Tag: ರಾಮ ಮಂದಿರ

  • ಅಯೋಧ್ಯೆ ತೀರ್ಪು ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ – ಅಮಿತ್ ಶಾ

    ಅಯೋಧ್ಯೆ ತೀರ್ಪು ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ – ಅಮಿತ್ ಶಾ

    ರಾಂಚಿ: ಅಯೋಧ್ಯೆ ತೀರ್ಪು ವಿಳಂಬವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

    ಜಾರ್ಖಂಡ್‍ನ ಲತೇಹಾರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಅಯೋಧ್ಯೆ ವಿಚಾರಣೆಯನ್ನು ವಿಳಂಬಗೊಳಿಸಲು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದೆ. ಆಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕೇ ಬೇಡವೇ? ನೀವೇ ಹೇಳಿ. ಆದರೆ ಈ ಪ್ರಕರಣವನ್ನು ಮುಂದುವರಿಸಲು ಕಾಂಗ್ರೆಸ್ ಬಿಟ್ಟಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಭವ್ಯ ದೇವಾಲಯ ನಿರ್ಮಿಸಲು ಅವಕಾಶ ಕಲ್ಪಿಸುವ ಮೂಲಕ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ ಎಂದರು.

    ಬುಡಕಟ್ಟು ಜನಾಂಗದವರ ಸ್ಥಾನಮಾನವನ್ನು ಹೆಚ್ಚಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ನಾನು ಕೇಳಲು ಬಯಸುತ್ತೇನೆ, ಕಳೆದ 70 ವರ್ಷಗಳಲ್ಲಿ ಬುಕಟ್ಟು ಜನಾಂಗದವರಿಗೆ ನೀವು ಏನು ಮಾಡಿದ್ದೀರಿ? ಈ ನಿಟ್ಟಿನಲ್ಲಿ ನೀವು ಚಿಂತಿಸಿದ್ದೀರಾ? ನಾವು ಪ್ರತಿ ಆದಿವಾಸಿ ಬ್ಲಾಕ್‍ನಲ್ಲಿ ಏಕಲವ್ಯ ಶಾಲೆಗಳನ್ನು ತೆರೆದಿದ್ದೇವೆ. ಅಲ್ಲದೆ ಮೋದಿಜಿ ಜಿಲ್ಲಾ ಮಿನರಲ್ ಫಂಡ್ ಸಹ ಸ್ಥಾಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಪುನರ್ ಆಯ್ಕೆ ಮಾಡುವಂತೆ ಅಮಿತ್ ಶಾ ಇದೇ ವೇಳೆ ಮನವಿ ಮಾಡಿದರು. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ರಘುಬರ್ ದಾಸ್ ಜಾರ್ಖಂಡ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಕಾಂಗ್ರೆಸ್ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಬಡವರ ಅನುಕೂಲಕ್ಕಾಗಿ ಏನೂ ಮಾಡಿಲ್ಲ ಎಂದು ದೂರಿದರು

    ಜಾರ್ಖಂಡ್‍ನಲ್ಲಿ ನವೆಂಬರ್ 30ರಿಂದ ಡಿಸೆಂಬರ್ 20ರ ವರೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 23ರಂದು ನಡೆಯಲಿದೆ.

    ಅಯೋಧ್ಯೆ ವಿವಾದ ಪ್ರಕರಣದ ತೀರ್ಪನ್ನು ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. ವಿವಾದಿತ ಸ್ಥಳದಲ್ಲಿ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ವಹಿಸಿದೆ. ಅಲ್ಲದೆ ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

  • ರಾಮನ ಹೆಸರನ್ನು ಠೇವಣಿ ಇಟ್ಟರೆ ಬ್ಯಾಂಕಿನಿಂದ ಬೋನಸ್

    ರಾಮನ ಹೆಸರನ್ನು ಠೇವಣಿ ಇಟ್ಟರೆ ಬ್ಯಾಂಕಿನಿಂದ ಬೋನಸ್

    – ಪುಸ್ತಕದಲ್ಲಿ ರಾಮನ ಹೆಸರು ಬರೆದರೆ ಬೋನಸ್
    – ರಾಮ್ ನಾಮ್ ಬ್ಯಾಂಕ್‍ನಿಂದ ಘೋಷಣೆ

    ಲಕ್ನೋ: ಪುಸ್ತಕದಲ್ಲಿ ಭಗವಾನ್ ರಾಮನ ಹೆಸರನ್ನು ಬರೆದು ಠೇವಣಿ ಇಟ್ಟರೆ ಬೋನಸ್ ನೀಡುವುದಾಗಿ ರಾಮ್ ನಾಮ್ ಬ್ಯಾಂಕ್ ಘೋಷಿಸಿದೆ.

    ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ರಾಮ ಮಂದಿರ ನಿರ್ಮಾಣದ ಭಾಗವಾಗಿ ಈ ಅಭಿಯಾನ ನಡೆಸಲಾಗುತ್ತಿದೆ.

    ಅಲಹಬಾದ್ ಮೂಲದ ರಾಮ್ ನಾಮ್ ಬ್ಯಾಂಕ್ ಎನ್‍ಜಿಓ ಆಗಿದ್ದು, ಎಟಿಎಂ ಅಥವಾ ಚೆಕ್ ಬುಕ್ ಹೊಂದಿಲ್ಲ. ಅಲ್ಲದೆ ಅದರ ಏಕೈಕ ಕರೆನ್ಸಿ ರಾಮನ ಹೆಸರಿನಲ್ಲಿದೆ. ಬ್ಯಾಂಕಿನಲ್ಲಿ ಖಾತೆ ಹೊಂದಿದವರ ಪೈಕಿ ಸುಮಾರು ಒಂದು ಲಕ್ಷ ಜನರಿಗೆ ಈಗಾಗಲೇ ಬೋನಸ್ ಘೋಷಿಸಿದೆ.

    ಅಲ್ಲದೆ ನವೆಂಬರ್ 9-10ರ ಮಧ್ಯರಾತ್ರಿ ವೇಳೆಗೆ ಕನಿಷ್ಠ 1.25 ಲಕ್ಷ ಬಾರಿ ರಾಮನ ಹೆಸರನ್ನು ಬರೆದು ಬ್ಯಾಂಕ್‍ನಲ್ಲಿ ಠೇವಣಿ ಇಟ್ಟ ಭಕ್ತರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದೆ.

    ಈ ಕುರಿತು ರಾಮ್ ನಾಮ್ ಸೇವಾ ಸಂಸ್ಥಾನದ ಅಧ್ಯಕ್ಷ ಅಶುತೋಷ್ ವರ್ಷನಿ ಮಾಹಿತಿ ನೀಡಿ, ಭಕ್ತರು ರಾಮನ ಹೆಸರನ್ನು ಕೈ ಬರಹ, ಟೈಪ್ ಮಾಡಿ ಅಥವಾ ಮೊಬೈಲ್ ಆ್ಯಪ್ ಮೂಲಕ ಬರೆದಿದ್ದನ್ನು ಡಬಲ್ ಮಾಡಲಾಗುತ್ತದೆ. ಹಾಗಾಗಿ ಬ್ಯಾಂಕ್ ಬುಕ್‍ಲೆಟ್ ನೀಡಲಿದೆ. ಅಂದರೆ ಒಬ್ಬ ಭಕ್ತ ಒಂದು ಬಾರಿ ರಾಮ್ ನಾಮ್ ಎಂದು ಬರೆದಿದ್ದರೆ ಅದನ್ನು ಎರಡು ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರಶಸ್ತಿ ಪಡೆಯಬೇಕಾದಲ್ಲಿ ನವೆಂಬರ್ 9-10ರೊಳಗೆ ಕನಿಷ್ಠ 1.25 ಲಕ್ಷ ಬಾರಿ ಬರೆದಿರಬೇಕು ಎಂದರು.

