Tag: ರಾಸಾಯನಿಕ

  • ಕಿಡಿಗೇಡಿಗಳಿಂದ ರಾಸಾಯನಿಕ ಮಿಶ್ರಣ – ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

    ಕಿಡಿಗೇಡಿಗಳಿಂದ ರಾಸಾಯನಿಕ ಮಿಶ್ರಣ – ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

    ಹಾವೇರಿ: ಬ್ಯಾಡಗಿ ಪುರಸಭೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಗೆದ್ದ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿದ್ದ 16 ಬಿಜೆಪಿ ಕಾರ್ಯಕರ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬ್ಯಾಡಗಿ ಪಟ್ಟಣದ 15 ಮತ್ತು 16ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಹನುಮಂತಪ್ಪ ಮತ್ತು ಸುಭಾಶ್ ಜಯಗಳಿಸಿದ್ದರು. ಈ ವೇಳೆ ಅಭಿಮಾನಿಗಳು ಬಣ್ಣದ ನೀರನ್ನು ಎಸೆದು ಸಂಭ್ರಮಿಸಿದ್ದಾರೆ. ಬಣ್ಣದ ನೀರಿಗೆ ಯಾರೋ ಕಿಡಿಗೇಡಿಗಳು ರಾಸಾಯನಿಕ ಮಿಶ್ರಣ ಮಾಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಅಸ್ವಸ್ಥರಾಗಿದ್ದಾರೆ.

    16 ಮಂದಿ ಕಾರ್ಯಕರ್ತರು ಅಲರ್ಜಿ, ಮೈ ಕೆರೆತದಿಂದ ಬಳಲುತ್ತಿದ್ದು ಅಸ್ವಸ್ಥರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಹಾಗೂ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

    ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ – ವ್ಯಕ್ತಿ ಬಲಿ, ದೇಹ ಛಿದ್ರ

    ಬೆಂಗ್ಳೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ – ವ್ಯಕ್ತಿ ಬಲಿ, ದೇಹ ಛಿದ್ರ

    ಬೆಂಗಳೂರು: ವೈಯಾಲಿಕಾವಲ್ ನಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

    ವೆಂಕಟೇಶ್ ಸ್ಫೋಟದಿಂದ ಸಾವನ್ನಪ್ಪಿದ ವ್ಯಕ್ತಿ. ಸ್ಫೋಟದ ರಭಸಕ್ಕೆ ದೇಹದ ಕತ್ತು ಮತ್ತು ಕೈ ಛಿದ್ರಗೊಂಡಿದೆ. ಸ್ಫೋಟಕ್ಕೆ ಕಾರಣವಾದ ವಸ್ತು ಯಾವುದು ಎನ್ನುವುದು ತಿಳಿದುಬಂದಿಲ್ಲ.

    ಸ್ಫೋಟ ಸಂಭವಿಸಿದ ಕೂಡಲೇ ಸ್ಥಳಕ್ಕೆ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಬಾಂಬ್ ನಿಷ್ಕ್ರೀಯ ದಳ, ವಿಧಿ ವಿಜ್ಞಾನ ತಂಡ(ಎಫ್‍ಎಸ್‍ಎಲ್) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಭೇಟಿ ನೀಡಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಬೆಳಗ್ಗೆ 9:15ಕ್ಕೆ ಸ್ಫೋಟ ಸಂಭವಿಸಿದೆ. ಶಾಸಕ ಮುನಿರತ್ನ ಅವರ ಕಚೇರಿ ಬಳಿ ಸ್ಫೋಟಗೊಂಡಿದೆ. ಕಚೇರಿಯ ಒಳಗೂ, ಹೊರಗೂ ಆಗಿಲ್ಲ. ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಎಫ್‍ಎಸ್‍ಎಲ್ ತಂಡ ಪರಿಶೀಲನೆ ನಡೆಸಿದ ನಂತರ ನಿಜವಾದ ಸಂಗತಿ ಗೊತ್ತಾಗಲಿದೆ. ವೆಂಕಟೇಶ್ ದೋಬಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿಸಿದರು.

    ಶಾಸಕ ಮುನಿರತ್ನ ಪ್ರತಿಕ್ರಿಯಿಸಿ, ಊಹಾಪೋಹದ ಬಗ್ಗೆ ಚರ್ಚೆ ಮಾಡುವುದು ಬೇಡ. ವೆಂಕಟೇಶ್ ತಂದೆ ನನ್ನ ತಂದೆ ಬಾಲ್ಯ ಸ್ನೇಹಿತರು. ನಾವು ಕೂಡ ಜೊತೆಯಲ್ಲೇ ಬೆಳೆದಿದ್ದೇವೆ. ಅವನಿಗೆ ಹೀಗಾಗಿರೋದು ಬಹಳ ನೋವಿದ್ದು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ರಾಜಕಾರಣಿ ಮನೆ ಬಳಿ ಆಗಿದೆ ಎನ್ನುವ ಊಹಾಪೋಹ ಬೇಡ ಎಂದು ಹೇಳಿದರು.

    ರಾಸಾಯನಿಕ ಒಂದು ಸ್ಫೋಟಗೊಂಡಿದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ರಾಸಾಯನಿಕ ಯಾವುದು ಎನ್ನುವುದನ್ನು ತಿಳಿಯಲು ಪೊಲೀಸರು ಈಗ ವೈದ್ಯರ ಮೊರೆ ಹೋಗಿದ್ದಾರೆ.

  • ಮಾವಿನ ಹಣ್ಣು ತಿನ್ನೋ ಮುನ್ನ ಎಚ್ಚರ!

    ಮಾವಿನ ಹಣ್ಣು ತಿನ್ನೋ ಮುನ್ನ ಎಚ್ಚರ!

    ಬೆಂಗಳೂರು: ಮಾವು ಎಂದು ಮಾವಿನ ಹಣ್ಣಿನ ಸೀಸನ್‍ನಲ್ಲಿ ಚಪ್ಪರಿಸಿಕೊಂಡು ತಿನ್ನೋರು ಈ ಸುದ್ದಿ ಓದಿ. ಯಾಕೆಂದರೆ ರಸಭರಿತ ಕಲರ್ ಫುಲ್ ಮಾವಿನ ಬಣ್ಣ ಟೇಸ್ಟ್ ಹಿಂದೆ ಜೀವತೆಗೆಯುವ ವಿಷ ಇದೆ. ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ವಿಷದ ಮಾವಿನ ಅಸಲಿ ಮುಖ ಸೆರೆಯಾಗಿದೆ.

    ವಿಷದ ರಾಸಾಯನಿಕವನ್ನು ಬಳಸಿ ಎಳೆಯ ಮಾವು ಬೇಗ ಮಾಗುವಂತೆ ಮಾಡುತ್ತಾರೆ. ಅಲ್ಲದೆ ಇದರಿಂದ ಮಾವು ಕಲರ್ ಕೂಡ ಬರುತ್ತೆ. ಗ್ರಾಹಕರನ್ನು ಮರಳು ಮಾಡಲು ಈ ರೀತಿಯ ವಿಷದ ರಾಸಾಯನಿಕ ಬೆರೆಸುತ್ತಾರೆ. ಅಂದಹಾಗೆ ಬೆಂಗಳೂರಿನ ಜೆಸಿ ರಸ್ತೆಯ ಬೃಹತ್ ಮಾವುಗಳ ಶಾಪ್‍ನಲ್ಲಿ ಈ ರೀತಿ ವಿಷ ಬೆರೆಸಲಾಗುತ್ತಿದ್ದು, ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.

    ಹಣದ ಆಸೆಗಾಗಿ ಕಾಯಿ ಇರುವ ಮಾವಿನಹಣ್ಣನ್ನು ಮಾಗುವಂತೆ ಮಾಡುತ್ತಾರೆ. ಮರದಿಂದ ಇಳಿಸಿದ ಮಾವಿನಕಾಯಿಗಳಿಗೆ ಮೋಸ್ಟ್ ಡೇಂಜರಸ್ ಕಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಹಾಗೂ ಇಥ್ರೇಲ್‍ನ್ನು ಹಾಕಿ ಮಾಗುವಂತೆ ಮಾಡ್ತಾರೆ. ಇಂತಹ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

    ವಿಷದ ಹಣ್ಣು ತಿಂದ್ರೆ ಏನಾಗಬಹುದು?
    * ಕಾರ್ಬೈಡ್ ರಾಸಾಯನಿಕ ಬೆರೆಸಿದ ಮಾವು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ
    * ಹೊಟ್ಟೆನೋವು, ವಾಂತಿ ಭೇದಿಯಾಗುವ ಸಾಧ್ಯತೆ
    * ಬಾಯಿಹುಣ್ಣು, ಬಾಯಿ ಕ್ಯಾನ್ಸರ್, ಕರುಳುಬೇನೆಯಂತಹ ಮಾರಣಾಂತಿಕ ಕಾಯಿಲೆಯೂ ಬರಬಹುದು

    ಈಗ ರಾಸಾಯನಿಕ ಬಳಸಿಯೇ ಮಾವಿನ ಹಣ್ಣನ್ನು ಮಾಗಿಸೋದು ಕಾಮನ್ ಆಗಿದೆ. ಆದ್ದರಿಂದ ಮಾವಿನ ಹಣ್ಣನ್ನು ತಿನ್ನೋವಾಗ ಜೋಪಾನವಾಗಿರಿ. ಅಲ್ಲದೆ ಸಾಧ್ಯವಾದಷ್ಟು ಹಣ್ಣನ್ನು ತೊಳೆದು ತಿನ್ನೋದನ್ನು ರೂಢಿಸಿಕೊಳ್ಳಿ.

  • ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಕೆಲ ದಿನಗಳಲ್ಲಿ ಬಣ್ಣಗಳ ಹೋಳಿ ಹಬ್ಬ ಬಂದೇ ಬಿಡುತ್ತದೆ. ಎಲ್ಲರೂ ಓಕುಳಿ ಹಬ್ಬದಲ್ಲಿ ಮಿಂದೇಳಲು ಈಗಿನಿಂದಲೇ ಸಿದ್ಧರಾಗುತ್ತಿದ್ದೀರ. ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಬಣ್ಣದ ಹಬ್ಬವನ್ನು ಆಚರಿಸುತ್ತೇವೆ. ವಿಶೇಷ ಪೂಜೆ ಮಾಡಿ ಸಿಹಿ ಹಂಚಿ ಕಾಮನ ದಹನ ಮಾಡಿ ಸಂಭ್ರಮಿಸುತ್ತೇವೆ. ಜೊತೆಗೆ ಎಲ್ಲದರಗಿಂತ ಮಿಗಿಲಾಗಿ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಫುಲ್ ಎಂಜಾಯ್ ಮಾಡುತ್ತೀರಿ.

    ಆದರೆ ಎಲ್ಲಿಂದರಲ್ಲಿ ಕಡಿಮೆ ಬೆಲೆಗೆ ಸಿಗುವ ಬಣ್ಣಗಳ ಖರೀದಿ ಬಗ್ಗೆ ಎಚ್ಚರವಿರಬೇಕು. ಕೆಲ ಹೊತ್ತಿನ ಬಣ್ಣ ಬದುಕಿನ ರಂಗನ್ನೇ ಕಿತ್ತುಕೊಳ್ಳಬಾರದು. ಹೀಗಾಗಿ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ದೂರವಿದ್ದರೆ ಒಳಿತು. ನಿಮ್ಮ ಚರ್ಮ, ತ್ವಚೆ, ಕೂದಲಿನ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆ ವಹಿಸಬೇಕು. ಹಾಗಾದರೆ ಆರೋಗ್ಯಕರ ಕಲರ್ ಫುಲ್ ಹೋಳಿಯಾಟ ಹೇಗೆ ಆಡಬೇಕು ಎಂಬ ಬಗ್ಗೆ ಸರಳವಾದ ಸಲಹೆಗಳು ನಿಮಗಾಗಿ. ಒಮ್ಮೆ ಈ ಸಲಹೆಗಳನ್ನು ಪಾಲಿಸಿ ನೋಡಿ ನೀವು ಕಾಮನ ಹಬ್ಬಕ್ಕಿಂತಲೂ ಹೆಚ್ಚು ಸಂಭ್ರಮಿಸುತ್ತೀರ.

    ಸಲಹೆಗಳು:
    * ಮೊಟ್ಟಮೊದಲಿಗೆ ಹೋಳಿ ಹಬ್ಬಕ್ಕೆ ಪರಿಸರ ಸ್ನೇಹಿ ಬಣ್ಣ ಬಳಸಿರಿ.
    * ಒತ್ತಾಯದಿಂದ ಬಣ್ಣ ಎರಚುವುದು, ತಲೆ ಮೇಲೆ ಮೊಟ್ಟೆ ಒಡೆಯುವುದು, ಕೊಳತೆ ತರಕಾರಿ ಬಳಕೆ ಬೇಡ.
    * ಚರ್ಮದ ಸಮಸ್ಯೆ ಹಾಗೂ ಅಲರ್ಜಿ ಇರುವವರು ಬಣ್ಣದಾಟದಿಂದ ಹೊರಗಿದ್ದರೆ ಒಳಿತು. ಇಲ್ಲವಾದಲ್ಲಿ ಧೂಳು, ರಾಸಾಯನಿಕ ನಿಮ್ಮ ದೇಹ ಸೇರಿ ಉಸಿರಾಟ ಸಮಸ್ಯೆ, ಕೆಮ್ಮು, ಅಸ್ತಮಾ ಸಮಸ್ಯೆ ಎದುರಾಗಬಹುದು.
    * ಆಚರಣೆ ಬಳಿಕ ಉತ್ತಮವಾದ ಸೋಪ್ ಬಳಿಸಿ ಸ್ನಾನ ಮಾಡುವುದು ಅಗತ್ಯ.
    * ರಾಸಾಯನಿಕ ಮಿಶ್ರಣದ ಬಣ್ಣದ ಬಳಕೆಯಿಂದ ಕಣ್ಣಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ನ್ಯಾಚುರಲ್ ಕಲರ್ ಬಳಸಬೇಕು. ಕಣ್ಣಿನ ಹಾನಿ ತಪ್ಪಿಸಲು ಕನ್ನಡಕ ಬಳಸಿ.

