Tag: ರಾಷ್ಟ್ರಪತಿ New Delhi

  • 71ನೇ ಗಣರಾಜ್ಯೋತ್ಸವ- ರಾಷ್ಟ್ರಪತಿಯಿಂದ ಧ್ವಜಾರೋಹಣ

    71ನೇ ಗಣರಾಜ್ಯೋತ್ಸವ- ರಾಷ್ಟ್ರಪತಿಯಿಂದ ಧ್ವಜಾರೋಹಣ

    ನವದೆಹಲಿ: 71ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜ್‍ಪಥ್‍ನಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಬಾರಿಯ ಗಣತಂತ್ರ ಹಬ್ಬಕ್ಕೆ ಬ್ರೆಜಿಲ್‍ನ ಅಧ್ಯಕ್ಷ ಜೈರ್ ಬೋಲ್ಸೋನಾರೊ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.

    ಅಮರ್ ಜವಾನ್ ಜ್ಯೋತಿ ಬಳಿ ಭಾರತದ ಹೆಮ್ಮೆಯಾಗಿರುವ ಮೂರು ಸೇನಾ ಪಡೆಗಳ ಮುಖ್ಯಸ್ಥರ ಉಪಸ್ಥಿತಿ ಇದ್ದು, ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ಇರುವ ‘ಯುದ್ಧ ಸ್ಮಾರಕ’ಕ್ಕೆ ದೇಶಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ಯೋಧರಿಗೆ ಪುಷ್ಪ ನಮನ ಸಲ್ಲಿಸಿ, ಎರಡು ನಿಮಿಷ ಹುತಾತ್ಮರಾಗಿರುವರ ಆತ್ಮಕ್ಕೆ ಶಾಂತಿ ದೊರಕಲೆಂದು ಮೌನಾಚರಣೆ ಮಾಡಿದರು. ಹಾಗೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಅಮರರಾದ ಭಾರತದ ಯೋಧರಿಗೆ ನಮನ ಸಲ್ಲಿಸಿದರು.

    ರಾಜ್‍ಪಥ್‍ಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಮುಖ್ಯ ಅತಿಥಿ ಬ್ರೆಜಿಲ್‍ನ ಅಧ್ಯಕ್ಷ ಜೈರ್ ಬೋಲ್ಸೋನಾರೊ ಅವರನ್ನು ಪ್ರಧಾನ ಮಂತ್ರಿಯವರು ಸ್ವಾಗತಿಸಿದರು. ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ 21 ಕುಶಾಲತೋಪು ಸಿಡಿಸಿ ರಾಷ್ಟ್ರ ಧ್ವಜಕ್ಕೆ ಹಾಗೂ ಭಾರತಾಂಭೆಗೆ ಸೇನಾ ಗೌರವ ಸಲ್ಲಿಸಲಾಯಿತು.

    ಲೆಫ್ಟಿನೆಂಟ್ ಜನರಲ್ ಅಸಿತ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಇದೇ ವೇಳೆ ಮಿಗ್ 17 ಹೆಲಿಕಾಪ್ಟರ್ ಗಳು ಧ್ವಜವಂಧನೆ ಸಲ್ಲಿಸಲಾಯಿತು. ಈ ಪಥಸಂಚಲದಲ್ಲಿ ಸೇನಾ ಚಕ್ರ ಪಡೆದಿರುವ ಯೋಧರ ಶಿಸ್ತಿನ ಪರೇಡ್ ಬಳಿಕ ಅಶ್ವದಳ, ಒಂಟೆದಳ ಪಥಸಂಚಲನ ನಡೆಯಿತು. ನಂತರ ಅರ್ಜುನ್ ಟಿ-90 ಭೀಷ್ಮ ಟ್ಯಾಂಕ್, ಗಡಿಪ್ರತಿರೋಧಿ ವಾಹನ ಪ್ರದರ್ಶಿಸಲಾಯಿತು. ಹಾಗೆಯೇ ಕೆ-9 ವಜ್ರ ಟ್ಯಾಂಕ್, ಧನುಷ್ ಗನ್ ವ್ಯವಸ್ಥೆಯ ಪ್ರದರ್ಶನ, ಅಲ್ಪಾವಧಿಯ ಸೇತುವೆ ವ್ಯವಸ್ಥೆಯ ಪ್ರದರ್ಶನ, ಕೊಂಡೊಯ್ಯಬಹುದಾದ ಸ್ಯಾಟಲೈಟ್ ಟರ್ಮಿನಲ್, ಆಕಾಶ್ ಕ್ಷಿಪಣಿ ವ್ಯವಸ್ಥೆ ಪಥಸಂಚಲದಲ್ಲಿ ಪ್ರದರ್ಶನಗೊಂಡಿತು.