Tag: ರಾಷ್ಟ್ರೀಯ ತುರ್ತು ಪರಿಸ್ಥಿತಿ

  • ಕೊರೊನಾ ಕೋಲಾಹಲ – ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

    ಕೊರೊನಾ ಕೋಲಾಹಲ – ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

    – ಅಮೆರಿಕದಲ್ಲಿ 48 ಸಾವು, 2 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆ

    ವಾಷಿಂಗ್ಟನ್: ಮಹಾಮಾರಿ ಕೊರೊನಾ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದ್ದು, ಅಭಿವೃದ್ಧಿ ಹೊಂದಿದ ದೇಶಗಳು ಸಹ ಇದಕ್ಕೆ ನಲುಗಿ ಹೋಗುತ್ತಿವೆ. ಈ ವೈರಸ್‍ನಿಂದಾಗಿ ಅಮೆರಿಕಾ ತಲ್ಲಣಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ಈ ಕುರಿತು ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿಯವರು ಸಹ ಈ ಕುರಿತು ಸಹಕರಿಸಬೇಕು. ಶಂಕಿತರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಬೇಕು ಎಂದು ಪರೀಕ್ಷಾ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಡಲು ಫೆಡರಲ್ ಸರ್ಕಾರಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನಿಡಲಾಗಿದ್ದು, ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದಾರೆ. ಅಲ್ಲದೆ ಪರಿಸ್ಥಿತಿ ನಿಭಾಯಿಸಲು 3.69 ಲಕ್ಷ ಕೋಟಿ ರೂ.(50 ಬಿಲಿಯನ್ ಡಾಲರ್) ಘೋಷಿಸಿರುವುದಾಗಿ ಎಂದು ಸ್ಪಷ್ಟಪಡಿಸಿದ್ದಾರೆ.

    ಮುಂದಿನ ಎಂಟು ವಾರಗಳ ಕಾಲ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಈ ವೈರಸ್‍ನ್ನು ನಾವು ಹತ್ತಿಕ್ಕುವಲ್ಲಿ ಯಶಸ್ವಿಯಾಗಲಿದ್ದೇವೆ. ಎಲ್ಲ ರಾಜ್ಯಗಳು ತುರ್ತು ಆಪರೇಷನ್ ಕೇಂದ್ರಗಳನ್ನು ತೆರೆಯಬೇಕು. ಖಾಸಗಿಯವರ ಜೊತೆಗೂ ಸರ್ಕಾರ ಸಹಭಾಗಿಯಾಗಲಿದೆ. ಪರೀಕ್ಷಾ ಕೇಂದ್ರಗಳ ಕೊರತೆಯಿದೆ ಎಂಬ ಟೀಕೆ ಕೇಳಿಬರುತ್ತಿದ್ದು, ವೈರಸ್ ಪರೀಕ್ಷಾ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸಿ ಎಂದು ಕರೆ ನೀಡಿದ್ದಾರೆ.

    ಅಮೆರಿಕನ್ನರ ಅಗತ್ಯತೆಗಳನ್ನು ಪೂರೈಸಲು ದೇಶದ ಪ್ರತಿ ಆಸ್ಪತ್ರೆಯಲ್ಲಿ ತುರ್ತು ಸಿದ್ಧತೆ ಕೈಗೊಳ್ಳಬೇಕು. ಜನತೆಗೆ ಅಗತ್ಯವಿರುವ ಎಲ್ಲ ಬಗೆಯ ಕ್ರಮಗಳನ್ನು, ಅಗತ್ಯ ಕಾಳಜಿ, ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಇದಕ್ಕೆ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಾವು ನಿವಾರಿಸುತ್ತೇವೆ ಎಂದು ತಿಳಿಸಿದ್ದಾರೆ.

    ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವುದರಿಂದ ಎಲ್ಲ ರೀತಿಯ ಹಕ್ಕುಗಳನ್ನು ಹಾಗೂ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಆರೋಗ್ಯ ಕಾರ್ಯದರ್ಶಿಗೆ ನೀಡಲಾಗಿದೆ. ಅಲ್ಲದೆ ಎಲ್ಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಟೆಲಿ ಮೆಡಿಸಿನ್ ಹಾಗೂ ಆಸ್ಪತ್ರೆಗಳಿಗೆ ಹೆಚ್ಚುವರಿ ವೈದ್ಯರನ್ನು ಒದಗಿಸುವ ಸ್ವಾತಂತ್ರ್ಯವನ್ನು ಸಹ ಕಾರ್ಯದರ್ಶಿಗೆ ನೀಡಲಾಗಿದೆ.

    ಅಮೆರಿಕದಲ್ಲಿ ಒಟ್ಟು 2,100 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 48 ಜನ ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.