    ಬ್ಯಾಂಕ್ ನೀಡಿದ ಬುಕ್‍ಲೆಟ್‍ನಲ್ಲಿ 30 ಪುಟಗಳಿರುತ್ತವೆ. ಪ್ರತಿ ಪುಟದಲ್ಲಿ 108 ಚೌಕಗಳಿರುತ್ತವೆ. ಅಲ್ಲಿ ರಾಮನ ಹೆಸರನ್ನು ಬರೆಯಬೇಕು. ಬೋನಸ್‍ನ್ನು ನವೆಂಬರ್ 10ರಂದು ಘೋಷಿಸಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ 2020ರ ಮಾಘ ಮೇಳ ಸಂದರ್ಭದಲ್ಲಿ ಬಹುಮಾನ ನೀಡಲಾಗುವುದು. ಅಲಹಬಾದ್‍ನ ಸಂಗಮ್ ಪ್ರದೇಶದಲ್ಲಿ ಆಯೋಜಿಸಿರುವ ವಿಶೇಷ ಸಮಾರಂಭದಲ್ಲಿ ರಾಮ್ ನಾಮ್ ಬ್ಯಾಂಕ್ ಶಾಲು ಹೊದಿಸಿ ಸನ್ಮಾನಿಸಿ ಶ್ರೀಫಾಲ್ ಪ್ರಮಾಣ ಪತ್ರ ನೀಡಲಾಗುವುದು ಎಂದರು.

    ಒಂದು ಕೋಟಿ ಗಡಿ ದಾಟಿದವರಿಗೆ ಅಕ್ಷಯವತ್ ಮಾರ್ಗದ ಸೆಕ್ಟರ್-1ರಲ್ಲಿರುವ ಬ್ಯಾಂಕಿನ ಶಿಬಿರದಲ್ಲಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಈವರೆಗೆ 12ಕ್ಕೂ ಹೆಚ್ಚು ಭಕ್ತರು ಒಂದು ಕೋಟಿಯ ಗಡಿ ದಾಟಿದ್ದಾರೆ ಎಂದು ಅಶುತೋಷ್ ವರ್ಷನಿ ತಿಳಿಸಿದರು.

    ಅಯೋಧ್ಯೆಯ ವಿವಾದವು ಶಾಂತಿಯುತವಾಗಿ ಬಗೆಹರಿಯಲೆಂದು 2019ರ ಕುಂಭಮೇಳದ ಸಂದರ್ಭದಲ್ಲಿ 1,200 ಭಕ್ತರು ರಾಮನಾಮ ಬರೆಯುವುದಾಗಿ ಶಪಥ ಮಾಡಿದ್ದರು. ಹೀಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ರಾಮ್ ನಾಮ್ ಬ್ಯಾಂಕ್‍ನ ಅಂಗ ಸಂಸ್ಥೆ ರಾಮ್ ಸೇವಾ ಟ್ರಸ್ಟ್ ನ ಟ್ರಸ್ಟಿ ಗುಂಜಾನ್ ವರ್ಷಿಣಿ ಮಾಹಿತಿ ನೀಡಿದರು.

  • ರಾಮಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳು ರಾಷ್ಟ್ರ ಮಂದಿರಗಳು: ಪೇಜಾವರ ಶ್ರೀಗಳು

    ರಾಮಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳು ರಾಷ್ಟ್ರ ಮಂದಿರಗಳು: ಪೇಜಾವರ ಶ್ರೀಗಳು

    ರಾಯಚೂರು: ಮಂದಿರಗಳು ಒಂದೇ ಧರ್ಮ ಹಾಗೂ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಹೀಗಾಗಿ ರಾಮ ಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳು ಕೂಡ ರಾಷ್ಟ್ರ ಮಂದಿರಗಳು ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಮಂದಿರಗಳಿಗೆ ಎಲ್ಲಾ ಧರ್ಮಿಯರು ಪ್ರವೇಶಿಸಬೇಕು. ಮಂದಿರಗಳು ಒಂದೇ ಧರ್ಮ ಹಾಗೂ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಷ್ಟ್ರದಲ್ಲಿ ಸಾಮರಸ್ಯಕ್ಕೆ ನಾಂದಿಯಾಗಿದೆ. ಮಸೀದಿ ಕಟ್ಟಲು ನೀಡಿರುವ ಜಾಗದ ಬಗ್ಗೆ ಒಂದಿಬ್ಬರು ವಿರೋಧಿಸಿರಬಹುದು. ಆದರೆ ಬಹುತೇಕ ಮಂದಿ ಅಯೋಧ್ಯೆ ತೀರ್ಪನ್ನು ಒಪ್ಪಿದ್ದಾರೆ. ಹೀಗಾಗಿ ಕೇವಲ ರಾಮ ಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳೂ ರಾಷ್ಟ್ರ ಮಂದಿರಗಳೆಂದು ಹೇಳಿದರು.

    ಕೇಂದ್ರ ಸರ್ಕಾರ ಮೂರು ತಿಂಗಳಳೊಗಾಗಿ ಟ್ರಸ್ಟ್ ಸ್ಥಾಪಿಸಲು ಸೂಚಿಸಿದೆ. ರಾಮಮಂದಿರ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು. ಸುಪ್ರೀಂ ಕೋರ್ಟ್ ತೀರ್ಪು ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ನಾಂದಿ ಎಂದು ಹೇಳಿದರು.

    ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರವಾಗಿ ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಮೇಲ್ಮನವಿ ಅರ್ಜಿ ವರ್ಗಾವಣೆ ಬಗ್ಗೆ ಶ್ರೀಗಳು ಪ್ರತಿಕ್ರಿಯಿಸಿ, ಇದು ಬಹಳ ಸೂಕ್ಷ್ಮವಾದ ವಿಚಾರ, ಒಂದು ಕಡೆ ಸಂಪ್ರದಾಯ ಹಾಗೂ ಮಹಿಳೆಯರ ಹಕ್ಕಿನ ವಿಚಾರ ಇದಾಗಿದೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ, ಏನೇ ಹೇಳಿದರೂ ಅಸಮಾಧಾನಕ್ಕೆ ಕಾರಣವಾಗುತ್ತದೆ. ತೀರ್ಪಿನ ಬಗ್ಗೆ ಕಾದು ನೋಡೋಣ ಎಂದರು.

  • ಮಂದಿರದ ಬಳಿ ಇರೋ 67 ಎಕರೆ ಭೂಮಿಯಲ್ಲೇ ಮಸೀದಿಗೆ ಜಾಗ ನೀಡಿ – ಇಕ್ಬಾಲ್ ಅನ್ಸಾರಿ

    ಮಂದಿರದ ಬಳಿ ಇರೋ 67 ಎಕರೆ ಭೂಮಿಯಲ್ಲೇ ಮಸೀದಿಗೆ ಜಾಗ ನೀಡಿ – ಇಕ್ಬಾಲ್ ಅನ್ಸಾರಿ

    ನವದೆಹಲಿ: ರಾಮ ಮಂದಿರದ ಬಳಿ ಇರುವ 67 ಎಕರೆ ಭೂಮಿಯಲ್ಲೇ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಬೇಕು ಎಂದು ಪ್ರಕರಣದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ ಮನವಿ ಮಾಡಿದ್ದಾರೆ.

    ಹಲವಾರು ಸ್ಥಳೀಯ ಮುಸ್ಲಿಂ ಮುಖಂಡರೊಂದಿಗೆ ಈ ಕುರಿತು ಮನವಿ ಮಾಡಿರುವ ಅವರು, ಮಸೀದಿ ಕಟ್ಟಲು ಸರ್ಕಾರ ನಮಗೆ 5 ಎಕರೆ ಜಾಗವನ್ನು ನೀಡುವುದೇ ಆದರೆ ನಮಗೆ ಅನುಕೂಲವಾಗುವಂತೆ ನೀಡಬೇಕು. ಅದೂ ಸಹ ಸ್ವಾಧೀನಪಡಿಸಿಕೊಂಡ 67 ಎಕರೆ ಭೂಮಿಯಲ್ಲೇ ನೀಡಬೇಕು. ಹಾಗಿದ್ದರೆ ಮಾತ್ರ ಭೂಮಿಯನ್ನು ಪಡೆಯುತ್ತೇವೆ. ಇಲ್ಲವಾದಲ್ಲಿ, ನಾವು ಭೂಮಿಯನ್ನು ತಿರಸ್ಕರಿಸುತ್ತೇವೆ. ಚೌದಾ ಕೋಸ್‍ನಿಂದ ಹೊರಗೆ ಮಸೀದಿ ನಿರ್ಮಿಸಲು ಹೇಳುತ್ತಿದ್ದಾರೆ. ನಾವು ಈ ಪ್ರಸ್ತಾವವನ್ನು ತಿರಸ್ಕರಿಸುತ್ತೇವೆ. ಇದು ನ್ಯಾಯೋಚಿತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮೌಲಾನಾ ಜಲಾಲ್ ಅಶ್ರಫ್ ಈ ಕುರಿತು ಪ್ರತಿಕ್ರಿಯಿಸಿ, ಮುಸ್ಲಿಮರು ತಮ್ಮ ಸ್ವಂತ ಹಣದಲ್ಲೇ ಮಸೀದಿ ನಿರ್ಮಿಸಲು ಜಾಗ ಖರೀದಿಸಬಹುದು. ಇದಕ್ಕಾಗಿ ಸರ್ಕಾರವನ್ನು ಅವಲಂಬಿಸಬೇಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ನ್ಯಾಯಾಲಯ ಅಥವಾ ಸರ್ಕಾರ ನಮ್ಮ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ಸಮಾಧಾನಗೊಳಿಸಲು ಬಯಸಿದರೆ, 18ನೇ ಶತಮಾನದಲ್ಲಿ ಸೂಫಿ ಸಂತ ಖಾಜಿ ಕುದ್ವಾ ಸೇರಿದಂತೆ ಅನೇಕರ ಸ್ಮಶಾನಗಳು ಮತ್ತು ದರ್ಗಾಗಳು ಇದ್ದ ಪ್ರದೇಶದಲ್ಲಿ ಜಾಗ ನೀಡಬೇಕು ಎಂದರು. ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಖಿಲೀಕ್ ಅಹ್ಮದ್ ಖಾನ್ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮುಸ್ಲಿಮರ ಪರವಾಗಿ ದಾವೆ ಹೂಡಿದ್ದ ಹಾಜಿ ಮಹಬೂಬ್ ಈ ಕುರಿತು ಪ್ರತಿಕ್ರಿಯಿಸಿ, ನಾವು ಈ ಲಾಲಿಪಾಪ್‍ನ್ನು ಸ್ವೀಕರಿಸುವದಿಲ್ಲ. ಸರ್ಕಾರ ಎಲ್ಲಿ ಭೂಮಿ ನೀಡಲಿದೆ ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು ಆಗ್ರಹಿಸಿದರು.

    ಅಯೋಧ್ಯೆ ಮುನ್ಸಿಪಲ್ ಕಾರ್ಪೋರೇಶನ್‍ನ ಕಾರ್ಪೋರೇಟರ್ ಮಾತನಾಡಿ, ಬಾಬರಿ ಮಸೀದಿಗೆ ಬದಲಾಗಿ ಸಮುದಾಯವು ಯಾವುದೇ ಭೂಮಿಯನ್ನು ಬಯಸುವುದಿಲ್ಲ. ನ್ಯಾಯಾಲಯ ಅಥವಾ ಸರ್ಕಾರ ಮಸೀದಿಗೆ ಭೂಮಿಯನ್ನು ನೀಡಲು ಬಯಸಿದರೆ ಅದನ್ನು 67 ಎಕರೆ ಭೂಮಿಯಲ್ಲೇ ನೀಡಬೇಕು. ಇಲ್ಲವಾದಲ್ಲಿ ನಮಗೆ ಯಾವುದೇ ಭೂಮಿ ಬೇಡ ಎಂದಿದ್ದರು.

    ವಿವಾದಿತ ಭೂಮಿ ಸೇರಿದಂತೆ ಸುತ್ತಲಿನ 67 ಎಕರೆ ಭುಮಿಯನ್ನು ಕೇಂದ್ರ ಸರ್ಕಾರ 1991ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2.77 ಎಕ್ರೆ ಜಾಗವನ್ನು ರಾಮಲಲ್ಲಾಗೆ ಸೇರಬೇಕು. ಮಸೀದಿಯನ್ನು ಧ್ವಂಸಗೊಳಿಸಿ ಪ್ರಾರ್ಥನೆಯ ಹಕ್ಕನ್ನು ಕಸಿದುಕೊಂಡಿದ್ದಕ್ಕೆ ಪರ್ಯಾಯವಾಗಿ ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲಿ 5 ಎಕ್ರೆ ಜಾಗವನ್ನು ನೀಡಬೇಕೆಂದು ಸುಪ್ರೀಂ ತನ್ನ ಆದೇಶದಲ್ಲಿ ತಿಳಿಸಿತ್ತು.

  • ಅಯೋಧ್ಯೆ ತೀರ್ಪಿನ ನಂತ್ರ ಆಕ್ಷೇಪಾರ್ಹ ಪೋಸ್ಟ್- 99 ಮಂದಿಯ ಬಂಧನ

    ಅಯೋಧ್ಯೆ ತೀರ್ಪಿನ ನಂತ್ರ ಆಕ್ಷೇಪಾರ್ಹ ಪೋಸ್ಟ್- 99 ಮಂದಿಯ ಬಂಧನ

    ಲಕ್ನೋ: ಅಯೋಧ್ಯೆ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಇಷ್ಟೆಲ್ಲ ಮುನ್ನೆಚ್ಚರಿಕೆ ಹಾಗೂ ಕಟ್ಟೆಚ್ಚರ ವಹಿಸಿದರೂ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪುಂಡಾಟ ಮೆರೆದಿದ್ದು, ಅಂತಹವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ.

    ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿದ್ದಕ್ಕೆ 99 ಜನರನ್ನು ಬಂಧಿಸಲಾಗಿದೆ. ಅಲ್ಲದೆ ಮಂಗಳವಾರದ ವರೆಗೆ ಒಟ್ಟು 65 ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ಪೋಸ್ಟ್ ಗಳನ್ನು ಡಿಲೀಟ್ ಮಾಡುವುದು ಹಾಗೂ ವರದಿ ಮಾಡಿಕೊಳ್ಳುವುದು ಸೇರಿದಂತೆ ಸಾಮಾಜಿಕ ಜಾಲತಾಣಗಳ 13,016 ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಕಚೇರಿ ಮಾಹಿತಿ ನೀಡಿದೆ.

    ದೇವಾಲಯ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿಯನ್ನು ಹಿಂದೂ ಸಂಘಟನೆಗಳಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಶನಿವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

    2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತವೆ. ಇದಕ್ಕೂ ಮೊದಲೇ ಸುಪ್ರೀಂ ಕೋರ್ಟ್ ಈ ವಿವಾದ ಇತ್ಯರ್ಥಪಡಿಸಿರುವುದು ಸಂತಸಕ್ಕೆ ಕಾರಣವಾಗಿದೆ. ಇದೀಗ ರಾಮಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯವು ಭರದಿಂದ ಸಾಗಿದೆ.

    ದೇವಾಲಯ ಪೂರ್ಣಗೊಂಡ ನಂತರ ಹೇಗಿರಲಿದೆ ಎಂಬ ಚಿತ್ರಣದ ಮಾದರಿಯನ್ನು ಸಹ ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ. ಮೂಲಗಳ ಪ್ರಕಾರ ರಾಮನ ವಿಗ್ರಹ ಪೂರ್ಣಗೊಳ್ಳಲು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿದು ಬಂದಿದೆ.

    ಈ ತೀರ್ಪನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಸ್ವಾಗತಿಸಿದರೆ, ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸತ್ಯಕ್ಕಿಂತ ನಂಬಿಕೆ ಮೇಲಿನ ವಿಜಯ ಎಂದು ಕರೆದಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ ಸರ್ವೋಚ್ಛ ಆದರೆ ದೋಷರಹಿತವಲ್ಲ ಎಂದಿದ್ದಾರೆ.

    ಅಲ್ಲದೆ ಈ ಪಟ್ಟಿಗೆ ಮಥುರಾ, ಕಾಶಿ ಹಾಗೂ ಲಕ್ನೋದಲ್ಲಿ ದೇವಾಲಯಗಳ ಮೇಲೆ ಮಸೀದಿಗಳಿವೆ ಎಂದು ಸಂಘ ಪರಿವಾರ ಸೇರಿಸಲಿದೆ. ಈ ತೀರ್ಪನ್ನು ಇತರ ಮಸೀದಿಗಳ ಮೇಲೆ ಹಕ್ಕು ಸಾಧಿಸಲು ಬಳಸಲಿದೆ. ದೇಶವು ಹಿಂದೂ ರಾಷ್ಟ್ರದ ಹಾದಿಯಲ್ಲಿ ಸಾಗುತ್ತಿದೆ ಎಂದು ಓವೈಸಿ ಆತಂಕ ವ್ಯಕ್ತಪಡಿಸಿದ್ದಾರೆ.

    ಸಂಘ ಪರಿವಾರ ಮತ್ತು ಬಿಜೆಪಿ ಹಿಂದೂ ರಾಷ್ಟ್ರದ ಹಾದಿ ಅಯೋಧ್ಯೆಯಿಂದ ಪ್ರಾರಂಭವಾಗುತ್ತಿದೆ. ಈಗ ಅವರು ಎನ್‍ಆರ್ ಸಿ ಹಾಗೂ ಪೌರತ್ವ ತಿದ್ದುಪಡಿ ಮಸೂದೆಯನ್ನು ತರಲು ಬಯಸಿದ್ದಾರೆ. ಈ ಮೂಲಕ ಮೋದಿ 2.0 ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿದೆ ಎಂದು ಆರೋಪಿಸಿದ್ದಾರೆ.

  • ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

    ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

    – ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಎಲ್ಲಿ?
    – ವಾಲ್ಮೀಕಿ ರಾಮಾಯಣದಲ್ಲಿ ಜಾಗದ ಬಗ್ಗೆ ಉಲ್ಲೇಖ ಇಲ್ಲ
    – ಸ್ಕಂದ ಪುರಾಣದ ಶ್ಲೋಕಕ್ಕೂ ಸ್ಥಳಕ್ಕೆ ತಾಳೆ

    ನವದೆಹಲಿ: ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಎನ್ನುವುದು ಹಿಂದೂಗಳ ನಂಬಿಕೆ. ಆದರೆ ಅಯೋಧ್ಯೆಯಲ್ಲಿ ಹುಟ್ಟಿದ್ದು ಎಲ್ಲಿ ಎನ್ನುವ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಸ್ಕಂದ ಪುರಾಣದಲ್ಲಿ ಉತ್ತರ ಕಂಡುಕೊಂಡಿದೆ.

    ಹೌದು, 1045 ಪುಟಗಳ ಸುದೀರ್ಘ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪುರಾತತ್ವ ಇಲಾಖೆಯ ಸಾಕ್ಷ್ಯಗಳು, ಬ್ರಿಟಿಷ್ ಮತ್ತು ಭಾರತ ಸರ್ಕಾರದ ಗೆಜೆಟ್‍ಗಳು, ವಿದೇಶಿ ವ್ಯಕ್ತಿಗಳು ಬರೆದ ಗ್ರಂಥಗಳು, ಮೌಖಿಕ ಹೇಳಿಕೆಯ ಜೊತೆಗೆ ಸ್ಕಂದ ಪುರಾಣವನ್ನು ಉಲ್ಲೇಖಿಸಿದೆ.

    40 ದಿನಗಳ ದೀರ್ಘ ವಿಚಾರಣೆಯ ಸಮಯದಲ್ಲಿ ರಾಮ ಅಯೋಧ್ಯೆಯಲ್ಲಿ ಹುಟ್ಟಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ವಾದ ಮಂಡಿಸಿರಲಿಲ್ಲ. 2.77 ಎಕ್ರೆ ವಿವಾದಿತ ಜಾಗದಲ್ಲಿ ರಾಮ ಜನಿಸಿರಲಿಲ್ಲ. ಅಲ್ಲಿ ದೇವಾಲಯ ಕೆಡವಿ ಮಸೀದಿ ನಿರ್ಮಾಣಗೊಂಡಿಲ್ಲ ಎನ್ನುವುದಷ್ಟೇ ಅವರ ವಾದವಾಗಿತ್ತು. ಆದರೆ ರಾಮಲಲ್ಲಾ ಪರ ವಾದ ಮಂಡಿಸಿದ ವಕೀಲರು ವಿವಾದಿತ ಸ್ಥಳದಲ್ಲೇ ರಾಮ ಜನಿಸಿದ್ದ. ಹೀಗಾಗಿ ಈ ಜಾಗ ನಮಗೆ ನೀಡಬೇಕು ಎಂದು ವಾದಿಸಿದ್ದರು.  ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    ಪುರಾತತ್ವ ಇಲಾಖೆ ಹಿಂದೂ ದೇವಾಲಯ ಕೆಡವಿ ಮಸೀದಿ ನಿರ್ಮಾಣವಾಗಿದೆ. ಹಿಂದೂ ದೇವಾಲಯಗಳಲ್ಲಿ ಬಳಸುವ ಕಲ್ಲು, ಪ್ರಾಣಿಗಳು ಸಿಕ್ಕಿವೆ ಎಂದು ಆಧಾರ ನೀಡಿದರೂ ವಿವಾದಿತ ಜಾಗದಲ್ಲೇ ರಾಮ ಜನಿಸಿದ್ದಾನೆ ಎನ್ನುವುದಕ್ಕೆ ಆಧಾರ ಸಿಗದ ಕಾರಣ ಪ್ರಕರಣ ಜಟಿಲವಾಗಿತ್ತು. ಅಷ್ಟೇ ಅಲ್ಲದೇ ವಿವಾದಿತ ಸ್ಥಳದಲ್ಲಿ ರಾಮ ಜನಿಸಿಲ್ಲ ಎನ್ನುವುದು ಸುನ್ನಿ ವಕ್ಫ್ ಬೋರ್ಡ್ ವಾದವಾಗಿದ್ದರಿಂದ ಹಾಗಾದರೆ ರಾಮ ಜನಿಸಿದ್ದು ಎಲ್ಲಿ ಎನ್ನುವ ಕಠಿಣ ಪ್ರಶ್ನೆ ಎದ್ದಿತ್ತು.

     

    ಅಯೋಧ್ಯೆಯಲ್ಲಿ ರಾಮ ಜನಿಸಿಯೇ ಇಲ್ಲ ಎಂದು ವಾದಿಸಿದ್ದರೆ ಪ್ರಕರಣ ಬೇರೆ ರೀತಿಯ ತಿರುವು ಪಡೆದುಕೊಳ್ಳುತಿತ್ತು. ಆದರೆ ಇಲ್ಲಿ ವಿವಾದಿತ ಸ್ಥಳದಲ್ಲಿ ರಾಮ ಜನಿಸಿಲ್ಲ ಎನ್ನುವ ವಾದಕ್ಕೆ ಮಾತ್ರ ಆಕ್ಷೇಪ ಇದ್ದ ಕಾರಣ ರಾಮ ಅಯೋಧ್ಯೆಯಲ್ಲೇ ಜನಿಸಿದ್ದ ಎನ್ನುವ ಅಂಶ ದೃಢವಾಯಿತು.

    ಈಗ ವಿವಾದಕ್ಕೆ ಕಾರಣವಾಗಿರುವ ಜಾಗದಲ್ಲೇ ರಾಮ ಹುಟ್ಟಿದ್ದಾನೆ ಎಂದು ತಿಳಿದುಕೊಳ್ಳುವುದು ಹೇಗೆ? ಈ ಎರಡನೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನ್ಯಾಯಾಧೀಶರು ವಾಲ್ಮೀಕಿ ರಾಮಾಯಣ ಮತ್ತು ಸ್ಕಂದ ಪುರಾಣದ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಕ್ತದಲ್ಲಿ ಬರೆದು ಸುಪ್ರೀಂ ತೀರ್ಪು ಸ್ವಾಗತಿಸಿದ ಮುಸ್ಲಿಂ ವ್ಯಕ್ತಿ

    ರಾಮಾಯಣದ ಮೂಲ ಕೃತಿಯಾದ ವಾಲ್ಮೀಕಿ ರಾಮಾಯಣದ 10ನೇ ಶ್ಲೋಕದಲ್ಲಿ ಕೌಸಲ್ಯೆಯು ಮಗನೊಬ್ಬನಿಗೆ ಜನ್ಮ ನೀಡಿದ್ದಳು. ರಾಮನ ಆಗಮನದಿಂದ ಅಯೋಧ್ಯೆ ಪಾವನಗೊಂಡಿತು. ಮುಂದೆ ಆತ ವಿಶ್ವಕ್ಕೆ ದೇವರಾದ ಎನ್ನುವ ಉಲ್ಲೇಖವಿದೆ. ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎನ್ನುವುದಕ್ಕೆ ಉಲ್ಲೇಖ ಇದ್ದರೂ ವಾಲ್ಮೀಖಿ ರಾಮಾಯಣದಲ್ಲಿ ವಿವಾದಿತ ಜಾಗದಲ್ಲೇ ರಾಮ ಜನಿಸಿದ್ದ ಎನ್ನುವುದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ನ್ಯಾಯಾಧೀಶರು ಸ್ಕಂದ ಪುರಾಣವನ್ನು ಅಧ್ಯಯನ ಮಾಡಿದ್ದಾರೆ.

    ಸ್ಕಂದ ಪುರಾಣದಲ್ಲಿರುವ ವೈಷ್ಣವಕಾಂಡದಲ್ಲಿ ಅಯೋಧ್ಯಾ ಮಹಾತ್ಮ ಅಧ್ಯಾಯದಲ್ಲಿ ರಾಮನ ಜನ್ಮಸ್ಥಾನದ ಉಲ್ಲೇಖದ ಬಗ್ಗೆ ಶ್ಲೋಕವಿದೆ. ಈ ಶ್ಲೋಕದ ಪ್ರಕಾರ ಇಲ್ಲಿಂದ ಈಶಾನ್ಯ ದಿಕ್ಕಿನಲ್ಲಿರುವ ಜಾಗವೇ ರಾಮಜನ್ಮ ಸ್ಥಾನ. ಮೋಕ್ಷ ಸ್ಥಾನವಾಗಿರುವ ಈ ಸ್ಥಳವು ವಿಘ್ನೇಶ್ವರದ ಪೂರ್ವ ದಿಕ್ಕಿನಲ್ಲಿದ್ದು, ವಶಿಷ್ಠದ ಉತ್ತರ ದಿಕ್ಕಿನಲ್ಲಿದೆ ಲಾವ್ಮಾಸಾ ಆಶ್ರಮದ ಪಶ್ಚಿಮ ದಿಕ್ಕಿನಲ್ಲಿದೆ ಎಂದು ಹೇಳುತ್ತದೆ.

     

    ಈ ಶ್ಲೋಕದಲ್ಲಿ ತಿಳಿಸಿದ ಅಂಶ ರಾಮಲಲ್ಲಾ ಕಡೆಯವರ ವಾದಕ್ಕೂ ತಾಳೆಯಾಗುತ್ತದೆಯೇ ಎನ್ನುವುದನ್ನು ಕೋರ್ಟ್ ಅಧ್ಯಯನ ಮಾಡಿದೆ. ಈ ಶ್ಲೋಕದಲ್ಲಿರುವ ಸ್ಥಳಗಳು ವಿವಾದಿತ ಪ್ರದೇಶದಲ್ಲಿರುವ ಸ್ಥಳಗಳಿಗೂ ತಾಳೆಯಾಗುತ್ತಾ ಎನ್ನುವುದನ್ನು ಪರಿಶೀಲಿಸಿದಾಗ, ಶ್ಲೋಕದಲ್ಲಿ ಉಲ್ಲೇಖಿಸಿರುವ ದಿಕ್ಕಿನಲ್ಲಿಯೇ ರಾಮಮಂದಿರವಿದ್ದು ಈಗಲೂ ಈ ಸ್ಥಳಗಳು ಇವೆ. ನಾವು ಈ ಸ್ಥಳಕ್ಕೆ ಭೇಟಿ ನೀಡಿದ್ದೇವೆ ಎನ್ನುವುದನ್ನು ಹಲವು ವ್ಯಕ್ತಿಗಳು ಮೌಖಿಕ ಸಾಕ್ಷ್ಯ ನುಡಿದಿದ್ದಾರೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಸ್ಕಂದ ಪುರಾಣದ ಆಧಾರ ಮತ್ತು ಖಾಲಿ ಜಾಗದಲ್ಲಿ ಮಸೀದಿ ನಿರ್ಮಾಣವಾಗಿಲ್ಲ. ಹಿಂದೂ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಾಣವಾಗಿದೆ ಎನ್ನುವ ಭಾರತೀಯ ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಗಂಭೀರ ಪರಿಗಣಿಸಿದ ಕೋರ್ಟ್ ಅಂತಿಮವಾಗಿ ವಿವಾದಿತ 2.77 ಎಕ್ರೆ ಜಾಗ ರಾಮಲಲ್ಲಾಗೆ ಸೇರಬೇಕೆಂದು ಷರಾ ಬರೆದು ವಿವಾದವಾಗಿದ್ದ ಪ್ರಕರಣಕ್ಕೆ ಪೂರ್ಣ ವಿ’ರಾಮ’ ಹಾಕಿದೆ.

  • ರಾಮ ಮಂದಿರ ನಿರ್ಮಾಣಕ್ಕೆ 5 ವರ್ಷ ಬೇಕು

    ರಾಮ ಮಂದಿರ ನಿರ್ಮಾಣಕ್ಕೆ 5 ವರ್ಷ ಬೇಕು

    – 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
    – ಅಡಿಪಾಯಕ್ಕೆ 8 ತಿಂಗಳು ಸಮಯ ಬೇಕು

    ನವದೆಹಲಿ: ರಾಮಮಂದಿರ ನಿರ್ಮಾಣ ಸಂಬಂಧ ತಯಾರಿ ಕೆಲಸಗಳು ನಡೆಯುತ್ತಿದ್ದರೂ ದೇವಾಲಯ ಸ್ಥಾಪನೆಗೆ ಕನಿಷ್ಟ 5 ವರ್ಷಗಳು ಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

    ರಾಮಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಕಂಬಗಳನ್ನು ಸಿದ್ಧ ಪಡಿಸಲಾಗಿದೆ. ಸುಮಾರು 250 ಪರಿಣಿತ ಕುಶಲಕರ್ಮಿಗಳು ಈ ದೇವಾಲಯವನ್ನು ಪೂರ್ಣಗೊಳಿಸಲು ದಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ತಯಾರಿಸಿರುವ ವಿನ್ಯಾಸದಂತೆ ದೇವಸ್ಥಾನವನ್ನು ನಿರ್ಮಿಸಬೇಕಿದೆ ಎಂದು ದೇವಾಲಯ ಕಟ್ಟಡದ ಮೇಲ್ವಿಚಾರಕರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    ಪ್ರಖ್ಯಾತ ಶಿಲ್ಪಿ ರಜನಿಕಾಂತ್ ಸೊಂಪುರ ನಿಧನರಾದ ಕಾರಣ ವಿಶ್ವ ಹಿಂದೂ ಪರಿಷತ್ ಕಾರ್ಯಶಾಲೆಯಲ್ಲಿ ಪ್ರಸ್ತುತ ಯಾವುದೇ ಕುಶಲ ಶಿಲ್ಪಿಗಳಿಲ್ಲ. 50 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದು ವಿಎಚ್‍ಪಿ ಕಾರ್ಯಶಾಲೆಯಲ್ಲಿ 1990ರಿಂದ ಪ್ರತಿ ದಿನ ಎಂಟು ಗಂಟೆಗಳ ಕಾಲ ಕೆಲಸ ನಡೆಯುತ್ತಿದೆ. ಆದರೆ ಮೂರು ದಶಕಗಳಲ್ಲಿ ನೆಲ ಮಹಡಿಯ ರಚನೆಯ ಅರ್ಧದಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ಸರಯು ನದಿ ತೀರದಲ್ಲಿ ಇರುವ ಕಾರಣ ಭದ್ರವಾದ ಅಡಿಪಾಯ ಹಾಕಬೇಕಾಗುತ್ತದೆ. ನಂತರ ಸಂಪೂರ್ಣ ರಚನೆಯ ಮೇಲೆ ಬಿಳಿ ಸಿಮೆಂಟ್ ಹಾಕಬೇಕಾಗುತ್ತದೆ. ಅಡಿಪಾಯಕ್ಕೆ 8 ತಿಂಗಳು ಸಮಯ ತಗಲಬಹುದು ಎನ್ನುವ ಲೆಕ್ಕಾಚಾರ ಹಾಕಲಾಗಿದೆ

    ನಿರ್ಮಿಸಬೇಕಾದ ಒಟ್ಟು 212 ಸ್ತಂಭಗಳ ಪೈಕಿ ಪ್ರಸ್ತುತ 106 ಸ್ತಂಭಗಳು ಮಾತ್ರ ಸಿದ್ಧವಾಗಿವೆ. ಅಯೋಧ್ಯೆಯ ದೇವಸ್ಥಾನದ ಕಾರ್ಯಾಗಾರದಲ್ಲಿ ಇವುಗಳನ್ನು ಜೋಡಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಯಾವುದೇ ಕಾರ್ಮಿಕರಿಲ್ಲ. ಮತ್ತೆ ಕೆಲಸ ಪ್ರಾರಂಭವಾಗಬೇಕಿದೆ. ಇದಕ್ಕಾಗಿ 250 ಕೆತ್ತನೆಗಾರರ ಅವಶ್ಯವಿದೆ. ಇಷ್ಟು ಜನ ಕೆತ್ತನೆಗಾರರು ಕೆಲಸ ಮಾಡಿದರೂ ಐದು ವರ್ಷಗಳು ಬೇಕಾಗುತ್ತದೆ ಎಂದು ದೇವಾಲಯದ ಕಾರ್ಯಾಗಾರದ ಮೇಲ್ವಿಚಾರಕ ಅನ್ನೋಭಾಯ್ ಸೊಂಪುರ ವಿವರಿಸಿದರು. ಇದನ್ನೂ ಓದಿ: ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ

    ಅನ್ನೋಭಾಯ್ ಪ್ರತಿಕ್ರಿಯಿಸಿ, ಇದೀಗ ಅರ್ಧ ಸ್ತಂಭಗಳು ಸಿದ್ಧವಾಗಿವೆ, ಗರ್ಭಗುಡಿಯ ಗೋಡೆಗಳನ್ನು ನಿರ್ಮಿಸಲಾಗಿದೆ ಹಾಗೂ ದೇವಸ್ಥಾನಕ್ಕೆ ಅಮೃತ ಶಿಲೆಯ ‘ಚೌಕತ್’ ನಿರ್ಮಾಣ ಕಾರ್ಯ ಸಹ ಪೂರ್ಣಗೊಂಡಿದೆ. ಆದರೆ ಶೇ.50ರಷ್ಟು ಕಾಮಗಾರಿಗಳು ಇನ್ನೂ ಪೂರ್ಣವಾಗಿಲ್ಲ. ಇನ್ನೂ 106 ಸ್ತಂಭಗಳು, ಶಿಖರ ಹಾಗೂ ಮೇಲ್ಛಾವಣಿಯನ್ನು ನಿರ್ಮಿಸಬೇಕಾಗಿದೆ. ಈಗ ನಾನು ಮದುವೆಗಾಗಿ ಗುಜರಾತ್‍ಗೆ ಬಂದಿದ್ದೇನೆ ಆದರೆ ಕೆತ್ತನೆಗಾರರು ನನ್ನನ್ನು ಕರೆಯಲು ಪ್ರಾರಂಭಿಸಿದ್ದಾರೆ. ಡಿಸೆಂಬರ್‍ನಲ್ಲಿ ಅಯೋಧ್ಯೆಗೆ ಮರಳಿದ ನಂತರ ಹೆಚ್ಚಿನ ವಿಷಯಗಳು ತಿಳಿಯುತ್ತವೆ ಎಂದು ಅವರು ಮಾಹಿತಿ ನೀಡಿದರು.

    ವಿಎಚ್‍ಪಿಯ ಅವಧ್ ಪ್ರಾಂತ್ಯದ ಮುಖ್ಯಸ್ಥ ಶರದ್ ಶರ್ಮಾ ಈ ಕುರಿತು ಮಾಹಿತಿ ನೀಡಿ, ಮುಂದೆ ಹೇಗೆ ತೆಗೆದುಕೊಂಡು ಹೋಗುವುದು ಎಂದು ಇನ್ನೂ ನಿರ್ಧರಿಸಿಲ್ಲ. ರಾಮ ಜನ್ಮಭೂಮಿಯ ನ್ಯಾಸ್ ಸದಸ್ಯರು ಸಭೆ ನಡೆಸಿ ನಂತರ ನಿರ್ಧರಿಸಲಿದ್ದಾರೆ. ಇದೀಗ ನಮ್ಮ ಗಮನವು ದೇಶದಲ್ಲಿ ಶಾಂತಿ ನೆಲೆಸುವುದರ ಮೇಲಿದೆ. 1984ರಲ್ಲಿ ವಿಎಚ್‍ಪಿಯಿಂದ ದೇವಾಲಯದ ಶಿಲಾನ್ಯಾಸ ನೆರವೇರಿಸಲಾಗಿದೆ. ಆಗ ಭಕ್ತರಿಂದ ಒಂದು ರೂಪಾಯಿ ಮತ್ತು ಇಪ್ಪತ್ತೈದು ಪೈಸೆಗಳ ಪ್ರಾಥಮಿಕ ದೇಣಿಗೆ ನಂತರ, ಮಂದಿರ ನಿರ್ಮಾಣಕ್ಕಾಗಿ ಒಟ್ಟು 8 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು.

    ಪ್ರಾರಂಭದಲ್ಲಿ ರಾಜಸ್ಥಾನದಿಂದ ಬರುವ ಕಲ್ಲುಗಳಿಂದ ಕೆಲಸ ಪ್ರಾರಂಭಿಸಲಾಯಿತು. ಆಗ 150 ಕಾರ್ವರ್ ಗಳ ಜೊತೆಗೆ ನೂರಾರು ಕಾರ್ಮಿಕರಿದ್ದರು. ಆಗ ಹಣದ ಹರಿವು ಕೂಡ ಸ್ಥಿರವಾಗಿತ್ತು. ಮೊದಲ 10 ವರ್ಷಗಳಲ್ಲಿ ಕೆಲಸವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಯಿತು. ಕಾಲಾನಂತರದಲ್ಲಿ ವೇಗವು ನಿಧಾನವಾಯಿತು. ಕುಶಲಕರ್ಮಿಗಳು ಹಾಗೂ ಕಾರ್ಮಿಕರ ಸಂಖ್ಯೆ ಕ್ಷೀಣಿಸಿತು, ಇದೀಗ ಮತ್ತೆ ಕೆಲಸಕ್ಕೆ ವೇಗ ಸಿಗಬೇಕಿದೆ ಎಂದು ಶರ್ಮಾ ವಿವರಿಸಿದರು.

  • ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು: ಕೊಪ್ಪಳದ ಮುಸ್ಲಿಂ ಯುವಕ

    ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು: ಕೊಪ್ಪಳದ ಮುಸ್ಲಿಂ ಯುವಕ

    ಕೊಪ್ಪಳ: ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು ಎಂದು ಕೊಪ್ಪಳದ ಮುಸ್ಲಿಂ ಯುವಕ ಅಯೋಧ್ಯೆ ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

    ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಸಂಶುದ್ದೀನ್ ಎರಡು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿದ್ದರು. ಇದೀಗ ಸುಪ್ರೀಂಕೋರ್ಟ್ ಶನಿವಾರ ನೀಡಿದ ಮಹತ್ವದ ತೀರ್ಪಿನ ಖುಷಿಯನ್ನು ಶಂಶುದ್ದೀನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಅಯೋಧ್ಯೆ ತೀರ್ಪು ದೇಶವು ಇಂದು ಖುಷಿ ಪಡುವ ವಿಚಾರ. ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವೀಕರಿಸಿದ್ದಾರೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬದುಕಬೇಕಿದೆ. ಕೊಪ್ಪಳ ಜಿಲ್ಲೆಯ ವತಿಯಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಹೋಗಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿ ಬಂದಿದ್ದೇನೆ. ಈ ಕೆಲಸ ಇಂದು ಸಾರ್ಥಕ ಅನಿಸುತ್ತಿದೆ ಎಂದು ಸಂಶುದ್ದೀನ್ ಹೇಳಿದ್ದಾರೆ.

    ನಾನೊಬ್ಬ ಭಾರತೀಯ, ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಬದುಕಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸುಪ್ರೀಂಕೋರ್ಟ್ ನೀಡಿದೆ. ಅಯೋಧ್ಯೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸಿದ್ದೇವೆ ಎಂದು ಸಂಶುದ್ದೀನ್ ತಿಳಿಸಿದರು. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    ಸಂಶುದ್ದೀನ್ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 2017ರ ಏಪ್ರಿಲ್‍ನಲ್ಲಿ ನೈತಿಕ ಬೆಂಬಲ ನೀಡಿದ್ದರು. ಜೊತೆಗೆ ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದರು. ಇದಕ್ಕೂ ಮುನ್ನ ಸಂಶುದ್ದೀನ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ರಾಮಮಂದಿರ ಕಟ್ಟಲು ಒಂದು ಚೀಲ ಸಿಮೆಂಟ್ ಒಯ್ಯುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಈ ವೇಳೆ ಅವರಿಗೆ ಸಾಕಷ್ಟು ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿತ್ತು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸಂಶುದ್ದೀನ್ ಪ್ರವೃತ್ತಿಯಲ್ಲಿ ಸಿನಿಮಾ ಕಲಾವಿದರು. ಲಂಬಾಣಿ ಭಾಷೆಯ ಕೋವೆಲ್ ಮತ್ತು ನಟ ಲೂಸ್ ಮಾದ ನಟಿಸಿರುವ ಧೂಳಿಪಟ ಚಿತ್ರದಲ್ಲಿ ಸಂಶುದ್ದೀನ್ ಖಳನಾಯಕರಾಗಿ ಅಭಿನಯಿಸಿದ್ದಾರೆ. ಶಂಶುದ್ದೀನ್ ಅವರಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಸನ್ಮಾನಿಸಿ, ಬೀಳ್ಕೊಟ್ಟಿದ್ದರು. ಇದನ್ನೂ ಓದಿ: ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ

  • ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಾಯ ಮಾಡಬೇಕು- ಬಾಬಾ ರಾಮ್‍ದೇವ್

    ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಾಯ ಮಾಡಬೇಕು- ಬಾಬಾ ರಾಮ್‍ದೇವ್

    ನವದೆಹಲಿ: ಮಸೀದಿ ನಿರ್ಮಾಣಕ್ಕೆ ಹಿಂದೂ ಸಹೋದರರು ಸಹಾಯ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಕರೆ ನೀಡಿದ್ದಾರೆ.

    ರಾಮ ಜನ್ಮ ಭೂಮಿ ತೀರ್ಪಿನ ಕುರಿತು ಮಾತನಾಡಿದ ಅವರು, ಇದು ಐತಿಹಾಸಿಕ ತೀರ್ಪು, ಭವ್ಯವಾದ ರಾಮ ಮಂದಿರವನ್ನು ಕಟ್ಟಲಾಗುವುದು. ಮುಸ್ಲಿಮರಿಗೆ ಪರ್ಯಾಯ ಭೂಮಿಯನ್ನು ಮಂಜೂರು ಮಾಡುವ ನಿರ್ಧಾರವೂ ಸ್ವಾಗತಾರ್ಹ. ಮಸೀದಿ ನಿರ್ಮಾಣಕ್ಕೆ ಹಿಂದೂ ಸಹೋದರರು ಸಹಾಯ ಮಾಡಬೇಕು, ಮಾಡುತ್ತಾರೆಂದು ನಂಬಿದ್ದೇನೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.

    ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಯೋಗ ಗುರು ಬಾಬಾ ರಾಮ್‍ದೇವ್ ಶ್ಲಾಘಿಸಿದ್ದು, ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಮಸೀದಿ ನಿರ್ಮಿಸಲು ಹಿಂದೂಗಳು ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಮಂದಿರ-ಮಸೀದಿಗಳಿಂದ ಭಾರತ ಹೊರಬಂದು ಭಾರತವನ್ನು ವಿಶ್ವದ ದೊಡ್ಡ ಆರ್ಥಿಕ, ಕೃಷಿ ಹಾಗೂ ಮಿಲಿಟರಿ ಶಕ್ತಿಯನ್ನಾಗಿಸುವ ಕುರಿತು ಚಿಂತಿಸಬೇಕಾದ ಸಮಯ ಇದಾಗಿದೆ. ದೇವಾಲಯ ಮತ್ತು ಮಸೀದಿ ನಿರ್ಮಿಸಲು ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸಹಾಯ ಮಾಡಬೇಕು. ಅಗತ್ಯವಿದ್ದರೆ ಅವರು ದೇವಾಲಯ ಮತ್ತು ಮಸೀದಿ ನಿರ್ಮಿಸುವ ಪ್ರಯತ್ನಗಳಿಗೆ ಕೈಜೋಡಿಸುತ್ತಾರೆ ಎಂದರು.

    ರಾಮ ಜನ್ಮಭೂಮಿ ಕುರಿತ ಅಯೋಧ್ಯೆ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ ಪ್ರಕಟಿಸಿದೆ. ದೇವಸ್ಥಾನ ನಿರ್ಮಾಣಕ್ಕೆ ಸಮಿತಿ ರಚಿಸುವಂತೆ ತಿಳಿಸಿದರೆ, ಮಸೀದಿ ನಿರ್ಮಿಸಲು 5 ಎಕರೆ ಪರ್ಯಾಯ ಭೂಮಿ ನೀಡುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ದೇವಾಲಯದ ಕಟ್ಟಡ ಸೇರಿದಂತೆ ದೇವಾಲಯದ ಎಲ್ಲ ವಿಷಯಗಳನ್ನು ಸಮಿತಿ ನೋಡಿಕೊಳ್ಳಲಿದೆ.

    ಗೌರವಾನ್ವಿತ ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ಪ್ರಕಟಿಸಿದೆ. ಈ ತೀರ್ಪನ್ನು ಯಾರಿಗೂ ಗೆಲವು ಅಥವಾ ಸೋಲು ಎಂದು ಭಾವಿಸಬಾರದು. ರಾಮ ರಹೀಮನ ಭಕ್ತಿಗಿಂತ, ರಾಷ್ಟ್ರ ಭಕ್ತಿಯ ಮನೋಭಾವವನ್ನು ಬಲಪಡಿಸುವುದು ಕಡ್ಡಾಯವಾಗಿದೆ. ಶಾಂತಿ ಸಾಮರಸ್ಯ ಮೇಲುಗೈ ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವೀಟ್ ಮಾಡಿದ್ದಾರೆ.

  • ಒಗ್ಗೂಡಿಸುವ, ಕೈ ಜೋಡಿಸುವ ಹಾಗೂ ಎಲ್ಲ ಕಹಿಗಳನ್ನು ಕೊನೆಯಾಗಿಸುವ ದಿನ -ಮೋದಿ

    ಒಗ್ಗೂಡಿಸುವ, ಕೈ ಜೋಡಿಸುವ ಹಾಗೂ ಎಲ್ಲ ಕಹಿಗಳನ್ನು ಕೊನೆಯಾಗಿಸುವ ದಿನ -ಮೋದಿ

    ನವದೆಹಲಿ: ಇದು ಒಗ್ಗೂಡಿಸುವ, ಕೈ ಜೋಡಿಸುವ ಹಾಗೂ ಎಲ್ಲ ಕಹಿಗಳನ್ನು ಕೊನೆಯಾಗಿಸುವ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ.

    ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

    ಹೊಸ ಭಾರತದಲ್ಲಿ ಭಯ, ಕಹಿ ಮತ್ತು ನಕಾರಾತ್ಮಕತೆಗೆ ಸ್ಥಾನವಿಲ್ಲ. ಈ ತೀರ್ಪು ಹೊಸ ಉದಯಕ್ಕೆ ನಾಂದಿ ಹಾಡಿದೆ. ಹೊಸ ಭಾರತಕ್ಕೆ ಹೊಸ ಆರಂಭದ ಕರೆ ಎಂದು ಈ ತೀರ್ಪನ್ನು ಪರಿಗಣಿಸಬೇಕು ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

    ಯಾವುದೇ ಭಾರತೀಯನನ್ನು ಬಿಟ್ಟು ಹೋಗಬೇಡಿ, ಪ್ರಗತಿಯ ಮುನ್ನ ಎಲ್ಲರನ್ನೂ ಜೊತೆಗೆ ಕರೆದೊಯ್ಯಿರಿ. ಹೊಸ ಭಾರತದಲ್ಲಿ ಭಯ, ಕಹಿ ಹಾಗೂ ನಕಾರಾತ್ಮಕತೆಗೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

    ನವೆಂಬರ್ 9 ಬರ್ಲಿನ್ ಗೋಡೆ ಬಿದ್ದ ದಿನ, ಅಲ್ಲದೆ ಇಂದು(ನವೆಂಬರ್ 9) ಕರ್ತಾರ್‍ಪುರ ಕಾರಿಡಾರ್ ಪ್ರಾರಂಭವಾಗಿದೆ. ಈ ದಿನವೇ ಅಯೋಧ್ಯೆ ತೀರ್ಪು ಪ್ರಕಟವಾಗಿದೆ. ಒಗ್ಗೂಡಿಸುವುದು, ಕೈ ಜೋಡಿಸುವುದು ಹಾಗೂ ಎಲ್ಲರೊಂದಿಗೆ ಮುಂದುವರಿಯುವುದು ನವೆಂಬರ್ 9ರ ಸಂದೇಶ. ಎಲ್ಲ ಕಹಿಗಳನ್ನು ಕೊನೆಗೊಳಿಸುವ ದಿನವಿದು ವ್ಯಾಖ್ಯಾನಿಸಿದ್ದಾರೆ.

    ಭಾರತದ ವೈವಿಧ್ಯತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದರೆ, ಇಂದು ನೋಡಬೇಕಾದದ್ದು ತೀರ್ಪಿನ ಬಗ್ಗೆ ಭಾರತೀಯರು ನೀಡಿದ ಪ್ರತಿಕ್ರಿಯೆ. ಹೀಗಾಗಿ ಸರ್ವಾನುಮತದ, ಹೃದಯಸ್ಪರ್ಶಿ ತೀರ್ಪು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ತೀರ್ಪಿನ ನಂತರ ಪ್ರತಿ ವಿಭಾಗ, ಸಮುದಾಯ ಹಾಗೂ ಧರ್ಮದ ಜನರು ತೀರ್ಪನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ್ದಾರೆ. ಇದನ್ನು ನೋಡಿದರೆ ಭಾರತದ ಪ್ರಾಚೀನ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.