Tag: ರಾಮ ಮಂದಿರ

  • RSS, ದೇಶದ ಸಂಸ್ಕೃತಿ ದೂಷಣೆ ಮಾಡೋರು ತಾಯಿ ಶೀಲದ ಮೇಲೇ ಶಂಕಿಸೋ ನೀಚರು: ಮಳಲಿ

    RSS, ದೇಶದ ಸಂಸ್ಕೃತಿ ದೂಷಣೆ ಮಾಡೋರು ತಾಯಿ ಶೀಲದ ಮೇಲೇ ಶಂಕಿಸೋ ನೀಚರು: ಮಳಲಿ

    ಬಾಗಲಕೋಟೆ: ಆರ್‌ಎಸ್‌ಎಸ್ ಹಾಗೂ ಭಾರತೀಯ ಸಂಸ್ಕೃತಿಯನ್ನು ದೂಷಣೆ ಮಾಡುವವರು ತನ್ನ ತಾಯಿಯ ಶೀಲದ ಮೇಲೆಯೇ ಶಂಕೆ ವ್ಯಕ್ತಪಡಿಸುವ ನೀಚರು ಎಂದು ಆರ್‌ಎಸ್‌ಎಸ್ ಮುಖಂಡ ಹನುಮಂತ ಮಳಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಗಲಕೋಟೆಯ ಆರ್‌ಎಸ್‌ಎಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಎಸ್‌ಎಸ್ ವಿರೋಧಿಸುವವರಿಗೆ ಉತ್ತರ ಕೊಡಲ್ಲ. ನಾಯಿ ಬೊಗಳಿದರೂ ಆನೆ ಹೋಗುತ್ತಿರುತ್ತದೆ. ಆರ್‌ಎಸ್‌ಎಸ್ ಅಣ್ಣ ಬಸವಣ್ಣನ ಸೂತ್ರದ ಮೇಲೆ ನಿಂತಿದೆ. ಅಲ್ಲದೆ ಹಿಂದೂ ಧರ್ಮವೇ ಅಲ್ಲ, ರಾಮನಿಗೆ ಅಸ್ತಿತ್ವನೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಯಾರ ಮನಸ್ಸು ಶಾಂತ ಇರುತ್ತೋ, ಪ್ರಫುಲ್ಲ ಇರುತ್ತೋ ಅವರಿಗೆ ಮಾತ್ರ ನಮ್ಮ ಧರ್ಮದ ಬಗ್ಗೆ ಅರ್ಥ ಆಗುತ್ತದೆ ಎಂದು ಟಾಂಗ್ ಕೊಟ್ಟರು.

    ಇದೇ ವೇಳೆ ರಾಮ ಮಂದಿರದ ಬಗ್ಗೆ ಪ್ರತಿಕ್ರಿಯಿಸಿ, ನಾವು ಎಲ್ಲದರಲ್ಲೂ ವಿಜಯ ಸಾಧಿಸುತ್ತಿದ್ದೇವೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದೇವೆ, ಏಕರೂಪ ತೆರಿಗೆ ತಂದಿದ್ದೇವೆ, ಮುಂದೆ ರಾಮ ಮಂದಿರನೂ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನ.17ರೊಳಗೆ ರಾಮ ಮಂದಿರ ನಿರ್ಮಿಸುತ್ತೇವೆ- ಬಿಜೆಪಿ ಶಾಸಕ

    ನ.17ರೊಳಗೆ ರಾಮ ಮಂದಿರ ನಿರ್ಮಿಸುತ್ತೇವೆ- ಬಿಜೆಪಿ ಶಾಸಕ

    ಜೈಪೂರ್: ಅಯೋಧ್ಯೆ ಭೂ ವಿವಾದ ಪ್ರಕರಣದ ಕುರಿತು ಇನ್ನು ಹತ್ತು ಜನರನ್ನು ವಿಚಾರಣೆ ನಡೆಸುವುದು ಬಾಕಿ ಇದೆ. ಈಗಲೇ ಬಿಜೆಪಿ ಶಾಸಕರೊಬ್ಬರು ನವೆಂಬರ್ 17ರೊಳಗೆ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದಾರೆ.

    ರಾಜಸ್ಥಾನದ ಪಾಲಿಯಲ್ಲಿ ನಡೆದ ರಾಮಲೀಲಾ ಕಾರ್ಯಕ್ರಮದಲ್ಲಿ ಪಾಲಿಯ ಬಿಜೆಪಿ ಶಾಸಕ ಜ್ಞಾನಚಂದ್ ಪರಾಖ್ ಈ ಕುರಿತು ಹೇಳಿಕೆ ನೀಡಿದ್ದು, ನವೆಂಬರ್ 17ರೊಳಗೆ ರಾಮ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಘೋಷಿಸಿದ್ದಾರೆ. ಅಂದೇ ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ.

    ಪ್ರಕರಣದ ವಿಚಾರಣೆ ಅಕ್ಟೋಬರ್ 17ರೊಳಗೆ ಪೂರ್ಣಗೊಳ್ಳಲಿದೆ. ನವೆಂಬರ್ 18ರ ವೇಳೆಗೆ ರಾಮಜನ್ಮಭೂಮಿಯಲ್ಲಿ ದೇವಾಲಯ ನಿರ್ಮಿಸಲಾಗುವುದು. ಹೀಗಾಗಿ ಈ ವರ್ಷ ನಮಗೆ ಅತ್ಯಂತ ಶುಭವಾಗಿದೆ ಎಂದು ಹೇಳೀದ್ದಾರೆ.

    ರಾಮ ಮಂದಿರ ನಿರ್ಮಿಸುವ ಕುರಿತು ತುಂಬಾ ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದೇವೆ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ನಂತರ ಬಿಜೆಪಿ ಶಾಸಕರು ಈ ಹೇಳಿಕೆ ನೀಡಿದ್ದಾರೆ. ನಾವು ರಾಮನ ಭಕ್ತರು, ಭಕ್ತಿಯಲ್ಲಿ ಸಾಕಷ್ಟು ಶಕ್ತಿಯಿದೆ. ಶೀಘ್ರವೇ ನಾವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಅಯೋಧ್ಯೆ ಕುರಿತು ಪ್ರಸ್ತಾಪಿಸದೆ ಪರೋಕ್ಷವಾಗಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು.

    ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಕುರಿತು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತು ಮುಖ್ಯಮಂತ್ರಿಗಳಿಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದ್ದರು.

    ಅಯೋಧ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ದಿನ ನಿತ್ಯ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಗೆ ಅಕ್ಟೋಬರ್ 17 ಗಡುವನ್ನು ವಿಧಿಸಿದೆ. ಮುಸ್ಲಿಂ ಪರ ವಾದವನ್ನು ಅಕ್ಟೋಬರ್ 14ರೊಳಗೆ ಮುಗಿಸುವಂತೆ ಹಾಗೂ ನಂತರ ಎರಡು ದಿನ ಅಕ್ಟೋಬರ್ 16ರ ವರೆಗೆ ಹಿಂದೂ ಪರ ವಾದವನ್ನು ಮಂಡಿಸುವಂತೆ ತಿಳಿಸಿದೆ. ಅಲ್ಲದೆ ಅಕ್ಟೋಬರ್ 17 ವಿಚಾರಣೆಗೆ ಕೊನೇಯ ದಿನವಾಗಿದ್ದು, ಅಂದು ಎರಡೂ ಕಡೆಯವರು ಅಂತಿಮ ವಾದವನ್ನು ಮಂಡಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.

    ನ್ಯಾಯಮೂರ್ತಿಗಳಾದ ಎಸ್.ಎ.ಬಾಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಎ.ನಜೀರ್ ಅವರನ್ನೊಳಗೊಂಡ ಪೀಠ ವಿಚಾರಣೆಗೆ ಅಕ್ಟೋಬರ್ 18ರ ಗಡುವನ್ನು ನೀಡಿತ್ತು. ಅಲ್ಲದೆ ಈ ಪ್ರಕರಣದ ತೀರ್ಪನ್ನು ನವೆಂಬರ್ 17ರೊಳಗೆ ಪ್ರಕಟಿಸುವುದಾಗಿಯೂ ಸಹ ಡೆಡ್‍ಲೈನ್ ವಿಧಿಸಲಾಗಿದೆ. ಅಂದೇ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನಿವೃತ್ತಿ ಹೊಂದಲಿದ್ದಾರೆ.

  • ನನ್ನಂತೆ ಸೂಲಿಬೆಲೆಯನ್ನೂ ಮೂಲೆಗುಂಪು ಮಾಡಬೇಡಿ: ಮುತಾಲಿಕ್

    ನನ್ನಂತೆ ಸೂಲಿಬೆಲೆಯನ್ನೂ ಮೂಲೆಗುಂಪು ಮಾಡಬೇಡಿ: ಮುತಾಲಿಕ್

    ಉಡುಪಿ: ನನ್ನನ್ನು ಮೂಲೆಗುಂಪು ಮಾಡಿದಂತೆ ಚಕ್ರವರ್ತಿ ಸೂಲಿಬೆಲೆಯನ್ನು ಪಕ್ಕಕ್ಕೆ ಸರಿಸಬೇಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿಗರಿಗೆ ಚಾಟಿ ಬೀಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೇಶದ್ರೋಹಿ ಅಂದದ್ದು ತಪ್ಪು, ದೇಶದ್ರೋಹಿ ಪಟ್ಟ ಕಟ್ಟಿದ್ದು ಮೂರ್ಖತನ. ಚಕ್ರವರ್ತಿ ಸೂಲಿಬೆಲೆಯವರಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದ್ದರಿಂದ ಮಾತನಾಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಯನ್ನು ನಾನು ಬೆಂಬಲಿಸುತ್ತೇನೆ ಎಂದರು.

    ಕರ್ನಾಟಕದ ಸಂಸದರ ಗೆಲುವಿನ ಹಿಂದೆ ಸೂಲಿಬೆಲೆ ಪರಿಶ್ರಮ ಇದೆ. ನಾನು ಕೂಡಾ 2000ನೇ ಇಸವಿಯಿಂದ ಮೋದಿ ಪರ ಭಾಷಣ ಮಾಡಿದವನು. ಆದರೆ ನನ್ನನ್ನೇ ಮೂಲೆಗುಂಪು ಮಾಡುವ ಪ್ರಯತ್ನ ನಡೆದಿತ್ತು. ಇದೀಗ ಸೂಲಿಬೆಲೆಯನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಸರಿಯಲ್ಲ. ವಾಗ್ಮಿ, ಚಿಂತಕ, ಪರಿಸರ ಪರ ಹೋರಾಟಗಾರನಿಗೆ ನೋವು ಕೊಡುವುದು ಸರಿಯಲ್ಲ. ರಾಜಕೀಯದವರು ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಸಂಘ ಪರಿವಾರ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

    ನೆರೆ ಪರಿಹಾರ ತಡ ಆಯಿತು, ಕಡಿಮೆ ಆಯಿತು ಎಂಬುದು ಸಾಮಾನ್ಯ ಜನರಿಗೂ ಗಮನಕ್ಕೆ ಬರುತ್ತಿದೆ. ಯಡಿಯೂರಪ್ಪನವರಿಗೆ ಆ ನೋವು ಇದ್ದೆ ಇದೆ. 1,200 ಕೋಟಿ ರೂ. ಪರಿಹಾರ ಎಲ್ಲಿಗೂ ಸಾಕಾಗುವುದಿಲ್ಲ ಮುಂದೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

    ದತ್ತಪೀಠಕ್ಕೆ ರಾಹುಲ್ ಕೌಲ್
    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೂರಕ್ಕೆ ನೂರು ನಮಗೆ ವಿಶ್ವಾಸವಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭರವಸೆ ವ್ಯಕ್ತಪಡಿಸಿದರು.

    70 ವರ್ಷ ಕಾಂಗ್ರೆಸ್ ವ್ಯವಸ್ಥಿತವಾಗಿ ಕೇಸನ್ನು ಮುಚ್ಚಿ ಹಾಕಿತ್ತು. ಮುಸ್ಲಿಮರನ್ನು ಎತ್ತಿಕಟ್ಟುವ ಷಡ್ಯಂತ್ರ ಮಾಡಿತ್ತು. ಈಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸರಿಯಾದ ವಿಚಾರಣೆ ನಡೆಸುತ್ತಿದ್ದಾರೆ. ದೇವಸ್ಥಾನ ಅಲ್ಲಿ ಇತ್ತು, ಮತ್ತೆ ನಮಗೆ ಜಮೀನು ವಾಪಾಸ್ ಸಿಗುತ್ತೆ ಎಂಬ ನಂಬಿಕೆಯಿದೆ ಎಂದು ಅವರು ಹೇಳಿದರು.

    ಅಕ್ಟೋಬರ್ 13 ರಂದು ದತ್ತಮಾಲಾ ಅಭಿಯಾನ ನಡೆಯಲಿದೆ. 5 ಸಾವಿರ ಜನ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ 1990ರ ಗಲಭೆಯಲ್ಲಿ ತಪ್ಪಿಸಿಕೊಂಡ ಜಮ್ಮು ಕಾಶ್ಮೀರದ ಹೋರಾಟಗಾರ, ರಾಹುಲ್ ಕೌಲ್ ದತ್ತಪೀಠಕ್ಕೆ ಆಗಮಿಸುತ್ತಾರೆ. 370ನೇ ವಿಧಿ ರದ್ದು ಮಾಡಿದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರಕ್ಕೆ ದತ್ತಪೀಠದಿಂದ ಅಭಿನಂದನೆ ಸಲ್ಲಿಸಲಿದ್ದಾರೆ. ಸ್ವತಃ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

  • ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್

    ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್

    – ದಸರಾ, ದೀಪಾವಳಿಗೂ ಸಿದ್ಧತೆ

    ನವದೆಹಲಿ: ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿ ವಿವಾದದ ಕುರಿತ ತೀರ್ಪಿಗೆ ದಿನಗಣನೆ ಹಾಗೂ ದಸರಾ ಹಬ್ಬ ನಡೆಯುತ್ತಿರುವ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದ್ದು, ಅಯೋಧ್ಯೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಈ ಮೂಲಕ ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ.

    ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಅಯೋಧ್ಯೆ ನಗರದಲ್ಲಿ ನಿಯೋಜಿಸಲಾಗಿದೆ. ದುರ್ಗಾ ಪೂಜಾ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಮೆರವಣಿಗೆಗಳಲ್ಲಿ ಗುಲಾಲ್ (ಬಣ್ಣ) ಬಳಸದಂತೆ ಪೂಜಾ ಸಮಿತಿಗೆ ತಿಳಿಸಿದ್ದೇವೆ. ಇದರ ಬದಲಿಗೆ ಹೂಗಳನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಹೆಚ್ಚುವರಿ ಭದ್ರತಾ ಸಿಬ್ಬಂದಿಗೆ ವಸತಿ ಸೌಲಭ್ಯಗಳನ್ನು ಗುರುತಿಸಲು ಜಿಲ್ಲಾಡಳಿತ ಈಗಾಗಲೇ ಪ್ರಾರಂಭಿಸಿದೆ. ಸ್ಥಳೀಯ ಅತಿಥಿ ಗೃಹಗಳು, ಧರ್ಮಶಾಲೆಗಳು, ಶಾಲಾ ಕಾಲೇಜುಗಳಲ್ಲಿ ವಸತಿ ಸೌಲಭ್ಯಗಳನ್ನು ಬಳಸುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.

