Tag: ರಿಯಾಯಿತಿ

  • ಹಬ್ಬಕ್ಕೆ ಡಿಸ್ಕೌಂಟ್‌ – ರೈಲ್ವೇ ಟಿಕೆಟ್‌ ದರ 20% ಕಡಿತ, ಷರತ್ತುಗಳು ಏನು?

    ಹಬ್ಬಕ್ಕೆ ಡಿಸ್ಕೌಂಟ್‌ – ರೈಲ್ವೇ ಟಿಕೆಟ್‌ ದರ 20% ಕಡಿತ, ಷರತ್ತುಗಳು ಏನು?

    ನವದೆಹಲಿ:  ಹಬ್ಬದ ಸಮಯದಲ್ಲಿ ರೈಲ್ವೇಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ.  ಹಬ್ಬದ ಸಮಯದಲ್ಲಿ ಪ್ರಯಾಣದಟ್ಟಣೆ ನಿರ್ವಹಣೆ ಮತ್ತು ಬುಕ್ಕಿಂಗ್‌ ಸರಳಗೊಳಿಸಲು ಭಾರತೀಯ ರೈಲ್ವೇ (Indian Railways) ರೌಂಡ್‌ ಟ್ರಿಪ್‌ ಪ್ಯಾಕೇಜ್‌ (Round Trip Package) ಆರಂಭಿಸಿದೆ. ಈ ಪ್ಯಾಕೇಜ್‌ ಅನ್ವಯ ರಿಟರ್ನ್‌ ಟಿಕೆಟ್‌ ಬುಕ್‌ (Ticket Book) ಮಾಡಿದವರಿಗೆ 20% ರಿಯಾಯಿತಿ ಸಿಗಲಿದೆ.

    ನಿಯಮಗಳು ಮತ್ತು ಷರತ್ತುಗಳು ಏನು?
    ನಿಗದಿತ ಅವಧಿಯಲ್ಲಿ ತಮ್ಮ ವಾಪಸಾತಿ ಪ್ರಯಾಣವನ್ನು ಆಯ್ಕೆ ಮಾಡುವ ಪ್ರಯಾಣಿಕರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ:

    ಈ ಯೋಜನೆಯಡಿಯಲ್ಲಿ, ಒಂದೇ ಗುಂಪಿನ ಪ್ರಯಾಣಿಕರಿಗೆ ಮುಂದಿನ ಮತ್ತು ಹಿಂದಿರುಗುವ ಪ್ರಯಾಣ ಎರಡಕ್ಕೂ ಬುಕ್ ಮಾಡಿದಾಗ ರಿಯಾಯಿತಿಗಳು ಅನ್ವಯವಾಗುತ್ತವೆ. ಹಿಂದಿರುಗುವ ಪ್ರಯಾಣದ ಪ್ರಯಾಣಿಕರ ವಿವರಗಳು ಮುಂದಿನ ಪ್ರಯಾಣದಂತೆಯೇ ಇರಬೇಕಾಗುತ್ತದೆ.

    ಪ್ರಯಾಣಕ್ಕೆ ಯಾವ ದರ್ಜೆಯ ಟಿಕೆಟ್‌ ಬುಕ್‌ ಮಾಡಿದ್ದೀರೋ ಅದೇ ದರ್ಜೆಯ ರಿಟರ್ನ್‌ ಟಿಕೆಟ್‌ ಬುಕ್‌ ಮಾಡಬೇಕಾಗುತ್ತದೆ. ಹಿಂದಿರುಗುವ ಪ್ರಯಾಣದ ಮೂಲ ದರದಲ್ಲಿ ಮಾತ್ರ ಒಟ್ಟು 20% ರಿಯಾಯಿತಿಗಳನ್ನು ನೀಡಲಾಗುತ್ತದೆ. ಇದನ್ನೂ ಓದಿ: ʻಇದು ಯುದ್ಧದ ಯುಗವಲ್ಲʼ ಮೋದಿ ಸಂದೇಶ ಉಲ್ಲೇಖಿಸಿ ಅಮೆರಿಕ-ರಷ್ಯಾ ಮಾತುಕತೆಗೆ ಭಾರತ ಬೆಂಬಲ

    ಈ ಯೋಜನೆಯಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಯಾವುದೇ ಶುಲ್ಕ ಮರುಪಾವತಿ (Refund) ನೀಡುವುದಿಲ್ಲ. ಒಂದು ಬಾರಿ ಟಿಕೆಟ್‌ ಬುಕ್‌ ಮಾಡಿದ ನಂತರ ಯಾವುದೇ ಬದಲಾವಣೆಗೆ  ಅನುಮತಿಸಲಾಗುವುದಿಲ್ಲ.

    ರಿಯಾಯಿತಿ ದರದಲ್ಲಿ ಹಿಂದಿರುಗುವ ಪ್ರಯಾಣ ಬುಕ್ಕಿಂಗ್‌ ಮಾಡುವಾಗ ಯಾವುದೇ ರಿಯಾಯಿತಿಗಳು, ರೈಲು ಪ್ರಯಾಣ ಕೂಪನ್‌ಗಳು, ವೋಚರ್ ಆಧಾರಿತ ಬುಕಿಂಗ್‌ಗಳು, ಪಾಸ್‌ಗಳು ಅಥವಾ ಪಿಟಿಒಗಳು ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ.

    ಮುಂದಿನ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್‌ಗಳನ್ನು ಇಂಟರ್ನೆಟ್ (ಆನ್‌ಲೈನ್) ಬುಕಿಂಗ್ ಅಥವಾ  ಕಚೇರಿಗಳಲ್ಲಿ ಕೌಂಟರ್ ಬುಕಿಂಗ್ ಮೂಲಕ ಒಂದೇ ಮೋಡ್ ಅನ್ನು ಬಳಸಿಕೊಂಡು ಬುಕ್ ಮಾಡಬೇಕು.

    ಟಿಕೆಟ್ ಬುಕಿಂಗ್ ಯಾವಾಗ ಪ್ರಾರಂಭ?
    ರಾಜಧಾನಿ, ಶತಾಬ್ದಿ, ಡುರಾಂಟೊ ಮತ್ತು ಇತರ ಫ್ಲೆಕ್ಸಿ ದರ ರೈಲುಗಳಲ್ಲಿ ರಿಯಾಯಿತಿ ಅನ್ವಯಿಸುವುದಿಲ್ಲ. ಆಗಸ್ಟ್‌ 14 ರಿಂದ ಅಕ್ಟೋಬರ್‌ 13 ರಿಂದ 26 ವರೆಗಿನ ಪ್ರಯಾಣಕ್ಕೆ ಮತ್ತು ನವೆಂಬರ್‌ 17 ರಿಂದ ಡಿಸೆಂಬರ್‌ 1ರ ಅವಧಿಯ ರಿಟರ್ನ್‌ ಟಿಕೆಟ್‌ ಬುಕ್‌ ಮಾಡಬಹುದು. ಅಕ್ಟೋಬರ್‌ 13 ರಿಂದ 26   ಅವಧಿಯಲ್ಲಿ ರಿಟರ್ನ್‌ ಟಿಕೆಟ್‌ ಮಾಡಿದರೆ ಆಫರ್‌ ಸಿಗುವುದಿಲ್ಲ.  60 ದಿನಗಳ ಮೊದಲೇ ಮುಂಗಡ ಬುಕ್ಕಿಂಗ್‌ ಮಾಡಬೇಕೆಂಬ ನಿಯಮ ಈ ರೌಂಡ್‌ ಟ್ರಿಪ್‌ ಪ್ಯಾಕೇಜಿಗೆ ಅನ್ವಯವಾಗುವುದಿಲ್ಲ.

  • ವಾಹನ ಸವಾರರಿಗೆ ಮತ್ತೆ ಗುಡ್‌ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಅವಧಿ ವಿಸ್ತರಿಸಿದ ಸರ್ಕಾರ

    ವಾಹನ ಸವಾರರಿಗೆ ಮತ್ತೆ ಗುಡ್‌ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಅವಧಿ ವಿಸ್ತರಿಸಿದ ಸರ್ಕಾರ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಟ್ರಾಫಿಕ್ ಫೈನ್ ಡಿಸ್ಕೌಂಟ್ (Traffic Fine) ಅವಧಿಯನ್ನ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇ-ಚಲನ್‌ನಲ್ಲಿ ದಾಖಲಾಗಿರೊ ‍ಟ್ರಾಫಿಕ್ ಫೈನ್‌ಗೆ ಮತ್ತೆ 50% ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಸೆ.9 ರವರೆಗೆ ರಿಯಾಯಿತಿ ಅವಧಿ ಇರಲಿದೆ.

    ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಘೋಷಿಸಿದ್ದ 50% ರಿಯಾಯಿತಿ ಸೌಲಭ್ಯದ ಅವಕಾಶವನ್ನು ಸರ್ಕಾರ ವಾಹನ ಸವಾರರಿಗೆ ಮತ್ತೆ ಕಲ್ಪಿಸಿದೆ. ಈ ಹಿಂದೆ ಎರಡು ಬಾರಿ ಟ್ರಾಫಿಕ್ ಫೈನ್ ಡಿಸ್ಕೌಂಟ್ ನೀಡಿದ್ದ ಸರ್ಕಾರಕ್ಕೆ ಬಾಕಿ ಉಳಿದಿದ್ದ ನೂರಾರು ಕೋಟಿ ಫೈನ್ ಬೊಕ್ಕಸ ಸೇರಿತ್ತು. ಇದನ್ನೂ ಓದಿ: Bengaluru Mysuru Expressway- ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿ: ಮರಿತಿಬ್ಬೇಗೌಡ

    ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ರಸ್ತೆ ಸುರಕ್ಷತಾ ಕಮಿಷನರ್ ಜೊತೆ ಸಭೆ ನಡೆಸಿ ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಮತ್ತೊಮ್ಮೆ ಸಮಯ ವಿಸ್ತರಿಸುವಂತೆ ಹೇಳಿದ್ದರು. ಕೆಎಸ್‌ಎಲ್‌ಟಿಎ ಆದೇಶದ ಮೇರೆಗೆ ಸರ್ಕಾರ ಮತ್ತೆ ಡಿಸ್ಕೌಂಟ್ ಅವಧಿ ವಿಸ್ತರಣೆ ಮಾಡಿದೆ. ದಂಡ ಬಾಕಿ ಉಳಿಸಿಕೊಂಡಿರುವ ಸವಾರರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದೆ.

    ಕಾನೂನು ಸೇವೆಗಳ ಪ್ರಾಧಿಕಾರದ ಪ್ರಸ್ತಾವಕ್ಕೆ ಒಪ್ಪಿದ್ದ ರಾಜ್ಯ ಸರ್ಕಾರ, ರಿಯಾಯಿತಿ ಘೋಷಣೆ ಮಾಡಿತ್ತು. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಯಾಯಿತಿ ಸೌಲಭ್ಯದಿಂದಾಗಿ ದಂಡ ಪಾವತಿಸುವವರ ಸಂಖ್ಯೆ ಏರಿಕೆ ಆಗಿತ್ತು. ನೂರಾರು ಕೋಟಿ ಬೊಕ್ಕಸ ಸೇರಿತ್ತು. ಹೀಗಾಗಿ ಮತ್ತೆ ರಿಯಾಯಿತಿ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ – ಪರಿಷತ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಜಟಾಪಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ಕಚ್ಚಾ ತೈಲ

    ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ಕಚ್ಚಾ ತೈಲ

    ನವದೆಹಲಿ: ಭಾರತದಲ್ಲಿ ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡಲು ರಷ್ಯಾ ಮುಂದಾಗಿದೆ.

    ಯುದ್ಧಪೂರ್ವ ಬೆಲೆಯಲ್ಲಿ ಪ್ರತಿ ಬ್ಯಾರಲ್‌ಗೆ 35 ಡಾಲರ್‌ ರಿಯಾಯಿತಿಯಲ್ಲಿ ಭಾರತಕ್ಕೆ ಕಚ್ಚಾ ತೈಲವನ್ನು ನೀಡಲು ರಷ್ಯಾ ಒಪ್ಪಿಕೊಂಡಿದೆ. ಇದನ್ನೂ ಓದಿ: ವಿಮಾನ ಇಂಧನ ದರ ಹೆಚ್ಚಳ- ಪ್ರಯಾಣ ವೆಚ್ಚ ಕೂಡಾ ದುಬಾರಿ

    russia 1

    ಉಕ್ರೇನ್‌ ಮೇಲಿನ ಆಕ್ರಮಣವನ್ನು ವಿರೋಧಿಸಿ ರಷ್ಯಾದ ಮೇಲೆ ಯುಎಸ್‌, ಯುಕೆ ಮತ್ತು ಯೂರೋಪ್‌ ಒಕ್ಕೂಟ ಹಲವಾರು ನಿರ್ಬಂಧಗಳನ್ನು ವಿಧಿಸಿವೆ. ಅಂತರರಾಷ್ಟ್ರೀಯ ಒತ್ತಡ ಮತ್ತು ನಿರ್ಬಂಧಗಳನ್ನು ಧಿಕ್ಕರಿಸುವ ಮತ್ತು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ಬೆರಳೆಣಿಕೆಯ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ.

    ಫೆಬ್ರವರಿ ಅಂತ್ಯದಿಂದ ಕಚ್ಚಾ ತೈಲ ದರ 10 ಡಾಲರ್‌ಗಿಂತ ಹೆಚ್ಚಾಗಿದೆ. ಏಷ್ಯಾದಲ್ಲಿ ಎರಡನೇ ಅತಿದೊಡ್ಡ ತೈಲ ಆಮದುದಾರನಾಗಿರುವ ಭಾರತವು ಈ ವರ್ಷಕ್ಕೆ ಒಪ್ಪಂದ ಮಾಡಿಕೊಂಡಿರುವಂತೆ, 15 ಮಿಲಿಯನ್ ಬ್ಯಾರೆಲ್‌ಗಳನ್ನು ತೆಗೆದುಕೊಳ್ಳುತ್ತದೆ ಎಂದು ರಷ್ಯಾ ಖಚಿತಪಡಿಸಿಕೊಳ್ಳಲು ಬಯಸಿದೆ. ಈ ಸಂಬಂಧ ಎರಡೂ ರಾಷ್ಟ್ರಗಳು ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕರಡಿವೇಷ ಹಾಕಿ ಓಡಾಡಿದ್ರೆ ತಿಂಗಳಿಗೆ 15 ಸಾವಿರ ವೇತನ: ಹೀಗೊಂದು ವಿಶಿಷ್ಟ ಉದ್ಯೋಗ

    ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಭಾರತ ಖರೀದಿಸುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

    ಉಕ್ರೇನ್ ಆಕ್ರಮಣಕ್ಕಾಗಿ ಪಾಶ್ಚಿಮಾತ್ಯ ದೇಶಗಳು ಮಾಸ್ಕೋ ಮೇಲೆ ಹೇರಿದ ನಿರ್ಬಂಧಗಳ ಮಧ್ಯೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರಕ್ಕಾಗಿ ರೂಪಾಯಿ-ರೂಬಲ್ ಪಾವತಿ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆಯೂ ಲಾವ್ರೊವ್ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಂಬುಲೆನ್ಸ್‌ಗೆ ದಾರಿ ಕಲ್ಪಿಸಲು ತಮ್ಮ ಬೆಂಗಾವಲು ವಾಹನ ನಿಲ್ಲಿಸಿದ ಯೋಗಿ ಆದಿತ್ಯನಾಥ್‌

    2021 ರಲ್ಲಿ ಕೇವಲ 12 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಭಾರತಕ್ಕೆ ತಲುಪಿಸಲಾಯಿತ್ತು. ಡಿಸೆಂಬರ್‌ನಿಂದ ದೇಶಕ್ಕೆ ಯಾವುದೇ ಸರಕು ವಿತರಣೆಯಾಗಿಲ್ಲ.

    ಮಾರ್ಚ್ ಆರಂಭದಿಂದ 6 ಮಿಲಿಯನ್ ಬ್ಯಾರಲ್‌ನ್ನು ಭಾರತಕ್ಕೆ ರವಾನೆಯಾಗಲಿದೆ. ಈ ಸರಕುಗಳನ್ನು ಏಪ್ರಿಲ್ ಆರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: 20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

  • ಲಸಿಕೆ ಹಾಕಿಸಿಕೊಂಡವರಿಗೆ ಇಂಡಿಗೋದಿಂದ ಬಂಪರ್ ಆಫರ್

    ಲಸಿಕೆ ಹಾಕಿಸಿಕೊಂಡವರಿಗೆ ಇಂಡಿಗೋದಿಂದ ಬಂಪರ್ ಆಫರ್

    ನವದೆಹಲಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಲಸಿಕೆ ಪಡೆದ ಪ್ರಯಾಣಿಕರಿಗೆ ರಿಯಾಯಿತಿ ಘೋಷಿಸಿದೆ. ಪ್ರಯಾಣಿಕರಿಗೆ ಟಿಕೆಟ್‌ನಲ್ಲಿ ಶೇ.10 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದ್ದು, ಕೋವಿಡ್-19 ರೋಗದ ವಿರುದ್ಧ ಲಸಿಕೆಗಳನ್ನು ತೆಗೆದುಕೊಳ್ಳಲು ಜನರಿಗೆ ಈ ಮೂಲಕ ಉತ್ತೇಜನ ನೀಡುತ್ತಿದೆ.

    ಕೋವಿಡ್-19 ಲಸಿಕೆಯ ಮೊದಲ ಅಥವಾ ಎರಡೂ ಡೋಸ್‌ಗಳನ್ನು ಪಡೆದವರು ಟಿಕೆಟ್‌ನ ದರದಲ್ಲಿ ಶೇ.10 ರಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂದು ಇಂಡಿಗೋ ತಿಳಿಸಿದೆ. ವಿಮಾನಯಾನ ಸಂಸ್ಥೆಯು ಈ ಕೊಡುಗೆಯನ್ನು ವ್ಯಾಕ್ಸಿ ಫೇರ್ ಎಂದು ಹೆಸರಿಸಿದೆ. ಇದನ್ನೂ ಓದಿ: ಹೆಲಿಕಾಪ್ಟರ್‌ನ್ನು ವೈದ್ಯಕೀಯ ಸೇವೆಗೆ ದಾನ ಮಾಡಿದ ಪದ್ಮಶ್ರೀ ಪುರಸ್ಕೃತ

    ಇದನ್ನು ಮೊದಲು ಆಗಸ್ಟ್ 2021 ರಲ್ಲಿ ಪ್ರಾರಂಭಿಸಲಾಗಿತ್ತು. ಸದ್ಯ ಈ ಯೋಜನೆ ಭಾರತದಲ್ಲಿನ ಎಲ್ಲಾ ದೇಶೀಯ ವಿಮಾನಗಳಿಗೆ ಲಭ್ಯವಾಗಿದೆ. ಪ್ರಯಾಣಿಕರು ಪ್ರಯಾಣದ 15 ದಿನಗಳಿಗೂ ಮುಂಚಿತವಾಗಿ ಟಿಕೆಟ್ ಬುಕಿಂಗ್ ಮಾಡಿದ್ದಲ್ಲಿ ದರದಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಈ ಪ್ರಯೋಜನವನ್ನು ಪಡೆಯಲು ಬಯಸುವ ಎಲ್ಲಾ ಪ್ರಯಾಣಿಕರು ಇಂಡಿಗೋದ ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬೇಕಾಗುತ್ತದೆ.

    ಏರ್‌ಲೈನ್‌ನ ಪ್ರಕಾರ ಈ ಪ್ರಯೋಜನವನ್ನು ಪಡೆಯಲು ಎಲ್ಲಾ ಪ್ರಯಾಣಿಕರು ವ್ಯಾಕ್ಸಿನೇಷನ್‌ನ ಪ್ರಮಾಣ ಪತ್ರ ತೋರಿಸಬೇಕಾಗುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಲಸಿಕೆ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರವೇ ಈ ರಿಯಾಯಿತಿ ದೊರಕುತ್ತದೆ. 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ಈ ಸೇವೆ ಲಭಿಸಲಿದೆ. ಇದನ್ನೂ ಓದಿ: ಇ-ಪಾಸ್‌ಪೋರ್ಟ್‌ನಲ್ಲಿರಲಿದೆ ಸುಧಾರಿತ ಭದ್ರತಾ ವೈಶಿಷ್ಟ್ಯ

    ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಮೂಲಕ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹಂಚಿಕೊಳ್ಳಬಹುದು. ಒಂದು ವೇಳೆ ಪ್ರಯಾಣಿಕರು ವ್ಯಾಕ್ಸಿನೇಷನ್ ಪುರಾವೆಯನ್ನು ತೋರಿಸಲು ಸಾಧ್ಯವಾಗದಿದ್ದರೆ ಅವರು ಟಿಕೆಟ್‌ನ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • ಸಕ್ಕರೆ ನಗರಿಯಲ್ಲಿ ಮೈಸೂರ್ ಸಿಲ್ಕ್ ಸೇಲ್ಸ್- 4 ದಿನ ಶೇ.25 ರಿಯಾಯಿತಿ

    ಸಕ್ಕರೆ ನಗರಿಯಲ್ಲಿ ಮೈಸೂರ್ ಸಿಲ್ಕ್ ಸೇಲ್ಸ್- 4 ದಿನ ಶೇ.25 ರಿಯಾಯಿತಿ

    ಮಂಡ್ಯ: ಹೊಸ ವರ್ಷದ ಅಂಗವಾಗಿ ಮಂಡ್ಯಲ್ಲಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಮಂಡ್ಯದ ಜಿಲ್ಲಾ ಪಂಚಾಯತಿಯ ಹಿಂದಿ ಭವನದಲ್ಲಿ ಮಾರಾಟ ಮೇಳ ಏರ್ಪಡಿಸಲಾಗಿದೆ.

    ಹೊಸ ವರ್ಷದ ಅಂಗವಾಗಿ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಮೈಸೂರ್ ಸಿಲ್ಕ್ ಸೀರೆಗಳನ್ನು ನೀಡುವ ಉದ್ದೇಶದಿಂದ ಕೆಎಸ್‍ಐಸಿ ಹಾಗೂ ಮೈಸೂರ್ ಸಿಲ್ಕ್ ವತಿಯಿಂದ ಇಂದಿನಿಂದ ನಾಲ್ಕು ದಿನಗಳ ಕಾಲ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

    ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 4 ಸಾವಿರದಿಂದ ಒಂದುವರೆ ಲಕ್ಷದವರೆಗಿನ ಬೆಲೆಯ ಮೈಸೂರ್ ಸಿಲ್ಕ್ ಸೀರೆಗಳು ಲಭ್ಯವಿದ್ದು. ಪ್ರತಿ ಸೀರೆಗೂ ಶೇಕಡ 25 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೇವಲ ಮೈಸೂರ್ ಸಿಲ್ಕ್ ಅಲ್ಲದೇ ಕ್ರೇಪ್ ಡಿ ಚೈನ್, ಜಾರ್ಜೆಟ್, ಸಾದಾ ಮುದ್ರಿತ ಸೀರೆಗಳು ಹಾಗೂ ಸಿಲ್ಕ್ ಶರ್ಟ್‍ಗಳು ಪ್ರದರ್ಶನ ಮತ್ತು ಮಾರಾಟದಲ್ಲಿ ಇವೆ. ಇಂದಿನಿಂದ ಆರಂಭವಾಗಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಉದ್ಘಾಟನೆ ಮಾಡಿದ್ದಾರೆ.

  • ಸೀಜ್ ಮಾಡಿದ್ದ ಮದ್ಯ ಭಾರೀ ಡಿಸ್ಕೌಂಟ್‍ನಲ್ಲಿ ಮಾರಾಟ

    ಸೀಜ್ ಮಾಡಿದ್ದ ಮದ್ಯ ಭಾರೀ ಡಿಸ್ಕೌಂಟ್‍ನಲ್ಲಿ ಮಾರಾಟ

    ನವದೆಹಲಿ: ಸೀಜ್ ಮಾಡಿದ್ದ ಮದ್ಯವನ್ನು ನಾಶಪಡಿಸುವ ಬದಲು ದೆಹಲಿ ಸರ್ಕಾರ ಭಾರೀ ರಿಯಾಯಿತಿಯಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ.

    ರಾಜ್ಯದಲ್ಲಿ ವಿವಿಧ ಇಲಾಖೆಗಳು ಹಲವು ಸಂದರ್ಭದಲ್ಲಿ ಅಕ್ರಮ ಮದ್ಯವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಮದ್ಯವನ್ನು ನಾಶ ಮಾಡುವ ಬದಲು ಅದನ್ನು ಶೇ.25ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ. ಆದ್ದರಿಂದ ಮದ್ಯ ಪ್ರಿಯರ ಚಿತ್ತ ಸದ್ಯ ದೆಹಲಿ ಸರ್ಕಾರದ ಮೇಲಿದೆ.

    ಇಲ್ಲಿಯವರೆಗೆ ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿದ ಮೇಲೆ ಅಧಿಕಾರಿಗಳ ಸಮ್ಮುಖದಲ್ಲಿ ವಶಪಡಿಸಿಕೊಂಡ ಮದ್ಯವನ್ನು ನಾಶ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಅಬಕಾರಿ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಮದ್ಯಗಳನ್ನು ಲ್ಯಾಬ್‍ಗಳಲ್ಲಿ ಪರೀಕ್ಷೆಗೊಳಪಡಿಸಿ, ಅವುಗಳು ಸೇವಿಸಲು ಯೋಗ್ಯವಾಗಿದ್ದರೆ ಮಾತ್ರ ಆ ಮದ್ಯವನ್ನು ಮುಟ್ಟುಗೋಲು ಹಾಕಿದ ಏಳು ದಿನದಲ್ಲಿ ಮಾರಾಟ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

    ದೆಹಲಿಯೇ ಈ ವಿಧಾನವನ್ನ ಅಳವಡಿಕೊಂಡ ಮೊದಲ ರಾಜ್ಯವಾಗಲಿದ್ದು, ಮೊದಲ ಹಂತದಲ್ಲಿ 8 ಮಾರಾಟಗಾರರಿಗೆ ಮಾತ್ರ ವಶಪಡಿಸಿಕೊಂಡ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಹೀಗೆ ಮಾರಾಟಗೊಳ್ಳುವ ಮದ್ಯಗಳ ಬಾಟಲಿ ಮೇಲೆ `ಅಧಿಕೃತ ಜಪ್ತಿ ಮದ್ಯ’, `ದೆಹಲಿಯಲ್ಲಿ ಮಾರಾಟಕ್ಕೆ ಮಾತ್ರ’ ಎಂದು ನಮೂದಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರತಿ ವರ್ಷ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸುವ ಅಥವಾ ಮಾರಾಟ ಮಾಡುವ ಸುಮಾರು 2.5 ಲಕ್ಷ ಬಾಟಲಿಗಳ ಮದ್ಯವನ್ನು ವಶಪಡಿಸಿಕೊಳ್ಳುತ್ತದೆ. ಆದರೆ 2018-19 ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ.

    ಈ ಮದ್ಯಗಳನ್ನು ನೆರೆಯ ಹರ್ಯಾಣದಿಂದ ಕಡಿಮೆ ದರದಲ್ಲಿ ಖರೀದಿಸಿ ದೆಹಲಿಗೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಅಲ್ಲದೆ ಇವುಗಳನ್ನು ಮಳಿಗೆಗಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಕಾರುಗಳ ಮೇಲೆ 50 ಸಾವಿರ ರೂ.ಗಳಿಂದ 14 ಲಕ್ಷ ರೂ. ರಿಯಾಯಿತಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    ಕಾರುಗಳ ಮೇಲೆ 50 ಸಾವಿರ ರೂ.ಗಳಿಂದ 14 ಲಕ್ಷ ರೂ. ರಿಯಾಯಿತಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    ನವದೆಹಲಿ: ಕಾರು ತಯಾರಿಕಾ ಕಂಪೆನಿಗಳು ಹೊಸ ವಾಹನಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡಿದ್ದು, ಗ್ರಾಹಕರು 50 ಸಾವಿರ ರೂಪಾಯಿಗಳಿಂದ 14 ಲಕ್ಷ ರೂಪಾಯಿಗಳವರೆಗೆ ಭಾರೀ ರಿಯಾಯಿತಿಯನ್ನು ಪಡೆಯಬಹುದಾಗಿದೆ.

    ಹೌದು, ಹಬ್ಬದ ಸಮಯದಲ್ಲಿ ಗ್ರಾಹಕರಿಗಾಗಿ ಕಂಪೆನಿಗಳು ಭಾರೀ ರಿಯಾಯಿತಿಯನ್ನು ಘೋಷಿಸಿವೆ. ಆದರೆ ಮಾಹಿತಿಗಳ ಪ್ರಕಾರ ರಿಯಾಯಿತಿ ಹಬ್ಬದ ಉದ್ದೇಶವಲ್ಲ. ಬದಲಾಗಿ ಹೆಚ್ಚುತ್ತಿರುವ ಇಂಧನ ಬೆಲೆ, ವಾಹನ ವಿಮಾ ಪಾಲಿಸಿಗಳ ನೂತನ ನೀತಿ ಹಾಗೂ ಪ್ರಕೃತಿ ವಿಕೋಪಗಳಿಂದಾಗಿ ಕಾರು ಕಂಪೆನಿಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ರಿಯಾಯಿತಿ ದರವನ್ನು ಘೋಷಿಸಿವೆ.

    ಯಾವೆಲ್ಲಾ ಕಂಪೆನಿಗಳು ರಿಯಾಯಿತಿ ನೀಡಿವೆ?
    ಹ್ಯಾಚ್‍ಬ್ಯಾಕ್, ಸೇಡನ್ ಹಾಗೂ ಎಸ್‍ಯುವಿ ತಯಾರಿಕಾ ಸಂಸ್ಥೆಗಳಾದ ಮಾರುತಿ ಸುಜುಕಿ, ಹುಂಡೈ, ಮಹೀಂದ್ರ, ಫೋರ್ಡ್ ಮತ್ತು ಟಾಟಾ ಮೋಟಾರ್ಸ್ ಹಾಗೂ ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯೂ, ಆಡಿ, ಮೆರ್ಸಿಡೀಸ್ ಬೆಂಜ್ ಸಹ ರಿಯಾಯಿತಿ ಘೋಷಿಸಿವೆ.

    ಮಾರುತಿ ಸುಜುಕಿ ಕಂಪೆನಿಯು ತನ್ನ ಮಾರುತಿ ಆಲ್ಟೋ ಕಾರಿನ ಮೇಲೆ 50 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದ್ದರೆ, ಮಹೀಂದ್ರ ಕಂಪೆನಿಯು ತನ್ನ ಸ್ಕಾರ್ಪಿಯೋ ಎಸ್‍ಯುವಿ ಮೇಲೆ 70 ಸಾವಿರ ರೂಪಾಯಿ ಕಡಿತಗೊಳಿಸಿದೆ. ಇದಲ್ಲದೇ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯೂ ತನ್ನ 7-ಸೀರಿಸ್ ಮೇಲೆ 14 ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ. ಇದಲ್ಲದೇ ಇತರೆ ಸಂಸ್ಥೆಗಳು ತಮ್ಮಲ್ಲಿ ತಯಾರಿಕೆಯಾಗುವ ಕಾರುಗಳ ಮೇಲೆ 50 ಸಾವಿರ ರೂಪಾಯಿಗಳಿಂದ 14 ಲಕ್ಷ ರೂಪಾಯಿಗಳ ವರೆಗೆ ವಿಶೇಷ ರಿಯಾಯಿತಿ ನೀಡಲಿವೆ.

    ಮಾರುತಿ ಸುಜುಕಿ ಕಂಪೆನಿಯ ಕಾರುಗಳಾದ ಬಲೆನೋ ಮೇಲೆ 25 ಸಾವಿರ ರೂಪಾಯಿ, ಆಲ್ಟೋ ಕೆ-10ಮಾದರಿಗೆ 50 ಸಾವಿರ ರೂಪಾಯಿ ಹಾಗೂ ವ್ಯಾಗನ್ ಆರ್ ಕಾರಿಗೆ 75 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದೆ.

    ಹುಂಡೈ ಕಂಪೆನಿಯ ಕಾರುಗಳಾದ ಎಲೈಟ್ ಐ-20 ಕಾರಿಗೆ 50 ಸಾವಿರ ರೂಪಾಯಿ, ಗ್ರಾಂಡ್ ಐ-10 ಕಾರಿಗೆ 75 ಸಾವಿರ ರೂಪಾಯಿ ರಿಯಾಯಿತಿ ನೀಡಿದೆ. ಇದಲ್ಲದೇ ಟಾಟಾದ ನೆಕ್ಸಾನ್ ಕಾರಿಗೆ 57 ಸಾವಿರ ರೂಪಾಯಿ, ಹೊಂಡಾದ ಹೊಂಡಾ ಸಿಟಿ ಕಾರಿನ ಮೇಲೆ 62 ಸಾವಿರ ರೂಪಾಯಿ, ರೆನಾಲ್ಟ್ ಡಸ್ಟರ್ ಮೇಲೆ 1 ಲಕ್ಷ ರೂಪಾಯಿ, ಟೊಯೋಟಾದ ಯಾರೀಸ್ ಮೇಲೆ 50 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದೆ.

    ಐಶಾರಾಮಿ ಕಾರುಗಳಾದ ಮರ್ಸಿಡೀಸ್ ಬೆಂಜ್ ಸಿಎಲ್‍ಎ ಮಾದರಿಗೆ 5.5 ಲಕ್ಷ ರೂಪಾಯಿ, ಜಿಎಲ್‍ಸಿ ಪೆಟ್ರೋಲ್ ಮಾದರಿಗೆ 6 ಲಕ್ಷ ರಿಯಾಯಿತಿ ನೀಡಿದ್ದರೆ, ಆಡಿ ಕಂಪೆನಿಯು ತನ್ನ ಆಡಿ ಎ6 ಮಾದರಿ ಮೇಲೆ 12.5 ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಹೀಂದ್ರ ಕಂಪೆನಿಯ ಅಧ್ಯಕ್ಷ ರಾಜನ್ ವಾಡೇರಾ, ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದೊಂದು ಬಂಪರ್ ಕೊಡುಗೆಯಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಆಗುತ್ತಿರುವ ನಷ್ಟ ಹಾಗೂ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

    ಹುಂಡೈ ಮತ್ತು ಮಾರುತಿ ಅಧಿಕಾರಿಗಳ ಪ್ರಕಾರ, ಜಾಗತೀಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿತ, ಏರುತ್ತಿರುವ ಇಂಧನ ದರ ಮತ್ತು ವಿಮೆ ದರಗಳ ನೀತಿಯಿಂದ ಗ್ರಾಹಕರು ವಾಹನಗಳ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ದರ ಕಡಿತಗೊಳಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿಯನ್ನು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv