Tag: ರಾಷ್ಟ್ರೀಯ ಹೆದ್ದಾರಿ-4

  • ನೆಲಮಂಗಲ ಬಳಿ ಕಂಟೈನರ್ ಲಾರಿ ಪಲ್ಟಿ- ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ನೆಲಮಂಗಲ ಬಳಿ ಕಂಟೈನರ್ ಲಾರಿ ಪಲ್ಟಿ- ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಬೃಹತ್ ಕಂಟೈನರ್ ಲಾರಿ ಪಲ್ಟಿಯಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಬಳಿ ನಡೆದಿದೆ.

    ನೆಲಮಂಗಲ ತಾಲೂಕಿನ ಎಡೆಹಳ್ಳಿ ಸಮೀಪ ಬೃಹತ್ ಕಂಟೈನರ್ ಲಾರಿಯೊಂದು ಪಲ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಸುಮಾರು 5 ಗಂಟೆ ಹೊತ್ತಿಗೆ ಕಂಟೈನರ್ ಪಲ್ಟಿಯಾಗಿದ್ದು, ಬರೋಬ್ಬರಿ 20 ನಿಮಿಷಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಇದರಿಂದಾಗಿ ನೂರಾರು ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು.

    ಕೈಗಾರಿಕಾ ಪ್ರದೇಶದಿಂದ ತುಮಕೂರು ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಕಂಟೈನರ್ ಪಲ್ಟಿಯಾಗಿದೆ. ನಂತರ ಪೊಲೀಸರು ಆಗಮಿಸಿ ರಾಷ್ಟ್ರೀಯಲ್ಲಿ ಪಲ್ಟಿಯಾಗಿದ್ದ ಲಾರಿಯನ್ನು ಕ್ರೇನ್ ಮೂಲಕ ತೆರವುಗೊಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಹಾನಿ ಸಂಭವಿಸಿಲ್ಲ. ಲಾರಿ ಚಾಲಕ ಸಹ ಬಚಾವ್ ಆಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ- ರಾಷ್ಟ್ರೀಯ ಹೆದ್ದಾರಿ ಬಂದ್, ಟ್ರಾಫಿಕ್ ಜಾಮ್

    ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ- ರಾಷ್ಟ್ರೀಯ ಹೆದ್ದಾರಿ ಬಂದ್, ಟ್ರಾಫಿಕ್ ಜಾಮ್

    – ಮೈಸೂರಿನಲ್ಲಿ ಸಹ ಅಬ್ಬರಿಸಿದ ಮಳೆ

    ಹುಬ್ಬಳ್ಳಿ/ಮೈಸೂರು: ನಗರದಲ್ಲಿಂದು ಧಾರಾಕಾರವಾಗಿ ಮಳೆ ಸುರಿದಿದ್ದು, ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.

    ಭಾರೀ ಮಳೆಯಿಂದಾಗಿ ಹುಬ್ಬಳ್ಳಿಯ ಕುಂದಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ಸೇತುವೆ ಕಾಮಗಾರಿಯಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತು. ಮಳೆಯ ನೀರು ಹೆಚ್ಚು ಬಂದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಹುಬ್ಬಳ್ಳಿ- ಕುಂದಗೋಳ ರಸ್ತೆ ಹಾಗೂ ಹುಬ್ಬಳ್ಳಿ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಯಿತು.

    ನೂರಾರು ವಾಹನಗಳು ರಸ್ತೆಯಲ್ಲಿಯೇ ನಿಂತಿದ್ದವು. ರಸ್ತೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆದ ಬಳಿಕ ಟ್ರಾಫಿಕ್ ಜಾಮ್ ಸ್ವಲ್ಪ ತಗ್ಗಿತು. ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಮಳೆ ನೀರಿನಿಂದ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಹೀಗಾಗಿ ಕೆಲ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಸವಾರರು ಪರದಾಡುವಂತಾಯಿತು. ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಸುರಿಯಿತು.

    ಇತ್ತ ಮೈಸೂರಿನಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು, ಸಂಜೆಯ ವೇಳೆಗೆ ದಿಢೀರ್ ಆರಂಭವಾದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಮಳೆ ನೀರು ರಸ್ತೆಗಳಲ್ಲಿ ಉಕ್ಕಿ ಹರಿಯಿತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದಿಢೀರ್ ಮಳೆಗೆ ಮೈಸೂರು ಜನ ಹೈರಾಣಾಗಿದ್ದಾರೆ.

  • ಮಹಾರಾಷ್ಟ್ರ-ಕರ್ನಾಟಕದ ಸಂಪರ್ಕ ಕೊಂಡಿ NH4 ಪುನರಾರಂಭ

    ಮಹಾರಾಷ್ಟ್ರ-ಕರ್ನಾಟಕದ ಸಂಪರ್ಕ ಕೊಂಡಿ NH4 ಪುನರಾರಂಭ

    ಬೆಳಗಾವಿ: ವರುಣನ ಅಬ್ಬರದಿಂದಾಗಿ ಕಳೆದ ಒಂದು ವಾರದಿಂದ ಬಂದ್ ಆಗಿದ್ದ ಮಹಾರಾಷ್ಟ್ರ-ಕರ್ನಾಟಕ ಸಂಪರ್ಕ ಕೊಂಡಿ ರಾಷ್ಟ್ರೀಯ ಹೆದ್ದಾರಿ ನಾಲ್ಕು ಸಂಚಾರಕ್ಕೆ ಮುಕ್ತವಾಗಿದೆ.

    ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ಹರಿಯುವ ವೇದಗಂಗಾ ನದಿ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾರ ಪ್ರಮಾಣದಲ್ಲಿ ಹರಿಯುತ್ತಿತ್ತು. ಹೀಗಾಗಿ ಕರ್ನಾಟಕ-ಮಹಾರಾಷ್ಟ್ರ ನಡುವಿನ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು. ಜೊತೆಗೆ ಭೂ ಕುಸಿತದ ಕಾರಣ ಬೆಳಗಾವಿಯಿಂದ ಕೊಲ್ಹಾಪುರದವರೆಗೆ ರಸ್ತೆ ಸಂಚಾರ ನಿಷೇಧಿಸಲಾಗಿತ್ತು.

    ಮಳೆ ಹಾಗೂ ಪ್ರವಾಹ ಕಡಿಮೆಯಾಗುತ್ತಿರುವ ಪರಿಣಾಮ ವೇದಗಂಗಾ ನದಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದರಿಂದಾಗಿ ಬೆಳಗಾವಿ-ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ಪ್ರಾರಂಭ ಮಾಡಲಾಗಿದೆ. ಸದ್ಯ ಸ್ಥಳೀಯ ಸಣ್ಣ ಪ್ರಮಾಣದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಹಂತ ಹಂತವಾಗಿ ಬಸ್, ಲಾರಿ ಸೇರಿದಂತೆ ಭಾರೀ ಪ್ರಮಾಣದ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ: ಪ್ರಯಾಣಿಕರು ಪಾರು, ಟ್ರ್ಯಾಕ್ಟರ್ ಚಾಲಕ ಸಾವು

    ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ: ಪ್ರಯಾಣಿಕರು ಪಾರು, ಟ್ರ್ಯಾಕ್ಟರ್ ಚಾಲಕ ಸಾವು

    ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಭಾರೀ ಅನಾಹುತ ತಪ್ಪಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹಾನಗಲ್ ತಾಲೂಕು ಆಡೂರು ಗ್ರಾಮದ ಮೈನುದೀನ್ (26) ಮೃತ ಚಾಲಕ. ಶಿಗ್ಗಾಂವಿ ತಾಲೂಕು ನೀರಲಗಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿದ್ದ ಆರು ಜನರಿಗೆ ಗಾಯವಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆಯ ವಿವರ: ಆಡೂರು ಗ್ರಾಮ ಕೆಲವರು ಕೂಲಿ ಕೆಲಸಕ್ಕಾಗಿ ಹುಬ್ಬಳ್ಳಿಗೆ ಟ್ರ್ಯಾಕ್ಟರ್ ನಲ್ಲಿ ಹೋಗುತ್ತಿದ್ದರು. ನೀರಲಗಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಟ್ರ್ಯಾಕ್ಟರ್ ಬರುತ್ತಿದ್ದಂತೆ ವೇಗವಾಗಿ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರ್ಯಾಕ್ಟರ್ ಎಂಜಿನ್ ಪಲ್ಟಿಹೊಡೆದು ಅದರ ಕೆಳಗೆ ಚಾಲಕ ಮೈನುದೀನ್ ಸಿಲುಕಿ ಮೃತಪಟ್ಟಿದ್ದಾನೆ.

