Tag: ರಾಷ್ಟ್ರಪತಿ ಭವನ್

  • ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

    ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

    ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಈವರೆಗೆ ದೇಶದಲ್ಲಿ 75 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆ ಮುಜಾಗ್ರತಾ ಕ್ರಮವಾಗಿ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಪ್ರವೇಶವನ್ನು ರದ್ದುಗೊಳಿಸಲಾಗಿದೆ.

    ಕೊರೊನಾ ಭೀತಿಯಿಂದ ಈಗಾಗಲೇ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದಂತೆ ಸೂಚಿಸಿ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇದೇ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ಟೀಟ್ ಮಾಡಿ, ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಭೇಟಿ ಅವಕಾಶ ನಿರಾಕರಿಸಲಾಗಿದೆ. ವಿದೇಶಿ ಪ್ರಯಾಣಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ರಾಷ್ಟ್ರಪತಿಗಳು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್‍ನಲ್ಲಿ, ರಾಷ್ಟ್ರಪತಿ ಭವನದ ಮ್ಯೂಸಿಯಂ ಕಾಂಪ್ಲೆಕ್ಸ್ ಹಾಗೂ ಗಾರ್ಡ್ ಸಮಾರಂಭ ಬದಲಾವಣೆಗೆ ಕೂಡ ಸಾರ್ವಜನಿಕರ ಭೇಟಿಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯನ್ನು ಕೊರೊನಾ ವೈರಸ್ ಸೋಂಕು ಜನರಲ್ಲಿ ಆತಂಕ ಸೃಷ್ಟಿಸಿದೆ. ಈವರೆಗೆ 6 ಕೊರೊನಾ ಸೋಂಕಿತ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದ್ದು, ಇದರಿಂದ ಎಚ್ಚೆತ್ತ ದೆಹಲಿ ಸರ್ಕಾರ 5ನೇ ತರಗತಿವರೆಗೆ ಪ್ರಾಥಮಿಕಾ ಶಾಲೆಗಳಿಗೆ ರಜೆ ಘೋಷಿಸಿದೆ. ಸರ್ಕಾರಿ ನೌಕರರ ಬಯೋ ಮೆಟ್ರಿಕ್ ಹಾಜರಾತಿ ಕೂಡ ರದ್ದುಗೊಳಿಸಿದೆ.

    ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಹಾಮಾರಿ ಕೊರೊನಾ ಹರಡುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ, ಉತ್ತರ, ನಗರ ಭಾಗದ ಶಾಲೆಗಳಲ್ಲಿ 1ರಿಂದ 6ನೇ ತರಗತಿವರೆಗೆ ಪರೀಕ್ಷೆಯನ್ನು ರದ್ದುಗೊಳಿಸಿದೆ.

    ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ, 1ರಿಂದ 6ನೇ ತರಗತಿವರೆಗೆ ಪರೀಕ್ಷೆ ಇಲ್ಲ. 7ರಿಂದ 9ನೇ ತರಗತಿವರೆಗೆ ಮಾರ್ಚ್ 23 ಒಳಗೆ ಪರೀಕ್ಷೆ ನಡೆಸಬೇಕು. ಆ ಬಳಿಕ ವಿದ್ಯಾರ್ಥಿಗಳಿಗೆ ರಜೆ ನೀಡಬೇಕು. ಹಾಗೆಯೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಗೊಳಿಸಿರುವ ದಿನಾಂಕದಂದೆ ಪರೀಕ್ಷೆ ನಡೆಸಲಾಗುವುದು. ಅಲ್ಲದೇ ವಿದ್ಯಾರ್ಥಿಗಳು ನಿಗದಿತ ಪರೀಕ್ಷೆಯ ದಿನ ಮಾತ್ರ ಶಾಲೆಗೆ ಬಂದು ಪರೀಕ್ಷೆ ಬರೆಯಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.