Tag: ರಾಮ ಮಂದಿರ

  • ರಾಮ ಮಂದಿರ ನಿರ್ಮಾಣ- ಆದಿಚುಂಚನಗಿರಿಯಲ್ಲಿ ನಿಧಿ ಸಮರ್ಪಣ ಸಂತ ಸಮಾವೇಶ

    ರಾಮ ಮಂದಿರ ನಿರ್ಮಾಣ- ಆದಿಚುಂಚನಗಿರಿಯಲ್ಲಿ ನಿಧಿ ಸಮರ್ಪಣ ಸಂತ ಸಮಾವೇಶ

    ಮಂಡ್ಯ: ಆದಿಚುಂಚನಗಿರಿಯಲ್ಲಿ ಮಹಾಸಂಸ್ಥಾನ ಮಠದಿಂದ ಆಯೋಜಿಸಲಾಗಿದ್ದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಸಂತ ಸಮಾವೇಶ ನಡೆಸಲಾಯಿತು. ವಿವಿಧ ಮಠಾಧೀಶರು ನಿಧಿ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಸಿದರು.

    ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಭಾಗವಹಿಸಿ ನಿಧಿ ಸಂಗ್ರಹದ ಬಗ್ಗೆ ಪರಸ್ಪರ ಚರ್ಚೆ ನಡೆಸಿದರು.

    ಈ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಮ್ಮ ಮಠ ಮತ್ತು ಎಲ್ಲ ಶಾಖಾ ಮಠಗಳು ರಾಮಮಂದಿರ ನಿರ್ಮಾಣಕ್ಕೆ ಸಂಪೂರ್ಣವಾಗಿ ಸಹಕರಿಸುತ್ತವೆ ಎಂದರು. ಪೇಜಾವರ ಶ್ರೀಗಳು ಮಾತನಾಡಿ, ಶ್ರೀರಾಮನ ಗುಣಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಪ್ರಚಾರಕ ಸುಧೀರ್ ಮಾತನಾಡಿ, ರಾಮಜನ್ಮಭೂಮಿ 492 ವರ್ಷಗಳ ಹೋರಾಟ. ಈ ಅಭಿಯಾನ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟರು.

    ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹಾಗೂ ವಿಶ್ವ ಹಿಂದೂ ಪರಿಷದ್ ನ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರಕ ಬಸವರಾಜು ಇದ್ದರು.

  • ಬಳ್ಳಾರಿಯ ಕಿಷ್ಕಿಂಧೆಯಲ್ಲಿ ತಲೆ ಎತ್ತಲಿದೆ ವಿಶ್ವದ ಎತ್ತರದ ಹನುಮಾನ್ ಪ್ರತಿಮೆ

    ಬಳ್ಳಾರಿಯ ಕಿಷ್ಕಿಂಧೆಯಲ್ಲಿ ತಲೆ ಎತ್ತಲಿದೆ ವಿಶ್ವದ ಎತ್ತರದ ಹನುಮಾನ್ ಪ್ರತಿಮೆ

    – ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ

    ಲಕ್ನೋ: ಹನುಮ ಜನ್ಮಭೂಮಿಯಾದ ಬಳ್ಳಾರಿ ಜಿಲ್ಲೆಯ ಕಿಷ್ಕಿಂದೆಯಲ್ಲಿ ವಿಶ್ವದ ಅತೀ ಎತ್ತರದ ಹನುಮಂತನ ಪ್ರತಿಮೆಯನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದು ಹನುಮಂತ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದ ಆನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ಕುರಿತು ಮಾತನಾಡಿದ ಅವರು, 215 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, 1,200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಹನುಮಂತನ ಪ್ರತಿಮೆಯಾಗಲಿದೆ. ಬಳ್ಳಾರಿಯ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರಾದ್ಯಂತ ರಥಯಾತ್ರೆ ಮಾಡುವ ಮೂಲಕ ಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಇದೇ ವೇಳೆ ರಾಮಜನ್ಮಭೂಮಿಯಲ್ಲಿ ರಥ ನಿರ್ಮಾಣದ ಕುರಿತು ಮಾತನಾಡಿರುವ ಅವರು, ರಾಮಜನ್ಮ ಭೂಮಿಯಲ್ಲಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ 80 ಅಡಿ ಎತ್ತರದ ರಥ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ವರ್ಷದಲ್ಲಿ ರಥ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬೋನೊ ವಿನ್ಯಾಸದ ಕಲ್ಪನೆಗಳನ್ನು ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಇದನ್ನು ರಾಮ ಮಂದಿರ ನಿರ್ಮಾಣದ ಅಂತಿಮ ಮಾಸ್ಟರ್ ಪ್ಲಾನ್‍ನಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಟ್ರಸ್ಟ್ ಹೇಳಿದೆ. ಧಾರ್ಮಿಕ ಯಾತ್ರೆ, ಆಚರಣೆಗಳು, ಸಂಸ್ಕೃತಿ ಹಾಗೂ ವೈಜ್ಞಾನಿಕ ಯೋಜನೆಗಳ ಪ್ರಮುಖ ಅಂಶಗಳ ಆಲೋಚನೆಗಳನ್ನು ತಿಳಿಸುವಂತೆ ಹೇಳಿದೆ.

  • ಎಲ್ & ಟಿ, ಟಾಟಾ ಕಂಪನಿಗೆ ರಾಮಮಂದಿರ ನಿರ್ಮಾಣ ಜವಾಬ್ದಾರಿ: ಪೇಜಾವರ ಶ್ರೀ

    ಎಲ್ & ಟಿ, ಟಾಟಾ ಕಂಪನಿಗೆ ರಾಮಮಂದಿರ ನಿರ್ಮಾಣ ಜವಾಬ್ದಾರಿ: ಪೇಜಾವರ ಶ್ರೀ

    ಉಡುಪಿ: ಅಯೋಧ್ಯೆ ಭಗವಾನ್ ಶ್ರೀ ರಾಮ ದೇವರ ಭವ್ಯ ಮಂದಿರದ ನಿರ್ಮಾಣ ಕಾರ್ಯವನ್ನು ಎಲ್ ಆ್ಯಂಡ್ ಟಿ ಮತ್ತು ಟಾಟಾ ಸಂಸ್ಥೆಗೆ ಒಪ್ಪಿಸಿರುವುದಾಗಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಉತ್ತರ ಭಾರತದ ಪ್ರವಾಸದಲ್ಲಿರುವ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಅಯೋಧ್ಯಗೆ ಭೇಟಿ ನೀಡಿದ್ದಾರೆ. ಸಂತ ಸಮಾವೇಶದಲ್ಲಿ ಭಾಗಿಯಾದ ವಿಶ್ವಪ್ರಸನ್ನ ತೀರ್ಥರು, ರಾಮಮಂದಿರ ನಿರ್ಮಾಣದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿ ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ. ಕಾಮಗಾರಿಯ ಮೇಲುಸ್ತುವಾರಿಯನ್ನು ಟಾಟಾ ಕಂಪನಿ ಗೆ ನೀಡಲಾಗಿದೆ.

    ಈ ಎರಡು ಜವಾಬ್ದಾರಿಯನ್ನು ಎರಡು ಕಂಪನಿಗಳು ಒಪ್ಪಿಕೊಂಡಿದೆ. ರಾಮಮಂದಿರದ ಕಾರ್ಯದರ್ಶಿ ಚಂಪತ್ ರಾಯ್ ಟ್ರಸ್ಟ್ ಕಡೆಯಿಂದ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.

    ಪೇಜಾವರ ಮಠದ ಶಾಖಾ ಮಠವಾದ ಮಧ್ವಾಶ್ರಮ ಪ್ರಮೋದ ವನದಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದ ಟ್ರಸ್ಟ್‍ನ ಕಾರ್ಯದರ್ಶಿ ಚಂಪತ್ ರಾಯ್, ವಿಶ್ವಸ್ಥರಾದ ಡಾ. ಅನಿಲ್ ಮಿಶ್ರಾ, ದಿನೇಶ್‍ಚಂದ್ರ, ನಿವೃತ್ತ ಮುಖ್ಯ ಇಂಜಿನಿಯರ್ ಜಗದೀಶ್ ಅವರು ಟ್ರಸ್ಟ್‍ನ ಅನೌಪಚಾರಿಕ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ತಿಳಿಸಿ, ಇಂದು ನಡೆಯುವ ಔಪಚಾರಿಕ ಸಭೆಗೆ ಆಹ್ವಾನ ನೀಡಿದರು.

  • ಕಬ್ಬಿಣದ ಬಳಕೆ ಇಲ್ಲ – ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

    ಕಬ್ಬಿಣದ ಬಳಕೆ ಇಲ್ಲ – ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

    ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ರಾಮನ ದೇವಾಲಯ ನಿರ್ಮಾಣ ಕಾರ್ಯ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ.

    ರಾಮ ಮಂದಿರ ದೇವಾಲಯ ಸಂಬಂಧ ಮಾಹಿತಿ ನೀಡಲೆಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಟ್ವಿಟ್ಟರ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ.

     

    ರಾಮ ಮಂದಿರ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ(ಸಿಬಿಆರ್‌ಐ), ಮದ್ರಾಸ್‌ ಐಐಟಿ ಮತ್ತು ಎಲ್‌ ಆಂಡ್‌ ಟಿ ಕಂಪನಿಯ ಎಂಜಿನಿಯರ್‌ಗಳು ಈಗ ಮಂದಿರ ನಿರ್ಮಾಣವಾಗುವ ಭಾಗದಲ್ಲಿರುವ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ. 36-40 ತಿಂಗಳ ಒಳಗಡೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಟ್ವೀಟ್‌ ಮಾಡಿ ತಿಳಿಸಿದೆ.

    ಎರಡನೇ ಟ್ವೀಟ್‌ನಲ್ಲಿ, ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ಮಂದಿರವನ್ನು ನಿರ್ಮಿಸಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳ ಸಂಭವಿಸಿದರೂ ಅದನ್ನು ತಡೆಯಬಲ್ಲ ಸಾಮರ್ಥ್ಯ ಇರುವ ದೇವಾಲಯವನ್ನು ಕಟ್ಟಲಾಗುತ್ತದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಕೆ ಮಾಡುವುದಿಲ್ಲ ಎಂದು ತಿಳಿಸಿದೆ.

    ಈ ಟ್ವೀಟ್‌ಗೆ ಜನರು ಕಬ್ಬಿಣ ಇಲ್ಲದೇ ದೇವಾಲಯವನ್ನು ಹೇಗೆ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಳುತ್ತಿದ್ದಾರೆ. ಇದಕ್ಕೆ ಕೆಲವರು ಹಿಂದಿನ ಕಾಲದ ದೇವಾಲಯದಲ್ಲಿ ಕಬ್ಬಿಣದ ಬಳಕೆ ಇರಲಿಲ್ಲ. ಕಬ್ಬಿಣದ ಬಳಕೆ ಮಾಡಿದರೆ ಹಲವು ವರ್ಷಗಳ ಬಳಿಕ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಈ ಹಿಂದೆ ನಿರ್ಮಾಣವಾದ ದೇವಾಲಯಗಳಲ್ಲಿ ಕಬ್ಬಿಣ ಇರಲಿಲ್ಲ. ಕಲ್ಲುಗಳನ್ನು ಬಳಸಿ ನಿರ್ಮಿಸಿದ ದೇವಾಲಯ ನೂರಾರು ವರ್ಷಗಳ ಕಾಲ ಬಾಳಿಕೆ ಬಂದಿದೆ ಎಂದು ಉತ್ತರಿಸಿದ್ದಾರೆ.

    ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ.

    ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಈ ಲೆಕ್ಕಾಚಾರವನ್ನು ರಾಮಮಂದಿರ ನಿರ್ಮಾಣಕ್ಕೂ ಮಾಡಲಾಗಿದೆ.

    ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.

    ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲನ್ಯಾಸ ಮಾಡಿದ್ದರು‌.

  • ಪ್ರಧಾನಿಯಾಗಿ ಮತ್ತೊಂದು ದಾಖಲೆ ನಿರ್ಮಿಸಿದ ಮೋದಿ

    ಪ್ರಧಾನಿಯಾಗಿ ಮತ್ತೊಂದು ದಾಖಲೆ ನಿರ್ಮಿಸಿದ ಮೋದಿ

    – ಅಟಲ್ ಬಿಹಾರಿ ವಾಜಪೇಯಿಯನ್ನು ಹಿಂದಿಕ್ಕಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ವೃತ್ತಿಜೀವನದಲ್ಲಿ ಗುರುವಾರ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು 2,268 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ(67) ವಾಜಪೇಯಿ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನಿಗಳ ಪೈಕಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

    ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅತಿ ಹೆಚ್ಚು ಅವಧಿ ಪ್ರಧಾನಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ನೆಹರು 16 ವರ್ಷ ಹಾಗೂ 286 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇವರ ಮಗಳು ಇಂದಿರಾ ಗಾಂಧಿ ಎರಡನೇ ಸ್ಥಾನದಲ್ಲಿದ್ದು, 11 ವರ್ಷ ಹಾಗೂ 59 ದಿನ ಆಡಳಿತ ನಡೆಸಿದ್ದಾರೆ.

    ಇದಾದ ಬಳಿಕ ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 3ನೇ ಸ್ಥಾನದಲ್ಲಿದ್ದು, ಇವರು 10 ವರ್ಷ ಹಾಗೂ 4 ದಿನಗಳ ಕಾಲ ಪ್ರಧಾನಿಯಾಗಿದ್ದರು.

    ನರೇಂದ್ರ ಮೋದಿಯವರು ಪ್ರಧಾನಿಯಾಗಿ 6 ವರ್ಷ ಪೂರೈಸಿದ್ದು, ಬಿಜೆಪಿ ಭರ್ಜರಿ 303 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಮೋದಿ ಎರಡನೇ ಬಾರಿ ಪ್ರಧಾನಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಎನ್‍ಡಿಎ ಕೂಟ ಒಟ್ಟು 353 ಸ್ಥಾನಗಳಲ್ಲಿ ಜಯಗಳಿಸಿದೆ.

    ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ 3 ದಾಖಲೆಗಳನ್ನು ಮಾಡಿದ್ದಾರೆ. ರಾಮಜನ್ಮ ಭೂಮಿಗೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ. ಅಲ್ಲದೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮಾರ್ಚ್ 24ರಂದು 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಭಾಷಣ ಎಂಬ ದಾಖಲೆಯನ್ನು ಇದು ಬರೆದಿತ್ತು.

    ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಟ್ವಿಟ್ಟರ್ ನಲ್ಲಿ 50 ಮಿಲಿಯನ್(5 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಜನ ಫಾಲೋವರ್ಸ್ ಹೊಂದಿರುವ ಭಾರತದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯ ಟ್ವಿಟ್ಟರ್ ಖಾತೆಯನ್ನು 60.9 ಮಿಲಿಯನ್(6.10 ಕೋಟಿ) ಜನ ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ಪ್ರಧಾನಿಗಳ ಅಧೀಕೃತ ಟ್ವಿಟ್ಟರ್ ಖಾತೆ 37.9 ಮಿಲಿಯನ್(3.07 ಕೋಟಿ) ಹಿಂಬಾಲಕರನ್ನು ಹೊಂದಿದೆ.

  • ರಾಮನ ಅಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ – ಸಿಟಿ ರವಿ

    ರಾಮನ ಅಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ – ಸಿಟಿ ರವಿ

    ಬೆಂಗಳೂರು: ರಾಮನ ಅಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಕೈ ನಾಯಕರನ್ನು ಕಾಲೆಳೆದಿದ್ದಾರೆ.

    ಟ್ವೀಟ್‌ ಮಾಡಿದ ರವಿಯವರು, ರಾಮ ಮಂದಿರ ಭೂಮಿ ಪೂಜೆಯ ನೇರ ಪ್ರಸಾರ ನೋಡಿದವರು 16 ಕೋಟಿ ಜನ. ಅಂದರೆ ಕಾಂಗ್ರೆಸ್ ಪಕ್ಷ 2019 ರಲ್ಲಿ ಪಡೆದ ಮತಗಳಿಗಿಂತ ಶೇ.6ರಷ್ಟು ಹೆಚ್ಚು ಎಂದು ಬರೆದುಕೊಂಡಿದ್ದಾರೆ.

    ಕಳೆದ ವಾರ ಉಡುಪಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ. ಬಿಜೆಪಿಯವರು ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹರಿಹಾಯ್ದಿದ್ದರು. ಇದನ್ನೂ ಓದಿ: ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

    ರಾಮ ಮಂದಿರದ ಉದ್ದೇಶದ ದುರುಪಯೋಗ ಬೇಡ. ರಾಮ ಮಂದಿರ ನಿರ್ಮಾಣವನ್ನು ಸ್ವಾಗತಿಸುತ್ತೇವೆ. ಭವ್ಯವಾದ ರಾಮ ಮಂದಿರ ನಿರ್ಮಾಣ ಆಗಲಿ. ಮಂದಿರಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಉದ್ದೇಶ ದುರುಪಯೋಗ ಆಗುವುದು ಬೇಡ ಎಂದು ಟಾಂಗ್ ನೀಡಿದ್ದರು.

    ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಸ್ವತಃ ಸರ್ಕಾರದ ಆರು ಮಂದಿ ಕ್ಯಾಬಿನೆಟ್ ಸಚಿವರು ಸೋಂಕಿಗೆ ಒಳಗಾಗಿದ್ದಾರೆ. ಒಬ್ಬರು ಸಾವನ್ನಪ್ಪಿರುವ ಮಾಹಿತಿ ಇದೆ. ಅಲ್ಲದೆ ಸ್ವಾಮೀಜಿಯೊಬ್ಬರು ಸಹ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಈ ಸಮಯದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಅಡಿಗಲ್ಲು ಕಾರ್ಯಕ್ರಮ ಬೇಕಿತ್ತಾ ಎಂದು ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಚಿಕ್ಕಬಳ್ಳಾಪುರದಲ್ಲಿ ಪ್ರಶ್ನಿಸಿದ್ದರು.

    ರಾಮ ಮಂದಿರದ ಶಿಲಾನ್ಯಾಸದ ಹಿನ್ನೆಲೆ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿ, ಶ್ರೀರಾಮ ಸರಳತೆ, ಸಾಹಸ, ಸಂಯಮ, ತ್ಯಾಗ, ವಚನಬದ್ಧತೆ, ದೀನಬಂಧುವಾಗಿದ್ದಾನೆ. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ. ಜೈಶ್ರೀರಾಮ್‌ ಎಂದು ಹೇಳಿದ್ದರು.

    ರಾಮ ಸೇತು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದಾಗ 2007ರಲ್ಲಿ ರಾಮನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ ಎಂದು ಯುಪಿಎ ಸರ್ಕಾರ ಅಫಿಡವಿತ್‌ ಸಲ್ಲಿಸಿತ್ತು. ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತ ಮಾನಸ ಭಾರತದ ಪುರಾತನ ಸಾಹಿತ್ಯವಾಗಿದೆ. ಆದರೆ ಇವುಗಳನ್ನು ಇತಿಹಾಸದ ಆಕಾರ ಗ್ರಂಥ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಫಿಡವಿತ್‌ನಲ್ಲಿ ಉಲ್ಲೇಖಿಸಿತ್ತು.

  • ಅಯೋಧ್ಯೆಯಲ್ಲಿ ರಾಜ್ಯಕ್ಕೆ 2 ಎಕರೆ ಭೂಮಿ ನೀಡಿ- ಸಿಎಂ ಯೋಗಿ ಆದಿತ್ಯನಾಥ್‍ಗೆ ಬಿಎಸ್‍ವೈ ಪತ್ರ

    ಅಯೋಧ್ಯೆಯಲ್ಲಿ ರಾಜ್ಯಕ್ಕೆ 2 ಎಕರೆ ಭೂಮಿ ನೀಡಿ- ಸಿಎಂ ಯೋಗಿ ಆದಿತ್ಯನಾಥ್‍ಗೆ ಬಿಎಸ್‍ವೈ ಪತ್ರ

    ಬೆಂಗಳೂರು: ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದು ಅಭಿನಂದಿಸಿದ್ದಾರೆ.

    ಅಭಿನಂದನೆ ಸಲ್ಲಿಸುವುದರ ಜೊತೆಗೆ ರಾಜ್ಯದ ಭಕ್ತರಿಗಾಗಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅಯೋಧ್ಯೆಗೆ ಕರ್ನಾಟಕದಿಂದ ಸಾಕಷ್ಟು ಭಕ್ತರು ಆಗಮಿಸುತಿರುತ್ತಾರೆ. ಈ ಹಿನ್ನೆಲೆ ಅಯೋಧ್ಯೆಯಲ್ಲಿ 2 ಎಕರೆ ಭೂಮಿಯನ್ನು ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಅಯೋಧ್ಯೆಯಲ್ಲಿ ಕರ್ನಾಟಕ ಸರ್ಕಾರ ಯಾತ್ರಿ ನಿವಾಸ ಕಟ್ಟಬೇಕು ಎಂಬ ಉದ್ದೇಶ ಇಟ್ಟುಕೊಂಡಿದೆ. ಹೀಗಾಗಿ ಅಯೋಧ್ಯೆಯಲ್ಲಿ 2 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು. ಸರ್ಕಾರ ಈ ಕುರಿತು ಸಿದ್ಧತೆ ಮಾಡಿಕೊಳ್ಳಲಿದೆ ಎಂದು ತಮ್ಮ ಪತ್ರದಲ್ಲಿ ಯಡಿಯೂರಪ್ಪ ವಿವರಿಸಿದ್ದಾರೆ.

  • ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

    ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

    ಲಕ್ನೋ: ಮುಖ್ಯಮಂತ್ರಿಯಾಗಿ ನಾನು ತಾರತಮ್ಯ ಮಾಡುವುದಿಲ್ಲ. ಆದರೆ ಹಿಂದೂವಾಗಿ ಅಯೋಧ್ಯೆಯ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

    ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮ ಯಶಸ್ವಿಯಾಗಲು ಯೋಗಿ ಆದಿತ್ಯನಾಥ್‌ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದು ಯೋಗಿ ಆದಿತ್ಯನಾಥ್‌ ಅವರನ್ನು ಸಂದರ್ಶನ ಮಾಡಿದೆ.

    ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ನೀವು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಅದೇ ರೀತಿಯಾಗಿ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸಿದರೆ ನೀವು ಭಾಗವಹಿಸುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದನ್ನೂ ಓದಿ: ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

    ಈ ಪ್ರಶ್ನೆಗೆ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡುತ್ತಾರೆ ಎಂದು ನಿಮಗೆ ಅನಿಸುತ್ತೆಯೇ ಎಂದು ಮರು ಪ್ರಶ್ನೆ ಹಾಕಿದ ಯೋಗಿ, ನನ್ನನ್ನು ಆಹ್ವಾನಿಸುವ ಬಗ್ಗೆ ನನಗೆ ಆಗುವ ಸಮಸ್ಯೆಗಿಂತ ಅವರಿಗೆ ಜಾಸ್ತಿ ಸಮಸ್ಯೆಯಾಗಬಹುದು. ಈ ವಿಚಾರದಲ್ಲಿ ನನಗೆ ಯಾವುದೇ ಗೊಂದಲವಿಲ್ಲ ಎಂದು ಉತ್ತರಿಸಿದರು.

    ಮುಂದುವರಿಸಿದ ಅವರು ಮುಖ್ಯಮಂತ್ರಿಯಾಗಿ ನಾನು ಯಾವುದೇ ಜಾತಿ, ಧರ್ಮದ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಆದರೆ ಒಬ್ಬ ಯೋಗಿ ಮತ್ತು ಹಿಂದೂವಾಗಿ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಯಾಕೆಂದರೆ ನನ್ನ ಧರ್ಮವನ್ನು ಪಾಲಿಸುವ ಹಕ್ಕು ನನಗಿದೆ ಎಂದು ಹೇಳಿದರು.

    ನಮ್ಮ ದೇಶದಲ್ಲಿ ಗಲಭೆಗಳು, ನಕ್ಸಲಿಸಂ, ಭಯೋತ್ಪಾದನೆಗೆ ಮೂಲ ಕಾರಣ ಹುಸಿ ಜಾತ್ಯಾತೀತತೆ. ಹುಸಿ ಜಾತ್ಯಾತೀತರೆಲ್ಲ ಹಿಂದೂಗಳನ್ನು ವಿರೋಧಿಸುತ್ತಿದ್ದಾರೆ. ಆದರೆ ರಾಮ ಮಂದಿರ ದೇವಾಲಯದ ಆಂದೋಲನ ಹುಸಿ ಜಾತ್ಯಾತೀತ ವ್ಯಕ್ತಿಗಳ ಮುಖವಾಡವನ್ನು ಕಳಚಿದೆ ಎಂದರು.

    ಈ ವೇಳೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಬಗ್ಗೆ ಮಾತನಾಡಿ, ಪ್ರತಿ ವರ್ಷ ನಡೆಯುವ ದೀಪೋತ್ಸವನ್ನು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಬಗ್ಗೆ ನಾನು ಅವರಲ್ಲಿ ಪ್ರಶ್ನಿಸಿದಾಗ ಯಾವುದೇ ಧರ್ಮದ ಆಚರಣೆಯನ್ನು ಆಚರಿಸುವ ಹಕ್ಕು ನಮಗಿದೆ. ಯಾರೂ ಪೂರ್ವಜರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಉತ್ತರಿಸಿದರು ಎಂದು ಯೋಗಿ ಹೇಳಿದರು.

    ಮುಸ್ಲಿಂ ಸಮುದಾಯದಿಂದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಇಕ್ಬಾಲ್‌ ಅನ್ಸಾರಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಸುಪ್ರೀಂ ತೀರ್ಪನ್ನು ಅವರು ಸ್ವಾಗತಿಸಿದ್ದು ಸಂತೋಷ ತಂದಿದೆ. ಇವರನ್ನು ನೋಡಿ ಇತರರು ಕಲಿಯುವ ವಿಚಾರ ಬಹಳಷ್ಟಿದೆ. ರಾಮ ಜನ್ಮಭೂಮಿ ಪ್ರಕರಣದ ಸಂಬಂಧ ಕೋರ್ಟ್‌ನಲ್ಲಿ ಅವರು ಹೋರಾಟ ಮಾಡಿದ್ದರೂ ಅವರಿಗೆ ಅಯೋಧ್ಯೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಉತ್ತರಿಸಿದರು.

    ಹಿಂದೂ ವ್ಯಕ್ತಿಯೊಬ್ಬ ಪಾಕಿಸ್ತಾನ ಅಥವಾ ಅಘ್ಫಾನಿಸ್ಥಾನದಲ್ಲಿ ದೇವಾಲಯ ಸಂಬಂಧ ಹೋರಾಟ ನಡೆಸಿದ್ದರೆ ಆತ ಸುರಕ್ಷಿತವಾಗಿರುತ್ತಿದ್ದನೇ ಎಂದು ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದರು.

  • ಹೊರಗಡೆ ದೇವರಿಲ್ಲ, ದೇವರು ನಮ್ಮ ಒಳಗಡೆಯೇ ಇದ್ದಾನೆ : ರಮ್ಯಾ

    ಹೊರಗಡೆ ದೇವರಿಲ್ಲ, ದೇವರು ನಮ್ಮ ಒಳಗಡೆಯೇ ಇದ್ದಾನೆ : ರಮ್ಯಾ

    ಬೆಂಗಳೂರು: ನಿಜವಾದ ಸಂತೋಷ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ ಎಂದು ಕಾಂಗ್ರೆಸ್‌ ಮಾಜಿ ಸಂಸದೆ, ನಟಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಸಕ್ರಿಯವಾಗಿರುವರಮ್ಯಾ ಅವರು ರಾಮ ಮಂದಿರ ವಿಚಾರವಾಗಿ ಮೊದಲ ಬಾರಿಗೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    https://www.facebook.com/ramyaactressofficial/posts/10158218252710196

    ಹಿಂದೂಗಳು ಸಂತೋಷದಿಂದ ರಾಮ ಮಂದಿರ ನಿರ್ಮಾಣ ಮಾಡಲು ಮುಂದಾಗುತ್ತಿರುವುದನ್ನು ಕಂಡು ನನಗೆ ಸಂತಸವಿದೆ. ಮುಸ್ಲಿಮರು ಸಂತೋಷದಿಂದ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದನ್ನು ನೋಡಿ ನನಗೆ ಸಂತಸವಿದೆ. ಆದರೆ ಇಬ್ಬರೂ ಸಂತೋಷವಾಗಿರಲು ಅಥವಾ ದೇವರನ್ನು ಅರಿತುಕೊಳ್ಳಲು ದೇವಾಲಯ ಅಥವಾ ಮಸೀದಿ ಅಗತ್ಯವಿಲ್ಲ ಎಂದು ಅವರಿಗೆ ತಿಳಿದಾಗ ನನಗೆ ಹೆಚ್ಚು ಸಂತೋಷವಾಗುತ್ತದೆ. ನಿಜವಾದ ಸಂತೋಷ ಏಕತೆ/ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

    ರಾಜಕೀಯಕ್ಕೆ ಬಲಿಯಾಗಬೇಡಿ. ರಾಜಕೀಯ ಶಕ್ತಿ ಮತ್ತು ನಿಯಂತ್ರಣಕ್ಕಾಗಿ ಸೃಷ್ಟಿಸುವ ಬಿಕ್ಕಟ್ಟಿಗೆ ಬಲಿಯಾಗಬೇಡಿ. ಪ್ರಶ್ನಿಸುವ ಮೂಲಕ ಉತ್ತುಂಗಕ್ಕೆ ಏರಿ ಎಂದು ಹೇಳಿದ್ದಾರೆ.

    ಬುಧವಾರ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿದ್ದರು. ಗರ್ಭಗುಡಿ ನಿರ್ಮಾಣವಾಗುವ ಜಾಗದಲ್ಲಿ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ಭೂಮಿ ಪೂಜೆ ಕಾಯಕ್ರಮ ನಡೆದಿತ್ತು.

  • ‘ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ’ – ಪಾಕ್‌ ಮಾಜಿ ಸ್ಪಿನ್ನರ್‌ ಕನೇರಿಯಾ

    ‘ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ’ – ಪಾಕ್‌ ಮಾಜಿ ಸ್ಪಿನ್ನರ್‌ ಕನೇರಿಯಾ

    ಇಸ್ಲಾಮಾಬಾದ್‌: ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್‌ ದಾನಿಶ್ ಕನೇರಿಯಾ ಸಂಭ್ರಮ ವ್ಯಕ್ತಪಡಿಸಿದ್ದಾರೆ.

    ಬುಧವಾರ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿದ ಹಿನ್ನೆಲೆಯಲ್ಲಿ ಮೂರು ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ಇಂದು ವಿಶ್ವಾದ್ಯಂತ ಹಿಂದೂಗಳಿಗೆ ಐತಿಹಾಸಿಕ ದಿನ. ದೇವರು ರಾಮ ನಮ್ಮ ಆದರ್ಶ. ರಾಮನ ಸೌಂದರ್ಯವು ಅವನ ಹೆಸರಿನಲ್ಲಿ ಅಲ್ಲ, ಅವನ ಪಾತ್ರದಲ್ಲಿದೆ. ದುಷ್ಟರ ಮೇಲಿನ ವಿಜಯದ ಸಂಕೇತ ರಾಮ. ಇಂದು ಪ್ರಪಂಚದಾದ್ಯಂತ ಸಂತೋಷದ ಅಲೆ ಇದೆ. ಇದು ಬಹಳ ತೃಪ್ತಿಯ ಕ್ಷಣವಾಗಿದೆ ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ.

    ಇನ್ನೊಂದು ಟ್ವೀಟ್‌ನಲ್ಲಿ, ನಾವು ಸುರಕ್ಷಿತವಾಗಿದ್ದೇವೆ ಮತ್ತು ನಮ್ಮ ಧಾರ್ಮಿಕ ನಂಬಿಕೆಗಳೊಂದಿಗೆ ಯಾರಿಗೂ ಯಾವುದೇ ಸಮಸ್ಯೆ ಇರಬಾರದು. ಪ್ರಭು ಶ್ರೀರಾಮನ ಜೀವನವು ನಮಗೆ ಏಕತೆ ಮತ್ತು ಸಹೋದರತೆಯನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.

    ಪಾಕ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ ಕನೇರಿಯಾ ಆಗಿದ್ದಾರೆ. ದಾನಿಶ್ ಅವರಿಗೂ ಮುನ್ನ ಅವರ ಸಹೋದರ ಸಂಬಂಧಿ ಅನಿಲ್ ದಲಪತ್ ಆಡಿದ್ದರು. ದಲಪತ್ ಪಾಕ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿದ್ದರು. ಈ ಹಿಂದೆ ದಾನಿಶ್ ವೃತ್ತಿಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದು, ಅಫ್ರಿದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.