Tag: ರಿಯಲ್ ಮ್ಯಾಡ್ರಿಡ್

  • ಮಾಜಿ ಫುಟ್ಬಾಲ್ ಸ್ಟಾರ್ ಜೋಸ್ ಆಂಟೋನಿಯೋ ರೆಯೆನ್ ಅಪಘಾತದಲ್ಲಿ ಸಾವು

    ಮಾಜಿ ಫುಟ್ಬಾಲ್ ಸ್ಟಾರ್ ಜೋಸ್ ಆಂಟೋನಿಯೋ ರೆಯೆನ್ ಅಪಘಾತದಲ್ಲಿ ಸಾವು

    ಮ್ಯಾಡ್ರಿಡ್: ಮಾಜಿ ಫುಟ್ಬಾಲ್ ಸ್ಟಾರ್ ಆಟಗಾರ ಜೋಸ್ ಆಂಟೋನಿಯೋ ರೆಯೆನ್ ಅವರು ಇಂದು ಸ್ಪೇನ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಇಂದು ಬೆಳಗ್ಗೆ ರೇವಿಸ್ ಸೆವೆಲ್ಲೇ ಹೊರವಲಯದಲ್ಲಿರುವ ಉಟ್ರೆರಾ ಎಂಬಲ್ಲಿ ಕಾರು ಅಪಘಾತವಾಗಿ ಸಾವನ್ನಪ್ಪಿದ್ದಾರೆ.

    35 ವರ್ಷದ ಈ ಸ್ಟಾರ್ ಆಟಗಾರ ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ಮತ್ತು ಸೆವಿಲ್ಲಾ ಕ್ಲಬ್ ಪರವಾಗಿ ಆಡುತ್ತಿದ್ದರು. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪೇನ್ ದೇಶವನ್ನು ಪ್ರತಿನಿಧಿಸುತ್ತಿದ್ದರು. ತನ್ನ 8 ವರ್ಷದ ಸೆವಿಲ್ಲಾ ಪರವಾಗಿ ಆಡಿದ ಆಟೋನಿಯೋ 2003-2004ರಲ್ಲಿ ಪ್ರಶಸ್ತಿ ಗೆದ್ದ ತಂಡದಲ್ಲಿ ಇವರು ಇದ್ದರು.

    ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸೆವಿಲ್ಲಾ ಕ್ಲಬ್ “ಈ ವಿಚಾರವನ್ನು ಹೇಳಲು ತುಂಬಾ ನೋವಾಗುತ್ತದೆ. ನಮ್ಮೆಲ್ಲಾರ ಪ್ರೀತಿ ಪಾತ್ರರಾದ ಸೆವಿಲ್ಲಾ ಸ್ಟಾರ್ ಜೋಸ್ ಆಟೋನಿಯೋ ರೆಯೆನ್ ಅವರು ಇಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದೇವರು ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ” ಎಂದು ಟ್ವೀಟ್ ಮಾಡಿದೆ.

  • ಚಾಂಪಿಯನ್ಸ್ ಲೀಗ್: ರಿಯಲ್ ಮ್ಯಾಡ್ರಿಡ್‍ಗೆ ಹ್ಯಾಟ್ರಿಕ್ ಕಿರೀಟ

    ಚಾಂಪಿಯನ್ಸ್ ಲೀಗ್: ರಿಯಲ್ ಮ್ಯಾಡ್ರಿಡ್‍ಗೆ ಹ್ಯಾಟ್ರಿಕ್ ಕಿರೀಟ

    ಕೀವ್: ತೀವ್ರ ಕುತೂಹಲ ಕೆರಳಿಸಿದ್ದ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಿಯಲ್ ಮ್ಯಾಡ್ರಿಡ್, ಇಂಗ್ಲಿಷ್ ಕ್ಲಬ್ ಲಿವರ್‍ ಪೂಲ್ ತಂಡವನ್ನು 3-1 ಗೋಲುಗಳಿಂದ ಮಣಿಸಿದೆ. ಆ ಮೂಲಕ ಸತತ ಮೂರನೇ ಬಾರಿಯೂ ಚಾಂಪಿಯನ್ಸ್ ಕಿರೀಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

    ಈ ಗೆಲುವಿನ ಮೂಲಕ ಸರ್ಗಿಯೋ ರಾಮೋಸ್ ನೇತೃತ್ವದ ಮ್ಯಾಡ್ರಿಡ್ ತಂಡ, ಯುರೋಪಿಯನ್ ಕಪ್ ಹಾಗೂ ಚಾಂಪಿಯನ್ಸ್ ಲೀಗ್ ಟೂರ್ನಿಯನ್ನು ಸತತ ಮೂರು ಬಾರಿ ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ. ರಿಯಲ್ ಮ್ಯಾಡ್ರಿಡ್‍ನ ಸ್ಟಾರ್ ಆಟಗಾರ ಗರೆಥ್ ಬೇಲ್, ನಂಬಲಸಾಧ್ಯ ಬೈಸಿಕಲ್ ಕಿಕ್ ಸೇರಿದಂತೆ ಎರಡು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಅಂತಿಮ ಹಣಾಹಣಿಯ ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಬಿರುಸಿನ ಆಟ ಕಂಡು ಬಂದರೂ, ಗೋಲು ಬಲೆಯನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಪಂದ್ಯದ 30ನೇ ನಿಮಿಷದಲ್ಲಿ ಸ್ಟಾರ್ ಸ್ಟ್ರೈಕರ್ ಮೊಹಮ್ಮದ್ ಸಲಾಹ್ ಗಾಯಗೊಂಡು ನಿವೃತ್ತರಾಗಿದ್ದು, ಲಿವರ್‍ಪೂಲ್ ತಂಡಕ್ಕೆ ತೀವ್ರ ಹಿನ್ನಡೆಯಾಗುವಂತೆ ಮಾಡಿತು. ಎದುರಾಳಿ ತಂಡದ ನಾಯಕ ರಾಮೋಸ್ ಉದ್ದೇಶಪೂರ್ವಕವಾಗಿ ಸಲಾಹ್‍ರನ್ನು ನೆಲಕ್ಕೆ ಬೀಳಿಸಿದ್ದು ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

    ಕಣ್ಣೀರಿಡುತ್ತಲೇ ಸಲಾಹ್ ಮೈದಾನದಿಂದ ಹೊರನಡೆದರು. ಪ್ರಸಕ್ತ ಸಾಲಿನಲ್ಲಿ 44 ಗೋಲುಗಳಿಸಿದ್ದ ಸಲಾಹ್, ಫೈನಲ್‍ನಲ್ಲಿ ಮ್ಯಾಡ್ರಿಡ್‍ಗೆ ಕಠಿಣ ಸವಾಲು ಒಡ್ಡಲಿದ್ದಾರೆ ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ ಕೆಟ್ಟ ಆಟದ ಮೂಲಕ ಮ್ಯಾಡ್ರಿಡ್ ನಾಯಕ ಸಲಾಹ್ ಸವಾಲ್‍ಗೆ ಬ್ರೇಕ್ ಹಾಕಿದರು.

    ಪಂದ್ಯದ ದ್ವಿತಿಯಾರ್ಧದ 50ನೇ ನಿಮಿಷದಲ್ಲಿ ಕರೀಂ ಬೆನ್ಜೆಮಾ ಗೋಲುಗಳಿಸಿ ರಿಯಲ್ ಮ್ಯಾಡ್ರಿಡ್ ಪರ ಗೋಲಿನ ಖಾತೆ ತೆರೆದರು. ಇದಾದ 4ನೇ ನಿಮಿಷದಲ್ಲಿ ಸಡಿಯೋ ಮಾನೆ ಗೋಲಿನ ಮೂಲಕ ಲಿವರ್‍ಪೂಲ್ ಸಮಬಲ ಸಾಧಿಸಿತು. ಆದರೆ ರಿಯಲ್ ಮ್ಯಾಡ್ರಿಡ್ ಪರ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಗರೇತ್ ಬೇಲ್ 63ನೇ ನಿಮಿಷದಲ್ಲಿ ಅತ್ಯಾಕರ್ಷಕ ಗೋಲು ಬಾರಿಸಿ, ರಿಯಲ್ ಮ್ಯಾಡ್ರಿಡ್‍ಗೆ ಮುನ್ನಡೆ ತಂದುಕೊಟ್ಟರು. ಪಂದ್ಯ ಮುಗಿಯಲು ಏಳು ನಿಮಿಷಗಳಿದ್ದಾಗ ಲಿವರ್‍ಪೂಲ್ ಗೋಲ್ ಕೀಪರ್ ಲಾರಿಸ್ ಕರಿಯೂಸ್ ಮಾಡಿದ ಪ್ರಮಾದದ ಸದುಪಯೋಗ ಪಡೆದುಕೊಂಡ ವೇಲ್ಸ್‍ಮನ್, ದೂರದಿಂದ ಚೆಂಡನ್ನು ಗೋಲು ಬಲೆಯೊಳಗೆ ಸೇರಿಸಿ ತಂಡಕ್ಕೆ ಹ್ಯಾಟ್ರಿಕ್ ಚಾಂಪಿಯನ್ ಪಟ್ಟದ ಜೊತೆಗೆ 13ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಗೆಲ್ಲಲು ನೆರವಾದರು.

    1974 ಹಾಗೂ 1976ರಲ್ಲಿ ಜರ್ಮನ್ ಕ್ಲಬ್ ಬಯಾರ್ನ್ ಮ್ಯೂನಿಚ್ ಸತತ ಮೂರು ಬಾರಿ ಪ್ರಶಸ್ತಿ ಗೆದ್ದ ಬಳಿಕ ಈ ಸಾಧನೆ ಮಾಡಿದ ಏಕೈಕ ತಂಡ ಎಂಬ ಖ್ಯಾತಿಗೆ ರಿಯಲ್ ಮ್ಯಾಡ್ರಿಡ್ ಪಾತ್ರವಾಯಿತು. ರಿಯಲ್ ಮ್ಯಾಡ್ರಿಡ್ ತಂಡದ ಮ್ಯಾನೇಜರ್ ಝೈನುದ್ದೀನ್ ಜಿದಾನೆ, ಸತತ ಎರಡು ಬಾರಿ ತಂಡಕ್ಕೆ ಪ್ರಶಸ್ತಿ ದೊರಕಿಸಿಕೊಟ್ಟ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಮತ್ತೊಂದೆಡೆ ಲಿವರ್‍ಪೂಲ್‍ನ ಮ್ಯಾನೇಜರ್ ಜರ್ಗನ್ ಕ್ಲೊಪ್ ಅವರು ಏಳು ಪ್ರಮುಖ ಫೈನಲ್‍ಗಳಲ್ಲಿ 6 ಫೈನಲ್‍ನ್ನೂ ಕಳೆದುಕೊಂಡಿದ್ದಾರೆ. 2012ರಲ್ಲಿ ಬೊರುಸಿಯಾ ಡಾರ್ಟ್‍ಮಂಡ್ ವಿರುದ್ಧ ಡಿಎಫ್‍ಬಿ ಪೊಕಲ್ ಪ್ರಶಸ್ತಿ ಗೆದ್ದ ಬಳಿಕ ಮತ್ತೆ ಕ್ಲೊಪ್ ಪ್ರಮುಖ ಫೈನಲ್ ಗೆದ್ದಿಲ್ಲ. ಹೀಗಾಗಿ ಚಾಂಪಿಯನ್ಸ್ ಲೀಗ್‍ನಲ್ಲಿ ಇಂಗ್ಲೀಷ್ ಕ್ಲಬ್‍ಗಳ ಮೇಲೆ ಸ್ಪ್ಯಾನೀಷ್ ತಂಡಗಳ ಪ್ರಾಬಲ್ಯ ಮುಂದುವರೆದಿದೆ. ಕಳೆದ ಏಳು ಯುಇಎಫ್‍ಎ ಕ್ಲಬ್ ಪೈಪೋಟಿಯಲ್ಲಿ ಇಂಗ್ಲೀಷ್ ಕ್ಲಬ್‍ಗಳು ಪ್ರಶಸ್ತಿ ಗೆಲ್ಲಲು ವಿಫಲವಾಗಿವೆ.