Tag: ರಾಷ್ಟ್ರಕವಿ

  • ನಾಡಗೀತೆಗೆ ಕಾಲಮಿತಿ ನಿಗದಿ ಮಾಡಿದ ಸರ್ಕಾರ

    ನಾಡಗೀತೆಗೆ ಕಾಲಮಿತಿ ನಿಗದಿ ಮಾಡಿದ ಸರ್ಕಾರ

    ಬೆಂಗಳೂರು: ನಾಡಗೀತೆ ಕುರಿತ ಗೊಂದಲಕ್ಕೆ ಕೊನೆಗೂ ಸರ್ಕಾರ (Karnataka Government) ತೆರೆ ಎಳೆದಿದೆ. ರಾಷ್ಟ್ರಕವಿ ಕುವೆಂಪು (Kuvempu) ವಿರಚಿತ ನಾಡಿನ ಹೆಮ್ಮೆಯ ನಾಡಗೀತೆಗೆ ಕಾಲಮಿತಿಯನ್ನು ಸರ್ಕಾರ ನಿಗದಿ ಮಾಡಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಬಸವರಾಜ್‌ ಬೊಮ್ಮಾಯಿ (Basavaraj Bommai), ರಾಷ್ಟ್ರಕವಿ ಕುವೆಂಪು ವಿರಚಿತ ನಾಡಿನ ಹೆಮ್ಮೆಯ ನಾಡಗೀತೆ “ಜಯಭಾರತ ಜನನಿಯ ತನುಜಾತೆ” (Jaya Bharata Jananiya Tanujate) ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಿದ್ದೇವೆ. ಸಂಗೀತ ವಿದೂಷಿ ಎಸ್ ಆರ್. ಲೀಲಾವತಿ ಅಧ್ಯಕ್ಷತೆ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ, ಇನ್ನು ಮುಂದೆ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ ನಲ್ಲಿ ಹಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಇತ್ತ ಸಚಿವ ಸುನೀಲ್ ಕುಮಾರ್ (Sunil Kumar) ಟ್ವೀಟ್ ಮಾಡಿ, ಕುವೆಂಪು ವಿರಚಿತ ನಾಡಗೀತೆ “ಜಯಭಾರತ ಜನನಿಯ ತನುಜಾತೆ” ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷವೆನಿಸುತ್ತಿದೆ. ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ.

    ನಾಡಗೀತೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ಪ್ರಸ್ತಾಪಕ್ಕೆ ಸಮ್ಮತಿ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಅಭಿನಂದನೆಗಳು. ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಇನ್ನು ಅಧಿಕೃತವಾಗಿ ಹಾಡಲಾಗುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಲವಂತದ ಮತಾಂತರ ತಡೆಗೆ ನಿರ್ದೇಶನ ಕೋರಿ ಅರ್ಜಿ – ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ವಿವಾದವೇನಿತ್ತು..?: 2005ರಿಂದಲೂ ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ ನೆನೆಗುದಿಗೆ ಬಿದ್ದಿತ್ತು. ಕೆಲವೊಂದು ಕಾರ್ಯಕ್ರಮಗಳಲ್ಲಿ 7-8 ನಿಮಿಷಗಳ ಕಾಲ ಹಾಡಲಾಗುತ್ತಿತ್ತು. ಹೀಗಾಗಿ ದಾಟಿ ಹಾಗೂ ಕಾಲಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂದು ಒತ್ತಾಯ ಸರ್ಕಾರದ ಮುಂದಿತ್ತು.

    ಇದೀಗ ಸುನೀಲ್ ಕುಮಾರ್ ಅವರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವಂತೆ ಹಿರಿಯ ಸಂಗೀತ ವಿದೂಷಿ ಎಸ್.ಆರ್ ಲೀಲಾವತಿ ಅಧ್ಯಕ್ಷತೆಯಲ್ಲಿ 18 ಜನ ಇರುವ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕೆಂಬ ನೀಡಿದ್ದ ಶಿಫಾರು ಇದೀಗ ಅಧಿಕೃತಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಕವಿ ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ

    ರಾಷ್ಟ್ರಕವಿ ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ

    ಚಿಕ್ಕಮಗಳೂರು: ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರಿಗೆ ಬಿಳಿ ರಕ್ತದ ಕಣಗಳು ಕಡಿಮೆಯಾಗಿದ್ದವು. ಹೀಗಾಗಿ ಕಳೆದ ಮೂರ್ನಾಲ್ಕು ದಿನದಿಂದ ಚಿಕಿತ್ಸೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ರಾಜೇಶ್ವರಿ ತೇಜಸ್ವಿ 1966ರಲ್ಲಿ ತನಗಿಂತ ಒಂದು ವರ್ಷದ ಕಿರಿಯ ಪೂರ್ಣಚಂದ್ರ ತೇಜಸ್ವಿ ಅವರನ್ನ ಮದುವೆಯಾಗಿದ್ದರು. ಹೆಣ್ಣು ಮಕ್ಕಳು ಕೂಡ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್ (ಡಿಗ್ರಿ) ಮತ್ತು ಎಂ.ಎ ಮಾಡಿದ್ದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿ ಮದುವೆಯಾದರು. ಆ ನಂತರ ಇವರ ಬದುಕಿನ ದಿಕ್ಕೇ ಬದಲಾಯಿತು.

    1966ರಲ್ಲಿ ತೇಜಸ್ವಿ ಅವರನ್ನ ಮದುವೆಯಾದ ವಿವಾಹವಾದರು. ಬಳಿಕ ಪತಿ ಜೊತೆ ಸೇರಿ ಪುಸ್ತಕ ಪ್ರೇಮವನ್ನ ಬೆಳೆಸಿಕೊಂಡಿದ್ದರು. ಹಲವು ಪುಸ್ತಕಗಳನ್ನ ಬರೆದಿದ್ದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರು ಬರೆದ ಮೊದಲ ಪುಸ್ತಕ. ಈಗ ಆ ಪುಸ್ತಕ ಐದನೇ ಮುದ್ರಣ ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ರಾಜೇಶ್ವರಿ ವರ ಎರಡನೆಯ ಪುಸ್ತಕ. ಪುಸ್ತಕ ಪ್ರೇಮದ ಜೊತೆ ಇವರ ಹವ್ಯಾಸವೂ ವಿಭಿನ್ನವಾಗಿದೆ. ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ಮಕ್ಕಳಿಗೆ ಸ್ಟ್ಯಾಂಪ್ ಕಲೆಕ್ಟ್ ಮಾಡಲು ಪ್ರೇರೇಪಿಸುತ್ತಿದ್ದರು. ಜಗತ್ತು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದರು ಇ.ಮೇಲ್ ಇದ್ದರೂ ಅಪರೂಪದ ಸ್ಟ್ಯಾಂಪ್ ಕಲೆಕ್ಟ್ ಮಾಡಿದ್ದಾರೆ.

    ರಾಜೇಶ್ವರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರೂ ಸಾಫ್ಟ್ ವೇರ್ ಇಂಜಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ತೇಜಸ್ವಿ ನಿಧನದ ನಂತರ ರಾಜೇಶ್ವರಿ ತೇಜಸ್ವಿಯವರು ಅಪರೂಪದ ಹವ್ಯಾಸಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದರು. ತೇಜಸ್ವಿ ಅವರ ನಿಧನದ ದಿನ ಅವರ ಕೊಠಡಿ ಹೇಗಿತ್ತೋ ಇಂದಿಗೂ ಹಾಗೆ ಇದೆ. ಒಂದೇ ಒಂದು ಪೇಪರ್ ಕೂಡ ಅಲುಗಾಡದಂತೆ ನೋಡಿಕೊಂಡಿದ್ದಾರೆ. ತೇಜಸ್ವಿ ಅವರಿಗೆ ಪ್ರಾಣಿಗಳೆಂದರೆ ಬಲು ಇಷ್ಟ. ಅದಕ್ಕಾಗಿ ರಾಜೇಶ್ವರಿ ಅವರು ಕೂಡ ಮನೆಯಲ್ಲಿ ನಾಲ್ಕೈದು ನಾಯಿಗಳನ್ನ ಸಾಕಿಕೊಂಡು ಪ್ರೀತಿಯಿಂದ ಸಾಕುತ್ತಿದ್ದಾರೆ. ದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

    ತೇಜಸ್ವಿ ಅವರ ನೆನಪಿನಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ರಾಜೇಶ್ವರಿ ಅವರ ಮನೆಗೆ ಆ ನಾಯಿಗಳೇ ಕಾವಲುಗಾರರು. ತೇಜಸ್ವಿ ಅವರು ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಕೆರೆ ಬಳಿ ವಾಕ್ ಮಾಡಿಕೊಂಡು ಬದುಕುತ್ತಿದ್ದರು. ತೇಜಸ್ವಿ ಅವರ ನೆಚ್ವಿನ ಸ್ಕೂಟರ್ ರನ್ನ ದಿನಕ್ಕೆ ಹತ್ತಾರು ಬಾರಿ ನೋಡುತ್ತಿದ್ದರು. ತೇಜಸ್ವಿ ಅವರು ಬಳಸುತ್ತಿದ್ದ ಪ್ರತಿಯೊಂದು ವಸ್ತುವನ್ನೂ ಜೋಪಾನ ಮಾಡಿದ್ದಾರೆ. ಮನೆಗೆ ಭೇಟಿ ನೀಡುತ್ತಿದ್ದ ಯುವಜನತೆ ” ನೀವು ಪುಸ್ತಕ ಓದುತ್ತೀರಾ, ಯಾವ ಪುಸ್ತಕ ಓದಿದ್ದೀರಾ, ಏನು ಸ್ಟೋರಿ ಎಂದು ಕೇಳುತ್ತಿದ್ದರು. ಪುಸ್ತಕ ಓದುವುದಿಲ್ಲ ಎಂದರೆ ಬೈಯುತ್ತಿದ್ದರು. 2007ರಲ್ಲಿ ಪತಿ ತೇಜಸ್ವಿ ಅವರ ನಿಧನದ ಬಳಿಕ ಅವರ ನೆನಪಲ್ಲಿ ತೇಜಸ್ವಿ ಅವರು ಬದುಕುತ್ತಿದ್ದ ಜಾಗದಲ್ಲೇ ಬದುಕುತ್ತಿದ್ದರು. ಮಕ್ಕಳು ಕರೆದರೂ ಬೆಂಗಳೂರಿಗೆ ಹೋಗಿರಲಿಲ್ಲ. ಇಂದು ಅವರು ಇಹಲೋಕ ತ್ಯಜಿಸಿರೋದು ಲಕ್ಷಾಂತರ ಅಭಿಮಾನಿಗಳಿಗೆ ನೋವು.ತಂದಿದೆ.

  • ಸಿದ್ದಲಿಂಗಯ್ಯರನ್ನು ರಾಷ್ಟ್ರಕವಿಯಾಗಿ ಘೋಷಣೆ ವಿಚಾರ ಸರ್ಕಾರದೊಂದಿಗೆ ಚರ್ಚಿಸುತ್ತೇನೆ: ಜೋಶಿ

    ಸಿದ್ದಲಿಂಗಯ್ಯರನ್ನು ರಾಷ್ಟ್ರಕವಿಯಾಗಿ ಘೋಷಣೆ ವಿಚಾರ ಸರ್ಕಾರದೊಂದಿಗೆ ಚರ್ಚಿಸುತ್ತೇನೆ: ಜೋಶಿ

    ಬೆಂಗಳೂರು: ಜೂನ್ 11 ರಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಕವಿ ಸಿದ್ದಲಿಂಗಯ್ಯ ಅವರನ್ನು ರಾಷ್ಟ್ರಕವಿಯಾಗಿ ಘೋಷಣೆ ಮಾಡುವ ವಿಚಾರವಾಗಿ ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

    ಆರ್.ಆರ್ ನಗರದ ಸಿದ್ದಲಿಂಗಯ್ಯರ ಬನವಾಸಿ ನಿವಾಸಕ್ಕೆ ಶಾಸಕ ಮುನಿರತ್ನ ಅವರೊಂದಿಗೆ ಭೇಟಿ ನೀಡಿದ ಪ್ರಹ್ಲಾದ್ ಜೋಶಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಕುಟುಂಬದ ಜೊತೆ ಕೆಲ ಹೊತ್ತು ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ಸಿದ್ದಲಿಂಗಯ್ಯ ಅಭಿಮಾನಿಗಳಿಂದ ಸಿದ್ದಲಿಂಗಯ್ಯರನ್ನು ರಾಷ್ಟ್ರಕವಿ ಎಂದು ಘೋಷಣೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಇದನ್ನೂ ಓದಿ: ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಶಿ, ಸಿದ್ದಲಿಂಗಯ್ಯನವರು ಬಹಳ ಸಂಕಷ್ಟದಿಂದ, ಬಡತನದ ಹಿನ್ನೆಲೆಯಿಂದ ಬಂದಿದ್ದರು ಸಹ ಸಮಾಜದ ಒಳಿತಿಗಾಗಿ ಶ್ರಮಿಸಿದ್ದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯವನ್ನು ಮೇಲೆತ್ತಲು ಸಿದ್ದಲಿಂಗಯ್ಯನವರು ಕಾರಣರಾಗಿದ್ದರು. ಸಮಾಜದಲ್ಲಿ ಎಲ್ಲ ವರ್ಗದವರ ಅಭಿಮಾನಗಳಿಸಿದ್ದರು. ಅವರ ನೆನಪಿನಲ್ಲಿ ಒಂದಷ್ಟು ಒಳ್ಳೆಯ ಕೆಲಸ ಮಾಡಲು ನಿರ್ಧಾರಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೂ ಚರ್ಚೆಯಾಗಿದೆ. ಅವರ ನೆನಪಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ ಸ್ಥಳ ಸಹ ಮೀಸಲಿಡಲು ಚರ್ಚೆಯಾಗಿದೆ. ಅಭಿಮಾನಿಗಳ ಇಚ್ಚೆಯಂತೆ ರಾಷ್ಟ್ರ ಕವಿ ಎಂದು ಘೋಷಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

  • ಕುವೆಂಪು ಮನೆಗೆ ವಾರ್ಷಿಕ 1.5 ಲಕ್ಷ ಜನ ಭೇಟಿ: ಆದಿಚುಂಚನಗಿರಿ ವಿವಿ ಕುಲಸಚಿವ

    ಕುವೆಂಪು ಮನೆಗೆ ವಾರ್ಷಿಕ 1.5 ಲಕ್ಷ ಜನ ಭೇಟಿ: ಆದಿಚುಂಚನಗಿರಿ ವಿವಿ ಕುಲಸಚಿವ

    ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರು 20ನೇ ಶತಮಾನ ಕಂಡ ಶ್ರೇಷ್ಠ ಕವಿ. ಅವರ ಮನೆಗೆ ವರ್ಷಕ್ಕೆ 1.5 ಲಕ್ಷ ಜನ ಭೇಟಿ ನೀಡುತ್ತಾರೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ್ ಹೇಳಿದ್ದಾರೆ.

    ನಗರದ ಕುವೆಂಪು ಕಲಾ ಮಂದಿರದಲ್ಲಿ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ, ಶಿವಮೊಗ್ಗದ ಸಹ್ಯಾದ್ರಿ ರಂಗತರಂಗ ಹಾಗೂ ಕುವೆಂಪು ನಾಟಕೋತ್ಸವ ಸಮಿತಿ ಹಮ್ಮಿಕೊಂಡಿರುವ 3 ದಿನಗಳ ಕಾಲದ ಕುವೆಂಪು ನಾಟಕೋತ್ಸವಕ್ಕೆ ಡಾ.ಸಿ.ಕೆ.ಸುಬ್ಬರಾಯ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕುವೆಂಪು ವಿಶೇಷವಾದ ಕವಿ, ಕಾದಂಬರಿಕಾರ, ಅವರ ಪಾಂಡಿತ್ಯವನ್ನು ಗಮನಿಸಿದರೆ ಅವರಿಗೆ ಭಗವಂತನ ಪ್ರೇರಣೆಯಾಗಿದೆ ಎಂದನಿಸುತ್ತದೆ. ಎಲ್ಲರೂ ಅವರ ವಿಶ್ವಮಾನವ ಸಂದೇಶವನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ ಎಂದರು.

    ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಕುವೆಂಪು ಅವರ ಬರವಣಿಗೆಯಲ್ಲಿ ತತ್ವಾದರ್ಶಗಳಿವೆ. ಅವರ ವಿಶ್ವಮಾನವ ಸಂದೇಶ ಜನರ ಹೃದಯಲ್ಲಿ ನಿತ್ಯವೂ ಮಂತ್ರವಾಗಬೇಕು, ಧ್ಯೇಯೋಕ್ತಿಯಾಗಬೇಕು ಎಂದು ಸಲಹೆ ನೀಡಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕುವೆಂಪು ಅವರ ಮನೆಗೆ ವರ್ಷಕ್ಕೆ 1.5 ಲಕ್ಷ ಜನ ಭೇಟಿ ನೀಡುತ್ತಾರೆ. ಈಗ ಅದು ಸಾಂಸ್ಕೃತಿ ಕೇಂದ್ರವಾಗಿ ಬೆಳೆದಿದೆ ಎಂದು ಹೇಳಿದರು. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನ 5 ಲಕ್ಷ ರೂ. ನಗದಿನೊಂದಿಗೆ ನೀಡುತ್ತಿದ್ದು, ಈ ವರ್ಷ ಪಂಜಾಬ್‍ನ ಇಬ್ಬರು ಕವಿಗಳು ಪಡೆಯಲಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಸಂಸ್ಥೆ ಪ್ರತಿಷ್ಠಾನಕ್ಕೆ 25 ಲಕ್ಷ ರೂ ನೀಡಿದ್ದು, ಅದರ ಬಡ್ಡಿ ಹಣದಲ್ಲಿ ಕುವೆಂಪು ನಾಟಕೋತ್ಸವ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಸಮಾರಂಭದ ಬಳಿಕ ಮೈಸೂರಿನ ರಂಗಾಯಣ ಕಲಾವಿದರಿಂದ ಕುವೆಂಪು ವಿರಚಿತ ಶೂದ್ರ ತಪಸ್ವಿ ನಾಟಕ ಪ್ರದರ್ಶನ ಕಂಡಿತು. ಕುವೆಂಪು ನಾಟಕೋತ್ಸವ ಸಮಿತಿಯ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್, ನಾಟಕ ಅಕಾಡಮಿ ಸದಸ್ಯ ನಾಗರಾಜರಾವ್ ಕಲ್ಕಟ್ಟೆ, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಸಹ್ಯಾದ್ರಿ ರಂಗತರಂಗದ ಗೌರವಾಧ್ಯಕ್ಷ ಕ್ರಾಂತೇಶ ಕದರ ಮಂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು.