Tag: ರಾಮ ಮಂದಿರ

  • ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಪ್ರತಿರೋಧ

    ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಪ್ರತಿರೋಧ

    ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪನ್ನು ಭಾರತದ ಮುಸ್ಲಿಮರು ಸ್ವಾಗತಿಸುವುದಿಲ್ಲ ಎಂಬ ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

    ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು ಓವೈಸಿ ಪ್ರಶ್ನಿಸಿದ್ದರು. ವಿವಾದಾತ್ಮಕ ಸ್ಥಳದಿಂದ ದೂರದಲ್ಲಿ ಮುಸ್ಲಿಮರಿಗೆ 5 ಎಕರೆ ಜಾಗ ಮಂಜೂರು ಮಾಡಿರುವುದು ಮುಸ್ಲಿಮರ ನಂಬಿಕೆಗೆ ಮಾಡಿದ ಅವಮಾನ ಎಂದು ಟೀಕಿಸಿದ್ದರು.

    ಓವೈಸಿ ಸುಪ್ರೀಂ ಕೋರ್ಟ್ ವಿರುದ್ಧವೇ ಹರಿಹಾಯ್ದಿದ್ದು, 1992ರ ಡಿಸೆಂಬರ್‍ನಲ್ಲಿ ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರಿಗೇ ಇಂದು ಸುಪ್ರೀಂ ಕೋರ್ಟ್ ಟ್ರಸ್ಟ್ ರಚಿಸಿ ದೇವಸ್ಥಾನ ನಿರ್ಮಿಸಲು ಸೂಚಿಸಿದೆ. ನಮ್ಮ ಕಾನೂನು ಬದ್ಧ ಹಕ್ಕಿಗಾಗಿ ನಾವು ಹೋರಾಡಿದ್ದೆವು. ನಮಗೆ ದಾನವಾಗಿ ಬಂದ 5 ಎಕರೆ ಭೂಮಿ ಅಗತ್ಯವಿಲ್ಲ. ಈ 5 ಎಕರೆ ಭೂಮಿ ಪ್ರಸ್ತಾವವನ್ನು ನಾವು ತಿರಸ್ಕರಿಸಬೇಕು. ನಮಗೆ ಪ್ರೋತ್ಸಾಹ ನೀಡಬೇಡಿ. ನಾನು ಹೈದರಾಬಾದ್ ರಸ್ತೆಯಲ್ಲಿ ಭಿಕ್ಷೆ ಬೇಡಿಯಾದರೂ ಯುಪಿಯಲ್ಲಿ ಮಸೀದಿ ನಿರ್ಮಿಸಲು ಸಾಕಾಗುವಷ್ಟು ಹಣವನ್ನು ಸಂಗ್ರಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

    ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ನಿಜಾಮಿ ಟ್ವೀಟ್ ಮಾಡುವ ಮೂಲಕ ಓವೈಸಿ ವಿರುದ್ಧ ಹರಿಹಾಯ್ದಿದ್ದು, 5 ಎಕರೆ ಭೂಮಿಯನ್ನು ಏಕೆ ತಿರಸ್ಕರಿಸಬೇಕು. ಓವೈಸಿ ದೇಶದ ಎಲ್ಲ ಮುಸ್ಲಿಮರ ಯಜಮಾನ ಅಲ್ಲ. ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಒಟ್ಟಿಗೆ ಸೇರಿ ಮಸೀದಿಯನ್ನು ನಿರ್ಮಿಸಬೇಕು. ಈ ಕುರಿತು ಯಾರೂ ಅಸೂಯೆ ಪಡಬಾರದು. ದ್ವೇಷ ಮತ್ತು ದುಷ್ಟತನವನ್ನು ಸಕಾರಾತ್ಮಕ ಶಕ್ತಿ ಹಾಗೂ ಆಲೋಚನೆಗಳಿಂದ ಮಾತ್ರ ನಿಭಾಯಿಸಬಹುದು ಎಂದು ತಿಳಿಸಿದರು.

    ರಾಮ ಮಂದಿರದ ಕಡೆಯ ಹಕ್ಕುಗಳನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ 5 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಸೂಚಿಸಿದೆ. ಅಲ್ಲದೆ ಇದರ ಜವಾಬ್ದಾರಿಯನ್ನು ವಕ್ಫ್ ಮಂಡಳಿಗೆ ವಹಿಸಿದೆ.

  • ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ನವದೆಹಲಿ: ಹಿಂದೂಗಳ ಪರವಾಗಿ ಅಯೋಧ್ಯೆ ತೀರ್ಪು ಬಂದಾಗಿದ್ದು, ಇನ್ನಿರುವುದು ರಾಮಮಂದಿರ ನಿರ್ಮಾಣ. ಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲಿನಕ್ಷೆ, ಮಾದರಿ ಸಜ್ಜಾಗಿದೆ. ಜೊತೆಗೆ ಸ್ತಂಭ-ಸ್ತೂಪಗಳು, ಗೋಪುರಗಳನ್ನು ಈಗಾಗಲೇ ಸಿದ್ಧಗೊಂಡಿವೆ.

    ರಾಮ ಜನ್ಮ ಭೂಮಿಯಿಂದ 3 ಕಿ.ಮೀ ದೂರದಲ್ಲಿರುವ ಕರಸೇವಕಪುರಂನ ಕಾರ್ಯ ಶಾಲೆಯಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲ್ಪ ಕೆತ್ತನೆ ನಡೆಯುತ್ತಿದೆ. 1990ರಿಂದಲೇ ಕಾರ್ಯಶಾಲೆಯಲ್ಲಿ ಕೆತ್ತನೆ ಕಾರ್ಯ ಆರಂಭವಾಗಿದ್ದು, ನಿರಂತರವಾಗಿ ನಡೆದುಕೊಂಡು ಬಂದಿದೆ.

    ರಾಮಮಂದಿರ ವಿನ್ಯಾಸ ಹೇಗಿದೆ?:
    ಮಂದಿರದ ಪ್ರಮುಖ ಆಕರ್ಷಣೆಯಾಗಿ 221 ಅಡಿ ಎತ್ತರದ ಬಿಲ್ಲು-ಬಾಣ ಹಿಡಿದಿರುವ ಶ್ರೀರಾಮನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಒಂದು ಮಹಡಿಯ ರಾಮ ಮಂದಿರ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಾಗಿದೆ. ಅದರಂತೆ ನೆಲ ಮಹಡಿಯಲ್ಲಿ 106 ಕಂಬಗಳ ನಿರ್ಮಾಣವಾಗಲಿದ್ದು, ಒಂದೊಂದು ಕಂಬವು 15.6 ಅಡಿ ಉದ್ದ ಇರಲಿವೆ. ಅದೇ ರೀತಿ ಮೊದಲ ಮಹಡಿಯಲ್ಲೂ 14.6 ಅಡಿ ಉದ್ದದ 106 ಕಂಬಗಳ ನಿರ್ಮಾಣವಾಗಲಿವೆ. ಪ್ರತಿಕಂಬದಲ್ಲಿ 16 ಮೂರ್ತಿಗಳ ಕೆತ್ತನೆ ಇರಲಿದೆ.

    ನೆಲಮಹಡಿಯ ಒಂದು ಭಾಗದಲ್ಲಿ ರಾಮಲಲ್ಲಾ (ಬಾಲರಾಮ) ಮೂರ್ತಿ ನಿರ್ಮಾಣ ಹಾಗೂ ಮೊದಲ ಮಹಡಿಯಲ್ಲಿ ರಾಮನ ದರ್ಬಾರ್ ಮೂರ್ತಿ (ರಾಮ-ಸೀತೆ-ಲಕ್ಷಣ ಮತ್ತು ಹನುಮಂತ) ನಿರ್ಮಿಸಲಾಗುತ್ತದೆ. ಮೊದಲ ಮಹಡಿಯ ಎದುರಿನ ಭಾಗ 140 ಅಡಿ ಹಾಗೂ ಬಲಭಾಗ 268 ಅಡಿ ಇರಲಿದೆ. ಹಿಂದಿನ ಭಾಗದ ನೆಲ ಮಹಡಿ 18 ಅಡಿ ಮತ್ತು ಮೊದಲ ಮಹಡಿಯ ಒಂದು ಭಾಗ 15.9 ಅಡಿ ಇರಲಿದೆ. ರಾಮ ಮಂದಿರಕ್ಕೆ ಒಟ್ಟು 24 ಬಾಗಿಲುಗಳಿವೆ.

    ಮೊದಲ ಮಹಡಿಯ ಹಾಸಿನಿಂದ ಧ್ವಜಸ್ತಂಭದವರೆಗೆ 65.3 ಅಡಿ ಗೋಪುರವಿದೆ. ಮತ್ತೊಂದು ಗೋಪುರವು 128 ಅಡಿ ನೆಲದಿಂದ ಗೋಪುರದ ತುತ್ತತುದಿವರೆಗೆ ಇದೆ. ಮಂದಿರದಲ್ಲಿ 6 ಭಾಗದಲ್ಲಿ ಸಿಂಹದ್ವಾರ, ಕೋಲಿ, ನೃತ್ಯ ಮಂಟಪ, ಗರ್ಭಗುಡಿ, ರಂಗಮಂಟಪ ಇರಲಿದೆ.

    ದೇವಾಲಯದ ಜೊತೆಗೆ ವಸ್ತುಪ್ರದರ್ಶನ, ಐತಿಹಾಸಿಕ ಕೇಂದ್ರವನ್ನೂ ನಿರ್ಮಾಣ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ವಿಷ್ಣುವಿನ ದಶಾವತಾರ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗುತ್ತದೆ. ಈ ಅಂಶಗಳೆಲ್ಲವೂ ನೀಲಿನಲ್ಲಿದ್ದು, ಶಿಲ್ಪ ಕೆತ್ತನೆ ಕೆಲಸ ಭರದಿಂದ ಸಾಗಿದೆ.

    ಕಾರ್ಯಶಾಲೆ ಇತಿಹಾಸ:
    ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ 1989ರ ನವೆಂಬರ್ 10ರಂದೇ ನಡೆದಿತ್ತು. ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 1990ರಿಂದಲೇ ಕಾರ್ಯಶಾಲೆಯಲ್ಲಿ ಕೆತ್ತನೆ ಕಾರ್ಯ ಆರಂಭವಾಗಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದಾಗಿ ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕೆಲ ಸಂಘಟನೆಗಳ ನಾಯಕರ ಮೇಲೆ ಪ್ರಕರಣ ದಾಖಲಾಗಿದ್ದರೂ ಕೆತ್ತನೆ ಕಾರ್ಯ ಮುಂದುವರಿದಿತ್ತು.

    ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗಲೂ ರಾಜಸ್ಥಾನ ಮತ್ತು ಗುಜರಾತ್‍ಗಳಿಂದ ಕಲ್ಲುಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಕೆತ್ತನೆ ಕಾರ್ಯ ಮುಂದುವರಿದಿತ್ತು. ಆದರೆ ಇತ್ತೀಚೆಗೆ ಕಾರ್ಯಶಾಲೆಯ ಪ್ರಧಾನ ಶಿಲ್ಪಿ ನಿಧನರಾದ ಬಳಿಕ ಕಾರ್ಯಗಳು ಸ್ಥಗಿತವಾಗಿದ್ದವು. ಈಗಾಗಲೇ ಶೇ.65ರಷ್ಟು ಕಾರ್ಯವು ಪೂರ್ಣಗೊಂಡಿದೆ.

    ಈಗಾಗಲೇ ಉತ್ತರ ಹಾಗೂ ದಕ್ಷಿಣ ಭಾರತದ ಸಾವಿರಾರು ಜನರು ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ನೀಡಿದ್ದಾರೆ. ಅವುಗಳಿಗೆ ಮೇಲೆ ಜೈ ಶ್ರೀರಾಮ್ ಎಂದು ಬರೆಯಲಾಗಿದೆ. ಈ ಮೂಲಕ ನೆಲ ಮಹಡಿಯ ನಿರ್ಮಾಣಕ್ಕೆ ಬೇಕಾದ ಕಂಬಗಳು, ಇಟ್ಟಿಗೆ ಎಲ್ಲವೂ ಈಗಲೇ ಸಿದ್ಧವಾಗಿದೆ.

  • ಸುಪ್ರೀಂ ತೀರ್ಪನ್ನು ಯಾರೂ ಗೆಲುವು, ಸೋಲು ಎಂದು ಭಾವಿಸಬಾರದು – ಮೋಹನ್ ಭಾಗವತ್

    ಸುಪ್ರೀಂ ತೀರ್ಪನ್ನು ಯಾರೂ ಗೆಲುವು, ಸೋಲು ಎಂದು ಭಾವಿಸಬಾರದು – ಮೋಹನ್ ಭಾಗವತ್

    ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಇದನ್ನು ಯಾರೂ ಗೆಲವು, ಸೋಲು ಎಂದು ಭಾವಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ನಾವೂ ಸಹ ಸಹಕರಿಸುತ್ತೇವೆ ಎಂದು ಭಾಗವತ್ ಹೇಳಿದ್ದಾರೆ.

    ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇವೆ. ದಶಕಗಳಿಂದ ನಡೆಯುತ್ತಿದ್ದ ಪ್ರಕರಣ ಇಂದು ಇತ್ಯರ್ಥವಾಗಿರುವುದು ಸಂತಸ ತಂದಿದೆ. ಇದನ್ನು ಯಾರೂ ಗೆಲುವು ಸೋಲು ಎಂದು ಭಾವಿಸಬಾರದು. ನಾವು ಹಿಂದಿನದನ್ನು ಮರೆಯಬೇಕಿದೆ. ನಮ್ಮಿಂದ ನಿರೀಕ್ಷಿಸಲಾದ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಪ್ರಯತ್ನವನ್ನು ನಾವು ಸ್ವಾಗತಿಸುತ್ತೇವೆ ಎಂದು ಕರೆ ನೀಡಿದರು.

    ಮುಂದಿನ ಯಾವುದೇ ಆಂದೋಲನ ಅಥವಾ ರಾಜಕೀಯ ಆಂದೋಲನದಲ್ಲಿ ಆರ್‌ಎಸ್‌ಎಸ್ ಭಾಗಿಯಾಗುವುದಿಲ್ಲ. ಚಾರಿತ್ರ್ಯ ನಿರ್ಮಾಣದ ಕಡೆ ಗಮನಹರಿಸಲಿದೆ ಎಂದು ಸ್ಪಷ್ಟಪಡಿಸಿದರು.

    ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು, ನಾವು ಎಲ್ಲ ಧರ್ಮಗಳನ್ನು ಹೊರತಾಗಿ ಭಾರತೀಯ ಪ್ರಜೆಗಳು ಎಂದು ಅಭಿಪ್ರಾಯಪಟ್ಟರು.

    ಇಂದು ಬೆಳಗ್ಗೆ ರಾಮಜನ್ಮ ಭೂಮಿ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚಸದಸ್ಯರ ಪೀಠ ತೀರ್ಪು ಪ್ರಕಟಿಸಿದೆ. ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳದಲ್ಲಿ 5 ಎಕರೆ ಜಮೀನು ನೀಡಬೇಕು. ಮಂದಿರ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

  • ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ನವದೆಹಲಿ: ಅಯೋಧ್ಯೆ ಪ್ರಕರಣದ ಐತಿಹಾಸಿಕ ತೀರ್ಪು ಪ್ರಕಟಗೊಂಡಿದ್ದು ಸುಪ್ರೀಂ ಕೋರ್ಟ್ ಕೇಂದ್ರ ಶಿಯಾ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

    1946 ರಲ್ಲಿ ಫೈಜಾಬಾದ್ ನ್ಯಾಯಾಲಯ 1992ರ ಡಿ.6ರಂದು ಧ್ವಂಸಗೊಂಡ ಮಸೀದಿಯು ಸುನ್ನಿ ಪಂಗಡಕ್ಕೆ ಸೇರಿದ್ದ ಜಾಗ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಬೋರ್ಡ್ ಈ ಮಸೀದಿಯನ್ನು ಮೊಘಲ್ ದೊರೆ ಬಾಬರ್ ಕಟ್ಟಿಲ್ಲ. ಬಾಬರ್ ಕಮಾಂಡರ್ ಮಿರ್ ಬಾಖ್ವಿ ಕಟ್ಟಿದ್ದಾನೆ. ಈತ ಶಿಯಾ ಪಂಗಡಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ಈ ವಿವಾದಿತ ಜಾಗ ನಮ್ಮದು ಎಂದು ಹೇಳಿ 2017ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸರ್ವೋಚ್ಚ, ಆದ್ರೆ ದೋಷಾತೀತ: ಓವೈಸಿ

    ಸುಪ್ರೀಂ ಆದೇಶದಲ್ಲಿ ಏನಿದೆ?
    ಶಿಯಾ ವಕ್ಫ್ ಬೋರ್ಡ್ 1946 ರಲ್ಲಿ ಫೈಜಾಬಾದ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. 24,964 ದಿನಗಳ ಬಳಿಕ ಸಲ್ಲಿಕೆಯಾದ ಬಳಿಕ ಅರ್ಜಿ ಸಲ್ಲಿಕೆಯಾಗಿದೆ. ಇಷ್ಟೊಂದು ದಿನ ವಿಳಂಬ ಮಾಡಿದ್ದು ಯಾಕೆ ಎನ್ನುವುದಕ್ಕೆ ಶಿಯಾ ವಕ್ಫ್ ಬೋರ್ಡ್ ಕಾರಣ ನೀಡಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

    ನಿರ್ಮೋಹಿ ಅಖಾಡದ ಅರ್ಜಿ ವಜಾಗೊಂಡಿದ್ದು ಯಾಕೆ?
    ಸುಪ್ರೀಂ ಕೋರ್ಟ್ ಈ ವೇಳೆ ನಿರ್ಮೋಹಿ ಅಖಾಡದ ಅರ್ಜಿಯನ್ನು ವಜಾಗೊಳಿಸಿದೆ. ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಮಾತ್ರಕ್ಕೆ ಆಸ್ತಿಯಲ್ಲಿ ಹಕ್ಕು ನೀಡಲು ಸಾಧ್ಯವಿಲ್ಲ. ಆಸ್ತಿಯ ಹಕ್ಕು ಪೂರ್ಣವಾಗಿ ರಾಮ್ ಲಲ್ಲಾಗೆ ಸೇರುತ್ತದೆ. ಆದರೆ ಅವರ ವಾದವನ್ನು ಪರಿಗಣಿಸಿ ನಿರ್ಮೋಹಿ ಅಖಾಡಕ್ಕೆ ದೇವಾಲಯದ ಟ್ರಸ್ಟ್‍ನಲ್ಲಿ ಸ್ಥಾನ ಸಿಗಬೇಕು ಎಂದು ಆದೇಶದಲ್ಲಿ ತಿಳಿಸಿದೆ.

    ನಿರ್ಮೋಹಿ ಅಖಾಡ ವಾದ ಏನಿತ್ತು?
    ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ 1934ರಿಂದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ. ಅರ್ಚಕರಿಗೆ ದೇವರ ಭೂಮಿಯ ಮೇಲೆ ಹಕ್ಕಿರುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವಸ್ಥಾನದ ಆಸ್ತಿ ದೇವರ ಹೆಸರಲ್ಲಿದ್ದರೂ ಅದರ ನಿರ್ವಹಣೆ ಅರ್ಚಕರದ್ದು. ವಂಶಪಾರಂಪರ್ಯ ಆಸ್ತಿಗಳ ಮೇಲೆ ಹಕ್ಕಿರುವಂತೆ ದೇವಸ್ಥಾನದ ಭೂಮಿ ಮೇಲೂ ಅವರಿಗೆ ಹಕ್ಕಿರುತ್ತದೆ ಎಂದು ಹೇಳಿತ್ತು. ನಮ್ಮ ಮೂಲ ವಾದ ಭೂಮಿ ಒಡೆತನ, ನಿರ್ವಹಣೆಯ ಹಕ್ಕಿಗೆ ಸಂಬಂಧಿಸಿದ್ದು. 1850ರಿಂದಲೇ ನಾವು ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದೇವೆ. ಸೀತಾ ರಸೋಯಿ(ಮೊದಲ ಬಾರಿಗೆ ಸೀತೆ ಅಡುಗೆ ಮಾಡಿದ್ದ ಸ್ಥಳ,ಕುಟುಂಬ ಸದಸ್ಯರಿಗಾಗಿ ಸಿಹಿ ಅಡುಗೆ ತಯಾರಿಸಿದ್ದ ಸೀತೆ), ರಾಮ್ ಭಂಡಾರ್(ಭಗವಾನ್ ಶ್ರೀರಾಮನ ಭೋಜನ ಗೃಹ, ಸೀತಾ ರಸೋಯಿಯಲ್ಲಿ ಅಡುಗೆ ಮಾಡಿ ಇಲ್ಲಿ ಭೋಜನ), ರಾಮ್ ಚಬೂತರ್(ಶ್ರೀರಾಮ ಹುಟ್ಟಿದ ಸ್ಥಳ, ಇದೇ ಜಾಗದಲ್ಲಿ ಶ್ರೀರಾಮ ಬೆಳೆದ ಜಾಗ) ನಮ್ಮ ಹಿಡಿತದಲ್ಲೇ ಇತ್ತು. ಅಲ್ಲದೇ ಈ ಮೂರು ಜಾಗಗಳ ಮೇಲೆ ಯಾವುದೇ ವ್ಯಾಜ್ಯಗಳು ಇರಲಿಲ್ಲ ಎಂದು ವಾದಿಸಿತ್ತು.

    2010ರಲ್ಲಿ ಅಲಹಾಬಾದ್ ಕೋರ್ಟ್ 2.77 ಎಕರೆಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ, ರಾಮ್‍ಲಲ್ಲಾಗೆ ಸಮಾನ ಹಂಚಿಕೆ ಮಾಡಿ ಆದೇಶಿಸಿತ್ತು.

  • ಭಾರತ ವಿಕಾಸದ ದಿಕ್ಕಲ್ಲಿ ಓಡುತ್ತಿದೆ, ಹಿಂದೂ-ಮುಸಲ್ಮಾನರು ಒಗ್ಗೂಡಿ ದೇಶ ಕಟ್ಟೋಣ: ಸೂಲಿಬೆಲೆ

    ಭಾರತ ವಿಕಾಸದ ದಿಕ್ಕಲ್ಲಿ ಓಡುತ್ತಿದೆ, ಹಿಂದೂ-ಮುಸಲ್ಮಾನರು ಒಗ್ಗೂಡಿ ದೇಶ ಕಟ್ಟೋಣ: ಸೂಲಿಬೆಲೆ

    ಬೆಂಗಳೂರು: ಶತಮಾನಗಳ ಅಯೋಧ್ಯೆ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ದೇಶ ವಿಕಾಸದತ್ತ ಓಡುತ್ತಿದೆ. ಹಿಂದೂ ಮುಸಲ್ಮಾನರು ಒಗ್ಗೂಡಿ ಭಾರತವನ್ನು ಕಟ್ಟೋಣ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಅಯೋಧ್ಯೆ ತೀರ್ಪಿನ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ನಾನು ಏನಾದರೂ ಹೇಳಿದರೆ ಕಡಿಮೆಯಾಗಬಹುದು. ಇವತ್ತು ನನ್ನ ಜೀವನದ ಅತ್ಯಂತ ಸಂಭ್ರಮದ ದಿನಗಳಲ್ಲಿ ಒಂದು. ಕಳೆದ 2-3 ದಶಕದಿಂದ ಅಯೋಧ್ಯೆ ತೀರ್ಪು ಹೀಗೆ ಬರಬಹುದು, ಹಾಗೆ ಬರಬಹುದು ಎಂದು ಕನಸು ಕಂಡಿದ್ದೆವು. ಅದು ಇಂದು ನನಸಾಗಿರೋದು ನಮಗೆ ಆಕಾಶದಲ್ಲಿ ತೇಲಾಡುತ್ತಿರುವ ಅನುಭವ ನೀಡಿದೆ. ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿದ್ದಂತೆ ಭಾವನಾತ್ಮಕ ಪ್ರಸಂಗ ಅನಿಸುತ್ತಿತ್ತು. ನಮ್ಮೆಲ್ಲರಿಗೂ ಮನಸ್ಸಿಗೆ ಮುದಾ ಕೊಡುವಂತಹ ತೀರ್ಪನ್ನು ಸುಪ್ರೀಂ ಕೋರ್ಟ್ ಕೊಟ್ಟಿದೆ. ಆದ್ದರಿಂದ ಸುಪ್ರೀಂ ಕೋರ್ಟಿಗೆ ಅತ್ಯಂತ ಪ್ರೀತಿಪೂರ್ವಕವಾದ ಧನ್ಯವಾಗಳನ್ನು ಸರ್ಮಪಿಸಲು ಇಚ್ಛಿಸುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು. ಇದನ್ನೂ ಓದಿ:ಅಯೋಧ್ಯೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು – ಸುಪ್ರೀಂ ಐತಿಹಾಸಿಕ ತೀರ್ಪು

    ಇದು ಭಾರತ ಸಾರ್ವಭೌಮ ರಾಷ್ಟ್ರ ಎನ್ನುವುದನ್ನು ನಿರೂಪಿಸಿದೆ. 370ನೇ ವಿಧಿ ರದ್ಧತಿ ಆದಾಗಲೇ ಭಾರತ ತೋರಿದ ಏಕತೆ ಹಿಂದೂ-ಮುಸಲ್ಮಾನರಲ್ಲಿ ದೇಶ ಗಟ್ಟಿಯಾಯಿತು ಎಂಬ ಭಾವನೆ ಮೂಡಿಸಿತು. ಇವತ್ತು ಬಂದ ತೀರ್ಪು ಭಾರತ ಬಲಾಢ್ಯವಾಗಿರುತ್ತೆ ಎನ್ನುವುದನ್ನ ಮತ್ತೊಮ್ಮೆ ಸಾಭೀತುಗೊಳಿಸಿದೆ. ಭಾರತ ಮತ್ತೆ ತನ್ನ ಪರಂಪರೆಯ ಬೇರಿಗೆ ಮರಳುತ್ತಿದೆ. ದೇಶದ ಘನತೆಯನ್ನ ಜಗತ್ತಿಗೆ ತೋರಿಸುವ ಸಂದರ್ಭ ಬಂದಿದೆ. ಈಗ ಅಯೋಧ್ಯೆ ಜಗಳ ಸರಿಹೋಗದಿದ್ದಿದ್ದರೆ ಇನ್ನೂ 100 ವರ್ಷ ಕಳೆದರೂ ಇದೇ ಜಗಳ ಮುಂದುವರಿಯುತಿತ್ತು. ಎಲ್ಲೋ ಒಂದು ಕಡೆ ಇದಕ್ಕೆ ಪೂರ್ಣವಿರಾಮ ಬೀಳಬೇಕಿತ್ತು. ಅದು ಇವತ್ತು ನಡೆದಿದೆ. ಇನ್ನು ನಾವು ಈ ಮಂದಿರ-ಮಸೀದಿಯ ಜಗಳದಿಂದ ಮೇಲಕ್ಕೆ ಬರುತ್ತಾ ಭಾರತದ ವಿಕಾಸದತ್ತ ಓಡುತ್ತಿದೆ. ಅದರ ದಿಕ್ಕಲ್ಲಿ ನಾವೂ ನಡೆಯೋದು ಒಳಿತೆಂದು ನನಗೆ ಅನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮೊದಲೇ ಮುಸ್ಲಿಮರು ಸಂಧಾನಕ್ಕೆ ಒಪ್ಪಿದ್ದರೆ ಇನ್ನೂ ಸುಂದರವಾಗಿರುತ್ತಿತ್ತು. ಹಿಂದೂಗಳು ಕೂಡ ಅವರು ಪ್ರತ್ಯೇಕ ಜಾಗ ನೀಡಲು ಸಿದ್ಧರಾಗಿದ್ದರು. ಅದಕ್ಕೆ ಒಪ್ಪಿದ್ದರೆ ಮುಸಲ್ಮಾನರು ಪ್ರೀತಿಯಿಂದ ಜಾಗ ಬಿಟ್ಟುಕೊಟ್ಟರು ಎನ್ನುವ ಸೌಹಾರ್ದತೆ ಇರುತ್ತಿತ್ತು. ಇವತ್ತು ಹಾಗಿಲ್ಲ, ಇದು ಕೋರ್ಟಿನಿಂದ ಆಗಿದೆ. ಎಲ್ಲರೂ ಕೋರ್ಟಿಗೆ ತಲೆ ಬಾಗಬೇಕು ಎನ್ನುವ ರೀತಿ ಆಗಿದೆ.

    ದೇಶದ ಬಹುತೇಕ ಮುಸಲ್ಮಾನರು ಸುಪ್ರೀಂ ತೀರ್ಪನ್ನು ಒಪ್ಪಿದ್ದಾರೆ. ಇದು ಬಹಳ ಸಂತೋಷದ ವಿಚಾರವಾಗಿದೆ. ತೀರ್ಪು ಒಪ್ಪಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ದುರಾದೃಷ್ಟಕರ ಸಂಗತಿಯೆಂದರೆ ಅಲ್ಲಿನ ಸುನ್ನಿ ಬೋರ್ಡ್ ತೀರ್ಪು ಒಪ್ಪದೆ ಮುಂದಕ್ಕೆ ತೆಗದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಪ್ರಕರಣವನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದೆ. ಆದರೆ ನನ್ನ ಪ್ರಕಾರ ಈ ಪ್ರಕರಣ ಅಂತ್ಯವಾಗಿದೆ. ಮುಖ್ಯನ್ಯಾಯಾಧೀಶರು ಸಂಪೂರ್ಣ ಆಧಾರ ಪರಿಗಣಿಸಿ ಪ್ರಕರಣಕ್ಕೆ ತೆರೆಗಾಣಿಸಿದ್ದಾರೆ. ಹೀಗಾಗಿ ಎಲ್ಲಾ ಮುಸಲ್ಮಾನರಲ್ಲೂ ನಾನು ಕೋರಿಕೊಳ್ಳುತ್ತೇನೆ, ನಾವು ಮತ್ತು ನೀವು ರಾಷ್ಟ್ರವನ್ನ ಕಟ್ಟುವುದಲ್ಲಿ ಜೊತೆಯಾಗಿ ದೀರ್ಘಕಾಲ ನಡೆಯಬೇಕಾದ ಅವಕಾಶವಿದೆ, ಅಗತ್ಯವಿದೆ. ಇಬ್ಬರೂ ಜೊತೆಯಾಗಿ ಸಾಗೋಣ. ಇನ್ನು ಈ ಗಲಾಟೆಯನ್ನು ಮುಂದುವರಿಸುವುದು ಬೇಡ. ಗಲಾಟೆಯನ್ನು ಮುಗಿಸುವುದಕ್ಕೆ ಈ ಹಂತದಲ್ಲಿ ಪ್ರಯತ್ನಿಸೋಣ ಎಂದು ಮನವಿ ಮಾಡಿಕೊಂಡರು.

    ಯಾರು ಈ ಪ್ರಕರಣದ ಪ್ರೊಸಿಡಿಂಗ್ಸ್ ಬಗ್ಗೆ ಕೇಳಿದ್ದರೋ, ನೋಡಿದ್ದರೋ ಅವರಿಗೆ ಅಯೋಧ್ಯೆಯ ಜಾಗ ಹಿಂದೂಗಳಿಗೆ ಸೇರುತ್ತೆ ಎಂದು ಗೊತ್ತಿತ್ತು. ಇದು ಬಹಳ ಸ್ಪಷ್ಟವಾದ ಸಂಗತಿಯಾಗಿತ್ತು. ಯಾಕೆಂದರೆ ಇಡೀ ವಾದದಲ್ಲಿ ಭಾರತದ ಪುರಾತತ್ವ ಸಮೀಕ್ಷೆ ಮಾತ್ರ ವೈಜ್ಞಾನಿಕ ಸಾಕ್ಷ್ಯಗಳನ್ನು ಕೋರ್ಟಿಗೆ ಸಲ್ಲಿಸಿತ್ತು. ಅದನ್ನು ಬಿಟ್ಟು ಬೇರೆ ಸಾಕ್ಷ್ಯಗಳಲ್ಲಿ ಬ್ರಿಟಿಷ್ ಅಧಿಕಾರಿಗಳ ಹೇಳಿಕೆ, ಮುಸ್ಲಿಂ ರಾಜರುಗಳ ಹೇಳಿಕೆ ಮಾತ್ರವಿತ್ತು. ಯಾವುದೇ ಆಯಾಮದಲ್ಲಿ ನೋಡಿದರೂ ಕೂಡ ಪುರಾತತ್ವ ಸಮೀಕ್ಷೆಯ ಸಾಕ್ಷ್ಯಗಳು ಈ ಭೂಮಿಯ ಮೇಲೆ ಮಂದಿರ ಇತ್ತು ಎನ್ನುವುದನ್ನು ಸ್ಪಷ್ಟಪಡಿಸಿದೆ.

    ಮುಸ್ಲಿಮರು ಕೂಡ ಸ್ಪಷ್ಟವಾಗಿ ಇದು ರಾಮನ ಜನ್ಮಭೂಮಿ ಎಂದು ಒಪ್ಪಿಕೊಂಡಿದ್ದರು. ಹಿಂದೂಗಳೂ ಅದನ್ನೇ ಹೇಳುತ್ತಿದ್ದರು. ಹೀಗಾಗಿ ಅದು ವಿವಾದವಿಲ್ಲದ ಜಾಗವಾಗಿತ್ತು. ಆದರೆ ರಾಜಕೀಯ ಕಾರಣಗಳಿಂದ ಹಾಗೂ ಬಂದ ಸರ್ಕಾರಗಳು ಅಯೋಧ್ಯೆ ತೀರ್ಪು ಬಂದರೆ ಮುಸ್ಲಿಮರು ಧಂಗೆ ಏಳುತ್ತಾರೆ ಎನ್ನುವ ಭಯ ಹುಟ್ಟಿಸಿತ್ತು. ಆದ್ದರಿಂದ ಈ ಪ್ರಕರಣದ ತೀರ್ಪು ಬಂದಿರಲಿಲ್ಲ ಅಷ್ಟೇ. ಅದನ್ನು ಬಿಟ್ಟರೆ ಈ ಪ್ರಕರಣ ಹಿಂದೂಗಳ ಪರವಾಗಿಯೇ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಅಯೋಧ್ಯೆ ಪ್ರಕರಣವನ್ನು ಕೈಗೆತ್ತಿಕೊಂಡು ಆದಷ್ಟು ಬೇಗ ಇದಕ್ಕೆ ಇತಿಶ್ರೀ ಹಾಡಲು ಮುಂದಾದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಮೂರ್ತಿ ರಂಜನ್ ಗೊಗೊಯ್ ಅವರಿಗೆ ಹೃದಯಪೂರ್ವಕ ಅಭಿನಂದನೆಯನ್ನು ಸೂಲಿಬೆಲೆ ಅವರು ತಿಳಿಸಿದರು.

    ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದು ಮಾಡಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿತ್ತು. ಇದು ಅಯೋಧ್ಯೆ ತೀರ್ಪನ್ನು ಹೊರಡಿಸಲು ಸಹಾಯವಾಯ್ತು. ಕೇಂದ್ರದಲ್ಲಿ ಸಾರ್ವಭೌಮ ಸರ್ಕಾರವಿದೆ, ಇದು ಪರಿಸ್ಥಿತಿಯನ್ನು ನಿಯಂತ್ರಿಸುತ್ತೆ ಎಂದು ಗೊತ್ತಿತ್ತು. ಹೀಗಾಗಿ ನ್ಯಾಯಾಧೀಶರು ನಾವು ಮಾಡಬೇಕಾದ ಕೆಲಸ ಮಾಡೋಣ ಎಂದು ಅಯೋಧ್ಯೆ ತೀರ್ಪನ್ನು ಹೊರಡಿಸಿದ್ದಾರೆ.

    ಶುಕ್ರವಾರದಂದು ನಾಳೆ ಅಯೋಧ್ಯೆ ತೀರ್ಪು ಹೊರಬೀಳುತ್ತೆ ಎಂದು ತಿಳಿದಾಗಲೇ ಅದು ಹಿಂದೂಗಳ ಪರವಾಗಿಯೇ ಬರುತ್ತೆ ಎಂಬ ನಂಬಿಕೆ ಇತ್ತು. ಆದರೂ ಎಲ್ಲೋ ಒಂದು ಕಡೆ ಸ್ವಲ್ಪ ಆತಂಕ ಕೂಡ ಇತ್ತು. ಅದನ್ನು ಬಿಟ್ಟರೆ ಅಯೋಧ್ಯೆ ತೀರ್ಪು ರಾಮನ ಪರವಾಗಿಯೇ ಬರುತ್ತೆ ಎಂದು ಗೊತ್ತಿತ್ತು ಎಂದು ಹೇಳಿದರು.

    10.30ಕ್ಕೆ ಸುಪ್ರೀಂ ತೀರ್ಪು ಆರಂಭವಾದಾಗಿನಿಂದಲೂ ನಾನು ಸಾಮಾಜಿಕ ಜಾಲತಾಣ ಹಾಗೂ ಎಲ್ಲರೂ ಮಾಡುತ್ತಿದ ಟ್ವೀಟ್‍ಗಳನ್ನು ಗಮನಿಸುತ್ತಿದ್ದೆ. ಮೊದಲು ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ನಿಜ ಎಂದು ಒಪ್ಪಿಕೊಳ್ಳಬೇಕಾಗುತ್ತೆ ಎಂದಾಗ ಹಿಂದೂಗಳ ಪರವಾಗಿಯೇ ತೀರ್ಪು ಬರತ್ತೆ ಎಂದು ಖುಷಿಯಾಯ್ತು. ಬಳಿಕ ಪುರಾತತ್ವ ಇಲಾಖೆ ನಿಖರವಾಗಿ ತಿಳಿಸಿಲ್ಲ ಎಂದಾಗ ಆತಂಕವಾಯ್ತು. ಕೊನೆಗೆ ಶಿಯಾ ಇದು ತಮ್ಮದೇ ಜಾಗವೆಂದು ಸುಪ್ರೀಂ ಕೋರ್ಟಿನಲ್ಲಿ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ಇದನ್ನ ಹಿಂದೂಗಳಿಗೆ ಕೊಡಬೇಕು. ಮುಸಲ್ಮಾನರಿಗೆ ಪ್ರತ್ಯೇಕ ಜಾಗ ಕೊಡಬೇಕು ಎಂದು ತೀರ್ಪು ನೀಡಿತು. ಇದನ್ನು ನೋಡುತ್ತಿದ್ದಾಗ 20-20 ಕ್ರಿಕೆಟ್ ಮ್ಯಾಚ್ ನೋಡಿದ ಹಾಗೆ ಆಗುತಿತ್ತು ಎಂದರು.

    ರಾಮ ಮಂದಿರ ಹೇಗಿರಬೇಕು ಎನ್ನುವುದರ ಪ್ಲಾನ್ ದಶಕಗಳ ಹಿಂದೆಯೇ ಮಾಡಲಾಗಿದೆ. ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಕೂಡ ಮಾಡಿಕೊಂಡಾಗಿದೆ. ಕೆಲವೇ ತಿಂಗಳುಗಳಲ್ಲಿ ರಾಮ ಮಂದಿರವನ್ನು ಕಟ್ಟಿ ಮುಗಿಸಬಹುದು. ಆದರೆ ದೇಶದ ದೃಷ್ಟಿಯಲ್ಲಿ ಮಂದಿರವೆಂದರೆ ಅದು ವಿದ್ಯಾ ಕೇಂದ್ರವೂ ಆಗಿರಬೇಕು, ಆರೋಗ್ಯ ಕೇಂದ್ರವೂ ಆಗಿರಬೇಕು, ಜ್ಞಾನ ಪ್ರಸಾದ ಕೇಂದ್ರವೂ ಆಗಿರಬೇಕು ಹಾಗೂ ರಾಮನ ಚಿಂತನೆಗಳನ್ನ, ಮೌಲ್ಯಗಳನ್ನ ಜಗತ್ತಿಗೇ ಸಾರುವ ಕೇಂದ್ರ ಆಗಿರಬೇಕು. ಮತ್ತೊಮ್ಮೆ ಅಯೋಧ್ಯೆ ಭೂಪಟದಲ್ಲಿ ಇಡೀ ಜಗತ್ತೆ ನೋಡುವಂತಹ ಸ್ಥಳವಾಗಬೇಕು ಎಂದು ಹೇಳಿದರು.

    ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿನ 2.77 ಎಕ್ರೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕ್ರೆ ಪ್ರತ್ಯೇಕ ಜಾಗ ನೀಡಬೇಕೆಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ರಂಜನ್ ಗೊಗೋಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧನಿಕಾ ಪೀಠ ಸರ್ವ ಸಮ್ಮತದ ತೀರ್ಪು ಪ್ರಕಟಿಸಿದೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ ಎಂದು ತಿಳಿಸಿದೆ.

  • ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ, 5 ಶತಮಾನದ ಹೋರಾಟ ಅಂತ್ಯ – ಕರಂದ್ಲಾಜೆ

    ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ, 5 ಶತಮಾನದ ಹೋರಾಟ ಅಂತ್ಯ – ಕರಂದ್ಲಾಜೆ

    ಬೆಂಗಳೂರು: ಐದು ಶತಮಾನದ ಹೋರಾಟ ಇಂದು ಅಂತ್ಯವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಶ್ರೀರಾಮ ಹುಟ್ಟಿದ ಜಾಗದಲ್ಲಿ ಮಂದಿರ ಆಗಬೇಕು ಎನ್ನವ ಹೋರಾಟ ಇತ್ತು. ಐದು ಶತಮಾನದ ಹೋರಾಟ ಇದು. ಶ್ರೀರಾಮ ಹುಟ್ಟಿದ ಜಾಗದಲ್ಲಿ ಮಂದಿರ ಆಗಬೇಕು ಎಂಬ ಹೋರಾಟ ಇತ್ತು. ಜನ ಚಾತಕ ಪಕ್ಷಿಯಂತೆ ಈ ದಿನಕ್ಕಾಗಿ ಕಾಯುತ್ತಿದ್ದರು. ಇದೊಂದು ಐತಿಹಾಸಿಕ ತೀರ್ಪು. ಹಿಂದೂಗಳಿಗೆ ಜಾಗ ಬಿಟ್ಟುಕೊಡುವ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದರು.

    ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ. ರಾಜ್ಯದ ಜನ ಶಾಂತಿಯಿಂದ ವರ್ತನೆ ಮಾಡಬೇಕು. ಎರಡು ಕೋಮಿನ ಜನ ಒಟ್ಟಾಗಿ ಬದುಕಬೇಕು. ಮಸೀದಿಗೂ ಜಾಗ ನೀಡಿ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಒಟ್ಟಾಗಿ ನಾವು ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

    ಲಕ್ಷಾಂತರ ಜನ ರಾಮನ ಮಂದಿರ ಹೋರಾಟಕ್ಕಾಗಿ ಪ್ರಾಣ ತೆತ್ತಿದ್ದರು. ರಾಮ ಮಂದಿರಕ್ಕೆ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ದೇಶದಲ್ಲಿ ನ್ಯಾಯ ಇದೆ ಎನ್ನುವುದು ತೀರ್ಪಿನಿಂದ ಸಾಬೀತಾಗಿದೆ. ಜಾಗ ಹಿಂದೂಗಳಿಗೆ ಬಿಟ್ಟು ಕೊಡುವ ಐತಿಹಾಸಿಕ ತೀರ್ಪು ಕೋರ್ಟ್ ನೀಡಿದೆ. ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರು ಇದ್ದ ಹಾಗೆ. ಹಿಂದೂ-ಮುಸ್ಲಿಮರು ಒಟ್ಟಾಗಿ ಪ್ರೀತಿ ವಿಶ್ವಾಸದಿಂದ ಬದುಕೋಣ ಎಂದು ಕರೆ ನೀಡಿದರು.

    ಮೂರು ತಿಂಗಳಲ್ಲಿ ಮಸೀದಿಗೆ ಜಾಗ ಕೊಡಬೇಕು ಎಂದು ಕೋರ್ಟ್ ಹೇಳಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ, ರಾಜ್ಯದ ಜನ ಶಾಂತಿ, ಸೌಹಾರ್ದಯುತವಾಗಿ ಇರಬೇಕು ಎಂದರು.

  • ರಾಮಮಂದಿರಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿ, ಇತರರ ಬಾಗಿಲು ಬಂದ್: ಸುರ್ಜೇವಾಲಾ

    ರಾಮಮಂದಿರಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿ, ಇತರರ ಬಾಗಿಲು ಬಂದ್: ಸುರ್ಜೇವಾಲಾ

    ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ನಾವು ರಾಮಮಂದಿರ ನಿರ್ಮಾಣದ ಪರವಿದ್ದೇವೆ. ನ್ಯಾಯಾಲಯದ ಈ ತೀರ್ಪು ಕೇವಲ ರಾಮಮಂದಿರ ನಿರ್ಮಾಣಕ್ಕೆ ಬಾಗಿಲನ್ನು ತೆರೆದಿದ್ದು ಮಾತ್ರವಲ್ಲದೇ ಈ ವಿಚಾರವನ್ನು ರಾಜಕೀಯ ಮಾಡುವ ಬಿಜೆಪಿ ಹಾಗೂ ಇತರರ ಬಾಗಿಲನ್ನು ಬಂದ್ ಮಾಡಿದೆ ಎಂದರು.

    ನ್ಯಾಯಾಲಯದ ತೀರ್ಪನ್ನು ಗೌರವಿಸಿ ನಾವು ನಡೆಯಬೇಕಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಹಾಗೂ ಸಮಯದಾಯಗಳಿಗೂ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ಮೌಲ್ಯಗಳು, ಸೋದರತ್ವ ಮನೋಭಾವಕ್ಕೆ ಬದ್ಧರಾಗಿರುವಂತೆ ಮನವಿ ಮಾಡುತ್ತೇವೆ. ಅಲ್ಲದೇ ಶಾಂತಿಯನ್ನು ಕಾಪಾಡುವ ಮೂಲಕ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಪಾಲಿಸಬೇಕಿದೆ ಎಂದು ಸುರ್ಜೇವಾಲಾ ಕರೆ ನೀಡಿದರು.

    ನ್ಯಾಯಾಲಯ ಜನರ ನಂಬಿಕೆಯನ್ನು ಗೌರವಿಸಿದೆ. ಈ ತೀರ್ಪು ಜನರ ನಂಬಿಕೆಗಳ ಮೇಲೆ ರಾಜಕೀಯ ಮಾಡಲು ಮುಂದಾದ ಬಿಜೆಪಿಯ ಬಾಗಿಲನ್ನು ಬಂದ್ ಮಾಡಿದೆ. ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣದ ಪರವಿದೆ. ಎಲ್ಲರೂ ನ್ಯಾಯಾಲದ ತೀರ್ಪನ್ನು ಗೌರವಿಸಬೇಕಿದೆ ಎಂದರು.

  • ಸುಪ್ರೀಂ ತೀರ್ಪಿನ ಲಾಭವನ್ನು ಕೇಂದ್ರ ಪಡೆದುಕೊಳ್ಳಬಾರದು: ಉದ್ಧವ್ ಠಾಕ್ರೆ

    ಸುಪ್ರೀಂ ತೀರ್ಪಿನ ಲಾಭವನ್ನು ಕೇಂದ್ರ ಪಡೆದುಕೊಳ್ಳಬಾರದು: ಉದ್ಧವ್ ಠಾಕ್ರೆ

    ಮುಂಬೈ: ರಾಮಮಂದಿರ ಸುಪ್ರೀಂ ಕೋರ್ಟ್ ಬಹುನಿರೀಕ್ಷಿತ ತೀರ್ಪು ನೀಡಿದ್ದು, ಇದರ ಲಾಭವನ್ನು ಕೇಂದ್ರ ಸರ್ಕಾರ ಪಡೆಯಲು ಸಾಧ್ಯವಿಲ್ಲ ಎಂದು ಶಿವ ಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಇದೀಗ ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಉದ್ಧವ್ ಠಾಕ್ರೆ ಅವರ ಈ ಹೇಳಿಕೆ ಮಹತ್ವ ಪಡೆದಿದ್ದು, ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇದರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

    ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ರಾಮಜನ್ಮ ಭೂಮಿಯಲ್ಲೇ ದೇವಸ್ಥಾನ ನಿರ್ಮಿಸಬೇಕು ಎಂದು ಆದೇಶ ಪ್ರಕಟಿಸಿದೆ.

    ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ಕಾನೂನು ರೂಪಿಸುವಂತೆ ನಾವು ಸರ್ಕಾರವನ್ನು ಮನವಿ ಮಾಡಿದ್ದೆವು. ಆದರೆ ಸರ್ಕಾರ ಅದನ್ನು ಮಾಡಿರಲಿಲ್ಲ. ಹೀಗಾಗಿ ಈಗ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದ್ದಕ್ಕೆ ಕೇಂದ್ರ ಸರ್ಕಾರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಗ್ಗೆ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಮುಖ್ಯಮಂತ್ರಿ ಹುದ್ದೆಯನ್ನು ಸಮಾನವಾಗಿ ಹಂಚಿಕೊಳ್ಳುವಲ್ಲಿನ ಅಡಚಣೆಯು ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ 13ನೇ ರಾಜ್ಯ ವಿಧಾನಸಭೆಯ ಅವಧಿ ಮುಗಿಯುವುದಕ್ಕೆ ಒಂದು ದಿನ ಮುಂಚಿತವಾಗಿ ಸಿಎಂ ದೇವೇಂಧ್ರ ಫಡ್ನವಿಸ್ ಅವರ ರಾಜೀನಾಮೆ ನೀಡಿದ್ದಾರೆ.

  • ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

    ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

    – ಸಚಿವರಿಗೆ ಸ್ವಕ್ಷೇತ್ರದ ಶಾಂತಿ ಹೊಣೆ ಹೊರಿಸಿದ ಮೋದಿ
    – ಬೆಂಗಳೂರಿಗೆ ಹೆಚ್ಚುವರಿ ಸಿಆರ್‌ಪಿಎಫ್ ಕೋರಿಕೆ
    – ವಿವಾದಾತ್ಮಕ ಹೇಳಿಕೆ ನೀಡದಂತೆ ಜನಪ್ರತಿನಿಧಿಗಳಿಗೆ ಸೂಚನೆ

    ನವದೆಹಲಿ: ಅಯೋಧ್ಯೆ ಪ್ರಕರಣದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲು ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

    ಅಯೋಧ್ಯೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಈಗಾಗಲೇ 144 ಸೆಕ್ಷನ್ ಜಾರಿ ಮಾಡಲಾಗಿದೆ. 4000 ಹೆಚ್ಚುವರಿ ಅರೆಸೇನಾಪಡೆ ರವಾನಿಸಲಾಗಿದೆ. ಅಲ್ಲದೆ ಸಿಆರ್‌ಪಿಎಫ್, ಕಮಾಂಡೋ ಪಡೆಗಳನ್ನು ಸಹ ನಿಯೋಜಿಸಲಾಗಿದೆ. ಅಂಬೇಡ್ಕರ್ ನಗರದ(ಅಕ್ಬರ್‌ಪುರ್, ಟಾನ್ ಡಾ. ಜಲಾಲ್‌ಪುರ್, ಜೈಟ್ ಪುರ್, ಭಿಟಿ ಮತ್ತು ಅಲ್ಲಾಪುರ್) ವಿವಿಧ ಕಾಲೇಜುಗಳಲ್ಲಿ 8 ತಾತ್ಕಾಲಿಕ ಜೈಲುಗಳನ್ನು ಸ್ಥಾಪನೆ ಮಾಡಲಾಗಿದೆ. ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ.

    ಕಾನೂನು-ಸುವ್ಯವಸ್ಥೆ ಕಾಪಾಡಿ, ಸೂಕ್ಷ್ಮ  ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಿ ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ. ಮುಂಬೈನಲ್ಲೂ ಹದ್ದಿನ ಕಣ್ಣಿಡಲಾಗಿದ್ದು, ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರು ಪತ್ರಕರ್ತರ ಜೊತೆ ಕಮೀಷನರ್ ಸಂಜಯ್ ಬಾರ್ವೆ ಸಮಾಲೋಚನೆ ನಡೆಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಯಾವುದೇ ಹಿಂಸಾಚಾರ, ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಸೇರಿದಂತೆ ರಾಜ್ಯಾದ್ಯಂತ ಉತ್ತರಪ್ರದೇಶ ಸರ್ಕಾರ ಭಾರೀ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುತ್ತಿದೆ.

    ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಇದೇ 17ಕ್ಕೆ ನಿವೃತ್ತಿಯಾಗಲಿದ್ದಾರೆ. ತೀರ್ಪು ಪ್ರಕಟಣೆಗೆ ಕ್ಷಣಗಣನೆ ಆರಂಭವಾದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

    ತನ್ನೆಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿರುವ ಆರ್‌ಎಸ್‌ಎಸ್, ಅಯೋಧ್ಯೆ ತೀರ್ಪಿನತ್ತ ಗಮನ ಕೇಂದ್ರೀಕರಿಸಿದೆ. ತನ್ನೆಲ್ಲಾ ಕಾರ್ಯಕರ್ತರಿಗೆ ಎಚ್ಚರಿಕೆ ಹಾಗೂ ಶಾಂತಚಿತ್ತದಿಂದ ಇರುವಂತೆ ಸೂಚಿಸಿದೆ.

    ಇತ್ತ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಆರ್‌ಜೆಡಿ ಹಾಗೂ ಎಡ ಪಕ್ಷಗಳಲ್ಲಿರುವ ಮುಸ್ಲಿಂ ಸಂಸದರ ಜೊತೆ ಸಭೆ ನಡೆಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಾಗೂ ಯಾವುದೇ ಪ್ರಚೋದನೆ ನೀಡದಂತೆ ಸಂಸದರಲ್ಲಿ ಮನವಿ ಮಾಡಿದೆ. ನಿನ್ನೆ ಅಹ್ಮದ್ ಪಟೇಲ್ ಜೊತೆ ಗಡ್ಕರಿ ಅವರ ಭೇಟಿಯೂ ಇದರ ಭಾಗ ಎಂದು ಆರ್‌ಎಸ್‌ಎಸ್ ಹೇಳಿದೆ.

    ಈ ಮಧ್ಯೆ, ಪ್ರಧಾನಿ ಮೋದಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಶಾಂತವಾಗಿ ವರ್ತಿಸುವಂತೆ ಸಲಹೆ ನೀಡಿದ್ದಾರೆ. ದೇಶದಲ್ಲಿ ಸೌಹಾರ್ದತೆ- ಸಾಮರಸ್ಯದ ಕಾಪಾಡುವ ಅಗತ್ಯವಿದೆ. ಅಯೋಧ್ಯೆ ವಿವಾದ ಸಂಬಂಧ ಅನಗತ್ಯ ಹೇಳಿಕೆಗಳನ್ನು ನೀಡಿದಿರಿ, ಕೋರ್ಟ್ ತೀರ್ಪನ್ನು ಸೋಲು, ಗೆಲುವು ಎಂದು ನೋಡಬೇಡಿ. ಶಾಂತಿ ಕಾಪಾಡುವ ಸಲುವಾಗಿ ನಿಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲೂ ಹೈ ಅಲರ್ಟ್: ಬೆಂಗಳೂರಿನಲ್ಲೂ ಸೇನೆ ನಿಯೋಜನೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಣೆಯಾಗಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಯೋಧ್ಯೆ ತೀರ್ಪು ಪರ-ವಿರೋಧ ಏನೇ ಬಂದರೂ ಸ್ವೀಕರಿಸಬೇಕು, ಇದರಿಂದ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ ಎಂದರು.

  • ಅಯೋಧ್ಯೆಯ ವಿವಾದಿತ ಜಾಗ ಕೈಬಿಡಲು ಮುಂದಾದ ಸುನ್ನಿ ವಕ್ಫ್ ಮಂಡಳಿ

    ಅಯೋಧ್ಯೆಯ ವಿವಾದಿತ ಜಾಗ ಕೈಬಿಡಲು ಮುಂದಾದ ಸುನ್ನಿ ವಕ್ಫ್ ಮಂಡಳಿ

    – ಮಧ್ಯಸ್ಥಿಕೆ ಸಮಿತಿಗೆ ನಿರ್ಧಾರ ತಿಳಿಸಿದ ವಕ್ಫ್ ಮಂಡಳಿ
    – ಇಂದಿಗೆ ಸುಪ್ರೀಂನಲ್ಲಿ ವಾದ ಮುಕ್ತಾಯ

    ನವದೆಹಲಿ: ಅಯೋಧ್ಯೆಯ ವಿವಾದಿತ ಜಾಗದ ಕುರಿತಾದ ತನ್ನ ಹಕ್ಕನ್ನು ಕೈಬಿಡಲು ಸುನ್ನಿ ವಕ್ಫ್ ಮಂಡಳಿ ಪ್ರಸ್ತಾಪಿಸಿದೆ. ಸರ್ಕಾರವು ರಾಮ ಮಂದಿರಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು  ಸುನ್ನಿ ವಕ್ಫ್ ಮಂಡಳಿ ಹೇಳಿದೆ ಸುಪ್ರೀಂ ಕೋರ್ಟಿನ ಮಧ್ಯಸ್ಥಿಕೆ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ವಕ್ಫ್ ಮಂಡಳಿಯು ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಲು ಒಪ್ಪಿದ್ದಲ್ಲದೆ, ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಮಸೀದಿಗಳನ್ನು ಸರ್ಕಾರವು ನವೀಕರಿಸಬೇಕೆಂದು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ವಕ್ಫ್ ಮಂಡಳಿಯು ಬೇರೊಂದು ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಮುಂದಾಗಿದೆ. 134 ವರ್ಷಗಳ ಹಳೆಯ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಪ್ರಗತಿಗೆ ಕಾರಣವಾಗುವ ವರದಿಯನ್ನು ಮೂಲಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಅಯೋಧ್ಯೆ ಕೇಸ್ – ಸುಪ್ರೀಂನಲ್ಲಿ ಹೈಡ್ರಾಮಾ, ದಾಖಲೆ ಹರಿದ ಮುಸ್ಲಿಂ ಪರ ವಕೀಲ

    ವಕ್ಫ್ ಮಂಡಳಿಯು ಭಾರತೀಯ ಪುರಾತತ್ವ ಇಲಾಖೆ(ಎಎಸ್‍ಐ) ಮಸೀದಿಗಳ ಪಟ್ಟಿಯನ್ನು ಸಲ್ಲಿಸಬಹುದು. ಜೊತೆಗೆ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯು ಪ್ರಾರ್ಥನೆಗಾಗಿ ಸ್ಥಳದ ಹೆಸರನ್ನು ಪ್ರಸ್ತಾಪಿಸಬಹುದು ಎಂದು ಮಧ್ಯಸ್ಥಿಕೆ ಸಮಿತಿ ವರದಿ ಹೇಳುತ್ತದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ.

    ಇಂದಿಗೆ ಮುಕ್ತಾಯ: ಸರಿಸುಮಾರು ಒಂದು ಶತಮಾನದಿಂದ ಹಿಂದೂ ಮುಸ್ಲಿಮರ ನಡುವೆ ಕಗ್ಗಂಟಾಗಿ ಪರಿಣಮಿಸಿದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ ದೇಶದ ಹೈಪ್ರೊಫೈಲ್ ಕೇಸ್ ಅಯೋಧ್ಯೆಯ ಬಾಬ್ರಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಆಗಸ್ಟ್ ಆರಂಭದಿಂದ ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ 40 ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ್ದು ಇಂದು ಮುಕ್ತಾಯವಾಗಿದೆ. ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿ ಆಗುತ್ತಿದ್ದು, ಅಷ್ಟರೊಳಗೆ ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಹೀಗಾಗಿ ಕುತೂಹಲ ಗರಿಗೆದರಿದೆ.

    ಲೆಕ್ಕಾಚಾರಗಳು ಜೋರಾಗಿವೆ. ಅಯೋಧ್ಯೆ ವಿವಾದ ಮೇಲ್ನೋಟಕ್ಕೆ ಹಿಂದೂ ಮುಸ್ಲಿಮರ ನಡುವಣ ವಿವಾದವಾಗಿ ಕಾಣಿಸುತ್ತೆ. ಆದ್ರೆ, ಇದು ಕೋಟಿ ಕೋಟಿ ಹಿಂದೂಗಳು- ಮುಸ್ಲಿಮರ ಪಾಲಿಗೆ ಭಾವನಾತ್ಮಕ ವಿಚಾರ. ಇದೇ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಹೋರಾಟ ಸಂಘಟಿಸಿದ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಘಟಾನುಘಟಿ ನಾಯಕರನ್ನು ಕೋರ್ಟ್ ಕಟಕಟೆಗೆ ಎಳೆದುತಂದು ನಿಲ್ಲಿಸಿದೆ. ಎರಡು ಧರ್ಮಗಳ ನಡುವೆ ಅಂತರ ಹೆಚ್ಚಿಸಿದೆ. ಅಪಾರ ಸಾವು ನೋವಿಗೂ ಪರೋಕ್ಷವಾಗಿ ಕಾರಣವಾಗಿದೆ.

    ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ನಾಶ ಮಾಡಿ 16ನೇ ಶತಮಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ ಎಂಬುದು ಇಲ್ಲಿ ವಿವಾದ. ಇದೇ ಸ್ಥಳದಲ್ಲಿ ಮತ್ತೆ ರಾಮಮಂದಿರ ನಿರ್ಮಿಸಬೇಕೆಂದು ಆರಂಭದಿಂದಲೂ ರಾಮನನ್ನು ಪೂಜಿಸುವ ಸನ್ಯಾಸಿಗಳ ಸಂಘಟನೆ ನಿರ್ಮೋಹಿ ಅಖಾಡ ಒತ್ತಾಯ ಮಾಡುತ್ತಿದೆ. ಇನ್ನು ವಿವಾದಾಸ್ಪದ ಸ್ಥಳವನ್ನು ತಮ್ಮ ವಶಕ್ಕೆ ನೀಡಬೇಕು. ಅಲ್ಲಿ ಮಂದಿರ ನಿರ್ಮಿಸುತ್ತೇವೆ ಎಂದು ವಿಹೆಚ್‍ಪಿ ಸದಸ್ಯರನ್ನು ಒಳಗೊಂಡ ರಾಮ್ ಲಲ್ಲಾ ಎಂಬ ಸಂಘಟನೆ, ಆರ್‍ಎಸ್‍ಎಸ್ ಸದಸ್ಯರೇ ಹೆಚ್ಚಿರುವ ರಾಮ್ ಜನ್ಮಸ್ಥಾನ್ ಎಂಬ ಸಂಘಟನೆ ಆಗ್ರಹಿಸಿದ್ದವು. ನಂತರದ ದಿನಗಳಲ್ಲಿ ವಿಹೆಚ್‍ಪಿಯ ರಾಮಜನ್ಮಭೂಮಿ ನ್ಯಾಸ್ ಜೊತೆ ಜೊತೆಗೆ ಹಿಂದೂ ಮಹಾಸಭಾ ಕೂಡ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿದವು. ಇಲ್ಲಿ ರಾಮ್ ಲಲ್ಲಾ ಸಂಘಟನೆ ಒಂದು ಕಡೆ ನಿಂತರೆ ಉಳಿದ ಹಿಂದೂ ಪರ ಸಂಘಟನೆಗಳು ಇನ್ನೊಂದು ಕಡೆ ನಿಲ್ಲುತ್ತವೆ.

    ಬಾಬ್ರಿ ಮಸೀದಿ ಸ್ಥಳವನ್ನು ತಮ್ಮದು ಎಂದು ಅಖಿಲ ಭಾರತ ಶಿಯಾ ಕಾನ್ಫರೆನ್ಸ್, ಸುನ್ನಿ ವಕ್ಫ್ ಬೋರ್ಡ್‍ಗಳು ಎಂದು ವಾದ ಮಂಡಿಸುತ್ತಿವೆ. ಆದ್ರೆ ಮೊದಲಿನಿಂದಲೂ ಬಾಬ್ರಿ ಮಸೀದಿ ಸ್ಥಳಕ್ಕಾಗಿ ಹೋರಾಟ ಮಾಡ್ತಿರೋದು ಸುನ್ನಿ ವಕ್ಫ್ ಬೋರ್ಡ್. 1961ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ವಿವಾದಿತ 2.77 ಎಕರೆ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಇದಕ್ಕೆ ಆಕ್ಷೇಪಗಳು ಕೇಳಿಬಂದು ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮೊದಲು ಸಂಧಾನದ ಮೂಲಕ ವಿವಾದ ಬಗೆಹರಿಸಲು ಸುಪ್ರೀಂಕೋರ್ಟ್ ಪ್ರಯತ್ನಿಸಿತ್ತು. ಆದ್ರೆ ಇದು ವಿಫಲವಾದ ಹಿನ್ನೆಲೆಯಲ್ಲಿ ಪ್ರತಿದಿನ ವಿಚಾರಣೆ ನಡೆಸಿ ವಿವಾದ ಬಗೆಹರಿಸಲು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾವಿಧಾನಿಕ ಪೀಠವನ್ನು ಸುಪ್ರೀಂಕೋರ್ಟ್ ರಚಿಸಿತ್ತು.

    ಈ ನಡುವೆ, ಇಡೀ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳ್ತಿದ್ದಾರೆ. ಒಂದೇ ಒಂದು ಇಂಚು ಭೂಮಿಯನ್ನು ಮುಸ್ಲಿಮರಿಗೆ ನೀಡಬಾರದು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಒತ್ತಾಯ ಮಾಡ್ತಿದ್ದಾರೆ. ಈ ನಡುವೆ, ಲೋಕಸಭೆ ಚುನಾವಣೆಗೂ ಮುನ್ನ, ಸುಗ್ರೀವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಿಸಬೇಕು ಎಂಬ ಕೂಗು ಕೂಡ ಕೇಳಿಬಂದಿತ್ತು.