Tag: ರಾಮ ಮಂದಿರ

  • ಮುಸ್ಲಿಂ ರಾಷ್ಟ್ರೀಯ ಮಂಚ್ ನಾಯಕಿಯಿಂದ ರಾಮ ಮಂದಿರಕ್ಕೆ 1 ಲಕ್ಷ ದೇಣಿಗೆ

    ಮುಸ್ಲಿಂ ರಾಷ್ಟ್ರೀಯ ಮಂಚ್ ನಾಯಕಿಯಿಂದ ರಾಮ ಮಂದಿರಕ್ಕೆ 1 ಲಕ್ಷ ದೇಣಿಗೆ

    ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿವಾರ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಇದರ ತಮಿಳುನಾಡು ರಾಜ್ಯಾಧ್ಯಕ್ಷೆ ಫಾತಿಮಾ ಆಲಿ ಶ್ರೀ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ನಿಧಿ ಸಂಗ್ರಹ‌ ಅಭಿಯಾನಕ್ಕೆ ಒಂದು ಲಕ್ಷ ರೂ. ನೀಡಿದ್ದಾರೆ.

    ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಮ್‌, ಕ್ರೈಸ್ತರು ಸೇರಿದಂತೆ ಇತರ ಧರ್ಮದ ಮುಖಂಡರು ದೇಣಿಗೆ ನೀಡುತ್ತಿದ್ದಾರೆ.

    ಈ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗ್ರಾಪಂ ಮಾಜಿ ಸದಸ್ಯ ಮುಸ್ತಫೀಜ್‍ಉಲ್ಲಾ ಹಾಗೂ ಜಾಮೀಯಾ ಮಸೀದಿಯ ಕಮಿಟಿಯಿಂದ ರಾಮ ಮಂದಿರ ನಿರ್ಮಾಣ ಮಾಡಲು ಹಣವನ್ನು ದೇಣಿಗೆ ನೀಡಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಯುವ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ಕೈಜೋಡಿಸಿದ್ದು, ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.

    ಫೆ.7 ರಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಯೋಜಿಸಿದ್ದ ಸಭೆಯಲ್ಲಿ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು, ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಭಾಗಿಯಾಗಿದ್ದರಲ್ಲದೆ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಅಳಿಲು ಸೇವೆ ಮಾಡುವುದಾಗಿ ಭರವಸೆ ನೀಡಿದ್ದರು.

  • ನಿಧಿ ಸಮರ್ಪಣೆ – ರಾಜ್ಯಪಾಲ ವಿಆರ್‌ ವಾಲಾರನ್ನು ಭೇಟಿಯಾದ ಹಿಂದೂ ಮುಖಂಡರು

    ನಿಧಿ ಸಮರ್ಪಣೆ – ರಾಜ್ಯಪಾಲ ವಿಆರ್‌ ವಾಲಾರನ್ನು ಭೇಟಿಯಾದ ಹಿಂದೂ ಮುಖಂಡರು

    ಬೆಂಗಳೂರು: ರಾಜ್ಯಪಾಲರಾದ ವಜುಭಾಯ್ ವಾಲಾ ಅವರನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಇಂದು ಹಿಂದೂ ಸಂಘಟನೆಯ ಮುಖಂಡರು ಭೇಟಿ ಮಾಡಿದರು.

    ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕರಾದ ಸೂರ್ಯನಾರಾಯಣ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಹಾಗೂ ಬೆಂಗಳೂರು ಉತ್ತರ ವಿಭಾಗ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷರಾದ ಮುನಿರಾಜು ಅವರು ಭೇಟಿ ಮಾಡಿದರು.

    ಈ ಸಂದರ್ಭದಲ್ಲಿ ರಾಜ್ಯಪಾಲರು ತಾವು ರಾಮ ಮಂದಿರದ ಕಾರಸೇವೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ವ್ಯಕ್ತಪಡಿಸಿದರು. ಇದೊಂದು ರಾಷ್ಟ್ರ ಕಾರ್ಯ, ರಾಮ ಮಂದಿರ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ರಾಮ ಮಂದಿರ ನಿರ್ಮಾಣ – 1 ಕೋಟಿ ರೂ. ನೀಡಿ ಕೈಜೋಡಿಸಿದ ಕ್ರೈಸ್ತ ಸಮುದಾಯ

    ರಾಮ ಮಂದಿರ ನಿರ್ಮಾಣ – 1 ಕೋಟಿ ರೂ. ನೀಡಿ ಕೈಜೋಡಿಸಿದ ಕ್ರೈಸ್ತ ಸಮುದಾಯ

    – ಡಿಸಿಎಂ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸಭೆ

    ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ಕೈಜೋಡಿಸಿದ್ದು, ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಯೋಜಿಸಿದ್ದ ಸಭೆಯಲ್ಲಿ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು, ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಭಾಗಿಯಾಗಿದ್ದರಲ್ಲದೆ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಅಳಿಲು ಸೇವೆ ಮಾಡುವುದಾಗಿ ಭರವಸೆ ನೀಡಿದರು.

    ಬಿಜೆಪಿ ಎಲ್ಲರ ಪಕ್ಷ:
    ಭಾರತೀಯ ಜನತಾ ಪಕ್ಷವು ಅಲ್ಪಸಂಖ್ಯಾತರ ವಿರುದ್ಧವಿರುವ ಪಕ್ಷ ಎಂಬುದು ಅಕ್ಷರಶಃ ಸುಳ್ಳು. ಅನೇಕ ವರ್ಷಗಳಿಂದ ಇಂಥ ಅಪಪ್ರಚಾರವನ್ನು ನಡೆಸಿಕೊಂಡು ಬರಲಾಗಿದೆ. ಬಿಜೆಪಿಯು ದೇಶದ ಸರ್ವರನ್ನೂ ಒಳಗೊಂಡಿರುವ ಪಕ್ಷ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌” ಎಂಬುದು ಬಿಜೆಪಿಯ ಮಂತ್ರವಾಗಿದೆ. ಎಲ್ಲರನ್ನೂ ಒಳಗೊಂಡು ದೇಶವನ್ನು ಮುನ್ನಡೆಸುವುದು ಪಕ್ಷದ ಗುರಿಯಾಗಿದೆ. ಕೇಂದ್ರದಲ್ಲಿರಬಹುದು ಅಥವಾ ರಾಜ್ಯದಲ್ಲಿರಬಹುದು ಈ ತತ್ವದಡಿಯಲ್ಲೇ ಆಡಳಿತ ನಡೆಯುತ್ತಿದೆ ಎಂದು ಡಿಸಿಎಂ ನುಡಿದರು.

    ನಾವೆಲ್ಲರೂ ಒಂದೇ ಎಂದ ಕೊಲಾಸೋ: 
    ಕ್ರೈಸ್ತ ಸಮುದಾಯದ ಎಲ್ಲ ಗಣ್ಯರ ಪರವಾಗಿ ಸಭೆಯಲ್ಲಿ ಮಾತನಾಡಿದ ಉದ್ಯಮಿ ರೊನಾಲ್ಡ್‌ ಕೊಲಾಸೋ ಅವರು; “ಕ್ರೈಸ್ತ ಸಮುದಾಯ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿಂದಿನಿಂದಲೂ ರಾಜ್ಯ-ದೇಶದ ಪ್ರತಿ ಆಗುಹೋಗುಗಳಿಗೆ ಈ ಸಮುದಾಯ ಸ್ಪಂದಿಸುತ್ತಲೇ ಬಂದಿದೆ. ಶಿಕ್ಷಣ, ಧಾರ್ಮಿಕ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಸೇವೆಯಲ್ಲಿ ನಿರತವಾಗಿದೆ” ಎಂದರು.

    “ವೈಯಕ್ತಿಕವಾಗಿ ನನ್ನ ಮಟ್ಟಿಗೆ ಹೇಳುವುದಾದರೆ, 36 ದೇವಾಲಯಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಕೈಜೋಡಿಸಿದ್ದೇನೆ. ದೇಗುಲ ಮಾತ್ರವಲ್ಲದೆ ಚರ್ಚು, ಮಸೀದಿ ನಿರ್ಮಾಣಕ್ಕೂ ಕೈಲಾದ ನೆರವು ನೀಡಿದ್ದೇನೆ. ಇದೆಲ್ಲವನ್ನು ಮಾಡಿದ್ದು ಪರಸ್ಪರ ಸೌಹಾರ್ದತೆಗಾಗಿ ಮತ್ತೂ ನಾವೆಲ್ಲೂ ಒಂದು ಎಂಬ ಕಾರಣಕ್ಕಾಗಿ. ರಾಜ್ಯದಲ್ಲಿ ಕ್ರೈಸ್ತ ಅಭಿವೃದಿ ನಿಗಮ ಸ್ಥಾಪನೆಯಾಗಿದ್ದು, ಅದಕ್ಕೆ 200 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ನಿಜಕ್ಕೂ ಸಂತಸದ ವಿಷಯ” ಎಂದು ಕೊಲಾಸೋ ಹೇಳಿದರು.

    ಇದೇ ವೇಳೆ ಸಂತ ಜೋಸೆಫ್‌ ವಿಶ್ವವಿದ್ಯಾಲಯ ಸ್ಥಾಪನೆಯ ನಿಟ್ಟಿನಲ್ಲಿ ವಿಧಾನಮಂಡಲದಲ್ಲಿ ವಿಧೇಯಕ ಅಂಗೀಕಾರವಾಗಲು ಶ್ರಮಿಸಿದ ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಅಶ್ವತ್ಥನಾರಾಯಣ ಅವರನ್ನು ಕ್ರೈಸ್ತ ಮುಖಂಡರು ಅಭಿನಂದಿಸಿ ಗೌರವಿಸಿದರು.

    ಬೆಂಗಳೂರಿನಲ್ಲಿರುವ ಮಾಲ್ಡೀವ್ಸ್‌ ರಾಯಭಾರ ಕಚೇರಿಯ ಕಾನ್ಸುಲ್‌ ಜನರಲ್‌ ಡಾ.ಜೋಸೆಫ್‌ ವಿ.ಜಿ., ಉದ್ಯಮಿಗಳಾದ ಜೋಸೆಫ್‌ ಫ್ರಾನ್ಸಿಸ್‌, ಸಿ.ಜೆ.ಬಾಬು, ಸಿಲ್ವಿಯಾನ್‌ ನರೋನ, ಕ್ಲ್ಯಾಡ್ಯುಯಸ್‌ ಪೆರಾರಿಯ, ಡಾ.ಥಾಮಸ್‌ ಟಿ. ಜಾನ್‌, ಚಾರ್ಲ್ಸ್‌ ಗೋಮೆಸ್‌, ರೋಶನ್‌ ಡಿಸಿಲ್ವ, ನಿಗೆಲ್‌ ಫರ್ನಾಂಡೀಸ್‌, ಸಂತೋಷ್‌ ಸೀಕ್ವೆರಿಯಾ, ಕ್ಲಾರೆನ್ಸ್‌ ಪೆರಾರಿಯಾ, ಪ್ರಮೋದ್‌ ಡಿಸೋಜ, ಎಂ.ಎಕ್ಸ್‌,ರಾಜು, ಡಾ.ಕೆ.ಸಿ.ಸ್ಯಾಮ್ಯುಯಲ್‌, ಅರುಣ್‌ ಫರ್ನಾಂಡೀಸ್‌, ಡಾ.ಸಂತೋಷ್‌ ಕೋಶಿ, ಸಮುದಾಯದ ಹಿರಿಯ ಮುಖಂಡ ಪಿ.ಕೆ. ಚೆರಿಯನ್‌, ಸಿ.ಜಿ.ವರ್ಗೀಸ್‌, ಮನೋಜ್‌ ರಾಜ್‌, ಐವಾನ್‌ ಡಿʼಕೋಸ್ಟಾ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜೆ ಜೋ ಜೋಸೆಫ್ ಅವರೂ ಇದ್ದರು.

  • ರೈತರ ಹೋರಾಟ ದಿಕ್ಕು ತಪ್ಪುತ್ತಿದೆ ಅನ್ನಿಸುತ್ತಿದೆ: ಪೇಜಾವರ ಶ್ರೀ

    ರೈತರ ಹೋರಾಟ ದಿಕ್ಕು ತಪ್ಪುತ್ತಿದೆ ಅನ್ನಿಸುತ್ತಿದೆ: ಪೇಜಾವರ ಶ್ರೀ

    – ಹೋರಾಟಗಾರರು ರೈತರು ಹೌದೋ, ಅಲ್ವೋ?

    ವಿಜಯಪುರ: ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರು ಹೌದೋ? ಅಲ್ಲವೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಧ್ವಜವನ್ನು ಕೆಳಗಿಳಿಸುವುದು, ಕಾಲಿನಿಂದ ತುಳಿಯುವುದು. ಸಂವಿಧಾನದ ಪ್ರತಿಯನ್ನು ಸುಡುವುದು. ಖಲಿಸ್ತಾನ ಪರ ಘೋಷಣೆ ಕೂಗುವುದು. ಇದೆಲ್ಲವನ್ನು ಗಮನಿಸಿದರೆ ಹೋರಾಟ ದಿಕ್ಕು ತಪ್ಪಿದೆ ಅನ್ನಿಸುತ್ತಿದೆ. ಅವರು ರೈತರಲ್ಲ ಎಂಬ ಸಂಶಯ ಮೂಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸದ್ಯಕ್ಕೆ ತೆಗೆದುಕೊಂಡಿರುವ ನಿಲುವು ಸರಿಯಾದ ದಿಕ್ಕಿನಲ್ಲಿವೆ ಎಂದು ಕೇಂದ್ರದ ನಿಲುವನ್ನ ಸಮರ್ಥಿಸಿಕೊಂಡರು.

    ರೈತರೊಂದಿಗೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ಆಹ್ವಾನ ನೀಡುತ್ತಿದೆ. ಅದರ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದ ರೀತಿಯಲ್ಲಿ ಹೋರಾಟ ಮುಂದುವರೆಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

    ಶ್ರದ್ಧೆ, ಭಕ್ತಿಯ ಪ್ರತಿಕವಾಗಿ ರಾಮ ಮಂದಿರ ನಿರ್ಮಾಣವಾಗಲಿದೆ. ರಾಮ ಮಂದಿರ ಹಿಂದೂ ಸಂಸ್ಕೃತಿಯ ಪ್ರತೀಕ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಶ್ರೀರಾಮನನ್ನು ಪೂಜಿಸುವವರು ಉದಾರವಾಗಿ ದಾನ ನೀಡುತ್ತಿದ್ದಾರೆ. ಇದು ಅಭಿಮಾನ, ಶ್ರದ್ಧೆಯ ಪ್ರತೀಕವಾಗಿದೆ. ಎಲ್ಲೆಲ್ಲಿ ಸಾಧ್ಯವೂ ಅಲ್ಲಿಗೆ ತೆರಳಿ ನಿಧಿ ಸಂಗ್ರಹಿಸುತ್ತೇವೆ ಎಂದರು.

  • ನಿಧಿ ಸಮರ್ಪಣಾ ಅಭಿಯಾನ – ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ವಿಎಚ್‌ಪಿ ಮುಖಂಡರು

    ನಿಧಿ ಸಮರ್ಪಣಾ ಅಭಿಯಾನ – ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ವಿಎಚ್‌ಪಿ ಮುಖಂಡರು

    ಬೆಂಗಳೂರು: ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಎಚ್‌ಪಿ ಮುಖಂಡರು ಇಂದು ಭೇಟಿ ಮಾಡಿದರು.

    ವಿಶ್ವ ಹಿಂದೂ ಪರಿಷದ್ ನ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಮತ್ತು ರಂಗಣ್ಣ ಭೇಟಿ ಮಾಡಿ ಅಭಿಯಾನದ ಬಗ್ಗೆ ತಿಳಿಸಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ದೇಶಾದ್ಯಂತ ಮನೆ ಮನೆಗೆ ತೆರಳಿ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಆರ್‌ಎಸ್‌ಎಸ್‌, ವಿಎಚ್‌ಪಿ ಸೇರಿದಂತೆ ಹಿಂದೂಪರ ಸಂಘಟನೆಗಳ ನಾಯಕರು ಮನೆ ಮನೆಗೆ ಭೇಟಿ ನೀಡಿ ನಿಧಿ ಸಂಗ್ರಹಣೆ ಮಾಡುತ್ತಿದ್ದಾರೆ.

  • ರಾಮ ಮಂದಿರ ನಿರ್ಮಾಣಕ್ಕೆ ಸುತ್ತೂರು ಮಠದಿಂದ 10 ಲಕ್ಷ ದೇಣಿಗೆ

    ರಾಮ ಮಂದಿರ ನಿರ್ಮಾಣಕ್ಕೆ ಸುತ್ತೂರು ಮಠದಿಂದ 10 ಲಕ್ಷ ದೇಣಿಗೆ

    ಮೈಸೂರು: ರಾಮ ಮಂದಿರ ನಿರ್ಮಾಣಕ್ಕೆ ಮೈಸೂರಿನ ಶ್ರೀ ಸುತ್ತೂರು ಮಠ ಹಾಗೂ ಗಣಪತಿ ಸಚ್ಚಿದಾನಂದ ಆಶ್ರಮದಿಂದ ತಲಾ 10 ಲಕ್ಷ ರೂ. ದೇಣಿಗೆ ನೀಡಲಾಗುತ್ತಿದೆ.

    ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಶ್ರೀರಾಮಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಮಾನದ ಸಂತರ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಯಿತು. ರಾಮ ಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ ಎಂಬ ಸಂಕಲ್ಪದಿಂದ ಹಣ ನೀಡೋಣ. ಸರ್ಕಾರದ ಅನುದಾನ, ಶ್ರೀಮಂತರ ದುಡ್ಡಿನಿಂದ ಶ್ರೀರಾಮ ಮಂದಿರ ನಿರ್ಮಾಣವಾಗೋದು ಬೇಡ ಎಂಬುದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೇರಿದಂತೆ ಪ್ರತಿಯೊಬ್ಬರ ಆಶಯ. ದೇಶದ ಪ್ರತಿಯೊಬ್ಬ ಭಾರತೀಯ ಹಿಂದೂ ಸಮರ್ಪಿಸುವ ನಿಧಿಯಿಂದ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದೇ ಎಲ್ಲರ ಆಶಯ. ಇದನ್ನು ಪೂರೈಸಲು ಎಲ್ಲರೂ ಕೈಜೋಡಿಸೋಣ ಎಂದು ಸಮಾವೇಶದಲ್ಲಿ ನೆರೆದಿದ್ದ ಸಂತರು ಒಕ್ಕೊರಲಿನಿಂದ ಪ್ರತಿಪಾದಿಸಿದರು.

    ನಿಧಿ ಸಮರ್ಪಣ ಅಭಿಯಾನ ಪ್ರತಿ ಹಳ್ಳಿಗೂ ಬಂದ ಸಂದರ್ಭದಲ್ಲಿ ಆಯಾ ಭಾಗದ ಮಠಾಧೀಶರೇ ಜನರ ಬಳಿ ತೆರಳಿ ನಿಧಿ ಸಂಗ್ರಹಿಸಿ ಕೊಡಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿಶ್ವರ ದೇಶಿಕೇಂದ್ರ ಸ್ವಾಮೀಜಿ ಸಮಾವೇಶದಲ್ಲಿ ಹೇಳಿದರು. ಸುತ್ತೂರು ಶ್ರೀಗಳ ಹೇಳಿಕೆಗೆ ಸಮಾವೇಶದಲ್ಲಿ ಉಪಸ್ಥಿತರಿದ್ದ ಎಲ್ಲ ಮಠಾಧೀಶರು ಸಹಮತ ವ್ಯಕ್ತಪಡಿಸಿದ್ದರು.

  • ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಶಿಕ್ಷಣ ಸಚಿವರಿಂದ ಎಡವಟ್ಟು

    ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಶಿಕ್ಷಣ ಸಚಿವರಿಂದ ಎಡವಟ್ಟು

    ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊತ್ತಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ರಾಮನಾಮ ಜಪಿಸಿ ಅಧಿಕಾರಕ್ಕೇರಿದ ಪ್ರಭಾವಿ ಸಚವರೊಬ್ಬರಿಂದ ಮಹಾ ಪ್ರಮಾದ ಉಂಟಾಗಿದೆ. ಪಬ್ಲಿಕ್ ಟಿವಿಯಲ್ಲಿ ದಾಖಲೆ ಸಮೇತ ಸಚಿವರ ಬಂಡವಾಳ ಬಯಲಾಗಿದೆ.

    ಹೌದು. ಗ್ರಂಥಾಲಯ ಸಚಿವ ಸುರೇಶ್ ಕುಮಾರ್ ಅವರು ರಾಮ ಮಂದಿರ ನಿರ್ಮಾಣದ ವೇಳೆ ಮಹಾ ಎಡವಟ್ಟು ಮಾಡಿದ್ದಾರೆ. ಗ್ರಂಥಾಲಯಕ್ಕೆ ಈ ವರ್ಷದ ಪುಸ್ತಕ ಖರೀದಿಯಲ್ಲಿ ‘ರಾಮ ಮಂದಿರ ಏಕೆ ಬೇಡ?’ ಅನ್ನೋ ಕೃತಿ ಖರೀದಿಗೆ ಅನುಮತಿ ನೀಡಿದ್ದಾರೆ. ವಿವಾದಿತ ಲೇಖಕ ಕೆ.ಎಸ್. ಭಗವಾನ್ ಬರೆದಿರುವ ಈ ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಸಚಿವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ರಾಜ್ಯ ಗ್ರಂಥಾಲಯ ಇಲಾಖೆ ಪ್ರತಿ ವರ್ಷ ವಿವಿಧ ಲೇಖಕರ ಕೃತಿ ಖರೀದಿ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆ, ತಾಲೂಕು ಗ್ರಂಥಾಲಯಗಳಿಗೆ ಕೃತಿಗಳ ಹಂಚಿಕೆ ಮಾಡಲಾಗುತ್ತಿದೆ. ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷತೆಯ ಪುಸ್ತಕ ಆಯ್ಕೆ ಸಮಿತಿಯಿಂದ 5109 ಕೃತಿ ಆಯ್ಕೆ ಮಾಡಿದ್ದು, 5109 ಕೃತಿಗಳ ಪೈಕಿ ‘ರಾಮ ಮಂದಿರ ಯಾಕೆ ಬೇಡ?’ ಕೂಡ ಒಂದಾಗಿದೆ. ಕೆ.ಎಸ್ ಭಗವಾನ್ ಬರೆದಿರುವ ‘ರಾಮ ಮಂದಿರ ಯಾಕೆ ಬೇಡ?’ ಕೃತಿಯನ್ನು ಸಮಿತಿ ಶಿಫಾರಸು ಮಾಡಿದ ಪಟ್ಟಿಗೆ ಹಿಂದೆ-ಮುಂದೆ ನೋಡದೇ ಸಚಿವರು ಸಹಿ ಮಾಡಿದ್ದು, ಇದೀಗ ವಿವಾದಕ್ಕೀಡಾಗಿದೆ.

  • ರಾಮ ಮಂದಿರ ನಿರ್ಮಾಣಕ್ಕೆ ದಿಗ್ವಿಜಯ್ ಸಿಂಗ್ ದೇಣಿಗೆ

    ರಾಮ ಮಂದಿರ ನಿರ್ಮಾಣಕ್ಕೆ ದಿಗ್ವಿಜಯ್ ಸಿಂಗ್ ದೇಣಿಗೆ

    ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. 1,11,111 ರೂ. ಮೌಲ್ಯದ ಚೆಕ್ ನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೆಸರಲ್ಲಿ ನೀಡಿದ್ದಾರೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದಿಗ್ವಿಜಯ್ ಸಿಂಗ್, ರಾಮ ಮಂದಿರ ನಿರ್ಮಾಣಕ್ಕೆ ಪಡೆಯುವ ದೇಣಿಗೆ ಸೌಹಾರ್ದಯುತವಾಗಿ ರಲಿ. ಈ ಹಿಂದೆ ದೇಣಿಗೆ ಪಡೆದುಕೊಂಡಿರುವ ವಿಶ್ವ ಹಿಂದೂ ಪರಿಷತ್ ಹಣಕಾಸಿನ ಮಾಹಿತಿಯನ್ನ ಜನರ ಮುಂದಿಡಲಿ ಎಂದು ಬರೆದಿದ್ದಾರೆ.

    ಕೆಲ ದಿನಗಳ ಹಿಂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯರಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ತನಾಥ್ ಸೇರಿದಂತೆ ಹಲವು ಮುಖಂಡರು ರಾಮ ಮಂದಿರಕ್ಕಾಗಿ ದೇಣಿಗೆ ನೀಡಿದ್ದಾರೆ. ದೇಶದ ಜನತೆ ಸಹ ತಮ್ಮ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಮಂದಿರ ನಿರ್ಮಾಣದ ಧಾರ್ಮಿಕ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.

  • ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ನೀಡಿದ ರಾಷ್ಟ್ರಪತಿ ಕೋವಿಂದ್

    ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ನೀಡಿದ ರಾಷ್ಟ್ರಪತಿ ಕೋವಿಂದ್

    ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ವೈಯಕ್ತಿಕವಾಗಿ 5 ಲಕ್ಷ ರೂ.ಗಳನ್ನು ನೀಡುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

    ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಣಿಗೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಕೋವಿಂದ್ ಅವರು 5 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

    ಅವರು ದೇಶದ ಮೊದಲ ಪ್ರಜೆ. ಹೀಗಾಗಿ ನಾವು ಈ ಅಭಿಯಾನವನ್ನು ಆರಂಭಿಸುವ ಮೊದಲು ಅವರ ಬಳಿಯೇ ತೆರಳಿದ್ದೆವು. ಈ ವೇಳೆ ಅವರು 5,01,000 ರೂ.ಗಳನ್ನು ನೀಡಿದ್ದಾರೆ ಎಂದು ವಿಎಚ್‍ಪಿಯ ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ಬೃಹತ್ ಅಭಿಯಾನವನ್ನು ಇಂದಿನಿಂದ ಆರಂಭಿಸಲಾಗಿದ್ದು, 2022ರ ಫೆಬ್ರವರಿ 27ರ ವರೆಗೆ ನಡೆಯಲಿದೆ.

    ದೇಶದ ಪ್ರಾಚೀನ ನಿರ್ಮಾಣ ತಂತ್ರಗಳನ್ನು ಗಮನದಲ್ಲಿರಿಸಿಕೊಂಡು ಮಂದಿರದ ವಿಶಿಷ್ಟ ರಚನೆಯನ್ನು ನಿರ್ಮಿಸಲಾಗಿದೆ. ಬಿರುಗಾಳಿ, ಭೂಕಂಪ ಹಾಗೂ ಇತರೆ ನೈಸರ್ಗಿಕ ವಿಪತ್ತುಗಳಿಗೆ ಬಗ್ಗದಂತೆ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ.

    ಅಭಿಯಾನ ಆರಂಭವಾಗುತ್ತಿದ್ದಂತೆ ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್ ಅವರು ಸಹ 1.01 ಲಕ್ಷ ರೂ.ಗಳನ್ನು ನೀಡಿದ್ದಾರೆ. ಟ್ರಸ್ಟ್ ನ ರಾಜ್ಯ ಮಟ್ಟದ ಸಮಿತಿ ರಾಜ್ಯಪಾಲ ಗಂಗಾ ಪ್ರಸಾದ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಅಭಿಯಾನದ ಕುರಿತು ತಿಳಿಸಿದೆ. ಈ ವೇಳೆ 1.01 ಲಕ್ಷ ರೂ.ಗಳನ್ನು ಅವರು ನೀಡಿದ್ದಾರೆ.

    ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5 ರಂದು ಭೂಮಿ ಪೂಜೆ ನೆರವೇರಿಸಿದ್ದರು. ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಕುಟುಂಬದ ಒಂದು ಇಟ್ಟಿಗೆ ಇರಲಿ. ರಾಮ ಮಂದಿರ ರಾಷ್ಟ್ರೀಯ ಮಂದಿರವಾಗಲಿದೆ. ರಾಮ ಮಂದಿರ ನಿರ್ಮಾಣವೂ ಸಾರ್ವಜನಿಕರ ಸಹಾಯದಿಂದ ನೆರವೇರುತ್ತಿರುವುದು ಪುಣ್ಯ. ಅಳಿಲು ಸೇವೆ ಮಾಡುವ ಭಾಗ್ಯ ನಮಗಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ತಿಳಿಸಿದ್ದಾರೆ.

  • ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ನೀಡಿ ಜೈ ಶ್ರೀರಾಮ್‌ ಎಂದ ಪ್ರಣೀತಾ

    ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ನೀಡಿ ಜೈ ಶ್ರೀರಾಮ್‌ ಎಂದ ಪ್ರಣೀತಾ

    ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದರ ಬೆನ್ನಲ್ಲೇ ದೇಶಾದ್ಯಂತ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕೆ ನಟಿ ಪ್ರಣಿತಾ ಸುಭಾಷ್ ಅವರು ಕೈ ಜೋಡಿಸಿದ್ದಾರೆ.

    ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣ ಪ್ರಕ್ರಿಯೆ ಭರದಿಂದ ಸಾಗಿದ್ದು, ದೇಶಾದ್ಯಂತ ಹಿಂದೂ ಕಾರ್ಯಕರ್ತರು ಹಾಗೂ ರಾಮ ಭಕ್ತರು ಈ ಅಭಿಯಾನದಲ್ಲಿ ತೊಡಗಿದ್ದಾರೆ. ಇದಕ್ಕೆ ನಟಿ ಪ್ರಣಿತಾ ಸಹ ಕೈ ಜೋಡಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

    ಈ ಕುರಿತು ಟ್ವೀಟ್ಟರ್ ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿರುವ ಅವರು, ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಭಾಗವಾಗಿ ಆರಂಭಿಕವಾಗಿ 1 ಲಕ್ಷ ರೂ. ನೀಡುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದೇನೆ. ನೀವೂ ಸಹ ಇದರ ಭಾಗವಾಗಿ ಐತಿಹಾಸಿಕ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

    ವಿಡಿಯೋದಲ್ಲಿ ಸಹ ಮಾತನಾಡಿರುವ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ನಿಧಿ ಸಮರ್ಪಣಾ ಅಭಿಯಾನವನ್ನು ನಡೆಸಲಾಗುತ್ತಿದೆ. ಇದಕ್ಕೆ ನಾನೂ ಸಹ ಕೊಡುಗೆ ನೀಡುತ್ತಿದ್ದೇನೆ. ನೀವೂ ಸಹ ಭಾಗಿಯಾಗಿ ಜೈ ಶ್ರೀರಾಮ್ ಎಂದು ತಿಳಿಸಿದ್ದಾರೆ.

    ಪ್ರಣಿತಾ ಸುಭಾಷ್ ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ರಾಮನ ಅವತಾರ, ಬಾಲಿವುಡ್‍ನಲ್ಲಿ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಹಾಗೂ ಹಂಗಾಮಾ-2 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಾಲ್ಡಿವ್ಸ್ ಟ್ರಿಪ್ ಮುಗಿಸಿರುವ ಪ್ರಣಿತಾ ಫುಲ್ ರೆಸ್ಟ್ ಮೂಡ್‍ನಲ್ಲಿ ಇದ್ದಾರೆ.