Tag: ರೂಪಾಲಿ ನಾಯ್ಕ

  • ಹೆಗಡೆ ಮುಂದೆ ಅಸಮಾಧಾನ ಹೊರಹಾಕಿದ ಶಾಸಕಿ ರೂಪಾಲಿ ನಾಯ್ಕ!

    ಕಾರವಾರ : ನಾನು ಸೋತಿದ್ದಕ್ಕೆ ನೋವಾಗಲಿಲ್ಲ, ಅನಂತಕುಮಾರ್ ಹೆಗಡೆ (Anant Kumar Hegde) ಪ್ರಚಾರಕ್ಕೆ ಬಾರದೇ ಇರುವುದಕ್ಕೆ ನೋವಾಗಿದೆ ಎಂದು ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ (Rupali Naik) ಅವರು ಸಂಸದರ ವಿರುದ್ಧ ‌ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

    ಇಂದು ಕಾರವಾರದ ಬಿಜೆಪಿ (BJP) ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ವೇಳೆ ಒಂದು ಬಾರಿ ಸಂಸದರು ಬಂದು ಹೋಗಿದ್ರೆ ಕಾರವಾರದಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಈ ಮಾತನ್ನ ನಾನು ಹೇಳುತ್ತಿಲ್ಲ ಇಡೀ ಕಾರವಾರದ ಜನ ಹೇಳುತ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಹಿಂದೆ ಅವರದ್ದೇ ಆದ ಕಾರ್ಯಕರ್ತರ ಪಡೆ ಇದೆ ಎಂದರು.

    ವಿಧಾನಸಭಾ ಚುನಾವಣೆಯ (Vidhana Sabha Election) ಸಂದರ್ಭದಲ್ಲಿ ಸಂಸದರು ಪ್ರಚಾರಕ್ಕೆ ಬರದಿದ್ದರಿಂದ ನಮಗೆ ಹಿನ್ನಡೆ ಆಯ್ತು. ಈಗಲಾದರೂ ನಮ್ಮ ಪಕ್ಷದ ಕಚೇರಿ ಬಂದು ಕಾರ್ಯಕರ್ತರ ಸಭೆಗೆ ಕರೆದಿದ್ದಕ್ಕೆ ಅಭಿನಂದನೆ ಎಂದರು. ಇದನ್ನೂ ಓದಿ: ದೇಶದ ನೀತಿ, ನಿಯತ್ತನ್ನ‌ ಕುಲಗೆಡಿಸಿದ್ದೇ ಕಾಂಗ್ರೆಸ್ – ನಾನು ಇರೋವರೆಗೆ ಅವ್ರಿಗೆ ನೆಮ್ಮದಿ ಕೊಡಲ್ಲ: ಅನಂತಕುಮಾರ್

    ಅನಂತಕುಮಾರ್ ಹೆಗಡೆ ಸಕ್ರಿಯರಾಗಿದ್ದಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಆದರೆ ಈಗ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಆಕಾಂಕ್ಷಿ ಅಲ್ಲ. ನಾನು ಯಾವತ್ತೂ ಅನಂತ ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ. ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿರುವುದು ಖುಷಿ ಆಗಿದೆ ಎಂದರು.

  • ಕಾಂಗ್ರೆಸ್ಸಿನಿಂದ ಬಂದವರನ್ನ ಮಂತ್ರಿ ಮಾಡಬೇಕಾಗಿದ್ದರಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿತು: ರೂಪಾಲಿ ನಾಯ್ಕ

    ಕಾಂಗ್ರೆಸ್ಸಿನಿಂದ ಬಂದವರನ್ನ ಮಂತ್ರಿ ಮಾಡಬೇಕಾಗಿದ್ದರಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿತು: ರೂಪಾಲಿ ನಾಯ್ಕ

    ಕಾರವಾರ: ಕಾಂಗ್ರೆಸ್ ನಿಂದ ಬಂದವರಿಗೆ ಸಚಿವ ಸ್ಥಾನ ನೀಡಬೇಕಿತ್ತು, ಹಾಗಾಗಿ ನನಗೆ ಸಚಿವ ಸ್ಥಾನ ಕೈ ತಪ್ಪಿತು ಎಂದು ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

    ಸಚಿವ ಸ್ಥಾನ ಸಿಗದಿದ್ದಕ್ಕೆ ಬಿಜೆಪಿ ಪಕ್ಷದಲ್ಲಿ ಶಾಸಕಿ ಪೂರ್ಣಿಮ ಸೇರಿದಂತೆ ಹಲವು ಶಾಸಕರು ಅಸಮಧಾನ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಇದೀಗ ಕಾರವಾರ ವಿಧಾನಸಭಾ ಕ್ಷೇತ್ರದ ರೂಪಾಲಿ ನಾಯ್ಕ ರವರು ಮೌನ ಮುರಿದ್ದಾರೆ. ಎಲ್ಲರಿಗೂ ಸಚಿವರಾಗಬೇಕು ಎನ್ನುವ ಆಸೆ ಇರುತ್ತದೆ. ನಾನು ಸಚಿವ ಸ್ಥಾನ ಬೇಕು ಎಂದು ಕೇಳಿಕೊಂಡಿಲ್ಲ, ರೂಪಾಲಿ ನಾಯ್ಕಗೆ ಕೊಟ್ಟರೆ ಮಾಡುತ್ತಾರೆ ಎಂಬ ಮಾತು ಕೇಳಿ ಬರುತಿತ್ತು ಎಂದಿದ್ದಾರೆ. ಇದನ್ನೂ ಓದಿ:  ಸಂಪುಟ ರಚನೆಯಾದಾಗ ಅಸಮಾಧಾನ ಸಹಜ: ಬೊಮ್ಮಾಯಿ

    ನನಗೆ ಸಚಿವ ಸ್ಥಾನ ಕೊಟ್ಟಿದ್ದರೆ ನಾನು ಚನ್ನಾಗಿ ನಿಭಾಯಿಸುತಿದ್ದೆ. ಕಾಂಗ್ರೆಸ್ ನಿಂದ ಬಂದವರಿಗೂ ಸಚಿವ ಸ್ಥಾನ ನೀಡಬೇಕು ಅವರು ಬಂದಮೇಲೆ ಸರ್ಕಾರ ಆಗಿದೆ. ಹೀಗಾಗಿ ನನಗೆ ಸಿಕ್ಕಿಲ್ಲ. ಪಕ್ಷ ಮುಂದೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದಿದ್ದಾರೆ. ಈ ಹಿಂದೆ ಸಚಿವ ಸ್ಥಾನ ನೀಡುವ ಕುರಿತು ಶಾಸಕಿ ಪೂರ್ಣಿಮಾ ರವರೊಂದಿಗೆ ಕಾರವಾರ-ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ರವರ ಹೆಸರು ಸಹ ಗಟ್ಟಿಯಾಗಿ ಕೇಳಿ ಬರುತಿತ್ತು.

  • ಆಪ್ತ ಸಹಾಯಕನ ಸೋಗಿನಲ್ಲಿ ಶಾಸಕಿ ರೂಪಾಲಿ ನಾಯ್ಕರಿಗೆ 50 ಸಾವಿರ ವಂಚನೆ- ಆರೋಪಿ ಅರೆಸ್ಟ್

    ಆಪ್ತ ಸಹಾಯಕನ ಸೋಗಿನಲ್ಲಿ ಶಾಸಕಿ ರೂಪಾಲಿ ನಾಯ್ಕರಿಗೆ 50 ಸಾವಿರ ವಂಚನೆ- ಆರೋಪಿ ಅರೆಸ್ಟ್

    ಕಾರವಾರ: ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕಾರವಾರ-ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಕರೆ ಮಾಡಿ 50 ಸಾವಿರ ರೂ. ವಂಚಿಸಿದ್ದಾನೆ.

    ರಾಮನಗರದ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್(23) ಶಾಸಕರಿಗೆ ವಂಚಿಸಿ ಬಂಧಿತನಾದ ವ್ಯಕ್ತಿ. ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಏನಿದು ಘಟನೆ?
    ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರಿಗೆ 15 ದಿನದ ಹಿಂದೆ ರಾಮನಗರದ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಕರೆ ಮಾಡಿ ನಾನು ಶಾಸಕ ಎನ್.ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ತುರ್ತಾಗಿ 50 ಸಾವಿರ ರೂ. ಹಣ ಬೇಕಿದೆ ಎಂದು ಸುಳ್ಳು ಹೇಳಿ ತನ್ನ ಸ್ನೇಹಿತನ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ.

    ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಬೆಂಗಳೂರಿಗೆ ತೆರಳಿದ್ದಾಗ ವಿಧಾನಸೌದದಲ್ಲಿ ಎನ್.ಮಹೇಶ್ ಅವರು ಮುಖಾಮುಖಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಈ ವಿಚಾರ ಮಾತನಾಡಿದ್ದು, ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಕರೆ ಮಾಡಿದ್ದರು, 50 ಸಾವಿರ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಅವರ ಆಪ್ತಕಾರ್ಯದರ್ಶಿ ನಾನು ಕೇಳಿಲ್ಲವೆಂದು ತಿಳಿಸಿದ್ದಾರೆ. ಕೊನೆಗೆ ವಂಚನೆಗೆ ಒಳಗಾದ ಕುರಿತು ಶಾಸಕರಿಗೆ ಅರಿವಾಗಿದೆ.

    ತಕ್ಷಣ ಶಾಸಕ ಎನ್.ಮಹೇಶ್ ರವರ ಆಪ್ತ ಕಾರ್ಯದರ್ಶಿ ಕೊಳ್ಳೆಗಾಲ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಇದನ್ನೇ ಕಸುಬನ್ನಾಗಿಸಿಕೊಂಡಿದ್ದು, ಕೇವಲ ಶಾಸಕಿ ರೂಪಾಲಿ ನಾಯ್ಕ ರವರಿಗಲ್ಲದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವರಿಗೆ ಇದೇ ರೀತಿ ಕರೆಮಾಡಿ ವಂಚಿಸುವ ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ.

  • ಎಲ್ಲಿ ವಿರೋಧ ಇರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು: ಮೀನುಗಾರರ ವಿರುದ್ಧ ಅನಂತಕುಮಾರ್ ಹೆಗ್ಡೆ ಕಿಡಿ

    ಎಲ್ಲಿ ವಿರೋಧ ಇರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು: ಮೀನುಗಾರರ ವಿರುದ್ಧ ಅನಂತಕುಮಾರ್ ಹೆಗ್ಡೆ ಕಿಡಿ

    ಕಾರವಾರ: ಎಲ್ಲಿ ವಿರೋಧ ಕಂಡುಬರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು ಎಂದು ಸಂಸದ ಅನಂತಕುಮಾರ್ ಹೆಗ್ಡೆ ಕಾರವಾರದ ಮೀನುಗಾರರ ವಿರುದ್ಧ ಕಿಡಿಕಾರಿದ್ದಾರೆ.

    ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹೋರಾಟ ವಿಚಾರವಾಗಿ ಕುಮಟಾದಲ್ಲಿ ಮಾತನಾಡಿದ ಸಂಸದರು, ಜನರಿಗೆ, ಊರಿಗೆ ಅಭಿವೃದ್ಧಿ ಬೇಕಾಗಿದೆ. ನಮ್ಮ ಮುಂದಿನ ತಲೆಮಾರಿಗೋಸ್ಕರ ಅಭಿವೃದ್ಧಿ ಬೇಕಾಗಿದೆ. ಶಾಶ್ವತವಾಗಿ ಅಧಿಕಾರದ ಖುರ್ಚಿ ಮೇಲೆ ಕುಳಿತುಕೊಳ್ಳಲು ನಾನು ಖಂಡಿತ ಬಂದಿಲ್ಲ. ಆದರೆ ಯಾವ ಹೆಜ್ಜೆ ಇಟ್ಟಿದ್ದೀನೋ ಅದನ್ನ ಮಾಡಿಯೇ ಹೋಗುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    ಮಂಗಳೂರಿನಲ್ಲಿ, ಗೋವಾದಲ್ಲಿ ಬಂದರುಗಳು ಅಭಿವೃದ್ಧಿಯಾಗಿವೆ. ಅಲ್ಲಿನ ಮೀನುಗಾರರ ಬದುಕು ಹಾಳಾಗಿ ಹೋಗಿದೆಯಾ? ಸಾಗರಮಾಲಾ ಯೋಜನೆಯಿಂದ ರಾಜ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಕಾಮಗಾರಿ ನಿಲ್ಲಿಸುವಂತೆ ಕಾರವಾರ ತಾಲೂಕು ಬಂದ್ ಮಾಡಿದ್ದರು. ಅಷ್ಟೇ ಅಲ್ಲದೆ ಸಂಸದ ಅನಂತಕುಮಾರ್ ಹೆಗ್ಡೆ ಹಾಗೂ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಚಪ್ಪಲಿ ಹಾರ ಹಾಕಿದ್ದರು. ಜೊತೆಗೆ ಅನಂತಕುಮಾರ್ ಹೆಗ್ಡೆ ಭಾವಚಿತ್ರಕ್ಕೆ ಶಾಸಕಿ ರೂಪಾಲಿ ನಾಯ್ಕ ಮುಖ ಹಾಗೂ ಶಾಸಕಿ ರೂಪಾಲಿ ನಾಯ್ಕ ಮುಖಕ್ಕೆ ಅನಂತಕುಮಾರ್ ಹೆಗ್ಡೆ ಭಾವ ಚಿತ್ರ ಅಂಟಿಸಿ ಪ್ರತಿಭಟನೆಯಲ್ಲಿ ಪ್ರದರ್ಶನ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ಏನಿದು ಸಾಗರಮಾಲ? ಯೋಜನೆ ರೂಪರೇಷೆ ಏನು?
    ಸಾಗರಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆ ಅಡಿ ಹಣ ಬಿಡುಗಡೆ ಮಾಡಿದೆ. ಸಾಗರಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.

    ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

  • ಸೋತ ಬಳಿಕ ಕಚೇರಿ ಖಾಲಿ ಮಾಡೋವಾಗ ಟಾಯ್ಲೆಟ್‍ನ್ನು ಕಿತ್ಕೊಂಡು ಹೋದ ಮಾಜಿ ಶಾಸಕ

    ಸೋತ ಬಳಿಕ ಕಚೇರಿ ಖಾಲಿ ಮಾಡೋವಾಗ ಟಾಯ್ಲೆಟ್‍ನ್ನು ಕಿತ್ಕೊಂಡು ಹೋದ ಮಾಜಿ ಶಾಸಕ

    ಕಾರವಾರ: ಮಾಜಿ ಶಾಸಕ ತಮ್ಮ ಕಚೇರಿಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಟಾಯ್ಲೆಟ್ ಸಮೇತ ಖಾಲಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕಿ ರೂಪಾಲಿ ನಾಯ್ಕರಿಗೆ ಮಾತ್ರ ತಮ್ಮ ಕಚೇರಿಯನ್ನ ಪಡೆಯುವುದು ಇದೀಗ ಹರಸಾಹಸದ ಕೆಲಸವಾಗಿದೆ. ಈ ಹಿಂದೆ ಕಾರವಾರ ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕರಿಗೆ ಕಚೇರಿಯನ್ನ ತೆರೆಯಲಾಗಿತ್ತು. ಕಳೆದ ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸತೀಶ್ ಸೈಲ್‍ನ್ನ ಕಟ್ಟಡವನ್ನು ಬಳಸಿಕೊಂಡಿದ್ದು ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕಚೇರಿಯನ್ನ ತೆರವು ಮಾಡಿದ್ದರು. ಇನ್ನು ತೆರವು ಮಾಡುವ ಸಂದರ್ಭದಲ್ಲಿ ಕೇವಲ ಪಿಠೋಪಕರಣವನ್ನು ಮಾತ್ರ ತೆಗೆದು ಕೊಂಡುಹೋಗದೇ ಶೌಚಾಲಯಕ್ಕೆ ಅಳವಡಿಸಿದ್ದ ಪೈಪ್, ಟಾಯ್ಲೆಟ್, ಕಚೇರಿಗೆ ಬಳಸುತ್ತಿದ್ದ ಬಲ್ಪಗಳು ಸೇರಿದಂತೆ ಹಲವು ವಸ್ತುಗಳನ್ನ ಮಾಜಿ ಶಾಸಕರ ಕಡೆಯವರು ಕಿತ್ತುಕೊಂಡು ತೆರಳಿದ್ದಾರೆ.

    ಶಾಸಕರಾಗಿ ಆಯ್ಕೆಯಾದ ನಂತರ ಸರ್ಕಾರ ಆಯಾ ಕ್ಷೇತ್ರದಲ್ಲಿ ಶಾಸಕರಿಗೆ ಕಚೇರಿಗೆ ಅವಕಾಶವನ್ನ ಮಾಡಿಕೊಡುತ್ತದೆ. ಜನಸಾಮಾನ್ಯರಿಗೆ ಶಾಸಕರು ಕಚೇರಿಯಲ್ಲಿ ಸಿಗಲು, ಸರ್ಕಾರದ ಯೋಜನೆಗಳನ್ನ ಜನರಿಗೆ ತಿಳಿಸಲು ಸೇರಿದಂತೆ ಹತ್ತಾರು ಉದ್ದೇಶಕ್ಕೆ ಸರ್ಕಾರವೇ ಕಚೇರಿಗೆ ಅವಕಾಶವನ್ನ ಮಾಡಿಕೊಡಲಾಗುತ್ತದೆ. ಇನ್ನು ಆಯಾ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಆವರಣದಲ್ಲಿ ಕಚೇರಿಯನ್ನ ತೆರೆಯಲು ಅವಕಾಶವಿದ್ದು, ಸ್ಥಳೀಯ ಸಂಸ್ಥೆಯವರೇ ಶಾಸಕರ ಕಚೇರಿಗೆ ಸ್ಥಳಾವಕಾಶವನ್ನ ಕೊಡಬೇಕಾಗಿದೆ. ರಾಜ್ಯದ ಬಹುತೇಕ ಶಾಸಕರು ತಮ್ಮ ತಮ್ಮ ಕಚೇರಿಯನ್ನ ಪ್ರಾರಂಭಿಸಿದ್ದಾರೆ.

