Tag: ರಾಹುಲ್ ದ್ರಾವೀಡ್

  • ದ್ರಾವಿಡ್ ಈಗ ಟೀಂ ಇಂಡಿಯಾದ ಕೋಚ್

    ದ್ರಾವಿಡ್ ಈಗ ಟೀಂ ಇಂಡಿಯಾದ ಕೋಚ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗ್ರೇಟ್ ವಾಲ್ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಜುಲೈನಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಪಂದ್ಯಗಳಿಗೆ ಭಾರತ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.

    ದ್ರಾವಿಡ್ ಈ ಹಿಂದೆ 2014ರಲ್ಲಿ ಭಾರತ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಅದಾದ ಬಳಿಕ ಇದೀಗ ಮತ್ತೆ ಭಾರತ ತಂಡಕ್ಕೆ ಸೇವೆಗೈಯುವ ಅವಕಾಶ ಸಿಕ್ಕಿದ್ದು ಅದು ಕೂಡ ತಂಡದ ಮುಖ್ಯ ಕೋಚ್ ಆಗಿ ಅವಕಾಶ ಸಿಕ್ಕಿದೆ.

    ಶ್ರೀಲಂಕಾ ಸರಣಿಗೆ ಭಾರತ ತಂಡದ ಕೋಚ್ ಆಗಿ ದ್ರಾವಿಡ್ ಅವರು ಆಯ್ಕೆಯಾಗುವುದು ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಭಾರತ ತಂಡದ ಈಗಿನ ಕೋಚ್ ರವಿಶಾಸ್ತ್ರಿ, ಭರತ್ ಅರುಣ್ ಮತ್ತು ವಿಕ್ರಮ್ ರಾಥೋರ್ ಅವರು ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಭಾರತ ತಂಡದ ಕೋಚ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಭಾರತದ ಇನ್ನೊಂದು ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಿಕೊಡಲು ಬಿಸಿಸಿಐ ತೀರ್ಮಾನಿಸಿದೆ. ಈ ತಂಡಕ್ಕೆ ದ್ರಾವಿಡ್ ಅವರನ್ನು ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

    ಶ್ರೀಲಂಕಾ ಪ್ರವಾಸಕ್ಕೆ ಭಾರತದ ಯುವ ತಂಡವನ್ನು ಕಳುಹಿಸಿಕೊಡಲು ನಿರ್ಧರಿಸಿದ್ದು, ದ್ರಾವಿಡ್ ಈ ತಂಡದ ಕೋಚ್ ಆಗಿ ಕೆಲಸ ನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಅಂಡರ್-19 ತಂಡದ ಕೋಚ್ ಆಗಿದ್ದರಿಂದಾಗಿ ಯುವ ಆಟಗಾರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಮತ್ತು ಆಟಗಾರರು ಕೂಡ ದ್ರಾವಿಡ್‍ರೊಂದಿಗೆ ಉತ್ತಮ ಒಡನಾಟ ಹೊಂದಿರುವುದರಿಂದಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

    ರಾಹುಲ್ ದ್ರಾವಿಡ್ ಅವರು 2019ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಭಾರತದ ಅಂಡರ್-19 ತಂಡ, ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದರೊಂದಿಗೆ ಭಾರತ ಯುವ ಆಟಗಾರರಿಗೆ ಉತ್ತಮವಾದ ಮಾರ್ಗದರ್ಶನ ನೀಡಿ ಭಾರತ ತಂಡವನ್ನು ಬಲಿಷ್ಠವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

    ಶ್ರೀಲಂಕಾ ಸರಣಿಗಾಗಿ ಭಾರತ ತಂಡವನ್ನು ಈ ತಿಂಗಳ ಅಂತ್ಯಕ್ಕೆ ಆಯ್ಕೆ ಮಾಡವ ನಿರೀಕ್ಷೆ ಇದ್ದು, ಈ ಸರಣಿಯಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಯುವ ಭಾರತ ತಂಡ ಆಡಲಿದೆ. ಜುಲೈ 13ರಿಂದ ಸರಣಿ ಆರಂಭಗೊಳ್ಳಲಿದೆ.

    ಭಾರತದ ಇನ್ನೊಂದು ತಂಡ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕಾಣಿಸಿಕೊಳ್ಳಲಿದೆ. ಈ ತಂಡವನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದ್ದು ಈ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ.