Tag: ರಾಸಾಯನಿಕ

  • ನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!

    ನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!

    ಕೊಪ್ಪಳ: ಇಂದು ನಾವು ತಿನ್ನೋ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಯೋಚಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹೌದು, ಸದ್ಯ ಕೃಷಿ ವಿವಿಯ (University of Agriculture) ಅಧಿಕಾರಿಗಳು ಬಹಿರಂಗ ಪಡಿಸಿರುವ ವರದಿಯ ಪ್ರಕಾರ ನಾವು ತಿನ್ನೋ ಅನ್ನವೂ (Rice) ವಿಷವಾಗುತ್ತಿದೆಯಾ ಎಂಬ ಭೀತಿ ಶುರುವಾಗಿದೆ.

    ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ಭತ್ತದ ಖಣಜ ಅಂತಲೇ ಪ್ರಸಿದ್ಧಿ. ಇಲ್ಲಿನ ಅಕ್ಕಿ ದೇಶ-ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೃಷಿ ವಿವಿಯು ಬಹಿರಂಗ ಪಡಿಸಿರುವ ಮಾಹಿತಿಯೊಂದು ಜನರನ್ನು ಆತಂಕಕ್ಕೀಡು ಮಾಡಿದೆ. ಜೊತೆಗೆ ಅನ್ನದ ರೂಪದಲ್ಲಿ ವಿಷ ನಮ್ಮ ದೇಹ ಸೇರುತ್ತಿದೆಯಾ ಎಂಬ ಭೀತಿ ಶುರುವಾಗಿದೆ. ಇತ್ತಿಚಿನ ದಿನಗಳಲ್ಲಿ ರೈತರು ಹೆಚ್ಚಿನ ಇಳುವರಿಯ ಆಸೆಗಾಗಿ ಹೆಚ್ಚಿನ ಪ್ರಮಾಣದ ರಾಸಾಯನಿಕಗಳ ಬಳಸುತ್ತಿರುವ ಹಿನ್ನೆಲೆ ಅನ್ನವೂ ವಿಷವಾಗಿ ಪರಿಣಮಿಸುತ್ತಿದೆ ಎನ್ನುವಂತಾಗಿದೆ. ಗಂಗಾವತಿ, ಸಿಂಧನೂರು, ಸಿರಗುಪ್ಪ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದ ರಾಸಾಯನಿಕ (Chemical) ಬಳಕೆ ಮಾಡುತ್ತಿರುವುದು ಇಷ್ಟೆಲ್ಲಾ ಅನುಮಾನಕ್ಕೆ ಕಾರಣವಾಗಿದೆ. ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆಯನ್ನೂ ಕಳೆದುಕೊಂಡಿದೆ. ಜೊತೆಗೆ ಗ್ರಾಮದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ರೈತರು ಅತಿಯಾದ ರಾಸಾಯನಿಕ ಬಳಕೆಯನ್ನು ನಿಲ್ಲಿಸಬೇಕು ಎಂದು ಕೃಷಿ ವಿಸ್ತಣಾಧಿಕಾರಿ ಎಂ.ವಿ ರವಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನೆಲೆಸಿದ್ದ ಪಾಕ್‌ ದಂಪತಿ; ಬೆಂಗಳೂರಲ್ಲಿದ್ದುಕೊಂಡೇ ಧರ್ಮ ಪ್ರಚಾರ, ಪ್ರಚೋದಕರಾಗಿ ಕೆಲಸ

    ಹೆಚ್ಚಿನ ರಾಸಾಯನಿಕ ಬಳಕೆಯಿಂದ ಹಲವು ಹಳ್ಳಿಯ ಜನರಲ್ಲಿ ಕ್ಯಾನ್ಸರ್‌ನಂತಹ ರೋಗಗಳು ಕಾಣಿಸಿಕೊಂಡಿವೆ. ಇದರ ಬಗ್ಗೆ ಜಿಲ್ಲಾಡಳಿತ ವರದಿ ತಯಾರಿಸಿದ್ದು, ಜನರಿಗೆ ರಾಸಾಯನಿಕಗಳಿಂದ ಹಾನಿಯಾಗುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ಜಿಲ್ಲಾಡಳಿತ ಯಾವುದೇ ವರದಿಯನ್ನು ಬಹಿರಂಗಪಡಿಸಿಲ್ಲ. ಆದರೆ ರೈತರು ಯಥಾಸ್ಥಿತಿ ರಾಸಾಯನಿಕಗಳ ಬಳಕೆಯಲ್ಲಿ ನಿರತರಾಗಿರೋದು ಕಂಡು ಬರುತ್ತಿದೆ. ಸದ್ಯ ಈ ರಾಸಾಯನಿಕ ಬಳಕೆಯ ದುಷ್ಪರಿಣಾಮದ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

    ರೈತರು ಹೆಚ್ಚಿನ ಇಳುವರಿಯ ಉದ್ದೇಶದಿಂದ ರಾಸಾಯನಿಕಗಳ ಮೊರೆ ಹೋಗುತ್ತದ್ದಾರೆ. ಆದರೆ ಜನರಿಗೆ ಹಾನಿ ಉಂಟು ಮಾಡುವ ರಾಸಾಯನಿಕಗಳ ಮಾರಾಟಕ್ಕೆ ಜಿಲ್ಲಾಡಳಿಕ ಬ್ರೇಕ್ ಹಾಕಿ ಮುಂದಾಗುವ ಅನಾಹುತಗಳನ್ನ ತಪ್ಪಿಸಬೇಕಿದೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

  • ಬಾಯಿ ಚಪ್ಪರಿಸಿಕೊಂಡು ತಿನ್ನುವ ಮಾವಿನ ಹಣ್ಣಿಗೆ ಬಳಸ್ತಾರೆ ವಿಷಕಾರಿ ರಾಸಾಯನಿಕ!

    ಬಾಯಿ ಚಪ್ಪರಿಸಿಕೊಂಡು ತಿನ್ನುವ ಮಾವಿನ ಹಣ್ಣಿಗೆ ಬಳಸ್ತಾರೆ ವಿಷಕಾರಿ ರಾಸಾಯನಿಕ!

    ದ್ಯ ಎಲ್ಲೆಡೆ ಮಾವಿನ ಹಣ್ಣಿನ ಸೀಜನ್. ಅಲ್ಲಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಿರುತ್ತಾರೆ. ಹೀಗಾಗಿ ಎಲ್ಲಿ ನೋಡಿದರೂ ಹಳದಿ ಹಳದಿಯಾಗಿರುವ ಮಾವಿನ ಹಣ್ಣುಗಳು ಕಣ್ಮನ ಸೆಳೆಯುತ್ತಿರುತ್ತದೆ. ಹಲವು ಕಡೆಗಳಲ್ಲಿ ಮಾವಿನ ಹಣ್ಣುಗಳ ಮೇಳಗಳು ನಡೆಯುತ್ತಿವೆ. ಒಟ್ಟಿನಲ್ಲಿ ಮಾವು ಪ್ರಿಯರಿಗೆ ಇದು ಸುಗ್ಗಿ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣುಗಳನ್ನು ಖರೀದಿ ಮಾಡುವಾಗ ಹುಷಾರಾಗಿರಬೇಕು. ಅರೇ. ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುವುದೇ ಕೆಲ ಸಮಯ. ಅದರಲ್ಲೂ ಈ ರೀತಿ ಎಲ್ಲ ಹೇಳಿ ಹೆದರಿಸ್ತೀರಾ ಅಂತಾ ಯೋಚನೆ ಮಾಡ್ತಿದ್ದೀರಾ. ಹಾಗಿದ್ರೆ ಈ ಕಂಪ್ಲೀಟ್ ಸ್ಟೋರಿ ಓದಿ.

    ಹೌದು. ಸಿಹಿ ಮಾವಿನ ಹಣ್ಣಿಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಮಾವಿನಹಣ್ಣು ಕೂಡ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಆದರೆ ಖರೀದಿಸುವ ಮುನ್ನ ಒಮ್ಮೆ ಯೋಚಿಸಬೇಕಾದ ಅನಿವಾರ್ತೆಯೂ ನಮ್ಮ ಮುಂದಿದೆ. ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವ ಮಾವಿನ ಹಣ್ಣನ್ನು ವಿಷಕಾರಿ ರಾಸಾಯನಿಕ ಬೆರೆಸುವ ಮೂಲಕ ಹಣ್ಣು ಮಾಡಲಾಗುತ್ತದೆ. ಈ ರಾಸಾಯನಿಕ ವಿಷವಾಗಿದ್ದು, ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಹಣ್ಣುಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸುವುದರಿಂದ ನೀವು ಗಂಭೀರ ಕಾಯಿಲೆಗಳಿಗೆ ಗುರಿಯಾಗಬಹುದು. ನಿಮ್ಮ ಆರೋಗ್ಯಕ್ಕೆ ಹಣ್ಣುಗಳಲ್ಲಿ ಇದರ ಬಳಕೆ ಎಷ್ಟು ಅಪಾಯಕಾರಿ ಎಂಬುದರ ವಿವರಣೆ ಮುಂದೆ ಓದಿ.

    ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಮಾವು ಮತ್ತು ಇತರ ಹಣ್ಣುಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವ ಹಣ್ಣಿನ ವ್ಯಾಪಾರಿಗಳು ಮತ್ತು ಆಹಾರ ವ್ಯಾಪಾರ ನಿರ್ವಾಹಕರಿಗೆ ಎಚ್ಚರಿಕೆ ನೀಡಿದೆ. ಕ್ಯಾಲ್ಸಿಯಂ ಕಾರ್ಬೈಡ್ (calcium carbide) ಎಂಬ ವಿಷಕಾರಿ ರಾಸಾಯನಿಕದಿಂದ ಹಣ್ಣುಗಳನ್ನು ಮಾಗಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‍ಎಸ್‍ಎಸ್‍ಎಐ ತಿಳಿಸಿದೆ. ಈ ರಾಸಾಯನಿಕವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಸಿದ ಹಣ್ಣುಗಳನ್ನು ತಿನ್ನುವುದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಹೆಚ್ಚುವರಿಯಾಗಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ಈ ಬಗ್ಗೆ ಕೃಷಿ ತಜ್ಞರೊಬ್ಬರು ಕ್ಯಾಲ್ಸಿಯಂ ಕಾರ್ಬೈಡ್ ಎಂದರೇನು ಮತ್ತು ನಿಮ್ಮ ಆರೋಗ್ಯಕ್ಕೆ ಹಣ್ಣುಗಳಲ್ಲಿ ಅದರ ಬಳಕೆ ಎಷ್ಟು ಅಪಾಯಕಾರಿ? ಎಂಬುದರ ಬಗ್ಗೆ ವಿವರಿಸಿದ್ದಾರೆ.

    ಕ್ಯಾಲ್ಸಿಯಂ ಕಾರ್ಬೈಡ್ ಎಂದರೇನು?: ಕ್ಯಾಲ್ಸಿಯಂ ಕಾರ್ಬೈಡ್ ಒಂದು ರಾಸಾಯನಿಕ ವಸ್ತುವಾಗಿದೆ. ಇದು ಮೇಲ್ನೋಟಕ್ಕೆ ಹರಳೆಣ್ಣೆಯಂತೆ ಕಾಣುತ್ತದೆ. ಇದು ಈಥೈಲ್ ಅನಿಲವನ್ನು ರೂಪಿಸಲು ಹಣ್ಣಿನಲ್ಲಿರುವ ನೀರು ಮತ್ತು ತೇವಾಂಶದೊಂದಿಗೆ ಪ್ರತಿಕ್ರಿಯಿಸುತ್ತದೆ. ಈ ಈಥೈಲ್ ಅನಿಲದಿಂದ ಹಣ್ಣುಗಳ ಒಳಗೆ ಕೃತಕ ಶಾಖ ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ಸಮಯಕ್ಕೆ ಮುಂಚಿತವಾಗಿ ಹಣ್ಣಾಗುತ್ತವೆ. ಅಕಾಲಿಕವಾಗಿ ಮಾಗಿದ ಹಣ್ಣುಗಳಲ್ಲಿ ಯಾವುದೇ ಪೋಷಕಾಂಶಗಳು ಕಂಡುಬರುವುದಿಲ್ಲ. ಪೌಷ್ಟಿಕಾಂಶದ ಕೊರತೆಯಿಂದಾಗಿ ಈ ಹಣ್ಣುಗಳನ್ನು ತಿನ್ನುವುದರಿಂದ ಪ್ರಯೋಜನಗಳ ಬದಲಿಗೆ ಹಾನಿಯಾಗುತ್ತದೆ.

    ಈ ರಾಸಾಯನಿಕ ಎಷ್ಟು ಹಾನಿಕಾರಕ?: ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕವು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರ ಬಳಕೆಯಿಂದ ಜನರು ಅನೇಕ ಗಂಭೀರ ಕಾಯಿಲೆಗಳಿಗೆ ಒಳಗಾಗಬಹುದು. ಆದ್ದರಿಂದ ಸರ್ಕಾರವು ಈ ರಾಸಾಯನಿಕವನ್ನು ನಿಷೇಧಿಸಿದೆ. ಆದರೆ ಇಂದಿಗೂ ಅನೇಕ ಹಣ್ಣಿನ ವ್ಯಾಪಾರಿಗಳು ತಮ್ಮ ಗೋದಾಮುಗಳಲ್ಲಿ ಈ ರಾಸಾಯನಿಕವನ್ನು ಬಹಿರಂಗವಾಗಿ ಬಳಸುತ್ತಾರೆ. ಇದನ್ನೂ ಓದಿ: ಪಾರ್ಕಿನ್ಸನ್ ರೋಗಕ್ಕೂ ನಿದ್ದೆಗೂ ಇದೆ ನಂಟು; ಏನಿದು ಕಾಯಿಲೆ? 

    ಯಾವೆಲ್ಲಾ ರೋಗಗಳು ಬರುತ್ತವೆ?: ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಬೇಯಿಸಿದ ಹಣ್ಣುಗಳ ನಿರಂತರ ಸೇವನೆಯು ಮೂತ್ರಪಿಂಡ ಮತ್ತು ಯಕೃತ್ತಿನ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಹೊಟ್ಟೆ ಹುಣ್ಣು ಸಮಸ್ಯೆ ಬರಬಹುದು. ಇದಲ್ಲದೆ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚು. ಈ ರಾಸಾಯನಿಕವನ್ನು ಹಣ್ಣುಗಳಲ್ಲಿ ಬಳಸುವುದರಿಂದ ಅವುಗಳು ಸರಿಯಾಗಿ ಹಣ್ಣಾಗುವುದಿಲ್ಲ. ಅಂತಹ ಹಣ್ಣುಗಳು ಹೊರಭಾಗದಲ್ಲಿ ಮಾಗಿದಂತಿದ್ದರೂ ಒಳಗಿನಿಂದ ಅರ್ಧ ಮಾಗಿದಂತಿರುತ್ತವೆ. ಇಂತಹ ಹಣ್ಣುಗಳ ಸೇವನೆಯು ಮಕ್ಕಳ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿರುತ್ತದೆ. ಹೀಗಾಗಿ ಹಣ್ಣುಗಳನ್ನು ಖರೀದಿ ಮಾಡುವಾಗ ಎಚ್ಚರದಿಂದಿರಿ.

    ಹಣ್ಣುಗಳನ್ನು ಹೇಗೆ ಗುರುತಿಸುವುದು?: ಕ್ಯಾಲ್ಸಿಯಂ ಕಾರ್ಬೈಡ್ ಹೊಂದಿರುವ ಹಣ್ಣುಗಳನ್ನು ನೀವು ಸುಲಭವಾಗಿ ಗುರುತಿಸಬಹುದು. ಕ್ಯಾಲ್ಸಿಯಂ ಕಾರ್ಬೈಡ್ ಹೊಂದಿರುವ ಹಣ್ಣುಗಳಲ್ಲಿ ಕಲೆಗಳು ಹೆಚ್ಚು ಗೋಚರಿಸುತ್ತವೆ. ಅಲ್ಲದೆ ಅವು ಇತರ ನೈಸರ್ಗಿಕ ಹಣ್ಣುಗಳಿಗಿಂತ ಹೆಚ್ಚು ಹೊಳಪನ್ನು ಹೊಂದಿರುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಮಾಗಿದ ಹಣ್ಣುಗಳು 2 ರಿಂದ 3 ದಿನಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಶೀಘ್ರದಲ್ಲೇ ಕೊಳೆಯಲು ಪ್ರಾರಂಭಿಸುತ್ತವೆ. ಈ ರಾಸಾಯನಿಕದಿಂದ ಮಾಗಿದ ಹಣ್ಣುಗಳು ಹೆಚ್ಚು ಸಿಹಿಯಾಗಿರುವುದಿಲ್ಲ. ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಹಣ್ಣುಗಳಲ್ಲಿ ಬಳಸಿದಾಗ ಅವು ಕಡಿಮೆ ಬಲಿಯುತ್ತವೆ.

    ನೈಸರ್ಗಿಕವಾಗಿರೋದನ್ನು ಗುರುತಿಸುವುದು ಹೇಗೆ?: ನೈಸರ್ಗಿಕ ಹಣ್ಣುಗಳನ್ನು ನೀವು ಸುಲಭವಾಗಿ ಗುರುತಿಸಬಹುದು. ಸಾಧ್ಯವಾದಷ್ಟು ಕಲೆಗಳಿಲ್ಲದ ಹಣ್ಣುಗಳನ್ನು ಖರೀದಿಸಿ. ಯಾವಾಗಲೂ ನೀವು ನಂಬುವ ಮಾರಾಟಗಾರರಿಂದ ಮಾತ್ರ ಹಣ್ಣುಗಳನ್ನು ಖರೀದಿಸಿ. ಹಣ್ಣುಗಳನ್ನು ತಿನ್ನುವ ಮೊದಲು ಮಾಡಬೇಕಾದ ಕೆಲಸವೆಂದರೆ ಅವುಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

    ನೈಸರ್ಗಿಕವಾಗಿ ಹಣ್ಣು ಮಾಡುವುದು ಹೇಗೆ?: ಮರಗಳ ಮೇಲಿನ ಹಣ್ಣುಗಳು 60 ರಿಂದ 70% ಸಿದ್ಧವಾದಾಗ, ಅವುಗಳನ್ನು ಕಿತ್ತು ಒಣಹುಲ್ಲಿನ ಅಥವಾ ಆಲದ ಎಲೆಗಳ ಒಳಗೆ ಒತ್ತಲಾಗುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗುತ್ತವೆ ಮತ್ತು ಹೇರಳವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.

    ಹಣ್ಣು ಮಾಡಲು ಈ ರಾಸಾಯನಿಕ ಬಳಸಬಹುದು: ನೈಸರ್ಗಿಕವಾಗಿ ಮಾಗಿದ ಹಣ್ಣುಗಳ ಹೊರತಾಗಿ, ಭಾರತ ಸರ್ಕಾರ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ರಾಸಾಯನಿಕವಾಗಿ ಹಣ್ಣುಗಳನ್ನು ಮಾಗಿಸಲು ಎಥಿಲೀನ್ ಬಳಸಲು ಅನುಮತಿ ನೀಡಿದೆ. ಇದರ ಬಳಕೆಯಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದನ್ನು ಬಳಸಿದರೆ ಅವು ನೈಸರ್ಗಿಕವಾಗಿ ಹಣ್ಣಾಗುತ್ತವೆ.

    ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಫಳ ಪಳ ಹೊಳೆಯುವಂತಹ ಹಣ್ಣುಗಳನ್ನು ಖರೀದಿಸುವ ಮುನ್ನ ತುಂಬಾ ಸೂಕ್ಷ್ಮವಾಗಿ ಆಯ್ದುಕೊಳ್ಳಿ.

  • ಮನ್‌ಮುಲ್‌‌ನಲ್ಲಿ ಮತ್ತೊಂದು ಹಗರಣ – ಹಾಲಿಗೆ ನೀರಾಯ್ತು, ಈಗ ರಾಸಾಯನಿಕ ಮಿಶ್ರಣ

    ಮನ್‌ಮುಲ್‌‌ನಲ್ಲಿ ಮತ್ತೊಂದು ಹಗರಣ – ಹಾಲಿಗೆ ನೀರಾಯ್ತು, ಈಗ ರಾಸಾಯನಿಕ ಮಿಶ್ರಣ

    ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಮಿಶ್ರಣ ಹಗರಣ ಆಯ್ತು, ಇದೀಗ ಹಾಲಿಗೆ ರಾಸಾಯನಿಕ ಬೆರಕೆ ಮಾಡುವುದು ಬೆಳಕಿಗೆ ಬಂದಿದೆ. ಈ ಮೂಲಕ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನ್‌ಮುಲ್‌ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ.

    ಕಳೆದ ವರ್ಷವಷ್ಟೇ ಮನ್‌ಮುಲ್‌‌ಗೆ ಸರಬರಾಜು ಆಗುವ ಹಾಲಿಗೆ ನೀರು ಮಿಶ್ರಣವಾಗುತ್ತಿದೆ ಎಂಬ ಹಗರಣ ಬೆಳಕಿಗೆ ಬಂದಿತ್ತು. ಪ್ರಕರಣ ಸಿಐಡಿ ತನಿಖೆಯಲ್ಲಿರುವಾಗಲೇ ಹಾಲಿಗೆ ರಾಸಾಯನಿಕ ಕಲಬೆರಕೆ ಹಗರಣ ಬೆಳಕಿಗೆ ಬಂದಿರುವುದು ರೈತರಲ್ಲಿ ಆತಂಕ ಮೂಡಿದೆ. ಇದನ್ನೂ ಓದಿ: ಮೃತ ಕೋವಿಡ್ ಕುಟುಂಬಗಳಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ – ಬ್ಯಾಂಕುಗಳಲ್ಲಿ ನಗದು ಆಗ್ತಿಲ್ಲ ಚೆಕ್

    ಏನಿದು ಹಾಲಿಗೆ ರಾಸಾಯನಿಕ ಬೆರಕೆ?
    ಪರೀಕ್ಷೆಯಲ್ಲಿ ಹಾಲಿನ ಗುಣಮಟ್ಟ ಹೆಚ್ಚು ತೋರಿಸುವಂತೆ ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಹಾಲಿಗೆ ನೀರು ಹಾಕಿದಾಗ ಕಡಿಮೆ ಕೊಬ್ಬಿನಾಂಶ ತೋರಬಾರದೆಂದು ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಉಪ್ಪಿನಾಂಶದ ರಾಸಾಯನಿಕ ಕಲಬೆರಕೆಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಟ್ಯಾಂಕರ್‌ನೊಳಗೆ ಮತ್ತೊಂದು ಬೇಬಿ ಟ್ಯಾಂಕ್ ನಿರ್ಮಿಸಿ ಕೋಟಿ ಕೋಟಿ ಹಣವನ್ನು ಹಾಲಿನ ರೂಪದಲ್ಲಿ ಮನ್‌ಮುಲ್‌ಗೆ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ನಿಜರೂಪ ಬಯಲಾಗಿದೆ.

    ಹೇಗೆ ಬೆಳಕಿಗೆ ಬಂತು?
    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಹೊನ್ನಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ಮೊದಲಿಗೆ ರಾಸಾಯನಿಕ ಮಿಶ್ರಣ ಪತ್ತೆಯಾಗಿದೆ. ಗ್ರಾಮದಲ್ಲಿ ಶೇಖರಣೆಯಾದ ಹಾಲಿಗೆ ನೀರು ಹಾಗೂ ರಾಸಾಯನಿಕ ಬೆರಸಿ ಮನ್‌ಮುಲ್‌ಗೆ ವಂಚನೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ನಂದಿನಿ ಹಾಲಿನ ಮೇಲೆ ಅನುಮಾನ ಮೂಡುವಂತೆ ವಂಚಕರು ಪ್ಲ್ಯಾನ್ ಮಾಡಿದ್ದಾರೆ. ಪ್ರತಿನಿತ್ಯ 35 ಕ್ಯಾನ್ ಹಾಲು ಸರಬರಾಜು ಮಾಡುತ್ತಿದ್ದ ಕೆ.ಹೊನ್ನಲಗೆರೆ ಡೈರಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ. ಇದೀಗ ಕೆ.ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸುವಂತೆ ಮನ್‌ಮುಲ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿರುವ ಪ್ರವಾಸಿತಾಣಗಳಿಗೆ ಜಾರಿಯಾಗುತ್ತಾ ಟಫ್‍ರೂಲ್ಸ್..?

  • ಕೈಗಾರಿಕೆಯಲ್ಲಿ ರಾಸಾಯನಿಕ ಮಿಶ್ರಣದ ವೇಳೆ ಸ್ಫೋಟ ಪ್ರಕರಣ- ಕಾರ್ಮಿಕ ಸಾವು

    ಕೈಗಾರಿಕೆಯಲ್ಲಿ ರಾಸಾಯನಿಕ ಮಿಶ್ರಣದ ವೇಳೆ ಸ್ಫೋಟ ಪ್ರಕರಣ- ಕಾರ್ಮಿಕ ಸಾವು

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಕ್ಕಕುರಗೋಡು ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ರಾಸಾಯನಿಕ ಮಿಶ್ರಣದ ವೇಳೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐದು ಮಂದಿಗೆ ಸುಟ್ಟಗಾಯಗಳಾಗಿದ್ದು, ಮೂವರು ಗಂಭೀರ ಸ್ಥಿತಿಯಲ್ಲಿದ್ದು, ಮೂವರಲ್ಲಿ ಓರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ರಾಮಚಂದ್ರಾಪುರದ ವೆಂಕಟೇಶ್ ಮೃತ ಕಾರ್ಮಿಕ ಅಂತ ತಿಳಿದುಬಂದಿದೆ. ಆಗಸ್ಟ್ 5 ರಂದು ತಾಲೂಕಿನ ಚಿಕ್ಕಕುರುಗೋಡು ಕೈಗಾರಿಕಾ ಪ್ರದೇಶದಲ್ಲಿನ ಪ್ರಿಕಾಟ್ ಲಿಮಿಟೆಡ್ ಎಂಬ ಕೈಗಾರಿಕೆಯಲ್ಲಿ ಸೋಡಿಯಂ ಹೈಡ್ರಾಕ್ಸೆಡ್ ರಾಸಾಯನಿಕ ಮಿಶ್ರಣ ಅಂದ್ರೆ ಕಾಸ್ಟಿಕ್ ಸೋಡಾವನ್ನು ನೀರಿನಲ್ಲಿ ಬೆರೆಸುವಾಗ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಹಠಾತ್ ಬಿಸಿಯಾದ ನೀರು ಮತ್ತು ರಾಸಾಯನಿಕ ಮಿಶ್ರಣವು ಸ್ಫೋಟಗೊಂಡಿದ್ದರಿಂದ ಐವರು ಕಾರ್ಮಿಕರು ಗಾಯಗೊಂಡಿದ್ದರು. ಇದನ್ನೂ ಓದಿ: ಆರೋಗ್ಯ ಇಲಾಖೆಯ ಒಂದೇ ಕಾರ್​​​ನಲ್ಲಿ 10 ಮಂದಿ ಪ್ರಯಾಣ

    ಕಡಗಟ್ಟೂರಿನ ಹರೀಶ್ (32) ರಾಮಚಂದ್ರಾಪುರದ ವೆಂಕಟೇಶ್(42), ಚಿಕ್ಕಕುರುಗೋಡಿನ ರವಿಕುಮಾರ್ (39), ಹಿಂದೂಪುರದ ಆನಂದ ಕುಮಾರ್ (32) ನೆಲ್ಲೋರು 29 ವರ್ಷದ ಗೊರವಯ್ಯ ಗಾಯಗೊಂಡಿದ್ದರು. ಇವರಲ್ಲಿ ರಾಮಚಂದ್ರಾಪುರದ ವೆಂಕಟೇಶ್, ಚಿಕ್ಕಕುರುಗೋಡಿನ ರವಿಕುಮಾರ್ (39) ನೆಲ್ಲೊರು 29 ವರ್ಷದ ಗೊರವಯ್ಯ ರವರ ಸ್ಥಿತಿ ಗಂಭೀರವಾಗಿದ್ದು, ಅಂದು ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ವೆಂಕಟೇಶ್ ಮೃತಪಟ್ಟಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕೆಆರ್‌ಎಸ್‌ ಬೃಂದಾವನ ಮಾದರಿಯ ಎಕೋ ಥೀಮ್ ಪಾರ್ಕ್

  • ಕಡಿಮೆ ಸಮಯದಲ್ಲಿ ಅಧಿಕ ಕೆಲಸ – ಪ್ರತಿ ಗಂಟೆಗೆ 600 ರೂ. ನಿಗದಿ

    ಕಡಿಮೆ ಸಮಯದಲ್ಲಿ ಅಧಿಕ ಕೆಲಸ – ಪ್ರತಿ ಗಂಟೆಗೆ 600 ರೂ. ನಿಗದಿ

    ಕೊಪ್ಪಳ: ಕೂಲಿಕಾರರ ಸಮಸ್ಯೆ ಹಾಗೂ ಅಧಿಕ ಕೂಲಿ ಹಣ ಸೇರಿದಂತೆ ನಾನಾ ಸಮಸ್ಯೆಗಳಿಂದ ಕಂಗಾಲಾಗಿದ್ದ ಭತ್ತ ಬೆಳೆದಿರುವ ರೈತರು ಸದ್ಯ ಡ್ರೋಣ್ ಬಳಸಿ ಬೆಳೆಗೆ ರಾಸಾಯನಿಕವನ್ನು ಸಿಂಪಡನೆ ಮಾಡಲು ಮುಂದಾಗಿದ್ದಾರೆ.

    ಭತ್ತದ ಕಣಜ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ, ಹೊಸ್ಕೇರಾ, ಬೂದಗುಂಪಾ, ಶ್ರೀರಾಮನಗರ ಸೇರಿದಂತೆ ನಾನಾ ಭಾಗಗಳಲ್ಲಿ ಭತ್ತ ಬೆಳೆದಿರುವ ರೈತರು ಸೇರಿಕೊಂಡು ಭತ್ತದ ಕ್ರಿಮಿನಾಶಕವನ್ನು ಹಾಕಲು ಡ್ರೋಣ್ ಮೊರೆ ಹೋಗಿದ್ದಾರೆ. ಕೂಲಿಕಾರರ ಸಮಸ್ಯೆಯನ್ನು ಎದುರಿಸುತ್ತಿರುವ ರೈತರು ಅಧಿಕ ಕೂಲಿಯನ್ನು ನೀಡಿದರು ಸಹ ಸಮಯಕ್ಕೆ ಸರಿಯಾಗಿ ಕೆಲಸಗಾರರು ದೊರೆಯುತ್ತಿಲ್ಲ. ಇದರಿಂದ ಬೇಸತ್ತಿರುವ ರೈತರು ಅನಿವಾರ್ಯ ಎನ್ನುವಂತೆ ಡ್ರೋಣ್ ಬಳಕೆಗೆ ಮುಂದಾಗಿ ರೋಗದಿಂದ ಭತ್ತವನ್ನು ಕಾಪಾಡಲು ಪರ್ಯಾಯವನ್ನು ಮಾರ್ಗವನ್ನು ಕಂಡುಕೊಂಡಿದ್ದಾರೆ.

    ಈಗಾಗಲೇ ಜಂಗಮರ ಕಲ್ಗುಡಿ ಗ್ರಾಮದಲ್ಲಿ 10 ಎಕರೆ ಜಮೀನಿನಲ್ಲಿ ಬೆಳೆದಿರುವ ಭತ್ತಕ್ಕೆ ಪ್ರಾಯೋಗಿಕವಾಗಿ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡನೆಯನ್ನು ಮಾಡಲಾಗಿದೆ. ಹಂತ ಹಂತವಾಗಿ ಹೊಸ್ಕೇರಾ, ಶ್ರೀರಾಮನಗರ, ಸಿದ್ದಪೂರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಇಚ್ಛಿಸುವ ರೈತರ ಜಮೀನುಗಳಲ್ಲಿ ಸಿಂಪಡಿಸಲಾಗುವುದು.

    ಬಾಡಿಗೆಗೆ ಡ್ರೋಣ್: ತಮಿಳುನಾಡಿನಿಂದ ಬಾಡಿಗೆ ರೂಪದಲ್ಲಿ ಡ್ರೋಣ್ ಅನ್ನು ತೆಗೆದುಕೊಂಡು ಬಂದು ಬಳಸಲಾಗುತ್ತಿದೆ. ಪ್ರತಿ ಎಕರೆಗೆ ರಾಸಾಯನಿಕ ಸಿಂಪಡನೆ ಮಾಡಲು 600 ರೂಗಳನ್ನು ನಿಗದಿಗೊಳಿಸಲಾಗಿದೆ. ಬಾಡಿಗೆ ತಂದಿರುವ ಕಂಪನಿಯವರೇ ಡ್ರೋಣ್ ನಿರ್ವಹಣೆಯನ್ನು ಮಾಡುತ್ತಾರೆ. ಡ್ರೋಣ್ ಬಳಕೆಯ ಮೂಲಕ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ ಎನ್ನುವ ಮನೋಭಾವನೆಯಲ್ಲಿ ರೈತರು ಇದ್ದಾರೆ. ಡ್ರೋಣ್ ಮೂಲಕ 5 ರಿಂದ 6 ನಿಮಿಷದಲ್ಲಿ ಒಂದು ಎಕರೆ ಜಮೀನಿಗೆ ರಾಸಾಯನಿಕ ಸಿಂಪಡನೆ ಮಾಡಬಹುದು.

    ಒಂದು ದಿನಕ್ಕೆ 50 ಎಕರೆ ಜಮೀನು ಸಿಂಪಡನೆಯನ್ನು ಮಾಡಬಹುದು. ಈ ರೀತಿಯ ಸಾಮರ್ಥ್ಯವನ್ನು ಡ್ರೋಣ್ ಹೊಂದಿರುವುದರಿಂದ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಪ್ರಮಾಣದ ಜಮೀನಿಗೆ ರಾಸಾಯನಿಕ ಸಿಂಪಡಿಸಲು ಗಂಗಾವತಿ ತಾಲೂಕಿನ ರೈತರು ಆಸಕ್ತಿ ತೋರಿಸುತ್ತಿದ್ದಾರೆ.

  • ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು – ಸಾರ್ವಜನಿಕರಲ್ಲಿ ಆತಂಕ

    ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು – ಸಾರ್ವಜನಿಕರಲ್ಲಿ ಆತಂಕ

    – ದಿನದಿಂದ ದಿನಕ್ಕೆ ಬದಲಾಗ್ತಿದೆ ಬಣ್ಣ
    – ಬಣ್ಣ ಬದಲಾಗಲು ಕಾರಣವೇನು?

    ಮಾಸ್ಕೋ: ನದಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ನದಿಯ ನೀರಿನ ಬಣ್ಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಬೀಟ್ರೂಟ್ ನಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಇದ್ದಕ್ಕಿದ್ದಂತೆ ನೀರಿನ ಬಣ್ಣ ಬದಲಾಯಿಸಿಕೊಂಡಿರುವ ನದಿಗಳ ಪೈಕಿ ಇಸ್ಕಿಟಿಮ್ಕಾ ನದಿಯೂ ಒಂದಾಗಿದೆ. ನದಿಗೆ ಸೇರುವ ಮಾಲಿನ್ಯಕಾರಕದಿಂದ ಈ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

    ಇಂಡಸ್ಟ್ರಿಯಲ್ ನಗರವಾದ ಕೆಮೆರೋವೋದಲ್ಲಿ ನದಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಸ್ಥಳೀಯರು ಗಾಬರಿಗೊಂಡಿದ್ದಾರೆ. ನೀರಿಗೆ ಕೆಲವು ಕೆಮಿಕಲ್ಸ್‍ಗಳು ಬಂದು ಸೇರುವುದರಿಂದ ನೀರಿನ ಬಣ್ಣ ಬದಲಾಗುತ್ತಿದೆ ಎನ್ನಲಾಗುತ್ತಿದೆ. ಆ ಪ್ರದೇಶದಲ್ಲಿ ಯಾವ ಜೀವಜಂತೂಗಳೂ ಕೂಡ ನೀರಿಗೆ ಇಳಿಯದಂತೆ ಅಲ್ಲಿನ ಜನರು ಎಚ್ಚರಿಕೆ ವಹಿಸುತ್ತಿದ್ದಾರೆ.

    ಚರಂಡಿ ಬ್ಲಾಕ್ ಆಗಿದ್ದರಿಂದ ನೀರಿನ ಬಣ್ಣ ಬದಲಾಗಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುತ್ತಿದ್ದೇವೆ. ಆದರೆ ಯಾವ ಕೆಮಿಕಲ್ ನಿಂದ ನೀರಿನ ಬಣ್ಣ ಬದಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಕೆಮೆರೋವೋದ ಉಪ ಗವರ್ನರ್ ಆಂಡ್ರೇ ಪನೋವ್ ತಿಳಿಸಿದ್ದಾರೆ.

    ರಷ್ಯಾದಲ್ಲಿ ಈ ಮೊದಲು ನರೋ – ಫೋಮಿನ್ಸ್ಕ್ ನದಿಗೆ ಕೆಮಿಕಲ್ ಸೇರಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಈ ವರ್ಷದ ಆರಂಭದಲ್ಲಿ ಗ್ವೋಝ್ಡ್‍ನ್ಯಾ ನದಿಗೂ ಇದೇ ತರ ರಾಸಾಯನಿಕ ಸೇರಿ ನೀರು ಬೇರೆ ಬಣ್ಣಕ್ಕೆ ಬಂದಿತ್ತು. ಇದೀಗ ಇಸ್ಕಿಟಿಮ್ಕಾ ನದಿಯ ನೀರಿನ ಬಣ್ಣ ಬದಲಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಮಾಡಿದೆ.

  • ಉಡುಪಿಯ ತೆಕ್ಕಟ್ಟೆ ಪೆಟ್ರೋಲ್ ಪಂಪ್‍ಗೆ ರಾಸಾಯನಿಕ ಸಿಂಪಡಣೆ

    ಉಡುಪಿಯ ತೆಕ್ಕಟ್ಟೆ ಪೆಟ್ರೋಲ್ ಪಂಪ್‍ಗೆ ರಾಸಾಯನಿಕ ಸಿಂಪಡಣೆ

    ಉಡುಪಿ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಉಡುಪಿ ತೆಕ್ಕಟ್ಟೆಯ ಪೆಟ್ರೋಲ್ ಪಂಪ್ ಸೀಲ್ ಮಾಡಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

    ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಯ ಮೂಲಕ ಮಂಡ್ಯವನ್ನು ಸೋಂಕಿತ ವ್ಯಕ್ತಿ ಸೇರಿಕೊಂಡಿದ್ದ. ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ಶಿವಪ್ರಸಾದ್ ಪೆಟ್ರೋಲ್ ಪಂಪ್ ನಲ್ಲಿ ಇಳಿದು, ಸ್ನಾನ ಮಾಡಿ ಟಿಫನ್ ಮಾಡಿದ್ದ. ಆನಂತರ ಮೂರು ಟೋಲ್ ಗಳ ಮೂಲಕ ಉಡುಪಿ ಜಿಲ್ಲೆಯಿಂದ ಪಾಸಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿಗೆ ಸೇರಿಕೊಂಡಿದ್ದ. ಕೊರೊನಾ ಪಾಸಿಟಿವ್ ಬಂದಿರುವುದರಿಂದ ಉಡುಪಿ ಜಿಲ್ಲೆಯ ಆಯ್ದ ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಪೆಟ್ರೋಲ್ ಪಂಪ್ ಸೀಲ್ ಮಾಡಿರುವ ಪೊಲೀಸರು ಇಂದು ಪೆಟ್ರೋಲ್ ಪಂಪ್ ಶೌಚಾಲಯ, ಪೆಟ್ರೋಲ್ ಡೀಸೆಲ್ ಹಾಕುವ ಏರಿಯಾದಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಸಾಸ್ತಾನ ಮತ್ತು ಶಿರೂರು ಟೋಲ್ ಗೇಟ್ ಸುತ್ತಲೂ ರಾಸಾಯನಿಕವನ್ನು ಸಿಂಪಡಣೆ ಮಾಡಲಾಗಿದೆ. ಈ ಭಾಗದಲ್ಲಿ ಜನ ಓಡಾಡಬಾರದು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಂಡು ಓಡಾಡಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸಾಸ್ತಾನ ಟೋಲ್ ಸಿಬ್ಬಂದಿ ಜೊತೆ ಮಂಡ್ಯದ ಸೋಂಕಿತ ಮಾತು – 6 ಮಂದಿ ಕ್ವಾರಂಟೈನ್

    ಶಿವಪ್ರಸಾದ್ ಪೆಟ್ರೋಲ್ ಪಂಪ್ ಮತ್ತು ಟೋಲ್ ಗೇಟ್ ನಲ್ಲಿ ಕೆಲಸ ಮಾಡ್ತಾ ಇದ್ದ ಕೊಟ್ಟು ಹದಿಮೂರು ಮಂದಿಯನ್ನು ಈಗ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಸುಮಾರು ಒಂದು ಕಿಲೋಮೀಟರ್ ಏರಿಯಾದಲ್ಲಿ ವಾಹನ ಓಡಾಟ ಕಡಿಮೆಯಿದೆ.

  • ಕೊರೊನಾ ಎಫೆಕ್ಟ್ – ಸ್ವಗ್ರಾಮಕ್ಕೆ ಬಂದ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ

    ಕೊರೊನಾ ಎಫೆಕ್ಟ್ – ಸ್ವಗ್ರಾಮಕ್ಕೆ ಬಂದ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ

    ಲಕ್ನೋ: ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಸ್ವಗ್ರಾಮಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ಅಗ್ನಿಶಾಮಕದಳ ಸಿಬ್ಬಂದಿ ರಾಸಾಯನಿಕ ಸಿಂಪಡಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ದೆಹಲಿ, ಮುಂಬೈ ಸೇರಿದಂತೆ ಹಲವು ಮಹಾನಗರಗಳಿಂದ ಸ್ವಗ್ರಾಮಗಳಿಗೆ ತೆರಳಿದ್ದ ಕಾರ್ಮಿಕರ ಮೇಲೆ ಅಗ್ನಿ ಶಾಮಕ ದಳದ ಸಿಬ್ಬಂದಿ ರಾಸಾಯನಿಕಯುಕ್ತ ನೀರನ್ನು ಸಿಂಪಡಿಸಿದ್ದಾರೆ ಎಂದು ವರದಿಯಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೊರೊನಾ ವಿರುದ್ಧ ನಾವೆಲ್ಲರೂ ಜೊತೆಯಾಗಿ ಹೋರಾಡುತ್ತಿದ್ದೇವೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಆದರೆ ದಯವಿಟ್ಟು ಇಂತಹ ಅಮಾನವೀಯ ಕೆಲಸಗಳನ್ನು ಮಾಡಬೇಡಿ. ವಲಸೆ ಕಾರ್ಮಿಕರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮೇಲೆ ರಾಸಾಯನಿಕ ಸಿಂಪಡಿಸುವ ಮೂಲಕ ಅವರನ್ನು ಈ ರೀತಿ ನಡೆಸಿಕೊಳ್ಳಬೇಡಿ. ಇದು ಅವರನ್ನು ರಕ್ಷಿಸುವುದಿಲ್ಲ ಬದಲಿಗೆ ಅವರ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎಂದು ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.

    ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬರೇಲಿ ಪುರಸಭೆ ತಹಶಿಲ್ದಾರ್ ಪ್ರಕರಣದ ತನಿಖೆಗೆ ಆದೇಶಿಸಿದ್ದು, ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವರು, ಬಸ್‍ಗಳನ್ನು ಸ್ಯಾಜಿಟೈಜ್ ಮಾಡಲು ಹೇಳಿದ್ದೆವು ಆದರೆ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ಗ್ರಾಮದ ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ವಿನೋದ್ ರಾಜ್

    ಗ್ರಾಮದ ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ವಿನೋದ್ ರಾಜ್

    – ಪುತ್ರನಿಗೆ ತಾಯಿ ಲೀಲಾವತಿ ಸಾಥ್

    ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಎಚ್ಚರ ವಹಿಸುವುದರ ಭಾಗವಾಗಿ ನಟ ವಿನೋದ್ ರಾಜ್ ತಮ್ಮ ಹಳ್ಳಿಯನ್ನು ಕಾಪಾಡಲು ಮುಂದಾಗಿದ್ದು, ಇಡೀ ಗ್ರಾಮದ ರಸ್ತೆ ಹಾಗೂ ಮನೆಯ ಗೋಡೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ.

    ಸ್ವಗ್ರಾಮ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಟ ವಿನೋದ್ ರಾಜ್ ರಾಸಾಯನಿಕ ಸಿಂಪಡಣೆ ಮಾಡಿಸಿದ್ದು, ಈ ಮೂಲಕ ತಮ್ಮ ಗ್ರಾಮದ ಸುರಕ್ಷತೆಗೆ ಮುಂದಾಗಿದ್ದಾರೆ. ಹಿರಿಯ ನಟಿ ಡಾ.ಲೀಲಾವತಿ ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ನಟ ವಿನೋದ್ ರಾಜ್ ಅವರು ಸ್ವತಃ ಕ್ರಿಮಿನಾಶಕ ಗನ್ ಹಿಡಿದು ಸಿಂಪಡಿಸಿದ್ದಾರೆ. ಗ್ರಾಮಕ್ಕೆ ವೈರಸ್ ಕಾಲಿಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಔಷಧಿಯನ್ನು ಸಿಂಪಡಣೆ ಮಾಡಿಸಿದ್ದಾರೆ.

    ಗ್ರಾಮದ ಬೀದಿ, ಮನೆಗಳ ಗೋಡೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ವಿನೋದ್ ರಾಜ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಗ್ರಾಮವೇ ನಟ ವಿನೋದ್ ರಾಜ್ ಬೆಂಬಲಕ್ಕೆ ನಿಂತು ಗ್ರಾಮದ ಸ್ವಚ್ಛತೆಗೆ ಮುಂದಾಗಿದೆ. ತಮ್ಮ ತೋಟದಲ್ಲಿ ಬಳಸುವ ಮಿನಿ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ.

    ಈ ವೇಳೆ ಹಿರಿಯ ನಟಿ ಲೀಲಾವತಿ ಅವರು ಕೈಮುಗಿದು ಬೇಡಿಕೊಂಡಿದ್ದು, ಎಲ್ಲರೂ ಚೆನ್ನಾಗಿ ಬಾಳಬೇಕು ಅಂತ ಇಲ್ಲಿ ಬಂದವರು. ಆದರೆ ದೇವರು ಕಷ್ಟ ಕೊಟ್ಟಿದ್ದಾನೆ. ಕೊರೊನಾ ವೈರಸ್ ನಮ್ಮ ಕರ್ಮ ಆಗಿಬಿಟ್ಟಿದೆ. ಸರ್ಕಾರದ ಕಾನೂನು ಮೀರಬೇಡಿ, ಮನೆಯಲ್ಲೇ ಇದ್ದು ಸಹಕರಿಸಿ. ನಿಮ್ಮ ಮನೆ, ಜಾಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಪೊಲೀಸರು ಹೊಡೆದರು ಎಂದು ಹೇಳುವ ಬದಲು ಹೊಡೆಯದ ಹಾಗೆ ಇರಿ. ಮಾಸ್ಕ್ ಧರಿಸಿ ಶುಚಿತ್ವ ಕಾಪಾಡಿ ಎಂದು ಮನವಿ ಮಾಡಿದ್ದಾರೆ.

  • ಪಬ್‍ಜಿಯಲ್ಲಿ ಮಗ್ನ – ನೀರು ಎಂದು ರಾಸಾಯನಿಕ ಕುಡಿದು ಯುವಕ ಸಾವು

    ಪಬ್‍ಜಿಯಲ್ಲಿ ಮಗ್ನ – ನೀರು ಎಂದು ರಾಸಾಯನಿಕ ಕುಡಿದು ಯುವಕ ಸಾವು

    ಲಕ್ನೋ: ಮೊಬೈಲಿನಲ್ಲಿ ಪಬ್‍ಜಿ ಗೇಮ್ ಆಡುವುದರಲ್ಲಿ ಮಗ್ನನಾಗಿದ್ದ ಯುವಕನೊಬ್ಬ ನೀರು ಎಂದು ಭಾವಿಸಿ ರಾಸಾಯನಿಕವನ್ನು ಕುಡಿದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಆಗ್ರಾದ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಘಟನೆ ಸಂಭವಿಸಿದ್ದು, ಸಾವನ್ನಪ್ಪಿರುವ ಯುವಕನನ್ನು 22 ವರ್ಷದ ಸೌರಭ್ ಯಾದವ್ ಎಂದು ಗುರುತಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವಾಗ ನೀರು ಎಂದುಕೊಂಡು ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ಕುಡಿದು ಮೃತಪಟ್ಟಿದ್ದಾನೆ.

    ಈ ಕುರಿತು ಮಾಹಿತಿ ನೀಡಿದ ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದ ಇನ್ಚಾರ್ಜ್ ವಿಜಯ್ ಸಿಂಗ್, ಆಭರಣಗಳ ಡೀಲರ್ ಆಗಿರುವ ತನ್ನ ಸ್ನೇಹಿತ ಸಂತೋಷ್ ಶರ್ಮಾ ಅವರೊಂದಿಗೆ ಯುವಕ ಸೌರಭ್ ಪ್ರಯಾಣಿಸುತ್ತಿದ್ದ. ಶರ್ಮಾ ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಇವರಿಬ್ಬರೂ ಒಂದೇ ಬ್ಯಾಗನ್ನು ಹೊಂದಿದ್ದರು. ಸಂತೋಷ್ ಆಭರಣಗಳನ್ನು ಪಾಲಿಶ್ ಮಾಡುವ ವ್ಯಾಪಾರಕ್ಕಾಗಿ ಆಗ್ರಾಗೆ ತೆರಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ವಿಚಾರಣೆ ವೇಳೆ ಸಂತೋಷ್ ಮಾಹಿತಿ ನೀಡಿ, ಪ್ರಯಾಣದ ವೇಳೆ ಸೌರಭ್ ಮೊಬೈಲಿನಲ್ಲಿ ಪಬ್‍ಜಿ ಗೇಮ್ ಆಡುವುದರಲ್ಲಿ ಬ್ಯುಸಿಯಾಗಿದ್ದ, ಈ ವೇಳೆ ಕುಡಿಯಲು ನೀರು ತೆಗೆದುಕೊಳ್ಳಲು ಹೋಗಿದ್ದಾನೆ. ಆದರೆ ತಿಳಿಯದೇ ರಾಸಾಯನಿಕದ ಬಾಟಲ್ ತೆಗೆದುಕೊಂಡಿದ್ದಾನೆ. ಬಾಟಲಿಯನ್ನು ಪರಿಶೀಲಿಸದೇ ನೀರು ಎಂದು ರಾಸಾಯನಿಕವನ್ನೇ ಕುಡಿದಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ.

    ಅಭರಣಗಳನ್ನು ಸ್ವಚ್ಛಗೊಳಿಸಲು ಹಾಗೂ ಪಾಲಿಶ್ ಮಾಡಲು ಬಳಸುವ ರಾಸಾಯನಿಕವನ್ನು ಸೌರಭ್ ಯಾದವ್ ಕುಡಿದಿದ್ದಾನೆ. ನಂತರ ಸೌರಭ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಮೊರೆನಾ(ಆಗ್ರಾ ಹಾಗೂ ಗ್ವಾಲಿಯರ್ ನಡುವಿನ ನಗರ) ಹತ್ತಿರದಲ್ಲಿ ಕುಸಿದು ಬಿದ್ದಿದ್ದಾನೆ. ರೈಲು ನಿಲ್ದಾಣವನ್ನು ತಲುಪುವಷ್ಟರಲ್ಲಿ ಸೌರಭ್ ಮೃತಪಟ್ಟಿದ್ದಾನೆ. ಪ್ರಕರಣದ ಕುರಿತು ಖಚಿತಪಡಿಸಿಕೊಳ್ಳಲು ಮರಣೋತ್ತರ ಪ್ರರೀಕ್ಷೆಗಾಗಿ ಕಾಯುತ್ತಿದ್ದೇವೆ ಎಂದು ಸಿಂಗ್ ವಿವರಿಸಿದ್ದಾರೆ.