Tag: ರಾಷ್ಟ್ರೀಯ ಹೆದ್ದಾರಿ 66

  • ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 4 ಕಾಲು ಸೇತುವೆ ರಚನೆಗೆ ಕೇಂದ್ರದಿಂದ ಅನುದಾನ ಬಿಡುಗಡೆ: ಶೋಭಾ ಕರಂದ್ಲಾಜೆ

    ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 4 ಕಾಲು ಸೇತುವೆ ರಚನೆಗೆ ಕೇಂದ್ರದಿಂದ ಅನುದಾನ ಬಿಡುಗಡೆ: ಶೋಭಾ ಕರಂದ್ಲಾಜೆ

    ಬೆಂಗಳೂರು : ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಲವಾರು ಭಾಗಗಳಲ್ಲಿ ಕ್ರಾಸಿಂಗ್ ಗಳನ್ನು ನಿರ್ಮಾಣ ಮಾಡುವ ಅಗತ್ಯತೆ ಇದ್ದು ಈ ಕುರಿತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ವಿನಂತಿ ಮಾಡಲಾಗಿತ್ತು.

    ಕ್ಷೇತ್ರದ ಜನರ ಅಪೇಕ್ಷೆಯ ಮೇರೆಗೆ ಮಾಡಿದ ಮನವಿಯನ್ನು ಪುರಸ್ಕರಿಸಿ ಕೇಂದ್ರ ಭೂ ಸಾರಿಗೆ ಸಚಿವರು ಉಡುಪಿ ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಒಟ್ಟು ರೂ. 4.36 ಕೋಟಿಗಳ ವೆಚ್ಚದಲ್ಲಿ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿರುತ್ತಾರೆ. ಈ ಕೆಳಗಿನ ಪ್ರದೇಶಗಳಲ್ಲಿ ಸ್ಟೀಲ್ ಕಾಲುಸೇತುವೆ ನಿರ್ಮಾಣವಾಗಲಿದೆ.

    1. ಬಡಾ ಎರ್ಮಾಳ್, ಕಾಪು ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು)
    2. ಆನೆಗುಡ್ಡೆ, ಕುಂದಾಪುರ ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು)
    3. ಮಹೇಶ್ ಆಸ್ಪತ್ರೆಯ ಬಳಿ, ಉಡುಪಿ ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು)
    4. ಅಂಬಾಗಿಲು, ಉಡುಪಿ ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು)

    ಜನ ಸಂಚಾರ ಹೆಚ್ಚಿರುವ ಈ ಮೇಲಿನ ಪ್ರದೇಶಗಳಲ್ಲಿ, ರಸ್ತೆಯನ್ನು ದಾಟಲು ಜನಸಾಮಾನ್ಯರಿಗೆ ಸಹಾಯಕವಾಗುವಂತೆ ಸ್ಟೀಲ್ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿರುತ್ತದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ.

    ಜನರ ಅಗತ್ಯತೆಗಳನ್ನು ಮನಗಂಡು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

  • ಮಸಣ ಸೇರಿದ ಮದುವೆ ದಿಬ್ಬಣ – ವಧು ಸೇರಿ 7 ಜನರ ದುರ್ಮರಣ, 22 ಜನರಿಗೆ ಗಾಯ

    ಮಸಣ ಸೇರಿದ ಮದುವೆ ದಿಬ್ಬಣ – ವಧು ಸೇರಿ 7 ಜನರ ದುರ್ಮರಣ, 22 ಜನರಿಗೆ ಗಾಯ

    ಉತ್ತರ ಕನ್ನಡ: ಮದುವೆಗೆ ಹೊರಟ್ಟಿದ್ದವರ ಟೆಂಪೋ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಅನಂತವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಘಟನೆಯಲ್ಲಿ ವಧು ಸೇರಿದಂತೆ 6 ಜನರು ಸಾವನ್ನಪ್ಪಿದ್ದು, 22 ಜನ ಗಾಯಗೊಂಡಿದ್ದಾರೆ.

    ಇಂದು ಹಸೆಮಣೆ ಏರಬೇಕಿದ್ದ ವಧು ದಿವ್ಯಾ ಕುರ್ಡೇಕರ್ ಮೃತಪಟ್ಟಿದ್ದಾರೆ. ಖಾಸಗಿ ಬಸ್ ಚಾಲಕ ಉಮೇಶ್ ವಾಲ್ಮಿಕಿ (35), ಟೆಂಪೋ  ಚಾಲಕ ನಾಗಪ್ಪ ಗಣಿಗಾರ್(46), ಟೆಂಪೋದಲ್ಲಿದ್ದ ಪಾಲಾಕ್ಷಿ (42), ಬೇಬಿ (38) ಹಾಗೂ ಸುಬ್ರಹ್ಮಣ್ಯ (15) ಮೃತ ದುರ್ದೈವಿಗಳು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪೂಜಾ ಸೇಠ್ ಎಂಬವರು ಸಾವನ್ನಪ್ಪಿದ್ದಾರೆ.

    ದಾವಣಗೆರೆ ಮೂಲದವರಾದ ದಿವ್ಯಾ ಅವರ ಮದುವೆ ಹರೀಶ್ ಎಂಬವರ ಜೊತೆ ಇಂದು ಧರ್ಮಸ್ಥಳದಲ್ಲಿ ನಡೆಯಬೇಕಿತ್ತು. ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ  ಹಾಗೂ ಮಂಗಳೂರಿನಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ.

    ಗಂಭೀರವಾಗಿ ಗಾಯಗೊಂಡವರನ್ನ ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಕೆಲವರಿಗೆ ಭಟ್ಕಳ ತಾಲೂಕು ಆಸ್ಪತ್ರೆ ಹಾಗೂ ಮುರಡೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಅಪರಿಚಿತ ವಾಹನ ಬೈಕಿಗೆ ಡಿಕ್ಕಿ: ಬೈಕ್ ಸವಾರ ಸಾವು

    ಅಪರಿಚಿತ ವಾಹನ ಬೈಕಿಗೆ ಡಿಕ್ಕಿ: ಬೈಕ್ ಸವಾರ ಸಾವು

    ಕಾರವಾರ: ಮಂಗಳವಾರ ನಸುಕಿನ 2 ಗಂಟೆಯ ವೇಳೆಯಲ್ಲಿ ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ದಂಡುಕುಳಿಯಲ್ಲಿ ನೆಡೆದಿದೆ.

    ಅಫ್ರೋಜ್ (16) ಮೃತ ಬೈಕ್ ಸವಾರ. ಸಹ ಸವಾರ ಅಫ್ರೋಜ್ ತಂದೆ ಇಕ್ಬಾಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‍ನಲ್ಲಿದ್ದ ಮತ್ತೊಬ್ಬ ಅಫ್ರೋಜ್ ಸಹೋದರನಿಗೂ ಗಾಯಗಳಾಗಿವೆ. ತಂದೆ ಮತ್ತು ಮಕ್ಕಳು ಮೂವರು ಒಂದೇ ಬೈಕ್‍ನಲ್ಲಿ ಕುಮಟಾದ ಕಡಲೆಯಿಂದ ಮಿರ್ಜಾನ್‍ಗೆ ಬರುತ್ತಿರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ.

    ಗಾಯಾಳು ಇಕ್ಬಾಲ್‍ರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‍ಗೆ ಡಿಕ್ಕಿ ಹೊಡೆದು ವಾಹನ ಸಮೇತವಾಗಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.