Tag: ರಿಷಬ್ ಪಂತ್

  • ಐಸಿಸಿಯ ತಿಂಗಳ ಕ್ರಿಕೆಟಿಗರ ಸ್ಪರ್ಧೆ – ರೇಸ್‍ನಲ್ಲಿ ರಿಷಬ್ ಪಂತ್

    ಐಸಿಸಿಯ ತಿಂಗಳ ಕ್ರಿಕೆಟಿಗರ ಸ್ಪರ್ಧೆ – ರೇಸ್‍ನಲ್ಲಿ ರಿಷಬ್ ಪಂತ್

    ಮುಂಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ತಿಂಗಳ ಕ್ರಿಕೆಟಿಗ ಪ್ರಶಸ್ತಿಯ ರೇಸ್‍ನಲ್ಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಭಾರತದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಸ್ಥಾನ ಪಡೆದುಕೊಂಡಿದ್ದಾರೆ.

    ಎಲ್ಲಾ ಅಂತರಾಷ್ಟ್ರೀಯಾ ಪಂದ್ಯಗಳನ್ನು ಗಮನಿಸಿ ಮಹಿಳಾ ಮತ್ತು ಪುರಷರ ತಂಡದಲ್ಲಿ ಅತ್ಯುತ್ತಮ ಆಟವಾಡಿ ತಂಡಕ್ಕೆ ಸಹಕಾರಿಯಾದ ಆಟಗಾರರಿಗೆ ಐಸಿಸಿಯು ತಿಂಗಳ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಬಾರಿಯೂ ಪ್ರಶಸ್ತಿಗಾಗಿ ಪುರುಷ ಆಟಗಾರರಾದ ಭಾರತದ ರಿಷಬ್ ಪಂತ್, ಇಂಗ್ಲೆಂಡ್‍ನ ಜೋ ರೂಟ್ ಮತ್ತು ಐಲ್ರ್ಯಾಂಡ್‍ನ ಫೌಲ್ ಸ್ಟ್ರೀಲಿಂಗ್ ಅವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದೆ.

    ರಿಷಬ್ ಪಂತ್, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಸ್ಕರ್ ಸರಣಿಯಲ್ಲಿ ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪದರ್ಶಿಸಿ ಟೆಸ್ಟ್ ಸರಣಿ ಗೆಲ್ಲಲು ಕಾರಣರಾಗಿದ್ದರು. ಹಾಗಾಗಿ ಭಾರತ ಯುವ ಆಟಗಾರ ಪ್ರಶಸ್ತಿಗಾಗಿ ರೂಟ್ ಮತ್ತು ಸ್ಟ್ರೇಲಿಂಗ್ ನಡುವೆ ಪೈಪೋಟಿ ನಡೆಸಲಿದ್ದಾರೆ.

    ಪಂತ್ ಬಾರ್ಡರ್ ಗಾವಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 97 ರನ್ ಗಳಿಸಿ ಪಂದ್ಯ ಡ್ರಾ ಆಗುವಂತೆ ಮಾಡಿದ್ದರು. ನಂತರ ನಾಲ್ಕನೇ ಟೆಸ್ಟ್ ನಲ್ಲಿ ತಂಡ ಅಪಾಯದ ಅಂಚಿನಲ್ಲಿದ್ದಾಗ ಅಮೋಘ 87 ರನ್ ಗಳಿಸಿ ಐತಿಹಾಸಿಕ ಗೆಲುವನ್ನು ಭಾರತಕ್ಕೆ ತಂದು ಕೊಟ್ಟಿದ್ದರು.

    ಇನ್ನೂ ಪ್ರಶಸ್ತಿ ಸುತ್ತಿನ ಅಂತಿಮ ಪಟ್ಟಿಯಲ್ಲಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 228 ಮತ್ತು 186 ರನ್‍ಗಳನ್ನು ಬಾರಿಸಿ 2 ಪಂದ್ಯಗಳ ಟೆಸ್ಟ್ ಸೀರೀಸ್‍ನ್ನು 2-0 ಅಂತರದಲ್ಲಿ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಐಲ್ರ್ಯಾಂಡ್ ತಂಡದ ಆಟಗಾರ ಯುಎಇ ವಿರುದ್ಧದ 2 ಏಕದಿನ ಪಂದ್ಯ ಮತ್ತು ಅಫ್ಘಾನಿಸ್ಥಾನ ವಿರುದ್ಧದ 3 ಏಕದಿನ ಪಂದ್ಯದಲ್ಲಿ 3 ಶತಕ ಸಿಡಿಸಿ ಮಿಂಚಿದ್ದರು. ಹಾಗಾಗಿ ಈ ಮೂವರನ್ನು ಐಸಿಸಿ ಪ್ರಶಸ್ತಿ ಸುತ್ತಿನ ಅಂತಿಮ ಹಂತಕ್ಕೆ ಆಯ್ಕೆ ಮಾಡಿದೆ.

  • ಮತ್ತೆ ಕಳ್ಳಾಟವಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸ್ಟೀವ್‌  ಸ್ಮಿತ್

    ಮತ್ತೆ ಕಳ್ಳಾಟವಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸ್ಟೀವ್‌ ಸ್ಮಿತ್

    ಸಿಡ್ನಿ: ಕ್ರಿಕೆಟ್‍ನಲ್ಲಿ ಸ್ಲೆಡ್ಜಿಂಗ್‍ನಿಂದಲೇ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ ಆಟಗಾರರು ಇದೀಗ ಕಳ್ಳಾಟದ ಮೂಲಕ ಕ್ಯಾಮೆರಾ ಕಣ್ಣಿಗೆ ಸಿಕ್ಕಿಹಾಕಿಕೊಂಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

    ಆಸ್ಟ್ರೇಲಿಯಾ ತಂಡದಲ್ಲಿ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್ ರಿಷಬ್ ಪಂತ್ ಅವರು ಮಾರ್ಕ್ ಮಾಡಿದ್ದ ಗಾರ್ಡ್  ಅನ್ನು ಕಾಲಿನಿಂದ ಒರೆಸಿದ್ದಾರೆ. ಒರೆಸುತ್ತಿರುವ ದೃಶ್ಯ ಸ್ಟಂಪ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

    ಸಿಡ್ನಿಯಲ್ಲಿ ನಡೆಯುತ್ತಿದ್ದ ಬಾರ್ಡರ್ ಗಾವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯಾಟದ ಐದನೇ ದಿನದ ಮೊದಲ ಸೆಷನ್‍ಲ್ಲಿ ಘಟನೆ ನಡೆದಿದೆ. 407 ರನ್‍ಗಳ ಟಾರ್ಗೆಟ್ ಚೇಸ್ ಮಾಡುತ್ತಿದ್ದ ಭಾರತಕ್ಕೆ ರಿಷಬ್ ಪಂತ್ ಆಸರೆಯಾಗಿ ಗೆಲುವಿನ ದಡಸೇರಿಸಲು ಹೋರಾಟ ನಡೆಸುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಎದುರಾಳಿ ಆಟಗಾರರೂ ಪಂತ್ ಅವರ ವಿಕೆಟ್ ಪಡೆಯಲು ಹೊಂಚು ಹಾಕಿ ಕಾಯುತ್ತಿದ್ದರು. ಪಂತ್ ಅರ್ಧಶತಕ ಹೊಡೆಯಲು 64 ಎಸೆತ ತೆಗದುಕೊಂಡರೆ ನಂತರ ತನ್ನ ಲಯವನ್ನು ಬದಲಾಯಿಸಿ ಆಕ್ರಮಣಕಾರಿ ಆಟ ಆಡುತ್ತಿದ್ದರು.

    ಈ ವೇಳೆ ಡ್ರಿಂಕ್ಸ್ ಬ್ರೇಕ್ ಬಂದು ಮುಂದಿನ ಅವಧಿ ಆರಂಭದ ಮೊದಲು ಸ್ಮಿತ್ ಸ್ಟಂಪ್ ಬಳಿ ಬಂದು ಪಂತ್ ಅವರು ಮಾರ್ಕ್ ಮಾಡಿದ್ದ ಗಾರ್ಡ್ ಅನ್ನು ಕಾಲಿನಿಂದ ಒರೆಸಿದ್ದಾರೆ. ಈ ವಿಡಿಯೋ ಸ್ಟಂಪ್‍ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ರೀಸ್‍ನಲ್ಲಿ ಗಾರ್ಡ್ ಇಲ್ಲದನ್ನು ನೋಡಿದ ಪಂತ್ ಮತ್ತೆ ಅಂಪೈರ್ ಬಳಿ ಕೇಳಿ ಗಾರ್ಡ್ ಮಾರ್ಕ್ ಹಾಕಿದ್ದಾರೆ.

    ಕ್ಯಾಮೆರಾದಲ್ಲಿ ಸ್ಟಷ್ಟವಾಗಿ ಸ್ಮಿತ್ ಅವರ ನೆರಳು ಕಂಡು ಬಂದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಮಿತ್ ನಡೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿದ್ದ ಟೆಸ್ಟ್‌ನಲ್ಲಿ ಬೌಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಹಾಕಿಕೊಂಡಿದ್ದ ಸ್ಮಿತ್ 1 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿ ಕ್ರಿಕೆಟ್‍ಗೆ ಮರಳಿ ಬಂದಿದ್ದರು.

  • ಪಂತ್ ಉತ್ತಮ ಆಟ – ಭಾರತವನ್ನು ಕಾಪಾಡಿದ ಅಶ್ವಿನ್, ವಿಹಾರಿ

    ಪಂತ್ ಉತ್ತಮ ಆಟ – ಭಾರತವನ್ನು ಕಾಪಾಡಿದ ಅಶ್ವಿನ್, ವಿಹಾರಿ

    – ಡ್ರಾದಲ್ಲಿ ಮೂರನೇ ಟೆಸ್ಟ್ ಪಂದ್ಯ ಅಂತ್ಯ

    ಸಿಡ್ನಿ: ರಿಷಬ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ಹನುಮ ವಿಹಾರಿಯ ತಾಳ್ಮೆಯುತ ಇನ್ನಿಂಗ್ಸ್ ಆರ್ ಅಶ್ವಿನ್ ಸಾಥ್ ನಿಂದಾಗಿ ಬಾರ್ಡರ್ ಗಾವಸ್ಕಾರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾ ಮೂಲಕ ಅಂತ್ಯವಾಗಿದೆ.

    88.2 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 272 ರನ್‍ಗಳಿಸಿ ಸಂಕಷ್ಟದಲ್ಲಿದ್ದಾಗ ಜೊತೆಯಾದ ಅಶ್ವಿನ್ ಮುರಿಯದ 7ನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. 407 ರನ್‍ಗಳ ಗುರಿಯನ್ನು ಬೆನ್ನೆಟ್ಟಿದ ಭಾರತ 131 ಓವರ್‍ಗಳಲ್ಲಿ 334 ರನ್‍ಗಳಿಗೆ 5 ವಿಕೆಟ್ ಕಳೆದೆÀಕೊಂಡಿದ್ದಾಗ ಡ್ರಾ ತೀರ್ಮಾನಕ್ಕೆ ಬರಲಾಯಿತು.

    ಭಾರತಕ್ಕೆ ಐದನೇ ದಿನದಾಟ ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು. 9 ರನ್ ಹೊಡೆದ ಚೇತೇಶ್ವರ ಪೂಜಾರ ಮತ್ತು 4 ರನ್ ಹೊಡೆದಿದ್ದ ರಹಾನೆ ಐದನೇ ದಿನ ಬ್ಯಾಟಿಂಗ್ ಇಳಿದರು. ಆದರೆ ರಹಾನೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಇತ್ತ ಪೂಜಾರ ಮಾತ್ರ ಮತ್ತೆ ತಾನೂ ಟೆಸ್ಟ್ ಸ್ಪೆಷಲಿಸ್ಟ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

    ರಹಾನೆ ಔಟ್ ಆದ ಬಳಿಕ ಬ್ಯಾಟಿಂಗ್ ಬಡ್ತಿ ಪಡೆದು ಬಂದ ರಿಷಬ್ ಪಂತ್ ಏಕದಿನ ಪಂದ್ಯಾಟದ ರೀತಿಯಲ್ಲಿ ಬ್ಯಾಟ್ ಬೀಸಿ 97 ರನ್ (118 ಎಸೆತ 12 ಬೌಡಂರಿ 3 ಸಿಕ್ಸರ್) ಸಿಡಿಸಿ ಪೂಜಾರ ಜೊತೆ 4 ನೇ ವಿಕೆಟ್ 148 ರನ್‍ಗಳ ಜೊತೆಯಾಟವಾಡಿದರು. ಪೂಜಾರ 77ರನ್ (205 ಎಸೆತ 12 ಬೌಡಂರಿ,) ಹೊಡೆದು ಭಾರತಕ್ಕೆ ಆಧಾರವಾದರೂ. ಶತಕದ ಹೊಸ್ತಿಲಿನಲ್ಲಿದ್ದ ಪಂತ್ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೇ ಪೂಜಾರ ಹ್ಯಾಝಲ್‍ವುಡ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರೂ ನಂತರ ಬಂದ ಅನುಮ ವಿಹಾರಿ 23 ರನ್ (161 ಎಸೆತ 4 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 39 ರನ್ (128 ಎಸೆತ 7 ಬೌಂಡರಿ) ಹೊಡೆದು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು.

  • ಅಭಿಮಾನಿಯ ವಿಡಿಯೋದಿಂದ ತೊಂದರೆಗೊಳಗಾದ ರೋಹಿತ್ ಆ್ಯಂಡ್ ಟೀಂ

    ಅಭಿಮಾನಿಯ ವಿಡಿಯೋದಿಂದ ತೊಂದರೆಗೊಳಗಾದ ರೋಹಿತ್ ಆ್ಯಂಡ್ ಟೀಂ

    ಮೆಲ್ಬರ್ನ್: ಹೊಸ ವರ್ಷದಂದು ರೆಸ್ಟೋರೆಂಟ್‍ಗೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರಿಗೆ ಅಭಿಮಾನಿಯೋರ್ವ ಬಿಲ್ ನೀಡಿ ಔತಣಕೂಟ ಕೊಟ್ಟ ವಿಡಿಯೋ ವೈರಲ್ ಆಗಿತ್ತು. ಆದರೆ ಅದೇ ವಿಡಿಯೋ ಇದೀಗ ರೋಹಿತ್ ಶರ್ಮಾ ಮತ್ತು 4 ಜನ ಸಹ ಆಟಗಾರರಿಗೆ ತೊಂದರೆಗೊಳಗಾಗುವಂತೆ ಮಾಡಿದೆ.

    ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್ ಸರಣಿಗೆಂದು ಹೋಗಿರುವ ಭಾರತೀಯ ಆಟಗಾರರು ಅಲ್ಲಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿಗೆ ಪತ್ನಿ ಜೊತೆ ಅಭಿಮಾನಿ ನವಲ್‍ದೀಪ್ ಸಿಂಗ್ ಬಂದಿದ್ದರು. ಅವರ ಟೇಬಲ್‍ನ ಮುಂದಿನ ಟೇಬಲ್‍ನಲ್ಲಿ ಕುಳಿತಿದ್ದ ಆಟಗಾರರನ್ನು ನೋಡಿ ಸಂತಸ ಪಟ್ಟ ನವಲ್‍ದೀಪ್ ಕೊನೆಯಲ್ಲಿ ಆಟಗಾರರ ಬಿಲ್ ಪಾವತಿಸಿ ಅವರೊಂದಿಗೆ ಫೋಟೋ ತೆಗಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನವಲ್‍ದೀಪ್ ಸಿಂಗ್ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.

    ಇದನ್ನು ಗಮನಿಸಿದ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮುನ್ನೆಚ್ಚರಿಕಾ ಕ್ರಮವಾಗಿ ರೆಸ್ಟೋರೆಂಟ್‍ಗೆ ಭೇಟಿ ನೀಡಿದ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಅವರನ್ನು ಭಾರತೀಯ ಮತ್ತು ಆಸ್ಟ್ರೇಲಿಯಾ ತಂಡಗಳಿಂದ ದೂರ ಇರುವಂತೆ ಸೂಚಿಸಿದೆ. ಎರಡು ತಂಡಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

    ಬಿಸಿಸಿಐ ಮತ್ತು ಸಿಎ ಈ ಬಗ್ಗೆ ತನಿಖೆ ನಡೆಸುತ್ತಿದ್ದು. ಐವರು ಆಟಗಾರರು ಜೀವ ಸುರಕ್ಷತಾ ವಲಯದ(ಬಯೋ ಬಬಲ್) ನಿಯಮವನ್ನು ಉಲ್ಲಂಘನೆ ನಡೆಸಿದ್ದಾರೆಯೇ ಎಂದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದೆ.

     

  • ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್

    ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್

    ದುಬೈ: ಐಪಿಎಲ್ 2020ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನವದೀಪ್ ಸೈನಿ ತಮ್ಮ ವೇಗ ಬೌಲಿಂಗ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಗಂಟೆಗೆ 147 ಕಿಮೀ ವೇಗದಲ್ಲಿ ಬೌಲ್ ಮಾಡುತ್ತಿರುವ ಸೈನಿ ಟೂರ್ನಿಯ ಫಾಸ್ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಆದರೆ ಪ್ರತಿ ಪಂದ್ಯದಲ್ಲಿ ಯಾರ್ಕರ್ ಎಸೆಯುವ ಸಂದರ್ಭದಲ್ಲಿ ಬೀಮರ್ ಎಸೆಯುವ ಮೂಲಕ ಸೈನಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಸೈನಿ ಡೇಂಜರಸ್ ಬೀಮರ್ ಎಸೆಯುವ ಮೂಲಕ ಎದುರಾಳಿ ತಂಡದ ಆಟಗಾರರು ಗರಂ ಆಗಲು ಕಾರಣರಾಗಿದ್ದರು. ಇನ್ನಿಂಗ್ಸ್ ನ 15ನೇ ಓವರ್ ಎಸೆತ ಸೈನಿ ಐದನೇ ಎಸೆತವನ್ನು ಫುಲ್ ಟಾಸ್ ರೂಪದಲ್ಲಿ ಬೀಮರ್ ಎಸೆದಿದ್ದರು. ಇದನ್ನು ಆನ್‍ಫೀಲ್ಡ್ ಅಂಪೈರ್ ನೋಬಾಲ್ ಎಂದು ಪ್ರಕಟಿಸಿದ್ದರು.

    ಸ್ಟ್ರೈಕ್‍ನಲ್ಲಿದ್ದ ಸ್ಟೋಯ್ನಿಸ್ ಸೋಂಟದ ಭಾಗಗಿಂತಲೂ ಎತ್ತರದಲ್ಲಿ ಬಂದ ಚೆಂಡನ್ನು ಎದುರಿಸುವ ಬರದಲ್ಲಿ ಕೈಗೆ ತಾಗಿ ಗಾಯವಾಗಿತ್ತು. ಸಾಮಾನ್ಯವಾಗಿ ಯಾವುದೇ ಬೌಲರ್ ಬೀಮರ್ ಎಸೆದ ಸಂದರ್ಭದಲ್ಲಿ ಕೂಡಲೇ ಬ್ಯಾಟ್ಸ್ ಮನ್ ಬಳಿ ಕ್ಷಮೆ ಕೇಳುತ್ತಾರೆ. ಆದರೆ ಸೈನಿ ಘಟನೆ ನಡೆದ ಬಳಿಕ ಯಾವುದೇ ರೀತಿ ಕ್ಷಮೆ ಕೇಳಿರಲಿಲ್ಲ. ಕ್ರಿಕೆಟ್ ವಿಶ್ಲೇಷಣೆ ನೀಡುತ್ತಿದ್ದ ವೀಕ್ಷಕ ವಿವರಣೆಗಾರ ಕೂಡ ಸೈನಿ ನಡೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು.

    ಸೈನಿ ನಡೆಯ ವಿರುದ್ಧ ಸೋಯ್ನಿಸ್ ಹಾಗೂ ನಾನ್‍ಸ್ಟ್ರೈಕ್‍ನಲ್ಲಿದ್ದ ಪಂತ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಓವರ್ ಮುಕ್ತಾಯದ ಬಳಿಕ ಪಂತ್, ಸ್ಟೋಯ್ನಿಸ್ ಬಳಿ ಕ್ಷಮೆ ಕೇಳುವಂತೆ ಸೈನಿಗೆ ಸೂಚಿಸಿದ್ದರು. ಈ ವೇಳೆ ಕೊನೆಗೂ ಸೈನಿ ಕ್ಷಮೆ ಕೋರಿದ್ದರು. ಇನ್ನಿಂಗ್ಸ್ ನ 17ನೇ ಓವರ್ ಬೌಲ್ ಮಾಡಲು ಮತ್ತೆ ಆಗಮಿಸಿದ ಸೈನಿ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ ಪಂತ್, ಸ್ಟೋಯ್ನಿಸ್ 18 ರನ್ ಸಿಡಿಸಿ ತಿರುಗೇಟು ನೀಡಿದ್ದರು. ಉಳಿದಂತೆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 59 ರನ್ ಗೆಲುವು ಪಡೆದಿತ್ತು.

    ಇದಕ್ಕೂ ಮುನ್ನ ಸೈನಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಬೀಮರ್ ಎಸೆದಿದ್ದರು. ಸೈನಿ ಬೀಮರ್ ಎದುರಿಸಿದ್ದ ಆಲ್‍ರೌಂಡರ್ ರಾಹುಲ್ ತೆವಾಟಿಯಾ ಕುಸಿದು ಬಿದಿದ್ದರು. ಆದರೆ ಅಂದು ಯಾವುದೇ ಪ್ರಮಾದ ನಡೆದಿರಲಿಲ್ಲ. ಇದರ ಬೆನಲ್ಲೇ ಮತ್ತೆ ಸೈನಿ ಬೀಮರ್ ಎಸೆದಿರುವುದು ಸಾಕಷ್ಟು ಮಂದಿಗೆ ಅಚ್ಚರಿ ತಂದಿದೆ.

  • ಕೆಎಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ- ಪಾರ್ಥಿವ್ ಪಟೇಲ್

    ಕೆಎಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ- ಪಾರ್ಥಿವ್ ಪಟೇಲ್

    ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್‍ಕೀಪಿಂಗ್ ಜವಾಬ್ದಾರಿಗೆ ಕೆ.ಎಲ್.ರಾಹುಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಎಂದು ಟೀಂ ಇಂಡಿಯಾ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ವಿಕೆಟ್‍ಕೀಪರ್, ಬ್ಯಾಟ್ಸ್‌ಮನ್‌ ಖ್ಯಾತಿಯ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

    ‘ಲಾಕ್‍ಡೌನ್ ಬಟ್ ನಾಟೌಟ್’ ಆನ್‍ಲೈನ್ ಸರಣಿ ಕಾರ್ಯಕ್ರಮದಲ್ಲಿ ವೇಳೆ ಪಾರ್ಥಿವ್, ಟೀಂ ಇಂಡಿಯಾ ಕೀಪಿಂಗ್ ಜವಾಬ್ದಾರಿ ನಿಭಾಯಿಸಲು ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದು ಅಭಿಮಾನಿಗಳ ಕೇಳಿದಾಗ ಈ ರೀತಿ ಉತ್ತರಿಸಿದ್ದಾರೆ.

    “ಕೆ.ಎಲ್.ರಾಹುಲ್ ಸದ್ಯದ ಸಂದರ್ಭದಲ್ಲಿ ವಿಕೆಟ್‍ಕೀಪಿಂಗ್ ಕೆಲಸಕ್ಕೆ ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ಈ ವಿಚಾರವನ್ನು ಮುಂದಿನ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಬಹುದು. ವಿಶ್ವಕಪ್ ಟೂರ್ನಿನಲ್ಲಿ ಕೆ.ಎಲ್.ರಾಹುಲ್ ಭಾರತದ ಪರ ಕೀಪಿಂಗ್ ಜವಾಬ್ದಾರಿ ಅತ್ಯುತ್ತಮವಾಗಿ ನಿಭಾಯಿಸಬಲ್ಲರು. ಇದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಪಾರ್ಥಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ರಿಷಬ್ ಪಂತ್ ವಿಚಾರ ಪ್ರಸ್ತಾಪಿಸಿದ ಪಾರ್ಥಿವ್, “ದೀರ್ಘ ಅವಧಿಗೆ ಕೀಪಿಂಗ್ ಸೇವೆ ನೀಡುವ ಸಾಮರ್ಥ್ಯ ಪಂತ್‍ಗೆ ಇದೆ. ಅವರನ್ನು ಭೇಟಿಯಾದಾಗಲೆಲ್ಲ ಇದನ್ನೇ ಹೇಳಿದ್ದೇನೆ. ನಿನ್ನಲ್ಲಿರುವ ಪ್ರತಿಭೆಯಿಂದಲೇ ಜನರು ಮಾತನಾಡುತ್ತಿದ್ದಾರೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಮತ್ತೆ ಮತ್ತಮ ಫಾರ್ಮ್ ಗೆ ಮರಳಲು ದೇಶಿ ಟೂರ್ನಿಗಳಲ್ಲಿ ಆಡಬೇಕು. ಒಂದು ವೇಳೆ ನಿನ್ನ ಜಾಗದಲ್ಲಿ ನಾನಿದ್ದರೂ ಇದನ್ನೇ ಮಾಡುತ್ತಿದ್ದೆ ಎಂದು ತಿಳಿ ಹೇಳಿರುವೆ. ಪಂತ್ ಉತ್ತಮ ಫಾರ್ಮ್ ನೊಂದಿಗೆ ತಂಡಕ್ಕೆ ಮರಳುತ್ತಾರೆ ಎನ್ನುವ ಭರವಸೆ ಇದೆ ಎಂದು ತಿಳಿಸಿದ್ದಾರೆ.

    ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್‍ಪ್ರೀತ್ ಬುಮ್ರಾ ಅವರನ್ನು ಖರೀದಿಸುವಂತೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸಲಹೆ ನೀಡಿದ್ದ ವಿಚಾರವನ್ನು ಪಾರ್ಥಿವ್ ರಿವೀಲ್ ಮಾಡಿದ್ದಾರೆ. “ಈ ಹುಡುಗನ ಬಗ್ಗೆ ಕೊಹ್ಲಿಗೆ ಹೇಳಿದ್ದೆ. ಆತನನ್ನು ನಮ್ಮ ತಂಡ (ಆರ್‌ಸಿಬಿ)ಗೆ ಖರೀದಿಸಬೇಕು ಎಂದು ಪ್ಲಾನ್ ಮಾಡಲಾಗಿತ್ತು. ಆದರೆ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬುಮ್ರಾ ಅವರನ್ನು ತನ್ನ ತೆಕ್ಕೆಗೆ ತೆಗದುಕೊಂಡಿತ್ತು” ಹೇಳಿದ್ದಾರೆ.

    ಪಾರ್ಥಿವ್ ಪಟೇಲ್ ಅವರು ತಮ್ಮ 18 ವಯಸ್ಸಿನಲ್ಲಿ (17 ವರ್ಷ, 153 ದಿನ)ಕ್ಕೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. 2002ರಲ್ಲಿ ಇಂಗ್ಲೆಂಟ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದ ಆಡಿದ್ದರು. ಸದ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ಮತ್ತು ಗುಜರಾತ್ ರಣಜಿ ತಂಡದ ನಾಯಕನಾಗಿ ಕ್ರಿಕೆಟ್ ಅಂಗಳದಲ್ಲಿ ವೃತ್ತಿ ಜೀವನ ನಡೆಸಿದ್ದಾರೆ.

  • ಧೋನಿ ನನ್ನ ಮಾರ್ಗದರ್ಶಕ- ಪಂತ್

    ಧೋನಿ ನನ್ನ ಮಾರ್ಗದರ್ಶಕ- ಪಂತ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನನ್ನ ಮಾರ್ಗದರ್ಶಕರು ಎಂದು ವಿಕೆಟ್ ಕೀಪರ್, ‌ ಬ್ಯಾಟ್ಸ್‌ಮನ್ ರಿಷಬ್ ಪಂತ್ ಹೇಳಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ನಡೆಸಿದ ವಿಡಿಯೋ ಚಾಟ್‍ನಲ್ಲಿ ಮಾತನಾಡಿದ ರಿಷಭ್ ಪಂತ್, ಧೋನಿ ಅವರು ನನಗೆ ಮೈದಾನದ ಒಳಗೆ ಮತ್ತು ಹೊರಗೆ ಮಾರ್ಗದರ್ಶನ ನೀಡುತ್ತಾರೆ. ಯಾವುದೇ ಸಮಸ್ಯೆಯನ್ನು ಎದುರಿಸಲು ನಾನು ಅವರ ಸಹಾಯವನ್ನು ಕೇಳಬಹುದು. ಅವರು ಕೂಡ ದಾರಿ ತೋರಿಸುತ್ತಾರೆ. ಇದರಿಂದಾಗಿ ನಾನು ನನ್ನ ಸಮಸ್ಯೆಯಿಂದ ಹೊರಬರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಮುಂದಿನ ನಾಯಕ’

    ಧೋನಿ ಅವರ ಮಾರ್ಗದರ್ಶನದಿಂದ ನನ್ನ ಆತ್ಮವಿಶ್ವಾಸ ಬಲಗೊಂಡಿದೆ. ಅವರು ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರರಲ್ಲಿ ಒಬ್ಬರು. ಬ್ಯಾಟಿಂಗ್ ಸಮಯದಲ್ಲಿ ಎಂಎಸ್‍ಡಿ ಆಫ್ ಸ್ಟ್ರೈಕ್‍ನಲ್ಲಿರುವಾಗ ನನಗೆ ವಿಭಿನ್ನ ಶಕ್ತಿ ಬರುತ್ತದೆ. ಅವರು ಯಾವಾಗಲೂ ಮುಂದಾಲೋಚನೆ ಹೊಂದಿರುತ್ತಾರೆ. ಹೀಗಾಗಿ ಎಂ.ಎಸ್.ಧೋನಿ ಮತ್ತು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಅವರು ನನ್ನ ನೆಚ್ಚಿನ ಆಟಗಾರರು ಎಂದು ಪಂತ್ ಹೇಳಿದ್ದಾರೆ.

    ಟೆಸ್ಟ್ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಏಕೆಂದರೆ ಟೆಸ್ಟ್ ಮಾದರಿಯಲ್ಲಿ ಐದು ದಿನಗಳವರೆಗೆ ಮೈದಾನದಲ್ಲಿ ಆಟಬಹುದು. ನಮ್ಮ ಪರೀಕ್ಷೆಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಸಹಾಯಕವಾಗುತ್ತದೆ. ಈ ಮಾದರಿಯಲ್ಲಿ ಯಶಸ್ವಿಯಾಗಲು ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ತಿಳಿಸಿದರು.

    ಐಪಿಎಲ್ ಟೂರ್ನಿಯಲ್ಲಿ 54 ಪಂದ್ಯಗಳನ್ನು ಆಡಿರುವ ರಿಷಬ್ ಪಂತ್ 1,736 ರನ್ ಗಳಿಸಿದ್ದಾರೆ. ಆದರೆ ಕಳಪೆ ಫಾರ್ಮ್ ನಿಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಎಲ್.ಕೆ.ರಾಹುಲ್ ಅವರಿಗೆ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ವಹಿಸಲಾಗಿದೆ.

  • ಸಚಿನ್, ವಿರೇಂದ್ರರಂತೆ ಪಂತ್ ಶ್ರೇಷ್ಠ ಆಟಗಾರ: ರೈನಾ

    ಸಚಿನ್, ವಿರೇಂದ್ರರಂತೆ ಪಂತ್ ಶ್ರೇಷ್ಠ ಆಟಗಾರ: ರೈನಾ

    ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್, ಮಾಜಿ ಕ್ರಿಕೆಟರ್‌ಗಳಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಅವರಂತೆ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಅನುಭವಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

    ಸುರೇಶ್ ರೈನಾ ಇತ್ತೀಚೆಗೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರೊಂದಿಗೆ ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಚಾಟ್ ನಡೆಸಿದ್ದರು. ಈ ವೇಳೆ ಭಾರತೀಯ ಕ್ರಿಕೆಟ್ ತಂಡ, ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ರೈನಾ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅವರನ್ನು ಹೊಗಳಿದ್ದಾರೆ.

    “ನನ್ನ ಪ್ರಕಾರ ರಿಷಬ್ ಪಂತ್ ಅಗ್ರ ಕ್ರಿಕೆಟಿಗ, ಅತ್ಯಂತ ಪ್ರಬಲ ಆಟಗಾರ. ಅವರ ಆಟ ನೋಡಲು ಖುಷಿ ಪಡುತ್ತೇನೆ. ಶ್ರೇಷ್ಠ ಬ್ಯಾಟ್ಸ್‌ಮನ್‍ಗಳಾದ ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರಂತೆ ಪಂತ್ ಕೂಡ ಪ್ರಾಬಲ್ಯ ಹೊಂದಿದ್ದಾರೆ” ಎಂದು ರೈನಾ ಹೇಳಿದರು.

    2017ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಪಂತ್, ಒಮ್ಮೆ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಉತ್ತರಾಧಿಕಾರಿ ಎಂದು ಕರೆಯಲ್ಪಟ್ಟರು. ಆದರೆ ಪಂತ್ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ.

    ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 2020ರ ಜನವರಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದರು. ಪ್ಯಾಟ್ ಕಮ್ಮಿನ್ಸ್ ಎಸೆದ ಇನ್ನಿಂಗ್ಸ್ 44ನೇ ಓವರ್ ನಲ್ಲಿ ಪಂತ್ ಅವರ ಹೆಲ್ಮೆಟ್‍ಗೆ ಬಾಲ್ ಬಡೆದು ಗಾಯಗೊಂಡಿದ್ದರು. ನಂತರದ ನ್ಯೂಜಿಲೆಂಡ್ ಪ್ರವಾಸದಲ್ಲಿಯೂ ಪಂತ್ ತಂಡದಿಂದ ಹೊರಗೆ ಉಳಿದಿದ್ದರು. ಸದ್ಯ ಕೆ.ಎಲ್.ರಾಹುಲ್ ಅವರನ್ನು ವೈಟ್ ಬಾಲ್ ಕ್ರಿಕೆಟ್‍ನಲ್ಲಿ ಮೊದಲ ಆಯ್ಕೆಯ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

    ಕೆ.ಎಲ್.ರಾಹುಲ್ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ 5 ಪಂದ್ಯಗಳಲ್ಲಿ 224 ರನ್ ಗಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಕೇವಲ ಮೂರು ಏಕದಿನ ಪಂದ್ಯಗಳಲ್ಲಿ 204 ರನ್ ಗಳಿಸಿ ಸೈ ಎನಿಸಿಕೊಂಡಿದ್ದರು.

  • ‘ಸಾಲಾ ಈಗಷ್ಟೇ ಕ್ರಿಕೆಟ್ ಆಡ್ತಿದ್ದಾನೆ ನನಗೆ ಸವಾಲ್ ಹಾಕ್ತಾನಾ’

    ‘ಸಾಲಾ ಈಗಷ್ಟೇ ಕ್ರಿಕೆಟ್ ಆಡ್ತಿದ್ದಾನೆ ನನಗೆ ಸವಾಲ್ ಹಾಕ್ತಾನಾ’

    ನವದೆಹಲಿ: ವಿಶ್ವಾದ್ಯಂತ ನಿರಂತರವಾಗಿ ಹೆಚ್ಚುತ್ತಿರುವ ಕೊರೊನಾ ವೈರಸ್‍ನಿಂದಾಗಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡಾ ಟೂರ್ನಿಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಆಟಗಾರರು ಮನೆಯಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್ ನಡೆಸಿದ್ದಾರೆ. ಅಂತೆಯೇ ಬುಧವಾರ ವಿಡಿಯೋ ಕಾಲಿಂಗ್‍ನಲ್ಲಿದ್ದ ಟೀಂ ಇಂಡಿಯಾ ಆಟಗಾರರಾದ ಜಸ್‍ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಅವರು ಯುವ ಆಟಗಾರ ರಿಷಬ್ ಪಂತ್ ಕಾಲೆಳೆದಿದ್ದಾರೆ.

    ಜಸ್‍ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಅವರ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ಈ ಆಟಗಾರರು ಆರ್‍ಸಿಬಿ ತಂಡ ಯಜುವೇಂದ್ರ ಚಹಲ್ ಅವರ ಬಗ್ಗೆಯೂ ಗೇಲಿ ಮಾಡಿದ್ದಾರೆ.

    ಮೊದಲು ಮಾತು ಆರಂಭಿಸಿದ ಜಸ್‍ಪ್ರೀತ್ ಬುಮ್ರಾ ಅವರು ನಾನು ಹೆಚ್ಚು ದೂರದವರೆಗೆ ಸಿಕ್ಸ್ ಸಿಡಿಸುತ್ತೇನೋ ಅಥವಾ ರೋಹಿತ್ ಶರ್ಮಾ ಹೆಚ್ಚು ದೂರ ಸಿಕ್ಸ್ ಸಿಡುಸುತ್ತಾರಾ ಅಂತ ನೋಡಿಯೇ ಬಿಡೋಣ ಎಂದು ರಿಷಬ್ ಪಂತ್ ಅವರಿಗೆ ಸವಾಲು ಹಾಕಿದ್ದಾರೆ. ಆಗ ರೋಹಿತ್ ಶರ್ಮಾ, ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಬುಮ್ರಾ, ಪಂತ್ ಹೇಳುತ್ತಿದ್ದಾರೆ ಎನ್ನುತ್ತಾರೆ.

    ಪಂತ್ ನನ್ನ ವಿರುದ್ಧವೇ ಸವಾಲು ಹಾಕ್ತಾನಾ? ಸಾಲಾ ಒಂದು ವರ್ಷ ಕೂಡ ಆಗಿಲ್ಲ ಕ್ರಿಕೆಟ್ ಆಡಲು ಆರಂಭಿಸಿ. ಈಗಷ್ಟೇ ಕ್ರಿಕೆಟ್ ಆಡಲು ಆರಂಭಿಸಿದ್ದಾನೆ. ನನಗೆ ಸವಾಲ್ ಹಾಕ್ತಾನಾ ಎಂದು ಕಾಲೆಳೆದಿದ್ದಾರೆ.

    ಚಹಲ್ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ‘ಈ ವರ್ಷ ಐಪಿಎಲ್ ನಡೆದರೆ ಚಹಲ್ ಬಾಲ್‍ಗಳನ್ನು ಹಿಗ್ಗಾಮುಗ್ಗಾ ಚಚ್ಚುವುದೇ. ಅಷ್ಟೇ ಅಲ್ಲದೆ ಬ್ಯಾಟಿಂಗ್ ಬಂದಾಗ ಔಟ್ ಮಾಡದೇ ಒಂದು ಓವರ್ ಬೌಲಿಂಗ್‍ನಲ್ಲಿ ಥಂಡಾ ಹೊಡೆಸಬೇಕು. ಅವನು ಔಟ್ ಆಗೋದೇ ಬೇಡ. ಚಹಲ್ ಬ್ಯಾಟಿಂಗ್ ವೇಳೆ ಟೆಸ್ಟ್ ಪಂದ್ಯದಂತೇ ಫಿಲ್ಡಿಂಗ್ ಮಾಡಿಸೋಣ ಎಂದು ಕಾಲೆಳೆದಿದ್ದಾರೆ.

  • ವಿನಾಕಾರಣ ರನೌಟ್ ಆಗಿ ಟೀಕೆಗೆ ಗುರಿಯಾದ ಪಂತ್- ವಿಡಿಯೋ

    ವಿನಾಕಾರಣ ರನೌಟ್ ಆಗಿ ಟೀಕೆಗೆ ಗುರಿಯಾದ ಪಂತ್- ವಿಡಿಯೋ

    ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ ಪಂದ್ಯದ ಎರಡನೇ ದಿನದ ಆಟದ ವೇಳೆ ರಿಷಬ್ ಪಂತ್ ವಿನಾಕಾರಣ ರನೌಟ್ ಆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಪಂತ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ವೆಲ್ಲಿಂಗ್ಟನ್ ಬೇಸಿನ್ ರಿಸರ್ವ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು ಕೇವಲ 122 ರನ್ ಗಳಿಸಿತ್ತು. ಎರಡನೇ ದಿನದಾಟ ಪ್ರಾರಂಭಿಸಿದ ರಿಷಬ್ ಪಂತ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಆಟ ಪ್ರಾರಂಭಿಸಿದ್ದರು. ಆದರೆ ಇನ್ನಿಂಗ್ಸ್ ನ 59ನೇ ಓವರಿನಲ್ಲಿ ಪಂತ್ ಎಡವಟ್ಟು ಮಾಡಿಕೊಂಡು ವಿಕೆಟ್ ಒಪ್ಪಿಸಿದರು. ಬಳಿಕ ಬಂತ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಎಲ್ಲಾ ವಿಕೆಟ್ ಕಳೆದುಕೊಂಡು 165 ರನ್ ಪೇರಿಸಿತು.

    ಪಂದ್ಯದ 59ನೇ ಓವರಿನ 2ನೇ ಎಸೆತದಲ್ಲಿ ಸ್ಟ್ರೈಕ್‍ನಲ್ಲಿದ್ದ ಅಜಿಂಕ್ಯ ರಹಾನೆ ಹಾಫ್ ಸೈಡ್‍ಗೆ ಬಾಲ್ ಅನ್ನು ಅಟ್ಟಿ ಒಂಟಿ ರನ್ ಗಳಿಸಲು ಯತ್ನಿಸಿದರು. ಈ ವೇಳೆ ಫೀಲ್ಡರ್ ಬಾಲ್‍ಅನ್ನು ಬೇಗ ಹಿಡಿದಿದ್ದರಿಂದ ಪಂತ್ ರನ್ ಬೇಡ ಎಂದು ನಿಲ್ಲಿಸಿದರು. ಆದರೆ ರಹಾನೆ ಅದಾಗಲೇ ಅರ್ಧ ಕ್ರಿಸ್ ಮಧ್ಯಕ್ಕೆ ಬಂದಿದ್ದರು. ಫೀಲ್ಡರ್ ಚೆಂಡನ್ನು ವಿಕೆಟ್‍ಗೆ ಥ್ರೋ ಮಾಡಿದ್ದರಿಂದ ವಿನಾಕಾರಣ ಪಂತ್ ಸ್ಟ್ರೈಕ್‍ಗೆ ಓಡಿ ಔಟ್ ಆದರು.

    ‘ರನ್ ಓಡದೇ ಬಾಲ್ ಎಲ್ಲಿದೆ ಎಂದು ನೋಡಲು ಪಂತ್ ಪ್ರಯತ್ನಿಸುತ್ತಿದ್ದರು. ಅದು ಅವರಿಗೆ ಹಿಂಜರಿಕೆಯನ್ನು ಉಂಟುಮಾಡಿತು’ ಎಂದು ನಿರೂಪಕ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಇದೇ ವೇಳೆ ಸಹ ನಿರೂಪಕ ಸ್ಕಾಟ್ ಸ್ಟೈರಿಸ್ ಅವರು, ‘ನಿಮ್ಮ ಜೊತೆಗಾರರನ್ನು ನೀವು ನಂಬಬೇಕು. ಅಜಿಂಕ್ಯ ರಹಾನೆ ಅವರನ್ನು ನಂಬದ ಪಂತ್ ನಿರಾಶೆಗೆ ತುತ್ತಾದರು ಎಂದು ಹೇಳಿದ್ದಾರೆ.

    https://twitter.com/DeepPhuyal/status/1231043063096762369

    ಪಂತ್ ತನ್ನ ಜೊತೆಗಾರರನ್ನು ನಂಬಿ ಓಡಿದ್ದರೆ ರನ್ ಗಳಿಸಿ ವಿಕೆಟ್ ಉಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಫೀಲ್ಡರ್ ಕೂಡ ಬಹುಬೇಗ ಬಾಲ್ ಹಿಡಿದು ಎಸೆಯುತ್ತಿರಲಿಲ್ಲ. ಆದರೆ ಬ್ಯಾಟ್ಸ್‍ಮನ್‍ಗಳ ಮಧ್ಯೆ ಇದ್ದ ಗೊಂದಲ ಅರಿತ ಫೀಲ್ಡರ್ ವಿಕೆಟ್‍ಗೆ ಬಾಲ್ ಎಸೆದರು. ರಹಾನೆ ಜೊತೆಗಾರರು ನಂಬಬಹುದಾದ ವ್ಯಕ್ತಿ’ ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

    63 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜಿಂಕ್ಯೆ ರಹಾನೆ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ. ಅಷ್ಟೇ ಅಲ್ಲದೆ ಯಾವುದೇ ಜೊತೆಗಾರರು ಕೂಡ ರನೌಟ್ ಆಗಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರಿಷಬ್ ಪಂತ್ ವಿನಾಕಾರಣ ರನೌಟ್ ಆಗುವ ವಿಕೆಟ್ ಕಳೆದುಕೊಂಡರು.