Tag: ರಾಮ ಮಂದಿರ

  • ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶೇಷ ಆಹ್ವಾನಿತನಾಗಿ ಹೊರಟಿದ್ದೇನೆ: ಮಾದಾರ ಚನ್ನಯ್ಯ ಸ್ವಾಮೀಜಿ

    ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶೇಷ ಆಹ್ವಾನಿತನಾಗಿ ಹೊರಟಿದ್ದೇನೆ: ಮಾದಾರ ಚನ್ನಯ್ಯ ಸ್ವಾಮೀಜಿ

    – ಇಂದು ಸಂಜೆ ಹೊರಡಲು ಸಕಲ ಸಿದ್ಧತೆಗಳಾಗಿವೆ

    ಚಿತ್ರದುರ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಮಸ್ತ ಭಾರತೀಯರ ಭಾವನೆಗಳ ಪ್ರತೀಕ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

    ನಗರದ ಮಾದಾರಚನ್ನಯ್ಯ ಗುರುಪೀಠದಲ್ಲಿ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನಮಗೂ ಆಹ್ವಾನ ಬಂದಿದೆ. ಈ ಹಿನ್ನಲೆ ಇಂದು ಅಯೋಧ್ಯೆಗೆ ತೆರಳಲು ಸಕಲಸಿದ್ಧತೆಗಳಾಗಿವೆ. ಐತಿಹಾಸಿಕ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದು ಸಂತೋಷ ತಂದಿದೆ. ಇಂದು ಸಂಜೆ ಅಯೋಧ್ಯೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಸಾಕ್ಷೀಕರಿಸುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದರು.

    ರಾಮಮಂದಿರ ನಿರ್ಮಾಣದ ಈ ಸುವರ್ಣ ಸಮಯಕ್ಕೆ ದೇಶದ ಜನ ಕಾತುರರಾಗಿದ್ದಾರೆ. ಹೀಗಾಗಿ ರಾಮಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ. ಅಯೋಧ್ಯೆಗೆ ನಮ್ಮೊಂದಿಗೆ ರಾಜ್ಯದ 8 ಜನ ಗಣ್ಯರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಗಿದೆ ಎಂಬ ಮಾಹಿತಿ ಇದೆ. ರಾಮ ಮಂದಿರದ ಹೋರಾಟ ಹುಟ್ಟಿದ ಸಂದರ್ಭದಲ್ಲಿ ನಾವೇ ಹುಟ್ಟಿರಲಿಲ್ಲ ಆದರೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಾವುಗಳು ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

    ದೇಶದಲ್ಲಿ ನಂಬಿಕೆಗಳ ಆಧಾರದ ಮೇಲೆ ಆಚರಣೆಗಳು ನಡೆಯುತ್ತವೆ. ಅಯೋಧ್ಯೆ ಎಂದರೆ ನಂಬಿಕೆಗಳ ಕರ್ಮಭೂಮಿ ಎಂಬ ಭಾವನೆ ಎಲ್ಲರಲ್ಲಿದೆ. ಇಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಈವರೆಗೆ ಭಾಗಿ ಆಗಿದ್ದೇವೆ. ಹೀಗಾಗಿ ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ಪ್ರತ್ಯೇಕವಾಗಿ ಚಿಂತನೆ ಮಾಡುವಂಥದ್ದೇನು ಇಲ್ಲ ಎಂದರು.

  • ಭೂಮಿಪೂಜೆಗೆ ಕೌಂಟ್‌ಡೌನ್‌ – ಅಯೋಧ್ಯೆಯಲ್ಲಿ ಎಲ್ಲೆಲ್ಲಿಗೆ ತೆರಳಲಿದ್ದಾರೆ ಪ್ರಧಾನಿ ಮೋದಿ?

    ಭೂಮಿಪೂಜೆಗೆ ಕೌಂಟ್‌ಡೌನ್‌ – ಅಯೋಧ್ಯೆಯಲ್ಲಿ ಎಲ್ಲೆಲ್ಲಿಗೆ ತೆರಳಲಿದ್ದಾರೆ ಪ್ರಧಾನಿ ಮೋದಿ?

    ಅಯೋಧ್ಯೆ: ಶ್ರೀರಾಮ ಹುಟ್ಟಿ ಬೆಳೆದ ಅಯೋಧ್ಯೆ ಈಗ ಜಗಮಗಿಸುತ್ತಿದೆ. ಬಾಲರಾಮ ಆಡಿ ಬೆಳೆದ ಊರಲ್ಲಿ ಗತವೈಭವ ಮರುಕಳಿಸಿದೆ.ಕೋಟ್ಯಂತರ ಜನ ಕಾಯುತ್ತಿದ್ದ ಆ ಶುಭಗಳಿಗೆಗೆ ಕ್ಷಣಗಣನೆ ಶುರುವಾಗಿದೆ.

    ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಅಯೋಧ್ಯೆಗೆ ಆಗಮಿಸಲಿದ್ದಾರೆ. ಸುಮಾರು 2-3 ಗಂಟೆ ಮೋದಿಯವರು ಅಯೋಧ್ಯೆಯಲ್ಲಿ ಇರಲಿದ್ದಾರೆ.

    ಬುಧವಾರ ಬೆಳಗ್ಗೆ 11.15ಕ್ಕೆ ಸಾಕೇತ್ ಕಾಲೇಜ್‍ನ ಹೆಲಿಪ್ಯಾಡ್‍ಗೆ ಮೋದಿ ಆಗಮಿಸಲಿದ್ದಾರೆ. ಹೆಲಿಪ್ಯಾಡ್‍ನಿಂದ ನೇರವಾಗಿ ಹನುಮಾನ್ ಗಡಿಗೆ ತೆರಳಲಿದ್ದಾರೆ. ಹನುಮಾನ್ ಗಡಿಯಲ್ಲಿ 7 ನಿಮಿಷಗಳ ಕಾಲ ಪೂಜೆಯಲ್ಲಿ ಭಾಗಿಯಾದ ಬಳಿಕ ರಾಮಜನ್ಮಭೂಮಿಗೆ ಗೇಟ್ ನಂ.3ರ ಮೂಲಕ ಆಗಮಿಸಲಿದ್ದಾರೆ.

    ರಾಮ್‍ಲಲ್ಲಾ ದರ್ಶನ ಮಾಡಿ 15 ನಿಮಿಷಗಳ ಕಾಲ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ರಾಮ್‍ಲಲ್ಲಾ ದರ್ಶನ ಮಾಡುವ ಮೊದಲ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರವಾಗಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

    25 ನಿಮಿಷಗಳ ಕಾಲ ನಡೆಯಲಿರುವ ಪೂಜೆ ನಡೆಯಲಿದ್ದು, ಭೂಮಿ ಪೂಜೆ ಬಳಿಕ 45 ನಿಮಿಷ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸರಯೂ ನದಿ ಬಳಿ ಮೋದಿ ತೆರಳಲಿದ್ದಾರೆ. ಒಟ್ಟು 2 ಗಂಟೆ 15 ನಿಮಿಷಕ್ಕೂ ಅಧಿಕ ಕಾಲ ಅಯೋಧ್ಯೆಯಲ್ಲಿ ಮೋದಿ ಇರಲಿದ್ದಾರೆ.

  • ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ: ದಿನೇಶ್ ಗುಂಡೂರಾವ್

    ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ: ದಿನೇಶ್ ಗುಂಡೂರಾವ್

    ಉಡುಪಿ: ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ. ಬಿಜೆಪಿಯವರು ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರದ ಉದ್ದೇಶದ ದುರುಪಯೋಗ ಬೇಡ. ರಾಮ ಮಂದಿರ ನಿರ್ಮಾಣವನ್ನು ಸ್ವಾಗತಿಸುತ್ತೇವೆ. ಭವ್ಯವಾದ ರಾಮ ಮಂದಿರ ನಿರ್ಮಾಣ ಆಗಲಿ. ಮಂದಿರಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಉದ್ದೇಶ ದುರುಪಯೋಗ ಆಗುವುದು ಬೇಡ ಎಂದು ಟಾಂಗ್ ನೀಡಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಚಿಕಿತ್ಸಾ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ ಲೂಟಿಯಾಗಿದೆ. ಕಾಂಗ್ರೆಸ್ ಆರೋಪ ಮಾಡಿ 25 ದಿನವಾದರೂ ಉತ್ತರ ಸಿಕ್ಕಿಲ್ಲ. ಯಾವುದೇ ಮಾಹಿತಿ ವಿಪಕ್ಷ ನಾಯಕರಗೆ ಬಂದಿಲ್ಲ. ವೆಂಟಿಲೇಟರ್, ಪಿಪಿಇ ಕಿಟ್, ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ. ಮೂರರಿಂದ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಕೊರೊನಾ ಸಲಕರಣೆ ಖರೀದಿಯಲ್ಲೂ ಶೇಕಡಾ 50ರಷ್ಟು ಲೂಟಿಯಾಗಿದೆ. ಸುಮಾರು ಎರಡು ಸಾವಿರ ಕೋಟಿ ರೂ.ಗಳನ್ನು ಬಿಜೆಪಿ ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ಪ್ರಶ್ನೆ ಮಾಡಿದರೆ ಲೀಗಲ್ ನೋಟೀಸ್ ಕೊಡುತ್ತಾರೆ. ಧೈರ್ಯ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಿ. ಕಾಂಗ್ರೆಸ್ ಕೋರ್ಟ್ ಮೂಲಕ ಹೋರಾಟ ಮಾಡುತ್ತದೆ. ವ್ಯಾಪಕ ಖರೀದಿಯ ಸಮಗ್ರ ತನಿಖೆಯಾಗಲಿ. ಕೊರೊನಾ ಸಲಕರಣೆ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು. ಅಲ್ಲದೆ ಕೇಂದ್ರ ಸರ್ಕಾರ ಕರ್ನಾಟಕವನ್ನು ಕೈಚೆಲ್ಲಿದೆ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬರುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

  • ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ

    ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ

    ಬಳ್ಳಾರಿ: ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ ಮಾಡಲಾಗುತ್ತದೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಬಳ್ಳಾರಿ ನಗರ ಹೊರವಲಯದ ಅಲ್ಲೀಪುರ ಕೆರೆಯ ಎಚ್‍ಎಲ್‍ಸಿ ಕಾಲುವೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರೋದು ನಮಗೆಲ್ಲ ಖುಷಿ ತಂದಿದೆ. ಅಂಜನಾದ್ರಿ ಬೆಟ್ಟದಲ್ಲಿ ವಾಯು, ಸುಗ್ರೀವ, ರಾಮನೂ ಕೂಡ ನೆಲೆಸಿದ್ದ ಎಂಬ ಪ್ರತೀತಿಯಿದೆ. ಹೀಗಾಗಿ ಅಲ್ಲಿಂದ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಒಂದು ಕಲ್ಲನ್ನು ಒಯ್ಯಲಾಗಿದೆ. ರಾಮಮಂದಿರದಲ್ಲೂ ಕೂಡ ಅಂಜನಾದ್ರಿ ಬೆಟ್ಟದ ಕಲ್ಲನ್ನು ನಾವು ನೋಡಬಹುದಾಗಿದೆ ಎಂದರು.

    ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿರುವ ವಿಚಾರ ನಿನ್ನೆ ಗೊತ್ತಾಯ್ತು. ವಿಷಯ ಕೇಳಿ ತುಂಬಾ ನೋವಾಯ್ತು. ಮುಖ್ಯಮಂತ್ರಿಗಳು ಆದಷ್ಟು ಬೇಗ ಗುಣಮುಖರಾಗಿ ಬರಬೇಕು. ಈ ನಾಡಿಗೆ ಅವರ ಸೇವೆ ಅತ್ಯಗತ್ಯವಾಗಿದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆರೋಗ್ಯ ಮಾತೆಯಲ್ಲಿ ಪ್ರಾರ್ಥಿಸುವುದಾಗಿ ಎಂದು ಸೋಮಶೇಖರ್ ತಿಳಿಸಿದರು.

  • ಅಯೋಧ್ಯೆ ಭೂಮಿ ಪೂಜೆಗೆ ರಾಜ್ಯದ 8 ಮಂದಿಗೆ ಆಹ್ವಾನ

    ಅಯೋಧ್ಯೆ ಭೂಮಿ ಪೂಜೆಗೆ ರಾಜ್ಯದ 8 ಮಂದಿಗೆ ಆಹ್ವಾನ

    ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರ್ಜರಿಯಾಗಿ ನಡೆಯುತ್ತಿವೆ. ಆಯೋಧ್ಯೆಯ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕರ್ನಾಟಕದ ಎಂಟು ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಕರ್ನಾಟಕಕ್ಕೆ ಎಂಟು ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಈ ಶುಭ ಸಂದರ್ಭಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ವಿಶೇಷ ಆಹ್ವಾನಿತರು:
    1. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
    2. ಇಸ್ಕಾನ್ ನ ಮಧುಪಂಡಿತ ದಾಸ್
    3. ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ
    4. ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ
    5. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
    6. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ
    7. ಸುತ್ತೂರು ಮಠದ ಶ್ರೀಗಳು
    8. ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಕ್ಕಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಪುರುಷೋತ್ತಮ ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

  • ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ಲಕ್ನೋ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಐತಿಹಾಸಿಕ ಕ್ಷಣಕ್ಕೆ ಇನ್ನು ಎರಡು ದಿನ. ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಈ ಶುಭ ಸಂದರ್ಭಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಕ್ಕಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಪುರುಷೋತ್ತಮ ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

    ಮುಖ್ಯವೇದಿಕೆಯಲ್ಲಿ ಐವರಿಗೆ ಮಾತ್ರ ಸ್ಥಾನ ಕಲ್ಪಿಸಲಾಗುತ್ತಿದೆ. ಪ್ರಧಾನಿ ಮೋದಿ, ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯ ಗೋಪಾಲದಾಸ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಸೇರಿದಂತೆ ಒಟ್ಟು ಐವರಷ್ಟೇ ವೇದಿಕೆ ಅಲಂಕರಿಸಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ 200 ಗಣ್ಯರ ಬದಲಿಗೆ 170 ಗಣ್ಯರಿಗೆ ಅವಕಾಶ ನೀಡಲಾಗಿದೆ. ಮಂದಿರದ ಕನಸು ಕಂಡಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗಿಯಾಗಲಿದ್ದಾರೆ.

    ಅಚ್ಚರಿ ತರುತ್ತೆ ಮಂದಿರ ತಂತ್ರಜ್ಞಾನ
    ಬರೋಬ್ಬರಿ 15 ಪೀಳಿಗೆಯಿಂದ ದೇಶ ಹಾಗೂ ವಿದೇಶಗಳಲ್ಲಿ 131 ದೇವಾಲಯಗಳ ವಿನ್ಯಾಸ ಮಾಡಿರುವ ಅಹಮದಾಬಾದ್‍ನ ಖ್ಯಾತ ಶಿಲ್ಪಿ ಚಂದ್ರಕಾಂತ್ ಸೋಂಪುರ ನೇತೃತ್ವದಲ್ಲಿ ಅವರ ಕುಟುಂಬ ಎಲ್ಲ ಕಾಲಕ್ಕೂ ಸಲ್ಲುವ, ಭವ್ಯ ರಾಮ ಮಂದಿರ ನಿರ್ಮಿಸಲಿದೆ.

    ವಿಶ್ವ ಹಿಂದೂ ಪರಿಷತ್ ಜೊತೆ ಸೇರಿ 1989ರಿಂದಲೇ ರಾಮಮಂದಿರ ವಿನ್ಯಾಸ ರೂಪಿಸಿದ್ದ ಚಂದ್ರಕಾಂತ್ ಸೋಂಪುರ, ಇದೀಗ ವಿನ್ಯಾಸದಲ್ಲಿ ಅಲ್ಪ ಮಾರ್ಪಾಡು ಮಾಡಿದ್ದಾರೆ. ನಾಗರ ಶೈಲಿಯಲ್ಲಿ ಮರ್ಯಾದ ಪುರುಷೋಷತ್ತಮ ಮಂದಿರ ನಿರ್ಮಾಣವಾಗಲಿದೆ. ಈ ಮೊದಲು 270 ಅಡಿ ಉದ್ದ, 145 ಅಡಿ ಅಗಲ, 141 ಅಡಿ ಎತ್ತರದ ಮಂದಿರ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ರಾಮಮಂದಿರ ಬರೋಬ್ಬರಿ 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ.

    ಒಟ್ಟು 366 ಸ್ಥಂಭಗಳನ್ನು ಬಳಸಿ ದೇಗುಲ ನಿರ್ಮಾಣ
    ರಾಮ ಮಂದಿರದ ತಳಭಾಗ 25 ಅಡಿ ಇರಲಿದೆ. ಅದರ ಮೇಲೆ ಡಿಸೈನ್‍ನಲ್ಲಿ 6 ಅಡಿ ಆವರಣ ಇರಲಿದೆ. 16.03 ಅಡಿ ಎತ್ತರದ ಒಟ್ಟು 366 ಸ್ಥಂಭಗಳನ್ನು ಮಂದಿರ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನೆಲಮಹಡಿಯಲ್ಲಿ 161 ಸ್ಥಂಭ ಇರಲಿದ್ದು, ಇಲ್ಲಿಯೇ ರಾಮನ ಮೂರ್ತಿ ನಿರ್ಮಾಣ ಮಾಡಲಾಗುತ್ತದೆ. ಮೊದಲ ಅಂತಸ್ತಿನಲ್ಲಿ ರಾಮ್‍ಲಲ್ಲಾನ ಗರ್ಭಗುಡಿ ಇರಲಿದೆ. ಇದು ಅಷ್ಟಭುಜಾಕೃತಿಯಲ್ಲಿ ಇರಲಿದೆ. ಇದರ ಪಕ್ಕದಲ್ಲೇ ರಾಮ್ ದರ್ಬಾರ್ ಪ್ರಾಂಗಣ, ಇದರ ಎಡಭಾಗದಲ್ಲಿ ನೃತ್ಯ ಮಂಟಪ, ಅದರ ಹಿಂಬದಿಯಲ್ಲಿ ರಂಗಮಂಟಪ ಇರಲಿದೆ.

    ಭೂಗರ್ಭದಲ್ಲಿ ಅಡಕವಾಗಲಿದೆ ಮಂದಿರ ಇತಿಹಾಸ
    ಮುಂದೆಂದೂ ರಾಮಜನ್ಮಭೂಮಿ ವಿವಾದ ತಲೆ ಎತ್ತಬಾರದು ಎಂಬ ಕಾರಣಕ್ಕೆ, ಮುಂದಿನ ತಲೆಮಾರುಗಳಿಗೆ ರಾಮಮಂದಿರದ ಭವ್ಯ ಐತಿಹ್ಯ ತಿಳಿಯಬೇಕು ಎಂಬ ಉದ್ದೇಶದಿಂದ ರಾಮಮಂದಿರದ 2 ಸಾವಿರ ಅಡಿ ಆಳದಲ್ಲಿ ಮಂದಿರದ ಸಂಪೂರ್ಣ ಇತಿಹಾಸವುಳ್ಳ ತಾಮ್ರದ ಕೆತ್ತನೆಯ ಸಂಪುಟ (ಟೈಮ್ ಕ್ಯಾಪ್ಸುಲ್) ಹುದುಗಿಸಿಡಲು ಸಿದ್ಧತೆ ನಡೆದಿದೆ.

  • ರಾಮಮಂದಿರಕ್ಕಾಗಿ 151 ನದಿಗಳ ನೀರು ಸಂಗ್ರಹಿಸಿದ ಸೋದರರು

    ರಾಮಮಂದಿರಕ್ಕಾಗಿ 151 ನದಿಗಳ ನೀರು ಸಂಗ್ರಹಿಸಿದ ಸೋದರರು

    ನವದೆಹಲಿ: ಸೋದರರಿಬ್ಬರು ರಾಮಮಂದಿರ ನಿರ್ಮಾಣಕ್ಕಾಗಿ 151 ನದಿಗಳ ಸಂಗ್ರಹಿಸಿದ್ದಾರೆ.

    1968 ರಿಂದ ಶ್ರೀಲಂಕಾದ 16 ಸ್ಥಳಗಳಿಂದ 151 ನದಿಗಳ ನೀರು ಸಂಗ್ರಹಿಸಿದ್ದೇವೆ. ಇವುಗಳಲ್ಲಿ 8 ದೊಡ್ಡ ನದಿಗಳು, 3 ಸಮುದ್ರ ಮತ್ತು ಮಣ್ಣನ್ನು ಸಂಗ್ರಹಿಸಿದ್ದೇವೆ ಎಂದು ರಾಧೆ ಶ್ಯಾಮ್ ಪಾಂಡೆ ಹೇಳುತ್ತಾರೆ.

    ರಾಮ ಮಂದಿರದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದ್ದು, ಕೋಟ್ಯಾಂತರ ಭಕ್ತರು ಕಾಯುತ್ತಿದ್ದಾರೆ. ರಾಮ ಮಂದಿರ ಭೂಮಿ ಪೂಜೆಗಾಗಿ ದೇಶದ ವಿವಿಧ ಪುಣ್ಯ ಕ್ಷೇತ್ರಗಳಿಂದ ಪವಿತ್ರ ಜಲ ಮತ್ತು ಮಣ್ಣು ಸಂಗ್ರಹಿಸಿ ಅಯೋಧ್ಯೆಗೆ ತಲುಪಿಸಲಾಗುತ್ತಿದೆ. ಕೊರೊನಾ ಆತಂಕದಿಂದ ಬಹುತೇಕರು ತಾವಿದ್ದ ಸ್ಥಳದಿಂದಲೇ ಮಂತ್ರ ಪಠಣೆಗೆ ಮುಂದಾಗ್ತಿದ್ದಾರೆ.

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಛತ್ತೀಸ್‍ಗಢದ ಮುಸ್ಲಿಂದ ವ್ಯಕ್ತಿ ಫಯಾಜ್ ಖಾನ್ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ್ದಾರೆ.  ಗಮನಾರ್ಹ ವಿಷಯವೆಂದರೆ ಭಗವಾನ್ ರಾಮನ ತಾಯಿ ಕೌಸಲ್ಯೆ ಹುಟ್ಟಿದ್ದು ಛತ್ತೀಸ್‍ಗಢದ ಚಂದ್ಖುರಿಯಲ್ಲಿ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಇದೇ ಗ್ರಾಮದ ನಿವಾಸಿ ಮೊಹಮ್ಮದ್ ಫಯಾಝ್ ಖಾನ್ ಅವರು ಶ್ರೀರಾಮನ ಪರಮ ಭಕ್ತನಾಗಿದ್ದಾರೆ.

    ನನ್ನ ಹೆಸರು ಹಾಗೂ ಧರ್ಮದಲ್ಲಿ ನಾನೊಬ್ಬ ಮುಸ್ಲಿಂ. ಆದರೆ ನನ್ನ ದೇವರು ರಾಮ. ನಾನು ರಾಮನ ಪರಮಭಕ್ತನಾಗಿದ್ದೇನೆ. ನಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡರೆ ಅವರು ಹಿಂದೂಗಳಾಗಿರಬಹುದು. ಅಲ್ಲದೆ ಅವರ ಹೆಸರು ರಾಮ್‍ಲಾಲ್ ಅಥವಾ ಶ್ಯಾಮ್‍ಲಾಲ್ ಆಗಿರಬಹುದು. ನಾವು ಚರ್ಚ್ ಅಥವಾ ಮಸೀದಿಗೇ ಹೋಗಲಿ ಆದರೆ ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ ಎಂದು ಫಯಾಜ್ ಖಾನ್ ಹೇಳುತ್ತಾರೆ.

  • ರಾಮ ಮಂದಿರ ಮಾತ್ರವಲ್ಲ, ಅಯೋಧ್ಯೆ ನಗರ ನಿರ್ಮಾಣವಾಗಲಿದೆ: ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

    ರಾಮ ಮಂದಿರ ಮಾತ್ರವಲ್ಲ, ಅಯೋಧ್ಯೆ ನಗರ ನಿರ್ಮಾಣವಾಗಲಿದೆ: ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

    ತಿಹಾಸಿಕ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದೆ. ದೇಶ ಸಂಭ್ರಮದಲ್ಲಿದೆ. ರಾಮ ಮಂದಿರ ನಿರ್ಮಾಣ ಟ್ರಸ್ಟಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಗುರುಗಳ ಕಾರ್ಯ ಸ್ಮರಿಸಿರುವ ಶ್ರೀಗಳು, ಧನ ಸಂಗ್ರಹಕ್ಕೆ ಕೊಂಕು ನುಡಿದವರ ವಿರುದ್ಧ ಕುಟುಕಿದ್ದಾರೆ. ಒಳ್ಳೆಯ ಕೆಲಸಕ್ಕೆ ವಿಘ್ನ ಸಾಮಾನ್ಯ ಎಂದು ಮಂದಿರ ವಿರೋಧಿಗಳ ಕಿವಿ ಹಿಂಡಿದ್ದಾರೆ. ರಾಮಮಂದಿರ ಮತ್ತು ಅಯೋಧ್ಯೆ ನಗರ ನಿರ್ಮಾಣದ ಕಲ್ಪನೆ ಬಿಚ್ಚಿಟ್ಟಿದ್ದಾರೆ. ಪೇಜಾವರ ಶ್ರೀಗಳ ಜೊತೆಗಿನ ಸಂದರ್ಶನ ಇಲ್ಲಿದೆ.

    ಶತಮಾನದ ಕನಸು ಈಡೇರುತ್ತಿದೆ, ಸನ್ಯಾಸಿಯಾಗಿ ಏನನ್ನಿಸುತ್ತಿದೆ?
    ಪ್ರಪಂಚದಾದ್ಯಂತ ಇರುವ ಭಗವದ್ಭಕ್ತರ, ಆಸ್ತಿಕರ, ರಾಮನ ಆರಾಧಕರ ಕನಸು ನನಸಾಗುತ್ತಿದೆ. ಇಷ್ಟು ವರ್ಷಗಳು ಕಾದ ನಮ್ಮ ಭಾವನೆಗಳು ತಣಿಯುವಂತಹ ಕಾಲ ಬಂದಿದೆ. ಯಾವತ್ತೋ ಅವಶ್ಯವಾಗಿ ಆಗಬೇಕಾದ ಕಾರ್ಯ ಇವತ್ತು ಆಗುತ್ತಿದೆ ಎಂದು ಸಂತುಷ್ಟರಾಗಿದ್ದೇವೆ.

    ಶಿಲಾನ್ಯಾಸದಲ್ಲಿ ತಮ್ಮ ಭಾಗವಹಿಸುವಿಕೆ ಆಗುತ್ತಿಲ್ಲವಂತೆ?
    ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಎನ್ನುವುದು ಬಹಳ ದೊಡ್ಡ ಕಾರ್ಯ. ಚಾತುರ್ಮಾಸ್ಯ ವ್ರತಾಚರಣೆ ಇರುವುದರಿಂದ ನಾವು ನೇರವಾಗಿ ಅಲ್ಲಿಗೆ ಹೋಗಿ ಶಿಲಾನ್ಯಾಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಲಾನ್ಯಾಸ ಕಾರ್ಯಕ್ರಮ ಸಾಂಗವಾಗಿ ನಿರ್ವಿಘ್ನವಾಗಿ ನಡೆಯಲಿ ಎಂದು ಇಲ್ಲಿಂದಲೇ ಪ್ರಾರ್ಥಿಸುತ್ತೇನೆ. ಮಂದಿರ ನಿರ್ಮಾಣದ ಕಾರ್ಯ ಶೀಘ್ರ ಆಗಲಿ. ಸಹಕಾರಗಳು ಜೊತೆಗೂಡಿ ಬರಲಿ ಎಂದು ಪ್ರಾರ್ಥಿಸುತ್ತೇವೆ. ಉಡುಪಿಯ ನೀಲಾವರ ಗೋಶಾಲೆ ಮತ್ತು ದೇಗುಲದ ಆವರಣದಲ್ಲಿ ಲಕ್ಷ ತುಳಸಿ ಅರ್ಚನೆಯನ್ನು ಶ್ರೀಕೃಷ್ಣ ಮತ್ತು ಶ್ರೀರಾಮನ ಮುಂಭಾಗದಲ್ಲಿ ನಡೆಸುವುದು ನಮ್ಮ ಇಚ್ಛೆ. ವಿಷ್ಣು ಸಹಸ್ರನಾಮದ ಪಾರಾಯಣ ಇತರ ಪೂಜೆ ಮಹಾ ಪೂಜೆಯನ್ನು ನೆರವೇರಿಸಲು ನಾವು ನಿರ್ಧರಿಸಿದ್ದೇವೆ.

    ವಿಶ್ವೇಶತೀರ್ಥ ಶ್ರೀಗಳು ಇದ್ದಿದ್ದರೆ ಹೇಗಿರುತ್ತಿತ್ತು?
    ಗುರುಗಳು ತನ್ನ ಇಡೀ ಸನ್ಯಾಸ ಜೀವನವನ್ನೇ ರಾಮ ಮಂದಿರ ನಿರ್ಮಾಣಕ್ಕಾಗಿ ಮುಡಿಪಾಗಿಟ್ಟವರು. ಮಂದಿರ ಆಗಬೇಕು ಎಂಬ ಆಸೆ ಇಟ್ಟುಕೊಂಡವರು. ಅದಕ್ಕೋಸ್ಕರ ಹಲವಾರು ದಶಕಗಳ ಕಾಲ ಹೋರಾಟ ಮಾಡಿದವರು. ರಾಮಮಂದಿರದ ಹೋರಾಟಕ್ಕೆ ಅವರು ಅವತಾರ ಎತ್ತಿದ್ದರು ಎನ್ನುವಷ್ಟು ವಿಶೇಷ ರೀತಿಯಲ್ಲಿ ನಮ್ಮ ಗುರುಗಳು ತೊಡಗಿಸಿಕೊಂಡಿದ್ದರು. ರಾಮ ಮಂದಿರದ ಬೀಗ ಮುದ್ರೆಯನ್ನು ತೆರೆಯುವ ಹಕ್ಕೊತ್ತಾಯವನ್ನು ಸಿದ್ಧಪಡಿಸಿದ್ದೇ ಉಡುಪಿಯ ಧರ್ಮ ಸಂಸತ್ತಿನಲ್ಲಿ. ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಮುತುವರ್ಜಿಯಲ್ಲಿ ಧರ್ಮ ಸಂಸತ್ತು ಉಡುಪಿಯ ನೆಲದಲ್ಲಿ ಸಾಂಗವಾಗಿ ನಡೆದಿದೆ. ಗುರುಗಳ ಸಂಕಲ್ಪ ಮತ್ತು ವಿಶೇಷ ಪ್ರಯತ್ನದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ.

    ಅಯೋಧ್ಯೆಯಲ್ಲಿ ಏನೇನಿರುತ್ತೆ?
    ಶ್ರೀರಾಮನಿಗೆ ಮಂದಿರ, ಶ್ರೀರಾಮನ ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆಗಳು ಅಯೋಧ್ಯೆಯಲ್ಲಿ ಇರಲಿದೆ. ಮಂದಿರಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಬೇಕಾದ ಸೌಕರ್ಯಗಳು, ರಾಮನ ಚರಿತ್ರೆಯನ್ನು ವಿವರಿಸುವಂತಹ ವಿಶೇಷ ಭವನಗಳು, ರಾಮ ಮಂದಿರದ ಜೊತೆಗೆ ಅಯೋಧ್ಯ ನಗರದ ನಿರ್ಮಾಣ ಕೂಡ ಆಗಲಿದೆ.

    ಧನ ಸಂಗ್ರಹ ವಿಚಾರ ಚರ್ಚೆಗೀಡಾಗಿದೆ?
    ರಾಮ ಮಂದಿರಕ್ಕೆ ಯಾರು ಹಣ ಕೊಡಬೇಕು, ಯಾರು ಕೊಡಬಾರದು ಎಂಬುದನ್ನು ಭಕ್ತರೇ ತೀರ್ಮಾನಿಸಲಿ. ಹೊರಗಿನವರು ಅದಕ್ಕೆ ಬಾಯಿ ಹಾಕಿದರೆ ಏನೂ ಉಪಯೋಗ ಇಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಇಂತಿಷ್ಟೇ ಹಣ ಕೊಡಿ, ಕಡ್ಡಾಯವಾಗಿ ಕೊಡಲೇಬೇಕು ಎಂದು ನಾವು ನಿಯಮ ಮಾಡಿಲ್ಲ. ಮಂದಿರಕ್ಕೆ ಭಕ್ತರು ಕೊಡುವಾಗ ಯಾರು, ಯಾಕೆ ಸ್ವೀಕಾರ ಮಾಡದೇ ಸುಮ್ಮನಿರಬೇಕು? ರಾಮ ಮಂದಿರ ಅನ್ನುವಂಥದ್ದು ಒಬ್ಬರ ಸ್ವತ್ತಲ್ಲ. ಎಲ್ಲರ ಪಾಲು ಸೇರಿದರೆ ಅದು ರಾಮಮಂದಿರ.

    ಪ್ರಧಾನಿ ಮೋದಿ ಪಾಲ್ಗೊಳ್ಳುವುದು, ನೇರಪ್ರಸಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ?
    ಒಂದು ಒಳ್ಳೆಯ ಕೆಲಸ ಆಗುತ್ತದೆ ಎಂದರೆ ವಿರೋಧ ಸಾಮಾನ್ಯ. ಕೆಲವರು ಮಾಡಿದ ವಿರೋಧವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ರಾಮ ಮಂದಿರಕ್ಕೆ ಸರ್ವೋಚ್ಛ ನ್ಯಾಯಾಲಯವೇ ತೀರ್ಪು ಕೊಟ್ಟಿದೆ. ಅದನ್ನು ಮತ್ತೆ ವಿರೋಧಿಸುತ್ತಾರೆ ಎಂದರೆ ಇದಕ್ಕಿಂತ ಮೂರ್ಖತನ ಬೇರಿಲ್ಲ. ಇಂತಹ ಹೇಳಿಕೆಗಳನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮ ಕೆಲಸವನ್ನು ಮಾಡಿಕೊಂಡು ಮುಂದುವರಿಯುತ್ತೇವೆ.

    ರಾಮಮಂದಿರ ನಿರ್ಮಾಣವಾದರೆ ಸಂತರ ದೊಡ್ಡ ಬೇಡಿಕೆ ಈಡೇರಿದಂತೆಯೇ?
    ಈಗ ಆಗಿರುವ ಕಾರ್ಯ ಅತ್ಯಲ್ಪ. ಆಗಬೇಕಾದ ಕಾರ್ಯ ಬಹಳಷ್ಟಿವೆ. ಗೋ ಸೇವೆಯ ಕಾರ್ಯ ಇಡೀ ದೇಶಾದ್ಯಂತ ಆಗಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು. ಗೋವಿನ ಮೇಲಿನ ಅಪಚಾರವೂ ಕಡಿಮೆಯಾಗಬೇಕು. ಊರು, ಕೇರಿ, ಮನೆ, ಮಠ, ದೇವಸ್ಥಾನದಲ್ಲಿ ಪುಟ್ಟ ಗೋಶಾಲೆ ನಿರ್ಮಾಣ ಆಗಬೇಕು. ಊರಿಗೊಂದು ದೇವಾಲಯ ಎಷ್ಟು ಮುಖ್ಯವೋ ಊರಿಗೊಂದು ಗೋಶಾಲೆಯು ಅಷ್ಟೇ ಮುಖ್ಯ.

  • ರಾಮ ಮಂದಿರ ಶಿಲಾನ್ಯಾಸ- ಬೆಳಗ್ಗೆ 11.15ಕ್ಕೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮನ

    ರಾಮ ಮಂದಿರ ಶಿಲಾನ್ಯಾಸ- ಬೆಳಗ್ಗೆ 11.15ಕ್ಕೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮನ

    – ಐವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖ ಗಣ್ಯರ ಪಟ್ಟಿಯನ್ನು ಸಹ ಮಾಡಿಕೊಳ್ಳಲಾಗಿದೆ. ಈ ಪ್ರಕಾರ ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 11.15ಕ್ಕೆ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಪ್ರಧಾನಿ ಮೋದಿ ಬೆಳಗ್ಗೆ 11.15ಕ್ಕೆ ಅಯೋಧ್ಯೆಗೆ ಆಗಮಿಸಿ ಸುಮಾರು ಮೂರು ಗಂಟೆಗಳ ಸಮಯವನ್ನು ಕಳೆಯಲಿದ್ದು, ಮಧ್ಯಾಹ್ನ 2ಕ್ಕೆ ಮತ್ತೆ ದೆಹಲಿಗೆ ಮರಳಿದ್ದಾರೆ ಎನ್ನಲಾಗಿದೆ.

    ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಹನುಮಾನ್ ಗರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆಯೋಜಕರು ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಸೇರಿ ವೇದಿಕೆ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ರಾಮ ಮಂದಿರ ಟ್ರಸ್ಟ್‍ನ ಮುಖ್ಯಸ್ಥ ಮಹಾಂತ್ ನೃತ್ಯಗೋಪಾಲ್ ದಾಸ್ ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ ಎಂದಿದ್ದಾರೆ.

    ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದು, ಉತ್ತರ ಪ್ರದೇಶ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರು ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಿದ್ಧತೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

  • ರಾಮ ಮಂದಿರ ಶಿಲಾನ್ಯಾಸದ ದಿನ ಉಗ್ರರ ದಾಳಿ ಸಾಧ್ಯತೆ- ಗುಪ್ತಚರ ದಳ ಎಚ್ಚರಿಕೆ

    ರಾಮ ಮಂದಿರ ಶಿಲಾನ್ಯಾಸದ ದಿನ ಉಗ್ರರ ದಾಳಿ ಸಾಧ್ಯತೆ- ಗುಪ್ತಚರ ದಳ ಎಚ್ಚರಿಕೆ

    – ಜಮ್ಮು ಕಾಶ್ಮೀರ, ಅಯೋಧ್ಯೆಯಲ್ಲಿ ದಾಳಿಗೆ ಪ್ಲಾನ್
    – 370ನೇ ವಿಧಿ ರದ್ದತಿಗೆ ವರ್ಷ ತುಂಬುವ ಹಿನ್ನೆಲೆ ದಾಳಿಗೆ ಸಂಚು

    ನವದೆಹಲಿ: ಜಮ್ಮು ಕಾಶ್ಮೀರ ಹಾಗೂ ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸದ ವೇಳೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.

    ಆಗಸ್ಟ್ 5 ರಂದು ಜಮ್ಮು ಕಾಶ್ಮೀರ ಹಾಗೂ ರಾಮ ಮಂದಿರ ಶಿಲಾನ್ಯಾಸ ನಡೆಯುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ದಳ ತಿಳಿಸಿದೆ. ಅಲ್ಲದೆ ಅಂದು 370ನೇ ವಿಧಿ ರದ್ದು ಪಡಿಸಿ ಒಂದು ವರ್ಷವಾಗಲಿದೆ. ಹೀಗಾಗಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ವಾರಗಳ ಹಿಂದೆ ಗುಪ್ತಚರ ದಳಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಆಕಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ.

    ಹಲವು ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್ ಅಫ್ಘಾನಿಸ್ಥಾನದ ಜಲಾಲಾಬಾದ್‍ನಲ್ಲಿ ತರಬೇತಿ ನೀಡುತ್ತಿದ್ದು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಪಡಿಸಿ ವರ್ಷ ತುಂಬುತ್ತಿರುವ ಹಿನ್ನೆಲೆ ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಗುಪ್ತಚರ ದಳ ವಿವರವಾದ ಮಾಹಿತಿ ನೀಡಿದ ಬಳಿಕ ಅಯೋಧ್ಯೆ, ದೆಹಲಿ ಹಾಗೂ ಜಮ್ಮು ಕಾಶ್ಮೀರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಜಮ್ಮು ಕಾಶ್ಮೀರದಲ್ಲಿ ದಾಳಿ ನಡೆಸಲು ಜಾಲಾಬಾದ್‍ನಲ್ಲಿ ಸುಮಾರು 20 ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಎಸ್‍ಎಸ್‍ಜಿ ಸೇನೆ ತರಬೇತಿ ನೀಡಿದೆ. ಮೇ 26 ಹಾಗೂ ಮೇ 29ರ ಮಧ್ಯೆ ದಾಳಿ ನಡೆಸುವ ಸಾಧ್ಯತೆ ಇತ್ತು. ಆದರೆ ಭದ್ರತಾ ಸಿಬ್ಬಂದಿ ಹೆಚ್ಚು ಎಚ್ಚರಿಕೆ ವಹಿಸಿದ್ದರಿಂದ ದಾಳಿ ನಡೆಸಲು ಸಾಧ್ಯವಾಗಿಲ್ಲ ಎಂದು ಗುಪ್ತಚರ ದಳ ತಿಳಿಸಿದೆ.

    ಪಾಕಿಸ್ತಾನ ಸೇನೆ 20-25 ಉಗ್ರರನ್ನು ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮೂಲಕ ಹಾಗೂ ಇನ್ನೂ ಐದಾರು ಜನರನ್ನು ಭಾರತ-ನೇಪಾಳ ಗಡಿಯಿಂದ ಒಳ ನುಸುಳಲು ಸಹಾಯ ಮಾಡುತ್ತಿದೆ. ಹೀಗಾಗಿ ಎಲ್ಲ ಏಜೆನ್ಸಿಗಳನ್ನು ಹಾಗೂ ಪೊಲೀಸರನ್ನು ಎಸ್‍ಒಪಿಯಂತೆ ಎಚ್ಚರದಿಂದಿರಲು ಸೂಚಿಸಲಾಗಿದೆ.

    ಆಗಸ್ಟ್ 5ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ. ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ ಆರ್‍ಎಸ್‍ಎಸ್‍ನ ಹಲವು ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ.