಾಸಕಿ ರೂಪಾಲಿ ನಾಯ್ಕ್
    – ಬರದ 108 ಅಂಬುಲೆನ್ಸ್
    – ಖಾಸಗಿ ಅಂಬುಲೆನ್ಸ್ ನಲ್ಲಿ ಗಾಯಾಳುಗಳ ರವಾನೆ

    ಕಾರವಾರ: ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಶಾಸಕಿ ರೂಪಾಲಿ ನಾಯ್ಕ್ ಕರೆ ತಂದರೂ ಸರ್ಕಾರಿ ಆಸ್ಪತ್ರೆ ಸಮರ್ಪಕ ಚಿಕಿತ್ಸೆ ಸಿಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

    ಇಂದು ಅಂಕೋಲಾದಿಂದ ಕಾರವಾರಕ್ಕೆ ಬರುತ್ತಿದ್ದ ಶಾಸಕರ ವಾಹನದ ಎದುರೇ ಬಿಣಗಾದ ಬಳಿ ಬೈಕ್ ಮೀನಿನ ಲಾರಿಗೆ ಡಿಕ್ಕಿ ಹೊಡೆದು ಅಪಘಾತಗೊಂಡಿತ್ತು. ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಶಾಸಕಿ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಕಾದರೂ ಅಂಬುಲೆನ್ಸ್ ಬರಲೇ ಇಲ್ಲ. ಹೀಗಾಗಿ ಖಾಸಗಿ ಅಂಬುಲೆನ್ಸ್ ತರಿಸಿ ಕಾರವಾರದ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನ ಕರೆತಂದಿದ್ದರು.

    ಗಾಯಾಳುಗಳನ್ನ ಕರೆ ತಂದ ಸಂದರ್ಭದಲ್ಲಿ ವೈದ್ಯರು ಕರ್ತವ್ಯದಲ್ಲಿರಲಿಲ್ಲ. ಆಕ್ಸಿಜನ್ ಸಹ ವ್ಯವಸ್ಥೆ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕಿ ಆರ್.ಎಂ.ಓ ವೆಂಕಟೇಶ್ ರವರನ್ನು ಕರೆಸಿ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು.

    ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಗಾಯಾಳುಗಳನ್ನ 108 ವಾಹನದಲ್ಲಿ ಸಾಗಿಸುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೊಗಿರುತ್ತೆ. ಅಪಘಾತಗೊಂಡರೆ ವ್ಯಕ್ತಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳು ಬರುವುದೇ ಇಲ್ಲ. ಬಂದರೂ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಗಳಿಲ್ಲ. ಜೊತೆಗೆ ಹಲವು ವೈದ್ಯರು ಚಿಕಿತ್ಸೆ ನೀಡದೇ ಗೋವಾ ಅಥವಾ ಮಣಿಪಾಲಿಗೆ ಕಳುಹಿಸಿಕೊಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ

    ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ

    – ಕಾರವಾರ ಮೀನು ಮಾರ್ಕೆಟ್ ಪೂರ್ಣ ಬಂದ್

    ಕಾರವಾರ: ಬಂದರು ವಿಸ್ತರಣೆ ವಿರೋಧಿಸಿ ಕಾರವಾರದಲ್ಲಿ ಇಂದು ಕೂಡ ಪ್ರತಿಭಟನೆಯನ್ನು ಮುಂದುವರಿಸಿದರು.

    ಕಾರವಾರದ ಮೀನು ಮಾರುಕಟ್ಟೆಯನ್ನು ಬಂದ್ ಮಾಡಿದ ಮೀನುಗಾರರು ಮೀನು ಮಾರುಕಟ್ಟೆ ಬಳಿ ಸೇರಿ ಪ್ರತಿಭಟನೆ ಮಾಡಿದರು. ಈ ವೇಳೆ ಉದ್ರಿಕ್ತ ಮೀನುಗಾರ ಮಹಿಳೆಯರಿಂದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಮತ್ತು ಸಂಸದ ಅನಂತ್‍ಕುಮಾರ್ ಹೆಗ್ಡೆ ಭಾವಚಿತ್ರಕ್ಕೆ ಸಗಣಿಮೆತ್ತಿ, ಚಪ್ಪಲಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    ಕಳೆದ ಎರಡು ದಿನದಿಂದ ಕಾರವಾರ ವಾಣಿಜ್ಯ ಬಂದರು ಎರಡನೇ ಹಂತದ ಕಾಮಗಾರಿ ಯೋಜನೆಯನ್ನು ನಿಲ್ಲಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಸೋಮವಾರ 200ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಬಂದರು ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಇದನ್ನು ನಿಲ್ಲಿಸಲು ನಿರಂತರ ಪ್ರತಿಭಟನೆ ಕೈಗೊಂಡಿರುವ ಮೀನುಗಾರರು ಇದೇ ತಿಂಗಳ 16ರಂದು ಕಾರವಾರ ಬಂದ್‍ಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಕಾರವಾರದಲ್ಲಿ ದಿಢೀರ್ ಬಂದ್- ನೂರಕ್ಕೂ ಹೆಚ್ಚು ಮೀನುಗಾರರ ಬಂಧನ

    ಎರಡನೇ ಹಂತದ ಬಂದರು ವಿಸ್ತರಣೆಯಿಂದಾಗಿ ಕಾರವಾರದ ಕಡಲತೀರ ನಶಿಸಿ ಹೋಗುತ್ತದೆ. ಮೀನುಗಾರರು ತಮ್ಮ ಬಂದರನ್ನು ಕಳೆದುಕೊಳ್ಳುವ ಜೊತೆ ಸಾವಿರಾರು ಜನ ನಿರುದ್ಯೋಗಿಗಳಾಗ ಬೇಕಾಗುತ್ತದೆ. ಬಂದರು ವಿಸ್ತರಣೆಯಿಂದ ಕಡಲ ಕೊರೆತ ಹೆಚ್ಚಾಗುವ ಜೊತೆ ಮೀನುಗಳ ಜೀವನ ಚಕ್ರ ಸಹ ಬದಲಾಗಿ ತೊಂದರೆ ಅನುಭವಿಸಬೇಕಿದ್ದು ಪರಿಸರಕ್ಕೆ ಹಾನಿಯಾಗಲಿದೆ. ಈ ಕಾರಣದಿಂದ ತಕ್ಷಣ ವಿಸ್ತರಣೆ ಕಾಮಗಾರಿ ಕೈಬಿಡಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದಾರೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಕಾಮಗಾರಿ ನಡೆಸಲಾಗುತ್ತಿದೆ.

    ಏನಿದು ಸಾಗರ ಮಾಲ ? ಯೋಜನೆ ರೂಪರೇಷೆ ಏನು?
    ಸಾಗರ ಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆಯಡಿ ಹಣ ಬಿಡುಗಡೆ ಮಾಡಿದೆ. ಸಾಗರ ಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.

    ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

  • ಕರಾವಳಿ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಬಿಜೆಪಿ ಶಾಸಕಿ

    ಕರಾವಳಿ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಬಿಜೆಪಿ ಶಾಸಕಿ

    ಕಾರವಾರ: ಒಂದೊಳ್ಳೆ ಸಂಗೀತ ರಿದಮ್ ಇದ್ರೆ ಎಂತವರಿಗೂ ಒಂದು ಸ್ಟೆಪ್ ಹಾಕಬೇಕು ಅನಿಸುತ್ತದೆ. ಸಾಮಾನ್ಯ ಮನುಷ್ಯನಾದ್ರೆ ತನ್ನ ಇಷ್ಟಕ್ಕೆ ತಕ್ಕಂತೆ ಏನು ಬೇಕಾದ್ರೂ ಮಾಡುತ್ತಾರೆ. ಸಮಾಜದಲ್ಲಿ ಮನ್ನಡೆಯಲ್ಲಿದ್ದು ಅದರಲ್ಲೂ ಶಾಸಕರ ಸ್ಥಾನದಲ್ಲಿದ್ದರೇ ಕಟ್ಟುಪಾಡುಗಳಿಗೆ ಅಂಜಿ ತಮ್ಮ ಇಚ್ಚೆ ಇದ್ದರೂ ಏನೂ ಮಾಡಲು ಹಿಂದೇಟು ಹಾಕುತ್ತಾರೆ. ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ತುಂಬು ವೇದಿಕೆಯಲ್ಲಿಯೇ ಕುಣಿದು ಕುಪ್ಪಳಿಸಿದದಾರೆ.

    ಕರವಾಳಿ ಉತ್ಸವ ಹಿನ್ನೆಲೆಯಲ್ಲಿ ಖ್ಯಾತ ಹಿನ್ನಲೆ ಗಾಯಕ ಅಭಿಜಿತ್ ಸಾವಂತ್ ಅವರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಾಸಕ ರೂಪಾಲಿ ನಾಯ್ಕ್ ಭಾಗಿಯಾಗಿದ್ದರು. ಗಾಯಕ ಅಭಿಜಿತ್ ಮರಾಠಿಯ ಸೈರಾಟ್ ಚಿತ್ರದ ಜಿಂಗಾಟ್ ಹಾಡು ಕೇಳುತ್ತಲೇ ಆಸನದಿಂದ ಎದ್ದು ಹೆಜ್ಜೆ ಹಾಕಲು ಆರಂಭಿಸಿದರು. ಕಾರ್ಯಕ್ರಮಕ್ಕೆ ಮಾಧ್ಯಮಗಳು ಅಗಮಿಸುತ್ತಿದ್ದಂತೆ ತಮಗೆ ಮೀಸಲಾಗಿದ್ದ ಆಸನದಲ್ಲಿ ಕುಳಿತರೂ ಅಭಿಜಿತ್ ಹಾಡಿನ ಮೋಡಿಯಲ್ಲಿ ಕುಳಿತಲ್ಲೇ ಸ್ಟೆಪ್ಸ್ ಹಾಕಿ ಎಲ್ಲರ ಗಮನ ಸೆಳೆದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ್, ಕರಾವಳಿ ಉತ್ಸವಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಅಭಿಜಿತ್ ಸಂಗೀತ ಕಾರ್ಯಕ್ರಮ ಜನರಿಗೆ ಭರಪೂರ ಮನರಂಜನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ನನಗೂ ಖುಷಿಯಾಗುತ್ತಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv