Tag: ರಾಮ್ ಜೇಠ್ಮಲಾನಿ

  • ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶ

    ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶ

    ನವದೆಹಲಿ: ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ರಾಮ್ ಜೇಠ್ಮಲಾನಿ ಅವರು ಇಂದು ವಿಧಿವಶರಾಗಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಜೇಠ್ಮಲಾನಿಯವರು ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ದೆಹಲಿಯ ನಿವಾಸದಲ್ಲಿ  ನಿಧನರಾಗಿದ್ದಾರೆ.

    95 ವರ್ಷದ ರಾಮ್ ಜೇಠ್ಮಲಾನಿ ಅವರು ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿದ್ದರು. ದೇಶದ ಖ್ಯಾತ ಕ್ರಿಮಿನಲ್ ವಕೀಲರಲ್ಲಿ ಇವರು ಕೂಡ ಒಬ್ಬರು. ರಾಮ್ ಅವರು ಬಿಜೆಪಿ ಪರವಾಗಿ ರಾಜ್ಯಸಭಾ ಸಂಸದರೂ ಆಗಿದ್ದರು. ಮೊಕದ್ದಮೆಗಳನ್ನು ಹೊರತುಪಡಿಸಿ ಅವರು ತಮ್ಮ ಹೇಳಿಕೆಗಳಿಂದಾಗಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದರು.

    ರಾಮ್ ಜೇಠ್ಮಲಾನಿಯವರು ತಮ್ಮ 17ನೇ ವಯಸ್ಸಿನಲ್ಲಿ ಕಾನೂನು ಪದವಿ ಪಡೆದಿದ್ದರು. ನಂತರ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಅವರಿಗೆ 18ನೇ ವಯಸ್ಸಿನಲ್ಲಿ ಕಾನೂನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು.

    ರಾಮ್ ಜೇಠ್ಮಲಾನಿಯವರಿಗೆ ಖ್ಯಾತ ವಕೀಲ ಮಹೇಶ್ ಜೇಠ್ಮಲಾನಿ ಎಂಬ ಮಗನಿದ್ದಾರೆ. ಒಬ್ಬ ಮಗಳು ಅಮೆರಿಕಾದಲ್ಲಿದ್ದು, ಮತ್ತೊಬ್ಬ ಮಗಳು ರಾಣಿ ಜೆಠ್ಮಲಾನಿ ಅವರು ಮೃತಪಟ್ಟಿದ್ದಾರೆ.

  • ಮೋದಿಯವರ ಭರವಸೆಯ ಮಾತನ್ನು ನಂಬಿ ಮೂರ್ಖನಾದೆ: ಜೇಠ್ಮಲಾನಿ

    ಮೋದಿಯವರ ಭರವಸೆಯ ಮಾತನ್ನು ನಂಬಿ ಮೂರ್ಖನಾದೆ: ಜೇಠ್ಮಲಾನಿ

    ಬೆಂಗಳೂರು: ವಿದೇಶದಿಂದ ಕಪ್ಪುಹಣ ವಾಪಸ್ ತರುವ ಬಗ್ಗೆ ಖುದ್ದು ಪ್ರಧಾನಿ ಮೋದಿಯವರು ಭರವಸೆ ನೀಡಿದ್ದರು, ಮೋದಿಯವರ ಮಾತನ್ನು ನಂಬಿ ಮೂರ್ಖನಾದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ ಹೇಳಿದ್ದಾರೆ.

    ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ಕಪ್ಪುಹಣ ಜರ್ಮನಿಯಲ್ಲಿ ಇರುವ ಬಗ್ಗೆ ಜರ್ಮನಿ ದೇಶ ಮಾಹಿತಿ ಕೊಡಲು ಸಜ್ಜಾಗಿತ್ತು. ಆದರೆ ಅಂದಿನ ಆಡಳಿತಾರೂಢ ಕಾಂಗ್ರೆಸ್ ಆಸಕ್ತಿ ತೋರಲಿಲ್ಲ. ಜರ್ಮನಿ ದೇಶ ಕಪ್ಪುಹಣ ಇಟ್ಟಿರುವವರ ಮಾಹಿತಿ ಕೊಡಲು ತಯಾರಿದೆ ಆದರೆ ನಮ್ಮ ಸರ್ಕಾರ ಮಾಹಿತಿ ಪಡೆಯಲು ತಯಾರಿಲ್ಲ ಎಂದು ಸುಪ್ರೀಂ ಕೋರ್ಟ್ ಅಲ್ಲಿ 2011 ರಲ್ಲಿ ದೂರು ನೀಡಿದ್ದೆವು ಎಂದರು.

    ಇದಾದ ಬಳಿಕ ಮೋದಿಯವರು ನನ್ನ ನಡೆಯನ್ನು ಬೆಂಬಲಿಸಿ ವಿದೇಶದಿಂದ ಕಪ್ಪು ಹಣವನ್ನು ವಾಪಸ್ ತರೋಣ ಎಂದು ಸಾಕಷ್ಟು ಬಾರಿ ನನ್ನ ಜೊತೆ ಮಾತನಾಡಿದ್ದರು. ಇದೇ ವಿಚಾರದ ಕುರಿತು ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಸಿದ್ದಪಡಿಸಲು ಹೇಳಿದರು. ಪ್ರಣಾಳಿಕೆಯ ಬಹುತೇಕ ಅಂಶಗಳನ್ನು ಬರೆದುಕೊಟ್ಟೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸಿದ್ದೆ. ವಿದೇಶದಿಂದ ಕಪ್ಪು ಹಣ ತರುತ್ತಾರೆ, ಹದಿನೈದು ಲಕ್ಷ ರೂ ಪ್ರತಿ ಭಾರತೀಯನ ಆಕೌಂಟಿಗೆ ಜಮೆಯಾಗುತ್ತದೆ ಎಂದು ಕರೆ ಕೊಟ್ಟಿದ್ದರು. ಆದರೆ ಈಗ ಅದೆಲ್ಲವನ್ನು ಮರೆತಿದ್ದಾರೆ ಎಂದರು.

    ಪ್ರಧಾನಿಯಾದ ಬಳಿಕ ಅವರಿಗೊಂದು ಪತ್ರ ಬರೆದು ಜನರ ಭರವಸೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದೆ. ಭರವಸೆಗಳು ಈಡೇರುತ್ತದೆ ಅಂತ ಅಂದುಕೊಂಡಿದ್ದೆ. ಮೋದಿಯವರನ್ನ ನಂಬಿದ್ದೆ ಆದರೆ ಮೂರ್ಖನಾದೆ. ಕೊಟ್ಟ ಮಾತು ಮೋದಿ ಉಳಿಸಿಕೊಂಡಿಲ್ಲ. ಈಗ ಅದೆಲ್ಲವನ್ನು ಮರೆತಿದ್ದಾರೆ. ಎರಡೂ ಪಕ್ಷಗಳಿಗೂ ಹಣ ತರುವಲ್ಲಿ ಆಸಕ್ತಿ ಇಲ್ಲ ಎಂದು ಮೋದಿ ವಿರುದ್ಧದ ಜಾರ್ಜ್ ಶೀಟ್ ಬಿಡುಗಡೆ ಮಾಡಿದರು.

    ಅಮಿತ್ ಶಾ ಕಪ್ಪು ಹಣ ವಾಪಸ್ ತರುವ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಅದೆಲ್ಲವೂ ಹಾಸ್ಯ ಮಾಡಿರೋದು ಅಂತಾ ಈಗ ಅನಿಸಿದೆ. ಭಾರತೀಯರ ಕನಸನ್ನು ನುಚ್ಚು ನೂರು ಮಾಡಿದ್ದಾರೆ ಎಂದು ಹರಿಹಾಯ್ದರು.

  • ಜೇಟ್ಲಿ ಕೇಸ್ – ನನಗೆ ಮುಜುಗರವಾಗಿದೆ, ಇನ್ಮುಂದೆ ಕೇಜ್ರಿವಾಲ್ ಪರ ವಾದ ಮಾಡಲ್ಲ ಎಂದ ವಕೀಲ

    ಜೇಟ್ಲಿ ಕೇಸ್ – ನನಗೆ ಮುಜುಗರವಾಗಿದೆ, ಇನ್ಮುಂದೆ ಕೇಜ್ರಿವಾಲ್ ಪರ ವಾದ ಮಾಡಲ್ಲ ಎಂದ ವಕೀಲ

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ಇನ್ಮುಂದೆ ವಾದ ಮಾಡುವುದಿಲ್ಲ ಎಂದು ವಕೀಲರಾದ ಅನೂಪ್ ಜಾರ್ಜ್ ಚೌಧರಿ ಶುಕ್ರವಾರದಂದು ಹೇಳಿದ್ದಾರೆ.

    ಈ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಚೌಧರಿ ಪತ್ರ ಬರೆದಿದ್ದು, ನನಗೆ ಸಮರ್ಪಕ ಮಾಹಿತಿ ನೀಡದ ಕಾರಣ ಫೆಬ್ರವರಿ 12ರಂದು ಮುಜುಗರದ ಪರಿಸ್ಥಿತಿ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.

    ಚೌಧರಿ ಅವರಿಗೂ ಮುನ್ನ ಈ ಹಿಂದೆ ಹಿರಿಯ ವಕೀಲರಾದ ರಾಮ್ ಜೇಠ್ಮಲಾನಿ ಕೇಜ್ರಿವಾಲ್ ಪರ ವಾದ ಮಾಡಲು ನಿರಾಕರಿಸಿದ್ದರು. ದೆಹಲಿ ಸಿಎಂ ಕೇಜ್ರಿವಾಲ್ ಜೇಟ್ಲಿ ಅವರನ್ನ ವಂಚಕ ಎಂದು ಕರೆಯುವಂತೆ ಹೇಳಿದ್ದರು. ಅರುಣ್ ಜೇಟ್ಲಿ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡುವ ಸಂದರ್ಭದಲ್ಲಿ ವಂಚಕ ಎಂಬ ಪದಕ್ಕಿಂತಲೂ ಕೆಟ್ಟ ಪದಗಳನ್ನ ಬಳಸಿದ್ದಾರೆ ಎಂದು ಜೇಠ್ಮಲಾನಿ ಹೇಳಿದ್ದರು. ಕೇಜ್ರಿವಾಲ್ ನನಗೆ ಕೊಡಬೇಕಿರುವ 2 ಕೋಟಿ ರೂ. ಶುಲ್ಕದ ಹಣವನ್ನ ಮನ್ನಾ ಮಾಡಬಹುದು. ಸಾವಿರಾರು ಜನರಿಗೆ ನಾನು ಉಚಿತವಾಗಿ ಕೆಲಸ ಮಾಡೋ ಕಾರಣ ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಜೇಠ್ಮಲಾನಿ ಹೇಳಿದ್ದರು.

    ಜೇಠ್ಮಲಾನಿ ಹಿಂದಕ್ಕೆ ಸರಿದಿದ್ದು ಯಾಕೆ?: ದೆಹಲಿ ಹೈಕೋರ್ಟ್ ನಲ್ಲಿ2017 ಮೇ 17ರಂದು ನಡೆದ ವಿಚಾರಣೆ ವೇಳೆ ಜೇಠ್ಮಲಾನಿ ಜೇಟ್ಲಿ ವಿರುದ್ಧ ವಂಚಕ ಪದವನ್ನು ಬಳಕೆ ಮಾಡಿದ್ದರು. ಕೋರ್ಟ್ ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಸಂಬಂಧ ಅರುಣ್ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಿಸಿ, 10 ಕೋಟಿ ಪರಿಹಾರಕ್ಕೆ ಆಗ್ರಹ ಮಾಡಿದ್ದರು. ಈ ಕೇಸ್ ದಾಖಲಾದ ಬಳಿಕ ಅರವಿಂದ್ ಕೇಜ್ರಿವಾಲ್ ಕೋರ್ಟ್ ಗೆ ಅಫಿಡವಿತ್ ಸಲ್ಲಿಸಿದ್ದರು. ನಾನು ಅರುಣ್ ಜೇಟ್ಲಿ ಪರ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡುವಂತೆ ಯಾವುದೇ ಸೂಚನೆ ನೀಡಿರಲಿಲ್ಲ. ಒಬ್ಬ ಹಿರಿಯ ವಕೀಲರಿಗೆ ನಾನು ಆಕ್ಷೇಪಾರ್ಹ ಪದವನ್ನು ಬಳಸುವಂತೆ ಸೂಚನೆ ನೀಡಲು ಸಾಧ್ಯವೇ ಎಂದು ಅಫಿಡವಿತ್‍ನಲ್ಲಿ ಉಲ್ಲೇಖಿಸಿದ್ದರು.

    ಕೇಜ್ರಿವಾಲ್ ಪರ ವಾದ ಮಾಡುವುದಕ್ಕೆ ನಾನು ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ ಎಂದು ಜೇಠ್ಮಲಾನಿ ಈ ಹಿಂದೆ ತಿಳಿಸಿದ್ದರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಜೇಠ್ಮಲಾನಿ ಹಾಜರಾಗಿದ್ದಕ್ಕೆ, ದೆಹಲಿ ಸರ್ಕಾರ ಕಳೆದ ವರ್ಷ ಫೆಬ್ರವರಿಯಲ್ಲಿ 3.5 ಕೋಟಿ ರೂ. ಪಾವತಿಸಿತ್ತು. ಒಂದು ಬಾರಿ ಜೇಠ್ಮಲಾನಿ ಕೋರ್ಟ್ ಗೆ ಹಾಜರಾದರೆ 22 ಲಕ್ಷ ರೂ. ಶುಲ್ಕವನ್ನು ಪಾವತಿಸಬೇಕಿತ್ತು ಎಂದು ಮಾಧ್ಯಮಗಳು ವರದಿ ಮಾಡಿತ್ತು.

    ಏನಿದು ಪ್ರಕರಣ?: ಅರುಣ್ ಜೇಟ್ಲಿ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಆರೋಪಿಸಿತ್ತು. ಇದರ ವಿರುದ್ಧ ಅರುಣ್ ಜೇಟ್ಲಿ, ಅರವಿಂದ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಅಶುತೋಶ್ ಹಾಗೂ ದೀಪಕ್ ಬಾಜ್ಪೈ ಅವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ ಎರಡು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಸುಳ್ಳು ಹೇಳಿಕೆ ನೀಡಿ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ 10 ಕೋಟಿ ರೂ. ಪರಿಹಾರ ನೀಡುವಂತೆ ಕೇಜ್ರಿವಾಲ್ ಹಾಗೂ ಇತರೆ ಮುಖಂಡರ ಮೇಲೆ ಜೇಟ್ಲಿ ಸಿವಿಲ್ ಕೇಸ್ ಹಾಕಿದ್ದರು.

  • ಮಾನನಷ್ಟ ಕೇಸ್: ಕೇಜ್ರಿ ಪರ ವಾದದಿಂದ ಹಿಂದಕ್ಕೆ ಸರಿದ ಜೇಠ್ಮಲಾನಿ

    ಮಾನನಷ್ಟ ಕೇಸ್: ಕೇಜ್ರಿ ಪರ ವಾದದಿಂದ ಹಿಂದಕ್ಕೆ ಸರಿದ ಜೇಠ್ಮಲಾನಿ

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಹೂಡಿರುವ ಮಾನನಷ್ಟ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡದೇ ಇರಲು ಖ್ಯಾತ ವಕೀಲ ರಾಮ್ ಜೇಠ್ಮಲಾನಿ ನಿರ್ಧರಿಸಿದ್ದಾರೆ.

    ಈ ಸಂಬಂಧ ಕೇಜ್ರಿವಾಲ್ ಗೆ ಪತ್ರ ಬರೆದಿರುವ ರಾಮ್ ಜೇಠ್ಮಲಾನಿ ಈ ಪ್ರಕರಣದ ವಾದದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ಈ ಪ್ರಕರಣದಲ್ಲಿ ವಾದಿಸಿದ್ದಕ್ಕೆ ಶುಲ್ಕವಾಗಿ 2 ಕೋಟಿ ರೂ. ಹಣವನ್ನು ಪಾವತಿಸಬೇಕು ಎಂದು ಕೇಳಿದ್ದಾರೆ.

    ಈ ವಿಚಾರವಾಗಿ ಜೇಠ್ಮಲಾನಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್ ನನಗೆ ಪತ್ರ ಬರೆದಿದ್ದು, ಈ ಪತ್ರಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಆದರೆ ಈ ಪತ್ರದಲ್ಲಿರುವ ವಿಚಾರವನ್ನು ನಾನು ಬಹಿರಂಗ ಪಡಿಸುವುದಿಲ್ಲ. ನೀವು ಬೇಕಾದರೆ ಕೇಜ್ರಿವಾಲ್ ಅವರನ್ನು ಈ ಪತ್ರದ ವಿಚಾರವಾಗಿ ಪ್ರಶ್ನೆ ಮಾಡಬಹುದು. ನಾನು ಈ ವಿಚಾರವನ್ನು ಸಾರ್ವಜನಿಕವಾಗಿ ತಿಳಿಸುವುದಿಲ್ಲ ಎಂದು ಅವರಿಗೆ ಭಾಷೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಈ ಪ್ರಕರಣದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ನೀವು, ನಾನು ಕೋರ್ಟ್ ನಲ್ಲಿ ಬಳಸಿದ ಪದಕ್ಕಿಂತಲೂ ಹೆಚ್ಚಿನ ಆಕ್ಷೇಪಾರ್ಹ ಪದವನ್ನು ಬಳಸಿದ್ದೀರಿ ಎನ್ನುವ ವಿಚಾರವನ್ನು ಜೇಠ್ಮಲಾನಿ ಪತ್ರದಲ್ಲಿ ಬರೆದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಏನಿದು ಪ್ರಕರಣ?
    ಅರುಣ್ ಜೇಟ್ಲಿ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಆರೋಪಿಸಿತ್ತು. ಇದರ ವಿರುದ್ಧ ಅರುಣ್ ಜೇಟ್ಲಿ, ಅರವಿಂದ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಅಶುತೋಶ್ ಹಾಗೂ ದೀಪಕ್ ಬಾಜ್ಪೈ ಅವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ ಎರಡು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಸುಳ್ಳು ಹೇಳಿಕೆ ನೀಡಿ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ 10 ಕೋಟಿ ರೂ. ಪರಿಹಾರ ನೀಡುವಂತೆ ಕೇಜ್ರಿವಾಲ್ ಹಾಗೂ ಇತರೆ ಮುಖಂಡರ ಮೇಲೆ ಸಿವಿಲ್ ಕೇಸ್ ಹಾಕಿದ್ದರು.

    ಈ ಪ್ರಕರಣದಲ್ಲಿ ಕೇಜ್ರಿವಾಲ್ ಪರ ರಾಮ್ ಜೇಠ್ಮಲಾನಿ ವಕಾಲತ್ತು ವಹಿಸಿದ್ದರು. ದೆಹಲಿ ಹೈಕೋರ್ಟ್ ನಲ್ಲಿ ಮೇ 17ರಂದು ನಡೆದ ವಿಚಾರಣೆ ವೇಳೆ ಜೇಠ್ಮಲಾನಿ ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡಿದ್ದರು. ಕೋರ್ಟ್ ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಸಂಬಂಧ ಅರುಣ್ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಿಸಿ, 10 ಕೋಟಿ ಪರಿಹಾರಕ್ಕೆ ಆಗ್ರಹ ಮಾಡಿದ್ದರು.

    ಈ ಕೇಸ್ ದಾಖಲಾದ ಬಳಿಕ ಅರವಿಂದ್ ಕೇಜ್ರಿವಾಲ್ ಕೋರ್ಟ್ ಗೆ ಅಫಿಡವಿತ್ ಸಲ್ಲಿಸಿದ್ದರು. ನಾನು ಅರುಣ್ ಜೇಟ್ಲಿ ಪರ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡುವಂತೆ ಯಾವುದೇ ಸೂಚನೆ ನೀಡಿರಲಿಲ್ಲ. ಒಬ್ಬ ಹಿರಿಯ ವಕೀಲರಿಗೆ ನಾನು ಆಕ್ಷೇಪಾರ್ಹ ಪದವನ್ನು ಬಳಸುವಂತೆ ಸೂಚನೆ ನೀಡಲು ಸಾಧ್ಯವೇ ಎಂದು ಅಫಿಡವಿತ್‍ನಲ್ಲಿ ತಿಳಿಸಿದ್ದರು.

    ಕೇಜ್ರಿವಾಲ್ ಪರ ವಾದ ಮಾಡುವುದಕ್ಕೆ ನಾನು ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ ಎಂದು ಜೇಠ್ಮಲಾನಿ ಈ ಹಿಂದೆ ತಿಳಿಸಿದ್ದರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಜೇಠ್ಮಲಾನಿ ಹಾಜರಾಗಿದ್ದಕ್ಕೆ, ದೆಹಲಿ ಸರ್ಕಾರ ಈ ಫೆಬ್ರವರಿಯಲ್ಲಿ 3.5 ಕೋಟಿ ರೂ. ಪಾವತಿಸಿತ್ತು. ಒಂದು ಬಾರಿ ಜೇಠ್ಮಲಾನಿ ಕೋರ್ಟ್ ಗೆ ಹಾಜರಾದರೆ 22 ಲಕ್ಷ ರೂ. ಶುಲ್ಕವನ್ನು ಪಾವತಿಸಬೇಕಿತ್ತು.

    10 ಸಾವಿರ ದಂಡ: ಜೇಟ್ಲಿ ಹೂಡಿರುವ ಎರಡನೇ ಮಾನನಷ್ಟ ಕೇಸಿಗೆ ಸಂಬಂಧಿಸಿದಂತೆ ಸರಿಯಾದ ಪ್ರತಿಕ್ರಿಯೆ ನಿಗದಿತ ದಿನಾಂಕದ ಒಳಗಡೆ ಸಲ್ಲಿಸದ ಕಾರಣ ದೆಹಲಿ ಹೈಕೋರ್ಟ್ ಬುಧವಾರ ಕೇಜ್ರಿವಾಲ್ ಅವರಿಗೆ 10 ಸಾವಿರ ರೂ. ದಂಡ ವಿಧಿಸಿದೆ.