Tag: ರಾಮ ಮಂದಿರ

  • ರಾಮ ಮಂದಿರದ ಬಗ್ಗೆ ವಿವಾದಿತ ಟ್ವೀಟ್- ಅಸಾದುದ್ದೀನ್ ಓವೈಸಿ ವಿರುದ್ಧ ದೂರು ದಾಖಲು

    ರಾಮ ಮಂದಿರದ ಬಗ್ಗೆ ವಿವಾದಿತ ಟ್ವೀಟ್- ಅಸಾದುದ್ದೀನ್ ಓವೈಸಿ ವಿರುದ್ಧ ದೂರು ದಾಖಲು

    – ದೆಹಲಿ ಪೊಲೀಸರಿಗೆ ಹಿಂದೂ ಸೇನೆ ದೂರು

    ನವದೆಹಲಿ: ಶ್ರೀ ರಾಮ ಜನ್ಮ ಭೂಮಿ ಕುರಿತು ವಿವಾದಾತ್ಮಕ ಪೋಸ್ಟ್ ಮಾಡಿದ ಎಐಎಂಐಎಂ ಮುಖಂಡ ಹಾಗೂ ಸಂಸದ ಅಸಾದುದ್ದಿನ್ ಓವೈಸಿ ವಿರುದ್ಧ ಹಿಂದೂ ಸೇನೆ ದೂರು ದಾಖಲಿಸಿದೆ.

    ಅಸಾದುದ್ದಿನ್ ಓವೈಸ್ ಹಾಗೂ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್(ಎಐಎಂಪಿಎಲ್‍ಬಿ) ವಿರುದ್ಧ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ನವದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಮ್ ಲಲ್ಲಾ ಕುರಿತು ಎಐಎಂಐಎಂ ಮುಖ್ಯಸ್ಥ ಹಾಗೂ ಎಐಎಂಪಿಎಲ್‍ಬಿ ದ್ವೇಷ ಹಾಗೂ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ದೇವರ ಆಸ್ತಿ ಪೂರ್ತಿ ಹಿಂದೂಗಳಿಗೆ ಸೇರಿದ್ದು, ಆದರೆ ಓವೈಸಿ ಹಾಗೂ ಕೆಲ ಮುಸ್ಲಿಂ ನಾಯಕರು ಸುಪ್ರೀಂ ಕೋರ್ಟ್‍ನ 2019ರ ತೀರ್ಪನ್ನು ತಿರಸ್ಕರಿಸುತ್ತಿದ್ದು, ಅಯೋಧ್ಯೆಯ ರಾಮ ಲಲ್ಲಾ ಜಾಗ ಹಿಂದೂ ಧರ್ಮದ್ದು ಎಂಬುದನ್ನು ಒಪ್ಪುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಅಯೋಧ್ಯೆಯ ರಾಮ ಲಲ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡುವ ದಿನ ಅಸಾದುದ್ದೀನ್ ಓವೈಸಿ ಮಾಡಿದ ಟ್ವೀಟ್ ಉಲ್ಲೇಖಿಸಿ ವಿಷ್ಣು ಗುಪ್ತಾ ದೂರು ಸಲ್ಲಿಸಿದ್ದಾರೆ. ಆಗಸ್ಟ್ 5ರಂದು ಓವೈಸಿ ಟ್ವೀಟ್ ಮಾಡಿದ್ದು, ಬಾಬ್ರಿ ಮಸೀದಿ ಇದೆ, ಮುಂದೆಯೂ ಇರುತ್ತದೆ ಇನ್‍ಷಾಅಲ್ಲಾ ಎಂದು ಬರೆದು ಹ್ಯಾಷ್ ಟ್ಯಾಗ್‍ನೊಂದಿಗೆ ಬಾಬ್ರಿ ಮಸೀದಿ ಝಿಂದಾ ಹೈ ಎಂದು ಬರೆದಿದ್ದರು.

    ಇದರ ಜೊತೆಗೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಾಡಿರುವ ಟ್ವೀಟ್‍ನ್ನು ಸಹ ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಮಾಡಿದ ಕಾರ್ಯ ಇದಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀನಿವಾಸ್ ಅವರಿಗೆ ಸಲ್ಲಿಸಿದ ದೂರಿನಲ್ಲಿ ಗುಪ್ತಾ ಉಲ್ಲೇಖಿಸಿದ್ದಾರೆ.

    ಇಂತಹ ದುರುದ್ದೇಶಪೂರಿತ ಹೇಳಿಕೆ ನೀಡಿರುವ ಅಸಾದುದ್ದೀನ್ ಓವೈಸಿ ಹಾಗೂ ಎಐಎಂಪಿಎಲ್‍ಬಿ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ಮನವಿ ಮಾಡಿದ್ದಾರೆ.

  • ಬಿಲ್ವಪತ್ರೆ ಗಿಡನೆಟ್ಟು ರಾಮಮಂದಿರ ಶಿಲಾನ್ಯಾಸ ಸಂಭ್ರಮಿಸಿದ ಬಾಳ್ಕುದ್ರು ಸ್ವಾಮೀಜಿ

    ಬಿಲ್ವಪತ್ರೆ ಗಿಡನೆಟ್ಟು ರಾಮಮಂದಿರ ಶಿಲಾನ್ಯಾಸ ಸಂಭ್ರಮಿಸಿದ ಬಾಳ್ಕುದ್ರು ಸ್ವಾಮೀಜಿ

    -ಮನೆ ಮನೆಯಲ್ಲಿ ಗಿಡ ನೆಡುವ ಸಂಕಲ್ಪ

    ಉಡುಪಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಶಿಲಾನ್ಯಾಸ ಕಾರ್ಯಕ್ರಮ ಮುಗಿದರು ಆನಂತರದ ಸಂಭ್ರಮಾಚರಣೆ ಕಾರ್ಯಕ್ರಮಗಳು ನಿರಂತರವಾಗಿವೆ.

    ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದಲ್ಲಿ ರಾಮಮಂದಿರ ಶಿಲಾನ್ಯಾಸ ಸಂಭ್ರಮ ಮುಂದುವರಿದಿದೆ. ಶ್ರೀ ಬಾಳ್ಕುದ್ರು ನೃಸಿಂಹಾಶ್ರಮ ಸ್ವಾಮೀಜಿ ಮಠದ ಆವರಣದಲ್ಲಿ ಬಿಲ್ವ ಪತ್ರೆ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಚರಿಸಿದರು. ಭಜರಂಗದಳದ ಕಾರ್ಯಕರ್ತರು ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದರು.

    ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ರಾಮಮಂದಿರ ಹಿಂದುಗಳ ಸಂಕೇತ. ಭರತ ಭೂಮಿಯಲ್ಲಿ ಶ್ರೀರಾಮಚಂದ್ರನಿಗೆ ಎಂದೋ ಮಂದಿರ ನಿರ್ಮಾಣ ಆಗಬೇಕಿತ್ತು. ಎಲ್ಲದಕ್ಕೂ ಒಂದು ಕಾಲ ಕೂಡಿ ಬರಬೇಕಿದೆ. ಮಂದಿರ ನಿರ್ಮಾಣದ ಶಿಲಾನ್ಯಾಸ ಪ್ರಧಾನಿಯವರಿಂದ ಇಂದು ನೆರವೇರಿದೆ. ವಿಶ್ವದ ಹಿಂದುಗಳು ಸಂಭ್ರಮಿಸುವ ಹೆಮ್ಮೆಪಡುವ ಕಾರ್ಯಕ್ರಮ ಇಂದು ನಡೆದಿದೆ ಎಂದರು.

    ಭಜರಂಗದಳ ಮುಖಂಡರು ಕಾರ್ಯಕರ್ತರು ಮಠದ ಆವರಣದಲ್ಲಿ ಬಿಲ್ವ ಪತ್ರದ ಗಿಡ ನೆಟ್ಟರು. ಪ್ರತಿ ಮನೆಯಲ್ಲಿ ಗಿಡ ನೆಡುವ ಸಂಕಲ್ಪ ಮಾಡಲಾಯ್ತು.

  • ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯ ದೇವಾಲಯ – ಭಾಷಣದಲ್ಲಿ ಶ್ರವಣಬೆಳಗೊಳವನ್ನು ಉಲ್ಲೇಖಿಸಿದ ಮೋದಿ

    ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯ ದೇವಾಲಯ – ಭಾಷಣದಲ್ಲಿ ಶ್ರವಣಬೆಳಗೊಳವನ್ನು ಉಲ್ಲೇಖಿಸಿದ ಮೋದಿ

    – ರಾಮನ ಅಸ್ತಿತ್ವವನ್ನು ನಾಶ ಮಾಡುವ ಪ್ರಯತ್ನ ನಡೆದಿತ್ತು
    – ಸುವರ್ಣ ಅಧ್ಯಾಯ ಪ್ರಾರಂಭ

    ಅಯೋಧ್ಯೆ: ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯವಾದ ದೇವಾಲಯ ನಿರ್ಮಾಣವಾಗಲಿದೆ. ಈ ರಾಮಮಂದಿರ ನಮ್ಮ ಸಂಪ್ರದಾಯಗಳ ಆಧುನಿಕ ಸಂಕೇತವಾಗಲಿದೆ. ಇದು ನಮ್ಮ ಭಕ್ತಿಯ, ನಮ್ಮ ರಾಷ್ಟ್ರೀಯ ಭಾವನೆಯ ಸಂಕೇತವಾಗಲಿದೆ. ಈ ದೇವಾಲಯವು ಕೋಟಿ ಜನರ ಸಾಮೂಹಿಕ ನಿರ್ಣಯದ ಶಕ್ತಿಯನ್ನು ಸಂಕೇತ. ಇದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ರಾಮ ಮಂದಿರ ಭೂಮಿಪೂಜೆಯ ಬಳಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ರಾಮನ ಅಸ್ತಿತ್ವವನ್ನು ನಾಶ ಮಾಡುವ ಪ್ರಯತ್ನ ನಡೆದಿತ್ತು. ಆದರೆ ರಾಮ ನಮ್ಮ ಜೊತೆಯಿದ್ದ. ರಾಮನಿಗೆ ಎಲ್ಲ ಪ್ರಜೆಗಳು ಒಂದೇ . ಭಾರತದ ಏಕತೆಯ ಪ್ರತಿರೂಪ ರಾಮ ಎಂದು ಬಣ್ಣಿಸಿದರು.

    ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ. ಕನ್ಯಾಕುಮರಿಯಿಂದ ಕ್ಷೀರಭವಾವನಿಯವರೆಗೆ, ಕೋಟೇಶ್ವರದಿಂದ ಕಾಮಾಖ್ಯದವರೆಗೆ, ಜಗನ್ನಾಥನಿಂದ ಕೇದಾರನಾಥದವರೆಗೆ, ಸೋಮನಾಥದವರೆಗೆ ಕಾಶಿ ವಿಶ್ವನಾಥ್, ಶಿಖರ್ಜಿಯಿಂದ ಶ್ರವಣಬೆಳಗೊಳದವರೆಗೆ …. ಇಂದು ಇಡೀ ದೇಶ, ವಿಶ್ವ ಭಗವಾನ್ ರಾಮನ ಘೋಷಣೆಯಲ್ಲಿ ಮುಳುಗಿದೆ ಎಂದು ಹೇಳಿದರು.

    ಭಾಸ್ಕರ ಸನ್ನಿಧಿಯಲ್ಲಿ ಸರಯೂ ನದಿ ತೀರದಲ್ಲಿ ಸುವರ್ಣ ಅಧ್ಯಾಯ ಪ್ರಾರಂಭಗೊಂಡಿದೆ. ಅಯೋಧ್ಯೆ ರಾಮ ಜನ್ಮಭೂಮಿ ಇವತ್ತು ಮುಕ್ತವಾಗಿದೆ. ಅರ್ಪಣ, ತರ್ಪಣ, ಸಂಘರ್ಷ, ಸಂಕಲ್ಪದ ಕನಸು ಈಗ ನನಸಾಗಿದೆ ಎಂದು ತಿಳಿಸಿದರು.

    ಇಂಡೋನೇಷ್ಯಾದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದರೂ ಅಲ್ಲಿಯೂ ರಾಮಾಯಣವಿದೆ. ಕಾಂಬೋಡಿಯದಲ್ಲಿ ರಾಮನಿದ್ದಾನೆ. ಶ್ರೀಲಂಕಾದಲ್ಲೂ ರಾಮಾಯಣವಿದೆ. ರಾಮನ ಚರಿತ್ರೆಯನ್ನು ನಾವೆಲ್ಲ ಅಧ್ಯಯನ ಮಾಡಬೇಕು. ಶ್ರೀರಾಮನ ಸಾಮಾಜಿಕ ಸಾಮಾರಸ್ಯ ನಮಗೆ ಆದರ್ಶವಾಗಬೇಕು ಎಂದು ಕರೆ ನೀಡಿದರು.

    ಎಲ್ಲರ ಸಹಕಾರದಿಂದ ಈ ದೇವಾಲಯ ನಿರ್ಮಾಣವಾಗುತ್ತಿದೆ. ಇತಿಹಾಸವು ಇಂದು ಕೇವಲ ಸೃಷ್ಟಿಯಾಗುತ್ತಿಲ್ಲ, ಅದು ಸ್ವತಃ ಪುನರಾವರ್ತನೆಯಾಗುತ್ತಿದೆ. ಇಲ್ಲಿ ದೇವಾಲಯ ಮಾತ್ರ ಆರಂಭವಾಗುತ್ತಿಲ್ಲ. ಈ ಪ್ರದೇಶಕ್ಕೆ ಹೊಸ ಆರ್ಥಿಕ ಅವಕಾಶಗಳನ್ನು ತೆರೆಯಲಿದೆ ಎಂದು ಮೋದಿ ಹೇಳಿದರು.

  • ಭೂಮಿ ಪೂಜೆಗೆ ಮುನ್ನ ಹನುಮಂತನ ದೇವಾಲಯದಲ್ಲಿ ಮೋದಿ ಪೂಜೆ

    ಭೂಮಿ ಪೂಜೆಗೆ ಮುನ್ನ ಹನುಮಂತನ ದೇವಾಲಯದಲ್ಲಿ ಮೋದಿ ಪೂಜೆ

    ಅಯೋಧ್ಯೆ: ರಾಮಮಂದಿರ ಭೂಮಿ ಪೂಜೆಗೆ ಆಗಮಿಸಿದ ಮೋದಿ ಆರಂಭದಲ್ಲಿ ಹನುಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

    ಬೆಳಗ್ಗೆ 9:30ಕ್ಕೆ ದೆಹಲಿಯಿಂದ ವಾಯು ಸೇನೆಯ ವಿಮಾನದಲ್ಲಿ ಹೊರಟ ಮೋದಿ 10:25ಕ್ಕೆ ಲಕ್ನೋ ತಲುಪಿದರು. ಬಳಿಕ ಹೆಲಿಕಾಪ್ಟರ್‌ ಸಾಕೇತ್ ಕಾಲೇಜ್‍ನ ಹೆಲಿಪ್ಯಾಡ್‍ನಲ್ಲಿ 11:35ಕ್ಕೆ ಲ್ಯಾಂಡ್‌ ಆದರು.

    ಹೆಲಿಪ್ಯಾಡ್‍ನಿಂದ ನೇರವಾಗಿ ಹನುಮಂತ ದೇವಾಲಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಜೊತೆ ಆಗಮಿಸಿದರು. ಮಾಸ್ಕ್‌ ಧರಿಸಿ ಅರತಿ ಎತ್ತಿದ ಮೋದಿಗೆ ಬೆಳ್ಳಿಯ ಕೀರಿಟ, ರಾಮನಾಮ ಇರುವ ಶಾಲನ್ನು ಹೊದಿಸಿ ಗೌರವಿಸಲಾಯಿತು. ಪೂಜೆಯಲ್ಲಿ ಭಾಗಿಯಾದ ಬಳಿಕ ನೇರವಾಗಿ ಆಯೋಧ್ಯೆ ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ತೆರಳಿದರು.

    ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದ ಬಳಿಕ ರಾಮ ದೇವಸ್ಥಾನದ ಭೂಮಿ ಪೂಜೆಗೆ ಕಾರಿನಲ್ಲಿ ತೆರಳಿದರು.

  • ಒಂದು ಇಂಚಿನ ಚಿನ್ನದ ರಾಮನ ಪ್ರತಿಮೆ ತಯಾರು

    ಒಂದು ಇಂಚಿನ ಚಿನ್ನದ ರಾಮನ ಪ್ರತಿಮೆ ತಯಾರು

    ಚೆನ್ನೈ: ಶತಮಾನಗಳ ಕನಸು ನನಸಾಗುವ ಸಂದರ್ಭದಲ್ಲಿ ಚಿಕಣಿ ಕಲಾವಿದರೊಬ್ಬರು ಚಿನ್ನವನ್ನು ಬಳಸಿ ಭಗವಾನ್ ಶ್ರೀರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ಇಂದು ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಹೀಗಾಗಿ ರಾಮನೂರು ಅಯೋಧ್ಯೆ ನವ ವಧುವಿನಂತೆ ಶೃಂಗಾರಗೊಂಡಿದ್ದು, ದೀಪಾವಳಿಯಂತಹ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಚಿಕಣಿ ಕಲಾವಿದ ಮರಿಯಪ್ಪನ್ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ

    ಮರಿಯಪ್ಪನ್ 1.2 ಗ್ರಾಂ ಚಿನ್ನವನ್ನು ಬಳಸಿ ಇಂದು ಇಂಚಿನ ರಾಮನ ಪ್ರತಿಮೆಯನ್ನು ತನ್ನ ಕೈಯಾರೆ ತಯಾರಿಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದರ ನೆನಪಿಗಾಗಿ ಮರಿಯಪ್ಪನ್ ಚಿನ್ನದ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ.

    https://twitter.com/ANI/status/1290743128681410560

    “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಐತಿಹಾಸಿಕವಾಗಿದೆ. ಈ ಸಂದರ್ಭವನ್ನು ಗುರುತಿಸಲು ನಾನು 1.2 ಗ್ರಾಂ ಚಿನ್ನವನ್ನು ಬಳಸಿ ಭಗವಾನ್ ರಾಮನ ಒಂದು ಇಂಚಿನ ಪ್ರತಿಮೆಯನ್ನು ಮಾಡಿದ್ದೇನೆ. ಇದನ್ನು ರಾಮಮಂದಿರ ಟ್ರಸ್ಟ್‌ಗೆ ಕಳುಹಿಸುತ್ತೇನೆ” ಎಂದು ಮರಿಯಪ್ಪನ್ ಸಂತಸದಿಂದ ಹೇಳಿದ್ದಾರೆ.

  • ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ  ರಾಮ ಮಂದಿರ

    ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ

    ಅಯೋಧ್ಯೆ: ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ.

    ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಈ ಲೆಕ್ಕಾಚಾರವನ್ನು ರಾಮಮಂದಿರ ನಿರ್ಮಾಣಕ್ಕೂ ಮಾಡಲಾಗಿದೆ.

    ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.

  • ‘ಎಲ್ಲರೊಂದಿಗೂ ರಾಮನಿದ್ದಾನೆ, ಜೈ ಶ್ರೀರಾಮ್‌ʼ – ಪ್ರಿಯಾಂಕಾ ಗಾಂಧಿ

    ‘ಎಲ್ಲರೊಂದಿಗೂ ರಾಮನಿದ್ದಾನೆ, ಜೈ ಶ್ರೀರಾಮ್‌ʼ – ಪ್ರಿಯಾಂಕಾ ಗಾಂಧಿ

    ನವದೆಹಲಿ: ಪ್ರಯಾಂಕಾ ಗಾಂಧಿ ವಾದ್ರಾ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸದ ಕುರಿತು ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಭಗವಾನ್ ರಾಮನಿಗೆ ನಮಸ್ಕರಿಸುವ ಮೂಲಕ ಅಯೋಧ್ಯೆ ವಿಷಯವಾಗಿ ಕಾಂಗ್ರೆಸ್ ನಿಲುವನ್ನೇ ಬದಲಿಸಿದ್ದಾರೆ.

    ರಾಮ ಮಂದಿರದ ಶಿಲಾನ್ಯಾಸದ ಹಿನ್ನೆಲೆ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದು, ಶ್ರೀರಾಮ ಸರಳತೆ, ಸಾಹಸ, ಸಂಯಮ, ತ್ಯಾಗ, ವಚನಬದ್ಧತೆ, ದೀನಬಂಧುವಾಗಿದ್ದಾನೆ. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಹೇಳಿದ್ದಾರೆ.

    ಭಗವಾನ್ ರಾಮ ಹಾಗೂ ಸೀತಾ ಮಾತೆಯ ಸಂದೇಶ ಹಾಗೂ ಕೃಪೆಯೊಂದಿಗೆ ರಾಮಲಲ್ಲಾದಲ್ಲಿ ನಡೆಯುತ್ತಿರುವ ಭೂಮಿ ಪೂಜೆ ರಾಷ್ಟ್ರೀಯ ಏಕತೆ, ಬಂಧುತ್ವ ಹಾಗೂ ಸಂಸ್ಕೃತಿಕ ಸಮಾಗಮದ ಅವಕಾಶವಾಗಲಿ. ಹಿಂದಿಯಲ್ಲಿ ಬರೆದಿರುವ ಕಾಂಗ್ರೆಸ್ ಪಕ್ಷದ ಚಿನ್ಹೆ ಇರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಪತ್ರದಲ್ಲಿ ಕೊನೆಗೆ ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ.

    ನಾಳೆ ಪ್ರಧಾನಿ ನರೇಂದ್ರ ಮೋದಿ ಸೇರಿ ನೂರಾರು ಗಣ್ಯರು ಭಾಗವಹಿಸುತ್ತಿರುವ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿಲ್ಲ. ರಾಮ ಮಂದಿರ ನಿರ್ಮಾಣದ ಕುರಿತು ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಿಸಬೇಕು, ಮಸೀದಿಗೆ ಬೇರೆಡೆ ಸ್ಥಳ ನೀಡಬೇಕು ಎಂದು ತಿಳಿಸಿದೆ. ಈ ತೀರ್ಪನ್ನು ಕಾಂಗ್ರೆಸ್ ಸಹ ಸ್ವಾಗತಿಸಿತ್ತು.

    ರಾಮ ಸೇತು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದಾಗ 2007ರಲ್ಲಿ ರಾಮನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ ಎಂದು ಯುಪಿಎ ಸರ್ಕಾರ ಅಫಿಡವಿತ್‌ ಸಲ್ಲಿಸಿತ್ತು. ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತ ಮಾನಸ ಭಾರತದ ಪುರಾತನ ಸಾಹಿತ್ಯವಾಗಿದೆ. ಆದರೆ ಇವುಗಳನ್ನು ಇತಿಹಾಸದ ಆಕಾರ ಗ್ರಂಥ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಫಿಡವಿತ್‌ನಲ್ಲಿ ಉಲ್ಲೇಖಿಸಿತ್ತು.

  • ಬಂಧಿಯಾಗಿದ್ದ ರಾಮ-ಲಕ್ಷ್ಮಣರನ್ನು ಬಿಡುಗಡೆಗೊಳಿಸಿದ ನೆನಪು ಬಿಚ್ಚಿಟ್ಟ ಉಡುಪಿಯ ಪುತ್ತಿಗೆ ಶ್ರೀ

    ಬಂಧಿಯಾಗಿದ್ದ ರಾಮ-ಲಕ್ಷ್ಮಣರನ್ನು ಬಿಡುಗಡೆಗೊಳಿಸಿದ ನೆನಪು ಬಿಚ್ಚಿಟ್ಟ ಉಡುಪಿಯ ಪುತ್ತಿಗೆ ಶ್ರೀ

    ಉಡುಪಿ: ರಾಮಮಂದಿರ ಶಿಲಾನ್ಯಾಸ ಸಂದರ್ಭ ತಮ್ಮ ಮಂದಿರ ಹೋರಾಟದ ನೆನಪುಗಳನ್ನು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಬಿಚ್ಚಿಟ್ಟಿದ್ದಾರೆ.

    ಅನೇಕ ದಶಕಗಳಿಂದ ನಾವೆಲ್ಲರೂ ಒಂದುಗೂಡಿ ಭಾವನಾತ್ಮಕವಾಗಿ ಯಾವ ಹೋರಾಟವನ್ನು ಮಾಡಿದ್ದೇವೊ ಅದೀಗ ಕೈಗೂಡಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ದಶಕಗಳಿಂದ ರಾಮ ಮಂದಿರದ ಚಳುವಳಿಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿದ್ದೆವು.

    ರಾಮಲಲ್ಲಾನ ವಿಗ್ರಹ ಬೀಗಮುದ್ರೆಯೊಂದಿಗೆ ಬಂಧಿಯಾಗಿತ್ತು. ಆ ಬೀಗಮುದ್ರೆ ಒಡೆಯುವ ವೇಳೆ ನಾನೂ ಪೇಜಾವರ ಶ್ರೀವಿಶ್ವೇಶತೀರ್ಥರ ಜೊತೆ ಹಾಜರಿದ್ದೆ. ಕಲ್ಲಿನಿಂದ ಬೀಗ ಒಡೆಯಲು ಜಜ್ಜುವಾಗ ತಪ್ಪಿ ಹೋಗುತ್ತಿತ್ತು. ಕೊನೆಗೆ ನಾನು ಕೈಯಲ್ಲಿ ಬೀಗ ಹಿಡಿದೆ. ಯಾರೋ ಭಕ್ತರು ಒಡೆದರು, ರಾಮ ದೇವರು ಬಂಧಮುಕ್ತರಾದರು. ಇದನ್ನು ಕಣ್ತುಂಬಿಕೊಂಡ ಕ್ಷಣ ಈಗಲೂ ಹಚ್ಚ ಹಸುರಾಗಿದೆ. ಆಗ ಮೊಳಗಿದ ರಾಮ ಘೋಷ ಮತ್ತೆಂದೂ ಕೇಳಿಲ್ಲ ಎಂದರು.

    ಅಯೋಧ್ಯೆಯಲ್ಲಿ ಮುಂದೆ ರಾಮನ ವಿಗ್ರಹ ಪ್ರತಿಷ್ಠಾಪನೆಯ ವೇಳೆಯಲ್ಲೂ ಪೇಜಾವರ ಶ್ರೀಗಳೊಂದಿಗೆ ಇದ್ದೆ. ಅನೇಕ ದಶಕಗಳಿಂದ ಭಾವನಾತ್ಮಕ ಹೋರಾಟ ಈಗ ಫಲಿಸುತ್ತಿದೆ. ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಪುತ್ತಿಗೆ ಮಠದಲ್ಲೂ ರಾಷ್ಟ್ರೀಯ ವಿಚಾರ ಸಂಕೀರಣ, ರಾಮಮಂದಿರ ಕುರಿತಾದ ಅನೇಕ ಸಭೆಗಳು ನಡೆದಿತ್ತು. ರಾಮಮಂದಿರ ನಿರ್ಮಾಣ ಅನೇಕ ಕಾಲದ ಆಕಾಂಕ್ಷೆ, ಸಂಕಲ್ಪ ಈಡೇರುತ್ತಿರುವುದು ಸಂತಸವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಭೂಮಿ ಪೂಜೆ ನಡೆಯುವಾಗ ರಾಮ ದೇವರ ವಿಶೇಷ ಅರ್ಚನೆ ಮಾಡುತ್ತೇವೆ. ಲಕ್ಷ ತುಳಸಿ ಅರ್ಚಿಸುವ ಮೂಲಕ ರಾಮನ ಪೂಜೆ ನಡೆಸ್ತೇವೆ ಎಂದು ಮಾಹಿತಿ ನೀಡಿದರು.

    ಅಳಿಲು ಕೂಡ ರಾಮಸೇತು ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ್ದಂತೆ, ರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಸೇವೆಯನ್ನು ಅರ್ಪಿಸಬೇಕು. ರಾಮಮಂದಿರ ಭಕ್ತರ ಭಕ್ತಿಯ ಪ್ರತೀಕವಾಗಿ ವಿರಾಜಮಾನವಾಗಲಿ ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.

  • ಲ್ಯಾಂಡ್‌ ಆದ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ಹೋಗ್ತಿರೋದು ಯಾಕೆ?

    ಲ್ಯಾಂಡ್‌ ಆದ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ಹೋಗ್ತಿರೋದು ಯಾಕೆ?

    ಅಯೋಧ್ಯೆ: ಬುಧವಾರ ರಾಮ ದೇವಾಲಯದ ಭೂಮಿ ಪೂಜೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ತೆರಳಿ ಆಂಜನೇಯನಿಗೆ ಪೂಜೆ ಮಾಡಲಿದ್ದಾರೆ.

    ಬುಧವಾರ ಬೆಳಗ್ಗೆ 11.15ಕ್ಕೆ ಸಾಕೇತ್ ಕಾಲೇಜ್‍ನ ಹೆಲಿಪ್ಯಾಡ್‍ಗೆ ಮೋದಿ ದೆಹಲಿಯಿಂದ ಆಗಮಿಸಲಿದ್ದಾರೆ. ಬಳಿಕ ಹೆಲಿಪ್ಯಾಡ್‍ನಿಂದ ನೇರವಾಗಿ ಹನುಮಂತ ದೇವಾಲಯಕ್ಕೆ ತೆರಳಲಿದ್ದಾರೆ. ಇಲ್ಲಿ 7 ನಿಮಿಷಗಳ ಕಾಲ ಪೂಜೆಯಲ್ಲಿ ಭಾಗಿಯಾದ ಬಳಿಕ ರಾಮಜನ್ಮಭೂಮಿಗೆ ಗೇಟ್ ನಂ.3ರ ಮೂಲಕ ಆಗಮಿಸಲಿದ್ದಾರೆ.

    ಕಾರ್ಯಕ್ರಮ ಆಯೋಜನೆಗೊಂಡಿರುವ ಸ್ಥಳಕ್ಕೆ ನೇರವಾಗಿ ಮೋದಿ ತೆರಳಬಹದುಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಹನುಮಂತ ದೇವಾಲಯ ಅರ್ಚಕರಾಗಿರುವ ಮಾಧವನ್‌ ದಾಸ್‌ ಉತ್ತರ ನೀಡಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದ ಬಳಿಕ ರಾಮ ದೇವಸ್ಥಾನದ ಭೂಮಿ ಪೂಜೆಗೆ ತೆರಳುತ್ತಿದ್ದಾರೆ ಎಂದು ಅವರು ತಿಳಿಸಿದರು.

    ಭೇಟಿಯ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ಬಂದಿರುವ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ. ಯಾರೂ ಪ್ರಧಾನಿಯನ್ನು ಸ್ಪರ್ಶಿಸುವಂತಿಲ್ಲ ಮತ್ತು ಪ್ರಸಾದ ನೀಡುವಂತಿಲ್ಲ ಎಂದು ಮಾಧವನ್‌ ದಾಸ್‌ ಹೇಳಿದರು.

    ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

    25 ನಿಮಿಷಗಳ ಕಾಲ ನಡೆಯಲಿರುವ ಪೂಜೆ ನಡೆಯಲಿದ್ದು, ಭೂಮಿ ಪೂಜೆ ಬಳಿಕ 45 ನಿಮಿಷ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸರಯೂ ನದಿ ಬಳಿ ಮೋದಿ ತೆರಳಲಿದ್ದಾರೆ. ಒಟ್ಟು 2 ಗಂಟೆ 15 ನಿಮಿಷಕ್ಕೂ ಅಧಿಕ ಕಾಲ ಅಯೋಧ್ಯೆಯಲ್ಲಿ ಮೋದಿ ಇರಲಿದ್ದಾರೆ.

  • ರಾಮ ಮಂದಿರ ಶಿಲನ್ಯಾಸ- ನಾಳೆ ಬೆಂಗಳೂರು, ಮಂಗಳೂರಿನಲ್ಲಿ ಹೈ ಅಲರ್ಟ್

    ರಾಮ ಮಂದಿರ ಶಿಲನ್ಯಾಸ- ನಾಳೆ ಬೆಂಗಳೂರು, ಮಂಗಳೂರಿನಲ್ಲಿ ಹೈ ಅಲರ್ಟ್

    – ಸೆಕ್ಷನ್ 144 ಜಾರಿ, ಸಂಘಟನೆಗಳ ಮೇಲೆ ನಿಗಾ

    ಬೆಂಗಳೂರು/ಮಂಗಳೂರು: ಆಗಸ್ಟ್ 5ರಂದು ಅಂದರೆ ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಧಾನಿ ಮೋದಿ ಸಹ ಭಾಗವಹಿಸುತ್ತೊದ್ದಾರೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅದೇ ರೀತಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಕಟ್ಟೆಚ್ಚರವಹಿಸಲಾಗಿದ್ದು, ಇಂದು ರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಲ್ಲಿರಲಿದೆ. ಅಲ್ಲದೆ ಕೆಲ ಸಂಘಟನೆ, ಹೋರಾಟಗಾರರ ಮೇಲೆ ನಿಗಾ ವಹಿಸಲಾಗಿದೆ. ಮೆರವಣಿಗೆ, ವಿಜಯೋತ್ಸವ, ಪ್ರತಿಭಟನೆಗೆ ಅನುಮತಿ ಇಲ್ಲ. ಕೋಮು ಸೌಹಾರ್ಧತೆಗೆ ಧಕ್ಕೆ ತರುವವರು ಕಂಡುಬಂದರೆ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಯಾವುದೇ ದೇವಸ್ಥಾನ, ಮಸೀದಿಗಳಲ್ಲಿ ಬಾವುಟ ಕಟ್ಟುವಂತಿಲ್ಲ. ಅಲ್ಲದೆ ಜನನಿಬಿಡ ಪ್ರದೇಶ, ಮಾಲ್, ದೇವಸ್ಥಾನ, ಮೆಜೆಸ್ಟಿಕ್, ಮಾರ್ಕೆಟ್ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ.

    ಹಿಂದೂಪರ ಸಂಘಟನೆ, ಹಿಂದೂಯೇತರ ಸಂಘಟನೆಗಳ ಮೇಲೆ ನಿಗಾ ವಹಿಸಲಾಗಿದೆ. ಸಿಎಆರ್ ಮತ್ತು ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆಯಾಗಿ ಸಿಲಿಕಾನ್ ಸಿಟಿಯಲ್ಲಿ ನಾಳೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

    ಇತ್ತ ಮಂಗಳೂರಿನಲ್ಲೂ ನಾಳೆ 144 ಸೆಕ್ಷನ್ ಜಾರಿಯಾಗಲಿದೆ. ಒಂದು ಸಂಘಟನೆಯಿಂದ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದ್ದು, ಇದಕ್ಕೆ ವಿರುದ್ಧವಾಗಿ ಮತ್ತೊಂದು ಸಂಘಟನೆಯಿಂದ ಪ್ರತಿಭಟನೆಗೆ ಪ್ಲ್ಯಾನ್ ನಡೆದಿದೆ. ಈ ಹಿನ್ನೆಲೆ ಮುಂದಾಗುನ ಅನಾಹುತ ತಡೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.