    * ಒಂದು ವೇಳೆ ಕಣ್ಣಿಗೆ ಬಣ್ಣ ಬಿದ್ದರೆ, ಕಣ್ಣನ್ನು ಉಜ್ಜುವುದು, ರಬ್ ಮಾಡುವುದು ಮಾಡಲೇ ಬಾರದು. ಎರಡೂ ರೆಪ್ಪೆಗಳನ್ನು ಅಗಲವಾಗಿ ತೆರೆದು ಶುದ್ಧ ನೀರಿನಿಂದ ತೊಳೆಯಬೇಕು.
    * ಸಾವಯವ ಬಣ್ಣಗಳನ್ನು ಮನೆಯಲ್ಲೇ ತಯಾರಿಸಬಹುದು. ಗೋರಂಟಿ ಸೊಪ್ಪು, ಚೆಂಡು ಹೂ, ಅರಿಶಿನ ಪುಡಿ ಬಳಸಿ ಮನೆಯಲ್ಲಿ ಬಣ್ಣ ತಯಾರಿಸಬಹುದು.
    * ಹೋಳಿ ವೇಳೆ ತುಂಬು ತೋಳಿನ ಬಟ್ಟೆ ಧರಿಸಿದ್ದರೆ ಉತ್ತಮ.
    * ಮಕ್ಕಳು ಬಣ್ಣ ಆಡುವಾಗ ಪಾಲಕರು ಜಾಗೃತೆ ವಹಿಸಿರಿ.
    * ಮುಖ, ತೋಳು, ಕಾಲುಗಳು ಮತ್ತು ಚರ್ಮದ ಯಾವುದೇ ತೆರೆದ ಭಾಗಕ್ಕೆ ಕ್ರೀಮ್ ಹಚ್ಚಿ ಹೊರಡಿ.
    * ಕಣ್ಣುಗಳ ರಕ್ಷಣೆಗಾಗಿ ಸನ್‍ಗ್ಲಾಸ್ ಧರಿಸುವುದು ಉತ್ತಮ.

    * ಕಡುಗಾಢವಾದ ಬಣ್ಣಗಳ ಬಳಕೆ ಬೇಡ. ರಾಸಾಯನಿಕಗಳ ಬಳಕೆ ಹೆಚ್ಚಿರುವುದರಿಂದ ಹಾನಿಯೂ ಹೆಚ್ಚಿರುತ್ತದೆ..
    * ದೇಹದ ತೆರೆದ ಭಾಗದಲ್ಲಿ ಬಣ್ಣ ತಗುಲಿ ತುರಿಕೆ, ಕೆರೆತ, ನವೆ ಉಂಟಾದರೆ ತಕ್ಷಣವೇ ಶುದ್ಧ ನೀರಿನಿಂದ ತೊಳೆದುಕೊಳ್ಳಿ.
    * ಮುಖಕ್ಕೆ ತಗುಲಿರುವ, ಅಂಟಿರುವ ಬಣ್ಣ ತೆಗೆಯಲು ಮೊದಲು ಮುಖವನ್ನು ತಣ್ಣೀರಿನಲ್ಲಿ ಅದ್ದಿ ಬಳಿಕ ಸೌಮ್ಯವಾದ ಕ್ರೀಮ್ ಹಚ್ಚಿ, ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಮುಖಕ್ಕೆ ಅಂಟಿರುವ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.

    * ಹಾಲಿಗೆ ಸೂರ್ಯಕಾಂತಿ, ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಯಾವುದಾದರೊಂದು ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಚರ್ಮಕ್ಕೆ ಹಚ್ಚಿ. ಇದರಿಂದ ಮುಖ ಮಾತ್ರವಲ್ಲದೇ, ದೇಹದಿಂದಲೂ ಬಣ್ಣವನ್ನು ತೆಗೆಯಬಹುದಾಗಿದೆ
    * ಜೊತೆಗೆ ಅರ್ಧ ಕಪ್ ಗಟ್ಟಿ ಮೊಸರಿಗೆ 2 ಚಮಚ ಜೇನುತುಪ್ಪ ಹಾಗೂ ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮುಖ, ಕುತ್ತಿಗೆಗೆ ಹಚ್ಚಿ ಸುಮಾರು ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ತೊಳೆಯುವುದರಿಂದ ಅಂಟಿರುವ ಬಣ್ಣ ಹೋಗುತ್ತದೆ. ಚರ್ಮದ ತಾಜತೆ ಹಾಗೇ ಉಳಿದಿರುತ್ತದೆ.

    ಇನ್ನು ಓಕುಳಿಯಾಟದ ವೇಳೆ ಕೂದಲಿಗಾಗುವ ಹಾನಿಯನ್ನು ತಡೆಯಬೇಕಾದ್ರೆ:
    * ಕೂದಲಿಗೆ ಬಣ್ಣವಾದಲ್ಲಿ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಕೂದಲಿಗೆ ಅಂಟಿಕೊಂಡಿದ್ದ ಬಣ್ಣ ಹೋಗೋವರೆಗೂ ನಿಧಾನವಾಗಿ ಉಜ್ಜಿ ತೊಳೆಯಬೇಕು.
    * ಗಟ್ಟಿ ಮೊಸರಿನಲ್ಲಿ ಮೆಂತ್ಯಕಾಳುಗಳನ್ನು ನೆನಸಿಡಿ. 5-10 ನಿಮಿಷದ ನಂತರ ಅದನ್ನು ತಲೆಗೆ ಹಚ್ಚಿ ಅರ್ಧಗಂಟೆ ಹಾಗೇ ಬಿಡಬೇಕು. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
    * ಪರಸ್ಪರ ಬಣ್ಣ ಎರಚಾಡುವುದಕ್ಕೂ ಮುಂಚೆಯೇ ಹೇರ್ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮೆದುಳಿನ ರಕ್ತ ಸಂಚಲನ ಹೆಚ್ಚಾಗಿ, ಕೂದಲಿನ ಬುಡ ಗಟ್ಟಿಯಾಗುತ್ತದೆ.
    * ಬೆಚ್ಚಗಿನ ಕೊಬ್ಬರಿಯನ್ನು ತಲೆಕೂದಲಿಗೆ ಹಚ್ಚಿ, ಕೂದಲ ಬುಡಕ್ಕೆ ಮಸಾಜ್ ಮಾಡಬೇಕು. ಇದರಿಂದ ಕೂದಲಿಗೆ ರಾಸಾಯನಿಕ ಮಿಶ್ರಿತ ಬಣ್ಣ ಅಂಟುವುದನ್ನು ತಡೆಯಬಹುದು.
    * ಓಕುಳಿಯಾಟದ ವೇಳೆ ಕೂದಲು ಬಿಡುವ ಬದಲಾಗಿ ಕೂದಲನ್ನು ಒಟ್ಟು ಮಾಡಿ ಜಡೆ ಎಣೆದುಕೊಂಡರೆ ಉತ್ತಮ.

    ಹೋಳಿ ಹಬ್ಬದಲ್ಲಿ ಬಣ್ಣ ಎರಚಾಡಲು ತಯಾರಿ ಇಲ್ಲದಿದ್ದರೆ ಏನಾಗುತ್ತೆ?:
    * ನಿಮ್ಮ ಅವಶ್ಯಕತೆಯೆ, ಕ್ರೇಜ್‍ಅನ್ನೇ ಬಂಡವಾಳ ಮಾಡಿಕೊಂಡು ಮಾರುಕಟ್ಟೆಯಲ್ಲಿ ಮನಸೋಇಚ್ಛೆ ಕಲರ್‍ಗಳು ದಾಂಗುಡಿ ಇಟ್ಟಿವೆ. ಇದರಿಂದ ಎಚ್ಚರವಾಗಿರಬೇಕು. ಇಲ್ಲವಾದಲ್ಲಿ ತೊಂದರೆ ಕಟ್ಟಿಟ್ಟಬುತ್ತಿ.
    * ಕ್ವಾಲಿಟಿ ಇಲ್ಲದ ಬಣ್ಣಗಳ ಬಳಕೆಯಿಂದ ಚರ್ಮದ ಸಮಸ್ಯೆ, ಉಸಿರಾಟದ ಸಮಸ್ಯೆ, ಕಣ್ಣಿನ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಇವೆ.
    * ಸಾಮಾನ್ಯವಾಗಿ ಬಣ್ಣಗಳಲ್ಲಿ ಟಾಕ್ಸಿಕ್ ರಾಸಾಯನಿಕ ಇರುವುದರಿಂದ ಅದು ಕಣ್ಣಿಗೆ ಬಿದ್ದ ಕೂಡಲೇ ಕಣ್ಣು ಕೆಂಪಗಾಗುವುದು, ನೋಯುವುದು, ಇಲ್ಲವೆ ಕಣ್ಣಿನ ಕಣ್ಣಗುಡ್ಡೆಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ.
    * ಅಸ್ತಮಾ, ಉಸಿರಾಟದ ತೊಂದರೆ ಇರುವವರು ಶ್ವಾಸಕೋಶದ ತೊಂದರೆ ಅನುಭವಿಸಬೇಕಾಗುತ್ತದೆ.
    * ಬಣ್ಣ ಗುಣಮಟ್ಟದಲ್ಲವಾದರೆ ಅಲರ್ಜಿ, ತುರಿಕೆಯಂತಹ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

    ಯಾವ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಯವ್ಯಾವ ತೊಂದರೆಗಳು ಉಂಟಾಗುತ್ತೆ:
    * ಹಸಿರು ರಾಸಾಯನಿಕ ಬಣ್ಣದಲ್ಲಿರುವ ಕಾಪರ್ ಸಲ್ಫೇಟ್ – ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ.
    * ನೇರಳೆ ರಾಸಾಯನಿಕ ಬಣ್ಣದಲ್ಲಿರುವ ಕ್ರೋಮಿಯಂ ಅಯೋಡೈಡ್ – ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತೆ.
    * ಕಪ್ಪು ರಾಸಾಯನಿಕ ಬಣ್ಣದಲ್ಲಿರುವ ಲೆಡ್ ಆಕ್ಸೈಡ್ – ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತೆ.
    * ಕೆಂಪು ರಾಸಾಯನಿಕ ಬಣ್ಣದಲ್ಲಿರುವ ಮಕ್ರ್ಯೂರಿಕ್ ಸಲ್ಫೇಟ್ – ಚರ್ಮ ಸಮಸ್ಯೆಗೆ ಕಾರಣವಾಗುತ್ತೆ
    * ಸಿಲ್ವರ್ ರಾಸಾಯನಿಕ ಬಣ್ಣದಲ್ಲಿರುವ ಅಲ್ಯುಮಿನಿಯಂ ಬ್ರೋಮೈಡ್ – ತುರಿಕೆ, ಕೆರೆತ ಸಮಸ್ಯೆಗೆ ಕಾರಣವಾಗುತ್ತೆ.

  • ಒಂದೂವರೆ ಎಕರೆ ಜಮೀನಿನಲ್ಲಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಮಾದರಿಯಾಗಿದ್ದಾರೆ ಕೋಲಾರದ ಮಹಿಳೆ!

    ಒಂದೂವರೆ ಎಕರೆ ಜಮೀನಿನಲ್ಲಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಮಾದರಿಯಾಗಿದ್ದಾರೆ ಕೋಲಾರದ ಮಹಿಳೆ!

    ಕೋಲಾರ: ಕೆರೆಗಳ ನಾಡು ಕೋಲಾರದಲ್ಲಿ ಮಳೆಯನ್ನೇ ಆಧರಿಸಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಮಹಿಳೆಯೊಬ್ಬರು `ಮಾದರಿ ರೈತ ಮಹಿಳೆ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಚಿನ್ನದ ನಾಡು ಕೋಲಾರದಲ್ಲಿ ಆದರ್ಶ ರೈತ ಮಹಿಳೆಯೊಬ್ಬರು ಸುಮಾರು 60 ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತೊಂಡಹಳ್ಳಿ ಗ್ರಾಮದ ರಾಜಮ್ಮ ಈ ಆದರ್ಶ ಮಹಿಳೆ.

    ಕೋಲಾರದಲ್ಲಿ ಮಳೆಯ ಪ್ರಮಾಣ ಅಷ್ಟೇನೂ ಹೇಳಿಕೊಳ್ಳುವಂಥದ್ದೇನಲ್ಲ. ಮುಂಗಾರು ಮಳೆಯನ್ನೇ ಆಧರಿಸಿ ರೈತ ಮಹಿಳೆ ರಾಜಮ್ಮ, ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ 60 ವರ್ಷಗಳಿಂದ ಸುಮಾರು 50 ರಿಂದ 60 ರೀತಿಯ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

    ತಮ್ಮ ದೈನಂದಿನ ಬದುಕಿಗೆ ಬೇಕಾದ ರಾಗಿ, ಜೋಳ, ಅವರೆ, ಗೊಂಗುರು, ಬುಷ್ ಬಿನ್ಸ್, ಚಿಕ್ಕಕುಂಬಳಕಾಯಿ, ಕೆಂಪುಮುದ್ರೆ ಜೋಳ, ಹಳಸಂದ್ರ, ಸಾಮೆ, ಕಪ್ಪು ಸಾಮೆ, ಔಡಲ ಬೀಜ, ಬರುಗು ಸಾಮಿ, ಕಾಕಿ ಜೋಳ, ಕಿರು ಹಳೆಸಂದ್ರೆ, ತಬೆ ಬೀಜ, ನುಗ್ಗೆಬೀಜ, ಅವರೆ ಬೀಜ, ಸಚೆ ಬೀಜ, ಬಿಳಿ ನವೆ, ಊದಲು ಬೀಜ,ಕೆಂಪು ನವಣೆ, ಎಳ್ಳು, ರಾಗಿ ಬೀಳು, ಗಿಡ್ಡ ರಾಗಿ, ಬೀಟ್ರೋರಟ್, ಅರಿಸಿನ, ಟಮೋಟೊ, ಸೌತೆಕಾಯಿ, ಅರಿಸಿನ ಮೂಲಂಗಿ, ಈರುಳ್ಳಿ, ಬದನೆ, ಮುಸುಕ ಬದನೆ, ಕ್ಯಾರೆಟ್, ಕಡ್ಡಿ ಮೆಣಸಿನಕಾಯಿ, ಕೆಂಪು ಮೂಲಂಗಿ, ರಾಜಾಮ್ ಬೀಜ, ಮೆಂಥ್ಯ್ ಸೋಪ್ಪು, ತಂಬೂರಿ ಸೊರೆಕಾಯಿ ಕ್ಯಾರೆಟ್, ಉದ್ದ ಕುಂಬಳಕಾಯಿ, ಸೊರೆಬೀಜ, ಜೋಳ, ಬೀಳಿಬಿನ್ಸ್, ಸಾಮಿ, ಉದ್ದಲಬೀಜ, ಚಟ್ನಿ ಎಳ್ಳು ಸೇರಿದಂತೆ ಹಲವಾರು ಬಗೆಯ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.

    ತಮ್ಮ ಕುಟುಂಬಕ್ಕೆ ಬೇಕಾದಷ್ಟು ಸಿರಿಧಾನ್ಯಗಳನ್ನು ಬೆಳೆಯುತ್ತಾ ವರ್ಷವಿಡೀ ತಮ್ಮ ಜೀವನ ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯ ಅಂದ್ರೆ ಇವರು ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಹೊಲಕ್ಕೆ ರಾಸಾಯನಿಕ ಗೊಬ್ಬರವನ್ನು ಬಳಸದೇ ಕೊಟ್ಟಿಗೆ ಗೊಬ್ಬರವನ್ನೇ ಬಳಸಿ ಆರೋಗ್ಯಕರ ಕೃಷಿ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಇವರು ಮಾಡುವ ಕೃಷಿಯು ಅಕ್ಕಪಕ್ಕದ ರೈತರಿಗೂ ಮಾದರಿಯಾಗಿದೆ.

    ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭೂಮಿ ಶುಚಿಗೊಳಿಸುವುದರಿಂದ ಹಿಡಿದು ಬಿತ್ತನೆವರೆಗೆ ಎಲ್ಲಾ ಕಾರ್ಯಗಳು ಪ್ರಾರಂಭಗೊಂಡಿವೆ. ಇನ್ನು ರೈತರಿಗೆ ಇದು ಪಕ್ಕಾ ಪರ್ವಕಾಲ. ಬಿತ್ತನೆ ಕಾರ್ಯ ಪೂರ್ಣಗೊಂಡು ಚೆನ್ನಾಗಿ ಬೆಳೆ ಬಂದರೆ ವರ್ಷವಿಡೀ ಆನಂದದಿಂದ ಊಟ ಮಾಡಬಹುದು ಎನ್ನುವ ಭಾವನೆ ಅವರದ್ದಾಗಿದೆ.

  • ಕಣ್ಣಿಗೆ ರಾಸಾಯನಿಕ ಎರಚಿ 20 ಲಕ್ಷ ರೂ., ಕಾರು ದರೋಡೆ- ಧರ್ಮದರ್ಶಿ ಆಸ್ಪತ್ರೆಗೆ ದಾಖಲು

    ಕಣ್ಣಿಗೆ ರಾಸಾಯನಿಕ ಎರಚಿ 20 ಲಕ್ಷ ರೂ., ಕಾರು ದರೋಡೆ- ಧರ್ಮದರ್ಶಿ ಆಸ್ಪತ್ರೆಗೆ ದಾಖಲು

    ತುಮಕೂರು: ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಕಣ್ಣಿಗೆ ರಾಸಾಯನಿಕ ಎರಚಿ ದರೋಡೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

    ಈ ಘಟನೆ ತುಮಕೂರು ಜಿಲ್ಲೆಯ ತುಮಕೂರಿನ ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ನಡೆದಿದೆ. ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಪೂಜೆ ಮುಗಿಸಿ ವಾಪಸ್ ಆಗುತ್ತಿದ್ರು. ಈ ವೇಳೆ ಭಕ್ತರ ಸೋಗಿನಲ್ಲಿ ಬಂದ 6 ಮಂದಿ ದರೋಡೆಕೋರರು ಕಣ್ಣಿಗೆ ಕೆಮಿಕಲ್ ಸ್ಪ್ರೇ ಮಾಡಿ, 20 ಲಕ್ಷ ನಗದು ಮತ್ತು ಎಸ್‍ಯುವಿ ಕಾರ್ ದರೋಡೆ ಮಾಡಿದ್ದಾರೆ.

    ಧನಂಜಯ್ಯ ಸ್ವಾಮಿಜಿ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೃಷ್ಣೆಯ ಒಡಲು ಸೇರಿದ ವಿಷ ತೈಲ – ಜೀವಜಲವೇ ಆಗ್ತಿದೆ ಜನ ಸಾಮಾನ್ಯರಿಗೆ ಕಂಟಕ

    ಕೃಷ್ಣೆಯ ಒಡಲು ಸೇರಿದ ವಿಷ ತೈಲ – ಜೀವಜಲವೇ ಆಗ್ತಿದೆ ಜನ ಸಾಮಾನ್ಯರಿಗೆ ಕಂಟಕ

    -ಜಲಚರ, ಜನ, ಜಾನುವಾರುಗಳ ಪ್ರಾಣಕ್ಕೆ ಕುತ್ತು

    ರಾಯಚೂರು: ಜಿಲ್ಲೆಯ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿ ವಿಷಯುಕ್ತ ರಾಸಾಯನಿಕವನ್ನು ನೇರವಾಗಿ ನದಿಗೆ ಬಿಡುವ ಮೂಲಕ ಆರ್‍ಟಿಪಿಎಸ್ ಘೋರ ದುರಂತಕ್ಕೆ ಕಾರಣವಾಗಲು ಹೊರಟಿದೆ. ಬ್ಯಾರೆಲ್ ಗಟ್ಟಲೇ ಸೋರಿಕೆಯಾದ ರಾಸಾಯನಿಕ ಆಯಿಲನ್ನು ನದಿಗೆ ಬಿಟ್ಟಿದ್ದರಿಂದ ನದಿ ಪಾತ್ರದ ಹಳ್ಳಿ ಜನರಲ್ಲಿ ಭಯ ಹುಟ್ಟಿಸಿದೆ.

    ಆರ್‍ಟಿಪಿಎಸ್ ಕೃಷ್ಣಾನದಿಗೆ ನೇರವಾಗಿ ರಾಸಾಯನಿಕ ವಸ್ತುಗಳನ್ನ ಬಿಡುವುದರಿಂದ ಸುತ್ತಮುತ್ತಲ ಹಳ್ಳಿ ಜನರಲ್ಲಿ ಚರ್ಮವ್ಯಾಧಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆ ವರದಿ ಪ್ರಸಾರ ಮಾಡಿತ್ತು. ವರದಿಗೆ ಸಾಕ್ಷಿ ಎಂಬಂತೆ ಪುನಃ ಆರ್‍ಟಿಪಿಎಸ್ ವಿಷಯುಕ್ತ ಆಯಿಲನ್ನು ನೇರವಾಗಿ ನದಿಗೆ ಬಿಟ್ಟಿದೆ. ವಿಷಯುಕ್ತ ಪದಾರ್ಥಗಳು ನದಿಗೆ ಸೇರುವುದರಿಂದ ಕುಡಿಯುವ ನೀರಿಗಾಗಿ ಕೃಷ್ಣೆಯನ್ನೇ ಅವಲಂಬಿಸಿರುವ ರಾಯಚೂರು ನಗರ ಸೇರಿ 32 ಗ್ರಾಮಗಳ ಜನ ಆತಂಕಕ್ಕೊಳಗಾಗಿದ್ದಾರೆ. ವಿದ್ಯುತ್ ಕೇಂದ್ರದ ಐದನೇ ಘಟಕದಲ್ಲಿ ಬಾಯ್ಲರ್ ಸ್ಟಾರ್ಟ್ ಅಪ್‍ಗೆ ಬಳಸುವ ಫರನೇಸ್ ಆಯಿಲ್ ಸೋರಿಕೆಯಾಗಿದ್ದು, ಕೂಡಲೇ ಇದನ್ನ ತಡೆಯದಿದ್ದರೆ ಜಲಚರ, ಜನ, ಜಾನುವಾರಗಳ ಮೇಲೆ ಕೆಟ್ಟಪರಿಣಾಮ ಬೀರಲಿದೆ.

    ಕಲ್ಲಿದ್ದಲು ಕೊರತೆಯಿದ್ದಾಗ ಬಳಸುವ ಲೋ ಡೆನ್ಸಿಟಿ ಆಯಿಲ್ ಹಾಗೂ ಫರನೇಸ್ ಆಯಿಲ್ ಸಾಗಣೆಯಲ್ಲಿ ತಾಂತ್ರಿಕ ತೊಂದರೆಯಾಗಿ ಸಾಗಾಣಾ ಪೈಪ್ ಸಿಡಿದಿದೆ. ಇದರಿಂದ ಸೋರಿಕೆಯಾದ ಆಯಿಲ್ ಕಳೆದ ನಾಲ್ಕೈದು ದಿನಗಳಿಂದ ಆರ್‍ಟಿಪಿಎಸ್ ಸಿಬ್ಬಂದಿ ನೇರವಾಗಿ ನದಿಗೆ ಬಿಡುತ್ತಿದ್ದಾರೆ. ಈ ವಿಷಯ ತಿಳಿದು ಅಕ್ಕಪಕ್ಕದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಇದರಿಂದ ಅಧಿಕಾರಿಗಳು ಕಾಲುವೆ ಮುಖಾಂತರ ಹೋಗುತ್ತಿರುವ ಆಯಿಲನ್ನು ಪುನಃ ಬ್ಯಾರೆಲ್‍ಗೆ ತುಂಬಿಸಲು ಮುಂದಾಗಿದ್ದಾರೆ.

    ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೋಟೀಸ್ ನೀಡಿದ್ದರೂ ಆರ್‍ಟಿಪಿಎಸ್ ಪದೇ ಪದೇ ಬೇಜವಾಬ್ದಾರಿತನ ಮೆರೆಯುತ್ತಿದೆ. ಒಟ್ಟಿನಲ್ಲಿ ತಪ್ಪಿತಸ್ಥ ಆರ್‍ಟಿಪಿಎಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ವಿಷ ಪದಾರ್ಥ ನದಿಗೆ ಸೇರದಂತೆ ಕೂಡಲೇ ಸೂಕ್ತ ಕ್ರಮಗಳನ್ನ ಸಂಬಂಧಪಟ್ಟವರು ತೆಗೆದುಕೊಳ್ಳಬೇಕಿದೆ.