    ಈ ಹಿಂದೆ ಇದ್ದ ಶಾಸಕರು ಕಚೇರಿ ಖಾಲಿ ಮಾಡುವ ನೆಪದಲ್ಲಿ ಕಚೇರಿಯಲ್ಲಿನ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೋದರೆ, ಇತ್ತ ಕಚೇರಿಯಲ್ಲಿನ ಅವ್ಯವಸ್ಥೆ ಬಹಿರಂಗವಾಗುತ್ತಿದ್ದಂತೆ ತಾಲೂಕು ಪಂಚಾಯತ್ ಸದಸ್ಯರುಗಳು ಕಚೇರಿ ಕೊಡುವ ಬಗ್ಗೆಯೇ ವಿರೋಧಕ್ಕೆ ಇಳಿದಿದ್ದು, ಬಾಡಿಗೆ ನೀಡುವಂತೆ ಠರಾವು ಮಾಡಿದ್ದಾರೆ. ಈ ಬಗ್ಗೆ ಕೆಲವರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರು ತಮ್ಮ ಸಭೆಯಲ್ಲಿ ಶಾಸಕರಿಗೆ ಯಾಕೆ ಕಚೇರಿ ಕೊಡಬೇಕು. ತಮ್ಮ ಕಚೇರಿಯನ್ನ ತಾಲೂಕು ಪಂಚಾಯತ್ ಆವರಣದಲ್ಲಿ ಪಡೆದರೆ ಅದಕ್ಕೆ ಶಾಸಕರು ಬಾಡಿಗೆಯನ್ನ ಕಟ್ಟಲಿ ಎಂದು ಸದಸ್ಯರು ಠರಾವನ್ನ ಸಹ ಹೊರಡಿಸಿದ್ದಾರೆ. ಇವೆಲ್ಲಾ ಘಟನೆಯಿಂದ ಬೇಸತ್ತಿರುವ ಶಾಸಕಿ ಈ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಶಾಸಕರ ಕಛೇರಿ ಅವ್ಯವಸ್ಥೆಯಿಂದ ಕೂಡಿರುವುದರಿಂದ ಶಾಸಕಿ ರೂಪಾಲಿ ನಾಯ್ಕ ಬಿಜೆಪಿ ಕಚೇರಿಯಲ್ಲಿಯೇ ಸದ್ಯ ತಮ್ಮ ಕಚೇರಿಯನ್ನ ತೆರೆದಿದ್ದಾರೆ. ಈ ಎಲ್ಲ ಬೆಳವಣಿಗೆಯಾದ ನಂತರ ಕಚೇರಿಯನ್ನ ಸರಿಪಡಿಸುವ ಕಾರ್ಯ ಮಾಡಿದ್ದಾದರೂ ಇನ್ನೂ ಕಚೇರಿಯನ್ನ ಶಾಸಕರಿಗೆ ಬಿಟ್ಟುಕೊಟ್ಟಿಲ್ಲ. ಇವರನ್ನು ಭೇಟಿಯಾಗಬೇಕಾದ ಸಾರ್ವಜನಿಕರು ಬಿಜೆಪಿ ಕಚೇರಿಗೆ ಬಂದು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಾಲೂಕು ಪಂಚಾಯಿತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರ ಬಳಿ ಕೇಳಿದರೆ ಹಿಂದಿನ ಶಾಸಕರು ತಮ್ಮ ಸ್ವಂತ ಖರ್ಚಿನಿಂದ ತಂದ ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಪೈಪ್ ಗಳನ್ನ, ಟಾಯ್ಲೆಟ್, ವಿದ್ಯುತ್ ಬಲ್ಪಗಳನ್ನು ಕೀಳುವಾಗ ಅವರಿಗೆ ಕರೆಮಾಡಿ ತಿಳಿಸಿದ್ದು, ಆಗ ಕೆಲಸಕ್ಕೆ ಬಂದವರು ಈ ರೀತಿ ಮಾಡಿದ್ದಾರೆ. ಸದ್ಯ ಕಚೇರಿಯನ್ನ ಶಾಸಕರಿಗೆ ನೀಡಿ ಸರಿಪಡಿಸಿಕೊಳ್ಳಲು ತಿಳಿಸಿದ್ದು, ಶಾಸಕರಿಗೆ ಕಚೇರಿ ನೀಡುವಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್ ಕುಮಾರ್ ಹೇಳಿದ್ದಾರೆ.

  • ಪತ್ನಿ, ಮಕ್ಕಳಿಗೆ ಚಿಕನ್ ತಯಾರಿಸಿ ಉಣಬಡಿಸಿದ ಕಾರವಾರ ಶಾಸಕ ಸತೀಶ್ ಸೈಲ್

    ಪತ್ನಿ, ಮಕ್ಕಳಿಗೆ ಚಿಕನ್ ತಯಾರಿಸಿ ಉಣಬಡಿಸಿದ ಕಾರವಾರ ಶಾಸಕ ಸತೀಶ್ ಸೈಲ್

    ಕಾರವಾರ: ಒಂದೆಡೆ ಅಬ್ಬರದ ಪ್ರಚಾರ, ಸದಾ ತುಂಬಿ ತುಳುಕುತಿದ್ದ ಜನರ ಸಂತೆ, ಟೀಕೆ ಟಿಪ್ಪಣಿಗಳ ನಡುವೆ ತಾನು ಗೆಲ್ಲಬೇಕೆಂಬ ಹಂಬಲದಲ್ಲಿ ವಿಧಾನಸಭಾ ಚುನಾವಣೆಯ ರಂಗಿನ ರಣರಂಗದಲ್ಲಿ ಸದಾ ಬಿಸಿಯಾಗಿದ್ದ ಪ್ರತಿಷ್ಠಿತ ಕಣವಾದ ಕಾರವಾರ ವಿಧಾನಸಭಾ ಕ್ಷೇತ್ರದ ಮೂರು ಪಕ್ಷದ ನಾಯಕರು ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

    ಸದಾ ಜನರ ಮಧ್ಯೆ ಇರುವ ನಾಯಕರು ತಮ್ಮ ವೈಯಕ್ತಿಕ ಬದುಕಿಗೆ ಸಮಯ ಕೊಟ್ಟದ್ದು ಅಲ್ಪ ಸಮಯ. ಇದೇ ತಿಂಗಳ 15 ರಂದು ಫಲಿತಾಂಶದ ನಿರೀಕ್ಷೆಯಲ್ಲಿರುವ ಈ ನಾಯಕರು ಇಂದು ತಮ್ಮ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ಅಡುಗೆ ಮಾಡಿ ಕುಟುಂಬವರಿಗೆ ಬಡಿಸಿದ್ದಾರೆ.

    ಕಳೆದ ಎರಡು ತಿಂಗಳ ಚುನಾವಣಾ ಕುರುಕ್ಷೇತ್ರಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇನ್ನು 15ನೇ ದಿನಾಂಕದಂದು ಜನರ ನಿರ್ಧಾರದ ಫಲಿತಾಂಶ ಬರಬೇಕಿದೆ. ತಾವು ಪಟ್ಟ ಶ್ರಮದ ನಿರೀಕ್ಷೆಯಲ್ಲಿ ನಾಯಕರು ಒತ್ತಡದಲ್ಲಿ ಇರೋದು ಸಹಜವಾಗಿದೆ. ತ್ರಿಕೋನ ಸ್ಪರ್ಧೆ ಇರುವ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್, ಜೆಡಿಎಸ್ ನಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತು ಬಿಜೆಪಿಯಿಂದ ರೂಪಾಲಿ ನಾಯ್ಕ ಸ್ಪರ್ಧಿಸಿದ್ದರು.

    ಸದ್ಯ ಇಂದು ಮತ್ತು ನಾಳೆ ಮನಸ್ಸಿನಲ್ಲಿ ಅಳುಕು ಮತ್ತು ಒತ್ತಡ ಇದ್ದರು ಮೂವರು ಅಭ್ಯರ್ಥಿಗಳು ಈ ಒತ್ತಡ ಮರೆಯಲು ಹರಸಾಹಸ ಪಡುತಿದ್ದಾರೆ. ಕಳೆದ ಎರಡು ತಿಂಗಳಿಂದ ಕ್ಷೇತ್ರ ಸುತ್ತಿ ಪ್ರಚಾರ ನಡೆಸಿ ದಣಿದಿರುವ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಗೋವಾಕ್ಕೆ ತೆರಳಿ ರಿಲ್ಯಾಕ್ಸ್ ಮಾಡುತ್ತಿದ್ದು, ಅವರ ಅಧಿಕೃತ ನಿವಾಸ ಜನರಿಲ್ಲದೇ ಬಿಕೋ ಎನ್ನುತಿತ್ತು. ಒತ್ತಡ ಮರೆಯಲು ಜನರಿಂದ ದೂರ ವಿರಲು ಬಯಸಿರುವ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕಾರವಾರದ ಸೋನಾರವಾಡದಲ್ಲಿರುವ ಮನೆಯ ಮುಂಭಾಗಕ್ಕೆ ಬೀಗ ಹಾಕಿ ಒಳ ಸೇರಿದ್ದಾರೆ. ಮನೆಯ ಬಳಿ ಬಂದ ಜನರ ಸಂಪರ್ಕಕ್ಕೆ ಸಿಗಲಿಲ್ಲ.

    ಇನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ರವರ ಮಾಜಾಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಮನೆ ಕೂಡ ಯಾವುದೇ ಕಾರ್ಯಕರ್ತರ ಸದ್ದಿಲ್ಲದೇ ತಟಸ್ಥವಾಗಿತ್ತು. ಶಾಂತವಾಗಿದ್ದ ಮನೆಯಲ್ಲಿ ಸತೀಶ್ ಸೈಲ್ ಪತ್ನಿ ಕಲ್ಪನಾರೊಂದಿಗೆ ಅಡುಗೆ ಮನೆ ಸೇರಿ ಮಧ್ಯಾಹ್ನದ ಊಟಕ್ಕಾಗಿ ಚಿಕನ್ ತಯಾರಿಸಿದ್ದಾರೆ. ಅವರ ಕುಷಲೋಪರಿ ವಿಚಾರಿಸಲು ಬಂದವರಿಗೆ ತಮ್ಮ ಕೈಯಾರೆ ಟೀ ಮಾಡಿ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಸಂಸಾರಕ್ಕೆ ಹೆಚ್ಚು ಸಮಯ ಕೊಡಲಾಗುತಿಲ್ಲ. ಮಕ್ಕಳೊಂದಿಗೆ ಬೆರೆಯದೇ ಎಷ್ಟೂ ದಿನಗಳಾಗಿವೆ. ಒಂದು ದಿನವಾದರೂ ನನ್ನ ಒತ್ತಡ ಮರೆತು ಮಕ್ಕಳು ಸಂಸಾರದೊಂದಿಗೆ ಬೆರೆಯಬೇಕೆಂದು ತೀರ್ಮಾನಿಸಿ ಜಂಜಾಟದಿಂದ ರಿಲಾಕ್ಸ್ ಮಾಡುತ್ತಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    ನನ್ನ ತಂದೆ ಕ್ಯಾನ್ಸರ್ ನಿಂದ ತೀರಿಕೊಂಡರು. ಆಗ ಅವರಿಗೆ ಕ್ಯಾನ್ಸರ್ ಇದೇ ಎಂದು ತಿಳಿದುಕೊಳ್ಳವ ವೇಳೆ ಅವರು ನಮ್ಮನ್ನು ಅಗಲಿದ್ದರು. ಕಾರವಾರ ಕ್ಷೇತ್ರದಲ್ಲಿ ಕೈಗಾ ಅಣು ಸ್ಥಾವರ, ಆದಿತ್ಯ ಬಿರ್ಲಾ ಕೆಮಿಕಲ್ ಕಾರ್ಖಾನೆಗಳಿವೆ. ಇವುಗಳಿಂದ ಸಾಕಷ್ಟು ಜನರಿಗೆ ಕ್ಯಾನ್ಸರ್ ನಂತಹ ರೋಗಗಳು ಬಂದಿವೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ವ್ಯವಸ್ಥೆ ಸರಿಯಾಗಿ ಇಲ್ಲ. ನನ್ನ ಅವಧಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಾಡಿಸುವ ಪ್ರಯತ್ನ ಮಾಡಿದ್ದೇನೆ. ಈಗ ಅದು ಸಫಲವಾಗಿದೆ ಎಂದು ತಮ್ಮ ತಂದೆಯನ್ನು ನೆನೆದು ಭಾವುಕರಾದ್ರು.

    ನನ್ನ ಕ್ಷೇತ್ರದ ಜನರಿಗೆ ಉದ್ಯೋಗ ಇಲ್ಲಿಯೇ ಸಿಗುವಂತೆ ಮಾಡಬೇಕು. ಅದಕ್ಕಾಗಿ ಈ ಬಾರಿ ಚುನಾವಣಾ ಕಣದಲ್ಲಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ ಎಂದು ನಾಲ್ಕು ವರ್ಷದ ತಮ್ಮ ಸಾಧನೆಯ ಬಗ್ಗೆ ಮನದ ಮಾತು ಹಂಚಿಕೊಂಡ್ರು. ಕಾರವಾರ ಕ್ಷೇತ್ರದ ಮೂರು ಪಕ್ಷದ ಅಭ್ಯರ್ಥಿಗಳು ಇಂದು ಜನರ, ಕಾರ್ಯಕರ್ತರ ಜಂಜಾಟದಿಂದ ದೂರ ಉಳಿದು ತಮ್ಮ ದಣಿವನ್ನು ನೀಗಿಸಿಕೊಂಡಿದ್ದು, 15ರ ಅಗ್ನಿ ಪರೀಕ್ಷೆಗೆ ರಿಫ್ರೆಶ್ ಆಗುತ್ತಿದ್ದಾರೆ.