– 6 ಎಸೆತಗಳು ಇರುವಂತೆಯೇ 204 ರನ್ ಹೊಡೆದ ಭಾರತ
– ಶ್ರೇಯಸ್ ಅಯ್ಯರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ
ಆಕ್ಲೆಂಡ್: ಕೆ.ಎಲ್.ರಾಹುಲ್ ಹಾಗೂ ಅಯ್ಯರ್ ಸ್ಫೋಟಕ ಅರ್ಧಶತಕ, ವಿರಾಟ್ ಕೊಹ್ಲಿ ತಾಳ್ಮೆಯ ಬ್ಯಾಟಿಂಗ್‍ನಿಂದ ಟೀಂ ಇಂಡಿಯಾ 6 ವಿಕೆಟ್‍ಗಳ ಜಯ ಸಾಧಿಸಿದೆ.
ಈಡನ್ ಪಾರ್ಕ್ ನಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 203 ರನ್ ಗಳ ಭಾರೀ ಮೊತ್ತವನ್ನು ಬೆನ್ನಟ್ಟಿದ ಭಾರತ 6 ಎಸೆತಗಳು ಬಾಕಿ ಇರುವಂತೆ 204 ರನ್ ಗಳಿಸಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕೆ.ಎಲ್.ರಾಹುಲ್ 56 ರನ್ (27 ಎಸೆತ, 4 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ 45 ರನ್ (32 ಎಸೆತ, 3 ಬೌಂಡರಿ, ಸಿಕ್ಸ್), ಶ್ರೇಯಸ್ ಅಯ್ಯರ್ ಔಟಾಗದೆ 58 ರನ್ ( 29 ಎಸೆತ, 3 ಸಿಕ್ಸರ್) ಹಾಗೂ ಮನೀಶ್ ಪಾಂಡೆ ಔಟಾಗದೇ 14 ರನ್ (12 ಎಸೆತ, 1 ಸಿಕ್ಸ್) ಗಳಿಸಿದರು. ಟೀಂ ಇಂಡಿಯಾದ ಎಲ್ಲ ಆಟಗಾರರು ಈ ಪಂದ್ಯದಲ್ಲಿ ಸಿಕ್ಸ್ ಹೊಡೆದಿರುವುದು ವಿಶೇಷ. ಕೆ.ಎಲ್.ರಾಹುಲ್ ಹಾಗೂ ಅಯ್ಯರ್ ತಲಾ 3 ಸಿಕ್ಸರ್ ಸಿಡಿಸಿದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ದುಬೆ, ಮನೀಷ್ ಪಾಂಡೆ ತಲಾ ಒಂದೊಂದು ಸಿಕ್ಸ್ ಹೊಡೆದರು.
ಕೀವಿಸ್ ತಂಡ ನೀಡಿದ್ದ 204 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ಆಘಾತದಕ್ಕೆ ಒಳಗಾಯಿತು. 7 ರನ್ ಗಳಿಸಿದ್ದ ಹಿಟ್‍ಮ್ಯಾನ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಆಗ ಮೈದಾಕ್ಕಿಳಿದ ವಿರಾಟ್ ಕೊಹ್ಲಿ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದರು. ಸ್ಫೋಟಕ ಬ್ಯಾಟಿಂಗ್ ತೋರಿದ ಕೆ.ಎಲ್.ರಾಹುಲ್ 23ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಸ್ಫೋಟಕ ಅರ್ಧಶತಕ ದಾಖಲಿಸಿದರು. ಆದರೆ ಇನ್ನಿಂಗ್ಸ್ ನ 10ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಇವರಿಬ್ಬರು ಎರಡನೇ ವಿಕೆಟಿಗೆ 51 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿದರು. ತಂಡದ ಮೊತ್ತ 115 ರನ್ ಆಗಿದ್ದಾಗ ರಾಹುಲ್ ಔಟಾದರೆ 121 ರನ್ ಆದಾಗ 45 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.
ಬಳಿಕ ಮೈದಾಕ್ಕಿಳಿದ ಶಿವಂ ದುಬೈ 13 ರನ್ (9 ಎಸೆತ, ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಶ್ರೇಯಸ್ ಅಯ್ಯರ್ ಅವರಿಗೆ ಮನೀಶ್ ಪಾಂಡೆ ಸಾಥ್ ನೀಡಿದರು. ಈ ಜೋಡಿ ವಿಕೆಟ್ ಕಾಯ್ದುಕೊಂಡು ತಂಡದ ಗೆಲುವಿಗೆ ಪಾತ್ರರಾದರು. ಶ್ರೇಯಸ್ ಅಯ್ಯರ್ ಔಟಾಗದೆ 58 ರನ್ ಹಾಗೂ ಮನೀಶ್ ಪಾಂಡೆ 14 ರನ್ ಗಳಿಸಿದರು. ಇನ್ನಿಂಗ್ಸ್ ನ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಸಿಕ್ಸ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವು ಕಾಲಿನ್ ಮನ್ರೊ 59 ರನ್ (42 ಎಸೆತ, 6ಬೌಂಡರಿ, 2 ಸಿಕ್ಸರ್), ಕೇನ್ ವಿಲಿಯಮ್ಸನ್ 51 ರನ್ (26 ಎಸೆತ, 4 ಬೌಂಡರಿ, 4 ಸಿಕ್ಸರ್), ರಾಸ್ ಟೇಲರ್ 54 ರನ್ (27 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ಮಾರ್ಟಿನ್ ಗಪ್ಟಿಲ್ 30 ರನ್ (19 ಎಸೆತ, 4 ಬೌಂಡರಿ, ಸಿಕ್ಸ್) ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 203 ರನ್ ಪೇರಿಸಿತ್ತು. 58 ರನ್ ಹೊಡೆದು ಜಯದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಶ್ರೇಯಸ್ ಅಯ್ಯರ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಧೋನಿಯನ್ನು ಹಿಂದಿಕ್ಕಿದ ವಿಲಿಯಮ್ಸನ್:
ನಾಯಕನಾಗಿ ಟಿ20ಯಲ್ಲಿ ಅತಿ ಹೆಚ್ಚು ಗಳಿಸಿ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಈ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ ಅಗ್ರಸ್ಥಾನದಲ್ಲಿದ್ದಾರೆ. ಡು ಪ್ಲೆಸಿಸ್ 1,273 ರನ್ ಗಳಿಸಿ ಮುಂಚೂಣಿಯಲ್ಲಿ ಇದ್ದಾರೆ. ಈ ಪಂದ್ಯದಲ್ಲಿ 51 ಗಳಿಸುವ ಮೂಲಕ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನಕ್ಕೆ ಏರಿದ್ದಾರೆ. ವಿಲಿಯಮ್ಸನ್ ನಾಯಕನಾಗಿ ಟಿ20ಯಲ್ಲಿ 1134 ರನ್ ಗಳಿಸಿದ್ದಾರೆ. ಮೂರನೇ ಸ್ಥಾನಕ್ಕೆ ಕುಸಿದಿರುವ ಎಂ.ಎಸ್.ಧೋನಿ 1,112 ರನ್ ಗಳಿಸಿದ್ದರು. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 1,077 ರನ್ ಗಳಿಸಿದ್ದಾರೆ.
ಆಕ್ಲೆಂಡ್ ಮೈದಾನ ಬಹಳ ಸಣ್ಣಾಗಿದ್ದು ಈ ಸ್ಟೇಡಿಯಂನಲ್ಲಿ ರಗ್ಬಿ ಆಡಲು ಬಳಕೆ ಮಾಡುತ್ತಾರೆ. ಪಿಚ್ ನಿಂದ ಬೌಂಡರಿಗೆ 55 ಮೀಟರ್ ದೂರವಿದೆ. ಹೀಗಾಗಿ ಈ ಪಿಚ್ ನಲ್ಲಿ ಬ್ಯಾಟ್ಸ್ ಮನ್ ಗಳು ಬೌಂಡರಿ, ಸಿಕ್ಸರ್ ಗಳನ್ನು ಸುಲಭವಾಗಿ ಹೊಡೆಯುತ್ತಾರೆ.
ಭಾರತದ ರನ್ ಏರಿದ್ದು ಹೇಗೆ?
ಎಸೆತ – ರನ್
29 ಎಸೆತ – 50 ರನ್
53 ಎಸೆತ – 100 ರನ್
90 ಎಸೆತ – 150 ರನ್
114 ಎಸೆತ – 204 ರನ್