    ಅದೃಷ್ಟವಶಾತ್ ಟ್ರೈಲರ್ ನಲ್ಲಿ ಕುಳಿತಿದ್ದ ಜನರು ಹಾಗೂ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಡಸ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರಾಣವನ್ನು ಲೆಕ್ಕಿಸದೇ ಹೆದ್ದಾರಿ ಮೇಲೆ ಬಿದ್ದಿದ್ದ ಈರುಳ್ಳಿ ಆಯ್ದುಕೊಂಡ ಜನರು

    ಪ್ರಾಣವನ್ನು ಲೆಕ್ಕಿಸದೇ ಹೆದ್ದಾರಿ ಮೇಲೆ ಬಿದ್ದಿದ್ದ ಈರುಳ್ಳಿ ಆಯ್ದುಕೊಂಡ ಜನರು

    ಬೆಂಗಳೂರು: ಪ್ರಾಣವನ್ನು ಲೆಕ್ಕಿಸದೇ ರಸ್ತೆ ಮೇಲೆ ಬಿದ್ದ ಈರುಳ್ಳಿ ಆಯ್ದುಕೊಳ್ಳಲು ಸಾರ್ವಜನಿಕರು ಮುಂದಾದ ಘಟನೆ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿನಿಂದ ತುಮಕೂರು ಕಡೆಗೆ ಈರುಳ್ಳಿ ತುಂಬಿದ್ದ ವಾಹನ ಹೋಗಿದೆ. ಚಾಲಕನ ಅರಿವಿಗೆ ಬಾರದೆ ವಾಹನದಿಂದ ಈರುಳ್ಳಿ ಮೂಟೆಗಳು ಗುಂಡೇನಹಳ್ಳಿ ಬಳಿಯ ನಾಲ್ಕೈದು ಸ್ಥಳಗಳಲ್ಲಿ ಉರುಳಿ ಬಿದ್ದಿದ್ದವು

    ಮೂಟೆ ಕೆಳಗೆ ಬಿಳುತ್ತಿದಂತೆ ಈರುಳ್ಳಿ ರಸ್ತೆಯ ಬದಿಗೆ ಹಾಗೂ ಮಧ್ಯದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹೆದ್ದಾರಿಯಲ್ಲಿ ಭಾರೀ ಗಾತ್ರದ ವಾಹಗಳು ಸಂಚಾರ ದಟ್ಟನೆ ನಡುವೆಯೇ ಸ್ಥಳೀಯರು ಹಾಗೂ ಕೆಲ ಪ್ರಯಾಣಿಕರು ಈರುಳ್ಳಿ ಆಯ್ದು ಚೀಲಗಳಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ.

  • ವೀಡಿಯೋ: ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು

    ವೀಡಿಯೋ: ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು

    ಬೆಂಗಳೂರು: ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿದ್ದು ಚಾಲಕ ಸೇರಿದಂತೆ ಮೂವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿ ಬಳಿ ಶನಿವಾರ ರಾತ್ರಿ ನಡೆದಿದೆ.

    ತುಮಕೂರು ಜಿಲ್ಲೆ ತುರುವೇಕೆರೆಯಿಂದ ಬೆಂಗಳೂರಿಗೆ ಸ್ಕಾರ್ಪಿಯೋ ಕಾರು ಬರುತ್ತಿತ್ತು. ಬೆಂಗಳೂರಿನ ರಾಮಕೃಷ್ಣ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ಆಕಸ್ಮಿಕವಾಗಿ ಇಂಜಿನ್‍ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕಾರು ಸಂಪೂರ್ಣ ಭಸ್ಮವಾಗಿದೆ.

    ಈ ಘಟನೆಯಿಂದ ಕೆಲಕಾಲ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ. ಘಟನಾ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=M9MleBzq1lY

     

  • ಹಾವೇರಿ: ಕಾರು ಪಲ್ಟಿ ಹೊಡೆದು ಇಬ್ಬರ ಸಾವು

    ಹಾವೇರಿ: ಕಾರು ಪಲ್ಟಿ ಹೊಡೆದು ಇಬ್ಬರ ಸಾವು

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ರವೀಂದ್ರನ್ (35) ಮತ್ತು ಲಕ್ಷ್ಮೀ (30) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಹುಬ್ಬಳ್ಳಿ ನಗರದಿಂದ ಬೆಂಗಳೂರಿಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ಶಿಗ್ಗಾವಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

  • ಬೆಳಗಾವಿ: ಬೈಕ್‍ಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ಮೂವರ ದುರ್ಮರಣ

    ಬೆಳಗಾವಿ: ಬೈಕ್‍ಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ಮೂವರ ದುರ್ಮರಣ

    ಬೆಳಗಾವಿ: ಕಾರೊಂದು ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗುರುವಾರ ತಡರಾತ್ರಿ ನಡೆದಿದೆ.

    ಮುಜಾಹಿದ್ ದೇಸಾಯಿ, ಅಬ್ದುಲ್‍ರಜಾಕ್ ಪಟೇಲ್ ಹಾಗೂ ಕಲೀಮುನ ಪಟೇಲ್ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಗಳು. ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಕರೋಶಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

    ಮೃತರು ಬೆಳಗಾವಿಯಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಕರೋಶಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಎದುಗಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮೇಲೆ ಇದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.