    ದುರ್ಗಾ ವಿಗ್ರಹ ಮೆರವಣಿಗೆ ಹಾಗೂ ದಸರಾ ಆಚರಣೆಗಳು ಸೋಮವಾರದಿಂದ ಪ್ರಾರಂಭವಾಗಲಿದ್ದು, ವಿವಿಧ ರಾಮ್ ಲೀಲಾಗಳು ದೀಪಾವಳಿ ತಿಂಗಳವರೆಗೆ ಮುಂದುವರಿಯಲಿವೆ. ದೀಪಾವಳಿಯ ಮುನ್ನಾದಿನ ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಮೂರು ದಿನಗಳ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

    ಹೆಚ್ಚು ಜನ ಆಗಮಿಸುತ್ತಿರುವ ಹಿನ್ನೆಲೆ ಎಲ್ಲ ಹೋಟೆಲ್, ಅತಿಥಿ ಗೃಹ, ಧರ್ಮಶಾಲೆ, ವಸತಿ ಗೃಹ, ಹಾಸ್ಟೆಲ್ ಹಾಗೂ ಹೋಮ್ ಸ್ಟೇಗಳನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸರಿಗೆ ಹಾಗೂ ಸ್ಥಳೀಯ ಗುಪ್ತಚರ ಘಟಕಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಅಲ್ಲಿ ಕೆಲಸ ಮಾಡುತ್ತಿರುವ ಹಾಗೂ ಉಳಿದುಕೊಂಡಿರುವವರ ವಿವರ ಹಾಗೂ ವಸ್ತುಗಳನ್ನು ಸಹ ಪರಿಶೀಲಿಸುವಂತೆ ಸೂಚಿಸಲಾಗಿದೆ. ಬೆದರಿಕೆ ಕರೆ ಕುರಿತು ಮಾಹಿತಿ ಬಂದಿದೆ ಎಂದು ಗುಪ್ತಚರ ದಳ ವರದಿ ನೀಡಿದ ಹಿನ್ನೆಲೆ ಈ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರಾಮ ಜನ್ಮ ಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನವೆಂಬರ್‍ನಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ ಸ್ಥಳೀಯ ಆಡಳಿತವು ಭದ್ರತಾ ವ್ಯವಸ್ಥೆ ಕುರಿತು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸಹ ಸೂಚಿಸಲಾಗಿದೆ.

    ಇದೆಲ್ಲದರ ಮಧ್ಯೆ ಸರಯು ನದಿಯ ಮಾಲಿನ್ಯವನ್ನು ತಡೆಗಟ್ಟಲು ದುರ್ಗಾ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜನೆ ಮಾಡದಂತೆ ಜಿಲ್ಲಾಡಳಿತ ಸೂಚಿಸಿದೆ. ಇದಕ್ಕೆ ಪರ್ಯಾಯವಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಹೊಂಡಗಳನ್ನು ಅಗೆಯಲಾಗಿದೆ. ಇದರಲ್ಲೇ ದೇವಿಯ ಭೂಮಿ ವಿಸರ್ಜನೆಯನ್ನು ನಡೆಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

  • ನಮಗೆ ಒಳ್ಳೆಯದು ಬರುತ್ತೆ, ಹನುಮಂತನ ರೀತಿ ಬೆಂಕಿ ಹಚ್ಚಲು ಬರುತ್ತೆ: ಬಿ.ಎಲ್ ಸಂತೋಷ್

    ನಮಗೆ ಒಳ್ಳೆಯದು ಬರುತ್ತೆ, ಹನುಮಂತನ ರೀತಿ ಬೆಂಕಿ ಹಚ್ಚಲು ಬರುತ್ತೆ: ಬಿ.ಎಲ್ ಸಂತೋಷ್

    ಬಳ್ಳಾರಿ: ನಾವೂ ಒಳ್ಳೆಯರಾಗಿ ಹೇಳುತ್ತೇವೆ ಕೇಳಿ. ಇಲ್ಲದಿದ್ದರೆ ನಮಗೆ ಹನುಮಂತನ ತರಹ ಬೆಂಕಿ ಹಚ್ಚಲು ಬರುತ್ತೆ ಎಂದು ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದಾರೆ.

    ಬಳ್ಳಾರಿಯ ಮೋಕಾ ಸಮೀಪದ ಮರೂರು ಗ್ರಾಮದಲ್ಲಿ ಹನುಮ ಮಾಲಾಧಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂತೋಷ್, ಮತಾಂತರ ಮತ್ತು ಗೋಹತ್ಯೆ ಮಾಡೋರನ್ನು ಉದ್ದೇಶಿಸಿ ಈ ರೀತಿ ಮಾತನಾಡಿದ್ದಾರೆ. ಅಲ್ಲದೇ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಈ ಬಾರಿ ನಮ್ಮ ಪರ ತೀರ್ಪು ಬರುತ್ತದೆ. ನ್ಯಾಯಾಧೀಶರಿಗೆ ನಮ್ಮ ಕೂಗು ಕೇಳಿಸುವಂತೆ ಜೈ ಶ್ರೀ ರಾಮ್ ಎಂದು ಕೂಗಿ ಎಂದು ಹೇಳಿದರು.

    ನ್ಯಾಯಾಲಯ ಸಾಮಾನ್ಯ ಜನರ ಭಾವನೆಗೆ ಬೆಲೆಕೊಟ್ಟು ವಿಚಾರಣೆ ಕೈಗೆತ್ತಿಕೊಂಡಿದೆ ಯಾವುದ್ಯಾವುದೋ ಕೇಸ್‍ಗಳಿಗೆ ಮಧ್ಯರಾತ್ರಿ 2 ಗಂಟೆಗೆ ತೀರ್ಪು ಕೊಡುತ್ತಾರೆ. ಈ ವಿಚಾರದಲ್ಲಿ ಹಾಗೇ ಮಾಡಲಿ. ತೀರ್ಪು ನಮ್ಮ ಪರ ಬರುತ್ತದೆ ಎಂದು ನಂಬಿಕೆ ಇದೆ. ಇನ್ನೊಂದು 25 ದಿನ ಕಾಯೋಣ, ಈ ಬಾರಿ ನಮ್ಮ ಸಂಕಲ್ಪ ಪೂರ್ಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ರಾಮ ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ – ಮೊಘಲ್ ವಂಶಸ್ಥನಿಂದ ಆಫರ್

    ರಾಮ ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ – ಮೊಘಲ್ ವಂಶಸ್ಥನಿಂದ ಆಫರ್

    ಹೈದರಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆಯನ್ನು ನಾನು ನೀಡುತ್ತೇನೆ ಎಂದು ಮೊಘಲ್ ಸಾಮ್ರಾಜ್ಯದ ವಂಶಸ್ಥರೊಬ್ಬರು ಹೇಳಿದ್ದಾರೆ.

    ಈಗ ಹೈದರಾಬಾದ್‍ನಲ್ಲಿ ವಾಸವಾಗಿರುವ ಮೊಘಲ್ ಸಾಮ್ರಾಜ್ಯದ ಆರನೇ ಪೀಳಿಗೆಯ ಹಬೀಬುದ್ದೀನ್ ಟ್ಯೂಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಈ ಕೊಡುಗೆ ನೀಡುವುದಾಗಿ ಪ್ರಕಟಿಸಿದ್ದಾರೆ.

    ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್ ಷಾ ಜಾಫರ್ ಆಗಿದ್ದು ಆತನ ಆರನೇ ಪೀಳಿಗೆಯ ವಂಶಸ್ಥ ಹಬೀಬುದ್ದೀನ್ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಈ ಆಫರ್ ಪ್ರಕಟಿಸಿದ್ದರು. ಆದರೆ ಈಗ ರಾಮ ಜನ್ಮಭೂಮಿ ಭೂವಿವಾದವನ್ನು ಆಲಿಸುತ್ತಿರುವ ಸುಪ್ರೀಂಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿ ತನ್ನ ವಾದವನ್ನು ಆಲಿಸಬೇಕೆಂದು ಕೇಳಿಕೊಂಡಿದ್ದಾರೆ. ಫೆಬ್ರವರಿ 8ರಂದು ಈ ಅರ್ಜಿ ಸಲ್ಲಿಸಿದ್ದು ಇನ್ನೂ ಸುಪ್ರೀಂ ವಿಚಾರಣೆಗೆ ತೆಗೆದುಕೊಂಡಿಲ್ಲ.

    ಅರ್ಜಿಯಲ್ಲಿ ಏನಿದೆ?
    ವಿವಾದಿತ ಸ್ಥಳಕ್ಕೆ ಸಂಬಂಧಿಸಿದ ಯಾರ ಬಳಿಯೂ ದಾಖಲೆಗಳಿಲ್ಲದ ಕಾರಣ ಯಾರಿಗೂ ಹಕ್ಕಿಲ್ಲ. ಆದರೆ ಮೊಘಲ್ ವಂಶಸ್ಥನಾಗಿರುವುದರಿಂದ ಆ ಜಾಗದ ಮೇಲೆ ನಮಗೆ ಹಕ್ಕಿದೆ. ಹೀಗಾಗಿ ಈ ಜಾಗವನ್ನು ನಮಗೆ ನೀಡುವಂತೆ ಕೇಳಿಕೊಂಡಿದ್ದಾರೆ. ಸೇನೆಯ ನಮಾಜ್‍ಗಾಗಿ ಬಾಬರಿ ಮಸೀದಿ ನಿರ್ಮಿಸಲಾಗಿದೆ. ಅಲ್ಲಿ ಮೊದಲು ಏನಿತ್ತು ಎನ್ನುವ ವಿಚಾರಕ್ಕೆ ನಾನು ಈಗ ಹೋಗುವುದಿಲ್ಲ. ಒಬ್ಬ ನೈಜ ಮುಸ್ಲಿಮನಾಗಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಜಾಗ ಬಿಟ್ಟುಕೊಡುತ್ತೇನೆ. ಒಂದು ವೇಳೆ ನಮಗೆ ಈ ಭೂಮಿಯನ್ನು ನೀಡಿದರೆ ರಾಮ ಮಂದಿರ ಕಟ್ಟಲು ಜಾಗ ನೀಡುತ್ತೇನೆ ಎಂದು ಟ್ಯೂಸಿ ಹೇಳಿದ್ದಾರೆ.

    ಜಾಫರಿಗೆ ಹೇಗೆ ಸಂಬಂಧ?
    ಮೊಘಲರ ಕೊನೆಯ ದೊರೆ ಬಹಾದೂರ್ ಷಾ ಜಾಫರಿಗೆ 49 ಮಕ್ಕಳು. ಈ ಪೈಕಿ ಮಿರ್ಜಾ ಕ್ವಾಯಿಷ್ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಪತ್ನಿ ಜೊತೆ ನೇಪಾಳದ ರಾಜಧಾನಿ ಆಗಿರುವ ಕಠ್ಮಂಡುವಿಗೆ ಪರಾರಿಯಾಗಿದ್ದರು. ಈ ದಂಪತಿಯ ಪುತ್ರ ಮಿರ್ಜಾ ಅಬ್ದುಲ್ಲಾ ಹೈದರಾಬಾದಿನಲ್ಲಿ ವಾಸಿಸುತ್ತಿದ್ದರು. ಇವರ ಪುತ್ರ ಮಿರ್ಜಾ ಪ್ಯಾರೆ. ಮಿರ್ಜಾ ಪ್ಯಾರೆಯ ಮೂವರು ಮಕ್ಕಳಲ್ಲಿ ಒಬ್ಬರಾದ ರಾಣಿ ಲೈಲಾ ಉಮಾಹನಿಯನ್ನು ವಿವಾಹವಾಗಿದ್ದು ಹೈದರಾಬಾದ್‍ನ ರಾಜಕುಮಾರ ಮೊಯಿನುದ್ದೀನ್ ಟ್ಯೂಸಿ. ಈ ದಂಪತಿಯ ಪುತ್ರ ಯಾಕೂಬ್ ಆರೀಫ್ ಉದ್ದೀನ್ ಟ್ಯೂಸಿ. ಯಾಕೂಬ್ ಆರೀಫ್ ಟ್ಯೂಸಿಯ ಪುತ್ರನೇ ಹಬಿಬುದ್ದೀನ್ ಟ್ಯೂಸಿ.

    ಅವರ ಪುತ್ರ ಮಿರ್ಜಾ ಪ್ಯಾರೆ. ಇವರ ಮೂರು ಮಕ್ಕಳಲ್ಲಿ ಒಬ್ಬರಾದ ರಾಣಿ ಲೈಲಾ ಉಮಾಹನಿ ಒಬ್ಬರು. ಉಮಾಹನಿಯನ್ನು ಮದುವೆಯಾಗಿದ್ದು ಹೈದರಾಬಾದ್‍ನ ರಾಜಕುಮಾರ ಮೊಯಿನುದ್ದೀನ್ ಟ್ಯೂಸಿ. ಇವರಿಗೆ ಹುಟ್ಟಿದ ಮಗನೇ ಪ್ರಿನ್ಸ್ ಯಾಕುಬ್ ಅರಿಫುದ್ದೀನ್ ಟ್ಯೂಸಿ. ಅರಿಫುದ್ದೀನ್ ಟ್ಯೂಸಿಯ ಮಗನೇ ಯಾಕೂಬ್ ಹಬೀಬುದ್ದೀನ್ ಟ್ಯೂಸಿ.

    ಟ್ಯೂಸಿ ಅವರು ತಮ್ಮ ಬಳಿಯಲ್ಲೇ ಕೆಲವು ಅಧಿಕಾರಗಳನ್ನು ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ನಡೆಯುವ ಶಹಜಹಾನ್‍ನ ಉರೂಸ್ ಸಮಾರಂಭದ ವೇಳೆ ಖ್ಯಾತ ತಾಜ್‍ಮಹಲ್‍ನ ಒಳಗಿನ ಸೆಲ್ಲರ್ ಬಾಗಿಲನ್ನು ಟ್ಯೂಸಿ ಅವರೇ ತೆಗೆಯುತ್ತಾರೆ.

    50 ವರ್ಷದ ಟ್ಯೂಸಿ ಪಾಸ್‍ಪೋರ್ಟ್ ಪಡೆಯುವ ಸಂದರ್ಭದಲ್ಲಿ ಮೊಘಲರ ಕಾಲದ ಟೋಪಿ ತೆಗೆದಿರುವ ಫೋಟೋ ಹಾಕಬೇಕೆಂದು ಅಧಿಕಾರಿಗಳು ಹೇಳಿದ್ದರು. ಈ ವೇಳೆ ನಾನು ಮೊಘಲ್ ವಂಶಸ್ಥ, ಈ ಟೋಪಿ ನಮ್ಮ ಹೆಮ್ಮೆ ಎಂದು ತಿಳಿಸಿದ್ದೆ. ಕೊನೆಗೆ ಅಧಿಕಾರಿಗಳು ಪಾಸ್ ಪೋರ್ಟ್ ನಲ್ಲಿ ಟೋಪಿ ಇರುವ ಫೋಟೋ ಹಾಕಲು ಅನುಮತಿ ನೀಡಿದರು ಎಂದು ಟ್ಯೂಸಿ ತಿಳಿಸಿದ್ದಾರೆ.

    ದೊಡ್ಡ ಸಮಾರಂಭ, ಹಬ್ಬದ ಸಮಯದಲ್ಲಿ ಮಾತ್ರ ನಾನು ಮೊಘಲರ ಕಾಲದ ಬಟ್ಟೆಯನ್ನು ಧರಿಸುತ್ತೇನೆ. ಸಾಮಾನ್ಯ ದಿನಗಳಲ್ಲಿ ಜೀನ್ಸ್ ಮತ್ತು ಟಿಶರ್ಟ್ ಧರಿಸಿ ಬೈಕಿನಲ್ಲಿ ಓಡಾಡುತ್ತೇನೆ. ಫಾರ್ಮ್ ಹೌಸ್ ನಲ್ಲಿ ಬನಿಯನ್ ಧರಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಿ: ಮೋದಿಗೆ ಉದ್ಧವ್ ಠಾಕ್ರೆ ಮನವಿ

    ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಿ: ಮೋದಿಗೆ ಉದ್ಧವ್ ಠಾಕ್ರೆ ಮನವಿ

    ಲಕ್ನೋ: 17ನೇ ಲೋಕಸಭೆಯ ಮೊದಲ ಅಧಿವೇಶದ ಆರಂಭದ ಮುನ್ನಾದಿನವಾದ ಇಂದು ಉದ್ಧವ್ ಠಾಕ್ರೆ ಅವರು ರಾಮ ಮಂದಿರ ನಿರ್ಮಾಣದ ಕುರಿತು ಹೇಳಿಕೆ ನೀಡಿದ್ದಾರೆ.

    ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ 18 ಸಂಸದರು ಹಾಗೂ ಪುತ್ರನ ಜೊತೆಗೆ ಇಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದರು. ಬಳಿಕ ರಾಮ್ ಲಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಪೂಜೆಯ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಕೇಂದ್ರದಲ್ಲಿ ಮೋದಿ ಜೀ ನೇತೃತ್ವದ ಪ್ರಬಲ ಸರ್ಕಾರವಿದೆ. ಈ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಬೇಕಿದೆ. ಬಿಜೆಪಿಯು ರಾಮ ಮಂದಿರ ನಿರ್ಮಾಣ ಮಾಡುತ್ತದೆ ಎಂಬ ಕಾರಣಕ್ಕೆ ದೇಶದ ಜನರು ಲೋಕಸಭಾ ಚುನಾವಣೆಯಲ್ಲಿ ಬಹುಮತ ನೀಡಿದ್ದಾರೆ ಎಂದು ತಿಳಿಸಿದರು.

  • ಅಯೋಧ್ಯೆಯಲ್ಲಿ ರಾಮ ಮಂದಿರ, ಮಸೀದಿ ಎರಡು ಆಗಬೇಕು: ಪೇಜಾವರ ಶ್ರೀ

    ಅಯೋಧ್ಯೆಯಲ್ಲಿ ರಾಮ ಮಂದಿರ, ಮಸೀದಿ ಎರಡು ಆಗಬೇಕು: ಪೇಜಾವರ ಶ್ರೀ

    ಬೆಳಗಾವಿ: ಅಯೋಧ್ಯೆಯಲ್ಲಿ ರಾಮ ಮಂದಿರ, ಮಸೀದಿ ಎರಡು ಆಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂದಿರದಿಂದ ಸ್ವಲ್ಪ ದೂರದಲ್ಲಿ ಮಸೀದಿ ನಿರ್ಮಾಣವಾಗಬೇಕು. ಸಂಧಾನ ಮೂಲಕದ ವಿವಾದ ಇತ್ಯರ್ಥವಾದರೆ ಉತ್ತಮ. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

    ಪ್ರಯಾಗ್‍ರಾಜ್‍ನಲ್ಲಿ ನಡೆದ ಹಿಂದೂಗಳ ಸಮ್ಮೇಳನದಲ್ಲಿ ರಾಮಮಂದಿರದ ಬಗ್ಗೆ ಚರ್ಚೆ ನಡೆದಿದೆ. 4 ತಿಂಗಳು ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ಬೇಡ ಎಂದು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಇದ್ದರೂ ರಾಜ್ಯಸಭೆಯಲ್ಲಿ ಇಲ್ಲ. ಸುಪ್ರೀಂ ಕೋರ್ಟ್ ನಲ್ಲೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರಾಮ ಮಂದಿರದ ಬಗ್ಗೆ ಏನು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

  • ಏರ್ ಸ್ಟ್ರೈಕ್ ದಾಳಿಯ ಬಳಿಕ ರಾಮ ಮಂದಿರ ಮರೆತು ಬಿಟ್ರು: ಫಾರೂಕ್ ಅಬ್ದುಲ್ಲಾ

    ಏರ್ ಸ್ಟ್ರೈಕ್ ದಾಳಿಯ ಬಳಿಕ ರಾಮ ಮಂದಿರ ಮರೆತು ಬಿಟ್ರು: ಫಾರೂಕ್ ಅಬ್ದುಲ್ಲಾ

    ವಿಜಯವಾಡ: ಬಾಲಕೋಟ್ ಏರ್ ಸ್ಟ್ರೈಕ್ ದಾಳಿ ಹಾಗೂ ರಾಮ ಮಂದಿರ ವಿಚಾರವಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಾಮ ಮಂದಿರದ ಕುರಿತು ಈಗ ಯಾರೊಬ್ಬರೂ ಮಾತನಾಡುತ್ತಿಲ್ಲ. ಬಾಲಕೋಟ್ ದಾಳಿಯ ಮುನ್ನ ರಾಮ ಮಂದಿರ, ರಾಮ ಮಂದಿರ ಎನ್ನುವ ಕೂಗು ಕೇಳುತ್ತಿತ್ತು. ಈಗ ರಾಮ ಮಂದಿರದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಪಾಕಿಸ್ತಾನದ ಬಾಲಕೋಟ್ ಉಗ್ರರ ನೆಲೆಯ ಮೇಲೆ ಭಾರತೀಯ ವಾಯು ಪಡೆ ನಡೆಸಿ ಏರ್ ಸ್ಟ್ರೈಕ್ ದಾಳಿಯಲ್ಲಿ 300 ಜನ ಉಗ್ರರು ಹತ್ಯೆಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಜವಾಗಿ ಏನು ಆಗಿದೆ ಎಂದು ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತು ಯಾರಾದರೂ ಪ್ರಶ್ನಿಸಿದರೆ ಅವರು ದೇಶದ್ರೋಹಿಗಳಾಗುತ್ತಾರೆ. ಇಲ್ಲವೆ ಪಾಕ್ ಪ್ರಜೆ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

