Tag: ರುದ್ರಶಿವ

  • ಎರಡನೇ ಹಂತದ ಚಿತ್ರೀಕರಣ ಮುಗಿಸಿದ ಶಭ್ಬಾಷ್

    ಎರಡನೇ ಹಂತದ ಚಿತ್ರೀಕರಣ ಮುಗಿಸಿದ ಶಭ್ಬಾಷ್

    ರುದ್ರಶಿವ ನಿರ್ದೇಶನದ `ಶಭ್ಬಾಷ್’ (Shabbash) ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಅದಾಗಲೇ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣ ಸಹ ಸಾಂಘವಾಗಿ ಮುಕ್ತಾಯಗೊಂಡ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ. ಚನ್ನಗಿರಿಯಲ್ಲಿ ಮೊದಲನೇ ಹಂತದ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ ಮಡಿಕೇರಿ ಸುತ್ತಮುತ್ತಲ ಚೆಂದದ ಪರಿಸರದಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಸಮಾಪ್ತಿಗೊಳಿಸಿಕೊಂಡಿದೆ. ಈ ಹಂತದಲ್ಲಾದ ಅಮೋಘ ಅನುಭವಗಳನ್ನೂ ಹಂಚಿಕೊಂಡಿದೆ.

    ನಿರ್ದೇಶಕ ರುದ್ರಶಿವ (Rudrashiva) ಅತ್ಯಂತ ಅಚ್ಚುಕಟ್ಟಾಗಿ ಪ್ಲಾನು ಮಾಡಿಕೊಂಡು, ಅದಕ್ಕೆ ತಕ್ಕುದಾಗಿಯೇ ಮುಂದಡಿ ಇಡುತ್ತಿದ್ದಾರೆ. ಅದರ ಭಾಗವಾಗಿಯೇ ಮಡಿಕೇರಿಯ ಗೋಣಿಕೊಪ್ಪ, ಬಿರನಾಣಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಈ ಭಾಗದ ಟಾಟ ಟೀ ಎಸ್ಟೇಟ್, ಬೆಟ್ಟಗುಡ್ಡ, ಜಲಪಾತ ಮುಂತಾದೆಡೆಗಳಲ್ಲಿ ಬಹುಮುಖ್ಯ ಭಾಗಗಳನ್ನು ಸೆರೆಹಿಡಿಯಲಾಗಿದೆ. ದುರ್ಗಮವಾದ ಪ್ರದೇಶಗಳಲ್ಲಿ ಒಂದಿಡೀ ಚಿತ್ರತಂಡ ಅತ್ಯಂತ ಉತ್ಸಾಹದಿಂದ ಈ ಚಿತ್ರೀಕರಣದಲ್ಲಿ ಭಾಗಿಯಾಗಿದೆ.

    ವಿಶೇಷವಾಗಿ, ಎರಡು ಹಾಡುಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇಲ್ಲಿ ವಾಸವಾಗಿರುವ ಜೇನುಕುರುಬರ ಹಾಡಿಗಳಿಗೆ ಭೇಟಿ ನೀಡಿದ್ದ ಚಿತ್ರತಂಡ, ಆ ಬುಡಕಟ್ಟು ಜನಾಂಗದ ಹಾಡೊಂದನ್ನು ಚಿತ್ರೀಕರಿಸಿಕೊಂಡಿದೆ. ಅದಕ್ಕೆ ಸಾಹಿತ್ಯ, ಸಂಗೀತವೆಲ್ಲ ಆ ಬುಡಕಟ್ಟು ಜನರದ್ದೇ ಎಂಬುದು ಅಸಲೀ ವಿಶೇಷ. ಒಟ್ಟಾರೆ ಶಭ್ಬಾಷ್ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಜೇನುಕುರುಬರ ಆ ಹಾಡೂ ಕೂಡಾ ಪ್ರಧಾನವಾಗಿ ಸೇರಿಕೊಂಡಿದೆ.

    ಅಂದಹಾಗೆ, ಆರು ದಿನಗಳ ಕಾಲ ಮಡಿಕೇರಿ ಭಾಗದಲ್ಲಿಯೇ ಚಿತ್ರತಂಡ ಬೀಡುಬಿಟ್ಟಿತ್ತು. ಡ್ಯಾನ್ಸರ್ ಗಳು ಸೇರಿದಂತೆ ಇಡೀ ಚಿತ್ರತಂಡವೇ ಎರಡನೇ ಹಂತರ ಚಿತ್ರೀಕರಣದಲ್ಲಿ ಭಾಗಿಯಾಗಿತ್ತು. ಅದರಲ್ಲಿಯೂ ಒಂದು ದಿನ ಸಂಜೆ ಆರು ಗಂಟೆಯಿಂದ ಮಾರನೇ ದಿನ ಮುಂಜಾನೆ ಆರು ಗಂಟೆಯವರೆಗೂ ಅವ್ಯಾಹತವಾಗಿ ಚಿತ್ರೀಕರಣ ನಡೆಸಲಾಗಿದೆ. ಮಡಿಕೇರಿ ಅಂದಮೇಲೆ ಅಲ್ಲಿನ ಮಂಜು, ಚಳಿಯ ತೀವ್ರತೆ ಎಂಥಾದ್ದೆಂಬುದು ಎಲ್ಲರಿಗೂ ತಿಳಿದಿರುತ್ತೆ. ಅದರ ನಡುವೆಯೂ ಅಹೋರಾತ್ರಿ ಚಿತ್ರೀಕರಣ ನಡೆಸಿದ ರೋಮಾಂಚಕ ಕ್ಷಣಗಳಿಗೆ ಚಿತ್ರತಂಡ ಸಾಕ್ಷಿಯಾಗಿದೆ.

     

    ಓಂ ಸಾಯಿ ಪ್ರಕಾಶ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ ನಿರ್ದೇಶನದ ಮೊದಲ ಚಿತ್ರವಿದು. ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ಏಸ್ 22 (ACE 22) ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ `ಕ’ ಮತ್ತು `ಮಳೆಬಿಲ್ಲು’ ಸಿನಿಮಾಗಳಲ್ಲಿ ನಟಿಸಿರುವ ಶರತ್ ನಾಯಕನಾಗಿ ನಟಿಸಿದ್ದರೆ, ನಿಸರ್ಗ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೀಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿರುವ ಚಿತ್ರತಂಡ, ಮೂರನೇ ಹಂತದ ಚಿತ್ರೀಕರಣದತ್ತ ಸಾಗುತ್ತಿದೆ.

  • ಐತಿಹಾಸಿಕ ಸ್ಥಳದಲ್ಲಿ ಮೊದಲ ಹಂತದ ಶೂಟ್ ಮುಗಿಸಿದ ಶಬ್ಭಾಸ್

    ಐತಿಹಾಸಿಕ ಸ್ಥಳದಲ್ಲಿ ಮೊದಲ ಹಂತದ ಶೂಟ್ ಮುಗಿಸಿದ ಶಬ್ಭಾಸ್

    ಸಂಕ್ರಾಂತಿ ಶುಭ ಸಂದರ್ಭದಲ್ಲಿ ಮುಹೂರ್ತ ಕಂಡಿದ್ದ ` ಶಬ್ಭಾಸ್’ (Shabbash) ಚಿತ್ರ ಅತ್ಯಂತ ವೇಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿರುವ ರುದ್ರಶಿವ (Rudrashiva) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಾಂಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು, ಅದರ ಬಗೆಗಿನ ಒಂದಷ್ಟು ಕುತೂಹಲಕರ ವಿವರಗಳನ್ನು ಹಂಚಿಕೊಂಡಿದೆ.

    ರುದ್ರಶಿವ ಯೋಜನೆಯಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಏಳು ದಿನಗಳ ಚಿತ್ರೀಕರಣ ಮಾಡಿ, ಚನ್ನಗಿರಿಯ ಶಾಂತಿಸಾಗರದ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅಲ್ಲಿನ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ಶೂಟಿಂಗ್ ನಡೆದಿದೆ. ಅಂದಹಾಗೆ, ಚನ್ನಗಿರಿಯ ಶಾಂತಿಸಾಗರ ಸೂಳೆಕೆರೆ ಅಂತಲೂ ಕರೆಸಿಕೊಳ್ಳುತ್ತದೆ. ಏಷ್ಯಾ ಖಂಡದಲ್ಲಿಯೇ ಎರಡನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯೂ ಶಾಂತಿಸಾಗರಕ್ಕಿದೆ. ಈ ಕೆರೆಗೂ ಹನ್ನೆರಡನೇ ಶತಮಾನಕ್ಕೂ ಎಂದಿಗೂ ಸಡಿಲವಾಗದಂತಹ ಕೊಂಡಿಗಳಿವೆ. ಸ್ವರ್ಗಾವತಿ ಪಟ್ಟಣದ ದೊರೆ ವಿಕ್ರಮರಾಜನ ಸುಪುತ್ರಿ ಶಾಂತವ್ವ ತನಗಾದ ಅವಮಾನಕ್ಕೆ ಪ್ರತಿಭಟನೆಯ ಸ್ವರೂಪದಲ್ಲಿ ಈ ಬೃಹತ್ ಕೆರೆಯನ್ನು ಸೃಷ್ಟಿಸಿದಳೆಂಬ ಪ್ರತೀತಿ ಇದೆ.

    ಇಲ್ಲಿಯೇ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಿಸಿರುವ ಸೇತುವೆಯೊಂದು ಪ್ರಧಾನ ಆಕರ್ಷಣೆ. ಎರಡು ಬೆಟ್ಟಗಳನ್ನು ಸೇರಿಸಿ ಈ ಸೇತುವೆಯನ್ನು ಕಟ್ಟಿಸಲಾಗಿದೆ. ಈವತ್ತಿಗೂ ಅಚ್ಚರಿಯಾಗಿ ಕಾಣಿಸುವ ಈ ಸೇತುವೆಯ ಮೇಲೆ ಶಭ್ಬಾಷ್ ಚಿತ್ರೀಕರಣ ನಡೆಸಲಾಗಿದೆ. ಅಷ್ಟಕ್ಕೂ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಆ ಸೇತುವೆ ಮೇಲೆ ಚಿತ್ರೀಕರಣ ನಡೆಸುವುದೊಂದು ಸಾಹಸ. ಕೆಲವೇ ಕೆಲ ಕಲಾವಿದರು, ತಂತ್ರಜ್ಞರು ಮಾತ್ರವೇ ಅಲ್ಲಿಗೆ ತಲುಪಲು ಸಾಧ್ಯವಾಗಿತ್ತು. ಇದು ನಿರ್ದೇಶಕ ರುದ್ರಶಿವ ಸೇರಿದಂತೆ ಒಂದಿಡೀ ಚಿತ್ರತಂಡದ ಪಾಲಿಗೆ ಅಮೋಘ ಅನುಭವವನ್ನು ತುಂಬಿದೆ. ಛಾಯಾಗ್ರಾಹಕರು, ಕಲಾವಿದರು, ತಾಂತ್ರಿಕ ವರ್ಗ ದಣಿವು ಮರೆತು ಈ ಚಿತ್ರೀಕರಣದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.

    ಇದಲ್ಲದೇ ಈ ಭಾಗದಲ್ಲಿರುವ ಪ್ರಸಿದ್ಧ ದೇವಾಲಯ, ಹಳ್ಳಿಗಳಲ್ಲಿ ನಾಯಕ ನಾಯಕಿಯರ ದೃಶ್ಯಗಳನ್ನು ಚಿತ್ರೀಕರಣ ನಡೆಸಲಾಗಿದೆ. ಇಂಥದ್ದೊಂದು ಸುಂದರ ವಾತಾವರಣದಲ್ಲಿ ಅಚ್ಚುಕಟ್ಟಾಗಿ ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿಕೊಳ್ಳಲಾಗಿದೆ. ಶಭ್ಬಾಷ್ ಆಕ್ಷನ್ ಡ್ರಾಮಾ ಜಾನರಿನ ಸಿನಿಮಾ. ಓಂ ಸಾಯಿ ಪ್ರಕಾಶ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ ನಿರ್ದೇಶನದ ಮೊದಲ ಚಿತ್ರವಿದು. ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ಏಸ್ 22 (ACE 22) ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

     

    ಈಗಾಗಲೇ `ಕ’ ಮತ್ತು ಮಳೆಬಿಲ್ಲು ಸಿನಿಮಾಗಳಲ್ಲಿ ನಟಿಸಿರುವ ಶರತ್ ನಾಯಕನಾಗಿ ನಟಿಸಿದ್ದರೆ, ನಿಸರ್ಗ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು, ಅದಾಗಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಆ ಬಗೆಗಿನ ಒಂದಷ್ಟು ವಿವರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.

  • ಸಂಕ್ರಾಂತಿ ದಿನದಂದು ‘ಶಭ್ಬಾಷ್’ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಓಂ ಸಾಯಿಪ್ರಕಾಶ್

    ಸಂಕ್ರಾಂತಿ ದಿನದಂದು ‘ಶಭ್ಬಾಷ್’ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಓಂ ಸಾಯಿಪ್ರಕಾಶ್

    ರುದ್ರಶಿವ (Rudrashiva) ನಿರ್ದೇಶನದಲ್ಲಿ ಮೂಡಿ ಬರಲಿರುವ `ಶಭ್ಬಾಷ್’ (Sabhbash) ಚಿತ್ರದ ಮುಹೂರ್ತ ಸಮಾರಂಭ ಸಂಕ್ರಾಂತಿ ದಿನದಂದು ನೆರವೇರಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ (Om Saiprakash) ಅವರು, ತಮ್ಮ ಶಿಷ್ಯನ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಶ್ರೀ ಬಂಡೆ ಮಹಾಕಾಳಿ ಅಮ್ಮನವರ ಸನ್ನಿಧಾನದಲ್ಲಿ ಈ ಮುಹೂರ್ತ ಸಮಾರಂಭ ಅರ್ಥವತ್ತಾಗಿ ನೆರವೇರಿದೆ. ಇದೇ ಸಂದರ್ಭದಲ್ಲಿ ` ಶಭ್ಬಾಷ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡಾ ಅನಾವರಣಗೊಂಡಿದೆ.

    ಮುಹೂರ್ತದ ನಂತರ ಚಿತ್ರತಂಡ ಸುದ್ದಿಗೋಷ್ಟಿಯಲ್ಲಿ ಚಿತ್ರತಂಡ `ಶಭ್ಬಾಷ್’ ಕುರಿತಾದ ಒಂದಷ್ಟು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ. ಪ್ರಧಾನವಾಗಿ ಈ ಹಂತದಲ್ಲಿ ನಿರ್ದೇಶಕ ರುದ್ರಶಿವ ಶೀರ್ಷಿಕೆಯ ಒಳಾರ್ಥವನ್ನು ಸಮರ್ಥವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯವಾಗಿ ಮಹತ್ತರವಾದುದನ್ನು ಸಾಧಿಸಿದಾಗ, ಮೆಚ್ಚುವಂತೆ ನಡೆದುಕೊಂಡಾಗ ಶಭ್ಬಾಷ್ ಗಿರಿಯ ಮೂಲಕ ಮೆಚ್ಚಿಕೊಳ್ಳಲಾಗುತ್ತೆ. ಹಾಗಾದರೆ, ಈ ಸಿನಿಮಾ ನಾಯಕ ಶಭ್ಬಾಷ್ ಅನ್ನಿಸಿಕೊಳ್ಳುವಂಥಾ ಯಾವ ಕೆಲಸ ಮಾಡುತ್ತಾನೆ? ಯಾವ ಥರದ ಕಥೆ ಇದರ ಸುತ್ತ ಚಲಿಸುತ್ತದೆಂಬುದು ಈ ಸಿನಿಮಾ ಜೀವಾಳ. ಅಂದಹಾಗೆ, `ಹೊಡಿರೋ ಸೆಲ್ಯೂಟ್’ ಎಂಬ ಅಡಿ ಬರಹ ಹೊಂದಿರುವ ಶಭ್ಬಾಷ್, ಆಕ್ಷನ್ ಡ್ರಾಮಾ ಜಾನರಿನ ಸಿನಿಮಾ.

    ಶಭ್ಬಾಷ್ ಮೂಲಕ ರುದ್ರಶಿವ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಏಸ್ 22 (ACE 22) ಬ್ಯಾನರಿನಡಿಯಲ್ಲಿ ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಶಕಗಳಿಗೂ ಹೆಚ್ಚು ಕಾಲ ದಿಗ್ಗಜ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ, ಒಂದೊಳ್ಳೆ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರಂತೆ. ಶಿವಮಣಿ, ಅಯ್ಯಪ್ಪ ಶರ್ಮಾ, ಪಲ್ಲಕ್ಕಿ ರಾಧಾಕೃಷ್ಣರಂಥಾ ನಿರ್ದೇಶಕರೊಂದಿಗೆ ಕಾರ್ಯ ನಿರ್ವಹಿಸಿದ್ದ ರುದ್ರಶಿವ, ಓಂ ಸಾಯಿಪ್ರಕಾಶ್ ನಿರ್ದೇಶನದ ಗಂಗ ಎಂಬ ಚಿತ್ರದಲ್ಲಿಯೂ ಕೆಲಸ ಮಾಡಿದ್ದರು. ಈ ಮೂಲಕ ಸಾಯಿಪ್ರಕಾಶ್ ಅವರನ್ನು ಗುರುವೆಂದೇ ಪರಿಭಾವಿಸಿಕೊಂಡಿದ್ದರು. ಇದೀಗ ಓಂ ಸಾಯಿಪ್ರಕಾಶ್ ತಮ್ಮ ಶಿಷ್ಯನ ಮೊದಲ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ.

    ಈ ಚಿತ್ರದಲ್ಲಿ ಶರತ್ ನಾಯಕನಾಗಿ ನಟಿಸಿದ್ದಾರೆ. ನಿಸರ್ಗ ನಾಯಕಿಯಾಗಿ ಜೊತೆಯಾಗಿದ್ದಾರೆ. ಈಗಾಗಲೇ `ಕ’ ಮತ್ತು `ಮಳೆಬಿಲ್ಲು’ ಎಂಬೆರಡು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದ ಶರತ್, ಸುದೀರ್ಘ ಕಾಲಾವಧಿಯ ನಂತರ ಶಭ್ಬಾಷ್ ಮೂಲಕ ನಾಯಕನಾಗಿ ಮರಳುತ್ತಿದ್ದಾರೆ. ಎಲ್ಲ ತಯಾರಿಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ ಇಂದಿನಿಂದಲೇ ಚಿತ್ರೀಕರಣಕ್ಕೂ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಆ ನಂತರ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

     

    ವಿಶೇಷವೆಂದರೆ, ಚಿತ್ರೀಕರಣ ಶುರುವಾಗುವ ಮುನ್ನವೇ ಶಭ್ಬಾಷ್ ನ ಆರು ಹಾಡುಗಳನ್ನು ರೂಪಿಸಲಾಗಿದೆ. ಈ ಆರೂ ಹಾಡುಗಳಿಗೆ ಮ್ಯಾಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಆಂಜನೇಯನ ಕುರಿತಾದ ಹಾಡಿಗೆ ಶಂಕರ್ ಮಹಾದೇವನ್  ಧ್ವನಿಯಾಗಿದ್ದಾರೆ.  ರವೀಂದ್ರ ಸೊರಗಾವಿ ಹಾಗೂ ಶಮಿತಾ ಮಲ್ನಾಡ್ ಕಂಠಸಿರಿಯಲ್ಲಿ ಒಂದು ಗೀತೆ, ಇಂದೂ ನಾಗರಾಜ್ ಹಾಗೂ ವ್ಯಾಸರಾಜ್ ಕಾಂಬಿನೇಷನ್ ನಲ್ಲಿ ಒಂದು ಹಾಡು, ವಿಜಯ್ ಪ್ರಕಾಶ್ ಮತ್ತು ಅನುರಾಧ್ ಭಟ್ ಧ್ವನಿಯಲ್ಲಿ ಮತ್ತೊಂದು ಸುಮಧುರ ಗೀತೆ,  ಜೋಗಿ ಪ್ರೇಮ್, ನವೀನ್ ಸಜ್ಜು ಕೂಡ ಶಭ್ಬಾಷ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರಂತೆ. ಸದ್ಯಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಳ್ಳುವತ್ತ ಗಮನ ಹರಿಸಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಮತ್ತಷ್ಟು ರಸವತ್ತಾದ ವಿಚಾರಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವ ಉಮೇದಿನಲ್ಲಿದೆ.