    ಪ್ರಧಾನಿ ನರೇಂದ್ರ ಮೋದಿ ಹನುಮಂತನಿದ್ದಂತೆ. ಅವರು ಪಾಕಿಸ್ತಾನವನ್ನು ಬಗ್ಗು ಬಡಿಯುತ್ತಾರೆ ಎಂದು ಬಿಜೆಪಿಯವರು ಬಿಂಬಿಸಿದ್ದರು. ಆದರೆ ಪ್ರಧಾನಿ ಮೋದಿ ಪಾಕಿಸ್ತಾನವನ್ನು ಬಗ್ಗು ಬಡಿದರೇ? ಉಗ್ರರ ಅಟ್ಟಹಾಸ ನಿಂತುಹೋಯಿಯೇ ಎಂದು ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಗುರುವೈಭವೋತ್ಸವ

    ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಗುರುವೈಭವೋತ್ಸವ

    -ಅಯೋಧ್ಯ ರಾಮ ಮಂದಿರದ ಕುರಿತು ಸುಬುಧೇಂದ್ರ ತೀರ್ಥ ಶ್ರೀಗಳ ಮಾತು
    -ಯೋಧರಿಗಾಗಿ ರುದ್ರಯಾಗ

    ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವೈಭೋತ್ಸವ ಕಾರ್ಯಕ್ರಮಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಚಾಲನೆ ನೀಡಿದ್ದು, ಇಂದಿನಿಂದ ಆರು ದಿನಗಳ ಕಾಲ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿದೆ.

    ಗುರು ರಾಯರ 424ನೇ ವರ್ಧಂತೋತ್ಸವ ಹಾಗು 398ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದೆ. ಈ ಕಾರ್ಯಕ್ರಮಗಳು ಮಾರ್ಚ್ 13ರ ವರೆಗೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೂ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಈ ಆರು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯುತ್ತವೆ. ಹಾಗೆಯೇ ಪ್ರತಿದಿನ ಸಂಜೆ ಅನುಗ್ರಹ ಪ್ರಶಸ್ತಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೆ ಕೊನೆಯ ದಿನ ನಾದಹಾರ ಕಾರ್ಯಕ್ರಮ ನಡೆಯಲಿದ್ದು, ಭಜನಾ ಮಂಡಳಿಗಳ ನೂರಾರು ಸಂಗೀತಗಾರರು ಒಟ್ಟಿಗೆ ರಾಯರ ಕೀರ್ತನೆ ಹಾಡಲಿದ್ದಾರೆ.

    ಈ ವೈಭವೋಪೇತ ಕಾರ್ಯಕ್ರಮವನ್ನು ವೀಕ್ಷಿಸಲು ಹಾಗೂ ರಾಯರ ಆಶೀರ್ವಾದ ಪಡೆಯಲು ಗುರುವೈಭವೋತ್ಸವಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

    ಅಲ್ಲದೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಬಳಿಕ, ಸುಬುಧೇಂದ್ರ ತೀರ್ಥ ಶ್ರೀಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿದರು. ಅಯೋಧ್ಯ ಸಂಧಾನಕ್ಕೆ ಸಂಧಾನಕಾರರನ್ನ ನೇಮಿಸಿರುವುದು ಸ್ವಾಗತರ್ಹ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ರಾಮ ಜನಿಸಿದ ನಾಡಿನಲ್ಲಿ ಮಂದಿರ ನಿರ್ಮಾಣವಾಗಬೇಕು. ಆದ್ರೆ ಶಾಂತಿ ಮತ್ತು ಸೌಹಾರ್ದತೆಯಿಂದ ಮಂದಿರ ನಿರ್ಮಾಣವಾಗಬೇಕು. ನ್ಯಾಯಾಲಯ ಈ ನಿಟ್ಟಿನಲ್ಲಿ ಸಂಧಾನ ಸಮಿತಿ ರಚಿಸಿರುವುದನ್ನ ಸ್ವಾಗತಿಸುತ್ತೇವೆ ಎಂದರು. ಇದನ್ನೂ ಓದಿ:ಸಂಧಾನದ ಮೂಲಕವೇ ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳಿ- ಸುಪ್ರೀಂ ಕೋರ್ಟ್

    ನಿವೃತ್ತ ನ್ಯಾಯಮೂರ್ತಿ ಎಫ್.ಎಂ ಇಬ್ರಾಹಿಂ ಖಲೀಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಸಂಧಾನ ತಜ್ಞ ವಕೀಲ ಶ್ರೀರಾಮ್ ಪಾಂಚುರನ್ನ ಸಂಧಾನಕಾರರಾಗಿ ಆಯ್ಕೆ ಮಾಡಿರುವುದಕ್ಕೆ ಸಹಮತ ಸೂಚಿಸಿದರು. ಹಾಗೆಯೇ ದೇಶದಲ್ಲಿ ಶಾಂತಿ ನೆಲಸಲು, ಯೋಧರ ರಕ್ಷಣೆಗಾಗಿ ಶ್ರೀ ಮಠದಲ್ಲಿ ಮಾರ್ಚ್ 12 ರಂದು ಮಹಾರುದ್ರ ಯಾಗವನ್ನು ನಡೆಸಲಾಗುವುದು. ದೇಶದ ನಾನಾ ಕಡೆಯಿಂದ 200 ಜನ ರುದ್ರಯಾಗ ಮಾಡುವವರು ಆಗಮಿಸಲಿದ್ದಾರೆ ಅಂತ ಸುಬುಧೇಂದ್ರ ತೀರ್ಥ ಶ್ರೀಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv